WFTW Body: 

ಯೋನನು 3:2'ರಲ್ಲಿ ಹೀಗೆ ಬರೆಯಲ್ಪಟ್ಟಿದೆ, "ಅನಂತರ ಕರ್ತನು ಯೋನನಿಗೆ ಎರಡನೆಯ ಸಲ ಅಪ್ಪಣೆ ಮಾಡಿದನು". ನಾವು ಒಂದು ಸಲ ತಪ್ಪು ಮಾಡಿದಾಗ, ನಮಗೆ ಮತ್ತೊಂದು ಅವಕಾಶವನ್ನು ನೀಡುವ ಕರ್ತರಿಗೆ ನಾವು ಸ್ತೋತ್ರ ಸಲ್ಲಿಸಬೇಕು. ನಮಗೆ ಯೋನನ ಗ್ರಂಥದಲ್ಲಿ ಸಿಗುವ ಶ್ರೇಷ್ಠ ಸಂದೇಶಗಳಲ್ಲಿ ಇದೂ ಒಂದಾಗಿದೆ. ಕರ್ತರ ಆದೇಶವನ್ನು ನೀವು ಅಲ್ಲಗಳೆದಿದ್ದೀರಾ? ದೇವರು ನಿಮಗೆ ಇನ್ನೊಂದು ಅವಕಾಶವನ್ನು ನೀಡಲು ಕಾತುರರಾಗಿದ್ದಾರೆ. ನೀವು ಎರಡನೆಯ ಸಲ ಕರ್ತರನ್ನು ಅಲ್ಲಗಳೆದಿದ್ದೀರಾ? ಅವರು ನಿಮಗೆ ಮೂರನೆಯ ಅವಕಾಶವನ್ನು ಕೊಡುತ್ತಾರೆ. ಅವರು ಕೇವಲ ಎರಡು ಅವಕಾಶಗಳನ್ನು ಕೊಡುವ ದೇವರಲ್ಲ - ಏಕೆಂದರೆ ನಾವು ಬಹಳ ಹಿಂದೆಯೇ ಎರಡನೆಯ ಅವಕಾಶವನ್ನು ಹಾಳು ಮಾಡಿಕೊಂಡಿದ್ದೇವೆ. ನೀವು ಎಷ್ಟು ಅವಕಾಶಗಳನ್ನು ಪೋಲು ಮಾಡಿದ್ದರೂ, ಅವರು ಮತ್ತೊಂದು ಅವಕಾಶ ಕೊಡುವಂತ ದೇವರಾಗಿದ್ದಾರೆ! ಈಗಲೂ ಸಹ ನೀವು ಹಿಂದಿನ ತಪ್ಪುಗಳಿಗಾಗಿ ಪೂರ್ಣ ಹೃದಯದಿಂದ ಪಶ್ಚಾತ್ತಾಪ ಪಟ್ಟರೆ, ಕರ್ತರು ನಿಮ್ಮಲ್ಲಿ ಉಜ್ಜೀವನವನ್ನು ಉಂಟುಮಾಡಿ, ಅವರಿಗಾಗಿ ನೀವು ಒಂದು ಸೇವೆಯನ್ನು ಕೈಗೊಳ್ಳುವಂತೆ ನಿಮ್ಮನ್ನು ಬಲಪಡಿಸಲು ಶಕ್ತರಾಗಿದ್ದಾರೆ.

ಯೋನನು, 40 ದಿನಗಳಲ್ಲಿ ನಿನೆವೆ ಪಟ್ಟಣವು ಕೆಡವಲ್ಪಡುತ್ತದೆ ಎಂಬುದಾಗಿ ಆ ದೊಡ್ಡ ಪಟ್ಟಣದ ಪ್ರತಿಯೊಂದು ಬೀದಿಯಲ್ಲಿ ನಡೆದು ಸಾರುವುದಕ್ಕೆ ಮೂರು ದಿನಗಳು ಬೇಕಾದವು. ಆಶ್ಚರ್ಯಕರ ವಿಷಯವೆಂದರೆ, ನಿನೆವೆಯ ನಿವಾಸಿಗಳು ಒಡನೆಯೇ ಪಶ್ಚಾತ್ತಾಪ ಪಟ್ಟರು. ಜಗತ್ತಿನ ಇತಿಹಾಸದ ಅತಿ ದೊಡ್ಡ ಮತ್ತು ಅತಿ ಶೀಘ್ರವಾಗಿ ಉಂಟಾದ ಉಜ್ಜೀವನ ಇದಾಗಿತ್ತು. ಇದರಲ್ಲಿ ನನಗೆ ಉತ್ತೇಜನ ನೀಡುವ ಒಂದು ಅಂಶ, ಒಂದು ದುಷ್ಟ ನಗರವಾಗಿದ್ದ ನಿನೆವೆಯೂ ಸಹ ಪಶ್ಚಾತ್ತಾಪ ಪಟ್ಟಾಗ, ದೇವರು ಅದಕ್ಕೆ ಕರುಣೆಯನ್ನು ತೋರಿಸಿದರು. ಮುಂದೆ ಕೆಲವು ವರ್ಷಗಳ ನಂತರ ಈ ಪಟ್ಟಣದ ದುಷ್ಟತೆ ಅತಿಯಾದಾಗ, ತಾನು ಅದನ್ನು ನಾಶಗೊಳಿಸ ಬೇಕಾಗುತ್ತದೆ ಎಂಬುದನ್ನು ದೇವರು ಮೊದಲೇ ತಿಳಿದಿದ್ದರು. ಆದರೆ ದೇವರು ಪ್ರತಿಯೊಬ್ಬ ಮನುಷ್ಯನು ಈ ಕ್ಷಣದಲ್ಲಿ ಹೇಗೆ ನಡೆಯುತ್ತಾನೆ ಎಂಬುದಕ್ಕೆ ತಕ್ಕಂತೆ ಅವನೊಂದಿಗೆ ವ್ಯವಹರಿಸುತ್ತಾರೆ - ಅವನು ಹಿಂದೆ ಹೇಗಿದ್ದನು ಅಥವಾ ಅವನು ಮುಂದೆ ಹೇಗಿರುತ್ತಾನೆ ಎಂಬುದಕ್ಕೆ ತಕ್ಕಂತೆ ಅಲ್ಲ. ದೇವರ ಹೆಸರು "ಇರುವಾತನು" ಎಂಬುದಾಗಿದೆ, "ಹಿಂದೆ ಇದ್ದಾತನು" ಅಥವಾ "ಮುಂದೆ ಇರುವವನು" ಎಂಬುದಾಗಿ ಅಲ್ಲ. ದೇವರು ನಮಗಿಂತ ಹೆಚ್ಚು ದಯಾಶೀಲರಾಗಿದ್ದಾರೆ.

ದೇವರು ನಿನೆವೆಗೆ ಕರುಣೆ ತೋರಿಸಿದಾಗ, ಯೋನನು ಸಂತೋಷದಿಂದ ಬಹಳ ಹರ್ಷಿಸುತ್ತಾನೆಂದು ನಾವು ಅಂದುಕೊಳ್ಳಬಹುದು. ಆದರೆ ಆತನು ಹರ್ಷಿಸಲಿಲ್ಲ. ಯೋನನಿಗೆ ಒಂದು ಪಾಠ ಕಲಿಸಲಿಕ್ಕಾಗಿ, ಕರ್ತರು ಅವನ ತಲೆಗೆ ನೆರಳಾಗಿರುವಂತೆ ಒಂದು ಸೋರೆ ಗಿಡವನ್ನು ಹಬ್ಬಿಸಿದರು. ನೆರಳಾಗಿ ಹಬ್ಬಿದ ಆ ಗಿಡದಿಂದ ಯೋನನಿಗೆ ಬಹಳ ಸಂತೋಷವಾಯಿತು. ದೇವರು ಮರುದಿನ ಬೆಳಿಗ್ಗೆ ಆ ಗಿಡವನ್ನು ತಿನ್ನುವಂತೆ ಒಂದು ಹುಳಕ್ಕೆ ಆಜ್ಞಾಪಿಸಿದರು, ಮತ್ತು ಆಗ ಆ ಗಿಡ ಒಣಗಿಹೋಯಿತು. ಇದರಿಂದ ಯೋನನು ಮತ್ತೊಮ್ಮೆ ಬಹಳ ಸಿಟ್ಟಾದನು ಮತ್ತು "ಬದುಕುವುದಕ್ಕಿಂತ ಸಾಯುವುದೇ ಲೇಸು," ಎಂದು ಹೇಳಿದನು. ಆಗ ದೇವರು ಯೋನನಿಗೆ, "ಆ ಗಿಡವು ಒಂದು ರಾತ್ರಿಯಲ್ಲಿ ಹುಟ್ಟಿ ಒಂದು ರಾತ್ರಿಯಲ್ಲಿ ನಾಶವಾಯಿತು; ಇಂಥ ಗಿಡಕ್ಕಾಗಿ ನೀನು ಕನಿಕರ ಪಟ್ಟಿರುವಲ್ಲಿ, ಎಡಗೈ ಬಲಗೈ ತಿಳಿಯದ ಒಂದು ಲಕ್ಷ ಇಪ್ಪತ್ತು ಸಾವಿರ ನರಪ್ರಾಣಿಗಳೂ ಬಹು ಪಶುಗಳೂ ಉಳ್ಳ ಆ ದೊಡ್ಡ ಪಟ್ಟಣವಾದ ನಿನೆವೆಗಾಗಿ ನಾನು ಕನಿಕರ ಪಡಬಾರದೋ?" ಎಂದು ಕೇಳಿದರು (ಯೋನ. 4:10-11).

ನಮಗೆ ವಚನ ಯೋನನು 4:11'ರಲ್ಲಿ - ಹಳೆಯ ಒಡಂಬಡಿಕೆಯ ಬೇರೆ ಯಾವುದೇ ವಚನಕ್ಕಿಂತ ಹೆಚ್ಚಾಗಿ - ಕಳೆದುಹೋದ ಜನರಿಗಾಗಿ ದೇವರಲ್ಲಿರುವ ಅನುಕಂಪ ಕಾಣಿಸುತ್ತದೆ. ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು, ತನ್ನನ್ನು ನಂಬುವ ಒಬ್ಬನೂ ನಾಶವಾಗದೆ ನಿತ್ಯಜೀವವನ್ನು ಪಡೆಯಬೇಕೆಂದು, ತನ್ನ ಒಬ್ಬನೇ ಮಗನನ್ನು ಲೋಕಕ್ಕಾಗಿ ಕೊಟ್ಟರು. ಆದರೂ ಯೋನನು ಈ ವಿಚಾರದಲ್ಲಿ ದೇವರೊಂದಿಗೆ ಅನ್ಯೋನ್ಯತೆಯನ್ನು ಹೊಂದಿರಲಿಲ್ಲ. ಈ ದಿನವೂ ಸಹ ಅನೇಕ ಕ್ರೈಸ್ತ ಬೋಧಕರು ಬೋಧನೆ ಮಾಡುತ್ತಾರೆ ಮತ್ತು (ಯೋನನ ಹಾಗೆ) ಉಜ್ಜೀವನಕ್ಕೆ ಕಾರಣರಾಗುತ್ತಾರೆ, ಆದರೆ ಯೋನನಂತೆ ಅವರಲ್ಲೂ ಸಹ, ದೇವರ ಅನುಕಂಪವುಳ್ಳ ಹೃದಯದೊಟ್ಟಿಗೆ ಅನ್ಯೋನ್ಯತೆ ಇರುವುದಿಲ್ಲ. ಇಂತಹ ಬೋಧಕರು ತಮ್ಮ ಸೇವಾಕಾರ್ಯವನ್ನು ದೇವರ ಚಿತ್ತದಂತೆ ಮುಕ್ತಾಯ ಗೊಳಿಸುವುದಿಲ್ಲ. ನೀವು ವಾಕ್ಯವನ್ನು ಬೋಧಿಸಿ ಜನರನ್ನು ರಕ್ಷಣೆಗೆ ನಡೆಸಬಹುದು; ಆದಾಗ್ಯೂ ಯೋನನಂತೆ, ನೀವು ದೇವರೊಂದಿಗೆ ಯಾವುದೇ ಅನ್ಯೋನ್ಯತೆಯನ್ನು ಹೊಂದದೇ ಇರಬಹುದು. ದೇವರ ಹೃದಯದೊಂದಿಗೆ ಇರುವ ಅನ್ಯೋನ್ಯತೆಯು, ಸುವಾರ್ತಾ ಸೇವೆಗೆ ಯೋಗ್ಯವಾದ ಒಂದು ಮೂಲಾಧಾರವಾಗಿದೆ. ದೇವರು ಬೆಳಕನ್ನು ಕಾಣದಿರುವ ಜನರಿಗಾಗಿ ಬಹಳ ಹೆಚ್ಚು ಕರುಣೆ ಉಳ್ಳವರಾಗಿದ್ದಾರೆ. ಸತ್ಯವೇದ ತಿಳಿಸುವಂತೆ, ಎಲ್ಲಾ ಮನುಷ್ಯರು ಪಶ್ಚಾತ್ತಾಪ ಪಟ್ಟು ರಕ್ಷಣೆ ಹೊಂದಿ, ಸತ್ಯದ ಜ್ಞಾನಕ್ಕೆ ಸೇರಬೇಕೆಂಬುದು ದೇವರ ಚಿತ್ತವಾಗಿದೆ(1 ತಿಮೋಥೆ. 2:4). ಇದಕ್ಕಾಗಿ ಅವರು ಬಹಳ ಹಂಬಲಿಸುತ್ತಾರೆ. ನಾವು ಈ ವಿಷಯದಲ್ಲಿ ದೇವರ ಹೃದಯದೊಂದಿಗೆ ಹೆಚ್ಚುಹೆಚ್ಚಾಗಿ ಅನ್ಯೋನ್ಯತೆಯನ್ನು ಹೊಂದುವಾಗ, ಹೆಚ್ಚು ಹೆಚ್ಚಾಗಿ ಅವರ ಹೃದಯದ ಭಾರವನ್ನು ನಾವು ಹೊಂದುತ್ತೇವೆ. ದೇವರು ನಿಮ್ಮನ್ನು ಒಬ್ಬ ಸುವಾರ್ತಿಕನಾಗಿ ಕರೆದಿದ್ದರೆ, ಅವರು ಕಳೆದು ಹೋಗಿರುವ ಜೀವಗಳಿಗಾಗಿ ಅನುಕಂಪವನ್ನು ನಿಮಗೆ ಕೊಡುತ್ತಾರೆ. ದೇವರು ನಿಮ್ಮನ್ನು ಒಬ್ಬ ಶಿಕ್ಷಕನಾಗಿ ಕರೆದಿದ್ದರೆ, ಕುರುಡರಾಗಿ ವಂಚಿಸಲ್ಪಟ್ಟು ಜಯದ ಜೀವಿತಕ್ಕೆ ಸೇರಲು ವಿಫಲರಾಗಿರುವ ವಿಶ್ವಾಸಿಗಳಿಗಾಗಿ ಅನುಕಂಪವನ್ನು ಅವರು ನಿಮಗೆ ಕೊಡುತ್ತಾರೆ. ದೇವರು ನಮಗೆ ಕೊಟ್ಟಿರುವ ಕಾರ್ಯವನ್ನು ಸಾರ್ಥಕವಾಗಿ ಪೂರೈಸಲು, ದೇವರ ಹೃದಯದೊಂದಿಗೆ ಅನ್ಯೋನ್ಯತೆಯಿಂದ ಉಂಟಾಗುವ ಅವರ ಅನುಕಂಪ ನಮ್ಮಲ್ಲಿ ಇರಬೇಕು.