WFTW Body: 

ಯೆಹೆಜ್ಕೇಲ 7:9ರಲ್ಲಿ, ಅನೇಕ ಜನರಿಗೆ ಕೇಳಿಸಿಕೊಳ್ಳಲು ಇಷ್ಟವಾಗದ ಕರ್ತನ ಒಂದು ಬಿರುದನ್ನು ನಾವು ಕಾಣುತ್ತೇವೆ: ’ದಂಡಿಸುವವನಾದ ಕರ್ತನು’, ಅಂದರೆ ನ್ಯಾಯತೀರ್ಪಿನ ಮೂಲಕ ದಂಡಿಸುವಾತನು. ಯೆಹೆಜ್ಕೇಲ 8ನೇ ಅಧ್ಯಾಯದಲ್ಲಿ, ಕರ್ತನು ತಾನು ಯೆಹೂದದೇಶವನ್ನು ತೊರೆದುಬಿಡಲು ಕಾರಣ ದೇವಾಲಯದ ಒಳಗೆ ನಡೆಯುತ್ತಿದ್ದ ವಿಗ್ರಹಾರಾಧನೆಯೆಂದು ಯೆಹೆಜ್ಕೇಲನಿಗೆ ತಿಳಿಸುತ್ತಾನೆ. ದೇವರು ಯೆಹೆಜ್ಕೇಲನಿಗೆ ದೇವಜನರ ನಡುವೆ ಗುಟ್ಟಾಗಿ ನಡೆಯುತ್ತಿದ್ದ ಪಾಪಗಳ ಒಂದು ಒಳನೋಟವನ್ನು ನೀಡಿದರು. ಒಬ್ಬ ನಿಜವಾದ ಪ್ರವಾದಿಗೆ ದೇವಜನರ ನಡುವೆ ಇತರರಿಗೆ ಗೊತ್ತಾಗದಂತೆ ರಹಸ್ಯವಾಗಿ ನಡೆಯುತ್ತಿರುವ ಪಾಪಗಳನ್ನು ಬಹಿರಂಗ ಪಡಿಸುವ ಸಂದೇಶ ದೇವರಿಂದ ದೊರಕುತ್ತದೆ.

ನಾವು 1 ಕೊರಿಂಥ 14:24,25ರಲ್ಲಿ ಓದುವಂತೆ, ಸಭಾಕೂಟದಲ್ಲಿ ಜನರು ಪ್ರವಾದನೆ ಮಾಡುತ್ತಿರುವ ಸಮಯದಲ್ಲಿ, ಒಬ್ಬ ಅಪರಿಚಿತ ಮನುಷ್ಯ ಅಲ್ಲಿಗೆ ಬಂದರೆ, ಅವನ ಹೃದಯದ ರಹಸ್ಯಗಳು ಬಯಲಾಗುತ್ತವೆ. ಆತನು ಅಲ್ಲಿ ಅಡ್ಡಬೀಳುತ್ತಾನೆ ಮತ್ತು ದೇವರು ಆ ಸಭಾಕೂಟದಲ್ಲಿ ಇದ್ದಾರೆಂದು ಒಪ್ಪಿಕೊಳ್ಳುತ್ತಾನೆ. ನಮ್ಮ ಪ್ರತಿಯೊಂದು ಸಭಾಕೂಟವೂ ಹೀಗಿರಬೇಕು. ಅಷ್ಟೇ ಅಲ್ಲದೆ, ನಾವೆಲ್ಲರೂ ಈ ರೀತಿಯಾಗಿ ಪ್ರವಾದಿಸುವ ವರವನ್ನು ಆಸಕ್ತಿಯಿಂದ ಅಪೇಕ್ಷಿಸಬೇಕು.

ಯೆಹೆಜ್ಕೇಲನ ಗ್ರಂಥದಲ್ಲಿ ಬರೆಯಲ್ಪಟ್ಟ ಸಂದರ್ಭದಲ್ಲಿ, ಜನ ವಿಗ್ರಹಾರಾಧನೆಯಲ್ಲಿ ತೊಡಗಿದ್ದರು ಮತ್ತು ಸ್ತ್ರೀಯರು ಅನ್ಯಜನರ ನಡುವೆ ಅನೇಕ ದುರಾಚಾರಗಳಿಗೂ, ಲೈಂಗಿಕ ದುಷ್ಕಾರ್ಯಗಳಿಗೂ ಕಾರಣವಾಗಿದ್ದ ತಮ್ಮೂಜ್ ದೇವತೆಯ ವಿಗ್ರಹಕ್ಕೋಸ್ಕರ ಅಳುತ್ತಿದ್ದರು (ಯೆಹೆಜ್ಕೇಲ 8:14) . ಇಂತಹ ಆಚರಣೆಗಳು ನಡೆಯುತ್ತಿದ್ದುದು ದೇವರ ಪವಿತ್ರ ಆಲಯದಲ್ಲಿ. ಹೊರಗಿದ್ದ ಜನರಿಗೆ ಇಂತಹ ವಿಗ್ರಹಾರಾಧನೆಯ ಕುರಿತಾಗಿ ಯಾವ ಸುಳಿವೂ ಸಹ ಸಿಕ್ಕಿರಲಿಲ್ಲ. ಹೊರಗಿನಿಂದ ಪವಿತ್ರರಾಗಿ ಕಾಣಿಸುವ ಅನೇಕ ಜನರು ಒಳಗೆ ಬಹಳ ಅಸಹ್ಯವಾಗಿ ಇರುತ್ತಾರೆ. ಅಲ್ಲಿ ಕರ್ತನು ಹೇಳಿದ ಮಾತು ಏನೆಂದರೆ, "ಇದನ್ನು ನನ್ನ ಆಲಯವೆಂದು ನೀವು ಕರೆಯುತ್ತೀರಿ, ಆದರೆ ಅದರ ಒಳಗೆ ಏನು ನಡೆಯುತ್ತಿದೆಯೆಂದು ನೋಡಿರಿ." ಅವರು ಪೂರ್ವ ದಿಕ್ಕಿಗೆ ತಿರುಗಿ ಉದಯಕಾಲದ ಸೂರ್ಯನನ್ನು ಪೂಜಿಸುತ್ತಿದ್ದರು, ಮತ್ತು ಇದೇ ರೀತಿಯಾಗಿ ಇಂದು ಅನೇಕ ಕ್ರೈಸ್ತರು ಪ್ರಾರ್ಥನೆಗಾಗಿ ಪೂರ್ವದ ಕಡೆಗೆ ತಿರುಗುತ್ತಾರೆ (ಯೆಹೆಜ್ಕೇಲ 8:16). ಯೆಹೆಜ್ಕೇಲ 9:3ರಲ್ಲಿ, ದೇವಾಲಯದಲ್ಲಿ ನಡೆಯುತ್ತಿದ್ದ ಇಂತಹ ಪಾಪಗಳಿಂದಾಗಿ, ದೇವರ ತೇಜಸ್ಸು ನಿಧಾನವಾಗಿ ಆಲಯವನ್ನು ಬಿಟ್ಟು ಹೊರಟು ನಿಂತಿತ್ತು.

ಒಬ್ಬ ವ್ಯಕ್ತಿಯಿಂದ ಅಥವಾ ಒಂದು ಸಭೆಯಿಂದ ದೇವರ ಮಹಿಮೆಯು ಹೊರಡುವ ಪರಿಸ್ಥಿತಿ, ಅಲ್ಲಿಂದ ಅಭಿಷೇಕ, ತಾಜಾತನ ಹಾಗೂ ದೇವರ ಅಗ್ನಿಯು ಹೊರಟು ಹೋಗುವದಕ್ಕೆ, ಯಾವಾಗಲೂ ಒಂದು ಕಾರಣ ಇರುತ್ತದೆ. 20 ವರ್ಷಗಳ ಹಿಂದೆ ದೇವರ ಅಭಿಷೇಕವನ್ನು ಹೊಂದಿದ್ದ ಅನೇಕ ಬೋಧಕರು ಈಗ ಅದನ್ನು ಕಳೆದುಕೊಂಡಿದ್ದಾರೆ. ನಾವು ವಯಸ್ಸಿನಲ್ಲಿ ಹಿರಿಯರು ಆಗುತ್ತಿರುವಾಗ ನಮ್ಮ ಜೀವನದಲ್ಲಿ ಅಭಿಷೇಕವು ಹೆಚ್ಚುತ್ತಿರಬೇಕು. ಆದರೆ ನಾನು ಭೇಟಿಯಾಗಿರುವ ಬಹಳಷ್ಟು ಮಂದಿ ಬೋಧಕರಲ್ಲಿ, ಆ ಅಭಿಷೇಕವು ಕುಗ್ಗಿರುವುದನ್ನು ಮಾತ್ರ ನಾನು ಕಂಡಿದ್ದೇನೆ. ಸಾಮಾನ್ಯವಾಗಿ ಇದಕ್ಕೆ ಕಾರಣ, ಅವರು ಹಣದ ಸಂಪಾದನೆಗಾಗಿ, ಅಥವಾ ಬೇರೆ ಯಾವುದೋ ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಂಡು, ಅಥವಾ ಬೋಧನೆಯ ಮೂಲಕ ಜನರ ಮೆಚ್ಚುಗೆ ಗಳಿಸುವ ಮೂಲಕ ತಮ್ಮನ್ನು ಕೆಡಿಸಿಕೊಂಡಿದ್ದಾರೆ. ದೇವರು ನಿಮ್ಮನ್ನು ತನ್ನ ಸೇವೆ ಮಾಡುವುದಕ್ಕಾಗಿ ಕರೆದಿರಬಹುದು. ಹಾಗಿದ್ದಲ್ಲಿ, ನೀವು ಆತನಿಗೆ ಯಥಾರ್ಥರಾಗಿರಿ ಮತ್ತು ದೇವರ ಮಹಿಮೆ ನಿಮ್ಮ ಸೇವಾಕಾರ್ಯವನ್ನು ಬಿಟ್ಟು ಹೋಗದಂತೆ ಕಾಪಾಡಿಕೊಳ್ಳಿರಿ.

ಯೆಹೆಜ್ಕೇಲ 9:4ರಲ್ಲಿ, ಈ ದಿನ ದೇವಸಭೆಗೆ ಅನ್ವಯಿಸುವ ಒಂದು ವಚನವನ್ನು ನಾವು ಕಾಣುತ್ತೇವೆ: "ಎಲ್ಲಾ ದೇವಸಭೆಗಳಲ್ಲಿ ಅಡ್ಡಾಡಿ ಅವುಗಳಲ್ಲಿ ನಡೆಯುವ ಸಮಸ್ತ ಅಸಹ್ಯ ಕಾರ್ಯಗಳಿಗಾಗಿ ನರಳಿ ಗೋಳಾಡುತ್ತಿರುವ ಜನರ ಹಣೆಯ ಮೇಲೆ ಒಂದು ಗುರುತನ್ನು ಹಾಕು.’ ಈ ದಿನ ಸಭೆಯಲ್ಲಿ ಯೇಸುವಿನ ನಾಮವು ನಿಂದನೆಗೆ ಈಡಾಗಿದೆ ಎಂಬ ಕಾರಣಕ್ಕಾಗಿ ಗೋಳಾಡುತ್ತಿರುವ ಜನರ ಹಣೆಯ ಮೇಲೆ ಒಂದು ಗುರುತನ್ನು ಹಾಕುವುದಕ್ಕಾಗಿ ದೇವರು ಒಬ್ಬ ದೇವದೂತನನ್ನು ಕಳುಹಿಸಿದರೆ (ಆ ದಿನದಲ್ಲಿ ಅವರು ಮಾಡಿದಂತೆ), ಅಂತಹ ಗುರುತು ಎಷ್ಟು ಜನರಿಗೆ ಸಿಗುತ್ತದೆ? ಯೇಸುವಿನ ಹೆಸರು ಕ್ರೈಸ್ತರ ಮೂಲಕ ಅವಮಾನಕ್ಕೆ ಒಳಗಾಗಿದೆಯೆಂದು ನಿಮ್ಮಲ್ಲಿ ಕಾಳಜಿ ಇದೆಯಾ? ದೇವರ ಪವಿತ್ರ ನಾಮವು ಹೆಚ್ಚಿನ ಸಭೆಗಳಲ್ಲಿ - ವಿವಿದ ಪಂಗಡಗಳ ಹಲವಾರು ಸಭೆಗಳಲ್ಲಿ - ದೂಷಣೆಗೆ ಒಳಗಾಗಿದೆ. ನಮ್ಮಲ್ಲಿ ಇದಕ್ಕಾಗಿ ಕಾಳಜಿ ಇದೆಯೇ? ದೇವರು ಹೀಗೆ ಬೇಸತ್ತಿರುವ ಜನರನ್ನು ಗುರುತಿಸುತ್ತಾರೆ. ಕರ್ತನ ಆಜ್ಞೆ ಹೀಗಿತ್ತು, "ಹಣೆಯ ಮೇಲೆ ಗುರುತು ಇಲ್ಲದ ಎಲ್ಲರನ್ನು ಸಂಹಾರ ಮಾಡಿರಿ." ಇಂದಿನ ದಿನವೂ ಸಹ, ಕರ್ತನ ನಾಮದ ಮಹಿಮೆಗಾಗಿ ಕಾಳಜಿ ಇಲ್ಲದಿರುವ ಎಲ್ಲರೂ ಅತ್ಮಿಕ ಮರಣದಲ್ಲಿ ಕೊನೆಗಾಣುತ್ತಾರೆ."ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ," ಎಂಬುದು ಕರ್ತನು ನಮಗೆ ಕಲಿಸಿಕೊಟ್ಟ ಮೊದಲ ಪ್ರಾರ್ಥನೆಯಾಗಿದೆ. ನೀವು ಆ ನಾಮಕ್ಕಾಗಿ ಉತ್ಸುಕರಾಗಿದ್ದರೆ, ಆಗ ದೇವರು ತನ್ನ ಸಂಕಲ್ಪಗಳನ್ನು ಪೂರೈಸುವ ಕಾರ್ಯದಲ್ಲಿ ನಿಮ್ಮನ್ನು ಉಪಯೋಗಿಸಿಕೊಳ್ಳಲು ಸಾಧ್ಯವಾಗುತ್ತದೆ.

ದೇವದೂತನು ಜನರನ್ನು ಕೊಲ್ಲಲು ಆರಂಭಿಸಿದಾಗ, ಮೊದಲು ದೇವಾಲಯದ ಹಿರಿಯರಾಗಿದ್ದವರು ಕೊಲ್ಲಲ್ಪಟ್ಟರು! ದೇವಜನರ ನಾಯಕರಾಗಿದ್ದ ಈ ಹಿರಿಯರು ’ಇತರ ಎಲ್ಲರಿಗಿಂತ ಕಡಿಮೆ ಕಾಳಜಿಯನ್ನು’ ಹೊಂದಿದವರು ಆಗಿದ್ದರು. ಯಾವನಿಗೆ ಬಹಳವಾಗಿ ಕೊಟ್ಟಿದೆಯೋ, ಅವನ ಕಡೆಯಿಂದ ಬಹಳವಾಗಿ ನಿರೀಕ್ಷಿಸಲ್ಪಡುವದು. ಹಾಗಾಗಿ ನ್ಯಾಯತೀರ್ಪಿನ ಆರಂಭ ಯಾವಾಗಲೂ ಸಭೆಯ ನಾಯಕರಿಂದ ಶುರುವಾಗುತ್ತದೆ. ನಾಯಕರ ವಿಫಲತೆಯ ಕಾರಣದಿಂದಾಗಿ ದೇವರ ತೇಜಸ್ಸು ಹೊರಟು ಹೋಗಲು ಶುರುವಾಯಿತು. ಈ ದಿನವೂ ಸಹ ಹಾಗೆಯೇ ಆಗುತ್ತದೆ.