ಯೇಸುವು ನಂಬಿಗಸ್ತ ವಿಶ್ವಾಸಿಗಳಿಗೆ ಪ್ರತಿಫಲ ನೀಡುತ್ತಾರೆ ಎಂಬುದು ನಿಜ (ಪ್ರಕಟನೆ 22:12) ಮತ್ತು ಕರ್ತರನ್ನು ಮೆಚ್ಚಿಸುವುದೇ ನಮ್ಮ ಜೀವನದ ಅಂತಿಮ ಬಯಕೆಯಾಗಿರಬೇಕು ಎಂಬುದು ಸಹ ನಿಜವಾದದ್ದು (2 ಕೊರಿ. 5:9), ಹೀಗಾಗಿ ನಾವು ಒಂದು ದಿನ ಕರ್ತರಿಂದ, "ಭಲಾ, ನಂಬಿಗಸ್ತನಾದ ಒಳ್ಳೆಯ ಸೇವಕನು" ಎಂಬ ಮಾತನ್ನು ಕೇಳಿಸಿಕೊಳ್ಳಬಹುದು; ಆದಾಗ್ಯೂ ಸ್ವತಃ ಯೇಸುವೇ ನಮಗೆ ನೀಡಿದ ಎಚ್ಚರಿಕೆ ಏನೆಂದರೆ, ನಾವು ಸ್ವರ್ಗೀಯ ಪ್ರತಿಫಲವನ್ನು ಪಡೆಯುವ ಸ್ವಾರ್ಥದ ಆಸೆಯನ್ನೇ ನಮ್ಮ ಮೂಲಪ್ರೇರಣೆಯನ್ನಾಗಿ ಇರಿಸಿಕೊಂಡು ಕರ್ತನಿಗಾಗಿ ತ್ಯಾಗ ಮಾಡುವುದಾಗಲೀ ಅಥವಾ ಆತನ ಸೇವೆಗೆ ಕೈಹಾಕುವುದಾಗಲೀ ಬೇಡ, ಎಂಬುದಾಗಿ.
ಪೇತ್ರನು ಒಬ್ಬ ಶ್ರೀಮಂತ ಯೌವನಸ್ಥ ಅಧಿಕಾರಿಯೊಂದಿಗೆ ತನ್ನನ್ನು ಹೋಲಿಸಿಕೊಂಡು (ಆ ಯೌವನಸ್ಥನು ಆಗ ತಾನೇ ಯೇಸುವಿನ ಬಳಿಯಿಂದ ಹೊರಟುಹೋಗಿದ್ದನು), ತಾನು ಆತನಿಗಿಂತ ಉತ್ತಮನು ಎಂದುಕೊಂಡು, "ಇಗೋ, ನಾವು ಎಲ್ಲವನ್ನೂ ಬಿಟ್ಟು ನಿನ್ನನ್ನು ಹಿಂಬಾಲಿಸಿದೆವು; ನಮಗೆ ಏನು ದೊರಕುವುದು?"(ಮತ್ತಾ. 19:27) ಎಂದು ಪ್ರಶ್ನಿಸಿದಾಗ ಅದಕ್ಕೆ ಪ್ರತ್ಯುತ್ತರವಾಗಿ ಯೇಸುವು ದ್ರಾಕ್ಷೇತೋಟದ ಕೆಲಸಗಾರರ ಸಾಮ್ಯವನ್ನು ಉಲ್ಲೇಖಿಸಿದರು (ಮತ್ತಾ. 20:1-16). ಆ ಸಾಮ್ಯದಲ್ಲಿ ನಾವು ನೋಡುವುದು ಏನೆಂದರೆ, ಸಂಬಳಕ್ಕಾಗಿ (ಪ್ರತಿಫಲಕ್ಕಾಗಿ) ಕೆಲಸವನ್ನು ಮಾಡಿದ ಆಳುಗಳು ಕೊನೆಯವರಾಗಿ ಸಂಬಳವನ್ನು ಪಡೆದರು, ಆದರೆ ಯಾವುದೇ ಪ್ರತಿಫಲದ ಆಲೋಚನೆಯಿಲ್ಲದೆ ಕೆಲಸವನ್ನು ಮಾಡಿದವರು (ಅವರ ಕೆಲಸದ ಪ್ರಮಾಣವು ಮೊದಲು ಕೆಲಸಕ್ಕೆ ಬಂದಿದ್ದವರ ಕೆಲಸದ ಹೋಲಿಕೆಯಲ್ಲಿ ಒಂದು ಚಿಕ್ಕ ಅಂಶ ಮಾತ್ರವಾಗಿತ್ತು) ಮೊದಲನೆಯವರಾಗಿ ಸಂಬಳವನ್ನು ಪಡೆದರು.
ಕೆಲಸದ ಪ್ರಮಾಣ ಹಾಗೂ ಕೆಲಸದ ಗುಣಮಟ್ಟ - ನಾವು ಇದರಲ್ಲೇ ನಿರ್ಜೀವ ಕಾರ್ಯಗಳು ಮತ್ತು ಜೀವಂತ ಕಾರ್ಯಗಳ ನಡುವಿನ ವ್ಯತ್ಯಾಸವನ್ನು ಕಾಣುತ್ತೇವೆ. ನಾವು ಕಾರ್ಯಗಳನ್ನು ಮಾಡುವಾಗ, ಅಂತಿಮವಾಗಿ ಇತರ ವಿಶ್ವಾಸಿಗಳನ್ನು ಮೀರಿಸಿ ಭಡ್ತಿಯನ್ನು ಹೊಂದಿ, ಕ್ರಿಸ್ತನೊಂದಿಗೆ ವಿವಾಹವಾಗುವ ವಧುವಿನ ಸ್ಥಾನಕ್ಕೆ ಆರಿಸಲ್ಪಡುವ ನಿರೀಕ್ಷೆಯಿಂದ ಎಲ್ಲವನ್ನೂ ಮಾಡಿದ್ದರೆ, ಆ ಅಂತಿಮ ದಿನದಲ್ಲಿ ಅವೆಲ್ಲವೂ ನಿರ್ಜೀವ ಕಾರ್ಯಗಳೆಂದು ಬಹಿರಂಗವಾಗಿ ತೋರಿಸಲ್ಪಡುತ್ತವೆ.
ಮಹಿಮೆಯ ದಿನದಲ್ಲಿ ಕಿರೀಟಗಳನ್ನು ಪಡೆಯುವವರು ಅವುಗಳನ್ನು ತ್ವರಿತವಾಗಿ ಕರ್ತನ ಪಾದಗಳ ಮುಂದೆ ಇರಿಸಿ, "ಇವನ್ನು ಹೊಂದುವದಕ್ಕೆ ನೀನೊಬ್ಬನೇ ಯೋಗ್ಯನಾಗಿದ್ದೀ," ಎಂದು ಹೇಳುತ್ತಾರೆ
ನೀವು ನಿಮ್ಮ ಮನಸ್ಸಿನ ಆಲೋಚನೆಗಳನ್ನು ಶುದ್ಧೀಕರಿಸಿಕೊಂಡು, ಇತರರಿಗೆ ಒಳ್ಳೆಯದನ್ನು ಮಾಡಿ, ನಿಮ್ಮ ಹೆಂಡತಿಯನ್ನು ಪ್ರೀತಿಸಿ ಅಥವಾ ನಿಮ್ಮ ಗಂಡನಿಗೆ ವಿಧೇಯರಾಗಿ ಇದ್ದುಕೊಂಡು ಜೀವಿಸಿದರೂ, ಇವೆಲ್ಲವನ್ನೂ ಭವಿಷ್ಯದಲ್ಲಿ ಒಂದು ದಿನ ಉನ್ನತ ಸ್ಥಾನಕ್ಕೆ ಏರಿಸಲ್ಪಡುತ್ತೇನೆಂಬ ಆಲೋಚನೆಯೊಂದಿಗೆ ಮಾಡಿದ್ದರೆ, ನಿಮ್ಮ ಜೀವಿತವು ಇನ್ನೂ ’ಸ್ವಾರ್ಥದಲ್ಲೇ’ಕೇಂದ್ರೀಕೃತವಾಗಿದೆ ಮತ್ತು ನಿಮ್ಮ ಎಲ್ಲಾ ಸ್ವ-ಕೇಂದ್ರಿತವಾದ "ಒಳ್ಳೆಯ"ಕಾರ್ಯಗಳು ನಿರ್ಜೀವ ಕಾರ್ಯಗಳಾಗಿವೆ!
ಮಹಿಮೆಯ ದಿನದಲ್ಲಿ ಕಿರೀಟಗಳನ್ನು ಪಡೆಯುವವರು ಅವುಗಳನ್ನು ತ್ವರಿತವಾಗಿ ಕರ್ತನ ಪಾದಗಳ ಮುಂದೆ ಇರಿಸಿ, "ಇವನ್ನು ಹೊಂದುವದಕ್ಕೆ ನೀನೊಬ್ಬನೇ ಯೋಗ್ಯನಾಗಿದ್ದೀ," ಎಂದು ಹೇಳುತ್ತಾರೆ (ಪ್ರಕಟನೆ 4:10).ನಾವು ದೇವರನ್ನು ಮಹಿಮೆಪಡಿಸುವ ಆಲೋಚನೆಗೆ ಹೊರತಾಗಿ ಇತರ ಎಲ್ಲಾ ಉದ್ದೇಶಗಳನ್ನು ಹೃದಯದಿಂದ ತೆಗೆದುಹಾಕಿ ನಮ್ಮನ್ನು ಶುದ್ಧೀಕರಿಸಿಕೊಂಡಾಗಲೇ ನಾವು ನಿರ್ಜೀವ ಕಾರ್ಯಗಳಿಂದ ಮುಕ್ತರಾಗುತ್ತೇವೆ! ಒಂದು ವೇಳೆ ನಾವು ಮಾಡಿದಂಥ ಒಳ್ಳೇಯ ಕಾರ್ಯಗಳನ್ನೆಲ್ಲಾ ನಮ್ಮ ನೆನಪಿನಲ್ಲಿ ದಾಖಲಿಸಿಟ್ಟುಕೊಂಡಿದ್ದರೆ, ಆ ಎಲ್ಲಾ ಒಳ್ಳೇಯ ಕಾರ್ಯಗಳು ನಿರ್ಜೀವ ಕಾರ್ಯಗಳಾಗುತ್ತವೆ.
ಅಂತಿಮ ನ್ಯಾಯ ವಿಚಾರಣೆಯ ದಿನದ ಬಗ್ಗೆ ಯೇಸುವು ನಮಗೆ ಎರಡು ಚಿತ್ರಣಗಳನ್ನು ನೀಡಿದರು - ಒಂದು, ಜನರು ಕರ್ತನ ಮುಂದೆ ತಾವು ತಮ್ಮ ಭೂಲೋಕದ ಜೀವಿತಗಳಲ್ಲಿ ಮಾಡಿದ್ದ ಎಲ್ಲಾ ಒಳ್ಳೆಯ ಕಾರ್ಯಗಳನ್ನು ಪಟ್ಟಿಮಾಡಿ, "ಕರ್ತನೇ, ನಾವು ಹಲವಾರು ಕಾರ್ಯಗಳನ್ನು ಮಾಡಿದೆವು, ನಿನ್ನ ಹೆಸರಿನಲ್ಲಿ ಬೋಧಿಸಿದೆವು, ನಿನ್ನ ಹೆಸರಿನಲ್ಲಿ ರೋಗಿಗಳನ್ನು ಗುಣಪಡಿಸಿದೆವು"(ಮತ್ತಾ. 7:22,23) ಎಂದು ಹೇಳಿದರು. ಈ ಜನರು ಕರ್ತರಿಂದ ನಿರಾಕರಿಸಲ್ಪಟ್ಟರು. ಮುಂದಿನ ಚಿತ್ರಣದಲ್ಲಿ, ನೀತಿವಂತರು ಭೂಲೋಕದ ತಮ್ಮ ಜೀವಿತಗಳಲ್ಲಿ ಮಾಡಿದ್ದ ಒಳ್ಳೆಯ ಕಾರ್ಯಗಳನ್ನು ಕರ್ತರು ಅವರಿಗೆ ಜ್ಞಾಪಿಸಿದಾಗ, "ಕರ್ತನೇ, ನಾವು ಯಾವಾಗ ಇವೆಲ್ಲವನ್ನು ಮಾಡಿದೆವು?" ಎಂದು ಅವರು ಅಚ್ಚರಿಗೊಳ್ಳುತ್ತಾರೆ (ಮತ್ತಾ. 25:34-40). ಅವರು ಮಾಡಿದ ತಮ್ಮ ಒಳ್ಳೆಯ ಕಾರ್ಯಗಳನ್ನು ಮರೆತುಬಿಟ್ಟಿದ್ದರು - ಏಕೆಂದರೆ ಅವರು ಪ್ರತಿಫಲದ ಆಸೆಯಿಂದ ಅವುಗಳನ್ನು ಮಾಡಿರಲಿಲ್ಲ. ನಾವು ಇವೆರಡು ಚಿತ್ರಣಗಳಲ್ಲಿ ನಿರ್ಜೀವ ಕಾರ್ಯಗಳು ಮತ್ತು ಜೀವಂತ ಕಾರ್ಯಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ಕಾಣುತ್ತೇವೆ. ನಾವು ಇವೆರಡರಲ್ಲಿ ಯಾವ ಪಂಗಡದಲ್ಲಿ ಇದ್ದೇವೆ?