WFTW Body: 

ಗಿದ್ಯೋನನು ಇಸ್ರಾಯೇಲ್ಯರ ಶತ್ರುಗಳನ್ನು ಎದುರಿಸಿ ಯುದ್ಧ ಮಾಡುವುದಕ್ಕಾಗಿ ಒಂದು ಸೇನೆಯನ್ನು ಕೂಡಿಸಿದಾಗ, ಅವನ ಬಳಿ 32,000 ಸೈನಿಕರಿದ್ದರು. ಆದರೆ ಅವರೆಲ್ಲರೂ ಯಥಾರ್ಥ ಹೃದಯವುಳ್ಳವರಲ್ಲ ಎಂಬುದು ದೇವರಿಗೆ ತಿಳಿದಿತ್ತು. ಹಾಗಾಗಿ ದೇವರು ಅವರ ಸಂಖ್ಯೆಯನ್ನು ಕುಗ್ಗಿಸಿದರು. ಮೊದಲು ಅಂಜಿಕೆಯಿಂದ ತುಂಬಿದ್ದ ಜನರನ್ನು ಮನೆಗೆ ಕಳುಹಿಸಲಾಯಿತು. ಆದರೆ ಇನ್ನೂ 10,000 ಜನ ಉಳಿದಿದ್ದರು. ಇವರನ್ನು ಹೊಳೆಯ ಬಳಿಗೆ ಕರೆದೊಯ್ದು ಪರೀಕ್ಷಿಸಲಾಯಿತು. ಆ ಪರೀಕ್ಷೆಯಲ್ಲಿ ಕೇವಲ 300 ಜನರು ಉತ್ತೀರ್ಣರಾಗಿ ದೇವರಿಂದ ಅಂಗೀಕರಿಸಲ್ಪಟ್ಟರು (ನ್ಯಾಯ. 7:1-8).

ಆ 10,000 ಜನರು ತಮ್ಮ ಬಾಯಾರಿಕೆಯನ್ನು ನೀಗಿಸಲು ನದಿಯ ನೀರನ್ನು ಯಾವ ರೀತಿ ಕುಡಿಯುತ್ತಾರೆಂದು ಪರೀಕ್ಷಿಸುವುದರ ಮೂಲಕ, ದೇವರು ಗಿದ್ಯೋನನ ಸೇನಾಪಡೆಗೆ ಸೇರಲು ಯಾರು ಅರ್ಹರೆಂದು ತೀರ್ಮಾನಿಸಿದರು. ಆ ಜನರಿಗೆ ತಾವು ಪರೀಕ್ಷೆಗೆ ಒಳಗಾಗುವುದರ ಅರಿವೇ ಇರಲಿಲ್ಲ. ಅವರಲ್ಲಿ 9,700 ಜನರು ಮೊಣಕಾಲೂರಿ ನೀರು ಕುಡಿದು ತಮ್ಮ ನೀರಡಿಕೆಯನ್ನು ತೃಪ್ತಿಗೊಳಿಸುತ್ತಿರುವಾಗ, ಶತ್ರುವಿನ ಸಂಗತಿಯನ್ನು ಸಂಪೂರ್ಣವಾಗಿ ಮರೆತುಬಿಟ್ಟರು. ಅವರಲ್ಲಿ 300 ಜನರು ಮಾತ್ರ ಎಚ್ಚರವಾಗಿದ್ದು, ನಿಂತಲ್ಲಿಯೇ ಬಗ್ಗಿ ನೀರನ್ನು ಕೈಗಳಿಂದ ಬಾಚಿಕೊಂಡು ಕುಡಿದರು.

ದೇವರು ನಮ್ಮನ್ನು ಜೀವಿತದ ಸಾಮಾನ್ಯ ಸಂಗತಿಗಳಲ್ಲಿ ಪರೀಕ್ಷಿಸುತ್ತಾರೆ - ಅಂದರೆ ಹಣ, ಮನರಂಜನೆ, ಲೋಕದ ಮಾನ್ಯತೆ ಮತ್ತು ಸುಖ ಸೌಲಭ್ಯ ಇತ್ಯಾದಿ ವಿಷಯಗಳ ಬಗ್ಗೆ ನಮಗಿರುವ ಮನೋಭಾವದ ಮೂಲಕ. ಗಿದ್ಯೋನನ ಸೇನೆಯ ಹಾಗೆಯೇ, ಹಲವು ಬಾರಿ ನಾವು ಸಹ ದೇವರು ನಮ್ಮನ್ನು ಪರೀಕ್ಷಿಸುತ್ತಿದ್ದಾರೆ ಎಂಬುದನ್ನು ಗಮನಿಸುವುದಿಲ್ಲ.

ಈ ಪ್ರಪಂಚದ ಚಿಂತೆಯ ನಿಮಿತ್ತ ಬಾಧೆಗೆ ಒಳಗಾಗಬೇಡಿರಿ, ಎಂದು ಯೇಸುವು ನಮ್ಮನ್ನು ಎಚ್ಚರಿಸಿದರು. ಅವರು ಹೀಗೆ ಹೇಳಿದರು, ನಿಮ್ಮ ಹೃದಯಗಳು ಅತಿಭೋಜನ ಮತ್ತು ಕುಡಿತದ ಅಮಲಿನಿಂದ, ಮತ್ತು ಪ್ರಪಂಚದ ಚಿಂತೆಗಳಿಂದ ಭಾರವಾಗದಂತೆ ನೋಡಿಕೊಳ್ಳಿರಿ, ಮತ್ತು ಆ ದಿನವು ನಿಮ್ಮ ಮೇಲೆ ಫಕ್ಕನೆ ಉರ್ಲಿನ ಹಾಗೆ ಬರದಂತೆ ಜಾಗರೂಕರಾಗಿರಿ (ಲೂಕ. 21:34).

ಪೌಲನು ಕೊರಿಂಥದ ಕ್ರೈಸ್ತರನ್ನು ಎಚ್ಚರಿಸಿ ಪ್ರೋತ್ಸಾಹಿಸಿದ ಮಾತು ಇದು: ಇನ್ನು ಮೇಲೆ ಹೆಂಡತಿಯುಳ್ಳವರು ಹೆಂಡತಿ ಇಲ್ಲದವರಂತೆಯೂ; ಅಳುವವರು ಅಳದವರಂತೆಯೂ; ಸಂತೋಷ ಪಡುವವರು ಸಂತೋಷ ಪಡದವರಂತೆಯೂ, ಕೊಂಡುಕೊಳ್ಳುವವರು ಕೊಂಡದ್ದು ತಮ್ಮದೇ ಎಂದು ಹೇಳದವರಂತೆಯೂ; ಲೋಕವನ್ನು ಅನುಭೋಗಿಸುವವರು ಅದನ್ನು ಪರಿಪೂರ್ಣವಾಗಿ ಅನುಭೋಗಿಸದವರಂತೆಯೂ ಇರಬೇಕು; ಏಕೆಂದರೆ ಈ ಲೋಕದ ಸ್ಥಿತಿಯು ಗತಿಸಿ ಹೋಗುತ್ತಾ ಇದೆ .... ಈ ಮಾತನ್ನು ನಾನು ನಿಮಗೆ ಹೇಳಲು ಕಾರಣ, ನೀವು ಒಂದೇ ಮನಸ್ಸಿನಿಂದ ಕರ್ತನ ಪಾದಸೇವೆಯನ್ನು ಮಾಡುವವರು ಆಗಬೇಕು, ಎಂಬುದಕ್ಕಾಗಿ (1 ಕೊರಿ. 7:29-35).

ನಾವು ಕರ್ತನ ಕಡೆಗೆ ಇರಿಸಿರುವ ಸಂಪೂರ್ಣ ಲಕ್ಷ್ಯವನ್ನು ಈ ಲೋಕದ ಯಾವುದೇ ಸಂಗತಿಯು ಅಲುಗಾಡಿಸದಂತೆ ನಾವು ಎಚ್ಚರಿಕೆ ವಹಿಸುವುದು ಅವಶ್ಯವಾಗಿದೆ. ಲೋಕದ ವಿಷಯದಲ್ಲಿ, ಪಾಪಕರ ಸಂಗತಿಗಳಿಗಿಂತ ನ್ಯಾಯಸಮ್ಮತ ಸಂಗತಿಗಳು ದೊಡ್ಡ ಉರ್ಲುಗಳಾಗಿವೆ - ಏಕೆಂದರೆ ನ್ಯಾಯಸಮ್ಮತ ಸಂಗತಿಗಳಲ್ಲಿ ತಪ್ಪು ಕಂಡು ಬರುವುದಿಲ್ಲ ಮತ್ತು ಅವುಗಳು ಕೇಡನ್ನು ಮಾಡಲಾರವು, ಎಂದು ನಮಗೆ ಅನಿಸುತ್ತದೆ!!

ನಾವು ನಮ್ಮ ನೀರಡಿಕೆಯನ್ನು ಪರಿಹರಿಸಬಹುದು - ಆದರೆ ನಾವು ಕೈಗಳಿಂದ ಬಾಚಿ ಅವಶ್ಯವಿದ್ದಷ್ಟು ಮಾತ್ರ ನೀರನ್ನು ಕುಡಿಯಬೇಕು. ನಮ್ಮ ಮನಸ್ಸು ಪರಲೋಕ ಕಾರ್ಯಗಳ ಮೇಲೆ ಇರಬೇಕು ಮತ್ತು ಪ್ರಪಂಚದ ಕಾರ್ಯಗಳ ಮೇಲೆ ಅಲ್ಲ. ನಾವು ಯೇಸುವಿನ ಶಿಷ್ಯರಾಗಲು ನಮ್ಮ ಎಲ್ಲವನ್ನು ಬಿಟ್ಟುಬಿಡಬೇಕು. ನಮ್ಮ ಮನಸ್ಸು ಲೋಕದಲ್ಲಿ ಅವಶ್ಯಕ ಸಂಗತಿಗಳನ್ನು ಕೈಗೊಳ್ಳುವುದರಲ್ಲಿ ತಪ್ಪೇನಿಲ್ಲ, ಆದರೆ ಹಾಗೆ ಮಾಡುವಾಗ ಅದು ಎಳೆದ ರಬ್ಬರ್ ಬ್ಯಾಂಡಿನ ಹಾಗಿರಬೇಕು. ಆ ಕಾರ್ಯಗಳನ್ನು ಪೂರ್ಣಗೊಳಿಸಿದ ಮೇಲೆ, ರಬ್ಬರ್ ಬ್ಯಾಂಡಿನ ಸೆಳೆತ ಸಡಿಲಿಸಿದಾಗ ಅದು ತನ್ನ ಯಥಾಸ್ಥಿತಿಗೆ ಹಿಂದಿರುಗುವಂತೆ, ನಮ್ಮ ಮನಸ್ಸುಗಳು ಸಹ ಒಡನೆಯೇ ಕರ್ತನ ಮತ್ತು ನಿತ್ಯತ್ವದ ಸಂಗತಿಗಳಿಗೆ ಹಿಂದಿರುಗಬೇಕು. "ಮೇಲಿನಂಥವುಗಳ ಮೇಲೆ ಮನಸ್ಸಿಡಿರಿ, ಭೂಸಂಬಂಧವಾದವುಗಳ ಮೇಲೆ ಇಡಬೇಡಿರಿ" ಎಂಬ ವಾಕ್ಯದ ಅರ್ಥ ಇದೇ ಆಗಿದೆ (ಕೊಲೋ. 3:2). ಆದಾಗ್ಯೂ, ಅನೇಕ ವಿಶ್ವಾಸಿಗಳಲ್ಲಿ ರಬ್ಬರ್ ಬ್ಯಾಂಡಿನ ಸ್ಥಿತಿ ಹೀಗಿಲ್ಲ, ಅದು ಇದಕ್ಕೆ ವಿರುದ್ಧವಾದ ರೀತಿಯಲ್ಲಿ ಕೆಲಸ ಮಾಡುತ್ತಿರುತ್ತದೆ. ಅವರ ಮನಸ್ಸುಗಳು ಯಾವಾಗಲೋ ಕೆಲವೊಮ್ಮೆ ನಿತ್ಯತ್ವದ ವಿಷಯದ ಬಗ್ಗೆ ಯೋಚಿಸುತ್ತವೆ ಮತ್ತು ಆ ಸೆಳೆತ ಕುಗ್ಗಿದಾಗ, ಪ್ರಪಂಚದ ಸಂಗತಿಗಳಲ್ಲಿ ತೊಡಗಿರುವ ತಮ್ಮ ಸಾಮಾನ್ಯ ಸ್ಥಿತಿಗೆ ಹಿಂದಿರುಗುತ್ತವೆ!