ಬರೆದಿರುವವರು :   ಝ್ಯಾಕ್ ಪೂನನ್
WFTW Body: 

ನಮ್ಮ ದೀಕ್ಷಾಸ್ನಾನದ ಸಂದರ್ಭದಲ್ಲಿ, ನಮ್ಮನ್ನು ನೀರಿನೊಳಗೆ ಮುಳುಗಿಸುವಂತ ವ್ಯಕ್ತಿಯು ನಮ್ಮನ್ನು ಅದರಲ್ಲಿ ಮುಳುಗಿಸಿ ಸಾಯಿಸುವುದಿಲ್ಲ, ಮತ್ತು ನೀರಿನಲ್ಲಿ ಮುಳುಗಿಸಿದ ನಂತರ ಮೇಲಕ್ಕೂ ಎತ್ತುತ್ತಾನೆ, ಎಂಬ ಭರವಸೆ ನಮ್ಮಲ್ಲಿ ಇರುತ್ತದೆ. ನಮಗೆ ದೇವರಲ್ಲೂ ಸಹ ಜೀವನದ ಪ್ರತಿಯೊಂದು ಸಂದರ್ಭದಲ್ಲಿ ಇದೇ ರೀತಿಯ ನಂಬಿಕೆ (ಭರವಸೆ) ಇರಬೇಕು. ಒಂದು ಪರಿಸ್ಥಿತಿಯಲ್ಲಿ ನಮ್ಮ ಸ್ವಂತ ಜೀವವು ಸಾಯಬೇಕಾದಾಗ, ಅಥವಾ ಬೇರೆಯವರು ನಮ್ಮನ್ನು "ಶಿಲುಬೆಗೆ ಏರಿಸುವಾಗ", ನಾವು ಸ್ವತಃ ದೇವರನ್ನು ಕಾಣಬೇಕೇ ಹೊರತು, ನಮ್ಮ ಕಣ್ಣಿಗೆ ಕಾಣುವಂತ ದೇವರ ಕೈಗೊಂಬೆಯಾಗಿರುವ ಮನುಷ್ಯನನ್ನು ನೋಡಬಾರದು.

ಯೇಸುವು ಹೇಳಿದ ಮಾತು, "ನಿರ್ಮಲ ಚಿತ್ತರು ದೇವರನ್ನು (ಮಾತ್ರ) ಕಾಣುವರು" (ಮತ್ತಾ. 5:8). ಅಂದರೆ, ಕಾರ್ಯಗಳಿಗೆ ಉಪಯೋಗಿಸಲ್ಪಡುವ ಮನುಷ್ಯರನ್ನು ಅವರು ನೋಡುವುದಿಲ್ಲ. ನಾವು ನಮ್ಮನ್ನು ಶಿಲುಬೆಗೆ ಏರಿಸುವ ಜನರನ್ನು ಮಾತ್ರ ಗಮನಿಸಿದರೆ, ಅದು ನಮ್ಮ ಹೃದಯಗಳು ಶುದ್ಧವಾಗಿಲ್ಲ ಎಂದು ಸೂಚಿಸುತ್ತದೆ. ಆಗ ಅಂತಹ ಜನರ ಕುರಿತು ದೂರುಗಳು ನಮ್ಮಲ್ಲಿರುತ್ತವೆ.

ಆದರೆ ನಾವು ಶುದ್ಧ ಹೃದಯ ಉಳ್ಳವರಾಗಿದ್ದರೆ, ನಾವು ದೇವರನ್ನು ಮಾತ್ರ ಕಾಣುತ್ತೇವೆ, ಮತ್ತು ಆಗ ನಮ್ಮನ್ನು ಮುಳುಗಿಸಿ ಸಾಯಿಸುವಾತನು (ನೀರಿನ ದೀಕ್ಷಾಸ್ನಾನದಲ್ಲಿ ಆಗುವ ಹಾಗೆ) ನಮ್ಮನ್ನು ಎತ್ತುವವನೂ ಆಗಿದ್ದಾನೆಂಬ ಭರವಸೆ ನಮ್ಮಲ್ಲಿರುತ್ತದೆ. "ನಾವು ಕ್ರಿಸ್ತನೊಂದಿಗೆ ಸತ್ತಿದ್ದರೆ, ದೇವರು ಕ್ರಿಸ್ತನನ್ನು ಮೇಲೆತ್ತಿದ ಹಾಗೆ ನಾವು ಮೇಲಕ್ಕೆ ಎಬ್ಬಿಸಲ್ಪಡುತ್ತೇವೆ" (2 ತಿಮೊ. 2:11). ಆಗ (ನಮ್ಮಲ್ಲಿ ದೇವರ ಭರವಸೆ ಇರುವುದರಿಂದ) ನಾವು ನಂಬಿಕೆಯಿಂದಲೇ ಸಾಯುತ್ತೇವೆ. ಆಗ ನಾವು ಮಹಿಮೆಯುಳ್ಳ ಪುನರುತ್ಥಾನ ಜೀವನವನ್ನು ಪ್ರವೇಶಿಸಬಹುದು. ಇಲ್ಲದಿದ್ದರೆ ನಾವು ಇಷ್ಟು ದಿನ ಜೀವಿಸಿದಂತೆ ಹಳೆಯ ಆದಾಮನ ಸೋಲಿನ ಜೀವಿತವನ್ನೇ ಯಾವಾಗಲೂ ಜೀವಿಸುತ್ತೇವೆ. ನಾವು ನಮ್ಮ ಸ್ವಚಿತ್ತವನ್ನು ತ್ಯಜಿಸದಿದ್ದರೆ, ನಮ್ಮಲ್ಲಿ ದೇವರ ಮೇಲೆ ನಂಬಿಕೆ (ಭರವಸೆ) ಇಲ್ಲವೆಂದು ಅದು ಸೂಚಿಸುತ್ತದೆ.

ನಂಬಿಕೆಯುಳ್ಳ ಮನುಷ್ಯನು ಅಚಲವಾದ ಮನಸ್ಸು ಉಳ್ಳವನಾಗಿದ್ದಾನೆ, ಎಂದು ’ಯಾಕೋಬನು 1:6-8'ರಲ್ಲಿ ನಾವು ಓದುತ್ತೇವೆ. ಇಂತಹ ಮನುಷ್ಯನಿಗೆ ಜೀವನದಲ್ಲಿ ಒಂದೇ ಗುರಿ ಇರುತ್ತದೆ - ದೇವರನ್ನು ಮೆಚ್ಚಿಸುವುದು ಮತ್ತು ಅವರನ್ನು ಮಹಿಮೆ ಪಡಿಸುವುದು. ಅಂತಹ ಮನುಷ್ಯ ಮಾತ್ರ ನಂಬಿಕೆಯಿಂದ ಜೀವಿಸುತ್ತಾನೆಂದು ಹೇಳಬಹುದು. ಏಕೆಂದರೆ ಕಣ್ಣಿಗೆ ಕಾಣದಂತ ಸಂಗತಿಗಳಿಗೆ ಮಾತ್ರ ಶಾಶ್ವತ ಮೌಲ್ಯವಿದೆ ಎಂಬ ಸಂಗತಿಯನ್ನು ಅರಿತುಕೊಂಡು ಆತನು ಬದುಕುತ್ತಾನೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಆತನು ದೇವರ ವಾಕ್ಯವನ್ನು ನಂಬುವನು.

ಅನೇಕ "ವಿಶ್ವಾಸಿಗಳು" ಯೇಸುವನ್ನು ನಂಬುವುದು ಕೇವಲ ನರಕಕ್ಕೆ ಹೋಗುವುದನ್ನು ತಪ್ಪಿಸುವುದಕ್ಕಾಗಿ ಮಾತ್ರ ಆಗಿರುತ್ತದೆ. ಆದರೆ ಅವರ ಜೀವನ ಪದ್ಧತಿಯಲ್ಲಿ ನಂಬಿಕೆಗೆ ಅವಕಾಶ ಇರುವುದಿಲ್ಲ. ದೇವರ ವಾಕ್ಯವು ನಿಜವಾದದ್ದೆಂದು ಅವರಿಗೆ ಮನದಟ್ಟಾಗಿಲ್ಲ. ಅವರು ತಮ್ಮ ನಡೆ ಮತ್ತು ನುಡಿಯ ವಿಚಾರವಾಗಿ ದೇವರಿಗೆ ಸಂಪೂರ್ಣ ಲೆಕ್ಕ ಒಪ್ಪಿಸಬೇಕೆಂದು ನಂಬುವುದಿಲ್ಲ. ಅವರು ತಮ್ಮನ್ನೇ ಮೆಚ್ಚಿಸಿಕೊಳ್ಳುತ್ತಾ, ಮತ್ತು ಲೋಕದ ಭೋಗಗಳನ್ನು ಆನಂದಿಸುತ್ತಾ, ಹೆಚ್ಚು ಹೆಚ್ಚು ಸಂಪಾದನೆ ಮಾಡುತ್ತಾ ಜೀವಿಸಿದಕ್ಕಾಗಿ, ಮುಂದೆ ತಾವು ಈ ಲೋಕವನ್ನು ಬಿಟ್ಟು ಹೋದ ಮೇಲೆ, ನಿತ್ಯತ್ವದ ಉದ್ದಕ್ಕೂ ಪಶ್ಚಾತಾಪ ಪಡಬೇಕಾಗುತ್ತದೆಂದು ನಂಬುವುದಿಲ್ಲ.

ಐಶ್ವರ್ಯವಂತನು ಮರಣ ಹೊಂದಿ ಪಾತಾಳವನ್ನು ಸೇರಿದೊಡನೆ (ಅವನ ಕುರಿತಾಗಿ ಯೇಸುವು ಪ್ರಸ್ತಾಪಿಸಿದರು), ಅವನಲ್ಲಿ ಪಶ್ಚಾತ್ತಾಪ ಕಾಣಿಸಿಕೊಂಡಿತು, ಮತ್ತು ತಾನು ಭೂಲೋಕದ ಜೀವಿತದಲ್ಲಿ ಪ್ರತಿ ದಿನ ದೇವರ ಕಡೆಗೆ ತಿರುಗಿಕೊಳ್ಳದೆ ಮಾಡಿದ ತಪ್ಪನ್ನು ತನ್ನ ಅಣ್ಣತಮ್ಮಂದಿರು ಮಾಡಬಾರದೆಂದು ಅವರಿಗೆ ತಿಳಿಸಲು ಯಾರನ್ನಾದರೂ ಕಳಿಸಿಕೊಡಬೇಕು, ಎಂಬ ಇಚ್ಛೆ ಅವನಲ್ಲಿ ಉಂಟಾಯಿತು (ಲೂಕ. 16:28,30). ನಮ್ಮೆಲ್ಲರಿಗೂ ಭೂಮಿಯ ಮೇಲಿನ ನಮ್ಮ ಜೀವಿತವು ಒಂದು ಪರೀಕ್ಷಾ ಅವಧಿಯಾಗಿದೆ ಮತ್ತು ದೇವರು ನಮ್ಮನ್ನು ಯಾವುದಕ್ಕಾಗಿ ವೀಕ್ಷಿಸಿ ನೋಡುತ್ತಿದ್ದಾರೆ ಎಂದರೆ, ನಾವು ಪಶುಪ್ರಾಣಿಗಳಂತೆ ಭೂಮಿಯ ಕಸಕ್ಕಾಗಿ ಜೀವಿಸುತ್ತೇವೋ, ಅಥವಾ ದೇವರ ಮಗ/ಮಗಳಂತೆ ನಿತ್ಯತ್ವದಲ್ಲಿ ಬೆಲೆಯುಳ್ಳ ಸಂಗತಿಗಳಾದ - ಪರೋಪಕಾರ, ಪ್ರೀತಿ, ಸಂಪೂರ್ಣ ನಿರ್ಮಲ ಹೃದಯ, ದೀನತೆ, ಇತ್ಯಾದಿಗಳಿಂದ ಕೂಡಿದ ಗುಣಸಂಪನ್ನವಾದ ಜೀವನವನ್ನು ಜೀವಿಸುತ್ತೇವೋ, ಎಂಬುದನ್ನು ದೇವರು ಪರೀಕ್ಷಿಸುತ್ತಿದ್ದಾರೆ.

ನಿತ್ಯತ್ವದ ಅಮೂಲ್ಯ ಸಂಗತಿಗಳಿಗಾಗಿ ಜೀವಿಸಲು ಬೇಕಾದ ಕೃಪೆಯನ್ನು ಕರ್ತನು ನಿಮಗೆ ಒದಗಿಸಲಿ.