ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ
WFTW Body: 

"ದೇವರ ವಸ್ತುವನ್ನು ನಾಯಿಗಳಿಗೆ ಹಾಕಬೇಡಿರಿ; ನಿಮ್ಮ ಮುತ್ತುಗಳನ್ನು ಹಂದಿಗಳ ಮುಂದೆ ಚೆಲ್ಲಬೇಡಿರಿ. ಚೆಲ್ಲಿದರೆ ತಮ್ಮ ಕಾಲಿನಿಂದ ಅವುಗಳನ್ನು ತುಳಿದು ಹಿಂತಿರುಗಿ ಬಂದು ನಿಮ್ಮನ್ನು ಸೀಳಿಬಿಟ್ಟಾವು" (ಮತ್ತಾಯನು 7:6). ಈ ಮಾತಿನ ಅರ್ಥವೇನು? ಇದೇ ರೀತಿಯ ಇನ್ನೊಂದು ಹೇಳಿಕೆಯನ್ನು ಯೇಸುವು ಸುರೋಪೊಯಿನಿಕ್ಯ ಪ್ರಾಂತ್ಯದ ತೂರ್ ಎಂಬ ಪಟ್ಟಣದಲ್ಲಿ ನುಡಿದನು (ಮತ್ತಾಯನು 15:21-28). ತೂರ್ ಪಟ್ಟಣದ ಒಬ್ಬ ಮಹಿಳೆಯು ಯೇಸುವಿನ ಬಳಿಗೆ ಬಂದು, ತನ್ನ ದೆವ್ವ ಹಿಡಿದಿದ್ದ ಮಗಳಿಗಾಗಿ ಆತನ ಸಹಾಯವನ್ನು ಬೇಡಿದಳು. ಆಗ ಯೇಸುವು, "ಮಕ್ಕಳು ತಿನ್ನುವ ರೊಟ್ಟಿಯನ್ನು ತೆಗೆದುಕೊಂಡು ನಾಯಿಮರಿಗಳಿಗೆ ಹಾಕುವುದು ಸರಿಯಲ್ಲ," ಎಂದು ಹೇಳಿದನು (ಮತ್ತಾಯನು 15:26). ಈ ಹೇಳಿಕೆಯ ಕುರಿತಾಗಿ ಕೆಲವು ಜನರು ಪ್ರಶ್ನೆ ಹಾಕಿದ್ದಾರೆ.

ಯೇಸುವು ಆಕೆಯನ್ನು ನಾಯಿಯೆಂದು ಕರೆದನೇ? ನೀವು ಒಬ್ಬಾಕೆಗೆ ಸಹಾಯ ಮಾಡಲಿಕ್ಕಾಗಿ, ಅದರಲ್ಲೂ ನೀವು ಕೀಳಾಗಿ ಕಾಣುವ ಒಬ್ಬ ವ್ಯಕ್ತಿಯ ಸಹಾಯಕ್ಕಾಗಿ, 150 ಕಿಲೋಮೀಟರ್ ನಡೆದು ಹೋಗುತ್ತೀರಾ? 150 ಕಿಲೋಮೀಟರ್ ನಡೆಯಲು ಕನಿಷ್ಠ ಎರಡು ದಿನಗಳಾದರೂ ಬೇಕು. ಕ್ರಿಸ್ತನು ಆ ಊರಿಗೆ ಹೋದದ್ದು ಆತನಲ್ಲಿ ಆಕೆಯ ಕುರಿತಾಗಿ ಎಷ್ಟು ಆಳವಾದ ಪ್ರೀತಿಯಿತ್ತೆಂದು ನಮಗೆ ತೋರಿಸುತ್ತದೆ. ಆಕೆಯ ಮೇಲೆ ಆತನಲ್ಲಿ ಆಳವಾದ ಪ್ರೀತಿ ಇದ್ದಾಗ್ಯೂ, ಆಕೆ ತಾನು ದೇವರ ಯಾವ ಅನುಗ್ರಹಕ್ಕೂ ಅರ್ಹಳಲ್ಲವೆಂದು ಅರಿತುಕೊಂಡು, ತನ್ನನ್ನು ಸಂಪೂರ್ಣವಾಗಿ ತಗ್ಗಿಸಿಕೊಳ್ಳಲು ಒಪ್ಪಿಕೊಳ್ಳುತ್ತಾಳೋ ಎಂದು ಯೇಸು ಆಕೆಯನ್ನು ಪರೀಕ್ಷಿಸಿದ್ದನ್ನು ಇಲ್ಲಿ ನಾವು ಕಾಣುತ್ತೇವೆ. ಆಕೆ, "ಹೌದು ಸ್ವಾಮಿ, ನಾನು ನಾಯಿಯೇ ನಿಜ, ಆದರೆ ಮೇಜಿನಿಂದ ಬೀಳುವ ಚೂರುಗಳನ್ನು ತಿನ್ನಲು ನನಗೆ ಅವಕಾಶವಿದೆಯಲ್ಲವೇ?" ಎಂದು ಹೇಳಿದಾಗ, ಯೇಸುವು "ಅಮ್ಮಾ, ನಿನ್ನ ನಂಬಿಕೆ ದೊಡ್ಡದು!" ಎಂದನು. ಇಡೀ ಸತ್ಯವೇದದಲ್ಲಿ ಯೇಸುವು ಇಂತಹ ಮಾತನ್ನು ಇಬ್ಬರಿಗೆ ಮಾತ್ರ ಹೇಳಿದ್ದು ದಾಖಲಾಗಿದೆ, ಅವರಿಬ್ಬರೂ ಯಹೂದ್ಯ ಜನಾಂಗಕ್ಕೆ ಸೇರಿದವರಲ್ಲ. ಒಬ್ಬನು ರೋಮ್ ರಾಜ್ಯದ ಶತಾಧಿಪತಿ, ಇನ್ನೊಬ್ಬಳು ಸುರೋಪೊಯಿನಿಕ್ಯ ಪ್ರಾಂತ್ಯದ ಈ ಸ್ತ್ರೀ. ಆಕೆಯನ್ನು ಯೇಸು ಎಷ್ಟು ಮೆಚ್ಚಿದರು ನೋಡಿ!

ನಾವು ತಿಳಿದುಕೊಳ್ಳಬೇಕಾದದ್ದು ಏನೆಂದರೆ, ಈ ವಾಕ್ಯಗಳಲ್ಲಿ ಯೇಸುವು ನಾಯಿಗಳು ಮತ್ತು ಹಂದಿಗಳನ್ನು ಪ್ರಸ್ತಾಪಿಸುವುದರ ಮೂಲಕ ಈ ಜನರನ್ನು ಕೀಳಾಗಿ ಕಾಣಲಿಲ್ಲ. ಅವರು ಹೀಗೆ ನುಡಿದದ್ದು ನಾವು ದೇವರಿಂದ ಏನನ್ನೂ ಪಡೆಯುವ ಅರ್ಹತೆಯನ್ನು ಹೊಂದಿಲ್ಲ ಎಂಬುದನ್ನು ತೋರಿಸಲಿಕ್ಕಾಗಿ. "ದೇವರು ನನಗಾಗಿ ಏನಾದರೂ ಮಾಡಲೇಬೇಕು, ನಾನು ಅದಕ್ಕೆ ಅರ್ಹಳಾಗಿದ್ದೇನೆ" ಎಂದು ಯಾರು ಭಾವಿಸುತ್ತಾರೋ, ಅವರು ದೇವರ ಮುಂದೆ ಮನುಷ್ಯನ ಸ್ಥಾನವನ್ನು ಅರಿತಿಲ್ಲ. ನೀನೂ ನಾನೂ ನರಕವೊಂದಕ್ಕೇ ಅರ್ಹತೆಯನ್ನು ಹೊಂದಿದ್ದೇವೆ. ನಾವು ದೇವರ ಬಳಿಗೆ ಹೋಗಿ, "ಸ್ವಾಮಿ, ನನ್ನ ಅರ್ಹತೆಗೆ ತಕ್ಕಂತೆ ನನಗೆ ಕೊಡು," ಎಂದು ಕೇಳಿದರೆ, ಅವರು ನಮಗೆ ನರಕವನ್ನೇ ಕೊಡಬೇಕಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ನಮಗೆ ಏನಾದರೂ ದೊರೆತಿದ್ದರೆ, ಆ ಪ್ರತಿಯೊಂದೂ ದೇವರ ಕೃಪೆಯ ನಿಮಿತ್ತವಾಗಿ ದೊರೆತಿದೆ. ನಾವು ಇದನ್ನು ತಿಳಿದುಕೊಂಡರೆ, ನಮಗೆ ಅರ್ಹತೆಯಿಲ್ಲದ ಅನೇಕ ಆಶೀರ್ವಾದಗಳನ್ನು ದೇವರು ನಮಗೆ ನೀಡಿದ್ದಾರೆ ಎಂಬುದು ಅರ್ಥವಾಗುತ್ತದೆ. ಆದರೆ ಅನೇಕರು ಇದನ್ನು ಅರ್ಥಮಾಡಿಕೊಂಡಿಲ್ಲ.

ಹಾಗಾದರೆ, ನಾವು ಇಂತಹ ಹೇಳಿಕೆಗಳನ್ನು ಓದಿಕೊಂಡ ನಂತರ ಯಾರನ್ನಾದರೂ ನಾಯಿಯಂತೆ ಅಥವಾ ಹಂದಿಯಂತೆ ಕಾಣಬಹುದೆಂದು ಭಾವಿಸಬಾರದು. ನಾವೆಲ್ಲರೂ ಪಾಪಿಗಳು. ನಮ್ಮಲ್ಲಿ ಪ್ರತಿಯೊಬ್ಬನೂ ಪಾಪಿಯೇ ಆಗಿದ್ದಾನೆ. ಎಲ್ಲರೂ ಪಾಪಿಗಳಾಗಿದ್ದೇವೆ. ದೇವರ ಕೃಪೆಯ ಮೂಲಕ ನಮ್ಮಲ್ಲಿ ಕೆಲವರು ಪಾಪ ಕ್ಷಮಾಪಣೆಯನ್ನು ಹೊಂದಿ ರಕ್ಷಿಸಲ್ಪಟ್ಟಿದ್ದೇವೆ, ಇನ್ನು ಕೆಲವರು ಇನ್ನೂ ಪಾಪದಲ್ಲಿದ್ದಾರೆ, ಆದಾಗ್ಯೂ ನಾವೆಲ್ಲರೂ ಮೂಲತಃ ಪಾಪಿಗಳೇ ಆಗಿದ್ದೇವೆ, ಏಕೆಂದರೆ ಪಾಪವು ಆದಾಮನಿಂದ ನಾವು ಪಡೆದ ಬಾಧ್ಯತೆಯಾಗಿದೆ. ಹಾಗಾಗಿ ಒಬ್ಬ ವ್ಯಕ್ತಿ ತಾನು ಇನ್ನೊಬ್ಬನಿಗಿಂತ ಉತ್ತಮನೆಂದು ಭಾವಿಸುವುದಕ್ಕೆ ಅಥವಾ ಇನ್ನೊಬ್ಬನನ್ನು ನಾಯಿ ಅಥವಾ ಹಂದಿಯೆಂದು ಕೀಳಾಗಿ ಪರಿಗಣಿಸುವುದಕ್ಕೆ ಯಾವುದೇ ಅವಕಾಶವಿಲ್ಲ.

"ದೇವರ ವಸ್ತುವನ್ನು ನಾಯಿಗಳಿಗೆ ಹಾಕಬೇಡಿರಿ" ಎಂಬ ಯೇಸುವಿನ ಮಾತಿನ ಅರ್ಥ, "ಯಾವುದರ ಮೌಲ್ಯವನ್ನು ಜನರು ತಿಳಿಯುವುದಿಲ್ಲವೋ ಅದನ್ನು ಅವರಿಗೆ ನೀಡಬೇಡಿ" ಎಂದಾಗಿದೆ. ನಾಯಿಗೆ ಬರಿ ಮೂಳೆ ಮಾತ್ರ ಬೇಕಾಗಿದೆ. ಪವಿತ್ರವಾದದ್ದನ್ನು ಅದು ಬಯಸುವುದಿಲ್ಲ. ಒಬ್ಬ ಮನುಷ್ಯನು ದೇವರಿಗಿಂತ ಹೆಚ್ಚಾಗಿ ಇಹಲೋಕದ ವಸ್ತುಗಳ ಮೇಲೆ ಆಸಕ್ತಿ ಹೊಂದಿದ್ದರೆ, ಅವನು ಪ್ರಾಣಿಗಳಿಗಿಂತ ವಿಭಿನ್ನನಾಗಿಲ್ಲ. ನೀವು ಯಾವುದಕ್ಕಾಗಿ ಬದುಕುತ್ತೀರಿ? ನಿಮ್ಮ ಜೀವನ ಮಕ್ಕಳನ್ನು ಸಾಕುವುದು, ಲೈಂಗಿಕ ಅನುಭವ, ತಿನ್ನುವುದು, ನಿದ್ರಿಸುವುದು ಇಷ್ಟು ಮಾತ್ರವೇ? ವಾಸ್ತವವಾಗಿ ನೋಡಿದರೆ, ಪ್ರಾಣಿಗಳೂ ಇವುಗಳಿಗಾಗಿಯೇ ಬದುಕುತ್ತವೆ! ಪ್ರಾಣಿಗಳಿಗೆ ಯಾವಾಗಲೂ ಲೌಕಿಕ ಸಂಗತಿಗಳಲ್ಲಿ ಮಾತ್ರ ಆಸಕ್ತಿ ಇರುತ್ತದೆ. ನಾಯಿಗಳು ಮತ್ತು ಹಂದಿಗಳು ಯಾವಾಗಲೂ ನೆಲದ ಕಡೆಗೆ ನೋಡುತ್ತಿರುತ್ತವೆ. ಒಂದು ನಾಯಿ ಅಥವಾ ಹಂದಿ ಆಕಾಶದ ಕಡೆಗೆ ನೋಡಿ ಪರಲೋಕದ ಬಗ್ಗೆ ಎಂದಿಗೂ ಚಿಂತಿಸುವುದಿಲ್ಲ. ಇಲ್ಲಿ ’ನಾಯಿಗಳು’ ಎಂಬ ಪದದ ಅರ್ಥ, ಯಾವಾಗಲೂ ಪ್ರಾಣಿಗಳಂತೆ ಈ ಲೋಕದ ಸಂಗತಿಗಳಲ್ಲೇ ಮನಸ್ಸಿಡುವಂಥದ್ದು - "ಮನಸ್ಸನ್ನು ಭೂಲೋಕದ ವಿಷಯಗಳ ಮೇಲೆಯೇ ಇಟ್ಟಿರುವ ಜನರು" ಎಂದರ್ಥ.

ಒಬ್ಬ ನಿಜವಾದ ಕ್ರೈಸ್ತನು ತನ್ನ ತಲೆಯನ್ನು ಮೇಲೆತ್ತಿ ನಡೆಯುತ್ತಾನೆ. ಆತನು ಮೇಲಣ ಸಂಗತಿಗಳನ್ನು ದೃಷ್ಟಿಸುತ್ತಾನೆ. ಮೇಲಿರುವ ವಿಷಯಗಳಲ್ಲಿ ಆಸಕ್ತಿ ಇಲ್ಲದವರಿಗೆ ಪವಿತ್ರವಾದುದನ್ನು ಕೊಡುವುದು ವ್ಯರ್ಥ. ಅದು ಹಂದಿಗಳ ಮುಂದೆ ಮುತ್ತುಗಳನ್ನು ಸುರಿದಂತೆ. ಹಂದಿಗಳಿಗೆ ಬೇಕಾಗಿರುವುದು ಕಸ ಮತ್ತು ತಿಪ್ಪೆ. ಅವುಗಳಿಗೆ ಅದನ್ನೇ ತಿನ್ನಲು ಇಷ್ಟಪಡುತ್ತವೆ, ಹಾಗಾಗಿ ಅವುಗಳಿಗೆ ಪವಿತ್ರತೆಯ ಅರಿವನ್ನು ನೀಡುವುದು ವ್ಯರ್ಥ. ಮೇಲೆ ಉಲ್ಲೇಖಿಸಿದ ಸನ್ನಿವೇಶದಲ್ಲಿ ಯೇಸುವು ಪರ್ವತ ಪ್ರಸಂಗದ ಬಗ್ಗೆ ಹೇಳುತ್ತಿದ್ದಾನೆ - ಅವಿಶ್ವಾಸಿಗಳಿಗೆ ಪರ್ವತ ಪ್ರಸಂಗವನ್ನು ಬೋಧಿಸುವುದು ಸೂಕ್ತವಲ್ಲ. ಮತ್ತಾಯನು 7:6ರ ವಾಕ್ಯದ ಮುಖ್ಯಾಂಶ ಏನೆಂದರೆ: ಈ ಸಂದೇಶವನ್ನು ಹೊಸದಾಗಿ ಹುಟ್ಟದೇ ಇರುವವರಿಗೆ ನೀಡಬೇಡಿ, ಏಕೆಂದರೆ ಇದರ ಮಹತ್ವವನ್ನು ಅವರು ಅರಿಯಲಾರರು. ಯಾವ ವ್ಯಕ್ತಿಗೆ ಯಾವ ಸತ್ಯಾಂಶವನ್ನು ತಿಳಿಸಬೇಕೆಂಬ ತಿಳುವಳಿಕೆ ನಮ್ಮಲ್ಲಿ ಇರಬೇಕು. ಮೇಲಿನ ವಚನದಲ್ಲಿ ಕ್ರಿಸ್ತನ ಮಾತಿನ ಅರ್ಥ ಇದೇ ಆಗಿದೆ.

ಹೊಸದಾಗಿ ಹುಟ್ಟದೇ ಇರುವ ಜನರಿಗೆ ಮಾನಸಾಂತರದ ಸಂದೇಶ ಅವಶ್ಯವಾಗಿದೆ. ಅವರು ತಾವು ಪಾಪಿಗಳೆಂಬ ತಿಳುವಳಿಕೆಯನ್ನು ಪಡೆಯಬೇಕು. ನರಕವೇ ತಮ್ಮ ಅರ್ಹತೆಯೆಂದು ಅವರು ತಿಳಿದುಕೊಳ್ಳಬೇಕು. ತಾವು ದಾರಿ ತಪ್ಪಿದ್ದೇವೆ, ದೇವರಿಂದ ಬೇರ್ಪಟ್ಟಿದ್ದೇವೆ ಮತ್ತು ನಿತ್ಯನರಕದ ಹಾದಿಯಲ್ಲಿದ್ದೇವೆ, ಎಂದು ಅವರು ಅರಿತುಕೊಳ್ಳಬೇಕು. ಇದು ಅವಿಶ್ವಾಸಿಗಳು ಮತ್ತು ಕ್ರೈಸ್ತ ಕುಟುಂಬಗಳಲ್ಲಿ ಜನಿಸಿರುವ ಜನರೂ ಸಹ (ಯಥಾರ್ಥವಾಗಿ ಹೊಸದಾಗಿ ಹುಟ್ಟದೆ, ಕ್ರಿಸ್ತನೊಂದಿಗೆ ಜೀವವುಳ್ಳ ಸಂಬಂಧವನ್ನು ಪಡೆಯದೇ ಇರುವಂತವರು) ಕೇಳಿಸಿಕೊಳ್ಳಬೇಕಾದ ಸಂದೇಶವಾಗಿದೆ.

ಪ್ರತಿಯೊಬ್ಬ ಮನುಷ್ಯನು ತನ್ನ ಜೀವಿತದಲ್ಲಿ ದೇವರಿಗೆ ಮೊದಲ ಸ್ಥಾನ ನೀಡದಿದ್ದರೆ, ಅವನು ವಾಸ್ತವವಾಗಿ ಒಂದು ಪ್ರಾಣಿಯಂತೆಯೇ ಇದ್ದಾನೆ. ಒಂದು ಪ್ರಾಣಿಗೆ ದೇವರಲ್ಲಿ, ಪ್ರಾರ್ಥನೆಯಲ್ಲಿ, ದೇವರ ಮಾತನ್ನು ಕೇಳಿಸಿಕೊಳ್ಳುವುದರಲ್ಲಿ ಆಸಕ್ತಿ ಇರುವುದಿಲ್ಲ. ಒಬ್ಬ ಮನುಷ್ಯನು ಪ್ರಾರ್ಥನೆಯಿಲ್ಲದೆ, ದೇವರ ಬಗ್ಗೆ ಚಿಂತಿಸದೆ, ದೇವರು ಹೇಳುವ ಮಾತಿನಲ್ಲಿ ಆಸಕ್ತಿಯಿಲ್ಲದೆ ಜೀವಿಸುತ್ತಿದ್ದರೆ, ಅವನು ಒಂದು ಪ್ರಾಣಿಯ ಮಟ್ಟದಲ್ಲೇ ಇದ್ದಾನೆ. ಒಂದು ಪ್ರಾಣಿಗೆ ಲೈಂಗಿಕ ಕಾಮದಲ್ಲಿ ಆಸಕ್ತಿಯಿದೆ. ಒಬ್ಬ ಮನುಷ್ಯನ ಪ್ರಾಥಮಿಕ ಆಸಕ್ತಿ ಲೈಂಗಿಕ ಕಾಮವೇ ಆಗಿದ್ದರೆ, ಆತನು ಒಂದು ಪ್ರಾಣಿಯಂತಿದ್ದಾನೆ. ಪ್ರತಿಯೊಂದು ಪ್ರಾಣಿಯ ಆಸಕ್ತಿ ಕಾಮ ಮತ್ತು ಆಹಾರವಾಗಿದೆ, ಮತ್ತು ಮಾನವನು ಕೇವಲ ಆಹಾರ, ಕಾಮ, ನಿದ್ರೆ ಮತ್ತು ಮಕ್ಕಳನ್ನು ಪಡೆಯುವುದರಲ್ಲಿ ಮಾತ್ರವೇ ಆಸಕ್ತನಾಗಿದ್ದರೆ, ಅವನು ಸಂಪೂರ್ಣವಾಗಿ ಪ್ರಾಣಿಗಳಂತೆಯೇ ಇದ್ದಾನೆ. ದೇವರು ಮನುಷ್ಯನನ್ನು ಸೃಷ್ಟಿಸಿದಾಗ ಹಂದಿ, ನಾಯಿ ಮತ್ತು ಇತರ ಎಲ್ಲಾ ಪ್ರಾಣಿಗಳನ್ನು ಸೃಷ್ಟಿಸಿದ ಮಣ್ಣಿನಿಂದಲೇ ಆತನನ್ನು ಸೃಷ್ಟಿಸಿದರು. ಆ ಮಣ್ಣಿನಲ್ಲಿ ಯಾವ ವ್ಯತ್ಯಾಸವೂ ಇರಲಿಲ್ಲ.

ನೀವು ನಾಯಿಗಳು ಮತ್ತು ಹಂದಿಗಳ ದೇಹದ ಆಂತರಿಕ ಅಂಗಗಳನ್ನು ಪರೀಕ್ಷಿಸಿದರೆ, ಮನುಷ್ಯ ಮತ್ತು ಆ ಪ್ರಾಣಿಗಳ ಆಂತರಿಕ ಅಂಗಗಳ ನಡುವೆ ಬಹಳಷ್ಟು ಹೋಲಿಕೆಯಿದೆ. ಈ ವಿಷಯದಲ್ಲಿ ಕರ್ತನು ತೋರಿಸುತ್ತಿರುವುದು ಏನೆಂದರೆ, ಇವೆರಡು ವರ್ಗಗಳು ಭೌತಿಕವಾಗಿ ಒಂದೇ ವಸ್ತುವಿನಿಂದ ಸೃಷ್ಟಿಸಲ್ಪಟ್ಟಿವೆ. ಇದೇ ಕಾರಣಕ್ಕಾಗಿ ದೇವರು ಆರನೇ ದಿನದಲ್ಲಿ ಪ್ರಾಣಿಗಳನ್ನು ಮತ್ತು ಮನುಷ್ಯನನ್ನು ಸೃಷ್ಟಿಸಿದರು. ಅವರು ಆರನೆಯ ದಿನದ ಮೊದಲ ಭಾಗದಲ್ಲಿ ಪ್ರಾಣಿಗಳನ್ನು ಸೃಷ್ಟಿಸಿದರು ಮತ್ತು ಆ ದಿನದ ಎರಡನೇ ಭಾಗದಲ್ಲಿ ಮನುಷ್ಯನನ್ನು ಸೃಸ್ಟಿಸಿದರು. ಆದರೆ ಪ್ರಾಣಿಗಳ ಸೃಷ್ಟಿಯಲ್ಲಿ ಒಂದು ದೊಡ್ಡ ವ್ಯತ್ಯಾಸವಿತ್ತು: ದೇವರು ಪ್ರಾಣಿಗಳ ಮೇಲೆ ಜೀವಶ್ವಾಸವನ್ನು ಊದಲಿಲ್ಲ. ಅವುಗಳು ನೆಲದ ಮಣ್ಣಿನಿಂದ ಸೃಷ್ಟಿಸಲ್ಪಟ್ಟಾಗ ಅವುಗಳಿಗೆ ತಾನಾಗಿಯೇ ಉಸಿರು ಬಂದಿತು, ಆದರೆ ಮಾನವನ ಸಂಗತಿ ವಿಭಿನ್ನವಾಗಿತ್ತು - ದೇವರು ಮಾನವನನ್ನು ಸೃಷ್ಟಿಸಿದ ತಕ್ಷಣ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದರು, ಮತ್ತು ಮನುಷ್ಯನು ಜೀವಂತ ಪ್ರಾಣಿಯಾದನು (ಆದಿಕಾಂಡ 2:7), ಮತ್ತು ಇದು - ದೇವರ ಜೀವಶ್ವಾಸ - ಆತನನ್ನು ಪ್ರಾಣಿಗಳಿಂದ ಒಡನೆಯೇ ಪ್ರತ್ಯೇಕಿಸಿತು.

ದೇವರು ಆದಾಮನೊಳಗೆ ಜೀವಶ್ವಾಸವನ್ನು ಊದಿರದಿದ್ದರೆ, ಅವನು ಮನುಷ್ಯನಂತೆ ಕಾಣಿಸುತ್ತಿದ್ದರೂ ಒಂದು ಪ್ರಾಣಿಯಂತೆಯೇ ಇರುತ್ತಿದ್ದನು. ಆದರೆ ದೇವರು ಅವನಲ್ಲಿ ಶ್ವಾಸವನ್ನು ಊದಿದ ಕ್ಷಣದಲ್ಲಿ ಅವನು ಜೀವವುಳ್ಳ ಪ್ರಾಣಿಯಾದನು. ಅವನು ಒಬ್ಬ ಮರಣವಿಲ್ಲದ ನಿರ್ಲಯನಾದನು, ಮತ್ತು ಪ್ರಾಣಿಗಳಿಗಿಂತ ವಿಭಿನ್ನನಾದನು, ಏಕೆಂದರೆ ಪ್ರಾಣಿಗಳಲ್ಲಿ ನಿರ್ಲಯತ್ವವಿಲ್ಲ. ಪ್ರಾಣಿಗಳು ಸತ್ತಾಗ ಮಣ್ಣಿಗೆ ಸೇರಿಕೊಳ್ಳುತ್ತವೆ. ಆದರೆ ದೇವರು ಮನುಷ್ಯನಲ್ಲಿ ಶ್ವಾಸವನ್ನು ಊದಿದಾಗ ಆತನು ಬದುಕುವ ಪ್ರಾಣಿಯಾದನು, ಅಂದರೆ ಆ ಕ್ಷಣದಲ್ಲಿ ಆತನು ನಿತ್ಯತ್ವಕ್ಕೆ ಬಾಧ್ಯನಾದನು. ಅವನು ನಿತ್ಯತ್ವಕ್ಕೆ ಬಾಧ್ಯನಾದದ್ದರಿಂದ ದೇವರಿಗೆ ಲೆಕ್ಕ ಒಪ್ಪಿಸಬೇಕಾಗಿದೆ. ಆದಾಗ್ಯೂ, ಆತನು ನಿತ್ಯಜೀವವನ್ನು ಹೊಂದಲ್ಲಿಲ್ಲ, ಏಕೆಂದರೆ ನಿತ್ಯಜೀವ ಆದಿ ಅಥವಾ ಆರಂಭವಿಲ್ಲದ ಜೀವವಾಗಿದೆ, ಮತ್ತು ಅದು ದೇವರಲ್ಲಿ ಮಾತ್ರ ಉಂಟು. ಆದರೆ ನಾವು ನಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು, ಕ್ರಿಸ್ತನ ಬಳಿಗೆ ಬಂದು ಆತನನ್ನು ನಮ್ಮ ಪ್ರಭು ಮತ್ತು ರಕ್ಷಕನಾಗಿ ಸ್ವೀಕರಿಸಿದಾಗ ಆ ನಿತ್ಯಜೀವವನ್ನು ಹೊಂದಬಹುದು. ನಮಗೆ ನಿತ್ಯಜೀವ ಈ ರೀತಿಯಾಗಿ ದೊರಕುತ್ತದೆ. ಇಲ್ಲದಿದ್ದರೆ, ನಾವು ಕೇವಲ ನಿರ್ಲಯ ಪ್ರಾಣಿಗಳಾಗುತ್ತೇವೆ ಮತ್ತು ದೇವರಿಂದ ದೂರವಾಗಿ, ನರಕಕ್ಕೆ ಹೋಗಿ ಅಲ್ಲೇ ನಿತ್ಯಕಾಲ ಜೀವಿಸಬೇಕಾಗುತ್ತದೆ.

ಕರ್ತನಾದ ಯೇಸುವು ನಮಗೆ ತಿಳಿಸುತ್ತಿರುವುದು ಏನೆಂದರೆ, ಈ ಭೂಮಿಯ ಮೇಲೆ ಎರಡು ವಿಭಿನ್ನ ವರ್ಗದ ಜನರಿದ್ದಾರೆ. ಕೇವಲ ಪ್ರಾಣಿಗಳಂತೆ (ನಾಯಿ ಅಥವಾ ಹಂದಿಯಂತೆ) ಜೀವಿಸುವ ಕೆಲವು ಜನರಿದ್ದಾರೆ, ಮತ್ತು ದೇವರ ಮಕ್ಕಳಾಗುವ ಬಾಧ್ಯತೆಯನ್ನು ಪಡೆದಿದ್ದೇವೆಂಬ ತಿಳುವಳಿಕೆಯನ್ನು ಪಡೆದಂತ ಇನ್ನು ಕೆಲವು ಜನರಿದ್ದಾರೆ, ಮತ್ತು ತಮ್ಮನ್ನು ದೇವರು ತನಗೆ ಲೆಕ್ಕ ಒಪ್ಪಿಸಬೇಕಾದ ನಿತ್ಯಜೀವಿಗಳನ್ನಾಗಿ ಮಾಡಿದ್ದಾನೆ ಎಂಬುದನ್ನು ಇವರು ಅರಿತುಕೊಂಡಿದ್ದಾರೆ. ದೇವರು ಮಣ್ಣಿನಿಂದ ಶರೀರವನ್ನು ಉಂಟುಮಾಡಿ ಅದರಲ್ಲಿ ಶ್ವಾಸವನ್ನು ಊದಿ ಮನುಷ್ಯನನ್ನು ಸೃಷ್ಟಿಸಿದನು; ಅದಲ್ಲದೆ ಮನುಷ್ಯನ ಮನಸ್ಸಾಕ್ಷಿಯ ಮೂಲಕ ತಾನು ತನ್ನ ಕ್ರಿಯೆಗಳಿಗೆ ಹಾಗೂ ಮಾತುಗಳಿಗೆ ಲೆಕ್ಕ ಒಪ್ಪಿಸಬೇಕೆಂಬ ಅರಿವು ಮನುಷ್ಯನಲ್ಲಿ ಉಂಟಾಯಿತು. ಪ್ರಾಣಿಗಳಲ್ಲಿ ಮನಸ್ಸಾಕ್ಷಿ ಇರುವುದಿಲ್ಲ. ಅವು ತಪ್ಪು ಮಾಡಿದಾಗ ಅವುಗಳಿಗೆ ಯಾವುದೇ ಅಪರಾಧ ಪ್ರಜ್ಞೆ ಇರುವುದಿಲ್ಲ, ಆದರೆ ಮನುಷ್ಯನಲ್ಲಿ (ಅವನು ಓದು ಬರಹ ತಿಳಿಯದ ಕಾಡುವಾಸಿ ಮನುಷ್ಯನೇ ಇರಬಹುದು) ಮನಸ್ಸಾಕ್ಷಿ ಇರುವುದರಿಂದ ಅವನಲ್ಲಿ ಅಪರಾಧ ಪ್ರಜ್ಞೆ ಇರುತ್ತದೆ.

ಅರಣ್ಯದ ಕಾಡುವಾಸಿಗಳು ಕೂಡ ತಲೆ ಬಾಗಿಸಿ ಆರಾಧಿಸುತ್ತಾರೆ - ಉದಾಹರಣೆಗೆ, ಅವರು ಯಾವುದೋ ಕಲ್ಲುಬಂಡೆಯನ್ನು ಅಥವಾ ಸೂರ್ಯನನ್ನು ಆರಾಧಿಸಬಹುದು. ಒಬ್ಬ ಸೃಷ್ಟಿಕರ್ತನಿದ್ದಾನೆ, ಆತನು ನಿತ್ಯಜೀವಿ ಮತ್ತು ದುಷ್ಟರಿಗೆ ನ್ಯಾಯತೀರಿಸುವವನು ಎಂಬ ಅರಿವು ಅವರಲ್ಲೂ ಇರುತ್ತದೆ. ನೀವು ಒಂದು ಧಾರ್ಮಿಕ ನಾಯಿಯನ್ನಾಗಲೀ, ದೇವಭಕ್ತಿಯುಳ್ಳ ಕೋತಿ ಅಥವಾ ಹಂದಿಯನ್ನಾಗಲೀ ಎಲ್ಲೂ ಕಾಣುವುದಿಲ್ಲ. ಹಾಗಿರುವಾಗ, ಕಾಡುಜನರಲ್ಲಿ ನ್ಯಾಯತೀರಿಸುವ ಒಬ್ಬ ನಿತ್ಯಜೀವಿ (ದೇವರು) ಇದ್ದಾನೆಂಬ ಪ್ರಜ್ಞೆ ಹೇಗೆ ಉಂಟಾಗುತ್ತದೆ? ಹೇಗೆಂದರೆ, ಅವರಲ್ಲಿ ಒಂದು ಮನಸ್ಸಾಕ್ಷಿಯಿದೆ. ಪ್ರತಿಯೊಬ್ಬ ಮನುಷ್ಯನಲ್ಲೂ ಒಂದು ಮನಸ್ಸಾಕ್ಷಿಯಿದೆ ಮತ್ತು ಇದು ಮನುಷ್ಯನನ್ನು ಹಂದಿ, ನಾಯಿ ಮತ್ತು ಇತರ ಪ್ರಾಣಿಗಳಿಂದ ಪ್ರತ್ಯೇಕಿಸುತ್ತದೆ.