WFTW Body: 

ಅರಣ್ಯಕಾಂಡದ 13ನೇ ಅಧ್ಯಾಯದಲ್ಲಿ, ಇಸ್ರಾಯೇಲ್ಯರು ಕಾದೇಶ್ ಬರ್ನೇಯ ಎಂಬ ಜಾಗದಲ್ಲಿ ಕಾನಾನ್ ದೇಶದ ಗಡಿ ಪ್ರದೇಶಕ್ಕೆ - ಅಂದರೆ ದೇವರು ಇಸ್ರಾಯೇಲ್ಯರಿಗೆ ಕೊಡುವುದಾಗಿ ವಾಗ್ದಾನ ಮಾಡಿದ್ದ ಪ್ರಾಂತ್ಯದ ಸಮೀಪಕ್ಕೆ - ಬಂದುದನ್ನು ನಾವು ನೋಡುತ್ತೇವೆ. "ಆ ದೇಶವನ್ನು ಸ್ವಾಧೀನ ಪಡಿಸಿಕೊಳ್ಳಿರಿ," ಎಂಬ ದೇವರ ಅಪ್ಪಣೆಯ ಮೇರೆಗೆ ಅವರು ಐಗುಪ್ತ ದೇಶದಿಂದ ಹೊರಟು ಈಗ 2 ವರ್ಷಗಳು ಕಳೆದಿದ್ದವು (ಧರ್ಮೋಪದೇಶ. 2:14). ಆ ದೇಶವನ್ನು ಸಂಚರಿಸಿ, ಅಲ್ಲಿನ ಎಲ್ಲಾ ಸಂಗತಿಗಳನ್ನು ನೋಡಿ ತಿಳಿದುಕೊಳ್ಳುವುದಕ್ಕಾಗಿ ಇಸ್ರಾಯೇಲ್ಯರು 12 ಜನರನ್ನು ಕಳುಹಿಸಿದರು.

ಆ ಹನ್ನೆರಡು ಮಂದಿ ಕಾದೇಶ್ಗೆ ಹಿಂದಿರುಗಿದಾಗ, ಆ ದೇಶವು ಹಾಲೂ, ಜೇನೂ ಹರಿಯುವ ಅದ್ಭುತ ದೇಶವೆಂದು ಅದನ್ನು ವಿವರಿಸಿದರು. ಆದರೆ ಅವರಲ್ಲಿ ಹತ್ತು ಮಂದಿ, "ಅಲ್ಲಿ ನಮಗಿಂತ ಬಲಿಷ್ಠರಾದ ಉನ್ನತ ಪುರುಷರಿದ್ದಾರೆ ಮತ್ತು ಅವರ ಮೇಲೆ ಹೋಗುವುದಕ್ಕೆ ನಮಗೆ ಶಕ್ತಿ ಸಾಲದು," ಎಂದರು (ಅರಣ್ಯಕಾಂಡ 13: 27,28,31).

ಆದರೆ ಇದಕ್ಕೆ ಉತ್ತರವಾಗಿ ಅವರಲ್ಲಿದ್ದ ಇಬ್ಬರು - ಯೆಹೋಶುವನು ಮತ್ತು ಕಾಲೇಬನು - ಹೀಗೆ ಹೇಳಿದರು: "ನಾವು ಸಂಚರಿಸಿ ನೋಡಿದ ದೇಶವು ಅತ್ಯುತ್ತಮವಾದದ್ದು; ಕರ್ತನು ನಮ್ಮನ್ನು ಮೆಚ್ಚಿಕೊಂಡರೆ ಅದರಲ್ಲಿ ನಮ್ಮನ್ನು ಸೇರಿಸಿ ಅದನ್ನು ನಮ್ಮ ಸ್ವಾಧೀನಕ್ಕೆ ಕೊಡುವನು - ಅದು ಹಾಲೂ, ಜೇನೂ ಹರಿಯುವ ದೇಶ. ನಮ್ಮ ಕಡೆ ಕರ್ತನು ಇದ್ದಾನೆ, ನಾವು ಅವರನ್ನು ನುಂಗಿ ಪುಷ್ಟಿಯಾಗುವೆವು" (ಅರಣ್ಯಕಾಂಡ 14: 6-9). ಆದರೆ 6,00,000 ಇಸ್ರಾಯೇಲ್ಯರು ಬಹುಮತ ಹೊಂದಿದ್ದ 10 ಗೂಢಚಾರರ ಮಾತಿಗೆ ಕಿವಿಗೊಟ್ಟರು.

ಇದರಿಂದ ನಾವು ಏನು ಕಲಿಯಬಹುದು? ಮೊದಲನೆಯದಾಗಿ, ಅಧಿಕಾಂಶ ಜನರನ್ನು ಹಿಂಬಾಲಿಸುವುದು ಆಪಾಯಕರವಾದದ್ದು - ಏಕೆಂದರೆ ಅಧಿಕಾಂಶವು ಯಾವತ್ತೂ ತಪ್ಪು ದಾರಿಯನ್ನು ಅನುಸರಿಸುತ್ತದೆ. ಯೇಸುವು ಹೇಳಿರುವಂತೆ, "ನಿತ್ಯಜೀವಕ್ಕೆ ಹೋಗುವ ಬಾಗಿಲು ಇಕ್ಕಟ್ಟು, ದಾರಿ ಬಿಕ್ಕಟ್ಟು; ಅವನ್ನು ಕಂಡುಹಿಡಿಯುವವರು ಸ್ವಲ್ಪ ಜನ." ಹಾಗಿದ್ದರೂ ಹೆಚ್ಚಿನ ಜನರು ನಾಶಕ್ಕೆ ಹೋಗುವ ದಾರಿಯಲ್ಲಿ ಹೋಗುತ್ತಾರೆ. ಆದುದರಿಂದ ನೀವು ಅಧಿಕಾಂಶ ಜನರನ್ನು ಹಿಂಬಾಲಿಸಿದರೆ, ಖಂಡಿತವಾಗಿ ಅವರೊಂದಿಗೆ ನಾಶನದ ಮಾರ್ಗಕ್ಕೆ ಸೇರಿಕೊಳ್ಳುತ್ತೀರಿ. ಒಂದು ಬಹಳ ದೊಡ್ಡ ಸಭೆಯು ಒಂದು ಆತ್ಮಿಕ ಸಭೆಯಾಗಿದೆಯೆಂದು ಎಂದಿಗೂ ಯೋಚಿಸಬೇಡಿರಿ. ಯೇಸುವಿನ ಸಭೆಯಲ್ಲಿ ಕೇವಲ 11 ಸದಸ್ಯರು ಇದ್ದರು. 10 ನಾಯಕರು ಒಂದು ಅಭಿಪ್ರಾಯವನ್ನು ಹೊಂದಿದ್ದು, ಇಬ್ಬರು ಇದಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ಹೊಂದಿದ್ದರೆ, ನೀವು ಯಾರ ಕಡೆಗೆ ಸೇರಿಕೊಳ್ಳುತ್ತೀರಿ? ಇಲ್ಲಿ ದೇವರು ಆ ಇಬ್ಬರ ಪಕ್ಷದಲ್ಲಿ ಇದ್ದರು - ಯೆಹೋಶುವ ಮತ್ತು ಕಾಲೇಬ.

ಅಲ್ಲಿದ್ದ ಇನ್ನು ಹತ್ತು ಮಂದಿ ಅಪನಂಬಿಕೆ ಹಾಗೂ ಸೈತಾನನು ಕಡೆಗೆ ಹೋದರು. ಇಸ್ರಾಯೇಲ್ಯರ ಮೂರ್ಖತನ ಏನಾಗಿತ್ತೆಂದರೆ, ಅವರು ಬಹುಮತವಿದ್ದ ಈ ಮಂದಿಯ ಕಡೆಗೆ ಸೇರಿದರು - ಈ ಕಾರಣಕ್ಕಾಗಿ ಅವರು ಮುಂದಿನ 38 ವರ್ಷಗಳನ್ನು ಅರಣ್ಯದಲ್ಲಿ ಅಲೆದಾಡುತ್ತಾ ಕಳೆಯಬೇಕಾಯಿತು. ಯಾರ ಜೊತೆಯಲ್ಲಿ ದೇವರಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ವಿವೇಚನೆ ಅವರಲ್ಲಿ ಇರಲಿಲ್ಲ! ಯಾವಾಗಲೂ ಬಹುಮತ ದೇವರ ಜೊತೆಗಿರುವ ಒಬ್ಬ ವ್ಯಕ್ತಿಯೊಂದಿಗೆ ಇರುತ್ತದೆ - ಮತ್ತು ನಾನು ಯಾವಾಗಲೂ ಆ ಕಡೆಗೆ ಸೇರಿ ನಿಲ್ಲಲು ಬಯಸುತ್ತೇನೆ. ಇಡೀ ಇಸ್ರಾಯೇಲ್ ದೇಶವು ಚಿನ್ನದ ಬಸವನ ವಿಗ್ರಹವನ್ನು ಆರಾಧಿಸಿದಾಗ, ದೇವರು ಒಬ್ಬ ಏಕಾಂಗಿ ಮನುಷ್ಯನ ಜೊತೆಗೆ, ಅಂದರೆ ಮೋಶೆಯ ಜೊತೆಗೆ ಇದ್ದುದನ್ನು ನಾವು ವಿಮೋಚನಾಕಾಂಡ 32ನೇ ಅದ್ಯಾಯದಲ್ಲಿ ನೋಡುತ್ತೇವೆ. ಆದರೆ ಇದನ್ನು ಅಲ್ಲಿದ್ದ 12 ಕುಲಗಳಲ್ಲಿ ಲೇವಿಯ ಒಂದು ಕುಲವು ಮಾತ್ರ ತಿಳಕೊಂಡಿತು. ಮತ್ತು ಇಲ್ಲಿ ಲೇವಿಯ ಕುಲವೂ ಸಹ ಯೆಹೋಶುವ ಮತ್ತು ಕಾಲೇಬರ ಜೊತೆಗೆ ದೇವರು ಇರುವ ಸಂಗತಿಯನ್ನು ಗುರುತಿಸಲು ವಿಫಲವಾಯಿತು!

ಈ ದಿನ ನಾವು ಈ ಸಂಗತಿಗಳಿಂದ ಕಲಿಯ ಬಹುದಾದ ಕೆಲವು ವಿಷಯಗಳು ಇವೆ. ಸಾಮಾನ್ಯವಾಗಿ ಎಲ್ಲೆಲ್ಲೂ ಕ್ರೈಸ್ತತ್ವವು ಈ ಲೋಕದ ಸೆಳೆತಕ್ಕೆ ಒಳಗಾಗಿ, ಅದರೊಂದಿಗೆ ರಾಜಿ ಮಾಡಿಕೊಳ್ಳುತ್ತಿದೆ. ದೇವರ ವಾಕ್ಯವು ತೋರಿಸುವ ಸತ್ಯದೊಂದಿಗೆ ದೃಢವಾಗಿ ನಿಂತುಕೊಂಡು, ಯಾವುದೇ ವಿಧವಾದ ರಾಜಿ ಮಾಡಿಕೊಳ್ಳದ ಕೆಲವು ಮಂದಿಯನ್ನು ಅಲ್ಲೊಬ್ಬ, ಇಲ್ಲೊಬ್ಬರಾಗಿ ದೇವರು ಮೇಲೆತ್ತುತ್ತಾರೆ. ನಿಮ್ಮಲ್ಲಿ ಇದನ್ನು ಅರ್ಥ ಮಾಡಿಕೊಳ್ಳುವ ವಿವೇಚನೆ ಇದ್ದರೆ, ದೇವರು ಅಂತಹ ಕೆಲವು ಮಂದಿಯ ಜೊತೆ ಇರುವುದನ್ನು ನೀವು ಕಂಡುಕೊಳ್ಳುತ್ತೀರಿ ಮತ್ತು ಅವರೊಂದಿಗೆ ಸೇರಿಕೊಂಡು ಬಹುಮತದ ಗುಂಪಿನ ವಿರುದ್ಧವಾಗಿ ನಿಲ್ಲುತ್ತೀರಿ. ಅವರೊಂದಿಗೆ ನೀವೂ ಸಹ ವಾಗ್ದಾನ ಮಾಡಲಾದ ದೇಶವನ್ನು ಪ್ರವೇಶಿಸುತ್ತೀರಿ.

ದೇವರೊಂದಿಗೆ ನಿಂತಿರುವ ಮನುಷ್ಯ ಯಾರೆಂದು ನೀವು ಹೇಗೆ ಗುರುತಿಸುವಿರಿ? ಅಂತಹ ವ್ಯಕ್ತಿಯು ನಂಬಿಕೆಯ ಮಾತನ್ನು ನುಡಿಯುತ್ತಾನೆ. ಯೆಹೋಶುವನೂ ಕಾಲೇಬನೂ ನಂಬಿಕೆಯ ಭಾಷೆಯನ್ನು ಮಾತಾಡಿದರು: "ನಾವು ಜಯಿಸ ಬಲ್ಲೆವು." ನಾವು ಮಹಾ ದೈತ್ಯರಾದ ಕೋಪ, ಲೈಂಗಿಕ ಕಾಮ. ಹೊಟ್ಟೆಕಿಚ್ಚು, ಗೊಣಗುಟ್ಟುವಿಕೆ, ಇತ್ಯಾದಿಗಳನ್ನು ಸೋಲಿಸಬಹುದು. ನಾವು ಸೈತಾನನ ವಿರುದ್ಧ ಜಯಿಸಬಹುದು. ದೇವರು ಸೈತಾನನನ್ನು ನಮ್ಮ ಕಾಲುಗಳ ಕೆಳಗೆ ಹಾಕಿ ತುಳಿಸಿಬಿಡುತ್ತಾರೆ. ಒಬ್ಬ ಮನುಷ್ಯನ ಜೊತೆಯಾಗಿ ದೇವರು ನಿಂತಿದ್ದರೆ, ಆ ಮನುಷ್ಯನು ಇಂತಹ ಭಾಷೆಯನ್ನು ಆಡುತ್ತಾನೆ.