WFTW Body: 

ಸೈತಾನನು ಹವ್ವಳಿಗೆ, "ದೇವರು ನಿಜವಾಗಿ ತಮ್ಮ ಮಾತಿನಂತೆ ನಡೆಯುವುದಿಲ್ಲ," ಎಂದು ಹೇಳಿದ್ದು ಆತನ ಮೊದಲನೆಯ ಕುಯುಕ್ತಿಯಾಗಿತ್ತು (ಆದಿ. 3:1-6). ಆತನು ಆಕೆಗೆ, "ನೀವು ನಿಶ್ಚಯವಾಗಿ ಸಾಯುವುದಿಲ್ಲ," ಎಂದು ಹೇಳಿದನು. ಈ ರೀತಿಯಾಗಿ ಆತನು ಹವ್ವಳನ್ನು ಪಾಪಕ್ಕೆ ನಡೆಸಲು ಸಾಧ್ಯವಾಯಿತು. ಈ ದಿನವೂ ಸಹ ಆತನು ಇದೇ ಕಾರ್ಯವಿಧಾನವನ್ನು ಉಪಯೋಗಿಸುತ್ತಾನೆ. ದೇವರ ವಾಕ್ಯವು ವಿಶ್ವಾಸಿಗಳಿಗೆ ಹೇಳುವ ಮಾತು, "ನೀವು ಶರೀರಭಾವವನ್ನು ಅನುಸರಿಸಿ ಜೀವಿಸಿದರೆ ಸಾಯುವುದು ನಿಶ್ಚಯ," ಎಂಬುದಾಗಿದೆ (ರೋಮಾ. 8:13). ಆದರೆ ಸೈತಾನನು, "ನೀವು ನಿಶ್ಚಯವಾಗಿ ಸಾಯುವುದಿಲ್ಲ," ಎನ್ನುತ್ತಾನೆ. ಮತ್ತು ಹೆಚ್ಚಿನ ವಿಶ್ವಾಸಿಗಳು ಆತನನ್ನು ನಂಬುತ್ತಾರೆ ಮತ್ತು ಪಾಪದಲ್ಲಿ ಮುಂದುವರಿಯುತ್ತಾರೆ.

ಒಬ್ಬ ಹೆಣ್ಣನ್ನು ನೋಡಿ ಮೋಹಿಸುವುದಕ್ಕಿಂತ ಒಂದು ಕಣ್ಣನ್ನು ಕಳೆದುಕೊಂಡು ಕುರುಡನಾಗುವುದು ಉತ್ತಮವೆಂದು ಎಷ್ಟು ಜನ ನಿಜವಾಗಿ ನಂಬುತ್ತಾರೆ; ಮತ್ತು ಬಲಗೈಯನ್ನು ಲೈಂಗಿಕ ಪಾಪಕ್ಕಾಗಿ ಉಪಯೋಗಿಸುವುದಕ್ಕಿಂತ ಆ ಕೈಯನ್ನು ಕಡಿದುಹಾಕುವುದು ಉತ್ತಮವೆಂದು ಎಷ್ಟು ಜನ ನಿಜವಾಗಿ ನಂಬುತ್ತಾರೆ?

ಯಾರ್ಯಾರು ಕೋಪವನ್ನು ಮತ್ತು ಲೈಂಗಿಕ ಪಾಪವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲವೋ, ಅವರು ಕೊನೆಗೆ ನರಕಕ್ಕೆ ಹೋಗುತ್ತಾರೆಂದು (ಮತ್ತಾ. 5:22-30), ಎಷ್ಟು ಜನ ನಿಜವಾಗಿ ನಂಬುತ್ತಾರೆ?

ಒಬ್ಬ ಅವಿಶ್ವಾಸಿಯನ್ನು ಮದುವೆ ಮಾಡಿಕೊಂಡು ದೇವರ ವಾಕ್ಯಕ್ಕೆ ಅವಿಧೇಯತೆಯಿಂದ ನಡೆಯುವುದು (2 ಕೊರಿ. 6:14), ದೇವರ ಮುಂದೆ ಮುಷ್ಟಿಯನ್ನು ತೋರಿಸುವುದಕ್ಕೆ ಸಮಾನವೆಂದು ಎಷ್ಟು ಜನ ನಂಬುತ್ತಾರೆ?

ಶುದ್ಧ ಮನಸ್ಸು ಉಳ್ಳವರು ಮಾತ್ರವೇ ದೇವರನ್ನು ನೋಡಲು ಸಾಧ್ಯವೆಂದು (ಮತ್ತಾ. 5:8) ಎಷ್ಟು ಜನ ನಂಬುತ್ತಾರೆ?

ಎಲ್ಲರೊಂದಿಗೆ ಸಮಾಧಾನದಿಂದ ಇರುವುದಕ್ಕೆ ಮತ್ತು ಪರಿಶುದ್ಧತೆಯನ್ನು ಹೊಂದುವುದಕ್ಕೆ ಪರಿಶ್ರಮ ಪಡದಂತ ಯಾವನೂ ಕರ್ತನನ್ನು ಕಾಣುವುದಿಲ್ಲವೆಂದು (ಇಬ್ರಿ. 12:14), ಎಷ್ಟು ಜನರು ನಂಬುತ್ತಾರೆ?

ಎಷ್ಟು ಜನರು ತಾವು ಆಡುವ ಪ್ರತಿಯೊಂದು ಅರ್ಥವಿಲ್ಲದ ಮಾತಿನ ವಿಚಾರವಾಗಿ, ನ್ಯಾಯ ವಿಚಾರಣೆಯ ದಿನದಲ್ಲಿ ತಾವು ಉತ್ತರ ಕೊಡಬೇಕಿದೆ (ಮತ್ತಾ. 12:36) ಎಂದು ನಂಬುತ್ತಾರೆ? ದೇವರು ಹೇಳಿದ ಈ ಮಾತನ್ನು ನಂಬುವಂತ ವಿಶ್ವಾಸಿಗಳು ಈ ಲೋಕದಲ್ಲಿ ಕೇವಲ ಕೆಲವರು ಮಾತ್ರ ಇದ್ದಾರೆ. ಸೈತಾನನು ಕ್ರೈಸ್ತ ಸಮುದಾಯವನ್ನು ಈ ರೀತಿಯ ವಂಚನೆಗೆ ಒಳಪಡಿಸಿದ್ದಾನೆ. ಇದರ ಪರಿಣಾಮವಾಗಿ, ಹೆಚ್ಚಿನ ವಿಶ್ವಾಸಿಗಳು ದೇವರ ಭಯಭಕ್ತಿಯನ್ನು ಮತ್ತು ದೇವರ ಮುನ್ನೆಚ್ಚರಿಕೆಯ ಮಾತುಗಳ ಬಗ್ಗೆ ಗೌರವಭಾವವನ್ನು ಕಳೆದುಕೊಂಡಿದ್ದಾರೆ. ಅಂತಿಮವಾಗಿ ಸೈತಾನನು ಅವರನ್ನು ಸಂಪೂರ್ಣವಾಗಿ ನಾಶ ಮಾಡುವ ತನಕ ಅವರು ಪಾಪದೊಂದಿಗೆ ಬೇಜವಾಬ್ದಾರಿಯಿಂದ ವರ್ತಿಸುತ್ತಲೇ ಇರುತ್ತಾರೆ.

ದೇವರು ಆತ್ಮಿಕವಾಗಿ ಮುರಿಯಲ್ಪಟ್ಟಿರುವ ಜನರನ್ನು ಹಾಗೂ ತನ್ನ ಮಾತಿಗೆ ಭಯಪಡುವ ಜನರನ್ನು ದೃಷ್ಟಿಸುತ್ತಾರೆ (ಯೆಶಾ. 66:1,2). ನಾವು ದೇವರ ವಾಕ್ಯದಲ್ಲಿರುವ ಪ್ರತಿಯೊಂದು ಎಚ್ಚರಿಕೆಯ ಕುರಿತಾಗಿ ಭಯಪಟ್ಟು ನಡುಗಬೇಕು. ನಮ್ಮಲ್ಲಿ ನಿಜವಾದ ದೇವರ ಭಯ ಇದೆ ಎಂಬುದನ್ನು ಇದು ಸಾಬೀತು ಪಡಿಸುತ್ತದೆ. ಯಾರು ದೇವರ ಭಯದಿಂದ ಕೂಡಿದವರಾಗಿ ಪರಿಪೂರ್ಣ ಪವಿತ್ರತೆಯನ್ನು ಪಡೆಯುವುದಕ್ಕಾಗಿ ತಮ್ಮನ್ನು ಶುಚಿ ಮಾಡಿಕೊಳ್ಳುತ್ತಾರೋ, ಅವರು ಮಾತ್ರ ಕೊನೆಯಲ್ಲಿ ಕ್ರಿಸ್ತನ ದೇಹದ ಒಂದು ಅಂಗವಾಗುತ್ತಾರೆ. ಯಾರು ಪಾಪದ ವಿರುದ್ಧ ಜಯ ಗಳಿಸುತ್ತಾರೋ, ಅವರು ಮಾತ್ರ ಎರಡನೆಯ ಮರಣದಿಂದ (ಬೆಂಕಿಯ ಕೆರೆಯಿಂದ) ಪಾರಾಗುತ್ತಾರೆ ಮತ್ತು ಜೀವ ವೃಕ್ಷದ ಹಣ್ಣನ್ನು ತಿನ್ನುವ ಭಾಗ್ಯಕ್ಕೆ ಪಾತ್ರರಾಗುತ್ತಾರೆ(ಪ್ರಕ. 2:7,11). ದೇವರಾತ್ಮನು ಎಲ್ಲಾ ಕ್ರೈಸ್ತಸಭೆಗಳಿಗೆ ಹೇಳುವ ಮಾತು ಇದೇ ಆಗಿದೆ. ಆದರೆ ಕೇಳಿಸಿಕೊಳ್ಳುವಂತ ಕಿವಿಗಳನ್ನು ಹೊಂದಿರುವ ಜನರು ಕೇವಲ ಕೆಲವರು ಮಾತ್ರ ಇದ್ದಾರೆ.