WFTW Body: 

ನಿಮ್ಮ ಜೀವನದಲ್ಲಿ ಏನು ಸಂಭವಿಸಿದರೂ ಅದು ನಿಮ್ಮನ್ನು ನಿರುತ್ಸಾಹಗೊಳಿಸಲು ಬಿಡಬೇಡಿರಿ. ಏಕೆಂದರೆ ನೀವು ಕರ್ತನನ್ನು ಬಿಗಿಯಾಗಿ ಹಿಡಿದುಕೊಂಡಾಗ - ಪರಿಸ್ಥಿತಿ ಏನೇ ಇರಲಿ - ಪ್ರತಿಯೊಂದು ಪರಿಸ್ಥಿತಿಯಲ್ಲಿ ಜಯಿಸಲು ಆತನು ನಿಮಗೆ ಸಹಾಯ ಮಾಡುವನು. ನೀವು ಆತನನ್ನು ಇನ್ನೂ ಹೆಚ್ಚಾಗಿ ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ಆತನು ಪ್ರತಿಯೊಂದು ಕಷ್ಟಕರವಾದ ಪರಿಸ್ಥಿತಿಯನ್ನು ಯೊಜಿಸಿದ್ದಾನೆ. ಕಷ್ಟಕರವಾದ ಸನ್ನಿವೇಷಗಳಲ್ಲಿ ಅವಿಶ್ವಾಸಿಗಳು ಹಾಗೂ ಲೌಕಿಕ-ವಿಶ್ವಾಸಿಗಳು ಸೋತುಹೋಗುತ್ತಾರೆ. ಅವರು ದೇವರ ಕಡೆ ತಿರುಗುವ ಬದಲಾಗಿ ಲೋಕದ ಕಡೆಗೆ ತಿರುಗುತ್ತಾರೆ ಮತ್ತು ಸೋಲು-ಸಂಕಟಗಳ ಸಮಯದಲ್ಲಿ ವಿಶ್ರಾಂತಿ ಹಾಗೂ ಶಾಂತಿಯನ್ನು ಪಡೆಯಲು ನಿಷೇಧಿತ ಪದಾರ್ಥಗಳ ಪ್ರಯೋಗವನ್ನು ಮಾಡುತ್ತಾರೆ. ನೀವು ಎಂದಿಗೂ ಇಂತಹ ಕೆಲಸಗಳಿಗೆ ಕೈಹಾಕಬೇಡಿರಿ. ಇದು ಆರಂಭದಲ್ಲಿ ಹಾನಿಯಿಲ್ಲದ ಅನುಭವದಂತೆ ಕಂಡುಬಂದರೂ, ನೀವು ಬಹಳ ಸುಲಭವಾಗಿ ದುರಭ್ಯಾಸದ ಹಿಡಿತಕ್ಕೆ ಒಳಗಾಗುತ್ತೀರಿ.

ಒಂದು ಬಾರಿಯೂ ಸೋಲನ್ನು ಅನುಭವಿಸದ ಜನರು ’ಪರಿಪೂರ್ಣತೆ’ಯನ್ನು ಸಾಧಿಸುವುದಿಲ್ಲ, ಆದರೆ ಯಾರು ತಮ್ಮ ಸೋಲುಗಳ ಬಗ್ಗೆ ಯಥಾರ್ಥರಾಗಿದ್ದಾರೋ ಮತ್ತು ಸೋತ ಕೂಡಲೇ ತಿರುಗಿ ಮೇಲೆದ್ದು ಮುಂದುವರಿಯುತ್ತಾರೋ, ಅವರು ಪರಿಪೂರ್ಣತೆಯನ್ನು ಸಾಧಿಸುತ್ತಾರೆ.

ನಾವು ’ಧಾರ್ಮಿಕ’ ಮನೋಭಾವವನ್ನು ಇರಿಸಿಕೊಂಡು, ಅದು ’ಆತ್ಮಿಕತೆ’ ಎಂದು ಭಾವಿಸುವ ಅಪಾಯವನ್ನು ಯಾವಾಗಲೂ ಎದುರಿಸುತ್ತೇವೆ. ಧಾರ್ಮಿಕ ಜನರು ಹೊರಗಿನ ಜೀವಿತದ ಬಗ್ಗೆ ಕಾಳಜಿ ವಹಿಸುತ್ತಾರೆ - ಇತರರಿಗೆ ಕಾಣುವುದರ ಸಲುವಾಗಿ ಕರ್ತನಿಗಾಗಿ ತ್ಯಾಗ ಮಾಡುವುದು, ಕರ್ತನಿಗಾಗಿ ಸಭಾ-ಚಟುವಟಿಕೆಗಳಲ್ಲಿ ಕನಿಷ್ಟವಾದುದನ್ನು ಮಾಡುವುದರ ಮೂಲಕ ಸಭೆಯಲ್ಲಿ ಇತರರು ತಮ್ಮನ್ನು ಒಳ್ಳೆಯ ಕ್ರೈಸ್ತರೆಂದು ತಿಳಿಯಲಿ ಎಂದು ಬಯಸುವುದು; ಸಭೆಗೆ ಹೋಗುವಾಗ ತಮ್ಮ ಉಡುಪಿಗೆ ಗಮನವನ್ನು ಕೊಡುವುದು, ದೇವರ ವಾಕ್ಯವನ್ನು (ಅನುಸರಿಸದೇ ಇದ್ದು) ಬೌದ್ಧಿಕವಾಗಿ ಅಭ್ಯಾಸ ಮಾಡುವುದು , ಸಭಾಕೂಟಗಳಲ್ಲಿ(ಭಾವಾತಿರೇಕವನ್ನು ದೇವರಾತ್ಮನ ಬಲ ಎಂದು ತಿಳಿದು) ಭಾವನಾತ್ಮಕವಾಗಿ ಪಾಲ್ಗೊಳ್ಳುವುದು, ಇತ್ಯಾದಿ. ಇಲ್ಲಿ ಹೇಳಿದ ಸಂಗತಿಗಳಲ್ಲಿ ಯಾವುದೂ ತಪ್ಪು ಅಥವಾ ಪ್ರಮುಖವಾದುದಲ್ಲ ಎಂದರ್ಥವಲ್ಲ. ಆದರೆ ಧಾರ್ಮಿಕ ಜನರು ಈ ಚಟುವಟಿಕೆಗಳೇ ಅತಿ ಪ್ರಾಮುಖ್ಯವೆಂದು ತಿಳಿಯುತ್ತಾರೆ ಮತ್ತು ಇವೆಲ್ಲವು ಆತ್ಮಿಕತೆಯ ಗುರುತುಗಳೆಂದು ಆಲೋಚಿಸಿ, ಆ ಮೂಲಕ ಮೋಸಹೋಗುತ್ತಾರೆ.

ಆದಾಗ್ಯೂ, ನಿಜವಾದ ಆತ್ಮಿಕ ಜನರು ದೇವರನ್ನು ಚೆನ್ನಾಗಿ ತಿಳಿದುಕೊಳ್ಳಲು ಹಂಬಲಿಸುತ್ತಾರೆ, ಮತ್ತು ಯೇಸುವಿಗಾಗಿ ಮತ್ತು ಸಹ-ವಿಶ್ವಾಸಿಗಳಿಗಾಗಿ ತಮ್ಮ ಪ್ರೀತಿಯು ಹೆಚ್ಚುತ್ತಾ ಇರಬೇಕೆಂದು ಹಂಬಲಿಸುತ್ತಾರೆ, ದೇವರು ತಮ್ಮಿಂದ ಏನನ್ನು ಬಯಸುತ್ತಾರೆಂದು ತಿಳಿದುಕೊಳ್ಳಲು ತವಕಿಸುತ್ತಾರೆ (’ದೇವರಿಗಾಗಿ ಏನಾದರೂ ಮಾಡುವುದು’ ಅವರ ಗುರಿಯಲ್ಲ), ಅವರು ಪವಿತ್ರಾತ್ಮನ ಬಲಕ್ಕಾಗಿ ಹಂಬಲಿಸುತ್ತಾರೆ, ಮತ್ತು ತಮ್ಮ ಕಾರ್ಯಗಳಲ್ಲಿ ಸ್ವಾರ್ಥದ ಉದ್ದೇಶವಿಲ್ಲದಂತೆ ತಮ್ಮನ್ನು ಶುದ್ಧವಾಗಿ ಇರಿಸಿಕೊಳ್ಳುತ್ತಾರೆ. ’ಧಾರ್ಮಿಕ’ ಜನರು ಸಮೂಹಗಳನ್ನು ಕಟ್ಟುತ್ತಾರೆ. ’ಆತ್ಮಿಕ’ ಜನರು ಕ್ರಿಸ್ತನ ದೇಹವನ್ನು ಕಟ್ಟುತ್ತಾರೆ.

ದೇವರು ಪ್ರಪಂಚದೆಲ್ಲೆಡೆಯೂ ತನಗಾಗಿ ಯಥಾರ್ಥ ಮನಸ್ಸಿನಿಂದ ನಿಲ್ಲುವ ಜನರಿಗಾಗಿ ಹುಡುಕುತ್ತಿದ್ದಾರೆ; ಇಂತಹ ಜನರು, ದೇವರ ಸತ್ಯವನ್ನು ತಮಗೆ ಬೇಕಾದಂತೆ ಬದಲಾಯಿಸಿ ವಿಕೃತಗೊಳಿಸಿದ ಮತ್ತು ಸತ್ಯವೇದದಲ್ಲಿ ’ಸೊಳ್ಳೆಯನ್ನು ಸೋಸಿದರು, ಒಂಟೆಯನ್ನು ನುಂಗಿದರು,’ ಎಂಬುದಾಗಿ ವಿವರಿಸಲ್ಪಟ್ಟ ಫರಿಸಾಯರಂತೆ ಇರುವುದಿಲ್ಲ. ದೇವರ ವಾಕ್ಯದ ಮೂಲತತ್ವಗಳನ್ನು ನಂಬಿ, ಅವುಗಳನ್ನು ಉಳಿಸಿಕೊಳ್ಳುವುದಕ್ಕೆ ದೃಢವಾಗಿ ನಿಂತು, ಅದಕ್ಕಾಗಿ ಎಂತಹ ತ್ಯಾಗವನ್ನಾದರೂ ಮಾಡಲು ಸಿದ್ಧರಾಗಿದ್ದ ಎಲೀಯನು, ಸ್ನಾನಿಕನಾದ ಯೋಹಾನನು ಮತ್ತು ಪೌಲನು, ಮಾರ್ಟಿನ್ ಲೂಥರ್, ಜಾನ್ ವೆಸ್ಲಿ ಮತ್ತು ಎರಿಕ್ ಲಿಡ್ಡೆಲ್, ಈ ದೇವಭಕ್ತರಂತ ಜನರನ್ನು ದೇವರು ಹುಡುಕುತ್ತಿದ್ದಾರೆ. ದೇವರು ಇಂತಹ ಶಿಸ್ತಿನ ಜೀವನವನ್ನು ಬಾಳುವ ಜನರಿಂದ ಪರಲೋಕವನ್ನು ತುಂಬಿಸಲಿದ್ದಾರೆ. ನೀವೂ ಸಹ ಅವರಲ್ಲಿ ಒಬ್ಬರಾಗಿರಬೇಕು ಎಂದು ನಾನು ಪ್ರಾರ್ಥಿಸುತ್ತೇನೆ. ನಿಮ್ಮ ಶಾಲಾ-ಕಾಲೇಜುಗಳಲ್ಲಿ ಕರ್ತನಿಗಾಗಿ ನಿಲ್ಲುವ ಹಲವಾರು ಅವಕಾಶಗಳು ಇರುತ್ತವೆ. ನೀವು ಪ್ರತಿಯೊಂದು ಸಂದರ್ಭದಲ್ಲಿಯೂ ಇದನ್ನೇ ಮಾಡುವವರಾಗಿರಿ.

================

’ಧಾರ್ಮಿಕ’ ಜನರು ಸಮೂಹಗಳನ್ನು ಕಟ್ಟುತ್ತಾರೆ. ’ಆತ್ಮಿಕ’ ಜನರು ಕ್ರಿಸ್ತನ ದೇಹವನ್ನು ಕಟ್ಟುತ್ತಾರೆ.

=======

ಕಳೆದ ಶತಮಾನಗಳಲ್ಲಿ ಅನೇಕ ದೇವಭಕ್ತರು ಸತ್ಯವೇದವನ್ನು ಆಂಗ್ಲಭಾಷೆಗೆ ಭಾಷಾಂತರಿಸಲು ಮತ್ತು ಸುವಾರ್ತೆಯ ಸಂದೇಶವನ್ನು ಪರಿಶುದ್ಧವಾಗಿ ಕಾಪಾಡಿಕೊಳ್ಳಲು ತಮ್ಮ ಜೀವಿತವನ್ನು ಸಮರ್ಪಿಸಿದ್ದಾರೆ. ಆದರೆ ಇಂದು, ಅನೇಕ ವಿಶ್ವಾಸಿಗಳ ಮನೆಗಳಲ್ಲಿ ಸತ್ಯವೇದದ ಅಧ್ಯಯನ ಮಾಡುವುದಂತೂ ಇರಲಿ, ಅದನ್ನು ಓದುವುದಕ್ಕೂ ಸಹ ಐದು ನಿಮಿಷಗಳನ್ನು ಕಳೆಯುವುದಿಲ್ಲ. ಹಿಂದಿನ ಶತಮಾನಗಳ ಅನೇಕ ದೇವಭಕ್ತರು ಇಂದು ನಾವು ಪಡೆದಿರುವ ತತ್ವ-ಸಿದ್ಧಾಂತಗಳ ಸ್ಪಷ್ಟವಾದ ತಿಳುವಳಿಕೆಯನ್ನು ಹೊಂದದೇ ಇದ್ದಿರಬಹುದು. ಆದರೆ ಕ್ರಿಸ್ತನ ಬಗ್ಗೆ, ಈ ದಿನಗಳಲ್ಲಿ ಅಪರೂಪವಾಗಿ ಕಂಡುಬರುವ ಸಮರ್ಪಣಾಭಾವವನ್ನು ಅವರು ಹೊಂದಿದ್ದರು. ಕೊನೆಯ ಸಮಯದಲ್ಲಿ, ಅತ್ಯಂತ ಮಹತ್ವವಾದುದು ಇದೇ ಆಗಿದೆ; ಕೇವಲ ಸರಿಯಾದ ಸಿದ್ಧಾಂತ ಮಾತ್ರ ಅಲ್ಲ.

’ಮರೆವು’ ಪಾಪದಂತಹ ಗಂಭೀರವಾದ ವಿಷಯವಲ್ಲ. ಆದರೆ ನೀವು ಅದನ್ನು ಜಯಿಸಿದರೆ, ಹಲವಾರು ಇಕ್ಕಟ್ಟಿನ ಪರಿಸ್ಥಿತಿಗಳಿಂದ ತಪ್ಪಿಸಿಕೊಳ್ಳುತ್ತೀರಿ. ನಮಗೆಲ್ಲರಿಗೆ ಮರೆಯುವ ಸ್ವಭಾವವಿದೆ. ಈಚೆಗಿನ ದಿನಗಳಲ್ಲಿ ನನ್ನ ಮರೆಯುವಿಕೆಯಿಂದ ಬಿಡುಗಡೆ ಹೊಂದಲು ನಾನು ಮಾಡುವುದು ಏನೆಂದರೆ, ನಾನು ಮಾಡಬೇಕಾಗಿರುವ ಮುಖ್ಯವಾದ ವಿಷಯಗಳನ್ನು ಒಂದು ಚಿಕ್ಕ ಪುಸ್ತಕದಲ್ಲಿ ಬರೆದಿಟ್ಟುಕೊಂಡು, ಅದನ್ನು ಯಾವಾಗಲೂ ನನ್ನ ಬಳಿ ಇಟ್ಟುಕೊಳ್ಳುತ್ತೇನೆ. ಇದಲ್ಲದೆ ಕರ್ತನು ನನ್ನೊಂದಿಗೆ ಮಾತನಾಡುವ ವಿಷಯಗಳನ್ನು ಸಹ ನಾನು ಬರೆದಿಟ್ಟುಕೊಳ್ಳುತ್ತೇನೆ. ನಾನು ಈ ವಿಷಯಗಳನ್ನು ಬರೆದುಕೊಳ್ಳದಿದ್ದರೆ, ಕರ್ತನು ನನಗೆ ಹೇಳಿದ ಮಾತನ್ನು ಅನೇಕ ಬಾರಿ ನಾನು ಮರೆಯುತ್ತೇನೆಂದು ನನಗೆ ತಿಳಿದಿದೆ.