ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ
WFTW Body: 

ವಿಶ್ವಾಸಿಗಳು ಕ್ರಿಸ್ತನಲ್ಲಿ ಒಂದೇ ದೇಹವಾಗಿದ್ದಾರೆ, ಎಂಬ ದೊಡ್ಡ ಸತ್ಯವು ಪೌಲನು ಎಫೆಸದ ಕ್ರೈಸ್ತರಿಗೆ ಬರೆದ ಪತ್ರಿಕೆಯು ತೋರಿಸುವ ಮುಖ್ಯ ವಿಷಯವಾಗಿದೆ. ಕ್ರಿಸ್ತನು ಸಭೆಯ ಶಿರಸ್ಸಾಗಿದ್ದಾನೆ ಮತ್ತು ಸಭೆಯು ಕ್ರಿಸ್ತನ ದೇಹವಾಗಿದೆ (ಎಫೆಸ 1:22, 23). ಪ್ರತಿಯೊಬ್ಬ ವಿಶ್ವಾಸಿಯು ಇದೇ ದೇಹದ ಅಂಗವಾಗಿದ್ದಾನೆ. ಎಫೆಸದವರಿಗೆ ಬರೆದ ಪತ್ರಿಕೆಯ ಮೊದಲ ಅರ್ಧಭಾಗವು, ಕ್ರಿಸ್ತನ ದೇಹದ ಸಿದ್ಧಾಂತಗಳ ಕುರಿತು ಮಾತನಾಡುತ್ತದೆ. ಪತ್ರಿಕೆಯ ಎರಡನೇ ಅರ್ಧಭಾಗವು, ಈ ಸತ್ಯವನ್ನು ಪ್ರಾಯೋಗಿಕವಾಗಿ ಅನುಸರಿಸುವುದರ ಕುರಿತು ಮಾತನಾಡುತ್ತದೆ. ಎರಡನೇ ಭಾಗವು ಈ ರೀತಿಯಾಗಿ ಪ್ರಾರಂಭವಾಗುತ್ತದೆ: "ನೀವು ದೇವರಿಂದ ಕರೆಯಲ್ಪಟ್ಟವರಾದ ಕಾರಣ ಯೋಗ್ಯರಾಗಿ ನಡೆದುಕೊಳ್ಳಬೇಕು; ನೀವು ಪೂರ್ಣ ವಿನಯ, ಸಾತ್ವಿಕತ್ವಗಳಿಂದಲೂ, ದೀರ್ಘಶಾಂತಿಯಿಂದಲೂ ಕೂಡಿದವರಾಗಿ, ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ. ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು, ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಆಸಕ್ತರಾಗಿರಿ. ನೀವೆಲ್ಲರೂ ಒಂದೇ ದೇಹಕ್ಕೆ ಸೇರಿದವರು" (ಎಫೆಸ 4:1-4). ಬೇರೆ ಪದಗಳಲ್ಲಿ ಹೇಳುವುದಾದರೆ, ಒಬ್ಬ ವ್ಯಕ್ತಿಯು ಸಭೆಯು ಕ್ರಿಸ್ತನ ದೇಹವಾಗಿದೆ ಎಂಬ ಸತ್ಯವನ್ನು "ನೋಡಿ" ಅರ್ಥಮಾಡಿಕೊಂಡಾಗ, ಆತನು ದೀನತೆ, ಸಾತ್ವಿಕತ್ವ, ದೀರ್ಘಶಾಂತಿ, ತಾಳ್ಮೆ, ಪ್ರೀತಿ, ಐಕ್ಯತೆ ಮತ್ತು ಸಮಾಧಾನದಿಂದ ತನ್ನ ಸಹ-ವಿಶ್ವಾಸಿಗಳೊಟ್ಟಿಗೆ ನಡೆಯುವಂತ ಬಯಕೆಯನ್ನು ಹೊಂದುತ್ತಾನೆ. ಒಬ್ಬ ಕ್ರೈಸ್ತನು ಈ ರೀತಿಯಾಗಿ ನಡೆಯದೇ ಇದ್ದಾಗ, ಆತನು ಕ್ರಿಸ್ತನ ದೇಹವನ್ನು ಇನ್ನೂ "ನೋಡಿಲ್ಲ" ಎಂದು ಅದು ತೋರಿಸಿಕೊಡುತ್ತದೆ.

ಕೊರಿಂಥದಲ್ಲಿದ್ದ ಸಭೆಗೆ ಪೌಲನು ಈ ರೀತಿಯಾಗಿ ಬರೆಯುತ್ತಾನೆ, "ನೀವು ಕ್ರಿಸ್ತನ ದೇಹವು ಮತ್ತು ಒಬ್ಬೊಬ್ಬರೂ ಅದರ ಅಂಗಗಳಾಗಿದ್ದೀರಿ" (1 ಕೊರಿಂಥ 12:27). ನಿಜ, ಮೊದಲ ಶತಮಾನದಲ್ಲಿ ಕೊರಿಂಥದಲ್ಲಿದ್ದ ಕ್ರೈಸ್ತರ ಸಣ್ಣ ಗುಂಪು ವಿಶ್ವಾದ್ಯಂತ ಭೂತಕಾಲ, ವರ್ತಮಾನ ಕಾಲ ಮತ್ತು ಭವಿಷ್ಯತ್ ಕಾಲದ ವಿಶ್ವಾಸಿಗಳೂ ಸೇರಿ ರಚಿತವಾಗುವ ಕ್ರಿಸ್ತನ ದೇಹದ ಒಂದು ಚಿಕ್ಕ ಭಾಗ ಮಾತ್ರ ಆಗಿದ್ದರು; ಆದರೆ ಕೊರಿಂಥದಲ್ಲಿ, ಅವರು ಕ್ರಿಸ್ತನ ದೇಹವನ್ನು ತೋರಿಸುವ ಸ್ಥಳೀಯ ಚಿತ್ರಣವಾಗಿದ್ದರು. ಬೇರೆ ಬೇರೆ ಕಾಲಾವಧಿಯಲ್ಲಿ, ಮತ್ತು ಬೇರೆ ಬೇರೆ ಸ್ಥಳಗಳಲ್ಲಿ ವಿಶ್ವಾಸಿಗಳ ಪ್ರತಿಯೊಂದು ಗುಂಪಿಗೆ ಕೊಡಲಾಗಿರುವ ಕರೆ ಇದೇ ಆಗಿದೆ. ಪ್ರತಿಯೊಂದು ಕ್ರೈಸ್ತ ಅನ್ಯೋನ್ಯತೆಯು - ಅದು ಸಭೆಯಾಗಿರಬಹುದು, ಸಂಸ್ಥೆಯಾಗಿರಬಹುದು ಅಥವಾ ಕ್ರೈಸ್ತ ಕಾರ್ಯಕರ್ತರ ಒಂದು ಗುಂಪು ಆಗಿರಬಹುದು - ವಿಶ್ವದ ಯಾವುದೇ ಮೂಲೆಯಲ್ಲಿ ಆದರೂ ಕ್ರಿಸ್ತನ ದೇಹವನ್ನು ಲೋಕಕ್ಕೆ ತೋರಿಸಿಕೊಡುವ ಒಂದು ಸ್ಥಳೀಯ ಭಾಗವಾಗಿ ಇರಬೇಕು, ಎನ್ನುವದು ದೇವರ ಉದ್ದೇಶವಾಗಿದೆ.

"’ನಾನು ಕೈಯಲ್ಲದ ಕಾರಣ ದೇಹಕ್ಕೆ ಸೇರಿಲ್ಲ’, ಎಂದು ಕಾಲು ಹೇಳಿದರೂ, ಅದು ದೇಹಕ್ಕೆ ಸೇರದೆ ಇರುವುದೋ? ಕಿವಿಯು, ’ನಾನು ಕಣ್ಣಲ್ಲದ ಕಾರಣ ನಾನು ದೇಹಕ್ಕೆ ಸೇರಿಲ್ಲ’, ಎಂದು ಹೇಳಿದರೂ ಅದು ದೇಹಕ್ಕೆ ಸೇರದೆ ಇರುವುದೋ? ದೇಹವೆಲ್ಲಾ ಕಣ್ಣಾದರೆ ಕಿವಿಯಲ್ಲಿ? ದೇಹವೆಲ್ಲಾ ಕಿವಿಯಾಗಿದ್ದರೆ, ಯಾವುದೇ ವಾಸನೆಯನ್ನು ಮೂಸಲು ಆಗುತ್ತಿತ್ತೇ? ಆದರೆ ದೇವರು ಆ ಪ್ರತಿಯೊಂದು ಅಂಗವನ್ನು ತನಗೆ ಸರಿಯಾಗಿ ತೋಚಿದ ಪ್ರಕಾರ ದೇಹದೊಳಗೆ ಇಟ್ಟಿದ್ದಾನೆ. ಅವೆಲ್ಲವೂ ಒಂದೇ ಅಂಗವಾಗಿದ್ದರೆ ದೇಹವು ಎಷ್ಟು ವಿಚಿತ್ರವಾಗಿ ಇರುತ್ತಿತ್ತು! ಆದರೆ ಅಂಗಗಳೇನೋ ಅನೇಕ, ದೇಹವು ಒಂದೇ (1 ಕೊರಿಂಥ 12:15-20 - TLB ಭಾಷಾಂತರ).

ಕ್ರಿಸ್ತನ ದೇಹದಲ್ಲಿ ನಾವು ನಮ್ಮನ್ನು ಮತ್ತೊಬ್ಬರೊಟ್ಟಿಗೆ ಹೋಲಿಸಿಕೊಳ್ಳುವಂತದ್ದು - ನಾವು ಹೆಚ್ಚಿನವರು ಅಥವಾ ನಾವು ಕೀಳಾದವರು, ಎನ್ನುವ ಒಂದು ಭಾವನೆ - ಯಾವಾಗಲೂ ಹಾನಿಕಾರಕವಾದಂಥದ್ದು. ಅಂಥಹ ಹೋಲಿಕೆಗಳು ನಮ್ಮನ್ನು ಗರ್ವಕ್ಕೆ ಅಥವಾ ನಿರುತ್ಸಾಹ ಹಾಗೂ ಹೊಟ್ಟೆಕಿಚ್ಚಿಗೆ ನಡೆಸುತ್ತವೆ. ಕಾಲು ತನ್ನನ್ನು ಕೈಯೊಟ್ಟಿಗೆ ಹೋಲಿಸಿಕೊಳ್ಳಲು ಪ್ರಾರಂಭಿಸಿದರೆ, ಅದು ಈ ರೀತಿಯಾಗಿ ಹೇಳಬಹುದು, "ದೇಹದಲ್ಲಿ ಕೈಗೆ ಇರುವಷ್ಟು ಹೆಚ್ಚಿನ ಮಹತ್ವ ನನಗಿಲ್ಲ. ನಾನು ಸಾಮಾನ್ಯವಾಗಿ ಚಪ್ಪಲಿಯಿಂದ ಮುಚ್ಚಲ್ಪಡುತ್ತೇನೆ, ನಾನು ದೇಹದ ಕೆಳಮಟ್ಟದಲ್ಲಿರುವಂತ ಭಾಗ, ನಾನು ಇರುವಂತದ್ದನ್ನು ಅನೇಕರು ಗುರುತಿಸುವುದು ಸಹ ಇಲ್ಲ. ಅದಲ್ಲದೆ, ಕೈಯನ್ನು ಇತರರು ಪ್ರತಿದಿನ ನೋಡಿ ಗುರುತಿಸುತ್ತಾರೆ. ಕೈ ಯಾವಾಗಲೂ ಏನಾದರೂ ಒಂದನ್ನು ಮಾಡುತ್ತಾ ಚಟುವಟಿಕೆಯಿಂದ ಕೂಡಿರುತ್ತದೆ, ನಾನು ಅಷ್ಟಾಗಿ ಚಟುವಟಿಕೆಯಿಂದ ಕೂಡಿರುವುದಿಲ್ಲ." ಒಂದು ಸಲ ಕಾಲು ತನ್ನನ್ನು ಮತ್ತೊಂದು ಅಂಗಕ್ಕೆ ಹೋಲಿಸಿಕೊಂಡರೆ, ಅದು ನಿರುತ್ಸಾಹದ ಕಡೆಗೆ ಒಂದು ಸಣ್ಣ ಹೆಜ್ಜೆ ಇಟ್ಟಂತೆ ಆಗುತ್ತದೆ; ಮತ್ತು ಅದು ಮುಂದುವರಿದು, ’ನನ್ನನ್ನು ಕೈಯ ಬದಲು ಕಾಲನ್ನಾಗಿ ಮಾಡಿದ್ದೀ’, ಎಂಬುದಾಗಿ ದೇವರನ್ನು ದೂರುವ ಒಂದು ಸ್ವಭಾವ ಬೆಳೆಯಲು ಅವಕಾಶ ನೀಡುತ್ತದೆ. ಇಂತಹ ಆತ್ಮವು ಅನೇಕ ವಿಶ್ವಾಸಿಗಳನ್ನು ತಮ್ಮ ಪ್ರತಿಭೆಯನ್ನು ಹೂಳಿಡುವಂತೆ ಮಾಡುತ್ತದೆ ಮತ್ತು ಕ್ರಿಸ್ತನ ದೇಹಕ್ಕೆ ಏನು ಉತ್ತಮವಾದದ್ದೋ ಮತ್ತು ಬಲಪಡಿಸುವಂತದ್ದೋ ಅದನ್ನು ಮಾಡುವ ಗೋಜಿಗೆ ಹೋಗದಂತೆ ಮಾಡುತ್ತದೆ. ಯೇಸು ಕ್ರಿಸ್ತನ ಸಭೆಯು ಇಂದು ಬಾಧೆ ಪಡುತ್ತಿದೆ, ಏಕೆಂದರೆ ಬಹಳಷ್ಟು ವಿಶ್ವಾಸಿಗಳು ತಮಗೆ ಇನ್ನೂ ಅದ್ಭುತವಾದಂತಹ ವರಗಳು ಇರಬೇಕಾಗಿತ್ತು, ಎಂದು ಬಯಸುತ್ತಿದ್ದಾರೆ. ಅಂತಹ ವರಗಳನ್ನು ಹೊಂದದೇ ಇರುವಂತಹ ಕಾರಣಗಳನ್ನು ಇಟ್ಟುಕೊಂಡು, ಅವರು ಸಭೆಗಾಗಿ ಏನನ್ನು ಮಾಡದಿರುವಂತ ನಿರ್ಧಾರಕ್ಕೆ ಬಂದು ಬಿಡುತ್ತಾರೆ.

ನಾವು ಕ್ರಿಸ್ತನ ದೇಹವು ಹೇಗಿರುತ್ತದೆ ಎನ್ನುವುದನ್ನು ತಿಳಿದುಕೊಂಡಾಗ, ಹೊಟ್ಟೆಕಿಚ್ಚು ಅನ್ನುವಂಥದ್ದಕ್ಕೆ ಸ್ವಲ್ಪವೂ ಜಾಗ ಸಿಗುವುದಿಲ್ಲ. ಮಾನವನ ದೇಹದಲ್ಲಿ, ಕಾಲಿಗೆ ತನ್ನ ಸ್ಥಾನದ ಕುರಿತಾಗಿ ಯಾವ ಸಮಸ್ಯೆಯೂ ಇರುವುದಿಲ್ಲ. ಅದು ತಾನು ಕಾಲು ಆಗಿರದೇ, ಬೇರೆ ಏನೋ ಆಗಬೇಕೆಂಬ ಬಯಕೆಯನ್ನು ಹೊಂದಿರುವುದಿಲ್ಲ ಮತ್ತು ಅದು ಕೈ ಆಗುವಂತ ಕನಸನ್ನು ಕಾಣುವುದಿಲ್ಲ. ಅದು ತಾನು ಕಾಲಾಗಿರುವ ವಿಷಯದಲ್ಲಿ ತೃಪ್ತಿಯನ್ನು ಹೊಂದಿರುತ್ತದೆ. ದೇವರು ತನ್ನನ್ನು ಕಾಲನ್ನಾಗಿ ಮಾಡಿದ್ದರಲ್ಲಿ ಯಾವ ತಪ್ಪನ್ನೂ ಮಾಡಲಿಲ್ಲ ಎಂಬುದಾಗಿ ಕಾಲಿಗೆ ಗೊತ್ತಿದೆ. ಅದು ತಾನು ಕಾಲು ಆಗಿರುವದಕ್ಕಾಗಿ ಹರ್ಷಿಸುತ್ತದೆ; ತಾನು ಕೈಯಂತೆ ಕೆಲಸ ಮಾಡಲಾರೆ ಎಂದು ಅದಕ್ಕೆ ಗೊತ್ತಿದ್ದರೂ ಸಹ, ಕೈ ಮಾಡುವಂತ ಕೆಲಸವನ್ನು ನೋಡಿ ಕಾಲು ಅಷ್ಟೇ ಸಮನಾಗಿ ಹರ್ಷಿಸುತ್ತದೆ. ಅದರಂತೆಯೇ ಯಾರು ಕ್ರಿಸ್ತನ ದೇಹವನ್ನು "ನೋಡಿದ್ದಾರೋ" ಅವರು ಸಹ ಹೀಗೆ ಹರ್ಷಿಸುತ್ತಾರೆ. ನೀವು ಮತ್ತೊಬ್ಬರ ವಿಷಯವಾಗಿ ಅಸೂಯೆಪಟ್ಟಾಗ, ಸಭೆಯಲ್ಲಿರುವಂತ ಮತ್ತೊಬ್ಬ ಸದಸ್ಯನು ದೇವರಿಂದ ಹೆಚ್ಚು ಉಪಯೋಗಿಸಲ್ಪಟ್ಟಾಗ ಆತನ ವಿಷಯವಾಗಿ ನೀವು ಮನ:ಪೂರ್ವಕವಾಗಿ ಸಂತೋಷಿಸದೇ ಇದ್ದಾಗ, ನೀವು ಸತ್ಯವನ್ನು ಇನ್ನೂ ಸಹ ಅರ್ಥ ಮಾಡಿಕೊಂಡಿಲ್ಲ ಎಂಬುದನ್ನು ಅದು ನಿಶ್ಚಿತಪಡಿಸುತ್ತದೆ. ಸಭೆಯಲ್ಲಿರುವಂತ ಯಾವುದೇ ಸದಸ್ಯನು ಶಿರಸ್ಸಿನೊಟ್ಟಿಗೆ (ಕ್ರಿಸ್ತನು) ಬಹಳ ಹತ್ತಿರದ ಸಂಬಂಧವನ್ನು ಹೊಂದಿದ್ದಲ್ಲಿ, ಅವನು ಮತ್ತೊಬ್ಬ ಸದಸ್ಯನಿಗೆ ಸಭೆಯಲ್ಲಿ ಮಾರ್ಯಾದೆ ಸಿಕ್ಕಾಗ ಸಂತೋಷಿಸುತ್ತಾನೆ ಮತ್ತು ಆನಂದಿಸುತ್ತಾನೆ (1 ಕೊರಿಂಥ 12:26).

ಅದಲ್ಲದೆ, ಕ್ರಿಸ್ತನ ದೇಹದಲ್ಲಿ ಇಬ್ಬರು ಸದಸ್ಯರ ಮಧ್ಯೆ ಪೈಪೋಟಿ ಅನ್ನುವಂತದ್ದು ಇರುವುದಿಲ್ಲ. ಸಹಕಾರವಿರುತ್ತದೆ ಹೊರತು ಸ್ಪರ್ಧೆ ಇರುವುದಿಲ್ಲ, ಇದು ದೇಹದ ನಿಯಮ. ಒಬ್ಬನು ಸೇವೆಯನ್ನು ಒಳ್ಳೆಯ ಸಾಮಾರ್ಥ್ಯದೊಂದಿಗೆ ಪೂರೈಸುವುದನ್ನು ನೀವು ನೋಡಿದಾಗ ಮತ್ತು ನೀವು ಅದೇ ಕೆಲಸವನ್ನು ಅಷ್ಟೇ ಉತ್ತಮವಾಗಿ (ಅಥವಾ ಇನ್ನೂ ಚೆನ್ನಾಗಿ) ಮಾಡುತ್ತೀರಿ, ಎಂದು ಜನರ ಎದುರುಗಡೆ ತೋರಿಸಲು ಪ್ರಯತ್ನಿಸಿದಾಗ, ಅದು ಸ್ವಾರ್ಥವು ನಿಮ್ಮ ಜೀವಿತದ ಕೇಂದ್ರ ಸ್ಥಾನದಲ್ಲಿದೆ ಎನ್ನುವುದರ ಸೂಚನೆಯಾಗಿದೆ. ನೀವು ಶಿರಸ್ಸಾದ ಕ್ರಿಸ್ತನಿಗೆ ಅಧೀನರಾಗಿ ಜೀವಿಸುತ್ತಿದ್ದಲ್ಲಿ, ದೇಹದಲ್ಲಿ ಮತ್ತೊಬ್ಬನೊಟ್ಟಿಗೆ ಸ್ಪರ್ಧೆಗೆ ಇಳಿಯುವುದಿಲ್ಲ. ಅದರ ಬದಲಾಗಿ ನೀವು ನಿಮಗೆ ಇರುವಂತ ಕೆಲಸದ ಕಡೆ ಏಕಾಗ್ರತೆ ವಹಿಸುತ್ತೀರಿ - ಮತ್ತು ಆ ಕೆಲಸವನ್ನು ಚೆನ್ನಾಗಿ ಮಾಡುತ್ತೀರಿ. ದೇವರ ಪರಿಪೂರ್ಣ ಜ್ಞಾನದಲ್ಲಿ ನಾವು ವಿಶ್ವಾಸವನ್ನು ಇಟ್ಟರೆ, ನಮಗೆಲ್ಲರಿಗೂ ಏನು ವರವನ್ನು ಕೊಡಬೇಕೆಂದು ದೇವರಿಗೆ ಚೆನ್ನಾಗಿ ಗೊತ್ತಿದೆ ಎಂಬುದನ್ನು ನಾವು ಗ್ರಹಿಸಿಕೊಳ್ಳುತ್ತೇವೆ. ಆಗ ದೂರು ಆಗಲಿ, ನಿರುತ್ಸಾಹವಾಗಲಿ ಮತ್ತು ಮತ್ತೊಬ್ಬರ ವರವನ್ನು ಆಶಿಸುವಂತ ಹೊಟ್ಟೆಕಿಚ್ಚಾಗಲಿ ನಮ್ಮೊಳಗೆ ಇರುವುದಿಲ್ಲ.

ಕ್ರಿಸ್ತನ ದೇಹದಲ್ಲಿ ದೇವರು ನೇಮಿಸಿರುವ ವೈವಿಧ್ಯತೆ ಇದೆ. ದೇವರು ನಮ್ಮ ವಿಧ ವಿಧವಾದ ಮನೋಭಾವಗಳನ್ನು ಮತ್ತು ವರಗಳನ್ನು ಲೋಕಕ್ಕೆ ಕ್ರಿಸ್ತನ ಚಿತ್ರಣವನ್ನು ಸಮತೋಲನದಿಂದ ತೋರಿಸುವ ಸಲುವಾಗಿ ಉಪಯೋಗಿಸುತ್ತಾನೆ. ನಮ್ಮ ಸ್ವಂತ ಸಾಮರ್ಥ್ಯದಿಂದ ಹೆಚ್ಚೆಂದರೆ ಕ್ರಿಸ್ತನ ಒಂದು ಅಸಮತೋಲಿತ ಮತ್ತು ವಿಕೃತವಾದ ಚಿತ್ರಣವನ್ನು ಮಾತ್ರ ಜಗತ್ತಿಗೆ ತೋರಿಸಲು ಸಾಧ್ಯವಾಗಬಹುದು. ಯಾವುದೇ ಒಬ್ಬ ವ್ಯಕ್ತಿಯ ಸೇವೆಯ ಮೂಲಕ ಸಮತೋಲನವಿಲ್ಲದ ಕ್ರೈಸ್ತರನ್ನು ಮಾತ್ರ ಬೆಳೆಸಲು ಸಾಧ್ಯವಾಗಬಹುದು. ಇದೇ ದೇಹಕ್ಕೆ ಸೇರಿದ ಇತರರು ಬೇರೆ ಬೇರೆ ರೀತಿಯಲ್ಲಿ ಮತ್ತು ಬೇರೆ ಬೇರೆ ಆದ್ಯತೆಯುಳ್ಳ ಕೆಲಸಗಳಲ್ಲಿ ತೊಡಗಿದ್ದಾರೆ, ಎನ್ನುವುದಕ್ಕಾಗಿ ನಾವು ಎಷ್ಟು ಕೃತಜ್ಞರಾಗಿರಬೇಕು.