WFTW Body: 

ಕೊನೆಯ ದಿನಗಳಲ್ಲಿ ಎದುರಾಗುವಂತ ಒಂದು ದೊಡ್ಡ ಅಪಾಯವೆಂದರೆ, ಜನರು "ಭಕ್ತಿಯ ವೇಷವಿದ್ದು ಅದರ ಬಲವನ್ನು ಅಲ್ಲಗೆಳೆಯುವವರೂ ಆಗಿರುವರು" (2 ತಿಮೊ. 3:5). ನಮ್ಮ ನೈಸರ್ಗಿಕ ಪ್ರತಿಭೆ ಮತ್ತು ಸಾಮರ್ಥ್ಯಗಳ ಮೂಲಕ ನಾವು ಹೊಂದಿರುವ ಶಕ್ತಿಯಿಂದ (ಪ್ರಾಣದ ಶಕ್ತಿ) ತೃಪ್ತರಾಗುವುದು ತುಂಬಾ ಸುಲಭ. ಪ್ರಾಣದ ಶಕ್ತಿಯು ಬೌದ್ಧಿಕ ಶಕ್ತಿ, ಭಾವನಾತ್ಮಕ ಶಕ್ತಿ ಮತ್ತು ಇಚ್ಛಾಶಕ್ತಿ ಇವುಗಳ ಮೂಲಕವಾಗಿ ವ್ಯಕ್ತವಾಗುತ್ತದೆ. ಆದರೆ ಇವುಗಳಲ್ಲಿ ಯಾವುದೂ ಕ್ರಿಸ್ತನು ಮತ್ತು ಪವಿತ್ರಾತ್ಮನು ನಮಗೆ ನೀಡುವುದಕ್ಕಾಗಿ ತಂದಂತ ದೈವಿಕ ಶಕ್ತಿಯಲ್ಲ.

ಬೌದ್ಧಿಕ ಶಕ್ತಿಯನ್ನು ಶ್ರೇಷ್ಠ ವಿಜ್ಞಾನಿಗಳಲ್ಲಿ, ವಿದ್ವಾಂಸರಲ್ಲಿ ಮತ್ತು ಚತುರ ಬೋಧಕರಲ್ಲಿ ಕಾಣಬಹುದು. ಭಾವನಾತ್ಮಕ ಶಕ್ತಿಯು ’ರಾಕ್ ಸಂಗೀತಗಾರ’ರಲ್ಲಿ ಕಂಡುಬರುತ್ತದೆ. ಹಾಗೆಯೇ ಅದು ಅನೇಕ ಬೋಧಕರಲ್ಲಿಯೂ ಕಂಡುಬರುತ್ತದೆ. ಇಚ್ಛಾಶಕ್ತಿಯು ಯೋಗವಿದ್ಯಾತಜ್ಞರು ಮತ್ತು ಇತರ ತಪಸ್ವಿಗಳಲ್ಲಿ ಕಂಡುಬರುತ್ತದೆ. ಅದಲ್ಲದೆ, ತಮ್ಮ ವ್ಯಕ್ತಿತ್ವದ ಮೂಲಕ ಇತರರ ಮೇಲೆ ಬಿಗಿಯಾದ ಹಿಡಿತ ಇರಿಸಿಕೊಳ್ಳಲು ಪ್ರಯತ್ನಿಸುವ ಬೋಧಕರಲ್ಲಿಯೂ ಇದು ಕಂಡುಬರುತ್ತದೆ. ನಾವು ಈ ಮೂರು ಶಕ್ತಿಗಳಲ್ಲಿ ಯಾವುದನ್ನೂ ಆತ್ಮಿಕ ಬಲವೆಂದು ತಪ್ಪಾಗಿ ಭಾವಿಸಬಾರದು.

ಆತ್ಮಿಕ ಬಲವು ಪ್ರಾಥಮಿಕವಾಗಿ, ನಾವು ಎಲ್ಲಾ ವಿಷಯಗಳಲ್ಲೂ ದೇವರಿಗೆ ವಿಧೇಯರಾಗುವಂತೆ ಮಾಡುತ್ತದೆ. ಆಕಾಶಮಂಡಲದಲ್ಲಿ ಗ್ರಹಗಳು ಮತ್ತು ನಕ್ಷತ್ರಗಳು ಅನಾದಿ ಕಾಲದಿಂದ ತಮ್ಮ ಕಕ್ಷೆಗಳಲ್ಲಿ ತಮ್ಮ ನಿಯಮಿತ ಕಾಲಚಕ್ರಕ್ಕೆ ತಕ್ಕಂತೆ ಚಾಚೂ ತಪ್ಪದೆ ಚಲಿಸುತ್ತಿರುವುದನ್ನು ಪರಿಗಣಿಸಿರಿ. ಇವು ದೇವರ ಶಕ್ತಿಯನ್ನು ಪ್ರದರ್ಶಿಸುತ್ತವೆ. ಅವುಗಳ ಪರಿಪೂರ್ಣ ಚಲನೆಗೆ ಕಾರಣವೇನೆಂದರೆ, ಅವುಗಳು ದೇವರ ನಿಯಮಗಳನ್ನು ಮೌನವಾಗಿ ಮತ್ತು ಸಹಜವಾಗಿ ಪಾಲಿಸುತ್ತಾ ಬಂದಿವೆ. ದೇವರಿಗೆ ಸಂಪೂರ್ಣ ವಿಧೇಯತೆಯು ಅತ್ಯುತ್ತಮವಾದದ್ದು, ಎಂಬುದಕ್ಕೆ ಆಕಾಶಮಂಡಲದ ಈ ವಸ್ತುಗಳು ಮೂಕಸಾಕ್ಷಿಗಳಾಗಿವೆ.

ಯೇಸುವು ಸೈತಾನನನ್ನು ಜಯಿಸಿದ್ದು ಒರಟು ದೈಹಿಕ ಶಕ್ತಿಯಿಂದ ಅಲ್ಲ, ಆದರೆ ಆತ್ಮಿಕ ಬಲದಿಂದ. ಸೈತಾನನು ಯೇಸುವನ್ನು ಶೋಧಿಸಿದಾಗ, ಕಲ್ಲುಗಳನ್ನು ರೊಟ್ಟಿಯನ್ನಾಗಿ ಬದಲಾಯಿಸುವ ಸಾಮರ್ಥ್ಯ ತನ್ನಲ್ಲಿದ್ದರೂ, ಹಾಗೆ ಮಾಡಲು ಯೇಸುವು ನಿರಾಕರಿಸಿದರು; ಅವರ ದೇಹವು ನಲ್ವತ್ತು ದಿನಗಳ ಉಪವಾಸದ ನಂತರ ಆಹಾರಕ್ಕಾಗಿ ಹಾತೊರೆಯುತ್ತಿದ್ದ ಸಮಯದಲ್ಲಿ ಇದು ನಡೆಯಿತು. ಇದಕ್ಕೆ ಬಹಳ ವ್ಯತಿರಿಕ್ತವಾದ ಸಂಗತಿಯು, ಏದೆನ್ನಿನ ಉದ್ಯಾನವನದಲ್ಲಿ, ಹವ್ವಳಿಗೆ ಹಸಿವೆ ಆಗಿರದಿದ್ದರೂ ಆಕೆ ತನ್ನ ದೈಹಿಕ ಹಂಬಲವನ್ನು ತಕ್ಷಣವೇ ತೃಪ್ತಿಪಡಿಸಿದ ಸಂದರ್ಭದಲ್ಲಿ ಕಂಡುಬರುತ್ತದೆ. ಆಹಾರದ ಬಯಕೆಯಂತೆ ಲೈಂಗಿಕ ಬಯಕೆಯೂ ಸಹ ನಮ್ಮ ದೇಹದಲ್ಲಿ ನೆಲೆಸಿರುವ ಮತ್ತೊಂದು ಬಯಕೆಯಾಗಿದೆ. ಅದೂ ಸಹ ನಿರಂತರವಾಗಿ ತೃಪ್ತಿಗೊಳ್ಳಲು ಹಂಬಲಿಸುವ ಕಡುಬಯಕೆಯಾಗಿದೆ. ನಾವು ಆತ್ಮನ ಬಲವನ್ನು ಹೊಂದಿದಾಗ, ಯೇಸುವು ತನ್ನ ದೇಹದ ಕಡುಬಯಕೆಗಳನ್ನು ಪೂರೈಸುವ ಬದಲಾಗಿ "ದೇವರ ಪ್ರತಿಯೊಂದು ಮಾತಿನಿಂದ ಜೀವಿಸುವುದಾಗಿ" ಹೇಳಿದಂತೆ, ನಾವು ಸಹ ಜೀವಿಸುತ್ತೇವೆ.

ಸಂಸೋನನು ಅರಣ್ಯದ ಸಿಂಹಗಳನ್ನು ಸೀಳಿ ಛಿದ್ರ ಮಾಡುವಷ್ಟು ವಿಶೇಷವಾದ ದೈಹಿಕ ಶಕ್ತಿಯನ್ನು ಹೊಂದಿದ್ದನು. ಆದರೆ ಅವನ ಒಳಗಿದ್ದ ಲೈಂಗಿಕ ಕಾಮದ ಸಿಂಹವು ಅವನನ್ನೇ ಪದೇ ಪದೇ ಛಿದ್ರಗೊಳಿಸುತ್ತಿತ್ತು. ಲೈಂಗಿಕ ಕಾಮವು ಯಾವುದೇ ಸಿಂಹಕ್ಕಿಂತ ಪ್ರಬಲವಾಗಿದೆಯೆಂದು ಇದು ಸಾಬೀತುಪಡಿಸುತ್ತದೆ. ಆದಾಗ್ಯೂ ಯೋಸೇಫನು ಸಂಸೋನನಿಗಿಂತ ಹೆಚ್ಚು ಬಲಶಾಲಿಯಾದ ವ್ಯಕ್ತಿಯಾಗಿದ್ದನು, ಏಕೆಂದರೆ ಅವನು ಕಾಮದ ಸಿಂಹವನ್ನು ದಿನೇ ದಿನೇ, ಪದೇ ಪದೇ ಸೀಳಿ ಹಾಕುವಷ್ಟು ಬಲವನ್ನು ಹೊಂದಿದ್ದನು (ಆದಿಕಾಂಡ 39:7-13).

ದೇವರು ನಮಗೆ ಆತ್ಮಿಕ ಬಲವನ್ನು ಕೊಡುತ್ತಾರೋ ಇಲ್ಲವೋ ಎಂಬುದು ನಮ್ಮ ಉದ್ದೇಶಗಳ ಮೇಲೆ ಅವಲಂಬಿಸಿದೆ. ಜೀವನದಲ್ಲಿ ನಿಮ್ಮ ಗುರಿ ಮತ್ತು ಮಹತ್ವಾಕಾಂಕ್ಷೆ ದೇವರನ್ನು ಮೆಚ್ಚಿಸುವುದು ಮತ್ತು ಮಹಿಮೆಪಡಿಸುವುದು ಮಾತ್ರವೇ ಆಗಿದ್ದರೆ, ಅವರು ತಡಮಾಡದೆ ತನ್ನ ಶಕ್ತಿಯನ್ನು ನಿಮಗೆ ನೀಡುತ್ತಾರೆ. "ನೀವು ಬೇಡಿಕೊಂಡರೂ ಅದು ನಿಮಗೆ ದೊರಕುವುದಿಲ್ಲ, ಏಕೆಂದರೆ ನಿಮ್ಮ ಬೇಡಿಕೆ ದುರುದ್ದೇಶದಿಂದ ಕೂಡಿರುತ್ತದೆ" (ಯಾಕೋಬನು 4:3).

ಒಂದು ಉದ್ಯೋಗ ಅಥವಾ ಒಂದು ವೃತ್ತಿಯು ಕೇವಲ ನಮ್ಮ ಜೀವನೋಪಾಯಕ್ಕೆ ಒಂದು ಸಾಧನವಾಗಿರಬೇಕು. ಆದಾಗ್ಯೂ, ನಮ್ಮ ಜೀವನದ ಮಹತ್ವಾಕಾಂಕ್ಷೆ ದೇವರನ್ನು ಮೆಚ್ಚಿಸುವುದು ಮಾತ್ರವೇ ಆಗಿರಬೇಕು - ಮತ್ತು ಅದು ನಮಗಾಗಿಯೇ ಜೀವಿಸುವುದು ಅಥವಾ ಈ ಲೋಕದಲ್ಲಿ ಶ್ರೇಷ್ಠ ಹೆಸರನ್ನು ಗಳಿಸುವುದು ಆಗಿರಬಾರದು. ಸೈತಾನನು ಯೇಸುವನ್ನೂ ಸಹ ಈ ಲೋಕದ ಮಹಿಮೆಯನ್ನು ಪಡೆಯುವ ಶೋಧನೆಗೆ ಒಳಗಾಗಿಸಲು ಪ್ರಯತ್ನಿಸಿದನು. ಹಾಗಿರುವಾಗ, ಆತನು ಖಂಡಿತವಾಗಿ ನಮ್ಮ ಮುಂದೆಯೂ ಈ ಅತ್ಯಾಸೆಯನ್ನು ಇರಿಸುತ್ತಾನೆ. ಆದರೆ ನಾವು ಅದನ್ನು ನಿರಂತರವಾಗಿ ನಿರಾಕರಿಸಬೇಕು (ಯೇಸುವು ಮಾಡಿದಂತೆ), ಏಕೆಂದರೆ ನಾವು ಆ ಮಹಿಮೆಯನ್ನು ಪಡೆಯುವುದಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಸೈತಾನನಿಗೆ ತಲೆಬಾಗಬೇಕಾಗುತ್ತದೆ. ನಮ್ಮ ಜೀವನದಲ್ಲಿ ಹಣದಾಸೆಯು ನಮ್ಮನ್ನು ಸೆಳೆದು, ದೇವರು ನಮಗಾಗಿ ಇರಿಸಿರುವ ಯೋಜನೆಯನ್ನು ಪೂರೈಸದಂತೆ ಮಾಡುವ ಪರಿಸ್ಥಿತಿ ಬಾರದಂತೆ ನಾವು ವಿಶೇಷವಾಗಿ ಜಾಗರೂಕರಾಗಿರಬೇಕು. ಈಗಿನಿಂದ 2000 ವರ್ಷಗಳ ನಂತರ, ನಮ್ಮ ಆಯ್ಕೆಗಳ ಬಗ್ಗೆ ನಮಗೆ ಯಾವುದೇ ವಿಷಾದ ಉಂಟಾಗಬಾರದು.