ಯಾಕೋಬ 4:2 ರ ಕೊನೆಯ ಭಾಗದಲ್ಲಿ ನಾವು ಹೀಗೆ ಓದುತ್ತೇವೆ, "ನೀವು ಬೇಡಿಕೊಳ್ಳದ ನಿಮಿತ್ತ ನಿಮಗೆ ದೊರೆಯುವದಿಲ್ಲ." ದೇವರು ಕ್ರೈಸ್ತರಿಗೆ ಕೊಡಲು ಬಯಸುವ ಅನೇಕ ವಿಷಯಗಳಿವೆ, ಆದರೆ ಅವರು ಬೇಡಿಕೊಳ್ಳದ ಕಾರಣ ಅವುಗಳನ್ನು ಪಡೆದುಕೊಂಡಿಲ್ಲ. ಇದು ವಿಶೇಷವಾಗಿ ಆತ್ಮಿಕ ಆಶೀರ್ವಾದಗಳ ವಿಷಯದಲ್ಲಿ ನಿಜವಾಗಿದೆ. ಲೂಕ 11:13 ರಲ್ಲಿರುವ ವಚನವನ್ನು ತೆಗೆದುಕೊಳ್ಳಿ, "ಹಾಗಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಪವಿತ್ರಾತ್ಮನನ್ನು ಇನ್ನೆಷ್ಟು ಹೆಚ್ಚಾಗಿ ಕೊಡುವನು." ನಮ್ಮನ್ನು ಪವಿತ್ರಗೊಳಿಸುವ ಪವಿತ್ರಾತ್ಮನನ್ನು ನಾವು ಬಯಸದಿದ್ದರೆ, ಯೇಸುವಿನ ಗುಣಮಟ್ಟಕ್ಕೆ ತಕ್ಕಂತೆ ಜೀವಿಸುವ ಸಾಮರ್ಥ್ಯ ನಮಗೆ ಎಂದಿಗೂ ಇರುವುದಿಲ್ಲ. ಅದಕ್ಕಾಗಿಯೇ ಯೇಸು ಮತ್ತಾಯ 7:7 ರಲ್ಲಿ, "ಕೇಳಿರಿ, ನಿಮಗೆ ಕೊಡಲ್ಪಡುವದು" ಎಂದು ಹೇಳಿದರು.
ನಾವೇಕೆ ಆತನನ್ನು ಕೇಳಿಕೊಳ್ಳಬೇಕೆಂದು ದೇವರು ಕಾಯುತ್ತಾನೆ? ಏಕೆಂದರೆ ಆತನು ಕೊಡುವುದನ್ನು ನಾವು ಪ್ರಶಂಸಿಸಬೇಕೆಂದು ಆತನು ಬಯಸುತ್ತಾನೆ. ನಾವು ಕೇಳದೆ ಆತನು ಕೊಡುವವುಗಳನ್ನು ನಾವು ಸಾಮಾನ್ಯವಾಗಿ ಮೌಲ್ಯವೆಂದು ಎಣಿವುದಿಲ್ಲ. ಪಾಪಗಳ ಕ್ಷಮಾಪಣೆ, ಇದು ಎಲ್ಲಕ್ಕಿಂತ ಪ್ರಮುಖವಾದ ವಿಷಯ. ಅದನ್ನು ನೀವು ಕೇಳಿಯೇ ಪಡೆದುಕೊಂಡಿದ್ದಲ್ಲವೇ? ನೀವು ಕೇಳದಿದ್ದರೆ ಅದು ನಿಮಗೆ ಸಿಗುತ್ತಿತ್ತೇ? ನೀವು ಬೇಡಿಕೊಳ್ಳದಿದ್ದರೆ ನಿಮಗೆ ರಕ್ಷಣೆ ಸಿಗುತ್ತಿತ್ತೇ? ಭೂಮಿಯ ಮೇಲೆ ಲಕ್ಷಾಂತರ ಜನರು ರಕ್ಷಿಸಲ್ಪಡದೆ ಇರಲು ಕಾರಣವೆಂದರೆ ಅವರು ಅದನ್ನು ಕೇಳಿಕೊಳ್ಳುವುದಿಲ್ಲ. ತಮಗೆ ಅದರ ಅಗತ್ಯವಿದೆ ಎಂಬುದನ್ನು ಒಪ್ಪಿಕೊಳ್ಳಲು ಅವರು ತಮ್ಮನ್ನು ತಗ್ಗಿಸಿಕೊಳ್ಳುವುದಿಲ್ಲ.
ದೇವರ ಅತ್ಯುನ್ನತ ಆತ್ಮಿಕ ಆಶೀರ್ವಾದಗಳನ್ನು ಪಡೆದುಕೊಳ್ಳಲು ಇರಬೇಕಾದ ಇತರ ಅವಶ್ಯಕತೆಗಳೇನು? ಮೊದಲನೆಯದಾಗಿ, ಅವುಗಳಿಗಾಗಿ ನಮಗೆ ಒಂದು ಹಂಬಲ, ಒಂದು ಹಸಿವು ಇರಬೇಕು. ನಂತರ, ನಾವು ನಂಬಿಕೆಯಿಂದ ಬೇಡಿಕೊಳ್ಳಬೇಕು. ಬೇಡಿಕೊಳ್ಳುವುದು ಆ ಹಂಬಲವನ್ನು ತೋರ್ಪಡಿಸುತ್ತದೆ, ಮತ್ತು ಯೇಸು ಕೆಲವು ವಚನಗಳ ಕೆಳಗೆ ಮತ್ತಾಯ 7:11 ರಲ್ಲಿ ನಂಬಿಕೆಯ ಬಗ್ಗೆ ಮಾತನಾಡುತ್ತಾರೆ. ಆತನು ಹೀಗೆ ಹೇಳುತ್ತಾನೆ, "ಹೀಗಿರಲಾಗಿ ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಉಡುಗೊರೆಗಳನ್ನು ಕೊಡಬಲ್ಲವರಾಗಿದ್ದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಒಳ್ಳೆಯವುಗಳನ್ನು ಇನ್ನೆಷ್ಟು ಹೆಚ್ಚಾಗಿ ಕೊಡುವನು."
ಕ್ರೈಸ್ತರು ಕೇವಲ ದೇವರನ್ನು ಕೇಳದ ಕಾರಣ ಲಕ್ಷಾಂತರ ವಿಷಯಗಳನ್ನು ಕಳೆದುಕೊಂಡಿದ್ದಾರೆ.
ನೀವು ಕೇಳದಿದ್ದರೆ, ನಿಮಗೆ ಸಿಗುವುದಿಲ್ಲ. ನೀವು ಹುಡುಕಿದರೆ, ನಿಮಗೆ ದೊರೆಯುತ್ತದೆ. ನೀವು ಸತ್ಯವನ್ನು ತಿಳಿದುಕೊಳ್ಳಬೇಕಾದರೆ, ನೀವು ಅದನ್ನು ಹುಡುಕಬೇಕು. ದೇವರ ವಾಕ್ಯದಲ್ಲಿ ನಿಧಿಗಳಿವೆ. ಮೇಲ್ಮೈಯಲ್ಲಿ ಎಲ್ಲರಿಗೂ ಸಿಗುವ ಕೆಲವು ವಿಷಯಗಳಿವೆ, ಆದರೆ ಅದರ ಅತ್ಯಂತ ಆಳವಾದ ನಿಧಿಗಳು ಒಳಗಿವೆ, ಮತ್ತು ನೀವು ಅವುಗಳಿಗಾಗಿ ಹುಡುಕಬೇಕು. ಭೂಮಿಯ ಬಗ್ಗೆ ಯೋಚಿಸಿ. ಮೇಲ್ಮೈಯಲ್ಲಿ ಮಾವಿನಹಣ್ಣು, ತೆಂಗಿನಕಾಯಿ ಮತ್ತು ಇತರ ಎಷ್ಟೋ ಒಳ್ಳೆಯ ಹಣ್ಣುಗಳಂತಹ ಬೆಲೆಬಾಳುವ ವಸ್ತುಗಳು ಸಿಗುತ್ತವೆ, ಆದರೆ ನಿಮಗೆ ಚಿನ್ನ ಮತ್ತು ವಜ್ರಗಳಂತಹ ನಿಜವಾದ ದುಬಾರಿ ನಿಧಿಗಳು ಬೇಕಾದರೆ, ನೀವು ಭೂಮಿಯೊಳಗೆ ಸಾವಿರಾರು ಅಡಿ ಆಳಕ್ಕೆ ಅಗೆಯಬೇಕು. ಅದೇ ರೀತಿ, ಸತ್ಯವೇದದ ಮೇಲ್ಮೈಯಿಂದ ನಮಗೆ ಕೆಲವು ವಿಷಯಗಳು ಸಿಗುತ್ತವೆ, ಉದಾಹರಣೆಗೆ ನಮ್ಮ ಪಾಪಗಳು ಹೇಗೆ ಕ್ಷಮಿಸಲ್ಪಡುತ್ತವೆ (ಏಕೆಂದರೆ ಕ್ರಿಸ್ತನು ಅವುಗಳಿಗಾಗಿ ಮರಣಹೊಂದಿದನು). ಆದರೆ ನೀವು ಸತ್ಯವೇದದ ಆಳವಾದ ಸತ್ಯಗಳನ್ನು ಅನ್ವೇಷಿಸಲು ಬಯಸಿದರೆ—ಅಂದರೆ ಪವಿತ್ರಾತ್ಮನಿಂದ ತುಂಬಿದ ಜೀವಿತವನ್ನು ನಡೆಸುವುದು ಹೇಗೆ, ದೇವರ ಸ್ವಭಾವದಲ್ಲಿ ಪಾಲುಗಾರರಾಗುವುದು ಹೇಗೆ, ಎಲ್ಲಾ ಪಾಪಗಳನ್ನು ಜಯಿಸುವುದು ಹೇಗೆ, ಕೋಪ, ಕಹಿ, ಕ್ಷಮಿಸದಿರುವುದು, ಅಸೂಯೆ, ಲೈಂಗಿಕ ಕಾಮ ಪ್ರಚೋದನೆಗಳನ್ನು ಜಯಿಸುವುದು ಹೇಗೆ ಎಂದು ತಿಳಿಯಬೇಕಾದರೆ—ನೀವು ಆಳವಾಗಿ ಅಗೆಯಬೇಕು. ಒಬ್ಬ ವ್ಯಕ್ತಿಯು ಆಳವಾಗಿ ಅಗೆಯದಿದ್ದರೆ, ಅವನಿಗೆ ನಿಜವಾಗಿಯೂ ಆಸಕ್ತಿಯಿಲ್ಲ ಎಂಬುದನ್ನು ದೇವರು ನೋಡುತ್ತಾನೆ. "ಕೇಳಿರಿ, ನಿಮಗೆ ಕೊಡಲ್ಪಡುವದು; ಹುಡುಕಿರಿ, ನಿಮಗೆ ದೊರೆಯುವದು; ತಟ್ಟಿರಿ, ನಿಮಗೆ ತೆರೆಯಲ್ಪಡುವದು."
ಇದು ಯೆರೆಮೀಯ 29:13 ರಲ್ಲಿ ನಾವು ಕಾಣುವ ವಾಗ್ದಾನವಾಗಿದೆ, "ನೀವು ಪೂರ್ಣಮನಸ್ಸಿನಿಂದ ನನ್ನನ್ನು ಹುಡುಕುವಾಗ ನನ್ನನ್ನು ಕಂಡುಕೊಳ್ಳುವಿರಿ." ಒಬ್ಬ ವ್ಯಕ್ತಿಯು ದೇವರನ್ನು ಮತ್ತು ಆತನಲ್ಲಿರುವ ಐಶ್ವರ್ಯವನ್ನು ಕಂಡುಕೊಂಡಿಲ್ಲ ಎಂದರೆ, ಆ ಮನುಷ್ಯನು ದೇವರನ್ನು ಪೂರ್ಣಹೃದಯದಿಂದ ಹುಡುಕಿಲ್ಲ ಎಂದು ನಾನು ಯಾವುದೇ ಹಿಂಜರಿಕೆಯಿಲ್ಲದೆ ಹೇಳಬಲ್ಲೆ. ಅವನು ಅರ್ಧಮನಸ್ಸಿನಿಂದ ಹುಡುಕಿದ್ದಾನೆ, ಮತ್ತು ಸತ್ಯವೇದದಲ್ಲಿ ಅರ್ಧಮನಸ್ಸಿನವರಿಗೆ ಯಾವುದೇ ವಾಗ್ದಾನವಿಲ್ಲ. ಮುಕ್ಕಾಲು ಮನಸ್ಸಿನವರಿಗೂ ಯಾವುದೇ ವಾಗ್ದಾನವಿಲ್ಲ, ಆದರೆ ಪೂರ್ಣಮನಸ್ಸಿನವರಿಗೆ ಅದ್ಭುತವಾದ ವಾಗ್ದಾನಗಳಿವೆ. ನೀವು ದೇವರಿಗೆ ಹತ್ತಿರವಾಗಿರಬಹುದು; ನಿಮ್ಮ 90% ಅನ್ನು ದೇವರಿಗೆ ನೀಡಿ, ದೇವರಿಗೆ ಕೇವಲ 10% ನೀಡಿದ ವ್ಯಕ್ತಿಗಿಂತ ಹೆಚ್ಚಿನದನ್ನು ನೀವು ಪಡೆದುಕೊಳ್ಳದೇ ಇರಬಹುದು. ಆದರೆ, ನೀವು ದೇವರಿಗೆ 100% ನೀಡಿದಾಗ, ನೀವು ಎಲ್ಲವನ್ನೂ ಪಡೆದುಕೊಳ್ಳುತ್ತೀರಿ. ನೀವು 90% ನೀಡಿದರೆ, ನೀವು 10% ನೀಡಿದ ವ್ಯಕ್ತಿಯ ಅದೇ ವರ್ಗದಲ್ಲಿದ್ದೀರಿ. ಇದನ್ನು ಕ್ರೈಸ್ತರು ಅರಿತುಕೊಳ್ಳುವುದಿಲ್ಲ. ನಿಮ್ಮ ಹೃದಯದ 10% ದಿಂದ ದೇವರನ್ನು ಹುಡುಕಿ, ನೀವು ಆತನನ್ನು ಕಂಡುಕೊಳ್ಳುವುದಿಲ್ಲ. ನಿಮ್ಮ ಹೃದಯದ 90% ದಿಂದ ಆತನನ್ನು ಹುಡುಕಿ, ನೀವು ಆತನನ್ನು ಕಂಡುಕೊಳ್ಳುವುದಿಲ್ಲ. ನಿಮ್ಮ ಪೂರ್ಣಹೃದಯದಿಂದ ದೇವರನ್ನು ಹುಡುಕಿ, ಆಗ ನೀವು ಆತನನ್ನು ಕಂಡುಕೊಳ್ಳುವಿರಿ.
ಹುಡುಕಿರಿ, ನಿಮಗೆ ದೊರೆಯುವುದು. ತಟ್ಟಿರಿ, ನಿಮಗೆ ತೆರೆಯಲ್ಪಡುವುದು. ಇವು ವಾಗ್ದಾನಗಳು. ದೇವರು ಎಂದಿಗೂ ತನ್ನ ವಾಗ್ದಾನಗಳನ್ನು ಮುರಿಯುವುದಿಲ್ಲ. "ಕೇಳಿಕೊಳ್ಳುವ ಪ್ರತಿಯೊಬ್ಬನೂ ಹೊಂದುತ್ತಾನೆ." ನೀವು ಏಕೆ ಹೊಂದಿಲ್ಲ? ನೀವು ದೇವರು ಬಯಸುವ ರೀತಿಯಲ್ಲಿ ಬೇಡಿಕೊಳ್ಳುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. "ಹುಡುಕುವವನಿಗೆ ದೊರೆಯುತ್ತದೆ." ಬಹುಶಃ ನೀವು ದೇವರು ಬಯಸುವ ರೀತಿಯಲ್ಲಿ ಹುಡುಕಿಲ್ಲ.
"ತಟ್ಟುವವನಿಗೆ ತೆರೆಯಲ್ಪಡುತ್ತದೆ." ಬಹುಶಃ ನೀವು ಸಾಕಷ್ಟು ತಟ್ಟಿಲ್ಲ.
ಕ್ರೈಸ್ತರು ಕೇವಲ ದೇವರನ್ನು ಕೇಳದ ಕಾರಣ ಲಕ್ಷಾಂತರ ವಿಷಯಗಳನ್ನು ಕಳೆದುಕೊಂಡಿದ್ದಾರೆ. ಯಾಕೋಬ 4:2 ರ ಕೊನೆಯಲ್ಲಿರುವ ಈ ಚಿಕ್ಕ ವಾಕ್ಯವನ್ನು ನೆನಪಿನಲ್ಲಿಡಿ, "ನೀವು ಬೇಡಿಕೊಳ್ಳದ ನಿಮಿತ್ತ ನಿಮಗೆ ದೊರೆಯುವದಿಲ್ಲ"—ಅಂದರೆ ದೇವರು ನೀವು ಹೊಂದಬೇಕೆಂದು ಬಯಸುವ ವಿಷಯವನ್ನು ನೀವು ಕೇಳದ ಕಾರಣ ಹೊಂದಿಲ್ಲ.