ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ ತಿಳಿಯುವುದು
WFTW Body: 

1975ನೇ ಇಸವಿಯ ಆಗಸ್ಟ್ ತಿಂಗಳಲ್ಲಿ ನಾವು (ಎರಡು ಕುಟುಂಬಗಳು) ನನ್ನ ಮನೆಯಲ್ಲಿ ಒಟ್ಟಾಗಿ ಭೇಟಿಯಾಗಲು ಆರಂಭಿಸಿದಾಗ, ಒಂದು ಹೊಸ ಕ್ರೈಸ್ತಸಭೆಯನ್ನು ಆರಂಭಿಸುವ ಯಾವುದೇ ಉದ್ದೇಶ ನಮ್ಮಲ್ಲಿರಲಿಲ್ಲ. ನಾವು ಯಾರನ್ನೂ ನಮ್ಮ ಜೊತೆಗೆ ಸೇರಿಕೊಳ್ಳಲು ಆಹ್ವಾನಿಸಲಿಲ್ಲ. ಅದಲ್ಲದೆ, ಒಬ್ಬನು ತನ್ನ ಪ್ರಸ್ತುತ ಸಭೆಯ ಕುರಿತಾಗಿ ಬೇಸರಗೊಂಡ ಮಾತ್ರಕ್ಕೆ ನಮ್ಮೊಂದಿಗೆ ಸೇರಿಕೊಳ್ಳಲು ಬಯಸಿದರೆ, ನಾವು ಅದನ್ನು ಒಪ್ಪಿಕೊಳ್ಳಲಿಲ್ಲ - ಏಕೆಂದರೆ ಆ ವ್ಯಕ್ತಿಯು ಬಹಳ ಬೇಗನೆ ನಮ್ಮೊಂದಿಗೂ ಬೇಸರಗೊಳ್ಳುತ್ತಾನೆಂದು ನಮಗೆ ತಿಳಿದಿತ್ತು! ಯೇಸು ಸ್ವಾಮಿಯು ತನ್ನ ಬಳಿಗೆ "ಕಷ್ಟ ಪಡುವವರನ್ನು ಮತ್ತು ಹೊರೆ ಹೊತ್ತವರನ್ನು" ಮಾತ್ರ ಆಹ್ವಾನಿಸಿದರು (ಮತ್ತಾ. 11:28) - ಬೇರೆ ಮಾತುಗಳಲ್ಲಿ ಹೇಳುವುದಾದರೆ, ತಮ್ಮ ಸ್ವಂತ ಸೋಲಿನ ಜೀವಿತದಿಂದ ಬೇಸತ್ತಿರುವವರು ಮತ್ತು ಜಯ ಗಳಿಸುವುದಕ್ಕಾಗಿ ಬಹಳ ತವಕಿಸುತ್ತಿರುವವರು. ಈ ಮನೋಭಾವವುಳ್ಳ ಜನರು ಮಾತ್ರ ನಮ್ಮೊಂದಿಗೆ ಸೇರಿಕೊಳ್ಳಲಿ, ಎಂಬುದಾಗಿ ನಾವು ಬಯಸಿದೆವು.

ಆ ಸಮಯದಲ್ಲಿ ಭಾರತದಲ್ಲಿ ಆಗಲೇ ನೂರಾರು ಕ್ರೈಸ್ತ ಪಂಗಡಗಳಿದ್ದವು ಮತ್ತು ದೇವರು ನಮ್ಮ ಮೂಲಕ ಮತ್ತೊಂದು ಕ್ರೈಸ್ತ ಪಂಗಡವನ್ನು ಆರಂಭಿಸಲು ಇಚ್ಛಿಸುವುದಿಲ್ಲವೆಂದು ನಾವು ಖಚಿತವಾಗಿ ತಿಳಿದಿದ್ದೆವು. ’ಪ್ರೊಟೆಸ್ಟೆಂಟ್’ ಪಂಗಡದ ಮೂಲಕ ಧಾರ್ಮಿಕ ಸುಧಾರಣೆಯು ಆರಂಭವಾದ ಸಮಯದಿಂದ, ಕರ್ತನು ಆರಂಭಿಸಿದ ಪ್ರತಿಯೊಂದು ಹೊಸ ಧಾರ್ಮಿಕ ಆಂದೋಲನವು, ಆ ಪ್ರಸ್ತುತ ಪರಿಸರದಲ್ಲಿ ಯಾವುದೇ ಕ್ರೈಸ್ತಸಭೆಯೂ ಒತ್ತಿಹೇಳಲು ವಿಫಲವಾಗಿದ್ದ ಹೊಸ ಒಡಂಬಡಿಕೆಯ ಜೀವಿತದ ಯಾವುದೋ ಕೆಲವು ವಿಶೇಷತೆಗಳನ್ನು ಎತ್ತಿ ತೋರಿಸಲಿಕ್ಕಾಗಿ ಆಗಿತ್ತು. ಇಲ್ಲವಾದರೆ, ದೇವರು ಮತ್ತೊಂದು ಹೊಸದನ್ನು ಆರಂಭಿಸುವ ಅವಶ್ಯಕತೆ ಇರುವುದಿಲ್ಲ.

ಆದಾಗ್ಯೂ, ಕರ್ತನು ನಮ್ಮ ಮಧ್ಯದಲ್ಲಿ ಒಂದು ಹೊಸ ಸಭೆಯನ್ನು ಪ್ರಾರಂಭಿಸಲು ಹೊರಟಿದ್ದನು. ಆತನು ನಮ್ಮ ಮೂಲಕ ಯಾವ ವಿಶಿಷ್ಟತೆಗಳನ್ನು (ವಿಶೇಷ ಸತ್ಯಾಂಶಗಳನ್ನು) ಒತ್ತಿ ಹೇಳಲು ಬಯಸುತ್ತಿದ್ದನು? ನಾವು ಹಲವಾರು ವಿಷಯಗಳಲ್ಲಿ ಇತರ ಅನೇಕ ಸಭೆಗಳ ಬೋಧನೆಯನ್ನು ಒಪ್ಪಿಕೊಳ್ಳಲಿಲ್ಲ, ಏಕೆಂದರೆ ಆ ಸಭೆಗಳು ಹೊಸ ಒಡಂಬಡಿಕೆಯ ಬೋಧನೆಯಿಂದಲೂ, ವಿಧೇಯತೆಯಿಂದಲೂ ದೂರ ಸರಿದಿರುವುದಾಗಿ ನಮಗೆ ಅನಿಸಿತು. ನಾವು ಅವರೊಂದಿಗೆ ಸಹಮತ ಹೊಂದಿರದ ಕೆಲವು ಕ್ಷೇತ್ರಗಳು ಯಾವುವೆಂದರೆ:

1. ನೀರಿನ ದೀಕ್ಷಾಸ್ನಾನ :
ನಾವು ತ್ರಯೇಕ ದೇವರ ಹೆಸರಿನಲ್ಲಿ ನಂಬಿಕೆ ಇರಿಸಿದ ವಿಶ್ವಾಸಿಗಳನ್ನು ನೀರಿನಲ್ಲಿ ಮುಳುಗಿಸಿ ನೀರಿನ ದೀಕ್ಷಾಸ್ನಾನ ನೀಡುವ ಪರಿಪಾಠವನ್ನು ಇಟ್ಟುಕೊಂಡೆವು. ಆದ್ದರಿಂದ ಮಕ್ಕಳ ದೀಕ್ಷಾಸ್ನಾನ ಮಾಡಿಸುವ ಬೇರೆಲ್ಲಾ ಮುಖ್ಯ ಪಂಗಡಗಳಿಂದ ನಾವು ವಿಭಿನ್ನರಾಗಿದ್ದೆವು.

2. ಪವಿತ್ರಾತ್ಮನ ದೀಕ್ಷಾಸ್ನಾನ :
ಪವಿತ್ರಾತ್ಮನ ದೀಕ್ಷಾಸ್ನಾನ ಮತ್ತು ಪವಿತ್ರಾತ್ಮನ ಎಲ್ಲಾ ವರಗಳ ಬಗ್ಗೆ ನಾವು ನಂಬಿದ್ದೆವು. ಈ ವಿಷಯದಲ್ಲಿ ನಾವು ಬ್ರದರನ್ ಮತ್ತು ಬ್ಯಾಪ್ಟಿಸ್ಟ್‌ ಸಭೆಗಳಿಗಿಂತ ವಿಭಿನ್ನವಾಗಿದ್ದೆವು!! ಆದಾಗ್ಯೂ, ಅನ್ಯಭಾಷೆಗಳಲ್ಲಿ ಮಾತನಾಡುವುದು ಪವಿತ್ರಾತ್ಮನ ದೀಕ್ಷಾಸ್ನಾನದ ಗುರುತು ಎಂಬ ನಂಬಿಕೆಯನ್ನು ನಾವು ಇರಿಸಿಕೊಂಡಿರಲಿಲ್ಲ, ಆದರೆ ದೇವರಿಂದ ಬಲವನ್ನು ಹೊಂದುವುದು ಪವಿತ್ರಾತ್ಮನ ದೀಕ್ಷಾಸ್ನಾನದ ಪುರಾವೆಯೆಂದು ನಾವು ನಂಬಿದ್ದೆವು (ಅ.ಕೃ. 1:8,10:38 ನೋಡಿರಿ). ಹೀಗೆ ಪೆಂಟೆಕೋಸ್ಟಲ್ ಮತ್ತಿತರ ಕೆರಿಸ್ಮಾಟಿಕ್ ಪಂಗಡದವರಿಂದಲೂ ನಾವು ವಿಭಿನ್ನರಾಗಿದ್ದೆವು!!

3. ಶಿಷ್ಯತ್ವ :
ನಮ್ಮ ಕರ್ತನಾದ ಯೇಸುವು ನಮಗೆ ಶಿಷ್ಯರನ್ನು ಮಾಡುವಂತೆ ಆಜ್ಞಾಪಿಸಿದ್ದನ್ನು (ಮತ್ತಾ. 28:19), ಹಾಗೂ ಆ ಶಿಷ್ಯರು ಲೂಕನು 14:26,27,33 ಈ ವಚನಗಳಲ್ಲಿ ವಿವರಿಸಲಾದ ಶಿಷ್ಯತ್ವದ ಷರತ್ತುಗಳಿಗೆ ಬದ್ಧರಾಗಿರಬೇಕೆಂದು ಹೇಳಿದ್ದನ್ನು ನಾವು ಗಮನಿಸಿದೆವು. ಈ ಕಾರಣಕ್ಕಾಗಿ ನಾವು ಹೆಚ್ಚಿನ ಇತರ ಸಭೆಗಳೊಂದಿಗೆ ಸಹಮತವನ್ನು ಹೊಂದಿರಲಿಲ್ಲ - ಅವರು ಸುವಾರ್ತಾ ಪ್ರಚಾರಕ್ಕೆ ಮಾತ್ರ ಒತ್ತು ನೀಡುತ್ತಿದ್ದರು, ಆದರೆ ಶಿಷ್ಯತ್ವವನ್ನು ಕಡೆಗಣಿಸುತ್ತಿದ್ದರು.

4. ಸಭಾಪಾಲಕರು :
"ಸಭಾಪಾಲಕ" ಎಂಬುದು ದೇವರ ಒಂದು ವರವಾಗಿದೆಯೇ ಹೊರತು, ಸಭೆಯಲ್ಲಿ ನೇಮಕವಾದ ಒಂದು ಹುದ್ದೆ ಅಥವಾ ಶಿರೋನಾಮೆಯಲ್ಲ, ಎಂಬುದನ್ನು ನಾವು ಕಂಡುಕೊಂಡೆವು (ಎಫೆ. 4:11). ಸಭೆಗಳನ್ನು ಮುನ್ನಡೆಸುವವರು "ಹಿರಿಯರು," ಮತ್ತು ಸಭಾಪಾಲಕರಲ್ಲ ಎಂದು ಹೊಸ ಒಡಂಬಡಿಕೆಯು ಸ್ಪಷ್ಟವಾಗಿ ತೋರಿಸಿತು (ತೀತ. 1:5). ಅದಲ್ಲದೆ, ಪ್ರತಿಯೊಂದು ಸಭೆಯಲ್ಲೂ ಕನಿಷ್ಠ ಇಬ್ಬರು ಸಭಾಹಿರಿಯರು ಇರಬೇಕಾಗಿತ್ತು - ಆಗ ಒಬ್ಬ ವ್ಯಕ್ತಿಯ ಕೈಯಲ್ಲಿ ಸಂಪೂರ್ಣ ಅಧಿಕಾರದ ಅಪಾಯ ಇರುವುದಿಲ್ಲ ಮತ್ತು ನಾಯಕತ್ವದಲ್ಲಿ ಸಮತೋಲನ ಉಂಟಾಗುತ್ತದೆ. ಈ ನಿರ್ಧಾರವು ನಮ್ಮನ್ನು ಬಹುತೇಕ ಎಲ್ಲಾ ಸಭೆಗಳಿಂದ ಪ್ರತ್ಯೇಕಿಸಿತು.

5. ಹಣ :
ಹಣವು ಎಷ್ಟು ಅಪಾರವಾದ ಪ್ರಭಾವವನ್ನು ಹೊಂದಿದೆಯೆಂದರೆ, ನಮ್ಮ ಒಡೆಯರಾದ ದೇವರ ಸ್ಥಾನವನ್ನು ಅದು ವಶಪಡಿಸಿಕೊಳ್ಳುತ್ತದೆ, ಎಂಬುದಾಗಿ ಯೇಸುವು ಹಣದ ಬಗ್ಗೆ ಪ್ರಸ್ತಾಪಿಸಿದನು (ಲೂಕ. 16:13)! ಹಣಕಾಸಿನ ಕ್ಷೇತ್ರದಲ್ಲಿ ನಮ್ಮ ಸ್ಪಷ್ಟವಾದ ಸಾಕ್ಷಿ ಅವಶ್ಯವಾಗಿದೆಯೆಂದು ನಮಗೆ ಅರಿವಾಯಿತು, ಏಕೆಂದರೆ ಭಾರತದಲ್ಲಿ ಕ್ರೈಸ್ತ ಸೇವೆಯ ಕ್ಷೇತ್ರಕ್ಕೆ ಸಂಬಂಧಿಸಿದ ಅಧಿಕಾಂಶ ಭಾಗವು ಭಕ್ತಿಹೀನ ಹಣಕಾಸಿನ ದುರುಪಯೋಗದಿಂದಾಗಿ ಅಪಖ್ಯಾತಿಯನ್ನು ಗಳಿಸಿತ್ತು. ಬೋಧಕರು ಮತ್ತು ಸಭಾಪಾಲಕರು ತಮ್ಮ ಕೆಲಸದ ವರದಿಗಳು ಮತ್ತು ಪ್ರಾರ್ಥನಾ ಪತ್ರಗಳನ್ನು ಕಳುಹಿಸಿ ಹಣವನ್ನು ಬೇಡುತ್ತಿದ್ದರು. ಯೇಸು ಮತ್ತು ಅವರ ಅಪೊಸ್ತಲರು ತಮ್ಮ ಕೆಲಸದ ವರದಿಗಳನ್ನು ಯಾರಿಗೂ ಕಳುಹಿಸಲಿಲ್ಲ (ತಮ್ಮ ಜೊತೆ ಸೇವಕರನ್ನು ಹೊರತುಪಡಿಸಿ); ಮತ್ತು ಅವರು ತಮಗಾಗಿ ಅಥವಾ ತಮ್ಮ ಸೇವೆಗಾಗಿ ಯಾರಿಂದಲೂ ಹಣಕಾಸಿನ ಬೆಂಬಲವನ್ನು ಕೇಳಲಿಲ್ಲ. ಬದಲಾಗಿ, ತಮ್ಮ ಸೇವಾಕಾರ್ಯಕ್ಕೆ ಅವಶ್ಯವಾಗಿದ್ದ ಹಣವನ್ನು ನೀಡುವುದಕ್ಕೆ ಮನುಷ್ಯರನ್ನು ಪ್ರೇರೇಪಿಸುವಂತೆ ಅವರು ತಮ್ಮ ಪರಲೋಕದ ತಂದೆಯ ಮೇಲೆ ನಂಬಿಕೆ ಇರಿಸಿದರು. ಅದೇ ರೀತಿ ನಾವೂ ಕೂಡ ನಮ್ಮ ತಂದೆಯನ್ನು ನಂಬಬಹುದು. ಆದ್ದರಿಂದ ನಾವು ನಮ್ಮ ಕೆಲಸದ ವರದಿಗಳನ್ನು ಯಾರಿಗೂ (ನಮ್ಮ ಸ್ವಂತ ಸಭಾ ಕುಟುಂಬವನ್ನು ಹೊರತುಪಡಿಸಿ) ನೀಡಬಾರದು ಮತ್ತು ಯಾರಿಂದಲೂ ಹಣವನ್ನು ಕೇಳಬಾರದು ಎಂದು ನಿರ್ಧರಿಸಿದೆವು. ನಮ್ಮ ಯಾವುದೇ ಸಭಾಕೂಟಗಳಲ್ಲೂ ಸಹ ನಾವು ಎಂದಿಗೂ ಕಾಣಿಕೆಗಳನ್ನು ತೆಗೆದುಕೊಳ್ಳಬಾರದು, ಆದರೆ ಸ್ವಯಂಪ್ರೇರಿತರಾಗಿ ಕೊಡುವ ಕಾಣಿಕೆಗಳಿಗಾಗಿ ಪೆಟ್ಟಿಗೆಯನ್ನು ಮಾತ್ರ ಇಡುವುದಾಗಿ ನಾವು ನಿರ್ಧರಿಸಿದೆವು - ಏಕೆಂದರೆ ಎಲ್ಲಾ ಕಾಣಿಕೆಗಳನ್ನು ರಹಸ್ಯವಾಗಿ ನೀಡಬೇಕೆಂದು ಕರ್ತನು ತಿಳಿಸಿದ್ದನು (ಮತ್ತಾ. 6:1-4). ಆದ್ದರಿಂದ ನಮ್ಮ ಹಣಕಾಸಿನ ಧೋರಣೆಯು ಭಾರತದಲ್ಲಿನ ಹೆಚ್ಚುಕಡಿಮೆ ಎಲ್ಲಾ ಸಭೆಗಳಿಗಿಂತ ಮೂಲಭೂತವಾಗಿ ವಿಭಿನ್ನವಾಗಿತ್ತು.

"ಇಲ್ಲಿ ಪ್ರಸ್ತಾಪಿಸಿರುವ ಏಳು ಕ್ಷೇತ್ರಗಳಲ್ಲಿ ರಾಜಿ ಮಾಡಿಕೊಳ್ಳದಂತೆ ದೇವರು ನಮ್ಮನ್ನು ಕಾಪಾಡಿರುವುದಕ್ಕಾಗಿ ನಾವು ದೇವರಿಗೆ ಸ್ತೋತ್ರ ಸಲ್ಲಿಸುತ್ತೇವೆ"

6. ಸ್ವಾವಲಂಬನೆ:
ಭಾರತದಲ್ಲಿ ಬಹಳಷ್ಟು ಕ್ರೈಸ್ತ ಕಾರ್ಯಕರ್ತರು ಕ್ರೈಸ್ತ ಸುವಾರ್ತಾಸೇವೆಯ ಕಾರ್ಯವನ್ನು ಜೀವನೋಪಾಯದ ಒಂದು ಮಾರ್ಗವೆಂದು ಪರಿಗಣಿಸುತ್ತಿದ್ದರೇ ಹೊರತು, ’ದೇವರ ಕರೆಯೆಂದು’ ಅಲ್ಲ. ಇವರಲ್ಲಿ ಅನೇಕರು ಸಂಬಳಕ್ಕಾಗಿ ಪಾಶ್ಚಾತ್ಯ ಕ್ರೈಸ್ತ ಸಂಸ್ಥೆಗಳನ್ನು ಸೇರಿಕೊಂಡಿದ್ದರು. ಅವರಿಗೆ ಕ್ರೈಸ್ತ ಸೇವೆಯು ಒಂದು ವ್ಯಾಪಾರ-ವ್ಯವಹಾರವಾಗಿತ್ತು, ಮತ್ತು ಅವರು ಅದರ ಮೂಲಕ ಕೈತುಂಬಾ ಲಾಭ ಗಳಿಸಿದರು! ಅಪೊಸ್ತಲ ಪೌಲನು ತನ್ನ ಸೇವೆಯ ಕಾಲದಲ್ಲಿ ಇಂತಹ ಬೋಧಕರಿಂದ ವಿಭಿನ್ನನಾಗಿರುವ ಉದ್ದೇಶದಿಂದ, ತನ್ನ ಸ್ವಂತದ ಖರ್ಚು-ವೆಚ್ಚಕ್ಕಾಗಿ ಯಾರ ಮೇಲೆಯೂ ಭಾರ ಹಾಕಬಾರದು ಅಂದುಕೊಂಡು, ತನ್ನ ಸ್ವಂತ ಕೈಗಳಿಂದ ದುಡಿದನು (2 ಕೊರಿ. 11:12). ಪೂರ್ಣಕಾಲ ಸೇವೆ ಮಾಡುವ ಸಭಾ ಹಿರಿಯರಿಗೆ ಆ ಸಭೆಯ ಸಹ-ವಿಶ್ವಾಸಿಗಳು ಖರ್ಚು-ವೆಚ್ಚದ ವ್ಯವಸ್ಥೆ ಮಾಡಿಕೊಡುವುದರಲ್ಲಿ ಖಂಡಿತವಾಗಿ ಯಾವ ತಪ್ಪೂ ಇಲ್ಲ. ಆದರೆ ಭಾರತದಲ್ಲಿದ್ದ ಪರಿಸ್ಥಿತಿಯನ್ನು (ಹಣಕಾಸಿನ ವಿಷಯದಲ್ಲಿ) ನಾವು ಗಮನಿಸಿ, ಸಭಾ ಹಿರಿಯರಾದ ನಾವು ನಮ್ಮ ವೆಚ್ಚವನ್ನು ನಾವೇ ನಿರ್ವಹಿಸಬೇಕೆಂದು ತೀರ್ಮಾನಿಸಿಕೊಂಡೆವು - ಇದರ ಉದ್ದೇಶ, ಪೌಲನು ತನ್ನ ಸಮಯದಲ್ಲಿ ಮಾಡಿದಂತೆ, ಇತರ ಕ್ರೈಸ್ತ ಸೇವಕರಿಂದ ವಿಭಿನ್ನವಾಗಿರುವುದು. ಈ ಕ್ಷೇತ್ರದಲ್ಲಿಯೂ, ನಮ್ಮ ಅಭಿಪ್ರಾಯವು ಸಾಮಾನ್ಯವಾಗಿ ಭಾರತದ ಇತರ ಎಲ್ಲಾ ಸಭೆಗಳಿಗಿಂತ ವಿಭಿನ್ನವಾಗಿತ್ತೆಂದು ನಾವು ಕಂಡುಕೊಂಡೆವು.

7. ಪಾಶ್ಚಾತ್ಯ ದೇಶಗಳನ್ನು ಆತುಕೊಂಡಿರುವುದು:
ಭಾರತದ ಅನೇಕ ಸಭೆಗಳು - ತಮ್ಮ ಸೇವಾಕಾರ್ಯಕ್ಕಾಗಿ ಮತ್ತು ಹಣಕಾಸಿನ ಪೂರೈಕೆಗಾಗಿ - ಪಾಶ್ಚಾತ್ಯ ಕ್ರೈಸ್ತ ಸಮುದಾಯವನ್ನು ಅತಿಯಾಗಿ ಆತುಕೊಂಡಿದ್ದರು. ಇದು ಭಾರತದಲ್ಲಿ ಕ್ರೈಸ್ತಧರ್ಮಕ್ಕೆ ಸೇರದ ಅನ್ಯಜನರ ಮುಂದೆ ನಮ್ಮ ಸಾಕ್ಷಿಗೆ ಅಡ್ಡಿಯಾಗುತ್ತದೆಂದು ನಾವು ಕಂಡುಕೊಂಡೆವು. ಭಾರತದ ಹಲವಾರು ಬೋಧಕರು ಅಮೇರಿಕಾ ದೇಶದ ಸುವಾರ್ತಾಸೇವೆಯ ವಿಧಾನಗಳ ಕುರುಡು ಅನುಕರಣೆ ಮಾಡುವುದನ್ನು ಮತ್ತು ಅಮೇರಿಕಾ ದೇಶದ ಧಾರ್ಮಿಕ ಸಿದ್ಧಾಂತಗಳನ್ನು ವಿಮರ್ಶೆಯಿಲ್ಲದೆ ಅಂಗೀಕರಿಸುವುದನ್ನು ನಾವು ನೋಡಿದೆವು. ಆದಕಾರಣ ನಾವು ಯಾವುದೇ ವಿದೇಶೀ ಸಂಘ-ಸಂಸ್ಥೆಗಳೊಂದಿಗೆ ಸಂಬಂಧವನ್ನು ಇಟ್ಟುಕೊಳ್ಳಬಾರದು ಮತ್ತು ಧನಸಹಾಯ ಅಥವಾ ಸೇವೆಯ ಮಾರ್ಗದರ್ಶನಕ್ಕಾಗಿ ಯಾವುದೇ ವಿದೇಶೀ ಮೂಲವನ್ನು ಅವಲಂಬಿಸಬಾರದು, ಎಂದು ತೀರ್ಮಾನಿಸಿದೆವು. ನಾವು ಮಾಡುವ ಸೇವೆಯು ನಿಜವಾಗಿ ಭಾರತೀಯವಾಗಿದ್ದು, ಭಾರತೀಯ ನಾಯಕತ್ವವನ್ನು ಹೊಂದಿರಬೇಕು - ಆದಾಗ್ಯೂ, ಎಲ್ಲಾ ದೇಶಗಳ ವಿಶ್ವಾಸಿಗಳಿಗೂ ತೆರೆದ ಬಾಗಿಲನ್ನು ಹೊಂದಿರಬೇಕು, ಎಂಬುದಾಗಿ ನಾವು ಬಯಸಿದೆವು. ಈ ಕ್ಷೇತ್ರದಲ್ಲೂ ನಾವು ಭಾರತದ ಬಹಳಷ್ಟು ಸಭೆಗಳಿಗಿಂತ ವಿಭಿನ್ನವಾಗಿದ್ದೆವು.

ಇವೆಲ್ಲಾ ಕಾರಣಗಳಿಂದಾಗಿ ದೇವರು ಭಾರತದಲ್ಲಿ ಒಂದು ಹೊಸ ಸಭೆಯನ್ನು ಪ್ರಾರಂಭಿಸಲು ಹೊರಟಿದ್ದರು. ನಮ್ಮ ದೇಶದಲ್ಲಿ ದೇವರಿಗೆ ಇಂತಹ ಒಂದು ಸಾಕ್ಷಿ ಬೇಕಾಗಿದೆಯೆಂದು ನಮಗೆ ಅರಿವಾಯಿತು. ಹಾಗಾಗಿ ನಾವು ದೇವರಿಗೆ ವಿಧೇಯರಾದೆವು ಮತ್ತು ಅವರ ಚಿತ್ತದಂತೆ ನಮ್ಮನ್ನು ಉಪಯೋಗಿಸಿಕೊಳ್ಳಲಿ, ಎಂದು ನಮ್ಮನ್ನು ದೇವರಿಗೆ ಒಪ್ಪಿಸಿಕೊಂಡೆವು.

ಪ್ರತಿಯೊಂದು ಕ್ರೈಸ್ತಸಭೆಯೂ ಸಹ ಪ್ರಾರಂಭದಲ್ಲಿ ಅದ್ಭುತವಾದ ಮೂಲತತ್ವಗಳನ್ನು ಹೊಂದಿರುತ್ತದೆ. ಆದರೆ ಸಮಯವು ಅವೆಲ್ಲಾ ತತ್ವಗಳನ್ನು ಪರೀಕ್ಷಿಸುತ್ತದೆ. ನಮ್ಮ ಸಭೆಯು ಯಾವ ರೀತಿ ಮುಂದುವರಿಯಿತು? ಈಗ 49 ವರ್ಷಗಳ ನಂತರ ನಾವು ಹಿಂದಿನ ವರ್ಷಗಳನ್ನು ತಿರುಗಿ ನೋಡುವಾಗ, ನಾವು ಪರಿಪೂರ್ಣರು ಆಗಿರದಿದ್ದರೂ, ಮೇಲಿನ ಈ ಏಳು ಕ್ಷೇತ್ರಗಳಲ್ಲಿ ನಾವು ಯಾವುದೇ ರೀತಿ ರಾಜಿ ಮಾಡಿಕೊಳ್ಳದಂತೆ ದೇವರು ನಮ್ಮನ್ನು ಕಾಪಾಡಿರುವುದಕ್ಕಾಗಿ ನಾವು ದೇವರಿಗೆ ಧನ್ಯವಾದವನ್ನು ಸಲ್ಲಿಸುತ್ತೇವೆ.

ಇದಕ್ಕಾಗಿ ದೇವರಿಗೆ ಸಂಪೂರ್ಣ ಮಹಿಮೆಯನ್ನು ನಾವು ಸಲ್ಲಿಸುತ್ತೇವೆ!