WFTW Body: 

ಶೋಧನೆಗಳ ಮೂಲಕ ಆತ್ಮಿಕ ಪರಿಪಕ್ವತೆ

ಜ್ಯಾಕ್ ಪೂನನ್

ಯಾಕೋಬ 1:2ರಲ್ಲಿ ಅಪೊಸ್ತಲನಾದ ಯಾಕೋಬನು, "ನೀವು ನಾನಾ ವಿಧವಾದ ಕಷ್ಟಗಳಲ್ಲಿ ಬಿದ್ದಿರುವಾಗ ಅದನ್ನು ಕೇವಲ ಆನಂದಕರವಾದದ್ದು ಎಂದು ಎಣಿಸಿರಿ," ಎಂದು ಹೇಳುತ್ತಾನೆ. ನಿಮ್ಮಲ್ಲಿ ಅಪ್ಪಟವಾದ ನಂಬಿಕೆ ಇದ್ದಲ್ಲಿ, ನೀವು ಕಷ್ಟಗಳ ಮೂಲಕ ಹಾದು ಹೋಗುವಾಗ ಆನಂದಿಸುತ್ತೀರಿ - ಏಕೆಂದರೆ ನಿಮ್ಮ ಈ ಕಷ್ಟಕರ ಪರೀಕ್ಷೆಯು ಒಂದು 2,000 ರೂಪಾಯಿಯ ಕರೆನ್ಸಿ ನೋಟು ಖೋಟಾ ನೋಟೋ ಅಥವಾ ಉತ್ತಮವಾದದ್ದೋ ಎಂದು ಪರೀಕ್ಷಿಸುವುದಕ್ಕಾಗಿ, ಅದನ್ನು ಒಂದು ಪರೀಕ್ಷಕ ಯಂತ್ರದ ಮೂಲಕ ಶೋಧಿಸಿ ನೋಡುವ ಹಾಗೆ ಇರುತ್ತದೆ. ನೀವು ಇದರ ಬಗ್ಗೆ ಭಯ ಪಡುವುದೇಕೆ? ನಿಮ್ಮಲ್ಲಿರುವ ನಂಬಿಕೆ ಖೋಟಾ ಆಗಿದ್ದಲ್ಲಿ, ನೀವು ಅದನ್ನು ಕ್ರಿಸ್ತನ ನ್ಯಾಯಾಸನದ ಮುಂದೆ ನಿಲ್ಲುವ ಕ್ಷಣದಲ್ಲಿ ಅರಿಯುವುದಕ್ಕಿಂತ, ಈಗಲೇ ತಿಳಕೊಳ್ಳುವುದು ಒಳ್ಳೆಯದಲ್ಲವೇ? ಹಾಗಾಗಿ ದೇವರು ಈಗ ನಿಮ್ಮನ್ನು ಯಾವುದೋ ಒಂದು ಶೋಧನೆಗೆ ನಡೆಸಿದಾಗ, ನಿಮ್ಮ ನಂಬಿಕೆ ಉತ್ತಮವಾದದ್ದೋ ಅಥವಾ ಕಳಪೆಯಾದದ್ದೋ ಎಂದು ಗೊತ್ತಾಗುವಂಥದ್ದು ಒಂದು ಒಳ್ಳೆಯ ಸಂಗತಿಯಾಗಿದೆ. ಹಾಗಾಗಿ ಹರ್ಷಿಸಿರಿ! ನೀವು ಒಂದು ಮನೆಯ ನಿರ್ಮಾಣ ಮಾಡುವ ಸಂದರ್ಭದಲ್ಲಿ ಒಂದು ಭೂಕಂಪ ಉಂಟಾದರೆ, ಅಸ್ತಿವಾರ ಹಾಕುತ್ತಿರುವಾಗಲೇ ಇದು ನಡೆದರೆ, ಕಟ್ಟಡ ಪೂರ್ಣಗೊಳ್ಳುವಾಗ ನಡೆಯುವುದಕ್ಕಿಂತ ಒಳೆಯದಲ್ಲವೇ? ಅಸ್ತಿವಾರವು ದುರ್ಬಲವಾಗಿದ್ದಲ್ಲಿ, ನೀವು ಒಡನೆಯೇ ಅದನ್ನು ಸರಿಪಡಿಸಬಹುದು. ಅದೇ ರೀತಿ, ನಿಮ್ಮ ಕ್ರೈಸ್ತ ಜೀವಿತದ ಆರಂಭದಲ್ಲೇ ಕಷ್ಟ-ಶೋಧನೆಗಳನ್ನು ಎದುರಿಸುವುದು ಉತ್ತಮವಾದದ್ದು. "ನಾನು ದೇವರನ್ನು ನಂಬುತ್ತೇನೆ," ಎಂದು ನೀವು ಹೇಳಬಹುದು. ಆದರೆ, ಒಂದು ಚಿಕ್ಕ ಹಣಕಾಸಿನ ಕೊರತೆ ಬಂದಾಗ ನೀವು ಚಿಂತಿಸುತ್ತೀರಿ ಮತ್ತು ಇತರರನ್ನು ದೂರುತ್ತೀರಿ. ಒಂದು ವೇಳೆ ಅನಾರೋಗ್ಯ ತಲೆದೋರಿದರೆ, ನೀವು ದೇವರನ್ನು ಪ್ರಶ್ನಿಸುತ್ತೀರಿ. ಅಥವಾ ಜನರ ವಿರೋಧವನ್ನು ಎದುರಿಸ ಬೇಕಾದಾಗ, ನಿಮ್ಮಲ್ಲಿ ನಿರುತ್ಸಾಹ ಉಂಟಾಗುತ್ತದೆ ಮತ್ತು ನಂಬಿಕೆ ಕುಗ್ಗಿ ಹೋಗುತ್ತದೆ. ಇಂತಹ ಎಲ್ಲಾ ಶೋಧನೆಗಳು, ಅಪ್ಪಟವಾದ ನಂಬಿಕೆ ನಿಮ್ಮಲ್ಲಿ ಇಲ್ಲವೆಂಬುದನ್ನು ನಿಮಗೆ ಸಾಬೀತು ಪಡಿಸುತ್ತವೆ.

ಇದಲ್ಲದೆ, ಶೋಧನೆಗಳು ನಮ್ಮಲ್ಲಿ ಒಂದು ಶ್ರೇಷ್ಠ ಗುಣವಾದ ತಾಳ್ಮೆಯನ್ನು ಸಹ ಉಂಟುಮಾಡುತ್ತವೆ. ನಮಗೆ ನಂಬಿಕೆಯ ಜೊತೆಗೆ ಯಾವಾಗಲೂ ತಾಳ್ಮೆ (ದೀರ್ಘಶಾಂತಿ) ಅಗತ್ಯವಾಗಿ ಬೇಕಾಗುತ್ತದೆ. ದೀರ್ಘಶಾಂತಿಯು ಪೂರ್ಣತೆಯನ್ನು ತಲುಪಲು ನಾವು ತಾಳ್ಮೆಯಿಂದ ಸಹಕರಿಸಿದರೆ, ನಾವು ಪರಿಪೂರ್ಣರು ಮತ್ತು "ಏನೂ ಕಡಿಮೆ ಇಲ್ಲದವರು" ಆಗುತ್ತೇವೆ (ಯಾಕೋಬ 1:4). ಆ ವಚನವು ಸೂಚಿಸುವ ಗುರಿ ಏನೆಂದು ನೋಡಿರಿ: "ಶಿಕ್ಷಿತರೂ, ಸರ್ವ ಸುಗುಣ ಉಳ್ಳವರೂ, ಏನೂ ಕಡಿಮೆ ಇಲ್ಲದವರೂ!" ನೀವು ಈ ಮಟ್ಟಕ್ಕೆ ಏರಲು ಬಯಸುತ್ತೀರಾ? ಶೋಧನೆಯು ನಿಮ್ಮನ್ನು ಅಲ್ಲಿಗೆ ಕರೆದೊಯ್ಯುವ ದಾರಿಯಾಗಿದೆ. ಅಲ್ಲಿಗೆ ಹೋಗಲು ಇದಕ್ಕೆ ಹೊರತಾಗಿ ಬೇರೆ ದಾರಿಯಿಲ್ಲ. ನಾವು ಅಲ್ಲಿಗೆ ಇನ್ನೂ ತಲುಪಿಲ್ಲ, ಹಾಗಾಗಿ ನಾವು ಇನ್ನೂ ಹಲವಾರು ಶೋಧನೆಗಳನ್ನು ಎದುರಿಸುವುದು ಅವಶ್ಯವಾಗಿದೆ. ನಾನು ನನ್ನ ಜೀವನದಲ್ಲಿ ಏನಾದರೂ ಆತ್ಮಿಕ ಮೌಲ್ಯವನ್ನು ಹೆಚ್ಚಿಸಿಕೊಂಡಿದ್ದರೆ, ಅದಕ್ಕೆ ಕಾರಣ ಕರ್ತನು ನನ್ನನ್ನು ಶೋಧನೆಗಳ ಮೂಲಕ ನಡೆಸಿರುವುದು. ಆದರೆ "ಶಿಕ್ಷಿತನೂ, ಸರ್ವ ಸುಗುಣ ಉಳ್ಳವನೂ, ಏನೂ ಕಡಿಮೆ ಇಲ್ಲದವನೂ" ಎಂಬ ಗುರಿಯನ್ನು ಸೇರಬೇಕಾದರೆ, ನಾನು ಇನ್ನೂ ಅನೇಕ ಕಷ್ಟ-ಶೋಧನೆಗಳನ್ನು ದಾಟಿ ಹೋಗಬೇಕು. ದೇವರು ನಮ್ಮೆಲ್ಲರಿಗಾಗಿ ಇರಿಸಿರುವ ಗುರಿ ಇದಾಗಿದೆ. ಯಾವುದೋ ಶೋಧನೆ ಬಂದಾಗ ನಿಮ್ಮ ನಂಬಿಕೆಯು ಕಳಪೆಯಾದದ್ದು ಎಂದು ಕಂಡುಬಂದರೆ, ನೀವು ನಿರಾಶರಾಗಬೇಡಿರಿ. ನಿಜಸ್ಥಿತಿಯನ್ನು ನಿಮಗೆ ತೋರಿಸಿದ್ದಕ್ಕಾಗಿ ದೇವರಿಗೆ ಸ್ತೋತ್ರ ಸಲ್ಲಿಸಿರಿ, ಮತ್ತು ಅವರಿಂದ ನಿಜವಾದ ನಂಬಿಕೆಯನ್ನು ಬೇಡಿಕೊಳ್ಳಿರಿ. ದೇವರು ನಿಮಗೆ ಅದನ್ನು ಕೊಡುತ್ತಾರೆ.

ಅಪೊಸ್ತಲನಾದ ಪೇತ್ರನು 1 ಪೇತ್ರ 1:7ರಲ್ಲಿ ಹೇಳಿರುವ ಹಾಗೆ, ಎಲ್ಲಾ ಶೋಧನೆಗಳ ಉದ್ದೇಶ ನಿಮ್ಮ ನಂಬಿಕೆ ಎಷ್ಟು ಅಪ್ಪಟವಾಗಿದೆ ಎಂದು ತೋರಿಸಿಕೊಡುವದು - "ಬಂಗಾರವು ಬೆಂಕಿಯಲ್ಲಿ ಪುಟಹಾಕಲ್ಪಟ್ಟು ಶೋಧಿಸಲ್ಪಡುವಂತೆ." ಚಿನ್ನದ ಅದಿರನ್ನು ಭೂಮಿಯ ಅಳದಿಂದ ಮೇಲಕ್ಕೆತ್ತಿದಾಗ ಅದು ಶುದ್ಧವಾಗಿ ಇರುವುದಿಲ್ಲ. ಅದನ್ನು ಶುದ್ಧೀಕರಿಸುವ ಒಂದೇ ಒಂದು ವಿಧಾನ, ಅದನ್ನು ಬೆಂಕಿಯ ತೀವ್ರ ಶಾಖಕ್ಕೆ ಒಳಪಡಿಸುವದು. ಚಿನ್ನದ ಅದಿರನ್ನು ಸಾಬೂನು ಮತ್ತು ನೀರಿನಿಂದ ಉಜ್ಜಿ ತೊಳೆದರೆ ಅದು ಶುದ್ಧಗೊಳ್ಳುವುದಿಲ್ಲ. ಹಾಗೆ ಮಾಡಿದರೆ ಅದು ಅಂಟಿರುವ ಕೊಳೆಯಿಂದ ಸ್ವಚ್ಛಗೊಳ್ಳಬಹುದು. ಆದರೆ ಬಂಗಾರದಲ್ಲಿ ಕಲೆತಿರುವ ಇತರ ಧಾತುಗಳನ್ನು ಬೇರ್ಪಡಿಸುವ ವಿಧಾನ, ಅದನ್ನು ಬೆಂಕಿಯ ಕುಲುಮೆಗೆ ಹಾಕುವುದಾಗಿದೆ. ಆಗ ಅದರಲ್ಲಿ ಅಡಗಿರುವ ಎಲ್ಲಾ ಮಿಶ್ರಧಾತುಗಳು ಕರಗಿ ಹೋಗುತ್ತವೆ ಮತ್ತು ಶುದ್ಧ ಬಂಗಾರವು ಹೊರ ಹೊಮ್ಮುತ್ತದೆ. ನೀವು ಹಾದು ಹೋಗಬೇಕಾದ ಶೋಧನೆಗಳು ಬೆಂಕಿಯ ತಾಪವನ್ನು ಹೊಂದಿರಬಹುದು. ಅದು ನೋವು ಉಂಟುಮಾಡುತ್ತದೆ, ಮತ್ತು ನಿಮಗೆ ಬೆಂಕಿಯ ಮೂಲಕ ಹಾದು ಹೋಗುವಂತೆ ಭಾಸವಾಗಬಹುದು. ಇದರ ಒಂದೇ ಒಂದು ಉದ್ದೇಶ, ನಿಮ್ಮ ಜೀವನದಲ್ಲಿ ಇರುವ ಅಶುದ್ಧ ಸಂಗತಿಗಳನ್ನು ತೆಗೆದುಹಾಕುವುದು.

ದೇವರು ತನ್ನ ಎಲ್ಲಾ ಮಕ್ಕಳು ಶೋಧನೆಗಳನ್ನು ಎದುರಿಸುವುದನ್ನು ಸಮ್ಮತಿಸುತ್ತಾರೆ. ಇವುಗಳನ್ನು ಯಾವಾಗ ಕಳುಹಿಸಬೇಕು ಎನ್ನುವದು ಅವರಿಗೆ ಅವರ ದಿವ್ಯಜ್ಞಾನದ ಮೂಲಕ ನಿಖರವಾಗಿ ತಿಳಿದಿದೆ. ನಾವು ನಮ್ಮ ಕರ್ತನ ಮುಂದೆ ನಿಲ್ಲುವ ದಿನದಲ್ಲಿ, ದೇವರು ನಮ್ಮ ಜೀವಿತದಲ್ಲಿ ಕಳುಹಿಸಿದ ಯಾವ ಶೋಧನೆಯೂ ತಪ್ಪಾಗಿ ಕಳುಹಿಸಲ್ಪಡಲಿಲ್ಲವೆಂದು ಕಂಡುಕೊಳ್ಳುತ್ತೇವೆ. ಅವರು ನಮ್ಮ ಜೀವಿತದಲ್ಲಿ ಅನುಮತಿಸಿದ ಪ್ರತಿಯೊಂದು ಶೋಧನೆಯೂ ನಮ್ಮನ್ನು ಬಂಗಾರದಂತೆ ಶುದ್ಧೀಕರಿಸುವ ಸಲುವಾಗಿ ಬಂತು, ಎಂದು ಆ ದಿನ ನಮಗೆ ಮನವರಿಕೆಯಾಗುತ್ತದೆ. ನೀವು ಇದನ್ನು ನಂಬಿದರೆ, ಯಾವಾಗಲೂ ಕರ್ತನನ್ನು ಸ್ತುತಿಸುತ್ತೀರಿ. ನೀವು ನಿಮ್ಮ ಶೋಧನೆಗಳ ನಡುವೆ ವರ್ಣಿಸಲು ಹೇಳಲಾಗದಷ್ಟು ಆನಂದವನ್ನು ಅನುಭವಿಸುತ್ತೀರಿ - ಮತ್ತು ಇದರ ಅಂತ್ಯ ಫಲ ನಿಮ್ಮ ಆತ್ಮರಕ್ಷಣೆ ಆಗಿರುತ್ತದೆ. ಹಿಂದಿನ ಕಾಲದ ಪ್ರವಾದಿಗಳು ಈ ರಕ್ಷಣೆಯನ್ನು ಘೋಷಿಸಿದರು; ಆದರೆ ಅದರ ಅರ್ಥವನ್ನು ತಿಳಿಯಲು ಅವರು ಅಪೇಕ್ಷಿಸಿದರೂ, ಅದು ಅವರಿಗೆ ಕೊಡಲ್ಪಡಲಿಲ್ಲ. ದೇವದೂತರೂ ಸಹ ಈ ಸಂಗತಿಗಳನ್ನು ಲಕ್ಷ್ಯವಿಟ್ಟು ನೋಡಬೇಕೆಂದು ಅಪೇಕ್ಷಿಸುತ್ತಾರೆ (1 ಪೇತ್ರ 1:12). ಆದರೆ ಈಗ ಪರಲೋಕದಿಂದ ಕಳುಹಿಸಲ್ಪಟ್ಟ ಪವಿತ್ರಾತ್ಮನು ಈ ಸುವಾರ್ತೆಯನ್ನು ಸಾರುವ ಜನರನ್ನು ಅಭಿಷೇಕಿಸಿದ್ದಾನೆ. ಹಾಗಾಗಿ ಪೇತ್ರನು ನಮಗೆ ತಿಳಿಸುವ ಮಾತು ಏನೆಂದರೆ, ನಮಗೆ ಇಂತಹ ಒಂದು ಅದ್ಭುತವಾದ ಸುವಾರ್ತೆಯು ಕೊಡಲ್ಪಟ್ಟಿದೆ, ಆದರೆ ಸದ್ಯಕ್ಕೆ ಸ್ವಲ್ಪ ಕಾಲ ನಾವು ನಾನಾ ಕಷ್ಟಗಳನ್ನು ಅನುಭವಿಸ ಬೇಕಾಗುತ್ತದೆ. ಹಾಗಿದ್ದರೂ ನಾವು ಈ ಶೋಧನೆಗಳಿಂದ ಧೈರ್ಯಗೆಡದೆ, ಕ್ರಿಸ್ತನ ಬರುವಿಕೆಯನ್ನು ಉಲ್ಲಾಸದೊಂದಿಗೆ ನಿರೀಕ್ಷಿಸುತ್ತಾ ಮನಸ್ಸನ್ನು ಚುರುಕುಗೊಳಿಸಬೇಕು (1 ಪೇತ್ರ 1:13).