WFTW Body: 

’ಅರಣ್ಯಕಾಂಡ 13'ನೇ ಅಧ್ಯಾಯದಲ್ಲಿ, ಇಸ್ರಾಯೇಲ್ಯರು ಕಾನಾನ್‍ ದೇಶದ ಗಡಿ ಪ್ರದೇಶದ ಕಾದೇಶ್ ಬರ್ನೇಯ ಎಂಬ ಸ್ಥಳಕ್ಕೆ - ಅಂದರೆ ದೇವರು ಅವರಿಗೆ ವಾಗ್ದಾನ ಮಾಡಿದ್ದ ಪ್ರದೇಶಕ್ಕೆ - ಬಂದು ತಲುಪಿದ್ದನ್ನು ನಾವು ಕಾಣುತ್ತೇವೆ. ಈ ದೇಶವನ್ನು ಸ್ವಾಧೀನ ಪಡಿಸಿಕೊಳ್ಳಬೇಕೆಂದು ದೇವರು ಅವರಿಗೆ ಹೇಳಿದರು ಮತ್ತು ಅವರು ಐಗುಪ್ತದಿಂದ ಹೊರಟು ಈಗ ಎರಡು ವರ್ಷಗಳಾಗಿತ್ತು (ಧರ್ಮೋ. 2:14). ಇಸ್ರಾಯೇಲ್ಯರು ಆ ದೇಶದ ಬಗ್ಗೆ ಮಾಹಿತಿ ಸಂಗ್ರಹಿಸುವುದಕ್ಕಾಗಿ ಹನ್ನೆರಡು ಗೂಢಚಾರರನ್ನು ಕಳುಹಿಸಿದರು.

ಆ ಹನ್ನೆರಡು ಗೂಢಚಾರರು ಹಿಂದಿರುಗಿ ಬಂದು, ಆ ದೇಶ ನಿಜವಾಗಿ ಅದ್ಭುತವಾದ ದೇಶವಾಗಿದೆ ಎಂದು ಹೇಳಿದರು. ಆದರೆ ಅವರಲ್ಲಿ ಹತ್ತು ಮಂದಿ ಹೀಗೆ ಹೇಳಿದರು, "ಆದರೆ ಆ ದೇಶದ ಜನ ಬಹಳ ಎತ್ತರವಾದವರು ಆಗಿದ್ದಾರೆ ಮತ್ತು ನಾವು ಅವರನ್ನು ಸೋಲಿಸಲಾರೆವು" (ಅರಣ್ಯ. 13:27,28,29).

ಆದರೆ ಗೂಢಚಾರರಲ್ಲಿ ಇಬ್ಬರು - ಕಾಲೇಬನು ಮತ್ತು ಯೆಹೋಶುವನು - ಹೀಗೆಂದು ಹೇಳಿದರು: "ನಾವು ಸಂಚರಿಸಿ ನೋಡಿದ ದೇಶವು ಅತ್ಯುತ್ತಮವಾದದ್ದು. ಕರ್ತನು ನಮ್ಮನ್ನು ಮೆಚ್ಚಿಕೊಂಡರೆ, ಆತನು ನಮ್ಮನ್ನು ಅಲ್ಲಿಗೆ - ಹಾಲೂ ಜೇನೂ ಹರಿಯುವ ಆ ದೇಶಕ್ಕೆ - ಕರೆತರುವನು ಮತ್ತು ಅದನ್ನು ನಮ್ಮ ಸ್ವಾಧೀನ ಪಡಿಸುವನು. ಕರ್ತನು ನಮಗೆ ಆ ಉನ್ನತ ಪುರುಷರನ್ನು ಸೋಲಿಸಲು ಸಹಾಯ ನೀಡುವನು" (ಅರಣ್ಯ. 14:6-9). ಆದರೆ 6,00,000 ಇಸ್ರಾಯೇಲ್ಯರು ಈ ಮಾತನ್ನು ಕೇಳದೆ, ಬಹುಸಂಖ್ಯಾತ ಗುಪ್ತಚರರ ಮಾತಿಗೆ ಕಿವಿಗೊಟ್ಟರು.

ನಾವು ಈ ಘಟನೆಯಿಂದ ಏನು ಕಲಿಯಬಹುದು? ಮೊದಲನೆಯದು, ಹೆಚ್ಚು ಸಂಖ್ಯೆಯ ಜನರನ್ನು ಹಿಂಬಾಲಿಸುವುದು ಅಪಾಯಕರವಾಗಿದೆ - ಏಕೆಂದರೆ ಬಹುಸಂಖ್ಯಾತರು ನಿಶ್ಚಯವಾಗಿ ತಪ್ಪಾಗಿರುತ್ತಾರೆ. "ನಿತ್ಯಜೀವಕ್ಕೆ ಹೋಗುವ ದಾರಿ ಇಕ್ಕಟ್ಟು ಮತ್ತು ಅದನ್ನು ಕಂಡುಹಿಡಿಯುವದು ಸ್ವಲ್ಪ ಜನ," ಎಂದು ಯೇಸು ಹೇಳಿದರು. ಆದಾಗ್ಯೂ ಹೆಚ್ಚಿನ ಜನರು ವಿನಾಶದ ಅಗಲವಾದ ಮಾರ್ಗದಲ್ಲಿ ನಡೆಯುತ್ತಾರೆ. ಹಾಗಾಗಿ ನೀವು ಹೆಚ್ಚು ಜನರು ಹೋಗುವ ದಾರಿಯಲ್ಲಿ ನಡೆದರೆ, ನಿಶ್ಚಯವಾಗಿ ನೀವು ಅವರೊಂದಿಗೆ ವಿನಾಶಕ್ಕೆ ಹೋಗುತ್ತೀರಿ. ಯಾವತ್ತೂ ದೊಡ್ಡ ಕ್ರೈಸ್ತಸಭೆಯು ಒಂದು ಆತ್ಮಿಕ ಸಭೆಯೆಂದು ಯೋಚಿಸಬೇಡಿರಿ. ಯೇಸುವಿನ ಸಭೆಯಲ್ಲಿ ಕೇವಲ 11 ಮಂದಿ ಸದಸ್ಯರಿದ್ದರು. ಒಂದು ವೇಳೆ ಹತ್ತು ಮುಖಂಡರು ಒಂದು ಮಾತನ್ನು ಹೇಳುವಾಗ, ಇಬ್ಬರು ಅದಕ್ಕೆ ವಿರೋಧವಾಗಿ ಮಾತನಾಡಿದರೆ, ನೀವು ಯಾರ ಮಾತನ್ನು ಕೇಳುತ್ತೀರಿ? ಮೇಲೆ ಪ್ರಸ್ತಾಪಿಸಿದ ಸನ್ನಿವೇಶದಲ್ಲಿ ದೇವರು ಇಬ್ಬರ - ಯೆಹೋಶುವ ಮತ್ತು ಕಾಲೇಬನ ಜೊತೆಯಲ್ಲಿದ್ದರು.

ಮಿಕ್ಕ ಹತ್ತು ಗುಪ್ತಚರರ ಜೊತೆಯಲ್ಲಿ ಅಪನಂಬಿಕೆ ಇತ್ತು ಮತ್ತು ಸೈತಾನನು ಇದ್ದನು. ಆದರೆ ಇಸ್ರಾಯೇಲ್ಯರ ಮೂರ್ಖತನವೆಂದರೆ, ಅವರು ಹೆಚ್ಚು ಜನರ ಗುಂಪನ್ನು ಹಿಂಬಾಲಿಸಿದರು - ಮತ್ತು ಇದರಿಂದಾಗಿ ಅವರು ಮುಂದಿನ 38 ವರ್ಷಗಳನ್ನು ಅರಣ್ಯ ಪ್ರದೇಶದಲ್ಲಿ ಅಲೆಯುತ್ತಾ ಕಳೆಯಬೇಕಾಯಿತು. ದೇವರು ಯಾರ ಪಕ್ಷದಲ್ಲಿ ಇದ್ದಾರೆಂದು ತಿಳಿಯುವ ವಿವೇಚನೆ ಅವರಲ್ಲಿ ಇರಲಿಲ್ಲ! ಒಬ್ಬ ಮನುಷ್ಯ ದೇವರ ಜೊತೆಯಲ್ಲಿ ಇದ್ದಾಗ, ಬಹುಮತ ಯಾವಾಗಲೂ ಅವರದ್ದಾಗಿರುತ್ತದೆ - ಮತ್ತು ನಾನು ಯಾವಾಗಲೂ ಅಲ್ಲಿರಲು ಬಯಸುತ್ತೇನೆ. ನಾವು ವಿಮೋಚನಕಾಂಡ 32ನೇ ಅಧ್ಯಾಯದಲ್ಲಿ ನೋಡುವಂತೆ, ಸಕಲ ಇಸ್ರಾಯೇಲ್ಯರ ಸಮೂಹ ಚಿನ್ನದ ಬಸವನನ್ನು ಆರಾಧಿಸುತ್ತಿದ್ದ ವೇಳೆಯಲ್ಲಿ, ದೇವರು ಒಬ್ಬನೇ ಒಬ್ಬ ಮನುಷ್ಯ, ಮೋಶೆಯ ಪಕ್ಷದಲ್ಲಿದ್ದರು. ಆದರೆ ಆಗ ಇಸ್ರಾಯೇಲ್ಯರ ಹನ್ನೆರಡು ಕುಲಗಳಲ್ಲಿ, ಕೇವಲ ಲೇವಿಯ ಕುಲದವರು ಇದನ್ನು ಅರಿತುಕೊಂಡರು. ಆದರೆ ಈಗ ದೇವರು ಯೆಹೋಶುವ ಮತ್ತು ಕಾಲೇಬನ ಜೊತೆಯಲ್ಲಿ ಇರುವುದನ್ನು ಲೇವಿಯ ಕುಲದವರು ಸಹ ಅರಿಯದೇ ಹೋದರು!

ಈ ದಿನ ನಮಗೆ ಇವೆಲ್ಲಾ ಸಂಗತಿಗಳಲ್ಲಿ ಒಂದು ಪಾಠವಿದೆ. ಸಾಮಾನ್ಯವಾಗಿ ಕ್ರೈಸ್ತರಲ್ಲಿ ಅಸತ್ಯದೊಂದಿಗೆ ರಾಜಿ ಮಾಡಿಕೊಳ್ಳುವಿಕೆ ಮತ್ತು ಲೌಕಿಕತನ ತುಂಬಿವೆ. ಅಸತ್ಯದೊಂದಿಗೆ ರಾಜಿ ಮಾಡಿಕೊಳ್ಳದೆ ದೇವರ ವಾಕ್ಯದ ಸತ್ಯಾಂಶಗಳನ್ನು ಎತ್ತಿಹಿಡಿಯುವಂತ ಕೆಲವರನ್ನು ಅಲ್ಲಿ-ಇಲ್ಲಿ ದೇವರು ಎಬ್ಬಿಸುತ್ತಾರೆ. ನಿಮ್ಮಲ್ಲಿ ವಿವೇಚನೆಯಿದ್ದರೆ, ಆ ಕೆಲವರೊಂದಿಗೆ ದೇವರು ಇರುವುದನ್ನು ನೀವು ಮನಗಾಣುತ್ತೀರಿ, ಮತ್ತು ನೀವು ಅವರೊಂದಿಗೆ ಸೇರಿಕೊಂಡು ಬಹುಮತದ ವಿರುದ್ಧ ನಿಲ್ಲುತ್ತೀರಿ. ನೀವು ಅವರೊಂದಿಗೆ ವಾಗ್ದಾನ ಮಾಡಲ್ಪಟ್ಟ ದೇಶವನ್ನು ಪ್ರವೇಶಿಸುತ್ತೀರಿ.

ದೇವರು ಒಬ್ಬ ಮನುಷ್ಯನ ಜೊತೆಗೆ ನಿಂತಿರುವುದನ್ನು ನೀವು ಹೇಗೆ ಗುರುತಿಸಬಹುದು? ಆತನು ನಂಬಿಕೆಯ ಭಾಷೆಯನ್ನು ಮಾತನಾಡುತ್ತಾನೆ. ಯೆಹೋಶುವ ಮತ್ತು ಕಾಲೇಬರು ನಂಬಿಕೆಯ ಭಾಷೆಯನ್ನು ನುಡಿದರು: "ನಾವು ಗೆಲ್ಲುತ್ತೇವೆ." ನಾವು ಸಿಟ್ಟು, ಕಾಮ, ಹೊಟ್ಟೆಕಿಚ್ಚು, ಗುಣಗುಟ್ಟುವಿಕೆ, ಇಂತಹ ದೈತ್ಯರನ್ನು ಸೋಲಿಸುವೆವು. ನಾವು ಸೈತಾನನನ್ನು ಸೋಲಿಸುವೆವು. ದೇವರು ಆತನನ್ನು ನಮ್ಮ ಕಾಲುಗಳ ಕೆಳಗೆ ಹಾಕಿ ತುಳಿಸಿಬಿಡುವರು. ದೇವರು ಒಬ್ಬ ಮನುಷ್ಯನ ಜೊತೆಯಲ್ಲಿ ಇರುವಾಗ ಆತನ ಭಾಷೆ ಇದಾಗಿರುತ್ತದೆ.