WFTW Body: 

ಕ್ರೈಸ್ತತ್ವದ ಮೊದಲಿನ 300 ವರ್ಷಗಳಲ್ಲಿ, ಹೆಚ್ಚಿನ ಕ್ರೈಸ್ತರು ಕ್ರಿಸ್ತ-ವಿರೋಧಿ ಅಧಿಪತಿಗಳ ಕೈಕೆಳಗೆ ಜೀವಿಸಿ, ಪದೇಪದೇ ಹಿಂಸೆಗೆ ಗುರಿಯಾದರು ಮತ್ತು ಅವರಲ್ಲಿ ಅನೇಕರು ಕೊಲ್ಲಲ್ಪಟ್ಟರು. ದೇವರು ತನ್ನ ಅಪಾರ ಜ್ಞಾನದ ಮೂಲಕ, ತನ್ನ ಮಕ್ಕಳು ತನ್ನ ಮಹಿಮೆಗಾಗಿ ಜನರಿಂದ ಹಿಂಸೆಗೆ ಒಳಗಾಗುವುದನ್ನು ಅನುಮತಿಸಿದರು. ಈ ದಿನವೂ ಸಹ, ದೇವರ ಅತಿ ಶ್ರೇಷ್ಠ ಮಕ್ಕಳಲ್ಲಿ ಕೆಲವರು ಹಿಂಸಿಸುವ ಸರ್ಕಾರಗಳ ಅಳ್ವಿಕೆಯ ಅಡಿಯಲ್ಲಿ ಜೀವಿಸುವುದನ್ನು ದೇವರು ಅನುಮತಿಸಿದ್ದಾರೆ. ಕ್ರೈಸ್ತಸಭೆಯು ಯಾವಾಗಲೂ ಹಿಂಸೆಯ ವಾತಾವರಣದಲ್ಲಿ ಬಹಳ ಚೆನ್ನಾಗಿ ಬೆಳೆದಿದೆ. ಆದರೆ ನೆಮ್ಮದಿ ಹಾಗೂ ಸುಖ-ಸೌಲಭ್ಯಗಳು ಹೆಚ್ಚಿದಾಗ, ಅನೇಕ ಸಲ ಸಭೆಯಲ್ಲಿ ಲೌಕಿಕತೆಯು ಹೆಚ್ಚುತ್ತದೆ. ನಾವು ಈ ಲೋಕದಲ್ಲಿ ಇರುವಷ್ಟು ದಿನ ಸಂಕಟ, ಹಿಂಸೆ ಮತ್ತು ಶೋಧನೆಗಳು ನಮ್ಮನ್ನು ಎದುರಿಸುತ್ತವೆ. ಹಾಗಾಗಿ ನಾವು ಯುಗದ ಸಮಾಪ್ತಿಯನ್ನು ಸಮೀಪಿಸುತ್ತಿರುವಾಗ - ನಮ್ಮ ಕಛೇರಿಗಳಲ್ಲಿ, ಕೆಲಸ ಮಾಡುವಂತ ಸ್ಥಳದಲ್ಲಿ ಅಥವಾ ನಮ್ಮ ಖಾಸಗಿ ಜೀವನದಲ್ಲಿ - ಆರಾಮದಾಯಕ ಜೀವನವನ್ನು ನಿರೀಕ್ಷಿಸುವುದು ಸರಿಯಲ್ಲ.

ಇನ್ನು ಮುಂದೆ ಹಣಕಾಸಿನ ತೊಂದರೆಗಳು ಬರಲಿವೆ. ಹಾಗಾಗಿ ನಾವು ಈಗಲೇ ಸರಳ ಜೀವನವನ್ನು ಅಭ್ಯಾಸ ಮಾಡಬೇಕು. ಆರಾಮದ ಜೀವನವನ್ನು ಜೀವಿಸುವವರಿಗೆ ಮುಂದಿನ ದಿನಗಳಲ್ಲಿ ನಡೆಯಲಿರುವ ಸಂಗತಿಗಳು ಬಹಳ ಕಷ್ಟಕರ ಎನಿಸಲಿವೆ. ಭವಿಷ್ಯಕ್ಕಾಗಿ ಹಣದ ಉಳಿತಾಯ ಮಾಡುವಂತ ಜಾಣತನ ನಮ್ಮಲ್ಲಿ ಇರಬೇಕು ಮತ್ತು ಹಾಗೆ ಮಾಡುವುದರಿಂದ ನಾವು ಇತರರನ್ನು ಅವಲಂಬಿಸಬೇಕಿಲ್ಲ. ಆದರೆ ನಮ್ಮ ಭರವಸೆಯನ್ನು ನಮ್ಮ ಉಳಿತಾಯದ ಮೇಲೆ ಇರಿಸದೆ, ಕೇವಲ ಕರ್ತನಲ್ಲಿ ಇರಿಸಬೇಕು. ದೇವರು ತನಗೆ ಸಲ್ಲಬೇಕಾದ ಗೌರವವನ್ನು ಇತರರಿಗೆ ಬಿಟ್ಟುಕೊಡುವುದಿಲ್ಲ ಮತ್ತು ನಾವು ಯಾವುದೇ ಸೃಷ್ಟಿಸಲ್ಪಟ್ಟ ವಸ್ತುವಿನ ಮೇಲೆ ಭರವಸೆ ಇಡುವುದನ್ನು ಅವರು ಎಂದಿಗೂ ಅನುಮತಿಸುವುದಿಲ್ಲ. ದೇವರು ಈ ಲೋಕದ ಹಣಕಾಸಿನ ಪ್ರಪಂಚವನ್ನು ನಡುಗಿಸಲಿದ್ದಾರೆ, ಏಕೆಂದರೆ ಹಾಗೆ ಮಾಡುವುದರಿಂದ ಸೃಷ್ಟಿಸಿದ ಸಂಗತಿಗಳನ್ನು ಅವಲಂಬಿಸುವ ಜನರು ಕದಲಿಸಲ್ಪಡುತ್ತಾರೆ.

ಯೇಸುವು ಹೇಳಿದಂತೆ, ಅಣ್ಣನು ತಮ್ಮನ ವಿರುದ್ಧ ತಿರುಗಿಬೀಳುವುದನ್ನು ಮತ್ತು ನಮ್ಮ ಸ್ವಂತ ಜನರು ನಮ್ಮ ವೈರಿಗಳಾಗುವುದನ್ನು ನಾವು ನೋಡಲಿದ್ದೇವೆ (ಮತ್ತಾ. 10:21). ವಿಶ್ವಾಸಿಗಳು ಕಛೇರಿಗಳಲ್ಲಿ ಮತ್ತು ಕಾರ್ಖಾನೆಗಳಲ್ಲಿ ತೀವ್ರ ಹಿಂಸೆಗೆ ಒಳಗಾಗಲಿದ್ದಾರೆ. ಇವೆಲ್ಲಾ ಸಂಗತಿಗಳು ನಮ್ಮನ್ನು ಶುದ್ಧೀಕರಿಸಿ, ಉತ್ತಮ ಕ್ರೈಸ್ತರನ್ನಾಗಿ ಮಾಡುತ್ತವೆ. 1 ಪೇತ್ರ. 3:13ರಲ್ಲಿ ಹೇಳಿರುವಂತೆ, ನಾವು ಯಾವಾಗಲೂ ಒಳ್ಳೆಯದನ್ನೇ ಮಾಡುವುದರಲ್ಲಿ ಆಸಕ್ತರಾಗಿದ್ದರೆ, ನಮಗೆ ಯಾರೂ ಕೇಡು ಮಾಡಲಾರರು. ಹಾಗಾಗಿ, ನಾವು ದೇವರ ಕೃಪೆಯ ಮೂಲಕ, ಪ್ರತಿಯೊಬ್ಬ ಮನುಷ್ಯನಿಗೆ ಒಳ್ಳೆಯದನ್ನೇ ಮಾಡುವ ದೃಢ ನಿರ್ಧಾರ ಮಾಡಬೇಕು. ನಾವು ನಮ್ಮನ್ನು ದ್ವೇಷಿಸುವವರನ್ನು ಪ್ರೀತಿಸಬೇಕು, ನಮ್ಮನ್ನು ಶಪಿಸುವವರನ್ನು ಆಶೀರ್ವದಿಸಬೇಕು ಮತ್ತು ನಮ್ಮನ್ನು ಹಿಂಸೆಪಡಿಸುವವರ ತಪ್ಪುಗಳು ಕ್ಷಮಿಸಲ್ಪಡಲಿಕ್ಕಾಗಿ ಪ್ರಾರ್ಥಿಸಬೇಕು. ಹಾಗೆ ಮಾಡಿದಾಗ ಯಾರೂ ನಮಗೆ ಕೇಡು ಮಾಡಲಾರರು. ಸೈತಾನ ಮತ್ತು ಆತನ ದಲ್ಲಾಳಿಗಳು ನಮಗೆ ಮೋಸ ಮಾಡಬಹುದು, ತೊಂದರೆ ಕೊಡಬಹುದು, ನಮ್ಮನ್ನು ಪೀಡಿಸಬಹುದು, ಸುಲಿಗೆ ಮಾಡಬಹುದು, ಗಾಯಗೊಳಿಸಬಹುದು, ಸೆರೆಮನೆಗೆ ಹಾಕಬಹುದು ಮತ್ತು ನಮ್ಮ ದೇಹಗಳನ್ನು ಕೊಲ್ಲಲೂ ಬಹುದು. ಆದರೆ ಅವರು ’ಆತ್ಮಿಕವಾಗಿ ನಮಗೆ ಯಾವ ಹಾನಿಯನ್ನೂ ಉಂಟುಮಾಡಲು ಸಾಧ್ಯವಿಲ್ಲ’.

ಜಗತ್ತಿನಾದ್ಯಂತ ಕ್ರೈಸ್ತರು ತಮ್ಮ ನಂಬಿಕೆಗಾಗಿ ಹಿಂಸಿಸಲ್ಪಡುವದಕ್ಕೆ ನಾವು ಅವರನ್ನು ಸಿದ್ಧಗೊಳಿಸಬೇಕು. ಇಂತಹ ದಿನಗಳಿಗಾಗಿ ನಮ್ಮ ಕರ್ತನು ನಮಗೆ ನಾಲ್ಕು ಆಜ್ಞೆಗಳನ್ನು ಕೊಟ್ಟಿದ್ದಾನೆ:

1. "ಸರ್ಪಗಳಂತೆ ಜಾಣರೂ, ಪಾರಿವಾಳಗಳಂತೆ ನಿಷ್ಕಪಟಿಗಳೂ ಆಗಿರಿ" (ಮತ್ತಾ. 10:16).

ನಾವು ಅವಿವೇಕಿಗಳಂತೆ ಸಾಕ್ಷಿ ಕೊಡಬಾರದು, ಆದರೆ ಜಾಣರಾಗಿರಬೇಕು. ನಮ್ಮ ನೆರೆಹೊರೆಯ ಪರಿಸರದಲ್ಲಿ ಮತ್ತು ಕೆಲಸದ ಜಾಗದಲ್ಲಿ ನಾವು ಜೀವಿಸುವ ರೀತಿಯು ಕ್ರಿಸ್ತನ ಪರವಾಗಿ ಮಾತನಾಡಬೇಕು. ನಾವು ಕರ್ತನ ಬಗ್ಗೆ ಸಾಕ್ಷಿ ನೀಡುವಾಗ, ’ನಾವು ಒಬ್ಬ ವ್ಯಕ್ತಿಯ ಕುರಿತಾಗಿ - ಯೇಸು ಕ್ರಿಸ್ತನ ಬಗ್ಗೆ - ಪ್ರಸ್ತಾಪಿಸುತ್ತೇವೆ ಮತ್ತು ಕ್ರೈಸ್ತ ಧರ್ಮವು ಇತರ ಧರ್ಮಗಳ ಹೋಲಿಕೆಯಲ್ಲಿ ಶ್ರೇಷ್ಠವಾದದ್ದು ಎಂದು ಹೇಳುವುದಿಲ್ಲ’, ಎಂಬುದು ಸ್ಪಷ್ಟವಾಗಿ ಕಂಡುಬರಬೇಕು. ’ಯೇಸುವು ಮೇಲಕ್ಕೆ ಎತ್ತಲ್ಪಟ್ಟರೆ, ಎಲ್ಲಾ ಜನರನ್ನು ತನ್ನ ಬಳಿಗೆ ಸೆಳೆಯುವನು’ (ಯೋಹಾ. 12:32).

ಇನ್ನೊಂದು ವಿಷಯ, ಕ್ರೈಸ್ತತ್ವದಲ್ಲಿ ಆಸಕ್ತಿ ಇರುವಂತೆ ನಟನೆ ಮಾಡುವಂತ ಕ್ರೈಸ್ತರಲ್ಲದ ಗುಪ್ತಚರರ ಬಗ್ಗೆ ನಾವು ಸೂಕ್ಷ್ಮವಾದ ವಿವೇಚನೆಯನ್ನು ಹೊಂದಿ ಎಚ್ಚರಿಕೆ ವಹಿಸಬೇಕು, ಯಾಕೆಂದರೆ ಅವರ ನಿಜವಾದ ಉದ್ದೇಶ ನಾವು ಆಡುವ ಯಾವುದೋ ಮಾತನ್ನು ನಮ್ಮ ವಿರುದ್ಧವಾಗಿ ಉಪಯೋಗಿಸಿಕೊಂಡು, "ಬಲಾತ್ಕಾರದಿಂದ ಮತಾಂತರ ಮಾಡಲು ಪ್ರಯತ್ನಿಸುತ್ತಿದ್ದಾರೆ," ಎಂಬ ಆಪಾದನೆಯ ಮೂಲಕ ನಮ್ಮನ್ನು ನ್ಯಾಯಾಲಯಕ್ಕೆ ಎಳೆಯುವುದೇ ಆಗಿರುತ್ತದೆ. ಹಾಗಾಗಿ ನಾವು - ಯೇಸುವಿನಂತೆ - ಜಾಣರಾಗಿಯೂ, ಪ್ರೀತಿಯುಳ್ಳವರಾಗಿಯೂ ಇರಬೇಕು: (ಅ) "ಯೇಸುವು ಎಲ್ಲರನ್ನೂ ಬಲ್ಲವನಾದ್ದರಿಂದ ಅವರಿಗೆ ವಶವಾಗಲಿಲ್ಲ. ಆತನು ಪ್ರತಿಯೊಬ್ಬ ಮನುಷ್ಯನ ಆಂತರ್ಯವನ್ನು ತಿಳಿದವನಾಗಿದ್ದನು" (ಯೋಹಾ. 2:24-25). ಪ್ರತಿಯೊಬ್ಬನನ್ನು ವಿವೇಚಿಸಿ ನೋಡಿರಿ. (ಆ) "ಯೆಹೂದ್ಯರು ಯೇಸುವನ್ನು ಕೊಲ್ಲುವ ಪ್ರಯತ್ನದಲ್ಲಿ ಇದ್ದುದರಿಂದ, ಆತನಿಗೆ ಯೂದಾಯದಲ್ಲಿ ಸಂಚಾರಮಾಡುವ ಮನಸ್ಸಿರಲಿಲ್ಲ" (ಯೋಹಾ. 7:1). ಅನಾವಶ್ಯಕ ಅಪಾಯದಿಂದ ದೂರವಿರಿ. (ಇ) "ನಿಮ್ಮನ್ನು ಹಿಂಸೆ ಪಡಿಸುವವರಿಗೋಸ್ಕರ ದೇವರನ್ನು ಪ್ರಾರ್ಥಿಸಿರಿ" (ಮತ್ತಾ. 5:44). ನೀವು ಒಳ್ಳೆಯವರಾಗಿರಿ - ಅನ್ಯರ ಕೆಟ್ಟ ನಡವಳಿಕೆಗೆ ಪ್ರತಿಯಾಗಿ ನೀವು ಕೆಟ್ಟದಾಗಿ ನಡೆಯಬೇಡಿರಿ.

2. "ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕಿರಿ" (ಮತ್ತಾ. 4:4).

ಹಿಂಸೆಯ ಸಮಯದಲ್ಲಿ ಬಹಳ ಮುಖ್ಯವಾದ ಅವಶ್ಯಕತೆ ಏನೆಂದರೆ, ದೇವರು ನಮ್ಮ ಹೃದಯಗಳಿಗೆ ಹೇಳುತ್ತಿರುವ ಮಾತಿಗೆ ಹೆಚ್ಚಿನ ಗಮನ ಕೊಡುವುದು. ನಾವು ದಿನವಿಡೀ ದೇವರ ಮಾತನ್ನು ಕೇಳಿಸಿಕೊಳ್ಳುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಇದರ ನಂತರ, ನಾವು ದೇವರಿಂದ ಪಡೆದ ಮಾತನ್ನು ’ನಂಬಬೇಕು ಮತ್ತು ಪಾಲಿಸಬೇಕು’. ಹಾಗೆ ಮಾಡದಿದ್ದರೆ ದೇವರ ಮಾತಿಗೆ ಬೆಲೆ ಇರುವುದಿಲ್ಲ. ಹಾಗಾಗಿ ನಾವು ದೇವರ ವಾಕ್ಯವನ್ನು (ವಿಶೇಷವಾಗಿ ಹೊಸ ಒಡಂಬಡಿಕೆಯನ್ನು) ಹೆಚ್ಚಾಗಿ ಧ್ಯಾನಿಸಬೇಕು - ಹಾಗೆ ಮಾಡಿದಾಗ ಮಾತ್ರವೇ ದೇವರ ಧ್ವನಿಯನ್ನು ಗುರುತಿಸುವ ವಿವೇಚನೆ ನಮ್ಮಲ್ಲಿ ಉಂಟಾಗುತ್ತದೆ ಮತ್ತು ಇದರ ನಂತರ, ಅದನ್ನು ನಾವು "ನಂಬಬೇಕು ಮತ್ತು ಪಾಲಿಸಬೇಕು".

3. "ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು. ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ, ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು" (ಯೋಹಾ. 13:34-35).

ನಮ್ಮ ಮನೆಯಲ್ಲಿ ಮತ್ತು ನಮ್ಮ ಸಭೆಗಳಲ್ಲಿ, ನಾವು ಒಬ್ಬರನ್ನೊಬ್ಬರು ನ್ಯಾಯತೀರ್ಪು ಮಾಡುವುದನ್ನು, ಒಬ್ಬರ ವಿರುದ್ಧ ಇನ್ನೊಬ್ಬನು ಚಾಡಿ ಹೇಳುವುದನ್ನು, ನಮ್ಮ ನಡುವಿನ ಜಗಳಗಳನ್ನು ಮತ್ತು ಎಲ್ಲಾ ರೀತಿಯ ಸಂಶಯಗಳನ್ನು ತೆಗೆದುಹಾಕಬೇಕು. ವಿವೇಚನೆಯು ಒಂದು ದೈವಿಕ ಗುಣವಾಗಿದೆ, ಆದರೆ ಸಂಶಯವು ಸೈತಾನನ ಗುಣವಾಗಿದೆ. ಈಗಿನ ಸಮಯ ನಮ್ಮ ಜೀವಿತಗಳಲ್ಲಿ, ಪಾಪ ಮತ್ತು ಸೈತಾನನ ವಿರೋಧವಾಗಿ ಹೋರಾಡುವ ಸಮಯವಾಗಿದೆ. ಈಗಿನ ಸಮಯ ನಾವು ನಮ್ಮ ಜೀವನ-ಸಂಗಾತಿಯನ್ನು ಮತ್ತು ನಮ್ಮ ಸಹ-ವಿಶ್ವಾಸಿಗಳನ್ನು ಯಥಾರ್ಥವಾಗಿ ಪ್ರೀತಿಸುವ ಸಮಯವಾಗಿದೆ.

4. "ಲೋಕದಲ್ಲಿ ನಿಮಗೆ ಸಂಕಟ ಉಂಟು; ಆದರೆ ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ" (ಯೋಹಾ. 16:33).

ದೇವರು ಸಿಂಹಾಸನದಲ್ಲಿ ಕೂತಿದ್ದಾರೆ ಮತ್ತು ಅವರು ತಮ್ಮ ಸ್ವಂತ ಜನರನ್ನು ಎಂದಿಗೂ ಕೈಬಿಡುವುದಿಲ್ಲ. ಸೈತಾನನು 2000 ವರ್ಷಗಳ ಹಿಂದೆ ಸೋಲಿಸಲ್ಪಟ್ಟನು. ನಾವು ದೇವರ ಕಣ್ಣುಗುಡ್ಡೆಗಳಂತೆ ಇದ್ದೇವೆ, ಹಾಗಾಗಿ ಅವರು ನಮ್ಮ ಸುತ್ತಲು ಅಗ್ನಿಯ ಗೋಡೆಯಂತೆ ಇರುತ್ತಾರೆ (ಜೆಕ. 2:5,8). ನಮ್ಮನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು (ಯೆಶಾ. 54:17). ಹಾಗಾಗಿ ನಾವು, "ನಮಗಿರುವುದರಲ್ಲಿ ತೃಪ್ತರಾಗಿ ಇರೋಣ, ಏಕೆಂದರೆ ಸ್ವತಃ ದೇವರು ಹೇಳಿರುವ ಮಾತು ಏನೆಂದರೆ, ’ನಾನು ನಿನ್ನನ್ನು ಎಂದಿಗೂ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ’. ಹಾಗಾಗಿ ನಾವು ಧೈರ್ಯವಾಗಿ ಹೇಳಬಹುದಾದ ಮಾತು, ’ಕರ್ತನು ನನ್ನ ಸಹಾಯಕನು. ನಾನು ಭಯಪಡೆನು. ಮನುಷ್ಯನು ನನಗೆ ಏನು ಮಾಡಾನು?’" (ಇಬ್ರಿ. 13:5,6).

ಹಾಗಾಗಿ ನಾವು ಸಹ ಹೀಗೆ ಪ್ರಾರ್ಥಿಸೋಣ, "ಕರ್ತನಾದ ಯೇಸುವೇ, ಬೇಗ ಬಾ" (ಪ್ರಕ. 22:20).