ಬರೆದಿರುವವರು :   ಝ್ಯಾಕ್ ಪೂನನ್
WFTW Body: 

ದಿನಾಲೂ ಶಿಲುಬೆಯನ್ನು ಹೊತ್ತುಕೊಳ್ಳಿರಿ

ಕರ್ತನು ಮೋಶೆಗೆ ಈ ರೀತಿಯಾಗಿ ಆಜ್ಞಾಪಿಸಿದನು, "ನೀವು ಈ ಬೆಟ್ಟದ ಸೀಮೆಯನ್ನು ಸುತ್ತಿದ್ದು ಸಾಕು" (ಧರ್ಮೋಪದೇಶ. 2:2,3). ನಾವು ಆತ್ಮಿಕವಾಗಿ ಯಾವಾಗಲೂ ಒಂದೇ ಮಟ್ಟದಲ್ಲಿ ಇರುವುದಾದರೆ, ಅದಕ್ಕೆ ಕಾರಣ, ನಾವು ಮಾಡಿದ್ದನ್ನೇ ಮತ್ತೆ ಮತ್ತೆ ಮಾಡುತ್ತಿದ್ದೇವೆ. ಪಾಪದ ವಿರುದ್ಧವಾಗಿ ನಾವು ಮುನ್ನಡೆ ಸಾಧಿಸುತ್ತಾ ಇರಬೇಕು - ಮತ್ತು ಹಲವು ವರ್ಷಗಳ ಹಿಂದೆ ನಮ್ಮನ್ನು ಪದೇ ಪದೇ ಸೋಲಿಸುತ್ತಿದ್ದ ಪಾಪಗಳಿಂದ ಸೋಲನ್ನು ಅನುಭವಿಸುತ್ತಾ ಇರುವುದು ಸರಿಯಲ್ಲ. ನಾವು 10 ವರ್ಷಗಳ ಹಿಂದೆ ಇದ್ದಂತೆ ಇನ್ನೂ ಸಹ ಸಿಟ್ಟುಗೊಳ್ಳುವುದು ಅಥವಾ ನಮ್ಮ ಕಣ್ಣುಗಳ ಮೂಲಕ ಸ್ತ್ರೀಯರನ್ನು ಮೋಹಿಸುವುದು ಸರಿಯಲ್ಲ. ನಾವು ಇನ್ನೂ ಇಂತಹ ಸೋಲಿನ ಸ್ಥಿತಿಯಲ್ಲಿ ಇರುವುದಾದರೆ, ನಾವು ವ್ಯರ್ಥವಾದ ಹಾದಿಯಲ್ಲಿ ಅಲೆಯುತ್ತಿದ್ದೇವೆ. "ಈಗ ಮುನ್ನಡೆ ಸಾಧಿಸಿರಿ", ಎಂದು ನಮ್ಮ ಕರ್ತರು ನಮ್ಮನ್ನು ಕರೆಯುತ್ತಿದ್ದಾರೆ.

ನೀವು ನಿನ್ನೆ ಶಿಲುಬೆಯನ್ನು ಎತ್ತಿಕೊಂಡಿದ್ದಿರಾ? ಬಹುಶಃ ಹೌದು. ಆದರೆ ಅದು ನಿನ್ನೆಯ ಕಾಟಗಳನ್ನು ಜಯಿಸುವುದಕ್ಕಾಗಿ ಮಾತ್ರ ಸಾಕಾಯಿತು (ಮತ್ತಾಯ 6:34). ಇಂದಿನ ದಿನವು ಒಂದು ಹೊಸ ದಿನವಾಗಿದೆ. ಹಾಗಾಗಿ ಇವತ್ತು ನೀವು ನಿಮ್ಮ ದೇಹವನ್ನು ಹಾಗೂ ಸ್ವ-ಚಿತ್ತವನ್ನು ಇನ್ನೊಮ್ಮೆ ಕಾಣಿಕೆಯಾಗಿ ಸಮರ್ಪಿಸಬೇಕು. ಈ ದಿನ ನೀವು ಇನ್ನೊಮ್ಮೆ ನಿಮ್ಮ ಕಾಮ-ಲಾಲಸೆಗಳು, ಸಿಟ್ಟು, ಘನತೆ, ನಿಮ್ಮ ಹಣದಾಸೆ, ಮಾನವ ಮರ್ಯಾದೆಯ ಹುಡುಕಾಟ, ನಿಮ್ಮ ಕಹಿ ಮನಸ್ಸು, ಇಂಥಾ ಎಲ್ಲವನ್ನೂ ಸಾಯಿಸಬೇಕು. ಈ ಲಾಲಸೆಗಳು ನಮ್ಮ ಶರೀರಭಾವಕ್ಕೆ ಸೇರಿದವುಗಳು, ಮತ್ತು ನಾವು ಇರುವಷ್ಟು ದಿನವೂ ಇವು ನಮ್ಮ ಜೊತೆಯಲ್ಲಿ ಇರುತ್ತವೆ. ಇದೇ ಕಾರಣಕ್ಕಾಗಿ ನಮ್ಮ ಈ ಭೂಲೋಕದ ಜೀವಿತದ ಅಂತ್ಯದ ವರೆಗೂ, ನಾವು "ದಿನನಿತ್ಯದ ಶಿಲುಬೆ"ಯನ್ನು ಹೊರುವುದು ಅವಶ್ಯವಾಗಿದೆ. ನಿಮ್ಮ ಜೀವನದಲ್ಲಿ ಈ ರೀತಿಯ ದಿನನಿತ್ಯದ ಆಹುತಿ ಇದೆಯೇ? ಅದು ಇಲ್ಲವಾದರೆ, ನಿಮ್ಮನ್ನು ಕ್ರಿಸ್ತವಿರೋಧಿಯ ಆತ್ಮವು ಖಂಡಿತವಾಗಿ ವಂಚಿಸಿದೆ.

ಎಲ್ಲಾ ಕಾರ್ಯಗಳು ದೇವರ ಆಜ್ಞೆಯ ಮೇರೆಗೆ ನಡೆಯುತ್ತವೆಂದು ನಂಬಿರಿ

ಯೋಬನು ತನಗೆ ಸೇರಿದ ಪ್ರತಿಯೊಂದು ಸಂಗತಿಯೂ - ಮಕ್ಕಳು, ಆಸ್ತಿ ಮತ್ತು ಆತನ ಆರೋಗ್ಯವೂ ಸಹ - ದೇವರಿಂದ ತಾನು ಪಡೆದ ಉಚಿತ ಕೊಡುಗೆಗಳೆಂದು ಮತ್ತು ದೇವರು ಇಷ್ಟಪಟ್ಟರೆ ಅವೆಲ್ಲವನ್ನೂ ಹಿಂತೆಗೆದುಕೊಳ್ಳುವ ಸಂಪೂರ್ಣ ಹಕ್ಕು ದೇವರಿಗೆ ಇದೆಯೆಂದು ತಿಳಿದಿದ್ದನು. ಹಾಗಾಗಿ ಆತನು ಇವೆಲ್ಲವನ್ನು ಕಳಕೊಂಡ ಕ್ಷಣದಲ್ಲಿ, ದೇವರಿಗೆ ಅಡ್ಡಬಿದ್ದು ನಮಸ್ಕರಿಸಿ ಹೀಗೆ ಆರಾಧಿಸಿದನು, "ಯೆಹೋವನೇ ಕೊಟ್ಟನು, ಯೆಹೋವನೇ ತೆಗೆದುಕೊಂಡನು, ಯೆಹೋವನ ನಾಮಕ್ಕೆ ಸ್ತೋತ್ರವಾಗಲಿ" (ಯೋಬ. 1:20-22). ಒಬ್ಬ ವ್ಯಕ್ತಿ ಎಲ್ಲವನ್ನೂ ಬಿಟ್ಟುಕೊಡದ ಹೊರತಾಗಿ - ಅಂದರೆ, ಯಾವುದನ್ನೇ ಆದರೂ ತನ್ನ ಸ್ವಂತದ್ದಾಗಿ ಹೊಂದಿರುವ ಹಕ್ಕನ್ನು ಬಿಟ್ಟುಕೊಡದಿದ್ದರೆ - ದೇವರನ್ನು ಆರಾಧಿಸಲು ಸಾಧ್ಯವಾಗುವುದಿಲ್ಲ. ಯೋಬನು ನುಡಿದ ಇನೊಂದು ಮಾತು, "ಕರ್ತನಾದರೋ ನನ್ನ ದಾರಿಯಲ್ಲಿ ನಡೆಯುವ ಎಲ್ಲಾ ಆಗು-ಹೋಗುಗಳನ್ನು ಬಲ್ಲನು" (ಯೋಬ. 23:10 - Living Bible). ಇಂದು ನಾವು ಯೋಬನ ಹೇಳಿಕೆಯನ್ನು ಮುಂದುವರಿಸಿ (ರೋಮಾ. 8:28ರ ಆಧಾರದ ಮೇಲೆ), "ನನಗೆ ಸಂಬಂಧಿಸಿದ ಪ್ರತಿಯೊಂದು ವಿವರವನ್ನು ದೇವರು ನಿಯೋಜಿಸುತ್ತಾರೆ, " ಎಂದು ಹೇಳಲು ಸಾಧ್ಯವಿದೆ.

ನಾವು ದೇವರನ್ನು ಪ್ರೀತಿಸುವುದಾದರೆ ಮತ್ತು ನಮ್ಮ ಜೀವಿತಗಳಲ್ಲಿ ಅವರ ಉದ್ದೇಶವನ್ನು ಮಾತ್ರ ಪೂರೈಸಲು ಇಚ್ಛಿಸಿದರೆ, ಆಗ ದೇವರು ನಮ್ಮ ಜೀವನದ ಹಾದಿಯಲ್ಲಿ ಅನುಮತಿಸಿ ನಡೆಸುವ ಪ್ರತಿಯೊಂದು ಸಂಗತಿಯನ್ನೂ ತನ್ನ ಪರಿಪೂರ್ಣ ಜ್ಞಾನ ಮತ್ತು ಪ್ರೀತಿಯ ಮೂಲಕ ಯೋಜಿಸುತ್ತಾರೆ - ಅದಲ್ಲದೆ ಅವರ ಬಲಾತಿಶಯವು ಎಷ್ಟು ಮಹತ್ತಾದದ್ದು ಎಂದರೆ, ಅವರು ನಮ್ಮಲ್ಲಿ ಕ್ರಿಸ್ತನ ಸಾರೂಪ್ಯವು ಉಂಟಾಗುವಂತೆ ಜೀವನದ ಎಲ್ಲಾ ಆಗು-ಹೋಗುಗಳನ್ನು ನಿಯಂತ್ರಿಸುತ್ತಾರೆ (ರೋಮಾ. 8:29). ಯೋಬನ ಕಾಲದಲ್ಲಿ ದೇವರು ಯೋಬನನ್ನು ಸೈತಾನನಿಗೆ ತೋರಿಸಿ, ಆತನು ನಿರ್ದೋಷಿಯೂ, ಯಥಾರ್ಥಚಿತ್ತನೂ ಆಗಿದ್ದಾನೆಂದು ತೋರಿಸಲು ಸಾಧ್ಯವಾಯಿತು. ಇದಕ್ಕಿಂತಲೂ ಹೆಚ್ಚಾಗಿ ದೇವರು ಸೈತಾನನಿಗೆ ನಮ್ಮನ್ನು ಎತ್ತಿ ಹಿಡಿದು ತೋರಿಸಲು ಸಾಧ್ಯವಾಗಬೇಕು - ಗುಣಗುಟ್ಟದೆಯೂ, ವಿವಾದವಿಲ್ಲದೆಯೂ ಎಲ್ಲವನ್ನು ಮಾಡುವ ಸ್ತ್ರಿ-ಪುರುಷರು, ಮತ್ತು ಯಾವಾಗಲೂ ಎಲ್ಲಾ ಕಾರ್ಯಗಳಿಗೋಸ್ಕರ ತಂದೆಯಾದ ದೇವರಿಗೆ ಸ್ತೋತ್ರ ಸಲ್ಲಿಸುವವರು, ಎಂಬುದಾಗಿ (ಎಫೆಸ. 5:20).

ಹೃದಯದಲ್ಲಿ ಪ್ರೀತಿರಸವು ತುಂಬಿರುವುದಕ್ಕಾಗಿ ತವಕಿಸಿರಿ

ನಮ್ಮಲ್ಲಿರುವ ಪ್ರೀತಿಯೇ ನಾವು ಪವಿತ್ರಾತ್ಮಭರಿತರು ಎಂಬುದನ್ನು ಬಹಳ ಸ್ಪಷ್ಟವಾಗಿ ತೋರಿಸುವಂಥದ್ದಾಗಿದೆ - ಇದನ್ನು ರೋಮಾ. 5:5ರಲ್ಲಿ ನೇರವಾಗಿ ತೋರಿಸಲಾಗಿದೆ. ಕ್ರೈಸ್ತ ಸಭೆಗಳಲ್ಲಿ ಪ್ರೀತಿಗೆ "ಅನ್ಯಭಾಷೆಗಳಲ್ಲಿ ಮಾತನಾಡುವುದಕ್ಕಿಂತ" ಹೆಚ್ಚಿನ ಮಹತ್ವ ನೀಡಿದ್ದರೆ, ಅದು ಎಷ್ಟು ಹೆಚ್ಚಿನ ವ್ಯತ್ಯಾಸವುಳ್ಳ ಪರಿಣಾಮವನ್ನು ತಂದುಕೊಡುತ್ತಿತ್ತು - ಅ.ಕೃ. 2:4 ಪವಿತ್ರಾತ್ಮನ ತುಂಬುವಿಕೆಯ ಚಿಹ್ನೆಯಲ್ಲ, ಬದಲಾಗಿ ರೋಮಾ. 5:5 ಆ ಚಿಹ್ನೆಯಾಗಿದೆ, ಎಂದು ಒತ್ತು ನೀಡಿ ಹೇಳಲ್ಪಟ್ಟಿದ್ದರೆ ಬಹಳ ಚೆನ್ನಾಗಿತ್ತು. ದೇವರ ವಾಕ್ಯವು ತೋರಿಸುವುದು ಏನೆಂದರೆ, ನಾವು ಹೊಂದಿರುವ ವರಗಳಲ್ಲಿ ಪ್ರವಾದನೆಯ ವರ, ವಾಣಿ (ಅನ್ಯಭಾಷೆ), ಬೆಟ್ಟಗಳನ್ನು ಪಕ್ಕಕ್ಕೆ ಸರಿಸುವಷ್ಟು ನಂಬಿಕೆ, ಇವೆಲ್ಲವೂ ಸೇರಿದ್ದರೂ, ನಮ್ಮಲ್ಲಿ ಪ್ರೀತಿ ಇಲ್ಲವಾದರೆ ದೇವರ ದೃಷ್ಟಿಯಲ್ಲಿ ನಾವು ಏನೂ ಅಲ್ಲ ಎಂಬುದಾಗಿ (1 ಕೊರಿಂಥ. 13:2). ಇದಕ್ಕೆ ವ್ಯತಿರಿಕ್ತವಾಗಿ, ನಮಗೆ ಅನ್ಯಭಾಷೆ ಮಾತಾಡುವುದಕ್ಕೆ ತಿಳಿಯದೇ ಇದ್ದರೂ, ನಾವು ಯಾವತ್ತೂ ಪ್ರವಾದನೆಯನ್ನು ಮಾಡಿರದಿದ್ದರೂ ಮತ್ತು ಬೆಟ್ಟಗಳನ್ನು ಅಲುಗಾಡಿಸುವ ಬಲ ನಮ್ಮಲ್ಲಿ ಇಲ್ಲದಿದ್ದರೂ, ನಮ್ಮಲ್ಲಿ ಪ್ರೀತಿ ಇದ್ದರೆ, ನಾವು ದೇವರ ಮೆಚ್ಚುಗೆಯನ್ನು ಗಳಿಸಬಹುದು. ಯೇಸುವು ತನ್ನ ದೀಕ್ಷಾಸ್ನಾನದ ಸಂದರ್ಭದಲ್ಲಿ ತನ್ನ ತಂದೆಯಿಂದ ಮೆಚ್ಚುಗೆಯ ಮಾತನ್ನು ಪಡೆದನು ("ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ" - ಮತ್ತಾಯ 3:17); ಇದು ನಡೆದದ್ದು ಆತನು ತನ್ನ ಜೀವನದಲ್ಲಿ ಪವಿತ್ರಾತ್ಮನ ದೈವಿಕ ವರಗಳ ಮೂಲಕ ಒಂದಾದರೂ ವಿಶೇಷ ಕಾರ್ಯವನ್ನು ಮಾಡುವದಕ್ಕೆ ಮೊದಲು. 30 ವರ್ಷಗಳ ಕಾಲ ಆತನು ಪವಿತ್ರಾತ್ಮನ ತುಂಬಿಸುವಿಕೆಯೊಂದಿಗೆ ಜೀವಿಸಿದನು - ಅದು ಅತನಲ್ಲಿ ತನ್ನ ತಂದೆಗಾಗಿ ಮತ್ತು ಇತರ ಜನರಿಗಾಗಿ ಪ್ರೀತಿಯನ್ನು ತುಂಬಿಸಿತು. ಅದರಿಂದಾಗಿ ಆತನು ತಂದೆಯ ಪ್ರೀತಿಗೆ ಪಾತ್ರನಾದನು.

ಪ್ರೀತಿಯು ಎಲ್ಲವುಗಳಿಗಿಂತ ಶ್ರೇಷ್ಠವಾದದ್ದು - ಏಕೆಂದರೆ ಅದು ಪರಲೋಕದ ಆತ್ಮವೇ ಆಗಿದೆ. ಯೇಸುವು ಹೀಗೆ ಹೇಳಿದರು, "ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ," (ಯೋಹಾನ 14:9). ಅದಲ್ಲದೆ ಈ ದಿನ ಅವರು ನಮಗೆ ಹೇಳಿರುವ ಮಾತು ಇದು: "ತಂದೆ ನನ್ನನ್ನು ಕಳುಹಿಸಿಕೊಟ್ಟ ಹಾಗೆಯೇ, ನಾನೂ ನಿಮ್ಮನ್ನು ಕಳುಹಿಸಿಕೊಡುತ್ತೇನೆ" (ಯೋಹಾನ 20:21). ಹಾಗಾಗಿ, ಈ ದಿನ ಕ್ರಿಸ್ತನ ದೇಹವಾದ ನಾವು ಜನರಿಗೆ ಹೀಗೆ ಹೇಳಲು ಸಾಧ್ಯವಾಗಬೇಕು, "ನೀವು ನಮ್ಮನ್ನು ನೋಡಿದರೆ, ಸಲ್ಪ ಮಟ್ಟಿಗೆ ಯೇಸುವು ಹೇಗಿರುತ್ತಾನೆಂದು ನೋಡಿದಿರಿ. ನೀವು ನನ್ನ ಮನೆಯಲ್ಲಿ ವಾಸಿಸಿದರೆ, ನೀವು ಪರಲೋಕದ ಒಂದು ಪುಟ್ಟ ಉದಾಹರಣೆಯನ್ನು ಅಲ್ಲಿ ಕಾಣುವಿರಿ. ನೀವು ನನ್ನ ಜೊತೆ ಅನ್ಯೋನ್ಯವಾಗಿ ಸಮಯ ಕಳೆದರೆ, ಸ್ವಲ್ಪ ಮಟ್ಟಿಗೆ ಯೇಸುವು ಹೇಗಿರುತ್ತಾರೆ ಮತ್ತು ಪರಲೋಕವು ಹೇಗಿರುತ್ತದೆಂದು ರುಚಿಸಿ ನೋಡುತ್ತೀರಿ." ಇಂತಹ ಸಾಕ್ಷಿ ನಮ್ಮದಾಗಿರಬೇಕು. ನಾವು ಬೋಧಿಸಬಹುದು, ಸುವಾರ್ತೆಯನ್ನು ಸಾರಬಹುದು ಮತ್ತು ಸತ್ಯವೇದವನ್ನು ಇತರರಿಗೆ ಕಲಿಸಿಕೊಡಬಹುದು, ಆದರೆ ನಮ್ಮ ದಿನನಿತ್ಯದ ಜೀವನದಲ್ಲಿ ದೇವರ ಜೀವವನ್ನೂ, ಪ್ರೀತಿಯನ್ನೂ ತೋರಿಸಿಕೊಡದಿದ್ದರೆ, ನಾವು ನೀಡುವ ಕ್ರಿಸ್ತನ ಸಾಕ್ಷಿಯು ವಿಫಲವಾಗುತ್ತದೆ. ಇಂದಿನ ಕ್ರೈಸ್ತ ಪ್ರಪಂಚದ ಒಂದು ದುರಂತ ಕಥೆ ಇದಾಗಿದೆ.

ಕೊಡುವುದನ್ನು ಕಲಿಯಿರಿ

ದೇವರ ಕೊಡುಗೆಗಳನ್ನು ಸ್ವೀಕರಿಸುವುದು ಆನಂದಕರವಾದ ಒಂದು ಭಾಗ್ಯವಾಗಿದೆ. ಆದರೆ ಇದಕ್ಕೂ ಶ್ರೇಷ್ಠವಾದ ಇನ್ನೊಂದು ಆಶೀರ್ವಾದವನ್ನು ನಮಗೆ ನೀಡಲು ದೇವರು ಇಚ್ಛಿಸುತ್ತಾರೆ. ಯೇಸುವಿನ ಈ ಮಾತನ್ನು ಲಕ್ಷ್ಯವಿಟ್ಟು ಕೇಳಿರಿ: "ತೆಗೆದುಕೊಳ್ಳುವುದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯವು" (ಅ.ಕೃ. 20:35). ನೀವು ಈ ವಾಕ್ಯದ ಪ್ರಕಾರ ನಡೆದರೆ, ಈ ವಿಶೇಷ ಭಾಗ್ಯ ನಿಮ್ಮದಾಗುತ್ತದೆ - ಅದು ಕೊಡುವುದರ ಮೂಲಕ ಉಂಟಾಗುವ ಆಶೀರ್ವಾದ. ಸತ್ಯವೇದವು ತೋರಿಸಿಕೊಡುವಂತೆ, "ನೀರು ಹಾಯಿಸುವವನಿಗೆ ನೀರು ಸಿಗುವುದು" (ಜ್ಞಾನೋಕ್ತಿ. 11:25). ನಾವು ಇತರರಿಗೆ ಉಪಕಾರ ಮಾಡಿದಾಗ, ದೇವರು ನಮ್ಮನ್ನು ಇನ್ನೂ ಹೆಚ್ಚಾಗಿ ಆಶೀರ್ವದಿಸುತ್ತಾರೆ.

ಆದಾಮನ ಕುಲಕ್ಕೆ ಸೇರಿದ ನಾವು, ನಮ್ಮ ಬಗ್ಗೆ ಮಾತ್ರ ಚಿಂತಿಸುವ ಸ್ವೇಚ್ಛೆಯ ಶರೀರಭಾವವನ್ನು ಹೊಂದಿದ್ದೇವೆ. ನಮ್ಮಲ್ಲಿ ಇರುವುದನ್ನು ಹಂಚುವುದಕ್ಕೆ ನಮ್ಮ ಸ್ವಾಭಾವಿಕ ಮನಸ್ಸು ಒಪ್ಪುವುದಿಲ್ಲ - ಅದು ದೇವರಿಗಾದರೂ ಸರಿ, ಅಥವಾ ಇನ್ನೊಬ್ಬರಿಗಾದರೂ ಸರಿ. ಪವಿತ್ರಾತ್ಮನು ನಮ್ಮನ್ನು ಈ ಸ್ವ-ಕೇಂದ್ರಿತ, ಸ್ವೇಚ್ಛೆಯ ಆದಾಮನ ಜೀವಿತದಿಂದ ಬಿಡುಗಡೆಗೊಳಿಸಿ, ಯೇಸುವಿನಂತೆ ಮಾಡಲು ಬಯಸುತ್ತಾನೆ. ಈ ಕಾರ್ಯವನ್ನು ಪೂರೈಸಲು ಆತನು ಬಳಸುವ ಒಂದು ವಿಧಾನ, ನಮ್ಮನ್ನು ಕೊಡುವಂತೆ, ಇನ್ನೂ ಹೆಚ್ಚು ಹೆಚ್ಚಾಗಿ ಕೊಡುವಂತೆ ಪ್ರೇರೇಪಿಸುವುದು. ಹಾಗಿರುವಾಗ ಈ ವಿಷಯವಾಗಿ ಆತ್ಮನ ಮಾತನ್ನು ಆಲಿಸಿರಿ - ಆಗ ನೀವು ಹಿಂದೆಂದೂ ಅನುಭವಿಸದ ಒಂದು ಸೌಭಾಗ್ಯದ ಅನುಭವ ನಿಮ್ಮದಾಗುತ್ತದೆ. ಇದು ತುಂಬಿ ತುಳುಕುವ ಜೀವನದ ಹಾದಿಯಾಗಿದೆ.

ಕುತೂಹಲದಿಂದ ದೂರವಿರಿ

ಕುತೂಹಲ ಎನ್ನುವ ಪಾಪವು ಸೈತಾನನಿಂದ ಬರುವ ಒಂದು ಕೆಡುಕು ಎನ್ನುವದನ್ನು ಹೆಚ್ಚಿನ ವಿಶ್ವಾಸಿಗಳು ಅರಿತುಕೊಂಡಿಲ್ಲ. ನಮ್ಮ ಸ್ವಾಭಾವಿಕ ಮನಸ್ಸು ಇತರ ಜನರ ವಿಷಯವಾಗಿ ಹೆಚ್ಚಿನ ಮಾಹಿತಿಯನ್ನು ಪಡೆಯಬೇಕೆಂಬ ಒಂದು ಬಲವಾದ ಹಂಬಲವನ್ನು ಹೊಂದಿರುತ್ತದೆ ಮತ್ತು ಆ ವಿಷಯಗಳು ನಮಗೆ ಅನಗತ್ಯವಾದವುಗಳು ಆಗಿರುತ್ತವೆ. ಇತರರ ಪಾಪಗಳ ಬಗ್ಗೆ ಹರಟೆ ಮಾತನ್ನು ಕೇಳುವ ಒಂದು ಕೌತುಕ ನಮ್ಮ ಮಾನವ ಸ್ವಭಾವಕ್ಕೆ ಇರುತ್ತದೆ - ಮತ್ತು ಹಲವು ಬಾರಿ ಇಂತಹ ಕುತೂಹಲಕಾರಿ ಸುದ್ದಿಯನ್ನು ಕೆಲವು ವಿಶ್ವಾಸಿಗಳು "ಪ್ರಾಥನೆ ಮಾಡಿಕೊಳ್ಳುವುದಕ್ಕಾಗಿ" ಎಂಬ ನೆಪದಿಂದ ಇತರರೊಂದಿಗೆ ಹಂಚಿಕೊಳ್ಳುತ್ತಾರೆ!! ಆದರೆ ಇಂತಹ ಮಾಹಿತಿಯು ನಮಗೆ ಯಾವುದೇ ರೀತಿಯಲ್ಲಿ ಒಳ್ಳೆಯದನ್ನು ಮಾಡುವುದಿಲ್ಲ. ಬದಲಾಗಿ ಅದು ನಮ್ಮ ಮನಸ್ಸನ್ನು ಕೆಡಿಸುತ್ತದೆ, ಇತರರ ವಿಷಯವಾಗಿ ನಾವು ತಪ್ಪು ಅಭಿಪ್ರಾಯ ಹೊಂದುವಂತೆ ಮಾಡುತ್ತದೆ, ಮತ್ತು ಕರ್ತನಿಗಾಗಿ ನಾವು ಜೀವಿಸುವ ಸಾಕ್ಷಿಯಲ್ಲಿ ಮತ್ತು ನಮ್ಮ ಸೇವೆಯಲ್ಲಿ ಅಡ್ಡಿ ಉಂಟುಮಾಡುತ್ತದೆ. ಈ ರೀತಿಯಾಗಿ ಸೈತಾನನು ಅನೇಕ ವಿಶ್ವಾಸಿಗಳನ್ನು ದಾರಿ ತಪ್ಪಿಸುತ್ತಾನೆ. ಸತ್ಯವೇದವು ಹೇಳುವಂತೆ, "ನಿಮ್ಮಲ್ಲಿ ಯಾವನಾದರೂ ಪರಕಾರ್ಯಗಳಲ್ಲಿ ತಲೆಹಾಕುವವನು ಆಗಬಾರದು" (1 ಪೇತ್ರ 4:15). ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, "ನೀವು ನಿಮ್ಮ ನಿಮ್ಮ ವ್ಯವಹಾರಗಳನ್ನು ಮಾತ್ರ ನೋಡಿಕೊಳ್ಳಿರಿ!!"

ಯಾರಾದರೂ ತಮ್ಮ ಹಳೆಯ ಪಾಪಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದನ್ನು ನೀವು ಯಾವತ್ತೂ ಸಮ್ಮತಿಸದಿರಿ. ಪ್ರತಿಯೊಬ್ಬನೂ ಅವನ ಪಾಪಗಳನ್ನು ದೇವರ ಮುಂದೆ ಒಪ್ಪಿಕೊಳ್ಳಬೇಕು, ಮತ್ತು ಯಾವ ಮನುಷ್ಯನ ಮುಂದೆಯೂ ಅಲ್ಲ. ಯಾರು ಪಾಪದಲ್ಲಿ ನಮ್ಮ ಸಹಭಾಗಿಗಳಾಗಿದ್ದಾರೋ, ನಾವು ಅವರ ಜೊತೆಯಲ್ಲಿ ಮಾತ್ರ ಅದನ್ನು ಒಪ್ಪಿಕೊಂಡು ಪಶ್ಚಾತ್ತಾಪ ಪಡಬೇಕು. ನಾವು ಮನಸ್ಸಿನಲ್ಲಿ ಗೈದ ಪಾಪಗಳು ಮತ್ತು ನಮ್ಮ ರಹಸ್ಯ ಪಾಪಗಳು ನಮ್ಮನ್ನು ಬಿಟ್ಟು ಇನ್ಯಾರಿಗೂ ಹಾನಿ ಮಾಡುವುದಿಲ್ಲ, ಮತ್ತು ಕೇವಲ ದೇವರ ಎದುರು ಅವುಗಳಿಗಾಗಿ ಪಶ್ಚಾತ್ತಾಪ ಪಡಬೇಕು. ಆದರೆ ಇನ್ನೊಬ್ಬ ವ್ಯಕ್ತಿಗೆ ಹಾನಿಮಾಡಿದ ಪಾಪಗಳನ್ನು ದೇವರ ಮುಂದೆ ಮತ್ತು ಆ ವ್ಯಕ್ತಿಯ ಮುಂದೆ ತಪ್ಪೊಪ್ಪಿಕೊಳ್ಳಬೇಕು. ಒಂದು ದೇವಸಭೆಯ ವಿರುದ್ಧವಾಗಿ ಗೈದ ಪಾಪಗಳನ್ನು ದೇವರ ಮುಂದೆ ಮತ್ತು ಆ ಸಭೆಯ ಕೂಟದ ಎದುರು ಬಹಿರಂಗವಾಗಿ ಒಪ್ಪಿಕೊಳ್ಳಬೇಕು. ನಮ್ಮ ಮನಸ್ಸುಗಳು ಪರಿಶುದ್ಧ ಮತ್ತು ಕಳಂಕರಹಿತ ಆಗಿರುವುದಕ್ಕಾಗಿ, ನಾವು ಈ ನಿಯಮಗಳನ್ನು ಶಿಸ್ತಿನಿಂದ ಕಟ್ಟುನಿಟ್ಟಾಗಿ ಪಾಲಿಸುವದು ಅವಶ್ಯ.

ಯಾವಾಗಲೂ ಸೃಷ್ಟಿಯನ್ನಲ್ಲ, ಸೃಷ್ಟಿಕರ್ತನನ್ನು ಆರಿಸಿಕೊಳ್ಳಿರಿ

ಸ್ವತಃ ದೇವರಿಗೂ ಮೇಲಾಗಿ ದೇವರ ಸೃಷ್ಟಿಯನ್ನು ಮಾನವನು ಆರಿಸಿಕೊಂಡಾಗ, ಆತನು ಒಬ್ಬ ಗುಲಾಮನಾಗುತ್ತಾನೆ. ಹೆಚ್ಚಿನ ಜನರು ಧನ-ಸಂಪತ್ತನ್ನು ಮತ್ತು ಪಾಪಭೋಗಗಳನ್ನು ದೇವರಿಗಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಅವರು ಹಣದ ಗುಲಾಮರು ಮತ್ತು ಪಾಪಭೋಗಗಳ ಗುಲಾಮರಾಗಿ, ಆ ಮೂಲಕ ತಮ್ಮನ್ನು ನಾಶಪಡಿಸಿಕೊಳ್ಳುತ್ತಾರೆ. ನಮ್ಮನ್ನು ಈ ಗುಲಾಮತನದಿಂದ ಬಿಡಿಸಲು ಯೇಸುವು ಬಂದರು. ನಿಜವಾದ ಮಾನಸಾಂತರವು ಮನುಷ್ಯನನ್ನು ಇಂತಹ ದಾಸ್ಯದಿಂದ ಮೇಲಕ್ಕೆ ಎತ್ತುತ್ತದೆ. ಹೆಚ್ಚಿನ ಮಾನವರು ಇತರರ ಅಭಿಪ್ರಾಯದ ಗುಲಾಮರೂ ಆಗಿರುತ್ತಾರೆ - ಮತ್ತು ಈ ಕಾರಣದಿಂದಾಗಿ ಅವರು ಪೂರ್ಣ ಹೃದಯದಿಂದ ದೇವರಿಗೆ ವಿಧೇಯರಾಗಲು ಸಾಧ್ಯವಾಗುವುದಿಲ್ಲ. ಒಂದು ಹದ್ದು ತಡೆಯಿಲ್ಲದೆ ವಿಶಾಲವಾದ ಆಕಾಶದಲ್ಲಿ ಹಾರಾಡುವಂತೆ ಮಾನವನೂ ಇರಬೇಕೆಂದು ದೇವರು ಆತನನ್ನು ಸೃಷ್ಟಿಸಿದರು. ಆದರೆ ಎಲ್ಲೆಡೆಯೂ ಮಾನವನು ಬಂಧಿತನಾಗಿ, ತನ್ನ ಸಿಡುಕು ಸ್ವಭಾವ ಮತ್ತು ತನ್ನ ಲೋಭ-ಲಾಲಸೆಗಳ ಹಿಡಿತಕ್ಕೆ ಸಿಕ್ಕಿಬೀಳುವುದನ್ನು ನಾವು ಕಾಣುತ್ತೇವೆ.

ಯೇಸುವು ಬಂದದ್ದು ನಮ್ಮ ಪಾಪಗಳ ಮನ್ನಣೆಗಾಗಿ ಅಷ್ಟೇ ಅಲ್ಲ, ನಮ್ಮನ್ನು ಎಲ್ಲಾ ತರಹದ ಲಾಲಸೆಗಳು ಹಾಗೂ ಶರೀರಭಾವಗಳ ಗುಲಾಮತನದಿಂದ ಮುಕ್ತಿಗೊಳಿಸಲೂ ಸಹ. ಮನೆಗಳಲ್ಲಿ ಉಂಟಾಗುವ ಘರ್ಷಣೆಗಳು ಹೆಚ್ಚಾಗಿ ಲೌಕಿಕ ವಿಚಾರಗಳ ಕುರಿತಾಗಿ ಆಗಿರುತ್ತವೆ. ಗಂಡ ಮತ್ತು ಹೆಂಡತಿ ಇಬ್ಬರೂ ದೇವರ ಸೃಷ್ಟಿಯ ವಸ್ತುಗಳನ್ನು ದೇವರಿಗಿಂತ ಮೇಲಾಗಿ ಇರಿಸುವದು ಈ ಜಗಳಗಳ ಮೂಲಕಾರಣವಾಗಿದೆ - ಮತ್ತು ಅವರು ತಮ್ಮ ಆಯ್ಕೆಯ ಫಲವನ್ನು ಅನುಭವಿಸುತ್ತಾರೆ. ಅವರು ಶರೀರದಾಸೆಗಳಿಗೆ ಅವಕಾಶ ನೀಡುತ್ತಾರೆ ಮತ್ತು ಭ್ರಷ್ಟತೆಯ ಜೀವನವನ್ನು ಪಡೆದುಕೊಳ್ಳುತ್ತಾರೆ. ಹವ್ವಳು ಮಾಡಿದ ತಪ್ಪು, ಸ್ವತಃ ದೇವರನ್ನು ಆರಿಸಿಕೊಳ್ಳದೆ ದೇವರ ಸೃಷ್ಟಿಯನ್ನು ಆಯ್ಕೆ ಮಾಡಿಕೊಂಡದ್ದು; ನೀವು ಹಾಗೆ ಮಾಡಲು ನಿರಾಕರಿಸಿದರೆ, ಆಗ ನಿಮ್ಮ ಮನೆಯಲ್ಲಿ ಸ್ವರ್ಗದ ಆನಂದವು ನೆಲೆಗೊಳ್ಳಲು ಸಾಧ್ಯವಾಗುತ್ತದೆ. ಕರ್ತನಿಗೆ ನೀವು ಹೀಗೆ ಹೇಳಿರಿ, "ಕರ್ತನೇ, ನನ್ನ ಸ್ವೇಚ್ಛೆಯನ್ನು ನನ್ನ ಜೀವನದ ಕೇಂದ್ರವಾಗಿ ಇರಿಸಲು ನಾನು ಬಯಸುವುದಿಲ್ಲ, ನನ್ನ ಜೀವನದ ಎಲ್ಲಾ ಕ್ಷೇತ್ರಗಳಿಗೆ ಕೇಂದ್ರಬಿಂದು ನೀನೊಬ್ಬನೇ ಆಗಿರಬೇಕೆಂದು ನಾನು ಬಯಸುತ್ತೇನೆ."

ನಮಗೆ ಸಮೃದ್ಧ ಜೀವನದ ಈ ಹಾದಿಯನ್ನು ತೋರಿಸಿಕೊಡಲು ಯೇಸುವು ಬಂದರು.