ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಯೌವನಸ್ಥರಿಗೆ ಮನೆ ಸಭೆ
WFTW Body: 

ಹಳೆಯ ಒಡಂಬಡಿಕೆಯ ಅಡಿಯಲ್ಲಿ, ದೇವರು ಇಸ್ರಾಯೇಲ್ಯರಿಗೆ ಮೋಶೆ ಹಾಗೂ ಇತರ ಪ್ರವಾದಿಗಳ ಮೂಲಕ ಕೊಟ್ಟಿದ್ದ ಬರೆಯಲ್ಪಟ್ಟ ದೇವರ ವಾಕ್ಯವನ್ನು ಮಾತ್ರ ಇಸ್ರಾಯೇಲ್ಯರು ಹಿಂಬಾಲಿಸ ಬೇಕಾಗಿತ್ತು. ಪ್ರವಾದಿಗಳಲ್ಲಿ ಅತಿ ಶ್ರೇಷ್ಠರಾದ ಮೋಶೆ ಅಥವಾ ಎಲೀಯನು ಅಥವಾ ಸ್ನಾನಿಕನಾದ ಯೋಹಾನನೂ ಸಹ, "ನನ್ನನ್ನು ಹಿಂಬಾಲಿಸಿರಿ" ಎಂದು ಹೇಳಲು ಸಾಧ್ಯವಿರಲಿಲ್ಲ. ಜನರಿಗೆ ದೇವರ ವಾಕ್ಯವೊಂದೇ ದಾರಿಯ ಬೆಳಕಾಗಿತ್ತು (ಕೀರ್ತನೆಗಳು 119:105).

ಆದರೆ ಯೇಸುವು ಬಂದು ಹೊಸ ಒಡಂಬಡಿಕೆಯನ್ನು ಅನುಷ್ಠಾನಕ್ಕೆ ತಂದರು. ಅವರು ನಮಗೆ ದೇವರ ವಾಕ್ಯವನ್ನು ಕೊಟ್ಟದ್ದು ಮಾತ್ರವಲ್ಲದೆ, ತನ್ನ ಸ್ವಂತ ಜೀವಿತದ ಮೂಲಕ ನಾವು ಅನುಸರಿಸಬಹುದಾದ ಒಂದು ಮಾದರಿಯನ್ನು ಸಹ ನೀಡಿದರು. ಸತ್ಯವೇದದಲ್ಲಿ ಮೊದಲ ಬಾರಿಗೆ "ನನ್ನನ್ನು ಹಿಂಬಾಲಿಸಿರಿ" ಎಂದು ಅವರು ಹೇಳಿದರು (ಮತ್ತಾ. 4:19, ಯೋಹಾ. 21:19, ಲೂಕ. 9:23). ಹಾಗಾಗಿ ಹೊಸ ಒಡಂಬಡಿಕೆಯಲ್ಲಿ, ಬರೆಯಲ್ಪಟ್ಟ ದೇವರ ವಾಕ್ಯ ಹಾಗೂ ಅದರ ಜೊತೆಯಲ್ಲಿ ಯೇಸುವಿನಲ್ಲಿ ಮಾನವ ಶರೀರಧಾರಿಯಾದ ದೇವರ ವಾಕ್ಯ ಇವೆರಡನ್ನೂ ನಾವು ಹೊಂದಿದ್ದೇವೆ - ಬೇರೆ ಶಬ್ದಗಳಲ್ಲಿ ಹೇಳುವುದಾದರೆ, ನಮ್ಮನ್ನು ಮಾರ್ಗದರ್ಶಿಸಲು, ಬರೆಯಲ್ಪಟ್ಟ ವಾಕ್ಯವು ಮಾನವ ಜೀವದಲ್ಲಿ ಕಾಣಿಸಿಕೊಂಡಿತು.

ಫರಿಸಾಯರು ದೇವರ ವಾಕ್ಯದ ಅಧ್ಯಯನ ಮಾಡಿದರೂ ಯೇಸುವಿನ ಬಳಿಗೆ ಬರಲು ಅವರು ನಿರಾಕರಿಸಿದ್ದಕ್ಕಾಗಿ ಆತನು ಅವರನ್ನು ಗದರಿಸಿದನು: "ಶಾಸ್ತ್ರಗಳಿಂದ ನಿತ್ಯಜೀವ ದೊರೆಯುತ್ತದೆಂದು ನೆನಸಿ ನೀವು ಅವುಗಳನ್ನು ವಿಚಾರಿಸುತ್ತೀರಲ್ಲಾ; ಅವುಗಳೂ ನನ್ನ ವಿಷಯದಲ್ಲಿ ಸಾಕ್ಷಿ ಕೊಡುವವುಗಳಾಗಿವೆ. ಆದರೂ ಜೀವ ಹೊಂದುವುದಕ್ಕಾಗಿ ನನ್ನ ಬಳಿಗೆ ಬರುವುದಕ್ಕೆ ನಿಮಗೆ ಮನಸ್ಸಿಲ್ಲ"(ಯೋಹಾ. 5:39,40).

ಈಗ ಯೇಸುವಿನ ಜೀವಿತವು ನಮ್ಮ ಮಾರ್ಗಕ್ಕೆ ಬೆಳಕಾಗಿದೆ (ಯೋಹಾನ 1:4) - ದೇವರ ವಾಕ್ಯ ಮಾತ್ರವೇ ನಮಗೆ ಸಾಕಾಗುವುದಿಲ್ಲ. ಯಾವುದೇ ವಿಷಯದಲ್ಲಿ ನಮಗೆ ದೇವರ ವಾಕ್ಯದಲ್ಲಿ ಸ್ಪಷ್ಟವಾದ ಮಾರ್ಗದರ್ಶನ ಸಿಗದೇ ಇದ್ದಾಗ, ನಾವು ಯೇಸುವಿನ ಜೀವಿತವನ್ನು ನೋಡಬಹುದು (ಪವಿತ್ರಾತ್ಮನು ನಮ್ಮ ಹೃದಯಕ್ಕೆ ಅದನ್ನು ಪ್ರಕಟಪಡಿಸುತ್ತಾನೆ) ಮತ್ತು ನಮಗೆ ಬೇಕಾದ ಉತ್ತರವು ಯಾವಾಗಲೂ ದೊರಕುತ್ತದೆ.

ಇನ್ನೂ ಮುಂದುವರಿದು ನೋಡುವಾಗ, ಹೊಸ ಒಡಂಬಡಿಕೆಯಲ್ಲಿ ಭಕ್ತನಾದ ಪೌಲನು ಪವಿತ್ರಾತ್ಮ ಭರಿತನಾಗಿ ಹೀಗೆ ಹೇಳುತ್ತಾನೆ - "ನಾನು ಕ್ರಿಸ್ತನನ್ನು ಹಿಂಬಾಲಿಸುವಂತೆಯೇ ನೀವು ನನ್ನನ್ನು ಹಿಂಬಾಲಿಸಿ." ಅದಲ್ಲದೆ ಪೇತ್ರನು ಈ ಮಾತನ್ನು 3 ಸಾರಿ ಬರೆಯುವಂತೆ ಪವಿತ್ರಾತ್ಮನು ಆತನನ್ನು ಪ್ರೇರೇಪಿಸಿದನು - ಇದರ ಉದ್ದೇಶ ನಾವು ಕ್ರಿಸ್ತನ ಮಾರ್ಗದಲ್ಲಿ ನಡೆಯುವ ನಿಜವಾದ ದೇವಭಕ್ತರ ಮಾದರಿಯನ್ನು ಕೂಡ ಹಿಂಬಾಲಿಸಬೇಕು, ಎಂಬ ಸತ್ಯಾಂಶವನ್ನು ಒತ್ತಿ ಹೇಳುವುದೇ ಆಗಿದೆ (1 ಕೊರಿ. 4:16; 1 ಕೊರಿ. 11:1; ಫಿಲಿ. 3:17).

ಹೊಸ ಒಡಂಬಡಿಕೆಯ ಒಬ್ಬ ನಿಜವಾದ ಸೇವಕನು ದೇವರ ವಾಕ್ಯವು ತೋರಿಸುವ ಗುಣಮಟ್ಟವನ್ನು ಪ್ರಕಟಿಸುವದು ಮಾತ್ರವಲ್ಲದೆ, ಪೌಲನು ಹೇಳಿದ ಹಾಗೆ "ನಾನು ಕ್ರಿಸ್ತನನ್ನು ಹಿಂಬಾಲಿಸುವ ಪ್ರಕಾರ, ನನ್ನನ್ನು ಹಿಂಬಾಲಿಸಿ" ಎಂದೂ ಸಹ ಹೇಳುವವನಾಗಿರುತ್ತಾನೆ.

ಕೆಲವು ವಿಶ್ವಾಸಿಗಳು, "ನಾವು ಯಾವುದೇ ಮನುಷ್ಯನನ್ನು ಹಿಂಬಾಲಿಸಬಾರದು, ನಾವು ಕೇವಲ ಯೇಸುವನ್ನು ಹಿಂಬಾಲಿಸಬೇಕು," ಎಂದು ಹೇಳುತ್ತಾರೆ. ಇದು ಒಂದು ಆತ್ಮಿಕ ಹೇಳಿಕೆಯಂತೆ ಕಾಣಿಸುತ್ತದೆ. ಆದರೆ ಇದು ದೇವರ ವಾಕ್ಯಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಏಕೆಂದರೆ, ನಾವು ಈಗ ತಾನೇ ನೋಡಿದಂತೆ, ಪೌಲನು ನಮಗೆ (ಪವಿತ್ರಾತ್ಮನಿಂದ ಪ್ರೇರೇಪಿಸಲ್ಪಟ್ಟು) ತನ್ನನ್ನು ಹಿಂಬಾಲಿಸುವಂತೆ ಹೇಳಿದ್ದಾನೆ.

"ಹೊಸ ಒಡಂಬಡಿಕೆಯ ಒಬ್ಬ ನಿಜವಾದ ಸೇವಕನು ವಾಕ್ಯದಲ್ಲಿ ಬರೆಯಲ್ಪಟ್ಟಿರುವ ದೇವರ ಗುಣಮಟ್ಟವನ್ನು ಸಾರುವುದು ಮಾತ್ರವಲ್ಲದೆ, ಅದರ ಜೊತೆಗೆ ಪೌಲನು ಹೇಳಿದಂತೆ, ’ನಾನು ಕ್ರಿಸ್ತನನ್ನು ಅನುಸರಿಸುವಂತೆಯೇ ನೀವು ನನ್ನನ್ನು ಅನುಸರಿಸುವವರಾಗಿರಿ,’ ಎಂದು ಸಹ ಹೇಳುವವನಾಗಿರುತ್ತಾನೆ"

ಪೌಲನು ಕೊರಿಂಥದ ಕ್ರೈಸ್ತರಿಗೆ ತನ್ನನ್ನು ಹಿಂಬಾಲಿಸುವಂತೆಯೂ, ತನ್ನನ್ನು ಅನುಸರಿಸುವಂತೆಯೂ ಹೇಳಲು ಕಾರಣ, ಆತನು ಅವರ ಆತ್ಮಿಕ ತಂದೆಯಾಗಿದ್ದನು (1 ಕೊರಿ. 4:15,16). ಪೌಲನು ಅವರಿಗೆ ಹೇಳಿದ್ದೇನೆಂದರೆ, "ನಿಮಗೆ ಕ್ರಿಸ್ತನಲ್ಲಿ ಬೋಧಕರು ಸಾವಿರಾರು ಮಂದಿ ಇದ್ದರೂ, ತಂದೆಗಳು ಬಹುಮಂದಿ ಇಲ್ಲ; ನಾನೇ ನಿಮ್ಮನ್ನು ಸುವಾರ್ತೆಯ ಮೂಲಕ ಕ್ರಿಸ್ತಯೇಸುವಿನಲ್ಲಿ ಪಡೆದೆನು. ಆದುದರಿಂದ ನನ್ನನ್ನು ಅನುಸರಿಸಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ." ಯಾರೋ ಒಬ್ಬ ಸತ್ಯವೇದ ಬೋಧಕನನ್ನು ಹಿಂಬಾಲಿಸಲು ಆಗುವುದಿಲ್ಲ, ಏಕೆಂದರೆ ಆತನ ಬೋಧನೆಯು ಉತ್ತಮ ಮತ್ತು ನಿಖರವಾಗಿದ್ದರೂ, ಆತನ ಜೀವನದ ಮಾದರಿಯು ಉತ್ತಮವಾಗಿ ಇಲ್ಲದಿರಬಹುದು. ಮೇಲೆ ಉಲ್ಲೇಖಿಸಿದ ವಚನದ ಪ್ರಕಾರ, ಒಬ್ಬ ಆತ್ಮಿಕ ತಂದೆಯು ಹತ್ತು ಸಾವಿರ ಸತ್ಯವೇದ ಬೋಧಕರಿಗಿಂತ ಮೇಲಾಗಿದ್ದಾನೆ. ಆದ್ದರಿಂದ ಎಲ್ಲಾ ಕ್ರೈಸ್ತರೂ ಪೌಲನಂತ ಒಬ್ಬ ಆತ್ಮಿಕ ತಂದೆಯನ್ನು ಹೊಂದಿಕೊಳ್ಳುವುದು ಒಳ್ಳೆಯದು; ಅವರು ಆತನ ಮಾದರಿಯನ್ನು ಅನುಸರಿಸಬಹುದಾಗಿದೆ. ಇಂತಹ ಆತ್ಮಿಕ ತಂದೆಯನ್ನು ಅನುಸರಿಸುವುದು ನಮ್ಮನ್ನು ಪಾಪದಿಂದಲೂ ಮತ್ತು ಸುಳ್ಳು ಬೋಧನೆಯಿಂದಲೂ ಕಾಪಾಡಲು ಸಹಾಯಕವಾಗಿದೆ.

ಪೌಲನು ತನ್ನಂತೆಯೇ "ಕ್ರಿಸ್ತನ ಮಾದರಿಯನ್ನು ಅನುಸರಿಸುತ್ತಿರುವ" ಇತರ ದೇವಜನರನ್ನು ಸಹ ಹಿಂಬಾಲಿಸಬೇಕೆಂದು ಕ್ರೈಸ್ತರನ್ನು ಒತ್ತಾಯಿಸಿದನು. ಪೌಲನು, "ಸಹೋದರರೇ, ನೀವೆಲ್ಲರು ನನ್ನನ್ನು ಅನುಸರಿಸುವವರಾಗಿರಿ; ಮತ್ತು ನಾವು ನಿಮಗೆ ತೋರಿಸಿದ ಮಾದರಿಯ ಪ್ರಕಾರ ನಡೆಯುವವರಿಂದಲೂ ಕಲಿತುಕೊಳ್ಳಿರಿ," ಎಂದು ಹೇಳಿದನು (ಫಿಲಿ. 3:17 NLT).

ದೇವರ ವಾಕ್ಯವು ನಾವು ನಮ್ಮ ನಾಯಕರಿಗೆ ವಿಧೇಯರಾಗುವಂತೆ ಮತ್ತು ಅವರನ್ನು ಅನುಸರಿಸುವಂತೆಯೂ ನಮ್ಮನ್ನು ಆಜ್ಞಾಪಿಸುತ್ತದೆ.

"ನಿಮ್ಮ ಸಭಾನಾಯಕರ ಮಾತನ್ನು ಕೇಳಿರಿ, ಅವರಿಗೆ ಅಧೀನರಾಗಿರಿ"(ಇಬ್ರಿ. 13:17).

"ನಿಮಗೆ ದೇವರ ವಾಕ್ಯವನ್ನು ತಿಳಿಸಿದ ನಿಮ್ಮ ಸಭಾನಾಯಕರನ್ನು ಜ್ಞಾಪಕ ಮಾಡಿಕೊಳ್ಳಿರಿ; ಅವರು ಯಾವ ರೀತಿ ನಡೆದುಕೊಂಡರೆಂದು (ಅವರ ಜೀವನದ ಬಗ್ಗೆ) ಆಲೋಚಿಸಿರಿ; ಅವರ ನಂಬಿಕೆಯನ್ನು ಅನುಸರಿಸಿರಿ"(ಇಬ್ರಿ. 13:6,7).

ನಾವು ಒಬ್ಬ ವ್ಯಕ್ತಿಯ ಸೇವೆಯನ್ನು ಅನುಸರಿಸುವುದಕ್ಕೆ ಕರೆಯಲ್ಪಟ್ಟಿಲ್ಲ, ಏಕೆಂದರೆ ದೇವರು ತನ್ನ ಪ್ರತಿಯೊಬ್ಬ ಮಗನಿಗೆ ಮತ್ತು ಮಗಳಿಗೆ ಕೊಡುವ ವಿಶಿಷ್ಟ ಸೇವೆಯನ್ನು ಇನ್ನೊಬ್ಬರಿಗೆ ಕೊಡುವುದಿಲ್ಲ. ನಮ್ಮ ಮಾನವ ದೇಹದಂತೆಯೇ ಕ್ರಿಸ್ತನ ದೇಹದ ಅನೇಕ ಅಂಗಗಳಲ್ಲಿ ಪ್ರತಿಯೊಂದಕ್ಕೂ ತನ್ನದೇ ಆದ ಪ್ರತ್ಯೇಕ ಕೆಲಸ ವಹಿಸಲ್ಪಟ್ಟಿದೆ. ಯೇಸುವು ಜನರಿಗೆ ತನ್ನನ್ನು ಹಿಂಬಾಲಿಸುವಂತೆ ಕರೆ ನೀಡಿದಾಗ, ಅವರು ತನ್ನಂತೆ ಅದ್ಭುತ ಕಾರ್ಯಗಳನ್ನು ಮಾಡಬೇಕೆಂದು ಅಥವಾ ಬೋಧಿಸಬೇಕೆಂದೂ ಸಹ ಆತನು ಅಪೇಕ್ಷಿಸಲಿಲ್ಲ. ಅದು ಆತನ ಸೇವೆಯಾಗಿತ್ತು. ಆತನು ತನ್ನ ಜೀವಿತದ ಮಾದರಿಯನ್ನು ಜನರು ನೋಡಿ ಅದನ್ನು ಅನುಸರಿಸಲಿಕ್ಕಾಗಿ ಜನರನ್ನು ಕರೆದನು - ಅಂದರೆ, ತಾನು ಜೀವಿಸಿದ ರೀತಿಯನ್ನು ನೋಡಿ ಅದೇ ರೀತಿ ಜೀವಿಸಲಿಕ್ಕಾಗಿ. ಹಾಗೆಯೇ ಪೌಲನು ತಾನು ಕ್ರಿಸ್ತನನ್ನು ಹಿಂಬಾಲಿಸಿದ ಹಾಗೆ ತನ್ನನ್ನು ಹಿಂಬಾಲಿಸಿರಿ, ಎಂದು ವಿಶ್ವಾಸಿಗಳಿಗೆ ಕರೆ ನೀಡಿದಾಗ, ಆತನು ಅವರು ಅಪೊಸ್ತಲರು ಆಗಬೇಕೆಂದು ಅಥವಾ ರೋಗಿಗಳನ್ನು ಗುಣಪಡಿಸಬೇಕೆಂದು ಅವರಿಗೆ ಹೇಳಲಿಲ್ಲ, ಅದರೆ ಅವರು ತನ್ನಂತೆ ಜೀವಿಸಬೇಕೆಂದು ಹೇಳಿದನು - ಕ್ರಿಸ್ತನ ಜೀವನ ತತ್ವ ಅಥವಾ ಜೀವನ ವಿಧಾನವನ್ನು ಅವರು ಅನುಸರಿಸಬೇಕೆಂದು ಹೇಳಿದನು.

ಮೇಲೆ ಪ್ರಸ್ತಾಪಿಸಿದ ವಚನಗಳಲ್ಲಿ ದೈವಿಕ ಮನುಷ್ಯರನ್ನು ಹಿಂಬಾಲಿಸುವಂತೆ ಪವಿತ್ರಾತ್ಮನು ನಮಗೆ ಆದೇಶಿಸಿದ್ದಾನೆ. ಯಾರು ಗರ್ವದಿಂದ ಅಂತಹ ದೈವಿಕ ಮನುಷ್ಯರ ಉದಾಹರಣೆಗಳನ್ನು ಹಿಂಬಾಲಿಸಲು ಒಪ್ಪುವುದಿಲ್ಲವೋ, ಅವರು ಸಾಮಾನ್ಯವಾಗಿ ಲೌಕಿಕ ವಿಷಯಗಳಲ್ಲಿ ಆಸಕ್ತರಾಗಿರುವ ಮನುಷ್ಯರೊಂದಿಗೆ ಸೇರಿಕೊಳ್ಳುತ್ತಾರೆ, ಅಥವಾ ತಮ್ಮ ಸ್ವೇಚ್ಛಾನುಸಾರ ನಡೆಯುತ್ತಾರೆ. ಮುಂದೆ ಇದರಿಂದ ದೊಡ್ಡ ದುರಂತಗಳು ಸಂಭವಿಸಬಹುದು.

ಪೌಲನು ಫಿಲಿಪ್ಪಿಯ ಕ್ರೈಸ್ತರಿಗೆ ತನ್ನನ್ನು ಹಿಂಬಾಲಿಸುವಂತೆ ಮತ್ತು ತಾನು ತೋರಿಸಿಕೊಟ್ಟ ಇತರ ದೈವಿಕ ಮನುಷ್ಯರನ್ನು ಹಿಂಬಾಲಿಸುವಂತೆ ಹೇಳಿದ ನಂತರ (ಫಿಲಿ. 3:17), ಕೂಡಲೇ ಅವರಿಗೆ ಇನ್ನೊಂದು ಎಚ್ಛರಿಕೆಯ ಮಾತನ್ನು ಹೇಳಿದನು ಮತ್ತು ಅವರು ಯಾವ ಜನರಿಂದ ದೂರವಿರಬೇಕೆಂದು ಹೇಳಿದನು: "ಅನೇಕರು ಕ್ರಿಸ್ತನ ಶಿಲುಬೆಗೆ ವಿರೋಧಿಗಳಾಗಿ ನಡೆಯುತ್ತಾರೆ; ಅವರ ವಿಷಯದಲ್ಲಿ ನಿಮಗೆ ಎಷ್ಟೋ ಸಾರಿ ಹೇಳಿದೆನು, ಈಗಲೂ ಅಳುತ್ತಾ ಹೇಳುತ್ತೇನೆ."(ಫಿಲಿ. 3:18,19).

ಅವರು ಪೌಲನ ಉದಾಹರಣೆಯನ್ನು ಅನುಸರಿಸಿ ನಡೆದರೆ, ಆಗ ಅವರು ಆ ಭಕ್ತಿಹೀನರಾದ ಜನರಿಂದ ಮೋಸ ಹೋಗುವುದನ್ನು ತಪ್ಪಿಸಿಕೊಳ್ಳಬಹುದು.

ಒಬ್ಬ ವ್ಯಕ್ತಿಯು ಹಿಂಬಾಲಿಸಲು ಯೋಗ್ಯನಾದ ನಿಜವಾದ ದೇವಭಕ್ತನೋ ಎಂಬುದನ್ನು ಗುರುತಿಸಲು ಈ ಕೆಳಗಿನ 7 ಪರೀಕ್ಷೆಗಳು ಉಪಯುಕ್ತವಾಗಿವೆ.

1.ಆತನು ದೀನನಾಗಿದ್ದಾನೋ - ಆತನು ಸುಲಭವಾಗಿ ಹತ್ತಿರವಾಗಬಹುದೋ ಮತ್ತು ಆತನನ್ನು ಸುಲಭವಾಗಿ ಮಾತನಾಡಿಸಬಹುದೋ? ಯೇಸುವು ನಮಗೆ, ತನ್ನಿಂದ ದೀನತೆಯನ್ನು ಕಲಿಯಬೇಕೆಂದು ತಿಳಿಸಿದರು (ಮತ್ತಾ. 11:29). ಒಬ್ಬ ದೇವಭಕ್ತನು ಯಾರೆಂದರೆ, ಯೇಸುವಿನಿಂದ ದೀನತೆಯನ್ನು ಕಲಿತಿರುವವನು.

2.ಆತನು ಹಣದ ಆಸೆಯಿಂದ ಬಿಡುಗಡೆ ಹೊಂದಿದ್ದಾನೋ ಮತ್ತು ಆತನು ಯಾರಿಂದಲೂ ಯಾವತ್ತೂ ಹಣದ ಸಾಲವನ್ನು ಕೇಳುವುದಿಲ್ಲವೋ (ನಿಮಗೆ ತಿಳಿದ ಮಟ್ಟಿಗೆ)? ಯೇಸುವು ತನ್ನ ಸೇವೆಗಾಗಿಯೂ ಸಹ ಯಾರಿಂದಲೂ ಹಣವನ್ನು ಕೇಳಲಿಲ್ಲ, ಮತ್ತು ಯೇಸುವಿನ ಈ ಉದಾಹರಣೆಯನ್ನು ಒಬ್ಬ ದೇವಭಕ್ತನು ಅನುಸರಿಸುತ್ತಾನೆ. ಯೇಸುವು ಹೇಳಿದ್ದೇನೆಂದರೆ, ದೇವರನ್ನು ಪ್ರೀತಿಸುವವರು ಹಣವನ್ನು ಪ್ರೀತಿಸಲಾರರು ಮತ್ತು ಯಾರು ದೇವರ ಸಮೀಪವಿದ್ದಾರೋ ಅವರು ಹಣವನ್ನು ದ್ವೇಷಿಸುತ್ತಾರೆ (ಲೂಕ. 16:13).

3.ಆತನು ತನ್ನ ಜೀವಿತದಲ್ಲಿ ಪರಿಶುದ್ಧನಾಗಿದ್ದಾನೋ? - ವಿಶೇಷವಾಗಿ ಮಹಿಳೆಯರೊಂದಿಗೆ ನಡೆದುಕೊಳ್ಳುವ ರೀತಿ (ನಿಮಗೆ ತಿಳಿದ ಮಟ್ಟಿಗೆ)? ಪತ್ನಿಯೊಂದಿಗೆ ಇರುವಂತ ಒಬ್ಬ ದೇವಭಕ್ತನು ಲೈಂಗಿಕ ವ್ಯಾಮೋಹದ ಶೋಧನೆಯಿಂದ ತಪ್ಪಿಸಿಕೊಳ್ಳುವುದು ಮಾತ್ರವಲ್ಲದೆ, ಅದರಿಂದ ಓಡಿ ಹೋಗುತ್ತಾನೆ. (2 ತಿಮೊ. 2:20-22).

4.ಆತನು ವಿವಾಹಿತನಾಗಿ ಮಕ್ಕಳನ್ನು ಹೊಂದಿದ್ದರೆ, ಆತನು ತನ್ನ ಮಕ್ಕಳನ್ನು ಕರ್ತನ ಮಾರ್ಗದಲ್ಲಿ ಬೆಳೆಸಿದ್ದಾನೆಯೇ? ಒಬ್ಬ ದೇವಭಕ್ತನಾದ ವಿವಾಹಿತ ವ್ಯಕ್ತಿಯ ಮಕ್ಕಳು ಕರ್ತನಲ್ಲಿ ನಂಬಿಕೆಯುಳ್ಳವರೂ ಮತ್ತು ಶಿಸ್ತಿನಿಂದ ಬೆಳೆಸಲ್ಪಟ್ಟು, ಉತ್ತಮ ನಡತೆಯುಳ್ಳ ಮಕ್ಕಳೂ ಆಗಿರುತ್ತಾರೆ (1 ತಿಮೊ. 3:4,5; ತೀತ. 1:6).

5.ಆತನ ಬಹಳ ಹತ್ತಿರದ ಸಹೋದ್ಯೋಗಿಗಳು ಆತನ ಸಹವಾಸದಿಂದ ಮತ್ತು ಒಡನಾಟದಿಂದ ದೈವಿಕ ವ್ಯಕ್ತಿಗಳಾಗಿದ್ದಾರೆಯೇ? ಒಬ್ಬ ದೈವಿಕ ವ್ಯಕ್ತಿಯು ತನ್ನ ಹಾಗೇ ಇತರ ದೈವಿಕ ಮನುಷ್ಯರನ್ನು ಬೆಳೆಸುತ್ತಾನೆ. ತಿಮೊಥೆಯನು ತನ್ನ ಆತ್ಮಿಕ ತಂದೆಯಾದ ಪೌಲನ ಜೊತೆಗೆ ಸೇವೆಮಾಡಿ ಒಬ್ಬ ದೈವಿಕ ವ್ಯಕ್ತಿಯಾದನು (ಫಿಲಿ. 2:19-22).

6.ಆತನು ತನ್ನ ಪರಿಶ್ರಮದಿಂದ (ಅಥವಾ ಇತರರ ಜೊತೆಗೆ ಸಕ್ರಿಯವಾಗಿ ಸೇರಿಕೊಂಡು) ಹೊಸ ಒಡಂಬಡಿಕೆಯ ಒಂದು ಸ್ಥಳೀಯ ಕ್ರೈಸ್ತಸಭೆಯನ್ನು ಕಟ್ಟಿದ್ದಾನೆಯೇ?ಯೇಸು ತನ್ನ ಸಭೆಯನ್ನು ಕಟ್ಟುವ ಸಲುವಾಗಿ ಈ ಭೂಮಿಗೆ ಬಂದನು (ಮತ್ತಾ. 16:18). ಆತನು ಸಭೆಯನ್ನು ಕಟ್ಟುವುದಕ್ಕಾಗಿ ತನ್ನನ್ನೇ ಮರಣಕ್ಕೆ ಒಪ್ಪಿಸಿಕೊಟ್ಟನು (ಎಫೆ. 5:26). ದೇವಭಕ್ತರು ಇತರರನ್ನು ಕ್ರಿಸ್ತನ ಕಡೆಗೆ ತಿರುಗಿಸುವುದು ಮಾತ್ರವಲ್ಲದೆ, ಅವರನ್ನು ಒಂದು ಸ್ಥಳೀಯ ಸಭೆಯಾಗಿ ಕಟ್ಟುತ್ತಾರೆ.

7.ಆತನು ನಿಮ್ಮನ್ನು ತನ್ನೊಂದಿಗೆ ಜೋಡಿಸಿಕೊಳ್ಳದೆ, ಕ್ರಿಸ್ತನೊಂದಿಗೆ ಜೋಡಿಸುತ್ತಾನೆಯೇ? ಒಬ್ಬ ದೇವಭಕ್ತನು ನಿಮ್ಮನ್ನು ಕ್ರಿಸ್ತನ ಕಡೆಗೆ ನಡೆಸುತ್ತಾನೆ, ಮತ್ತು ಆ ಮೂಲಕ ನೀವು ಸಹ ಕ್ರಿಸ್ತನಲ್ಲಿ ಬೆಳೆದು ಇತರರಿಗೆ ದೈವಿಕ ಮಾದರಿಯಾಗುವಿರಿ (ಎಫೆ. 4:15; 2 ಕೊರಿ. 4:5).

ನಾವು ಹೆಚ್ಚಿನ ಕ್ರೈಸ್ತನಾಯಕರನ್ನು ಹಿಂಬಾಲಿಸಲು ಸಾಧ್ಯವಿಲ್ಲ, ಏಕೆಂದರೆ ಅವರು ಈ ಮೇಲಿನ ಅಂಶಗಳಲ್ಲಿ ಒಂದು ಅಥವಾ ಅನೇಕ ಅಂಶಗಳಲ್ಲಿ ವಿಫಲರಾಗುತ್ತಾರೆ.

ಆದಾಗ್ಯೂ, ಮೇಲೆ ತಿಳಿಸಿದ ಗುಣಗಳನ್ನು ಹೊಂದಿರುವ ಒಬ್ಬ ದೈವಿಕ ನಾಯಕನು ನಿಮಗೆ ಸಿಕ್ಕಿದರೆ, ನೀವು ಆತನನ್ನು ಆತ್ಮಿಕ ತಂದೆಯಾಗಿ ಹಿಂಬಾಲಿಸುವುದು ಉತ್ತಮವಾಗಿದೆ, ಏಕೆಂದರೆ ನೀವು ಕರ್ತನಾದ ಯೇಸುವಿನ ಹತ್ತಿರಕ್ಕೆ ಹೋಗಲು ಆತನು ಸಹಾಯ ಮಾಡುತ್ತಾನೆ ಮತ್ತು ನೀವು ಪಾಪ ಮತ್ತು ಸುಳ್ಳು ಬೋಧನೆಯಿಂದ ರಕ್ಷಿಸಲ್ಪಡುತ್ತೀರಿ.

ಕಿವಿಯುಳ್ಳವನು ಕೇಳಲಿ.