ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ ಶಿಷ್ಯಂದಿರಿಗೆ
WFTW Body: 

ನಾವು ’ಮತ್ತಾಯನು 7:6'ರ ನಂತರದ ವಚನಗಳಲ್ಲಿ ಪರ್ವತ ಪ್ರಸಂಗದ ಕೊನೆಯ ಭಾಗವನ್ನು ನೋಡುತ್ತೇವೆ. "ದೇವರ ವಸ್ತುವನ್ನು ನಾಯಿಗಳಿಗೆ ಹಾಕಬೇಡಿರಿ; ನಿಮ್ಮ ಮುತ್ತುಗಳನ್ನು ಹಂದಿಗಳ ಮುಂದೆ ಚೆಲ್ಲಬೇಡಿರಿ. ಚೆಲ್ಲಿದರೆ ತಮ್ಮ ಕಾಲಿನಿಂದ ಅವುಗಳನ್ನು ತುಳಿದು ಹಿಂತಿರುಗಿ ಬಂದು ನಿಮ್ಮನ್ನು ಸೀಳಿಬಿಟ್ಟಾವು"(ಮತ್ತಾ. 7:6). ನಾವು ಯಾರಿಗೆ ಏನು ಹೇಳಬೇಕೆನ್ನುವ ವಿಷಯದಲ್ಲಿ ಜ್ಞಾನಿಗಳಾಗಿರಬೇಕೆಂದು ಇಲ್ಲಿ ಯೇಸುವು ಕಲಿಸಿಕೊಡುತ್ತಿದ್ದಾರೆ. ’ಜ್ಞಾನೋಕ್ತಿಗಳು 26:4'ರಲ್ಲಿ, ನಾವು ಒಬ್ಬ ಮೂಢನ ಮೂರ್ಖತನಕ್ಕೆ ತಕ್ಕಂತೆ ಉತ್ತರ ಕೊಡಬಾರದೆಂದು ನಮಗೆ ತಿಳಿಸಲಾಗಿದೆ. ಸತ್ಯಕ್ಕೆ ಬೆಲೆಕೊಡದೇ ಇರುವ ಜನರಿಗೆ ನಾವು ಸತ್ಯವನ್ನು ನೀಡಬಾರದು. ಇದೇ ಕಾರಣಕ್ಕಾಗಿ ನಾವು ಜನರೊಂದಿಗೆ ಮಾತನಾಡುವಾಗ ನಮಗೆ ಜ್ಞಾನವು ಅವಶ್ಯವಾಗಿದೆ. ನಾವು ಪ್ರತಿಯೊಬ್ಬರಿಗೆ ಒಂದು ಪೂರ್ವನಿಯೋಜಿತ ಸಂದೇಶವನ್ನು ಕೊಡಬಾರದು. ನಾನು ಪ್ರತಿಯೊಬ್ಬ ವ್ಯಕ್ತಿಗೆ ಏನು ಹೇಳಬೇಕು ಎಂಬುದರ ಕುರಿತಾಗಿ ದೇವರು ಏನನ್ನು ಹೇಳಬಯಸುತ್ತಾರೆ ಎಂದು ತಿಳಿಯಲು ನಾನು ದೇವರನ್ನು ಕೇಳುವುದು ಅವಶ್ಯವಾಗಿದೆ. ಯೇಸುವು ಇದೇ ರೀತಿ ಜೀವಿಸಿದನು, ಮತ್ತು ನಾವು ದೇವರ ವಾಕ್ಯದ ಯಾವುದೇ ವಚನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವಾಗ ಯೇಸುವಿನ ಮಾದರಿಯನ್ನು ಗಮನಿಸಬೇಕು.

ಯೆಶಾಯನು 50:4'ರಲ್ಲಿ, ದೇವರ ವಾಕ್ಯವನ್ನು ಬೋಧಿಸುವವರು ಎದುರಿಸುವ ಪ್ರಶ್ನೆ, "ನಾನು ಒಬ್ಬ ವ್ಯಕ್ತಿಗೆ ದೇವರ ಸಂದೇಶ ಎಂಬುದಾಗಿ ಕೊಡಬೇಕಾದದ್ದೇನು?" ಎಂಬುದಕ್ಕೆ ಕರ್ತನಾದ ಯೇಸು ಕ್ರಿಸ್ತನ ಕುರಿತು ಒಂದು ಬಹಳ ಸೂಕ್ತವಾದ ಪ್ರವಾದನಾ ವಾಕ್ಯವಿದೆ. ಆ ವ್ಯಕ್ತಿಯ ಆತ್ಮಿಕ ಸ್ಥಿತಿ ಏನೆಂಬ ವಿವೇಚನೆಯನ್ನು ನಾನು ಮೊದಲು ಪಡೆಯಬೇಕು. ಈ ಕಾರಣಕ್ಕಾಗಿಯೇ ನಾನು ಯಾರಿಗಾದರೂ ದೇವರ ವಾಕ್ಯವನ್ನು ಕೊಡುವಾಗ, ದೇವರು ದಯಪಾಲಿಸುವ ಪ್ರವಾದನೆಯ ದೃಷ್ಟಿಯನ್ನು ಪಡೆಯಬೇಕು. ದೇವರ ವಾಕ್ಯವನ್ನು ಕೊಡುವುದು ಪ್ರಾಕೃತಿಕ ಕಾರ್ಯವಲ್ಲ, ಅದು ಆತ್ಮ-ಪ್ರೇರಿತ ಕಾರ್ಯವಾಗಿದೆ. ಅದು ಕಾಲೇಜಿನಲ್ಲಿ ಉಪಾನ್ಯಾಸ ಮಾಡುವದಕ್ಕೆ ಸಮನಾದದ್ದೆಂದು ನೀವು ಅಂದುಕೊಂಡರೆ, ಅಂದರೆ ರಸಾಯನ ಶಾಸ್ತ್ರವನ್ನು ಕಲಿಸುವಂತೆ, ಆಗ ನೀವು ಸತ್ಯವೇದವನ್ನು ಯಾವುದೇ ವೇಳೆಯಲ್ಲಿ ಯಾರಿಗಾದರೂ ಕಲಿಸಬಹುದೆಂದು ಅಂದುಕೊಳ್ಳಬಹುದು. ಆದರೆ ಆ ವ್ಯಕ್ತಿಯ ಆತ್ಮಿಕ ಮಟ್ಟಕ್ಕೆ ತಕ್ಕಂತೆ ನೀವು ಆತನಿಗೆ ದೇವರ ವಾಕ್ಯದ ಸೇವೆ ಮಾಡಬಯಸಿದರೆ, ನಿಮಗೆ ಕೇವಲ ದೇವರಿಂದ ಪ್ರಾಪ್ತವಾಗುವ ಪವಿತ್ರಾತ್ಮ-ಪ್ರೇರಿತ ದೃಷ್ಟಿ ಬೇಕಾಗುತ್ತದೆ. ’ಯೆಶಾಯನು 50:4'ರಲ್ಲಿ (ಇದು ಕ್ರಿಸ್ತನಿಗೆ ಅನ್ವಯಿಸುತ್ತದೆ) ಹೀಗೆ ಹೇಳಲಾಗಿದೆ, "ನಾನು ಬಳಲಿದವರನ್ನು ಮಾತುಗಳಿಂದ ಸುಧಾರಿಸುವದಕ್ಕೆ ಬಲ್ಲವನಾಗುವಂತೆ ತಂದೆಯು, ಕರ್ತನಾದ ದೇವರು, ನನಗೆ ಶಿಕ್ಷಿತರ ನಾಲಿಗೆಯನ್ನು ದಯಪಾಲಿಸಿದ್ದಾನೆ." ಬೇರೆ ಮಾತುಗಳಲ್ಲಿ ಹೇಳುವುದಾದರೆ, "ನನ್ನನ್ನು ಭೇಟಿಯಾಗುವ ಒಬ್ಬ ಬಳಲಿದ ವ್ಯಕ್ತಿಗೆ ಯೋಗ್ಯವಾದ ವಾಕ್ಯವನ್ನು ಪಡೆಯಲಿಕ್ಕಾಗಿ, ನನ್ನ ತಂದೆಯಾದ ದೇವರು ನನ್ನನ್ನು ದಿನಾಲೂ ಬೆಳಬೆಳಗ್ಗೆ ಎಚ್ಚರಿಸಿ, ನಾನು ಒಬ್ಬ ಶಿಷ್ಯನಂತೆ ಕೇಳಿಸಿಕೊಳ್ಳಲಿಕ್ಕಾಗಿ ಬೆಳಗಿನ ಜಾವದಲ್ಲಿ ನನ್ನ ಕಿವಿಯನ್ನು ಜಾಗರಗೊಳಿಸುತ್ತಾನೆ." ಇಲ್ಲಿ ಯೇಸುವು ಹೇಳುತ್ತಿರುವುದು ಏನೆಂದರೆ, ತಾನು ಪ್ರತಿದಿನವೂ ಕೇಳಿಸಿಕೊಳ್ಳುತ್ತಾ, ನಿರಂತರವಾಗಿ ಆಲಿಸುತ್ತಾ, ತನ್ನ ಬಳಿಗೆ ಬಂದ ಜನರಿಗೆ ಯೋಗ್ಯವಾದ ವಾಕ್ಯವನ್ನು ಪಡೆದುಕೊಂಡೆನು, ಎಂಬುದಾಗಿ.

ಇದಕ್ಕೆ ಒಂದು ಉದಾಹರಣೆ ’ಯೋಹಾನನು 8'ನೇ ಅಧ್ಯಾಯದಲ್ಲಿದೆ. ಅಲ್ಲಿ ಫರಿಸಾಯರು ವ್ಯಭಿಚಾರದಲ್ಲಿ ಸಿಕ್ಕಿದ ಒಬ್ಬ ಹೆಂಗಸನ್ನು ಯೇಸುವಿನ ಬಳಿಗೆ ಕರೆತಂದರು, ಮತ್ತು ಹಳೆಯ ಒಡಂಬಡಿಕೆಯ ಧರ್ಮಶಾಸ್ತ್ರದ ಆಜ್ಞೆ ಆಕೆಯನ್ನು ಕಲ್ಲೆಸೆದು ಕೊಲ್ಲಬೇಕೆಂದು ಸ್ಪಷ್ಟವಾಗಿ ಹೇಳಿದ್ದನ್ನು ಉಲ್ಲೇಖಿಸಿದರು. ಯೇಸುವು ಹಳೆಯ ಒಡಂಬಡಿಕೆಯ ಧರ್ಮಶಾಸ್ತ್ರವನ್ನು ಅರಿತಿದ್ದುದರಿಂದ, ಅವರ ಮಾತನ್ನು ಅಲ್ಲಗಳೆಯಲಿಲ್ಲ. ಅವರು ಪ್ರಸ್ತಾಪಿಸಿದ ವಚನವು ಹಲವು ಶತಮಾನಗಳ ಹಿಂದೆ ಸ್ವತಃ ಯೇಸುವೇ ಮೋಶೆಗೆ ಕೊಟ್ಟ ಆಜ್ಞೆಯಾಗಿತ್ತು! ಹಾಗಾಗಿ ಆತನು ಏನು ಮಾಡಿದನು? ಅಲ್ಲಿ ಯೇಸುವು ಉತ್ತರಿಸಲಿಲ್ಲವೆಂದು ಹೇಳಲಾಗಿದೆ. ಫರಿಸಾಯರು ಆ ಹೆಂಗಸಿನ ಮೇಲೆ ತಪ್ಪು ಹೊರಿಸುತ್ತಲೇ ಇದ್ದರು, ಮತ್ತು ಯೇಸುವು ಸುಮ್ಮನೆ ನೆಲದ ಮೇಲೆ ಏನನ್ನೋ ಬರೆಯುತ್ತಾ ಇದ್ದನು (ಯೋಹಾನನು 8:6). ಆತನು ತನ್ನ ತಂದೆಯ ಸ್ಪಷ್ಟ ವಾಕ್ಯಕ್ಕಾಗಿ ಕಾದಿದ್ದನು. "ನಾನು ಈ ಜನರಿಗೆ ಏನು ಹೇಳಲಿ? ಈ ಬಡ ಹೆಂಗಸನ್ನು ಕಲ್ಲೆಸೆದು ಕೊಲ್ಲಲು ಬಯಸುತ್ತಿರುವ ಈ ಜನರಿಗೆ ಕೊಡುವುದಕ್ಕೆ ಯೋಗ್ಯವಾದ ವಾಕ್ಯವೇನು?" ಸ್ವತಃ ಆತನೇ ಮೋಶೆಗೆ ಕೊಟ್ಟಿದ್ದ ಕಲ್ಲೆಸೆದು ಕೊಲ್ಲುವ ಆಜ್ಞೆಯನ್ನು ಆತನು ನಿರಾಕರಿಸಲಿಲ್ಲ. ಆತನು ತನ್ನ ತಂದೆಯಿಂದ ಉತ್ತರವನ್ನು ಪಡೆದುಕೊಂಡಾಗ, ನೆಟ್ಟಗೆ ಕೂತುಕೊಂಡು ಅವರಿಗೆ ಹೀಗೆ ಹೇಳಿದನು (ಯೋಹಾನನು 8:7 ಭಾವಾನುವಾದ), "ನಿಮ್ಮಲ್ಲಿ ಪಾಪವಿಲ್ಲದವನು ಯಾರೋ ಅವನೇ ಮೊದಲು ಆಕೆಯ ಮೇಲೆ ಕಲ್ಲನ್ನು ಹಾಕಲಿ. ನೀವು ಮುಂದುವರಿಸಿರಿ - ನೀವು ಈ ಹೆಂಗಸನ್ನು ಧರ್ಮಶಾಸ್ತ್ರದ ಪ್ರಕಾರ ಕಲ್ಲೆಸೆದು ಸಾಯಿಸಬಹುದು, ಆದರೆ ಒಂದು ಷರತ್ತು, ಮೊದಲನೆಯ ಕಲ್ಲನ್ನು ಪಾಪವಿಲ್ಲದವನು ಯಾರೋ ಅವನು ಎಸೆಯಲಿ." ಆಗ ಅಲ್ಲಿ ಬರೆಯಲ್ಪಟ್ಟಿರುವಂತೆ, ಹಿರಿಯರಿಂದ ಮೊದಲುಗೊಂಡು ಕಿರಿಯರವರೆಗೂ ಒಬ್ಬೊಬ್ಬರಾಗಿ ಎಲ್ಲರೂ ಹೊರಟು ಹೋದರು, ಏಕೆಂದರೆ ಅವರಲ್ಲಿ ಹೆಚ್ಚು ಹಿರಿಯನು ಎಲ್ಲರಿಗಿಂತ ಹೆಚ್ಚು ಪಾಪ ಮಾಡಿದ್ದನು.

ಆ ಸಂದರ್ಭವನ್ನು ಒಂದೇ ಒಂದು ಮಾತಿನಿಂದ ನಿಭಾಯಿಸಲು ಸಾಧ್ಯವಾಯಿತು! ಅದಕ್ಕಾಗಿ ಒಂದು ಸಂಪೂರ್ಣ ಪ್ರಸಂಗ ಬೇಕಾಗಲಿಲ್ಲ. ಬೇರೆ ಕೆಲವು ಸಂದರ್ಭಗಳಲ್ಲಿ ಯೇಸುವು ಒಂದು ಮಾತನ್ನೂ ನುಡಿಯಲಿಲ್ಲ. ಉದಾಹರಣೆಗೆ, ಒಂದು ಸಲ ಯಾರೋ ಆತನಿಗೆ ಒಂದು ಪ್ರಶ್ನೆಯನ್ನು ಹಾಕಿದಾಗ ಆತನ ಉತ್ತರ, "ಮೊದಲು ನಾನು ನಿಮ್ಮನ್ನು ಒಂದು ಮಾತು ಕೇಳುತ್ತೇನೆ; ಸ್ನಾನಿಕನಾದ ಯೋಹಾನನು ದೀಕ್ಷಾಸ್ನಾನ ಮಾಡಿಸುವ ಅಧಿಕಾರವನ್ನು ಪಡೆದದ್ದು ಪರಲೋಕದಿಂದಲೋ, ಅಥವಾ ಮನುಷ್ಯರಿಂದಲೋ?" ಆಗ ಅವರು ತಮ್ಮೊಳಗೆ ಈ ರೀತಿ ಮಾತನಾಡಿಕೊಂಡರು, "ನಾವು ’ಮನುಷ್ಯರಿಂದ ಬಂತು’ ಎಂದು ಹೇಳಿದರೆ ಯೋಹಾನನು ಪ್ರವಾದಿಯೆಂದು ಎಣಿಸಿರುವ ಎಲ್ಲಾ ಜನರು ಸಿಟ್ಟಾಗುತ್ತಾರೆ; ’ದೇವರಿಂದ ಬಂತು’ ಎಂದರೆ ಯೇಸುವು ನಮ್ಮನ್ನು ’ಹಾಗಾದರೆ ನೀವು ಯೋಹಾನನನ್ನು ಯಾಕೆ ನಂಬಲಿಲ್ಲ?’ ಎಂದು ಪ್ರಶ್ನಿಸುತ್ತಾನೆ." ಅವರು ಏನು ಹೇಳಬೇಕೆಂದು ತಿಳಿಯದೆ, "ನಾವು ಅರಿಯೆವು," ಎಂದು ಉತ್ತರಿಸಿದರು. ಆಗ ಯೆಸುವು, "ಹಾಗಿದ್ದರೆ ನಾನು ನಿಮ್ಮ ಪ್ರಶ್ನೆಯನ್ನು ಉತ್ತರಿಸುವುದಿಲ್ಲ," ಎಂದನು (ಮತ್ತಾಯನು 21:27).

"ನಾವು ಪ್ರವಾದನೆಯ ವರಕ್ಕಾಗಿ ದೇವರನ್ನು ಬೇಡಿಕೊಂಡರೆ, ಜನರ ಅವಶ್ಯಕತೆಯನ್ನು ನಿಖರವಾಗಿ ವಿವೇಚಿಸುವ ಸಾಮರ್ಥ್ಯವನ್ನು ದೇವರು ನಮಗೆ ಕೊಡುತ್ತಾರೆ ಮತ್ತು ಅವರ ಅವಶ್ಯಕತೆಯನ್ನು ಪೂರೈಸುವ ವಾಕ್ಯವನ್ನು ನಮಗೆ ನೀಡುತ್ತಾರೆ”

ಯೇಸುವು ಎಲ್ಲಾ ಜನರನ್ನು ಒಂದೇ ರೀತಿ ನಿಭಾಯಿಸಲಿಲ್ಲ. ಕೆಲವೊಮ್ಮೆ ಜನರು ಆತನ ಬಳಿಗೆ ಬಂದು ಕೆಲವು ಹುಚ್ಚು ಪ್ರಶ್ನೆಗಳನ್ನು ಕೇಳುತ್ತಿದ್ದರು, "ಒಬ್ಬ ಮನುಷ್ಯನು ಸತ್ತಾಗ, ಅವನ ಹೆಂಡತಿಯನ್ನು ಅವನ ತಮ್ಮನು ಮದುವೆ ಮಾಡಿಕೊಂಡನು, ಮತ್ತು ಇದೇ ರೀತಿ ಏಳು ಮಂದಿ ಅಣ್ಣತಮ್ಮಂದಿರು ಒಬ್ಬೊಬ್ಬರಾಗಿ ಆಕೆಯನ್ನು ಮದುವೆ ಮಾಡಿಕೊಂಡರು. ಪುನರುತ್ಥಾನದಲ್ಲಿ ಯಾರು ಆಕೆಯ ಗಂಡನಾಗಿರುವನು?" ಯೇಸುವು ಅವರಿಗೆ ಉತ್ತರಿಸಿದನು; ಅವನು ಸುಮ್ಮನೆ ಅಲ್ಲಿಂದ ಹೊರಟುಹೋಗಲಿಲ್ಲ. ಪುನರುತ್ಥಾನದಲ್ಲಿ ಯಾರೂ ಮದುವೆ ಮಾಡಿಕೊಳ್ಳುವದಿಲ್ಲ, ಎಂಬುದಾಗಿ ತಾಳ್ಮೆಯಿಂದ ವಿವರಿಸಿ ಹೇಳಿದನು. ಯೇಸುವು ಕೊಟ್ಟ ಹಲವಾರು ಪ್ರತ್ಯುತ್ತರಗಳನ್ನು ನೀವು ನೋಡಿದರೆ, ಅವು ಒಂದೇ ಮಾದರಿಯ ಉತ್ತರಗಳು ಆಗಿರಲಿಲ್ಲ. ಒಂದು ಕಂಪ್ಯೂಟರನ್ನು "ಇದಕ್ಕೆ ಉತ್ತರವೇನು?" ಎಂದು ಪ್ರಶ್ನಿಸಿದರೆ ಸಿಗುವಂತ ಮೊದಲೇ ನಿಶ್ಚಯಿಸಲ್ಪಟ್ಟ ಉತ್ತರಗಳಂತೆ ಆತನ ಉತ್ತರಗಳು ಇರಲಿಲ್ಲ. ಅವನು ಯಾವಾಗಲೂ ಪವಿತ್ರಾತ್ಮನ ಮಾತನ್ನು ಆಲಿಸುತ್ತಿದ್ದನು, ಮತ್ತು ನಾವು ’ಮತ್ತಾಯನು 7:6'ರಿಂದ ಕಲಿಯಬೇಕಾದ ಬಹಳ ಮುಖ್ಯವಾದ ಮೂಲತತ್ವ ಇದಾಗಿದೆ.

ಅನೇಕ ಬಾರಿ, ಒಬ್ಬ ನಿರ್ದಿಷ್ಟ ವ್ಯಕ್ತಿಗೆ ಕೊಡಬೇಕಾದ ಸೂಕ್ತವಾದ ವಾಕ್ಯ ಏನೆಂಬುದನ್ನು ನಾವು ಅರಿತುಕೊಳ್ಳಬೇಕು. ವಿವಿಧ ಕ್ರೈಸ್ತ ಸೇವೆಗಳಲ್ಲಿ ನಾವು ಜನರಿಗೆ ಕೊಡಬೇಕಾದ ಯೋಗ್ಯ ವಾಕ್ಯವನ್ನು ನಿಖರವಾಗಿ ಗುರುತಿಸುವುದು ಬಹಳ ಪ್ರಾಮುಖ್ಯವಾಗಿದೆ. ಹೊಸ ಒಡಂಬಡಿಕೆಯು 1 ಕೊರಿಂಥದವರಿಗೆ 14:1ರಲ್ಲಿ, ನಾವು ಪ್ರವಾದಿಸುವ ವರವನ್ನು ಆಸಕ್ತಿಯಿಂದ ಅಪೇಕ್ಷಿಸಬೇಕೆಂದು ಏಕೆ ಹೇಳುತ್ತದೆ? ಪ್ರವಾದಿಸುವ ವರವನ್ನು ಆಸಕ್ತಿಯಿಂದ ಅಪೇಕ್ಷಿಸಬೇಕೆಂದು ಪ್ರತಿಯೊಬ್ಬ ವಿಶ್ವಾಸಿಗೆ ತಿಳಿಸಲಾಗಿದೆ. ಹೊಸ ಒಡಂಬಡಿಕೆಯ ಸಭಾಕೂಟದಲ್ಲಿ ಎಲ್ಲರಿಗೂ ಪ್ರವಾದನೆಯ ವರವು ಪ್ರಾಪ್ತವಾದರೆ, ಎಲ್ಲರೂ ಪ್ರವಾದಿಸಿದರೆ (ಎಲ್ಲರೂ ಪ್ರವಾದಿಗಳಲ್ಲ, ಆದರೆ ಎಲ್ಲರೂ ಪ್ರವಾದಿಸಬಹುದು), ಆ ವಾಕ್ಯಭಾಗದಲ್ಲಿ ಹೇಳಿರುವಂತೆ, ಈ ವರವಿಲ್ಲದ ಒಬ್ಬನು ಅಲ್ಲಿಗೆ ಬಂದರೆ, ಇಂತಹ ವರಗಳ ಕುರಿತಾಗಿ ಅವನಿಗೆ ನಂಬಿಕೆ ಇಲ್ಲದಿದ್ದರೆ, ಅವನು ಎಲ್ಲರ ಮಾತನ್ನು ಕೇಳಿ ತಾನು ಪಾಪಿಯೆಂಬ ಅರುಹನ್ನು ಹೊಂದುವನು ಮತ್ತು ಅವನ ಹೃದಯದ ರಹಸ್ಯಗಳು ಬಯಲಾಗುವವು, ಏಕೆಂದರೆ ಅವನಿಗೆ ಅವಶ್ಯವಾಗಿದ್ದ ಸೂಕ್ತವಾದ ವಾಕ್ಯವನ್ನು ಅವನು ಕೇಳಿಸಿಕೊಳ್ಳುತ್ತಾನೆ (1 ಕೊರಿಂಥದವರಿಗೆ 14:24-25). ಆಗ ಅವನು ಅಡ್ಡಬಿದ್ದು ದೇವರನ್ನು ಆರಾಧಿಸಿ, "ಓ, ದೇವರು ನಿಜವಾಗಿ ನಿಮ್ಮಲ್ಲಿದ್ದಾನೆ, ಏಕೆಂದರೆ ನನಗೆ ಬೇಕಾಗಿದ್ದ ವಾಕ್ಯವನ್ನು ನಾನು ಪಡೆದೆನು!" ಎಂದು ಉದ್ಗರಿಸುತ್ತಾನೆ.

ಪ್ರತಿಯೊಂದು ಕ್ರೈಸ್ತ ಸಭಾಕೂಟವೂ ಹೀಗಿರಬೇಕು. ಪ್ರತಿಯೊಂದು ಕ್ರೈಸ್ತಸಭೆಯಲ್ಲೂ ಪ್ರವಾದನಾ ವಾಕ್ಯವನ್ನು ಪ್ರವಾದಿಸಬಲ್ಲ ಜನರು ಇರಬೇಕು. ಇದಕ್ಕಾಗಿ ನೀನು ದೇವರ ಮುಂದೆ ಕಾದುನಿಲ್ಲಲು ಸಿದ್ಧನಿರಬೇಕು ಮತ್ತು ಪ್ರತಿಯೊಂದು ಸಂಗತಿಯನ್ನೂ ದೇವರ ಕೈಗೆ ಒಪ್ಪಿಸಿಕೊಡುವ ಮನಸ್ಸನ್ನು ಹೊಂದಿರಬೇಕು. ನೀನು ಇದನ್ನು ಮಾಡುತ್ತಿಲ್ಲವಾದರೆ, ಆಗ ನೀನು ದೇವರ ವಾಕ್ಯದ ಬೋಧಕನಾಗುವ ಯೋಗ್ಯತೆಯನ್ನು ಹೊಂದಿಲ್ಲ. ಒಬ್ಬ ವ್ಯಕ್ತಿಗೆ ನೀಡುವುದಕ್ಕೆ ನಿಖರವಾಗಿ ಸೂಕ್ತವಾದದ್ದು ಏನೆಂದು ನಿನಗೆ ತಿಳಿದಿರಬೇಕು. ಯೇಸುವು ’ಮತ್ತಾಯನು 7:6'ರಲ್ಲಿ ವಿವರಿಸಿದ ಅಂಶ ಇದೇ ಆಗಿದೆ. ಒಂದು ಹಂದಿಯನ್ನು ಹೋಲುವಂತ ಯಾರನ್ನಾದರೂ ನೀನು ಕಂಡಾಗ, ಹಂದಿಗೆ ಕೊಡಲು ಸೂಕ್ತವಾದದ್ದನ್ನು ಅವನಿಗೆ ಕೊಡು; ಒಂದು ನಾಯಿಯ ಹಾಗಿನ ಯಾರನ್ನಾದರೂ ನೋಡಿದಾಗ, ಅವನಿಗೆ ಒಂದು ಮೂಳೆಯನ್ನು ಕೊಡು. ನೀನು ಪರ್ವತ ಪ್ರಸಂಗವನ್ನು ಪ್ರಾಣಿಗಳಿಗೆ ಕೊಡಬಾರದು.

ಪ್ರವಾದನೆಯ ವರವನ್ನು ನಾವು ಯಾಚಿಸುತ್ತಿರುವಾಗ, ಜನರ ಮುಂದೆ ಮಾತನಾಡಲು ನಾವು ಎದ್ದು ನಿಲ್ಲುವ ಕ್ಷಣದಲ್ಲಿ, ಆ ಜನರ ಅವಶ್ಯಕತೆ ಏನೆಂದು ನಿಖರವಾಗಿ ವಿವೇಚಿಸುವ ಸಾಮರ್ಥ್ಯವನ್ನು ದೇವರು ನಮಗೆ ಕೊಡುತ್ತಾರೆ, ಮತ್ತು ಅವರ ಅವಶ್ಯಕತೆಯನ್ನು ಪೂರೈಸುವ ವಾಕ್ಯವನ್ನು ದೇವರು ನಮಗೆ ದಯಪಾಲಿಸುತ್ತಾರೆ. ಯೇಸುವು ಪರ್ವತ ಪ್ರಸಂಗದ ಅಂತ್ಯದಲ್ಲಿ ಪ್ರಸ್ತುತ ಪಡಿಸಿದ ಬಹಳ ಮುಖ್ಯವಾದ ಮೂಲತತ್ವ ಇದಾಗಿದೆ ಮತ್ತು ಇದು ನಾವು ಗ್ರಹಿಸಿಕೊಳ್ಳಬೇಕಾದ ಅತ್ಯಂತ ಪ್ರಮುಖ ಅಂಶವಾಗಿದೆ - ವಿಶೇಷವಾಗಿ ದೇವರ ವಾಕ್ಯವನ್ನು ಅವಿಶ್ವಾಸಿಗಳಿಗೆ ಅಥವಾ ವಿಶ್ವಾಸಿಗಳಿಗೆ ಬೋಧಿಸುವ ಕರೆಯನ್ನು ಹೊಂದಿರುವ ನಮ್ಮೆಲ್ಲರಿಗೆ. ನಾವು ಯಾರನ್ನೂ ಅಸಡ್ಡೆ ಮಾಡುವುದಿಲ್ಲ. ನೀನು ಯಾರನ್ನಾದರೂ ಅಸಡ್ಡೆ ಮಾಡುವುದಾದರೆ, ನೀನು ದೇವರ ಸೇವಕನಾಗಲು ಯೋಗ್ಯನಲ್ಲ. ಯೇಸುವು ಅತ್ಯಂತ ಕ್ಷುಲಕ ಪಾಪಿಗಳನ್ನು ಕೀಳಾಗಿ ನೋಡಲಿಲ್ಲ. ಆದಾಗ್ಯೂ ಜನರ ಅವಶ್ಯಕತೆಗೆ ಯೋಗ್ಯವಾದ ವಾಕ್ಯ ನಮ್ಮಲ್ಲಿ ಇರಬೇಕು. ಈ ಅಂಶವನ್ನು ’ಮತ್ತಾಯನು 7:6'ರಲ್ಲಿ ಸ್ಪಷ್ಟಪಡಿಸಲಾಗಿದೆ.