ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ ಶಿಷ್ಯಂದಿರಿಗೆ
WFTW Body: 

ಕ್ರೈಸ್ತಸಭೆ ಎಂದರೆ ಕೇವಲ ಪ್ರತಿ ಭಾನುವಾರ ಒಟ್ಟಾಗಿ ಸೇರುವ ವಿಶ್ವಾಸಿಗಳ ಗುಂಪು ಮಾತ್ರವಲ್ಲ, ಅದು ಕ್ರಿಸ್ತನ ದೇಹವಾಗಿದೆ. ಆದ್ದರಿಂದ ನಾವು ಅವಶ್ಯವಾಗಿ ಖಚಿತ ಪಡಿಸಿಕೊಳ್ಳಬೇಕಾದದ್ದು ಏನೆಂದರೆ, ನಾವು ಆ ದೇಹವನ್ನು ಪೋಷಿಸಿ ಬೆಳೆಸುತ್ತಿದ್ದೇವೆ, ಮತ್ತು ಕೇವಲ ಒಂದು "ಧಾರ್ಮಿಕ ಕ್ರೈಸ್ತರ ಗುಂಪನ್ನು" ಬೆಳೆಸುತ್ತಿಲ್ಲ, ಎಂಬುದನ್ನು. ಯಾವನೇ ಒಬ್ಬ ವ್ಯಕ್ತಿಯು ಒಂದು ಧಾರ್ಮಿಕ ಗುಂಪನ್ನು ಸಂಘಟಿಸಬಹುದು. ಆದರೆ ಕ್ರಿಸ್ತನ ದೇಹವನ್ನು ಬೆಳೆಸುವುದಕ್ಕೆ ದೇವರಿಂದ ಸಿಗುವ ಕೃಪೆ ಮತ್ತು ಅಭಿಷೇಕ ಇವೆರಡೂ ಬೇಕಾಗುತ್ತವೆ. ಮತ್ತು ಇದಕ್ಕಾಗಿ ನಾವು ಪ್ರತಿದಿನವೂ ನಮ್ಮ ಸ್ವಾರ್ಥವನ್ನು ನಿರಾಕರಿಸಿ ಅದನ್ನು ಸಾಯಿಸಬೇಕಾಗುತ್ತದೆ ಮತ್ತು ಪವಿತ್ರಾತ್ಮನ ತುಂಬುವಿಕೆಯನ್ನು(ಅಭಿಷೇಕವನ್ನು) ಹೊಂದಬೇಕಾಗುತ್ತದೆ.

ಹಳೆಯ ಒಡಂಬಡಿಕೆಯ ಇಸ್ರಾಯೇಲ್ಯರು ಒಂದು ಗುಂಪಾಗಿದ್ದರು, ಮತ್ತು ಅವರು ಒಂದು ದೇಹವಾಗಿರಲಿಲ್ಲ. ಇಂದಿನ ಅನೇಕ ದೊಡ್ಡ ಕ್ರೈಸ್ತಸಭೆಗಳೂ ಕೂಡ ಗುಂಪುಗಳಾಗಿವೆಯೇ ಹೊರತು ಕ್ರಿಸ್ತನ ದೇಹವಾಗಿಲ್ಲ. ಮನೆಗಳಲ್ಲಿ ಒಟ್ಟಾಗಿ ಸೇರುವ ಕೆಲವು ಸಣ್ಣ ಸಭೆಗಳು ಸ್ವಲ್ಪ ಉತ್ತಮವಾಗಿದ್ದರೂ - ಅವುಗಳು ಸಂಘಗಳಾಗಿವೆ, ಆತ್ಮಿಕ ದೇಹವಾಗಿಲ್ಲ. ಆದರೆ ಯೇಸುವು ತನ್ನ ದೇಹವನ್ನು ಬೆಳೆಸುತ್ತಿದ್ದಾರೆ.

ಕ್ರಿಸ್ತನ ಜನನದ ಸಂದರ್ಭದಲ್ಲಿ ಜನರು ದನಕರುಗಳ ಕೊಟ್ಟಿಗೆಯಲ್ಲಿ (ಹಸುಗಳಿಗೆ ಮೇವು ಉಣ್ಣಿಸುವ ತೊಟ್ಟಿಯಲ್ಲಿ) ಮಲಗಿಸಿದ್ದ ಆತನ ದೇಹವನ್ನು ನೋಡಿದರು. ಆ ಕುರುಬರಿಗೆ ಕೊಡಲ್ಪಟ್ಟಿದ್ದ ಕ್ರಿಸ್ತನ ದೇಹದ ಗುರುತು ಅವಮಾನಕರ ಜನ್ಮದ ಅಪವಾದವೇ ಆಗಿತ್ತು (ಲೂಕ. 2:12ನ್ನು ನೋಡಿರಿ). ಅಂತಿಮವಾಗಿ ಕ್ರಿಸ್ತನ ದೇಹವು ಮತ್ತೊಮ್ಮೆ ಕಲ್ವಾರಿಯಲ್ಲಿ ಶಿಲುಬೆಯ ಮೇಲೆ ಅಪರಾಧಿಯಂತೆ ನಿಂದನೆಗೆ ಗುರಿಯಾಗಿ ನೇತುಹಾಕಲ್ಪಟ್ಟಿತು. ಕ್ರಿಸ್ತನ ಮೊದಲ ದೇಹವು ಈ ರೀತಿಯಾಗಿ ತನ್ನ ಹುಟ್ಟಿನಿಂದ ಮರಣದ ವರೆಗೆ ಲೌಕಿಕ ಪ್ರಪಂಚ ಮತ್ತು ಧಾರ್ಮಿಕ ಪ್ರಪಂಚದ ತಾತ್ಸಾರ ಹಾಗೂ ನಿಂದನೆಗಳ ಮೂಲಕ ಗುರುತಿಸಲ್ಪಟ್ಟಿತು.

ಯೇಸು ಹೇಳಿದ ಮಾತು - " ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ನಿಂದಿಸಿ ಹಿಂಸೆಪಡಿಸಿ ನಿಮ್ಮ ಮೇಲೆ ಕೆಟ್ಟ ಕೆಟ್ಟ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರು. ಸಂತೋಷಪಡಿರಿ, ಉಲ್ಲಾಸಪಡಿರಿ, ನಿಮಗಿಂತ ಮುಂಚೆ ಇದ್ದ ಪ್ರವಾದಿಗಳನ್ನು ಹೀಗೆಯೇ ಹಿಂಸೆ ಪಡಿಸಿದರು."

ಇಂದು ಜಗತ್ತಿನಲ್ಲಿ ಮತ್ತು ಬಾಬೆಲಿನ ಕ್ರೈಸ್ತ ಪ್ರಪಂಚದಲ್ಲಿ ಕ್ರಿಸ್ತನ ದೇಹದ ಯಾವುದೇ ನಿಜವಾದ ನಮೂನೆಯು ಅದೇ ನಿಂದನೆಗೆ ಗುರಿಯಾಗುತ್ತದೆ. ನಮ್ಮ ಸ್ಥಳೀಯ ಸಭೆಯು ತನ್ನ ಮೇಲೆ ಅಂತಹ "ಕ್ರಿಸ್ತನ ಅಪವಾದ ಅಥವಾ ದೂಷಣೆಯ" ಹೊದಿಕೆಯನ್ನು ಪಡೆದಿಲ್ಲವಾದರೆ, ನಾವು ರಾಜಿ ಮಾಡಿಕೊಳ್ಳುವವರು ಆಗಿರಬಹುದು ಮತ್ತು "ಬಾಬೆಲಿನ ಶಿಬಿರ"ವನ್ನು ತ್ಯಜಿಸಿ ಹೊರಗೆ ಹೋಗದಿರಬಹುದು (ಇಬ್ರಿ. 13:13). ಆದಾಗ್ಯೂ ಕ್ರಿಸ್ತನ ದೂಷಣೆ ಮತ್ತು ನಮ್ಮ ಪಾಪ ಅಥವಾ ಮೂರ್ಖತನ ಅಥವಾ ನಿರುತ್ಸಾಹದ ಪರಿಣಾಮವಾಗಿ ಬರುವ ಯಾವುದೇ ದೂಷಣೆ, ಇವುಗಳ ನಡುವೆ ಬಹಳ ದೊಡ್ಡ ವ್ಯತ್ಯಾಸವಿದೆ. ನಾವು ಇವೆರಡರ ನಡುವಿನ ವ್ಯತ್ಯಾಸವನ್ನು ತಪ್ಪದೆ ಗುರುತಿಸಬೇಕು.

ಯೇಸುವಿನ ಬಗ್ಗೆ ’ಯೆಶಾ. 53:2,3'ರಲ್ಲಿ, "ಅವನಲ್ಲಿ ಯಾವ ಅಂದ ಚಂದಗಳೂ ಇರಲಿಲ್ಲ.... ಅವನು ಧಿಕ್ಕರಿಸಲ್ಪಟ್ಟವನು, ಗೌರವವನ್ನು ಪಡೆಯದವನು" ಎಂಬುದಾಗಿ ಬರೆಯಲ್ಪಟ್ಟಿದೆ. ಅವನ ಮಹಿಮೆಯು ಒಳಗಿನ ಜೀವಿತದಲ್ಲಿತ್ತು - ಅದು ಕೃಪೆಯಿಂದಲೂ ಮತ್ತು ಸತ್ಯದಿಂದಲೂ ತುಂಬಿತ್ತು. ಹೆಚ್ಚಿನ ಜನರಿಂದ ಅದು ಮರೆಯಾಗಿತ್ತು (ಯೋಹಾ. 1:14). ಪ್ರಪಂಚಕ್ಕಾಗಲೀ ಅಥವಾ ಬಾಬೆಲಿನ ಕ್ರೈಸ್ತತ್ವಕ್ಕಾಗಲೀ ನಮ್ಮ ಸ್ಥಳೀಯ ಸಭೆಯು ಸಹ ಆಕರ್ಷಣೀಯವಾದದ್ದಾಗಿರಬಾರದು. ದೈವಿಕ ಜೀವಿತಕ್ಕಾಗಿ ತವಕಿಸಿ ಹುಡುಕಿಕೊಂಡು ಬರುವವರಿಗೆ ಮಾತ್ರ ಸಭೆಯು ಆಕರ್ಷಕವಾಗಿರಬೇಕು. ಮಂಜೂಷದ ಗುಡಾರದ ಒಳಗೆ ಸುಂದರವಾದ ಪರದೆಗಳು ಇದ್ದವು. ಆದರೆ ಕಡು ಕಂದು ಬಣ್ಣದ ಟಗರಿನ ಚರ್ಮದ ಹೊರಗಿನ ಹೊದಿಕೆಯು ಧೂಳಿನಿಂದಲೂ ಕೊಳೆಯಿಂದಲೂ ತುಂಬಿತ್ತು. ಅದರ ಸಕಲ ಸೌಂದರ್ಯವೂ ಗುಡಾರದ ಒಳಗಿನ ಪರದೆಗಳಲ್ಲಿ ಕಾಣಿಸುತ್ತಿತ್ತು. ಕ್ರಿಸ್ತನ ಮದಲಗಿತ್ತಿಯೂ ಸಹ "ತನ್ನ ಒಳಗಿನ ಜೀವಿತದ ಮಹಿಮೆಯಿಂದ ತುಂಬಿದವಳು ಆಗಿರುತ್ತಾಳೆ" (ಕೀರ್ತ. 45:13). ಮತ್ತು ಆಕೆಯ ಒಳಗಿನ ಮಹಿಮೆಯ ಮೇಲೆ ಒಂದು ಹೊದಿಕೆ ಇರುತ್ತದೆ (ನಿಂದನೆಯ ಅಥವಾ ದೂಷಣೆಯ ಹೊದಿಕೆ) (ಯೆಶಾ. 4:5).

ಈ ವಿಷಯದಲ್ಲಿ ಸಭೆಯ ನಾಯಕರ ಮೇಲೆ ಒಂದು ದೊಡ್ಡ ಜವಾಬ್ದಾರಿ ಇರುತ್ತದೆ. ಅವರು ಸಭೆಯನ್ನು ನಡೆಸುವ ರೀತಿಯು, ಸಭೆಯು ಯೇಸುವಿನಂತೆ ಜನರಿಂದ ಗೌರವಿಸಲ್ಪಡುವುದಿಲ್ಲವೋ, ಅಥವಾ ಪ್ರಪಂಚದ ಹೊಗಳಿಕೆ ಮತ್ತು ಪ್ರಶಂಸೆಗೆ ಒಳಗಾಗುತ್ತದೆಯೋ, ಎಂಬುದನ್ನು ನಿಶ್ಚಯಪಡಿಸುತ್ತದೆ. ಒಂದು ವೇಳೆ ನಾವು ಪ್ರಪಂಚದ ಅಥವಾ ಇತರ ಪ್ರಾಪಂಚಿಕ ಕ್ರೈಸ್ತರ ಹೊಗಳಿಕೆಗಾಗಿ ತವಕಿಸುವುದಾದರೆ, ನಾವು ಖಂಡಿತವಾಗಿ ಬಾಬೆಲಿನ ಸಭೆಯನ್ನು ಕಟ್ಟುವವರಾಗುತ್ತೇವೆ. ನಾವು ಲೋಕಪ್ರಿಯರು ಮತ್ತು ಸಾಮಾನ್ಯ ಕ್ರೈಸ್ತ ಪ್ರಪಂಚದ ಮೆಚ್ಚುಗೆಗೆ ಪಾತ್ರರಾಗಿದ್ದರೆ, ಯೇಸುವಿನ ಹೆಜ್ಜೆಯ ಜಾಡಿನಲ್ಲಿ ನಡೆಯುವುದರಲ್ಲಿ ಗುರಿತಪ್ಪಿದ್ದೇವೆ, ಎಂಬುದು ಖಚಿತವಾಗುತ್ತದೆ.

"ಜನರು ನನ್ನ ನಿಮಿತ್ತವಾಗಿ ನಿಮ್ಮನ್ನು ನಿಂದಿಸಿ ಹಿಂಸೆ ಪಡಿಸಿ ನಿಮ್ಮ ಮೇಲೆ ಕೆಟ್ಟ ಕೆಟ್ಟ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರು. ಸಂತೋಷಪಡಿರಿ, ಉಲ್ಲಾಸ ಪಡಿರಿ, ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಗುವುದು. ನಿಮಗಿಂತ ಮುಂಚೆ ಇದ್ದ ಪ್ರವಾದಿಗಳನ್ನು ಹೀಗೆಯೇ ಹಿಂಸೆ ಪಡಿಸಿದರಲ್ಲ" (ಮತ್ತಾ. 5:11,12). ಇಪ್ಪತ್ತು ಶತಮಾನಗಳ ಹಿಂದೆ ಹೆರೋದನೂ ಅವನ ಸೈನಿಕರೂ ಕ್ರಿಸ್ತನ ಮೊದಲ ದೇಹವನ್ನು, ಅಂದರೆ ಶಿಶುವಾಗಿದ್ದ ಯೇಸುವನ್ನು, ಕೊಲ್ಲಲು ಉತ್ಸುಕರಾಗಿದ್ದರು. ಮತ್ತು ಇಂದು ಅನೇಕ ಸ್ಥಳಗಳಲ್ಲಿ ಕ್ರಿಸ್ತನ ದೇಹದ ಆರಂಭವನ್ನು ನಾಶಮಾಡಲು ಉತ್ಸುಕರಾಗಿರುವ ಅನೇಕರು ಇದ್ದಾರೆ. ಯೋಸೇಫನು ದೇವರ ಧ್ವನಿಯನ್ನು ಆಲಿಸುವ ಸೂಕ್ಷ್ಮತೆಯನ್ನು ಹೊಂದುವ ಮೂಲಕ, ಮತ್ತು ದೇವರ ಆದೇಶವನ್ನು ತ್ವರಿತವಾಗಿ ಪಾಲಿಸುವ ಮೂಲಕ ಆ ದೇಹವನ್ನು ರಕ್ಷಿಸಿದನು (ಮತ್ತಾ. 2:13-15). ಕ್ರಿಸ್ತನ ಸಭೆಯಲ್ಲಿ ಜವಾಬ್ದಾರಿ ಹೊಂದಿರುವ ನಾವು ಸಹ ಯೋಸೇಫನಂತೆ ಇರಬೇಕು. ನಾವು ಆಲಿಸುವವರಾಗಿರಬೇಕು – ಅಂದರೆ ನಾವು ಪವಿತ್ರಾತ್ಮನು ನಮಗೆ ಹೇಳುವುದನ್ನು ಕೇಳುವವರು ಮತ್ತು ನಮಗೆ ಹೇಳಿದ್ದಕ್ಕೆ ತ್ವರಿತವಾಗಿ ವಿಧೇಯರಾಗುವವರಾಗಿರಬೇಕು. ನಾವು ಕೇಳದಿದ್ದರೆ ಮತ್ತು ಪಾಲಿಸದಿದ್ದರೆ, ನಾವು ಇರುವ ಸ್ಥಳದಲ್ಲಿ ಕ್ರಿಸ್ತನ ದೇಹವು ಯಾವುದೋ ಒಂದು ರೀತಿಯಲ್ಲಿ ನಷ್ಟವನ್ನು ಅನುಭವಿಸುತ್ತದೆ - ಮತ್ತು ಕೊನೆಯ ದಿನದಲ್ಲಿ ಅದಕ್ಕಾಗಿ ನಾವು ಹೊಣೆಗಾರರಾಗಬಹುದು. ಈ ವಿಷಯದಲ್ಲಿ ನಾವು ನಮ್ಮ ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು, ಏಕೆಂದರೆ ನಮಗೆ ಒಪ್ಪಿಸಲ್ಪಟ್ಟ ಪ್ರತಿಯೊಂದು ಆತ್ಮಕ್ಕೂ ನಾವು ದೇವರಿಗೆ ಲೆಕ್ಕ ಒಪ್ಪಿಸಬೇಕಾಗುತ್ತದೆ (ಇಬ್ರಿ. 13:17).