WFTW Body: 

ಲೂಕ 10:42ರಲ್ಲಿ, ಯೇಸುವು ಮಾರ್ಥಳಿಗೆ ಹೇಳಿದ ಮಾತು ಗಮನ ಸೆಳೆಯುವಂತದ್ದಾಗಿದೆ: "ಒಂದು ವಿಷಯ ಮಾತ್ರ ಅವಶ್ಯವಾಗಿದೆ!" ಮಾಡಬೇಕಾದ ಕೆಲಸಗಳಲ್ಲಿ ಬಹಳಷ್ಟು ಉತ್ತಮ ಕಾರ್ಯಗಳು ಇರಬಹುದು ಮತ್ತು ಅವುಗಳಲ್ಲಿ ಹಲವು ಕಾರ್ಯಗಳು ನ್ಯಾಯಬದ್ಧ ಮತ್ತು ಅವಶ್ಯವೆಂದು ತೋರಬಹುದು. ಆದರೆ ಯೇಸುವು ಸ್ಪಷ್ಟಪಡಿಸಿದ್ದು ಏನೆಂದರೆ, ಒಂದು ಸಂಗತಿಯು ಬೇರೆಲ್ಲವುಗಳಿಗಿಂತ ಹೆಚ್ಚಾಗಿ ಅವಶ್ಯವಾಗಿದೆ. ಅದು ಯಾವುದು?

ಯೇಸು ಮತ್ತು ಆತನ ಶಿಷ್ಯರು ಆಗ ತಾನೇ ಬೇಥಾನ್ಯಕ್ಕೆ ಬಂದು ತಲುಪಿದ್ದರು. ಅವರು ಬರುವುದನ್ನು ಮಾರ್ಥಳು ನೋಡಿದಳು ಮತ್ತು ತಕ್ಷಣ ಅವರನ್ನು ಸಂತೋಷದಿಂದ ತನ್ನ ಮನೆಗೆ ಸ್ವಾಗತಿಸಿದಳು; ಆ ಮೇಲೆ ಅವರನ್ನು ಕೂರಿಸಿ, ಅವರಿಗೆ ಊಟ ತಯಾರಿಸಲು ತಕ್ಷಣವೇ ಅವಸರದಿಂದ ಅಡುಗೆ ಮನೆಗೆ ಹೋದಳು. ಅಷ್ಟರಲ್ಲಿ ಯೇಸುವು ಅಲ್ಲಿ ಸೇರಿದ್ದ ಜನರಿಗೆ ವಾಕ್ಯವನ್ನು ಬೋಧಿಸಲು ಆರಂಭಿಸಿದರು. ಮಾರ್ಥಳು ತನ್ನ ಸಹಾಯಕ್ಕಾಗಿ ತನ್ನ ತಂಗಿಯಾದ ಮರಿಯಳು ಬಾರದೆ, ಕರ್ತನ ವಾಕ್ಯವನ್ನು ಕೇಳಲಿಕ್ಕಾಗಿ ಆತನ ಬಳಿಯಲ್ಲಿ ಕೂತಿರುವುದನ್ನು ಕಂಡು, ಅಡುಗೆ ಮನೆಯಿಂದ ಕೋಪದಿಂದ ಯೇಸುವಿನ ಬಳಿಗೆ ಬಂದು, ಈ ರೀತಿಯಾಗಿ ತನ್ನ ದುಗುಡವನ್ನು ಆತನಿಗೆ ಪ್ರಕಟಿಸಿದಳು: "ಕರ್ತನೇ, ನಾನು ನಿಮ್ಮೆಲ್ಲರಿಗಾಗಿ ಭೋಜನ ತಯಾರಿಸಲು ಒಳಗೆ ಶ್ರಮಿಸುತ್ತಿದ್ದೇನೆ, ಇಲ್ಲಿ ನನ್ನ ತಂಗಿಯು ನನಗೆ ಯಾವ ಸಹಾಯವನ್ನೂ ಮಾಡದೆ ಸುಮ್ಮನೆ ಕುಳಿತಿದ್ದಾಳೆ. ಆಕೆ ಎದ್ದು ಬಂದು ನನಗೆ ಸಹಾಯ ಮಾಡುವಂತೆ ಆಕೆಗೆ ಬುದ್ಧಿ ಹೇಳು!" ಆದರೆ ಮಾರ್ಥಳಿಗೆ ಉಂಟಾದ ಆಶ್ಚರ್ಯ ಏನೆಂದರೆ, ಯೇಸುವು ಆಕೆಯನ್ನೇ ಗದರಿಸಿದರು. ಯೇಸುವು ಮಾರ್ಥಳಿಗೆ ಹೇಳಿದ್ದು ಏನೆಂದರೆ, ತಪ್ಪು ಕೆಲಸ ಮಾಡಿದ್ದು ನೀನೆ ಹೊರತು, ಮರಿಯಳಲ್ಲ ಎಂಬುದಾಗಿ.

ಇಲ್ಲಿ ನಾವು ಗಮನಿಸಬೇಕಾದ ವಿಷಯ, ಯೇಸುವು ಮಾರ್ಥಳಿಗೆ ಈ ಮಾತನ್ನು ಹೇಳಿದ್ದು, ಆಕೆ ಯಾವುದೋ ಪಾಪಕರ ಕೆಲಸವನ್ನು ಮಾಡಿದ್ದಕ್ಕಾಗಿ ಅಲ್ಲ. ಆಕೆ ಯೇಸುವನ್ನು ಹರ್ಷೋಲ್ಲಾಸದಿಂದ ಮನೆಗೆ ಬರಮಾಡಿಕೊಂಡಿದ್ದಳು. ಅದರ ನಂತರ ಆಕೆ ಅಡುಗೆ ಮನೆಯಲ್ಲಿ ಶ್ರಮಿಸಿದ್ದು ತನ್ನ ಸ್ವಂತಕ್ಕಾಗಿ ಅಲ್ಲ, ಆದರೆ ಯೇಸು ಮತ್ತು ಆತನ ಶಿಷ್ಯರಿಗಾಗಿ ಆಗಿತ್ತು. ಈಕೆಯು ಇಂದು ಹೃದಯದಲ್ಲಿ ಕರ್ತನನ್ನು ಸ್ವೀಕರಿಸಿಕೊಂಡು, ಕರ್ತನ ಮತ್ತು ಇತರರ ನಿಸ್ವಾರ್ಥ ಸೇವೆ ಮಾಡಲು ಬಯಸುವಂತ ಒಬ್ಬ ವಿಶ್ವಾಸಿಯ ಚಿತ್ರಣವಾಗಿದ್ದಾಳೆ. ಆಕೆಯಲ್ಲಿ ಇಂತಹ ಸೇವಾ ಮನೋಭಾವವಿದ್ದರೂ, ಯೇಸುವು ಆಕೆಯನ್ನು ಗದರಿಸಿದರು. ನಾವು ಇದರ ಪ್ರಾಮುಖ್ಯತೆ ಏನೆಂದು ಪ್ರಶ್ನಿಸಬಹುದು. ಆಕೆ ಮಾಡಿದ್ದರಲ್ಲಿ ತಪ್ಪೇನಿತ್ತು? ಇದಕ್ಕೆ ಸರಿಯಾದ ಉತ್ತರ ಯೇಸುವು ಅಲ್ಲಿ ನುಡಿದ ನಾಲ್ಕು ಶಬ್ದಗಳಲ್ಲಿ ಸಿಗುತ್ತದೆ: "ಒಂದೇ ಒಂದು ಮಾತ್ರ ಅವಶ್ಯವಾಗಿದೆ." ಕರ್ತನು ಮಾರ್ಥಳ ಸೇವೆಯ ಕುರಿತಾಗಿ ಆಕ್ಷೇಪಿಸಲಿಲ್ಲ, ಆದರೆ ಆಕೆಯ ಆದ್ಯತೆ ಸರಿಯಾಗಿಲ್ಲವೆಂದು ಆಕೆಗೆ ತೋರಿಸಿದರು.

ಮರಿಯಳು ಉತ್ತಮವಾದುದನ್ನು ಆರಿಸಿಕೊಂಡಿದ್ದಾಳೆಂದು ಕರ್ತನು ಹೇಳಿದನು. ಆಕೆ ಯಾವ ಆಯ್ಕೆ ಮಾಡಿದಳು? ಆಕೆ ಸುಮ್ಮನೆ ಯೇಸುವಿನ ಪಾದದ ಬಳಿ ಕೂತುಕೊಂಡು ಆತನ ವಾಕ್ಯವನ್ನು ಆಲಿಸಿದಳು. ಬೇರೇನೂ ಮಾಡಲಿಲ್ಲ. ಆದರೆ "ಉತ್ತಮ ಕೆಲಸ" ಅದೇ ಆಗಿದೆ. ಎಲ್ಲಕ್ಕೂ ಮಿಗಿಲಾಗಿ ಬೇಕಾಗಿರುವ ಒಂದು ಒಳ್ಳೆಯ ಭಾಗ ಅದಾಗಿದೆ. "ಗಮನವಿಟ್ಟು ಕೇಳುವುದಕ್ಕೆ" ನಮ್ಮ ಜೀವಿತದಲ್ಲಿ ಎಷ್ಟು ಪ್ರಾಮುಖ್ಯತೆ ಇದೆ? ಕರ್ತನ ಪಾದಗಳ ಬಳಿ ಆತನ ವಾಕ್ಯವನ್ನು ಓದುತ್ತಾ, ಅದರ ಮೂಲಕ ಆತನು ನಮಗೆ ಏನು ಹೇಳುತ್ತಾನೆಂದು ತಿಳಿದುಕೊಳ್ಳಲು ನಾವು ಎಷ್ಟು ಉತ್ಸುಕರಾಗಿದ್ದೇವೆ? ಬಹುಶಃ ಬಹಳ ಸ್ವಲ್ಪ ಮಾತ್ರ. ಹಲವು ಬಾರಿ ನಾವೂ ಸಹ, ಮಾರ್ಥಳು ಮಾಡಿದ ತಪ್ಪಿನಂತೆ, ಇತರ ವಿಷಯಗಳು ಮುಖ್ಯ ಸಂಗತಿಯನ್ನು ಬದಿಗೊತ್ತಲು ಅವಕಾಶ ನೀಡುತ್ತೇವೆ. ನಮ್ಮ ಗಮನವನ್ನು ಬೇರೆ ಕಡೆಗೆ ತಿರುಗಿಸುವುದು ಕೇವಲ ಲೌಕಿಕ ಸಂಗತಿಗಳು ಮಾತ್ರವಲ್ಲ. ಕ್ರೈಸ್ತಸೇವೆಯಿಂದಲೂ ಹೀಗೆ ಆಗಬಹುದು. ನಾವು ಪ್ರಾರ್ಥನಾ ಕೂಟಗಳಲ್ಲಿ ಅಥವಾ ಆರಾಧನೆ ಅಥವಾ ಸಾಕ್ಷಿ ಕೂಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬಹುದು, ಆದಾಗ್ಯೂ ಮಾರ್ಥಳಿಗೆ ಆದಂತೆ, ನಮ್ಮ ಸೇವೆಯನ್ನು ಕರ್ತನು ತಳ್ಳಿಹಾಕಬಹುದು.

ಯೇಸುವಿನ ಪಾದಗಳ ಬಳಿ ಕುಳಿತ ಮರಿಯಳಿಂದ, ಕಡಿಮೆ ಪಕ್ಷ ಮೂರು ಆತ್ಮಿಕ ಸತ್ಯಾಂಶಗಳನ್ನು ನಾವು ಕಲಿಯಬಹುದು.

1. ಕುಳಿತಿರುವುದು - ಇದು ನಡೆಯುವುದು, ಓಡುವುದು ಅಥವಾ ನಿಲ್ಲುವುದಕ್ಕಿಂತ ವಿಭಿನ್ನವಾದದ್ದು - ಇದು ಮುಖ್ಯವಾಗಿ ವಿಶ್ರಮಿಸುವುದರ ಒಂದು ಚಿತ್ರಣವಾಗಿದೆ. ಇದು ನಮಗೆ ಕಲಿಸಿಕೊಡುವುದು ಏನೆಂದರೆ, ನಾವು ದೇವರ ಮಾತನ್ನು ಕೇಳಿಸಿಕೊಳ್ಳಬೇಕಾದರೆ, ನಮ್ಮ ಹೃದಯಗಳಲ್ಲಿ ನೆಮ್ಮದಿ ಇರಬೇಕು ಮತ್ತು ನಮ್ಮ ಮನಸ್ಸು ಶಾಂತವಾಗಿ ಇರಬೇಕು. ಪಾಪ ಕ್ಷಮಾಪಣೆ ಕೇಳದೇ ಇದ್ದಾಗ ಈ ಮೇಲಿನ ಮೊದಲ ಸಂಗತಿ ಕೈಗೂಡುವುದಿಲ್ಲ, ಹಾಗೆಯೇ ಅತಿಯಾದ ಪ್ರಾಪಂಚಿಕ ಚಿಂತೆ ಹಾಗೂ ಹಣದ ವ್ಯಾಮೋಹ ಎರಡನೆಯದಕ್ಕೆ ತಡೆ ಒಡ್ಡುತ್ತದೆ. ಮನಸಾಕ್ಷಿಯಲ್ಲಿ ಅಸಮಾಧಾನ ಉಂಟಾದಾಗ ಅಥವಾ ಮನಸ್ಸು ಚಿಂತೆ ಅಥವಾ ಭಯದಿಂದ ತುಂಬಿದ್ದಾಗ, ನಾವು "ಬೀಸುವ ತಂಗಾಳಿ"ಯ ಹಾಗಿರುವ ದೇವರ ವಾಣಿಯನ್ನು ಕೇಳುತ್ತೇವೆಂದು ನಿರೀಕ್ಷಿಸಬಹುದೇ? ಕೀರ್ತ. 46:10ರಲ್ಲಿ ಹೇಳಿರುವಂತೆ, ನಾವು "ಪ್ರಯಾಸಪಡುವುದನ್ನು ಬಿಟ್ಟಾಗ" ಮಾತ್ರ ದೇವರನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

2. ಒಬ್ಬ ವ್ಯಕ್ತಿಯ ಪಾದಗಳ ಬಳಿ ಕೂತಿರುವುದು, 'ದೀನತೆ'ಯ ಒಂದು ಚಿತ್ರಣವೂ ಸಹ ಆಗಿರುತ್ತದೆ. ಮರಿಯಳು ಯೇಸುವಿನ ಸರಿಮಟ್ಟದ ಒಂದು ಆಸನದ ಮೇಲೆ ಕೂತಿರಲಿಲ್ಲ, ಆತನಿಗಿಂತ ಕೆಳಮಟ್ಟದಲ್ಲಿ ಕೂತಿದ್ದಳು. ನ್ಯಾಯತೀರ್ಪಿನ ಸಮಯದ ಹೊರತಾಗಿ, ದೇವರು ಒಬ್ಬ ಅಹಂಕಾರಿ ಮನುಷ್ಯನೊಂದಿಗೆ ಯಾವತ್ತೂ ಮಾತಾನಾಡುವುದಿಲ್ಲ. ದೇವರು ತನ್ನ ಮುಂದೆ ಒಬ್ಬ ಬಾಲಕನಂತೆ ದೀನ ಮನಸ್ಸು ಉಳ್ಳವನೊಂದಿಗೆ ಯಾವಾಗಲೂ ಮಾತಾಡಲು ಉತ್ಸುಕರಾಗಿ ಇರುತ್ತಾರೆ ಮತ್ತು ತನ್ನ ಕೃಪೆಯನ್ನು ಅವನಿಗೆ ಒದಗಿಸುತ್ತಾರೆ (ಮತ್ತಾ. 11:25).

3. ಮರಿಯಳು ಕುಳಿತಿದ್ದ ರೀತಿಯು ಆಕೆ ತನ್ನನ್ನು ಒಪ್ಪಿಸಿಕೊಟ್ಟದ್ದರ ಒಂದು ಚಿತ್ರಣವಾಗಿದೆ. ಇಂತಹ ಸಮರ್ಪಣಾ ಮನೋಭಾವ ಒಬ್ಬ ಶಿಷ್ಯೆಯಲ್ಲಿ ತನ್ನ ಗುರುವಿನ ಬಗ್ಗೆ ಇರುತ್ತದೆ. ದೇವರ ವಾಕ್ಯಕ್ಕೆ ನಮ್ಮ ವಿಧೇಯತೆಯ ಮೂಲಕ ನಾವು ದೇವರಿಗೆ ಅಧೀನರಾಗಿ ಇರುವುದನ್ನು ತೋರಿಸುತ್ತೇವೆ. ದೇವರು ತನ್ನ ವಾಕ್ಯವನ್ನು ನಮಗೆ ಕೊಟ್ಟಿರುವುದು ನಮ್ಮ ಕುತೂಹಲವನ್ನು ತೃಪ್ತಿಗೊಳಿಸಲಿಕ್ಕೆ ಅಥವಾ ನಮಗೆ ಮಾಹಿತಿ ನೀಡುವುದಕ್ಕೆ ಅಲ್ಲ. ದೇವರ ವಾಕ್ಯವು ದೇವರ ಹೃದಯದ ಇಚ್ಛೆಯನ್ನು ಪ್ರಕಟಿಸುತ್ತದೆ. ದೇವರ ಮಾತಿನ ಉದ್ದೇಶವು ನಮ್ಮನ್ನು ವಿಧೇಯತೆಗೆ ನಡೆಸುವುದಾಗಿದೆ. ಯೇಸುವು ಯೋಹಾ. 7:17ರಲ್ಲಿ ಸ್ಪಷ್ಟ ಪಡಿಸಿದಂತೆ, ನಾವು ದೇವರ ಚಿತ್ತಕ್ಕೆ ವಿಧೇಯರಾಗಲು ಸಿದ್ಧರಿದ್ದಾಗ ಮಾತ್ರ, ನಮಗೆ ಅವರ ಚಿತ್ತದ ಅರಿವು ಉಂಟಾಗುತ್ತದೆ.

ಕ್ರೈಸ್ತರಲ್ಲಿ ಅನೇಕರು ಸತ್ಯವೇದವನ್ನು ತಿಂಗಳುಗಟ್ಟಲೆ ಅಥವಾ ವರ್ಷಾನುಗಟ್ಟಲೆ ಓದಿದರೂ, ಅದರ ಮೂಲಕ ದೇವರ ಧ್ವನಿಯನ್ನು ತಾವು ಆಲಿಸಬೇಕು ಎಂಬ ಹಂಬಲ ಅವರಲ್ಲಿ ಇರುವುದಿಲ್ಲ. ಹಾಗಿದ್ದರೂ ಅವರು ಸಂಪೂರ್ಣ ತೃಪ್ತರಾಗಿದ್ದಂತೆ ಕಾಣುತ್ತದೆ. ನಾನು ನಿಮ್ಮನ್ನು ಕೇಳ ಬಯಸುವುದು ಏನೆಂದರೆ, "ನಿಮಗೆ ಪ್ರತಿ ದಿನ ಕರ್ತನ ಧ್ವನಿ ಕೇಳಿಸುತ್ತದೆಯೇ? ಇಲ್ಲವಾದಲ್ಲಿ, ಅದಕ್ಕೆ ಕಾರಣವೇನು?" ಆತನು ಕಿವಿಗೊಟ್ಟು ಕೇಳುವವರೊಂದಿಗೆ ಮಾತಾಡುತ್ತಾನೆ. ನಿಮ್ಮ ಆತ್ಮಿಕ ಕಿವಿಗಳು ಏಕೆ ಕಿವುಡಾಗಿವೆ? ಆತನ ಮುಂದೆ ಸಮಾಧಾನವಿಲ್ಲದ ಮನಸ್ಸು, ದೀನತೆಯಿಲ್ಲದ ಆತ್ಮ ಅಥವಾ ಆತನು ಈಗಾಗಲೇ ನಿಮಗೆ ತೋರಿಸಿರುವ ಸಂಗತಿಗಳ ವಿಷಯದಲ್ಲಿ ಅವಿಧೇಯತೆ ನಿಮ್ಮಲ್ಲಿದೆಯೇ? ಅಥವಾ ಕೇಳಿಸಿಕೊಳ್ಳುವ ಆಸೆಯೇ ಬಹುಶಃ ನಿಮ್ಮಲ್ಲಿ ಇಲ್ಲವೇ? ಅದೇನೇ ಇರಲಿ, ಅದು ತಡವಿಲ್ಲದೆ ಮತ್ತು ಶಾಶ್ವತವಾಗಿ ನಿವಾರಿಸಲ್ಪಡುವಂತೆ ದೇವರು ನಿಮಗೆ ಅನುಗ್ರಹಿಸಲಿ. ನೀವು ಸಮುವೇಲನ ಈ ಪ್ರಾರ್ಥನೆಯನ್ನು ಮಾಡಿರಿ, "ಕರ್ತನೇ ಮಾತನಾಡು, ನಿನ್ನ ದಾಸನು ಕಾದಿದ್ದಾನೆ." ಆ ಮೇಲೆ ನಿಮ್ಮ ಸತ್ಯವೇದವನ್ನು ತೆರೆಯಿರಿ ಮತ್ತು ಕರ್ತನ ಮುಖವನ್ನು ನೋಡಬೇಕೆಂಬ ದಾಹದಿಂದ ಓದಿರಿ, ಆಗ ನಿಮಗೂ ಸಹ ಆತನ ಧ್ವನಿಯು ಕೇಳಿಸುತ್ತದೆ.