WFTW Body: 

ಶಿಲುಬೆಯ ಸಂದೇಶದಲ್ಲಿ ಒಂದು ಪ್ರಜ್ವಲವಾದ ಅಂಶವಿದೆ - ಅದೊಂದು ಪ್ರೋತ್ಸಾಹದಾಯಕವಾದ ಸಂಗತಿಯಾಗಿದೆ. ಅದು ಏನೆಂದರೆ, ಶಿಲುಬೆಯೇ ನಮ್ಮ ಅಂತಿಮ ಗುರಿಯಲ್ಲ. ಶಿಲುಬೆಯು ನಮ್ಮನ್ನು ಪುನರುತ್ಥಾನ ಜೀವನಕ್ಕೆ ನಡೆಸುವಂತ ಒಂದು ದಾರಿ ಅಥವಾ ಮಾರ್ಗವಾಗಿದೆ. ಯಾರು "ಶಿಲುಬೆ"ಯ ಕಾರ್ಯವನ್ನು ತಮ್ಮ ಜೀವಿತದಲ್ಲಿ ಸ್ವೀಕರಿಸಲು ಸಿದ್ಧರಿದ್ದಾರೋ, ಅವರೆಲ್ಲರೂ ಮುಂದೆ ಸಂತೋಷಕ್ಕೆ ಪಾತ್ರರಾಗುತ್ತಾರೆ (ಇಬ್ರಿ. 12:2). ಗೋಧಿಯ ಒಂದು ಕಾಳು ಭೂಮಿಯಲ್ಲಿ ಹೂಳಲ್ಪಟ್ಟು ಸತ್ತಾಗ, ಅದು ಸದಾಕಾಲ ಅಲ್ಲೇ ಇರುವುದಿಲ್ಲ; ಅದು ಚಿಗುರಿ ಬೆಳೆದು ಫಲ ನೀಡುವುದರಲ್ಲಿ ಸಫಲವಾಗುತ್ತದೆ. ಶಿಲುಬೆಯ ಮಾರ್ಗವನ್ನು ಸ್ವೀಕರಿಸಿ ನಡೆಯುವ ಒಬ್ಬ ಕ್ರೈಸ್ತ ವಿಶ್ವಾಸಿಯು, ಇತರರು ತನ್ನನ್ನು ಎಷ್ಟು ಅಪಾರ್ಥ ಮಾಡಿಕೊಂಡರೂ, ಅಂತ್ಯದಲ್ಲಿ ದೋಷಮುಕ್ತನು ಎಂಬುದಾಗಿ ದೇವರಿಂದ ಸಮರ್ಥಿಸಲ್ಪಡುತ್ತಾನೆ. ಶರೀರಭಾವದ ಮರಣವು ಫಲ ಕೊಡುತ್ತದೆ. ನಾವು ಈ ಫಲದ ಒಂದು ಭಾಗವನ್ನು ನಮ್ಮ ಭೂಲೋಕದ ಜೀವಿತದಲ್ಲೇ ಕಾಣಬಹುದು, ಆದರೆ ಸಂಪೂರ್ಣ ಫಲವು ಕರ್ತನಾದ ಕ್ರಿಸ್ತನು ನ್ಯಾಯತೀರ್ಪು ಮಾಡಲು ತನ್ನ ಸಿಂಹಾಸನದ ಮೇಲೆ ಕುಳಿತಾಗ, ತನ್ನ ನಂಬಿಗಸ್ತರಿಗೆ ಆತನು ಪ್ರತಿಫಲವನ್ನು ಕೊಡುವ ಸಂದರ್ಭದಲ್ಲಿ ಮಾತ್ರವೇ ಪ್ರಕಟವಾಗಲಿದೆ.

ಶಿಲುಬೆಯ ಮಾರ್ಗವು ಜಯಿಸುವ ಏಕೈಕ ಮಾರ್ಗವಾಗಿದೆ. ಹಾಗಾಗಿ ಸೈತಾನನು ಯೇಸುವನ್ನು ಆ ಮಾರ್ಗದಿಂದ ಬೇರೆ ಕಡೆಗೆ ತಿರುಗಿಸಲು ಅತಿಯಾಗಿ ಶ್ರಮಿಸಿದನು. ಈ ಕಾರಣಕ್ಕಾಗಿಯೇ ಪುರುಷರು ಹಾಗೂ ಸ್ತ್ರೀಯರು ತಮ್ಮ ಜೀವನದಲ್ಲಿ ಈ ಮಾರ್ಗವನ್ನು ಆರಿಸಿಕೊಳ್ಳದಂತೆ ತಡೆಗಟ್ಟಲು ಸೈತಾನನು ಸತತವಾಗಿ ಪ್ರಯತ್ನಿಸುತ್ತಿದ್ದಾನೆ. ಪೇತ್ರನು ಯೇಸುವನ್ನು ತಡೆದದ್ದು ಶಿಲುಬೆಯ ಪರಿಶ್ರಮದಿಂದ ಆತನನ್ನು ದೂರವಿರಿಸುವ ಸದುದ್ದೇಶದಿಂದ ಮತ್ತು ತನ್ನ ಪ್ರೀತಿಯ ನಿಮಿತ್ತವಾಗಿ ಆಗಿತ್ತು, ಆದರೆ ಯೇಸುವು ಆ ಸ್ವರ ಸೈತಾನನದ್ದು ಎಂಬುದನ್ನು ತಕ್ಷಣವೇ ಗ್ರಹಿಸಿದರು (ಮತ್ತಾ. 16:21-23). ನಮ್ಮ ಜೀವಿತದಲ್ಲಿ ಕಷ್ಟಗಳು ಎದುರಾದಾಗ ನಮ್ಮ ಸ್ನೇಹಿತರು ಹಾಗೂ ನೆಂಟರು ನಮಗೂ ಇದೇ ರೀತಿಯ ಸಲಹೆಯನ್ನು ಕೊಡಬಹುದು. ಆದರೆ ನಮ್ಮನ್ನು ಶಿಲುಬೆಯ ಮಾರ್ಗದಿಂದ ಬೇರೆಡೆಗೆ ತಿರುಗಿಸುವಂತ ಆ ಧ್ವನಿಯು ನಮ್ಮ ಹೃದಯದಿಂದ ಬಂದರೂ ಅಥವಾ ಬೇರೆಯವರಿಂದ ಬಂದರೂ, ಅದು ಯಾವಾಗಲೂ ಸೈತಾನನು ಪಿಸುಗುಟ್ಟುವ ಧ್ವನಿಯೆಂದು ನೆನಪಿಡಿರಿ. ನಾವು ಯಾವಾಗಲೂ ಅದನ್ನು ಈ ರೀತಿಯಾಗಿ ಗುರುತಿಸುತ್ತೇವೋ?

"ಕಲ್ವಾರಿಯು ಭೂಮಿಯ ಮೇಲಿನ ಸರ್ವಶ್ರೇಷ್ಠ ಜಯವಾಗಿತ್ತು"

ಪ್ರಕಟನೆಯ ಪುಸ್ತಕದಲ್ಲಿ, ಕರ್ತನಾದ ಯೇಸುವನ್ನು ಕೊಯ್ಯಲ್ಪಟ್ಟ ಕುರಿಯಾಗಿ ನಾವು ಕಾಣುತ್ತೇವೆ. ಅಲ್ಲಿ ನಮಗೆ ಕಲ್ವಾರಿಯ ದೃಶ್ಯವನ್ನು ಪರಲೋಕದ ದೃಷ್ಟಿಯಿಂದ ತೋರಿಸಲಾಗಿದೆ. ಮಾನವನ ಕಣ್ಣಿಗೆ ಕಲ್ವಾರಿಯು ಒಂದು ಸೋಲಾಗಿತ್ತು. ಹಾಗಾಗಿ ಯೇಸುವಿನ ಪುನರುತ್ಥಾನದ ನಂತರ, ನಂಬಿಕೆಯಿಲ್ಲದ ಯಾವ ಅವಿಶ್ವಾಸಿಯೂ ಆತನನ್ನು ನೋಡಿದ್ದರ ಕುರಿತಾಗಿ ನಾವು ಓದುವುದಿಲ್ಲ ಮತ್ತು ಈಗಲೂ ಮನುಷ್ಯನಿಗೆ (ಅಂದರೆ, ಅವಿಶ್ವಾಸಿಗೆ) ಕಲ್ವಾರಿಯು ಒಂದು ಸೋಲಾಗಿದೆ. ಆದರೆ ಪರಲೋಕದ ದೃಷ್ಟಿಯಲ್ಲಿ, ಕಲ್ವಾರಿಯು ಈ ಭೂಲೋಕದಲ್ಲಿ ಗಳಿಸಲಾದ ಸರ್ವಶ್ರೇಷ್ಠ ಜಯವಾಗಿತ್ತು. ಈ ಲೋಕದ ನಿವಾಸಿಗಳು ದೇವರ ಕುರಿಮರಿಯನ್ನು ಶಿಲುಬೆಗೆ ಏರಿಸಿದರು, ಆದರೆ ಪರಲೋಕದ ನಿವಾಸಿಗಳು ಆತನನ್ನು ಆರಾಧಿಸುತ್ತಾರೆ. ಯೇಸುವನ್ನು ಹಿಂಬಾಲಿಸಲಿಕ್ಕಾಗಿ ನೀವು ನಿಮ್ಮ ಹಕ್ಕುಗಳನ್ನು ತ್ಯಜಿಸುವಾಗ, ಭೂಲೋಕದ ಜನರು ನೀವು ಬೆನ್ನೆಲುಬು ಇಲ್ಲದವರೆಂದು ನಿಮ್ಮನ್ನು ಅಣಕಿಸಬಹುದು, ಆದರೆ ಪರಲೋಕದವರು ದೇವರ ಒಬ್ಬ ಮಗ ಅಥವಾ ಮಗಳು ಈ ಜಯದ ಮಾರ್ಗವನ್ನು ಆರಿಸಿಕೊಂಡಾಗ ಸಂತೋಷದಿಂದ ಹಿಗ್ಗುತ್ತಾರೆ. "ಅವರು ಅವನನ್ನು (ಸೈತಾನನನ್ನು) ಜಯಿಸಿದರು ... ಅವರು ಪ್ರಾಣದ ಮೇಲಿನ ಪ್ರೀತಿಯನ್ನು ತೊರೆದು ಮರಣದಿಂದ (ಶಿಲುಬೆಯಿಂದ) ಹಿಂಜರಿಯಲಿಲ್ಲ ... ಆದುದರಿಂದ, ಪರಲೋಕವೇ ಹರ್ಷಗೊಳ್ಳಿರಿ" (ಪ್ರಕಟನೆ 12:11,12).

ಕೀರ್ತನೆಗಳು 124:7'ರಲ್ಲಿ, ಕ್ರೈಸ್ತ ಜೀವಿತವನ್ನು ಬೇಟೆಗಾರನ ಬಲೆಯಿಂದ ತಪ್ಪಿಸಿಕೊಂಡ ಪಕ್ಷಿಯ ಚಿತ್ರಣದ ಮೂಲಕ ನಮಗೆ ಸಾಂಕೇತಿಕವಾಗಿ ತೋರಿಸಲಾಗಿದೆ. ದೇವರು ತಮ್ಮ ಮಕ್ಕಳು ಅನುಭವಿಸಬೇಕೆಂದು ಬಯಸುವ ಅಮೋಘ ವಿಮೋಚನೆಯನ್ನು ಒಂದು ಪಕ್ಷಿಯು ಆಕಾಶಕ್ಕೇರಿ ಹಾರಾಡುವಂತ ಆ ಚಿತ್ರಣವು ಬಹಳ ಸುಂದರವಾಗಿ ತೋರಿಸಿಕೊಡುತ್ತದೆ. ಪರ್ವತಗಳು ಮತ್ತು ನದಿಗಳು ಭೂಮಿಯ ಮೇಲೆ ಚಲಿಸುವ ಜೀವಿಗಳ ಹಾದಿಗೆ ಅಡ್ಡಿಯಾಗುತ್ತವೆ, ಆದರೆ ಒಂದು ಪಕ್ಷಿಗೆ ತಡೆಯಿರುವುದಿಲ್ಲ. ಅದು ಇವೆಲ್ಲವುಗಳ ಮೇಲೇರಿ ಹಾರುತ್ತಾ ಹೋಗುತ್ತದೆ. ದೇವರು ಮನುಷ್ಯನನ್ನು ಸೃಷ್ಟಿಸಿದ ಉದ್ದೇಶ, ಆತನು ಆ ಪಕ್ಷಿಯಂತೆ ಸಂಪೂರ್ಣವಾಗಿ ಸ್ವತಂತ್ರನಾಗಿದ್ದು, ಎಲ್ಲವನ್ನೂ ತನ್ನ ವಶದಲ್ಲಿ ಇರಿಸಿಕೊಳ್ಳಬೇಕು ಮತ್ತು ಎಲ್ಲವುಗಳ ಮೇಲೆ ದೊರೆತನ ಮಾಡಬೇಕು, ಎಂಬುದಾಗಿತ್ತು (ಆದಿ. 1:28). ಆದರೆ ಮನುಷ್ಯನು ತನ್ನ ಅವಿಧೇಯತೆಯಿಂದ ಬಲೆಯಲ್ಲಿ ಹಿಡಿಯಲ್ಪಟ್ಟ ಒಂದು ಪಕ್ಷಿಯಂತಾಗಿ, ಹಾರಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದಾನೆ.

ಶಿಲುಬೆಯು ಮಾತ್ರವೇ ನಮ್ಮನ್ನು ಈ ಬಲೆಯಿಂದ ಬಿಡಿಸಿ ಬಿಡುಗಡೆ ಗೊಳಿಸಬಹುದು. ಇದಕ್ಕೆ ಹೊರತಾಗಿ ಬೇರೆ ಯಾವ ದಾರಿಯೂ ಇಲ್ಲ. ಲೋಕದ ಆಶಾಪಾಶಗಳು ಹಾಗೂ ನಿಮ್ಮ ಸ್ವೇಚ್ಛಾ ಜೀವನ ಇವುಗಳನ್ನು ಸಾಯಿಸಲು ನಿಶ್ಚಯಿಸಿರಿ, ಮತ್ತು ಹಾಗೆ ಮಾಡಿದಾಗ ನಿಮ್ಮ ಮೇಲಿನ ಪಿಶಾಚನ ದೊರೆತನವೂ ಸಾಯಿಸಲ್ಪಡುತ್ತದೆ. ನಿಮ್ಮ ಮೇಲಿನ ಆತನ ಬಿಗಿಹಿಡಿತ ಮುರಿಯಲ್ಪಡುತ್ತದೆ, ಮತ್ತು ನೀವು ಆ ಹಕ್ಕಿಯಂತೆ ಉನ್ನತ ಆಕಾಶಕ್ಕೆ ಏರುವುದಕ್ಕೆ ಯಾವ ಅಡೆತಡೆಯೂ ಇರುವುದಿಲ್ಲ. ಇದುವೇ ನಿಜವಾದ ಬಿಡುಗಡೆಯಾಗಿದೆ - ಮತ್ತು ಪವಿತ್ರಾತ್ಮನು ನಮ್ಮ ಜೀವನದಲ್ಲಿ ಇದನ್ನೇ ಉಂಟುಮಾಡಲು ಬಯಸುತ್ತಾನೆ (2 ಕೊರಿ. 3:17). ಆದರೆ ಶಿಲುಬೆಯ ಮಾರ್ಗವು ಮಾತ್ರವೇ ಇಂತಹ ಬಿಡುಗಡೆಯನ್ನು ತರುತ್ತದೆ.

ಮಾರ್ಕನು 4:17'ರಲ್ಲಿ, ಶಿಲುಬೆಯ ಮಾರ್ಗವನ್ನು ತಿರಸ್ಕರಿಸುವ ಕ್ರೈಸ್ತರನ್ನು ಯೇಸುವು ’ಬೇರಿಲ್ಲದ ಕ್ರೈಸ್ತರು’ ಎಂದು ಉಲ್ಲೇಖಿಸಿದ್ದಾರೆ. ಈ ಕ್ರೈಸ್ತರ ಕ್ರೈಸ್ತತ್ವವು ಮೇಲ್ನೋಟಕ್ಕೆ ಮಾತ್ರವಾಗಿತ್ತು. ದೇವರು ಅವರ ಬೇರುಗಳನ್ನು ಬಲಪಡಿಸುವುದಕ್ಕಾಗಿ ಅವರಿಗೆ ಶಿಲುಬೆಯನ್ನು ಸ್ವೀಕರಿಸುವ ಅವಕಾಶಗಳನ್ನು ಒದಗಿಸಲು ಪ್ರಯತ್ನಿಸಿದಾಗ, ಅವರು ಪದೇ ಪದೇ ಆ ಅವಕಾಶಗಳನ್ನು ತಳ್ಳಿಹಾಕಿದರು. ಒಬ್ಬ ಮನುಷ್ಯನನ್ನು ಕ್ರಿಸ್ತನ ಸಮೃದ್ದಿಯ ಜೀವನಕ್ಕೆ ಕರೆದೊಯ್ಯುವುದಕ್ಕೆ ಒಂದೇ ಒಂದು ಮಾರ್ಗವಿದೆ. ನಾವು ನಮಗೆ ಇಷ್ಟವಾದ ಬೇರೆ ಮಾರ್ಗಗಳನ್ನು ಆರಿಸಿಕೊಳ್ಳಬಹುದು, ಆದರೆ ಬೇರೆ ಯಾವುದೇ ಮಾರ್ಗದಲ್ಲಿ ನಾವು ದೇವರ ಸಂಕಲ್ಪವನ್ನು ಎಂದಿಗೂ ಪೂರೈಸಲಾರೆವು. ನಾವು ನಮ್ಮ ಜೀವಿತಗಳಲ್ಲಿ ಶಿಲುಬೆಯ ಮಾರ್ಗವನ್ನು ನಿರಾಕರಿಸಿದರೆ ನಮ್ಮ ಎಲ್ಲಾ ವರಗಳು ಮತ್ತು ವಿಶೇಷ ಸಾಮರ್ಥ್ಯಗಳು ವ್ಯರ್ಥವಾಗುತ್ತವೆ. ನಾವು ಈ ಮಾರ್ಗವನ್ನು ಸ್ವೀಕರಿಸಬಹುದು ಅಥವಾ ತಿರಸ್ಕರಿಸಬಹುದು - ಆಯ್ಕೆಯು ಸಂಪೂರ್ಣವಾಗಿ ನಮ್ಮ ಕೈಯಲ್ಲಿದೆ.

’ಸಾಧು ಸುಂದರ್ ಸಿಂಗ್’ ಎಂಬ ದೇವಮನುಷ್ಯ ಹೀಗೆ ಹೇಳುತ್ತಿದ್ದರು: ನಾವು ಪರಲೋಕವನ್ನು ತಲುಪಿದ ನಂತರ, ಕ್ರಿಸ್ತನಿಗೋಸ್ಕರ ಶಿಲುಬೆಯನ್ನು ಹೊರುವಂತ ಮತ್ತೊಂದು ಅವಕಾಶ ನಮಗೆ ಸಿಗಲಾರದು. ನಾವು ಈಗ ಶಿಲುಬೆಯನ್ನು ತಿರಸ್ಕರಿಸಬಹುದು, ಆದರೆ ನಮಗೆ ನಿತ್ಯತ್ವದಲ್ಲಿ ಯೇಸುವು ರಕ್ತ ಸುರಿಸಿ ನಡೆದಂತ ದಾರಿಯಲ್ಲಿ ಆತನನ್ನು ಅನುಸರಿಸಿ ನಡೆಯುವ ಎರಡನೇ ಅವಕಾಶವು ಮತ್ತೆ ಸಿಗಲಾರದು. ನಮ್ಮನ್ನು ಆಶೀರ್ವದಿಸಿದ ಕರ್ತನನ್ನು ನಾವು ಭೇಟಿಯಾಗುವಾಗ, ಆತನ ಕೈಗಳಲ್ಲಿ ಮತ್ತು ಪಾದಗಳಲ್ಲಿ ಮೊಳೆಯ ಗುರುತು ಇರುತ್ತದೆ. ಆಗ ನಾವು ತಿರುಗಿ ನೋಡಿದಾಗ, ನಮ್ಮ ಭೂಲೋಕದ ಜೀವನದ ಪ್ರತೀ ಹಂತದಲ್ಲಿ ನಾವು ತಪ್ಪದೆ ಶಿಲುಬೆಯನ್ನು ತಿರಸ್ಕರಿಸಿದೆವು, ಎಂಬುದನ್ನು ಕಂಡುಕೊಂಡಾಗ ನಮಗೆ ಹೇಗೆನಿಸುತ್ತದೆ? ಇದಕ್ಕೆ ಬದಲಾಗಿ, ನಾವು ಹೆಜ್ಜೆ ಹೆಜ್ಜೆಗೂ ಶಿಲುಬೆಯನ್ನು ಸ್ವೀಕರಿಸುವಂತೆ, ಮತ್ತು ಆ ದಿನದಲ್ಲಿ ನಮಗೆ ವಿಷಾದ ಇಲ್ಲದಿರುವಂತೆ ದೇವರು ಅನುಗ್ರಹಿಸಲಿ.