ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಮನೆ ಸಭೆ
WFTW Body: 

ದೇವರ ವಾಕ್ಯದಲ್ಲಿ ಕಂಡುಬರುವ ಅತ್ಯಂತ ಮಹಿಮಾನ್ವಿತ ಪ್ರಕಟನೆಗಳಲ್ಲಿ ಒಂದು ಯಾವುದೆಂದರೆ, ಪತಿ-ಪತ್ನಿಯ ನಡುವಿನ ಸಂಬಂಧವು ಕ್ರಿಸ್ತ ಹಾಗೂ ಕ್ರೈಸ್ತ ಸಭೆಯ ನಡುವಿನ ಸಂಬಂಧವನ್ನು ನಿರೂಪಿಸುತ್ತದೆ (ಎಫೆ. 5:22-23), ಎಂಬುದು.

ಎಫೆಸ ಪತ್ರಿಕೆಯ ಈ ವಚನಗಳು ನಮಗೆ ತಿಳಿಸುವ ಹಾಗೆ, ಹೆಂಡಂದಿರು ತಮ್ಮತಮ್ಮ ಗಂಡಂದಿರಿಗೆ ವಿಧೇಯರಾಗಬೇಕು, ಏಕೆಂದರೆ ಗಂಡನು ಹೆಂಡತಿಗೆ ದೇವರಿಂದ ನೇಮಿಸಲ್ಪಟ್ಟ ಮುಖ್ಯಸ್ಥನಾಗಿದ್ದಾನೆ. ಇಲ್ಲಿ ನೀಡಲಾಗಿರುವ ಆಜ್ಞೆಯ ಪ್ರಕಾರ, ಹೆಂಡತಿಯು ಎಲ್ಲಾ ವಿಷಯಗಳಲ್ಲಿ ತನ್ನ ಗಂಡನಿಗೆ ಒಳಪಡಬೇಕು (ಸಭೆಯು ಕ್ರಿಸ್ತನಿಗೆ ಅಧೀನವಾಗಿರಬೇಕಾದ ಹಾಗೆಯೇ) ಮತ್ತು ಆತನನ್ನು ಭಯಭಕ್ತಿಯಿಂದ ನೋಡಬೇಕು. ಇಂತಹ ವಿಧೇಯತೆಯನ್ನು ನಮ್ಮ ಈ ದಿನದ ಸಂಪ್ರದಾಯವು ಅಂಗೀಕರಿಸದೇ ಇರಬಹುದು, ಆದಾಗ್ಯೂ ಇದು ದೇವರ ಆಜ್ಞೆಯಾಗಿದೆ. ಒಂದು ಕುಟುಂಬವು ಈ ಆಜ್ಞೆಯನ್ನು ತಿರಸ್ಕರಿಸಿದರೆ, ಅಲ್ಲಿ ಈ ಅವಿಧೇಯತೆಯ ಪರಿಣಾಮವು ನಿಶ್ಚಯವಾಗಿ ಒಂದಲ್ಲ ಒಂದು ರೀತಿಯಲ್ಲಿ ಕಾಣಿಸುತ್ತದೆ. ಒಬ್ಬ ಕ್ರೈಸ್ತ ಕನ್ಯೆಯು ದೇವರ ಈ ಆಜ್ಞೆಗಳನ್ನು ತನ್ನ ವಿವಾಹಿತ ಜೀವನದಲ್ಲಿ ಪಾಲಿಸಲು ಇಚ್ಛಿಸದಿದ್ದರೆ, ಆಕೆ ಮದುವೆಯಾಗದೇ ಇರುವುದು ಒಳ್ಳೆಯದು. ಇಂತಹ ಕನ್ಯೆಯು ಮದುವೆಯಾದ ಮೇಲೆ ದೇವರ ಆಜ್ಞೆಗಳಿಗೆ ನಿರಂತರವಾಗಿ ಅವಿಧೇಯಳಾಗಿ ಇರುವುದಕ್ಕಿಂತ, ಮದುವೆಯಾಗದೇ ಇರುವುದು ಎಷ್ಟೋ ಉತ್ತಮ.

"ಕ್ರೈಸ್ತ ವಿಶ್ವಾಸಿಗಳಾದ ಎಲ್ಲಾ ದಂಪತಿಗಳು ಯೇಸು ಕ್ರಿಸ್ತ ಮತ್ತು ಕ್ರೈಸ್ತಸಭೆಯ ನಡುವಿನ ಸಂಬಂಧವನ್ನು ನಿರೂಪಿಸುವ ಒಂದು ಚಿಕ್ಕ ಭಾವಚಿತ್ರದಂತೆ ಇರಬೇಕು"

ದೇವರ ಆದೇಶದ ಮೂಲಕ ಗಂಡನು ತನ್ನ ನ್ಯಾಯಸಮ್ಮತವಲ್ಲದ ಅಪೇಕ್ಷೆಗಳನ್ನು ಪೂರೈಸಲು ಹೆಂಡತಿಯನ್ನು ಒತ್ತಾಯಿಸಬಹುದೆಂದು ಯೋಚಿಸುವುದಕ್ಕೆ ಅವಕಾಶ ಇರುವುದಿಲ್ಲ; ಏಕೆಂದರೆ ಎಫೆಸ ಪತ್ರಿಕೆಯ ಈ ವಚನವು ಮುಂದುವರಿದು, ಕ್ರಿಸ್ತನು ಸಭೆಯನ್ನು ಪ್ರೀತಿಸಿ ಅದಕ್ಕೆ ತನ್ನನ್ನೇ ಒಪ್ಪಿಸಿಕೊಟ್ಟ ಹಾಗೆಯೇ, ಗಂಡಂದಿರು ತಮ್ಮ ಹೆಂಡಂದಿರನ್ನು ಪ್ರೀತಿಸಬೇಕೆಂದು ಹೇಳುತ್ತದೆ. ಇದರ ತಾತ್ಪರ್ಯ ಏನೆಂದರೆ, ಗಂಡಂದಿರು ತಮ್ಮ ಹೆಂಡಂದಿರನ್ನು ಪ್ರೀತಿಸಲಿಕ್ಕೆ ತಮ್ಮನ್ನೇ ತ್ಯಾಗಮಾಡಬೇಕು, ಹೆಂಡತಿಯ ಸುಖ-ಸಂತೋಷಕ್ಕಾಗಿ ಉಡುಗೊರೆಗಳನ್ನು ಕೊಡುವುದು ಮಾತ್ರವಲ್ಲದೇ, ಗಂಡನು ತನ್ನನ್ನೇ - ತನ್ನ ಸಂಪೂರ್ಣ ಜೀವಿತವನ್ನು - ಹೆಂಡತಿಗೆ ಒಪ್ಪಿಸಿ ಕೊಡಬೇಕು. ಕ್ರಿಸ್ತನು ನಿರಂತರವಾಗಿ ಸಭೆಯನ್ನು ಪ್ರೀತಿಸುವ ಹಾಗೆಯೇ, ಗಂಡನಿಗೆ ಹೆಂಡತಿಯ ಪ್ರೀತಿಯು ಸಿಕ್ಕಿದರೂ ಅಥವಾ ಸಿಗದೇ ಹೋದರೂ, ಹೆಂಡತಿಯನ್ನು ಯಾವಾಗಲೂ ಪ್ರೀತಿಸುವುದು ಆತನ ಕರ್ತವ್ಯವಾಗಿದೆ. ಅಷ್ಟೇ ಅಲ್ಲದೆ, ಕ್ರಿಸ್ತನ ಪ್ರೀತಿಯು ಶಿಷ್ಯರ ಕಾಲುಗಳನ್ನು ತೊಳೆಯುವುದಕ್ಕೂ ಸಹ ಆತನನ್ನು ನಡೆಸಿತು, ಎಂಬುದನ್ನು ನೆನಪಿಟ್ಟುಕೊಳ್ಳಿರಿ (ಯೋಹಾನನು 13:1,5). ಎಫೆಸದ ಪತ್ರಿಕೆಯ ಇದೇ ಗ್ರಂಥಭಾಗದಲ್ಲಿ ನೀಡಲಾಗಿರುವ ಇನ್ನೊಂದು ಆಜ್ಞೆ, ಗಂಡನು ತನ್ನ ಸ್ವಂತ ಶರೀರವನ್ನು ಪ್ರೀತಿಸುವ ಹಾಗೆ ತನ್ನ ಹೆಂಡತಿಯನ್ನು ಪ್ರೀತಿಸಬೇಕು. ಆತನು ಹೇಗೆ ತನ್ನ ಸ್ವಂತ ಶರೀರಕ್ಕೆ ನೋವು ಉಂಟುಮಾಡುವುದಿಲ್ಲ ಅಥವಾ ಅದನ್ನು ಗಾಯಗೊಳಿಸುವುದಿಲ್ಲವೋ, ಹಾಗೆಯೇ ಆತನು ಉದ್ದೇಶಪೂರ್ವಕವಾಗಿ ತನ್ನ ಪತ್ನಿಗೆ ಹಾನಿ ಅಥವಾ ಆಕೆಯ ಮನಸ್ಸಿಗೆ ನೋವನ್ನು ಉಂಟುಮಾಡಬಾರದು. ಆತನು ತನ್ನ ಶರೀರವನ್ನು ಪೋಷಿಸಿ ಸಂರಕ್ಷಿಸುವ ಹಾಗೆಯೇ, ತನ್ನ ಹೆಂಡತಿಯನ್ನು ಪೋಷಿಸಬೇಕು ಮತ್ತು ಹಾನಿ, ಅಪಾಯಗಳಿಂದ ಆಕೆಯನ್ನು ಸಂರಕ್ಷಿಸಬೇಕು. ದೇವರ ವಾಕ್ಯದ ಈ ಬೋಧನೆಯನ್ನು ಪಾಲಿಸಲು ಇಚ್ಛಿಸದ ಒಬ್ಬ ಪುರುಷನು ಮದುವೆ ಮಾಡಿಕೊಳ್ಳದೇ ಇರುವುದು ಒಳ್ಳೆಯದು.

ಎಫೆಸದ ಪತ್ರಿಕೆಯ ಈ ಗ್ರಂಥಭಾಗದಲ್ಲಿ ಪ್ರಕಟವಾಗಿರುವ ದೇವರ ಉದ್ದೇಶ ಇದು: ಕ್ರೈಸ್ತ ವಿಶ್ವಾಸಿಗಳಾದ ಎಲ್ಲಾ ದಂಪತಿಗಳು ಯೇಸು ಕ್ರಿಸ್ತ ಮತ್ತು ಕ್ರೈಸ್ತಸಭೆಯ ನಡುವಿನ ಸಂಬಂಧವನ್ನು ನಿರೂಪಿಸುವ ಒಂದು ಚಿಕ್ಕ ಭಾವಚಿತ್ರದಂತೆ ಇರಬೇಕು.ಅವರ ಕುಟುಂಬ ಜೀವಿತವು ಈ ಮನೋಹರ ದೈವಿಕ ಸಂಬಂಧವನ್ನು ತೋರಿಸಿಕೊಡಬೇಕು.

ಎಫೆಸದ ಪತ್ರಿಕೆಯಲ್ಲಿ ಪತಿ-ಪತ್ನಿಯ ಸಂಬಂಧವನ್ನು ವಿವರಿಸುವ ವಚನಗಳನ್ನು ಬರೆಯುವುದಕ್ಕೆ ಮುಂಚೆ ಪೂರ್ವಭಾವಿಯಾಗಿ "ಪವಿತ್ರಾತ್ಮಭರಿತರಾಗಿರಿ"(ಎಫೆ. 5:19) ಎಂಬ ಆದೇಶವು ಬರೆಯಲ್ಪಟ್ಟಿರುವುದಕ್ಕೆ ಕಾರಣ, ಪವಿತ್ರಾತ್ಮನ ತುಂಬುವಿಕೆಯು ಪ್ರಾಥಮಿಕವಾಗಿ ಕುಟುಂಬ ಜೀವನದಲ್ಲಿ ಕ್ರಿಸ್ತನನ್ನು ಹೋಲುವ ನಡವಳಿಕೆಯನ್ನು ತರುತ್ತದೆ, ಎಂದು ಸೂಚಿಸುವುದಕ್ಕಾಗಿ ಇರಬೇಕು. ಇನ್ನೊಂದು ರೀತಿಯಲ್ಲಿ ನೋಡುವುದಾದರೆ, ವೈವಾಹಿಕ ಜೀವನದಲ್ಲಿ ನಾವು ದೇವರನ್ನು ಮಹಿಮೆ ಪಡಿಸುವುದಕ್ಕೆ ಪವಿತ್ರಾತ್ಮನಿಂದ ತುಂಬಿಸಲ್ಪಡುವುದು ಅತ್ಯಾವಶ್ಯಕವಾಗಿದೆ, ಎಂಬ ಅರ್ಥವೂ ಇದರಲ್ಲಿದೆ ಎನ್ನಬಹುದು.

ಪ್ರತಿಯೊಬ್ಬ ಕ್ರೈಸ್ತನು ಜೀವನ ಸಂಗಾತಿಯನ್ನು ಹುಡುಕುವುದಕ್ಕೆ ಮೊದಲು, ಮೇಲೆ ವಿವರಿಸಲಾದ ಕುಟುಂಬದಂತಹ ಕುಟುಂಬವನ್ನು ತಾನು ನಿಜವಾಗಿ ಬಯಸುತ್ತೇನೋ, ಎಂದು ತನ್ನನ್ನೇ ಪ್ರಶ್ನಿಸಿಕೊಳ್ಳಬೇಕು. ಇಂತಹ ಹಂಬಲ ಇಲ್ಲದಿರುವ ಒಬ್ಬ ವ್ಯಕ್ತಿಯು ವಿವಾಹದಲ್ಲಿ ದೇವರ ಮಾರ್ಗದರ್ಶನವನ್ನು ನಿರೀಕ್ಷಿಸಲು ಹೇಗೆ ಸಾಧ್ಯ? ಆದರೆ ಇದು ನಿಮ್ಮ ಜೀವನದ ನಿಜವಾದ ಹಂಬಲವಾಗಿದ್ದರೆ, ದೇವರು ನಿಮ್ಮನ್ನು ತನ್ನ ಪರಿಪೂರ್ಣ ಚಿತ್ತಾನುಸಾರವಾದ ವಿವಾಹಕ್ಕೆ ನಡೆಸುತ್ತಾರೆ ಮತ್ತು ಒಂದು ದೈವಿಕ ಕುಟುಂಬವನ್ನು ಕಟ್ಟುವಂತೆಯೂ ಸಹ ನಿಮ್ಮನ್ನು ಬಲಪಡಿಸುತ್ತಾರೆ, ಎಂಬ ಸಂಪೂರ್ಣ ವಿಶ್ವಾಸವನ್ನು ನೀವು ಇರಿಸಿಕೊಳ್ಳಬಹುದು.