ದೇವರು ಸಕಲ ಸೃಷ್ಟಿಯ ವರಿಷ್ಠ ಅಧಿಕಾರಿಯಾಗಿದ್ದಾರೆ. ಇದರ ಬಗ್ಗೆ ಯಾವ ಸಂದೇಹವೂ ಇಲ್ಲ. ಆದರೆ ದೇವರು ಇತರರಿಗೂ ಸಹ ಅಧಿಕಾರವನ್ನು ನಿಯೋಜಿಸುತ್ತಾರೆ. ಸರ್ಕಾರಿ ಅಧಿಕಾರಿಗಳು, ತಂದೆ-ತಾಯಂದಿರು ಮತ್ತು ಸಭಾ ನಾಯಕರಿಗೆ ಸಮಾಜದಲ್ಲಿ, ಮನೆಗಳಲ್ಲಿ ಹಾಗೂ ಕ್ರೈಸ್ತಸಭೆಗಳಲ್ಲಿ ಅಧಿಕಾರವಿರುತ್ತದೆ.
ಕೆಲವು ಜನರು ಭಾವಿಸುವಂತೆ, ಕ್ರೈಸ್ತಸಭೆಯು ಪ್ರತಿಯೊಬ್ಬ ಸದಸ್ಯನು ದೇವರಿಗೆ ನೇರವಾಗಿ ಲೆಕ್ಕ ಒಪ್ಪಿಸಬೇಕಾಗಿರುವಂತ ಒಂದು ಪ್ರಜಾತಂತ್ರವಲ್ಲ. ಕ್ರಿಸ್ತನ ದೇಹದಲ್ಲಿ ಕರ್ತನಿಂದ ನೇಮಿಸಲ್ಪಟ್ಟ ನಾಯಕರಿದ್ದಾರೆ; ನಾವು ಅವರಿಗೆ ಅಧೀನರಾಗಬೇಕು ಮತ್ತು ವಿಧೇಯರಾಗಬೇಕು. ಇದು ದೇವರ ಚಿತ್ತವಾಗಿದೆ ಮತ್ತು ಧರ್ಮಶಾಸ್ತ್ರದಲ್ಲಿ ಸ್ಪಷ್ಟವಾಗಿ ಬೋಧಿಸಲ್ಪಟ್ಟಿದೆ.
ದೇವರ ವಾಕ್ಯವು ಹೇಗೆ ಜನರು ಮೇಲಧಿಕಾರಿಗಳಿಗೆ, ಹೆಂಡಂದಿರು ಗಂಡಂದಿರಿಗೆ, ಮಕ್ಕಳು ಪೋಷಕರಿಗೆ, ಮತ್ತು ಆಳುಗಳು ಯಜಮಾನರಿಗೆ ಅಧೀನರಾಗಬೇಕೆಂದು ಆಜ್ಞಾಪಿಸುತ್ತದೋ, ಅದೇ ರೀತಿ ಕ್ರೈಸ್ತಸಭೆಯಲ್ಲಿ ಅಧೀನತೆ ಇರಬೇಕೆಂದು ದೇವರ ವಾಕ್ಯವು ಆಜ್ಞಾಪಿಸುತ್ತದೆ.
ಸ್ಥಳೀಯ ಸಭೆಗಳಿಗೆ ನಾಯಕತ್ವವನ್ನು ಒದಗಿಸುವುದಕ್ಕಾಗಿ ದೇವರು ಸಭಾಹಿರಿಯರನ್ನು ನೇಮಿಸಿದ್ದಾರೆ. ಒಂದು ಸಭೆಯಲ್ಲಿ ಸಭಾಹಿರಿಯರಿಗೆ ಆ ಸ್ಥಾನವು ಯಥಾರ್ಥವಾಗಿ ಕೊಡಲ್ಪಟ್ಟಾಗ, ಅವರು ಕರ್ತನ ಪ್ರತಿನಿಧಿಗಳಾಗಿದ್ದಾರೆ ಮತ್ತು ಕರ್ತನ ಅಧಿಕಾರದ ಒಂದು ಅಂಶವು ಅವರಿಗೆ ಕೊಡಲ್ಪಟ್ಟಿದೆ. ಕರ್ತನು ತನ್ನ ಶಿಷ್ಯರನ್ನು ಬೇರೆ ಬೇರೆ ಸ್ಥಳಗಳಿಗೆ ಕಳುಹಿಸುವಾಗ, "ನಿಮ್ಮ ಮಾತನ್ನು ಕೇಳುವವನು ನನ್ನ ಮಾತನ್ನು ಕೇಳುವವನಾಗಿದ್ದಾನೆ; ನಿಮ್ಮನ್ನು ಅಲಕ್ಷ್ಯ ಮಾಡುವವನು ನನ್ನನ್ನು ಅಲಕ್ಷ್ಯ ಮಾಡುವವನಾಗಿದ್ದಾನೆ," ಎಂದು ಹೇಳಿದನು (ಲೂಕ. 10:16).
ದೇವರ ವಾಕ್ಯದಲ್ಲಿ ಈ ಕೆಳಗಿನ ಆಜ್ಞೆಗಳಂತೆ ಹಲವಾರು ಆಜ್ಞೆಗಳಿವೆ: "ನಿಮ್ಮ ಸಭಾನಾಯಕರ ಮಾತನ್ನು ಕೇಳಿರಿ, ಅವರಿಗೆ ಅಧೀನರಾಗಿರಿ. ಅವರು ಲೆಕ್ಕ ಒಪ್ಪಿಸಬೇಕಾದವರಾಗಿ ನಿಮ್ಮ ಆತ್ಮಗಳನ್ನು ಕಾಯುವವರಾಗಿದ್ದಾರೆ. ಅವರು ವ್ಯಸನಪಡದೆ ಸಂತೋಷದಿಂದ ಇದನ್ನು ಮಾಡುವಂತಾಗಲಿ, ಏಕೆಂದರೆ ಅವರು ವ್ಯಸನದಿಂದಿರುವುದು ನಿಮಗೆ ಪ್ರಯೋಜನಕರವಾದದ್ದಲ್ಲ" (ಇಬ್ರಿಯರಿಗೆ 13:17).
ದೇವರು ನಮ್ಮನ್ನು ಅನ್ಯೋನ್ಯತೆಯ ಪಂಗಡಗಳ (ಕ್ರೈಸ್ತಸಭೆಗಳು ಅಥವಾ ಕ್ರೈಸ್ತ ಕಾರ್ಯಕರ್ತರ ಪಂಗಡಗಳಲ್ಲಿ) ಸದಸ್ಯರಾಗಿ ಕ್ರಿಸ್ತನ ದೇಹಕ್ಕೆ ಸೇರಿಸುತ್ತಾರೆ. ನಮಗೆ ಕೊಡಲ್ಪಟ್ಟಿರುವ ಕರೆ ಏನೆಂದರೆ, ಅಲ್ಲಿ ದೇವರು ನಮ್ಮ ಮೇಲೆ ನೇಮಿಸುವಂತ ಆತ್ಮಿಕ ನಾಯಕರಿಗೆ ನಾವು ಅಧೀನರಾಗಬೇಕು, ಮತ್ತು ಒಂದೇ ಪಂಗಡವಾಗಿ ಅವರೊಂದಿಗೆ ನಡೆಯಬೇಕು. ದೇವರು ನಮ್ಮನ್ನು ಒಂದು ಕ್ರೈಸ್ತ ಸಭೆಯ ಅನ್ಯೋನ್ಯತೆಗೆ ಅಥವಾ ಕ್ರೈಸ್ತ ಕಾರ್ಯಕರ್ತರ ಒಂದು ಪಂಗಡಕ್ಕೆ ಸೇರಿಸಿದಾಗ ನಮ್ಮ ಕರ್ತವ್ಯ ಏನೆಂದರೆ, ಆ ಸಭೆ ಅಥವಾ ಪಂಗಡಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ದೇವರು ನಮ್ಮ ಮೇಲೆ ನಾಯಕರಾಗಿ ನೇಮಿಸಿದವರಿಗೆ ವಿಧೇಯರಾಗುವುದು ಮತ್ತು ಅವರನ್ನು ಹಿಂಬಾಲಿಸುವುದು. ದೇವರು ನಮ್ಮನ್ನು ಅವರೊಂದಿಗೆ ಇರಿಸಿದ್ದಾರೆಯೇ, ಎಂಬುದು ನಾವು ಖಚಿತ ಪಡಿಸಿಕೊಳ್ಳಬೇಕಾದ ಏಕೈಕ ವಿಷಯವಾಗಿದೆ. ಒಮ್ಮೆ ಈ ಸಂಗತಿಯನ್ನು ನಿಶ್ಚಯ ಪಡಿಸಿಕೊಂಡ ನಂತರ, ನಮ್ಮ ನಾಯಕರಿಗೆ ಅಧೀನರಾಗುವುದು ಹಾಗೂ ವಿಧೇಯರಾಗುವುದನ್ನು ದೇವರು ನಮ್ಮಿಂದ ನಿರೀಕ್ಷಿಸುತ್ತಾರೆ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ನಾವು ಧರ್ಮಶಾಸ್ತ್ರದ ಈ ಮೂಲತತ್ವವನ್ನು ಯಾವಾಗ ಅರ್ಥಮಾಡಿಕೊಳ್ಳುತ್ತೇವೋ, ಆಗ ಕ್ರೈಸ್ತ ಸೇವಾಕಾರ್ಯದಲ್ಲಿ ಬರುವಂತ ಅನೇಕ ಸಮಸ್ಯೆಗಳು ಪರಿಹಾರವಾಗುತ್ತವೆ.
"ಯಾವನು ತನ್ನ ಜೀವಿತದ ಒಂದಲ್ಲ ಒಂದು ಅವಧಿಯಲ್ಲಿ ಇತರರ ಕೈಕೆಳಗೆ ಅಧೀನನಾಗುವುದನ್ನು ಕಲಿತಿಲ್ಲವೋ, ಆತನು ಮಾಡುವ ದೇವರ ಸೇವೆಯು ಎಂದಿಗೂ ಪರಿಣಾಮಕಾರಿಯಾಗದು ಅಥವಾ ಆತನು ಒಬ್ಬ ಆತ್ಮಿಕ ನಾಯಕನು ಆಗಲಾರನು."
ಸ್ವತಃ ದೇವಕುಮಾರನ ಉದಾಹರಣೆಯನ್ನು ತೆಗೆದುಕೊಳ್ಳಿರಿ. ಆತನು ಬಾಲಕನಾಗಿದ್ದಾಗ ಯೋಸೇಫನಿಗೆ ಮತ್ತು ಮರಿಯಳಿಗೆ ಅಧೀನನಾಗಿ ಜೀವಿಸಿದನು, ಎಂದು ನಾವು ಓದುತ್ತೇವೆ (ಲೂಕ. 2:51). ಯೇಸುವು ಪರಿಪೂರ್ಣರಾಗಿದ್ದರು. ಯೋಸೇಫನು ಮತ್ತು ಮರಿಯಳು ಪರಿಪೂರ್ಣರಾಗಿರಲಿಲ್ಲ. ಆದಾಗ್ಯೂ, ಪರಿಪೂರ್ಣನು ಹಲವಾರು ವರ್ಷಗಳ ಕಾಲ ಅಪರಿಪೂರ್ಣ ಮನುಷ್ಯ ಮಾತ್ರರಿಗೆ ಅಧೀನನಾಗಿ ಜೀವಿಸಿದನು, ಏಕೆಂದರೆ ಅದು ಆತನಿಗಾಗಿ ತಂದೆಯಾದ ದೇವರ ಚಿತ್ತವಾಗಿತ್ತು. ಯೇಸುವಿಗೆ ತಂದೆಯ ಚಿತ್ತವು ಪ್ರತಿಯೊಂದು ವಿಷಯದಲ್ಲಿ ಅಂತಿಮ ನಿರ್ಧಾರವಾಗಿತ್ತು. ಯೋಸೇಫನಿಗೆ ಮತ್ತು ಮರಿಯಳಿಗೆ ಅಧೀನನಾಗಿ ಇರುವುದನ್ನು ತನ್ನ ತಂದೆಯು ಬಯಸಿದ್ದರೆ, ಯೇಸುವು ಅದನ್ನೇ ಮಾಡುವವರಾಗಿದ್ದರು - ಅಷ್ಟೇ ಅಲ್ಲದೆ, ತನ್ನ ತಂದೆಯು ಎಷ್ಟು ಸಮಯದವರೆಗೆ ಹಾಗೆ ಇರಲು ಹೇಳುತ್ತಿದ್ದರೂ ಅಷ್ಟರವರೆಗೂ ಅವರು ಹಾಗೆಯೇ ಮಾಡುವವನಾಗುತ್ತಿದ್ದರು.
ಆದ್ದರಿಂದ ದೇವರ ಪರಿಪೂರ್ಣ ಮಗನ ಉದಾಹರಣೆಯಲ್ಲಿ ನಮಗೆ ಕಾಣುವ ಮತ್ತೊಂದು ವಿಷಯವೆಂದರೆ, "ಈ ಅನ್ಯೋನ್ಯತೆಯಲ್ಲಿ ನಾನು ಇರುವುದು ದೇವರ ಚಿತ್ತವಾಗಿದೆಯೇ?" ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ಇದಕ್ಕೆ ಉತ್ತರ "ಹೌದು" ಎಂದಾದರೆ, ಆಗ ನಮ್ಮ ಕರ್ತವ್ಯ ದೇವರು ನೇಮಿಸಿದ ನಾಯಕತ್ವಕ್ಕೆ ಅಧೀನರಾಗುವುದಾಗಿದೆ.
ಸಕಲ ಸೃಷ್ಟಿಯಲ್ಲಿ ಮೊದಲ ಪಾಪ ಅಧಿಕಾರದ ವಿರುದ್ಧ ದಂಗೆಯಾಗಿತ್ತು; ಲೂಸಿಫೆರನು ದೇವದೂತರ ಮುಖ್ಯಸ್ಥನಾಗಿದ್ದನು, ಆತನು ತನ್ನ ಮೇಲಿನ ದೇವರ ಅಧಿಕಾರವನ್ನು ವಿರೋಧಿಸಿ ದಂಗೆಯೆದ್ದನು.
ಇಂದಿನ ಈ ಲೋಕದಲ್ಲಿ, ಎರಡು ಆತ್ಮಿಕ ಶಕ್ತಿಗಳು ಕಾರ್ಯನಿರತವಾಗಿವೆ - ಕ್ರಿಸ್ತನ ಆತ್ಮನು ಜನರನ್ನು ದೈವಿಕ ಅಧಿಕಾರಕ್ಕೆ ಒಳಗಾಗುವಂತೆ ನಡೆಸುತ್ತಾನೆ, ಮತ್ತು ಸೈತಾನನ ದುರಾತ್ಮವು ಇಂತಹ ಅಧಿಕಾರದ ವಿರುದ್ಧವಾಗಿ ದಂಗೆಯೇಳುವಂತೆ ಮಾಡುತ್ತದೆ.
ಇಂದಿನ ಸಮಾಜದಲ್ಲಿ, ಮನೆಯಲ್ಲಿ ಮತ್ತು ಕ್ರೈಸ್ತಸಭೆಯಲ್ಲೂ ಸಹ, ದಂಗೆಯ ಮನೋಭಾವವು ತುಂಬಿದೆ. ಜಗತ್ತು ವೇಗವಾಗಿ ದೇವರಿಂದ ದೂರ ಸರಿಯುತ್ತಿರುವುದರ ಮತ್ತು ಹೆಚ್ಚು ಹೆಚ್ಚಾಗಿ ಸೈತಾನನಿಂದ ನಿಯಂತ್ರಿಸಲ್ಪಡುವುದರ ಸ್ಪಷ್ಟ ಸೂಚನೆ ಇದಾಗಿದೆ. ಕ್ರಿಸ್ತನ ದೇಹದ ಸದಸ್ಯರಾಗಿರುವ ನಾವು, ಸೈತಾನನ ಈ ತತ್ವವನ್ನು ವಿರೋಧಿಸಿ ನಿಲ್ಲುವುದಕ್ಕೆ ಮತ್ತು ಅಧೀನನಾಗಿ ನಡೆದುಕೊಂಡ ಕ್ರಿಸ್ತನ ಮಾದರಿಯನ್ನು ಅನುಸರಿಸುವುದಕ್ಕಾಗಿ ಕರೆಯಲ್ಪಟ್ಟಿದ್ದೇವೆ.
ನಾವು ದೇವರು ನೇಮಿಸಿರುವ ನಾಯಕತ್ವಕ್ಕೆ ಅಧೀನರಾದಾಗ ಎಂದಿಗೂ ನಷ್ಟ ಹೊಂದುವುದಿಲ್ಲ. ಇನ್ನೊಂದು ಕಡೆ, ನಾವು ದಂಗೆಯ ದಾರಿಯಲ್ಲಿ ಬಹಳಷ್ಟು ನಷ್ಟವನ್ನು ಅನುಭವಿಸುತ್ತೇವೆ.
ದೈವಿಕ ನಾಯಕತ್ವಕ್ಕೆ ಅಧೀನರಾಗುವುದು ನಮ್ಮ ಆತ್ಮಿಕ ಪರಿಪಕ್ವತೆಗಾಗಿ ದೇವರು ಸಿದ್ಧಪಡಿಸಿದ ವಿಧಾನವಾಗಿದೆ. ದೇವರು ನಮಗೆ ಕರೆ ನೀಡಿದ ದಾರಿಯಲ್ಲಿ ನಾವು ಸಾಗದಿದ್ದರೆ, ನಮ್ಮ ಆತ್ಮಿಕ ಬೆಳವಣಿಗೆಯು ಕುಂಠಿತವಾಗುತ್ತದೆ.
ಬಹಳಷ್ಟು ವಿಶ್ವಾಸಿಗಳು ದೇವರ ಸಾರ್ವಭೌಮತ್ವದ ನಿಜಸ್ವರೂಪವನ್ನು ಅರಿಯಲು ವಿಫಲರಾಗುತ್ತಾರೆ, ಏಕೆಂದರೆ ಆತ್ಮಿಕ ನಾಯಕರಿಗೆ ದೀನತೆಯಿಂದ ವಿಧೇಯರಾಗುವುದರ ಮೂಲಕ ತಮ್ಮ ಸ್ವಂತ ಯೋಜನೆಗಳನ್ನು ಕಡಿತಗೊಳಿಸುವುದು ಅಥವಾ ಹಿಡಿತದಲ್ಲಿ ಇಟ್ಟುಕೊಳ್ಳುವುದು ಹೇಗೆಂದು ಅನುಭವದ ಮೂಲಕ ಅವರು ಎಂದಿಗೂ ಕಲಿತಿಲ್ಲ. ಯಾರು ತಮ್ಮ ಜೀವನದ ಒಂದಲ್ಲ ಒಂದು ಅವಧಿಯಲ್ಲಿ ಇತರರ ನಾಯಕತ್ವಕ್ಕೆ ಅಧೀನರಾಗಿ ನಡೆಯುವುದನ್ನು ಕಲಿತಿಲ್ಲವೋ, ಅವರು ಉಪಯುಕ್ತವಾದ ದೇವರ ಸೇವೆಯನ್ನು ಮಾಡಲಾರರು ಅಥವಾ ತಾವು ಸ್ವತಃ ಒಬ್ಬ ಆತ್ಮಿಕ ನಾಯಕರು ಆಗಲಾರರು.
ಸೈತಾನನು ನಮ್ಮ ಕಿವಿಯಲ್ಲಿ ಪಿಸುಗುಟ್ಟುವ ಹಾಗೆ, ಇನ್ನೊಬ್ಬರಿಗೆ ಅಧೀನರಾಗಿ ಇರುವುದು ಒಂದು ಅವಮಾನಕರ ಅಥವಾ ಗುಲಾಮತನದ ಸಂಗತಿಯಲ್ಲ. ಇದಕ್ಕೆ ತದ್ವಿರುದ್ಧವಾಗಿ, ಇದು ದೇವರು ನಮ್ಮನ್ನು ಆತ್ಮಿಕ ಸುರಕ್ಷತೆಯಲ್ಲಿ ಕಾಯ್ದುಕೊಳ್ಳುವ ವಿಧಾನವಾಗಿದೆ. ನಮ್ಮ ಕ್ರೈಸ್ತ ಜೀವಿತದ ಆರಂಭಿಕ ವರ್ಷಗಳಲ್ಲಿ ನಾವು ದೇವರ ಮಾರ್ಗಗಳ ಬಗ್ಗೆ ಇನ್ನೂ ಅಜ್ಞಾನಿಗಳಾಗಿರುವಾಗ, ನಾವು ನಮ್ಮ ಆತ್ಮಿಕ ನಾಯಕರಿಗೆ ಅಧೀನರಾಗಿ ನಡೆದುಕೊಂಡರೆ, ಅದು ನಾವು ಸ್ವಂತ ಜೀವನದಲ್ಲಿ ಯಾವುದೋ ಗುಂಡಿಗೆ ಬೀಳುವುದನ್ನು ತಪ್ಪಿಸುವುದು ಮಾತ್ರವಲ್ಲದೆ, ನಮ್ಮ ಯೌವನದ ಉತ್ಸಾಹದಲ್ಲಿ ನಾವು ಇತರರನ್ನು ತಪ್ಪುದಾರಿಗೆ ನಡೆಸುವುದನ್ನೂ ಸಹ ತಪ್ಪಿಸುತ್ತದೆ. ನಾವು ಅಧೀನತೆಯಲ್ಲಿ ಕಳೆಯುವ ಆ ವರ್ಷಗಳು, ದೇವರು ನಮಗೆ ತನ್ನ ಪರಲೋಕ ರಾಜ್ಯದ ನಿಯಮಗಳನ್ನು ಕಲಿಸಿ, ಆ ಮೂಲಕ ನಮ್ಮನ್ನು ಆತ್ಮಿಕ ಶ್ರೀಮಂತರನ್ನಾಗಿ ಮಾಡುವ ಸಮಯವೂ ಆಗಿರಬಹುದು, ಮತ್ತು ಅದರಿಂದಾಗಿ ನಮಗೆ ಇತರರ ಸೇವೆ ಮಾಡುವ ಅವಕಾಶವೂ ಸಿಗಬಹುದು.
ನಾವು ಅಧೀನತೆಯ ಮಾರ್ಗವನ್ನು ತಿರಸ್ಕರಿಸಿದಾಗ ಎಷ್ಟು ದೊಡ್ಡ ನಷ್ಟವನ್ನು ಅನುಭವಿಸುತ್ತೇವೆ!