WFTW Body: 

'1 ಅರಸುಗಳ’ ಪುಸ್ತಕದಲ್ಲಿ ನಾವು ನೋಡುವುದು ಏನೆಂದರೆ, ಆ ಪುಸ್ತಕವು ದೇವರಿಗೆ ಒಪ್ಪಿಗೆಯಾದ ಮನುಷ್ಯನಾಗಿದ್ದ ದಾವೀದನೊಂದಿಗೆ ಆರಂಭಗೊಂಡು, ಇಸ್ರಾಯೇಲಿನ ಮೇಲೆ ಆಳ್ವಿಕೆ ಮಾಡಿದ ಅತ್ಯಂತ ಕೆಟ್ಟ ಅರಸನಾಗಿದ್ದ ಅಹಾಬನೊಂದಿಗೆ ಅಂತ್ಯಗೊಳ್ಳುತ್ತದೆ. ಶುರುವಿನಲ್ಲಿ ಇಸ್ರಾಯೇಲ್ ದೇಶವು ಒಂದು ಬಲಶಾಲಿಯಾದ ದೇಶವಾಗಿರುತ್ತದೆ ಮತ್ತು ಕೊನೆಯಲ್ಲಿ ದೇಶವು ವಿಭಜಿಸಲ್ಪಟ್ಟು, ಅದರ ಎರಡು ದೇಶಗಳಲ್ಲೂ - ವಿಶೇಷವಾಗಿ ಇಸ್ರಾಯೇಲ್ ದೇಶದಲ್ಲಿ - ಅನೇಕ ಕೆಟ್ಟ ರಾಜರುಗಳು ಆಳ್ವಿಕೆ ಮಾಡುವುದು ಕಂಡುಬರುತ್ತದೆ.

ದೇವಜನರ ಸ್ಥಿತಿಯು ಅವರ ನಾಯಕರು ಆತ್ಮಿಕವಾಗಿ ಬಲವಾಗಿದ್ದಾರೋ ಅಥವಾ ದೋಷಯುಕ್ತವಾಗಿದ್ದಾರೋ, ಎಂಬುದರ ಮೇಲೆ ಹೆಚ್ಚಿನ ಮಟ್ಟಿಗೆ ಅವಲಂಬಿಸುತ್ತದೆ. ಇಸ್ರಾಯೇಲಿನ ನಾಯಕನು ಒಬ್ಬ ದೇವಭಕ್ತನಾಗಿದ್ದಾಗಲೆಲ್ಲಾ, ದೇಶವು ದೇವರ ಮಾರ್ಗದಲ್ಲಿ ಮುನ್ನಡೆಯಿತು. ಅವರ ನಾಯಕನು ಲೌಕಿಕ ಸ್ವಭಾವದವನು ಆಗಿದ್ದಾಗ, ಜನರು ದೇವರಿಂದ ದೂರ ಸರಿದು ಲೌಕಿಕ ಸ್ವಭಾವವನ್ನು ಬೆಳೆಸಿಕೊಂಡರು. ಯಾವಾಗಲೂ ದೇವಜನರ ನಡುವೆ ಇರುವ ದೊಡ್ಡ ಅವಶ್ಯಕತೆ ದೇವಭಕ್ತರಾದ ನಾಯಕರನ್ನು ಹೊಂದುವದು ಆಗಿರುತ್ತದೆ.

ಯೇಸುವಿನ ಕಾಲದಲ್ಲಿ ಅವರು ಜನರ ಗುಂಪುಗಳನ್ನು ನೋಡಿ, ಜನರು ಕುರುಬನಿಲ್ಲದ ಕುರಿಗಳಂತೆ ಇದ್ದಾರೆ, ಎಂದು ಹೇಳಿದರು. ದೇವರು ತಮ್ಮ ಜನರಿಗಾಗಿ ಕುರುಬರನ್ನು ಎಬ್ಬಿಸಬೇಕೆಂದು ಬೇಡಿಕೊಳ್ಳುವಂತೆ ಯೇಸುವು ತನ್ನ ಶಿಷ್ಯರಿಗೆ ಹೇಳಿದರು (ಮತ್ತಾ. 9:36-38) . ಇಂದು ದೇವರು ಕ್ರೈಸ್ತಸಭೆಗಳನ್ನು ನೋಡುವಾಗ, ಅವರು ಇದೇ ರೀತಿಯ ದೇವಭಕ್ತಿಯುಳ್ಳ ನಾಯಕರ ಅವಶ್ಯಕತೆ ಇರುವುದನ್ನು ಕಾಣುತ್ತಾರೆ. ಹಾಗಾಗಿ ಈಗ ವೈಯಕ್ತಿಕವಾಗಿ ನಮಗೆ ಬರುವ ಸವಾಲು ಏನೆಂದರೆ, ನಮ್ಮ ಕಾಲದ ಜನರ ನಡುವೆ ದೇವರಿಗೆ ಬೇಕಾಗಿರುವಂತ ಪುರುಷ ಮತ್ತು ಸ್ತ್ರೀಯು ಆಗಿದ್ದು, ದೇವರ ಹೃದಯವನ್ನು ತೃಪ್ತಿಗೊಳಿಸುವುದು.

ದೇವರಿಗೆ ಪ್ರತಿಯೊಂದು ತಲೆಮಾರಿನಲ್ಲಿ ದೇವಭಕ್ತಿಯುಳ್ಳ ನಾಯಕರ ಅವಶ್ಯಕತೆ ಇದೆ. ನಾವು ಹಿಂದಿನ ಜನಾಂಗಗಳ ನಾಯಕರುಗಳ ಜ್ಞಾನವನ್ನು ಆಶ್ರಯಿಸಲು ಆಗುವುದಿಲ್ಲ. ದಾವೀದನು ಶಾಶ್ವತವಾಗಿ ಇಸ್ರಾಯೇಲ್ಯರ ರಾಜನಾಗಿ ಆಳಲು ಸಾಧ್ಯವಿರಲಿಲ್ಲ. ಅವನು ಸಾಯಲೇ ಬೇಕಾಗಿತ್ತು, ಮತ್ತು ಅವನ ಸ್ಥಾನಕ್ಕೆ ಬೇರೊಬ್ಬನು ಬರಲಿದ್ದನು. ಇಸ್ರಾಯೇಲ್ಯರ ಭವಿಷ್ಯದ ಪರಿಸ್ಥಿತಿಯು, ಅವರ ಮುಂದಿನ ಅರಸನು ಎಂಥವನು ಆಗಿರುತ್ತಾನೆ ಎಂಬುದರ ಮೇಲೆ ಅವಲಂಬಿಸಿತ್ತು.

ದೇವರು ಒಂದು ತಲೆಮಾರಿನಲ್ಲಿ ತನ್ನ ಒಂದು ಕಾರ್ಯವನ್ನು ಆರಂಭಿಸುವುದಕ್ಕಾಗಿ, ಒಬ್ಬ ದೇವಭಕ್ತಿಯುಳ್ಳ ಮನುಷ್ಯನನ್ನು ಮೇಲಕ್ಕೆತ್ತುತ್ತಾರೆ. ಅವನು ಮುದುಕನಾಗಿ ಸಾಯುತ್ತಾನೆ. ಮುಂದಿನ ತಲೆಮಾರಿನ ನಾಯಕರು ಕೇವಲ ತಮ್ಮ ಸ್ಥಾಪಕನ ತಿಳುವಳಿಕೆ ಮತ್ತು ಅವನ ಮೂಲತತ್ವಗಳನ್ನು ಹೊಂದಬಹುದು, ಆದರೆ ಅವನಲ್ಲಿದ್ದ ದೇವಭಕ್ತಿ ಮತ್ತು ದೇವರ ಜ್ಞಾನವನ್ನು ಹೊಂದುವುದಿಲ್ಲವೋ? ಹಾಗೆ ಆದಾಗ, ಜನರು ನಿಶ್ಚಯವಾಗಿ ತಪ್ಪುದಾರಿಗೆ ಇಳಿಯುತ್ತಾರೆ. ನಮ್ಮ ದಿನದಲ್ಲಿ ದೇವರಿಗೆ "ದಾವೀದ"ರುಗಳು ಮತ್ತು "ದೆಬೋರ"ರುಗಳ ಅವಶ್ಯಕತೆಯಿದೆ.