WFTW Body: 

ಯೇಸು ಮತ್ತು ನಮ್ಮ ನಡುವೆ ಕಲ್ವಾರಿಯ ಶಿಲುಬೆಯ ಮೇಲೆ ಉಂಟಾದ ದೈವಿಕ ವಿನಿಮಯದ ಮೂರು ಕಾರ್ಯಕ್ಷೇತ್ರಗಳನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ - ಯೇಸುವು ನಮಗಾಗಿ ಏನಾಗಿ ಮಾರ್ಪಟ್ಟನು ಮತ್ತು ಅದರ ಪರಿಣಾಮವಾಗಿ ನಾವು ಏನಾಗಬಹುದು, ಎಂಬ ವಿಷಯದ ಕುರಿತಾಗಿ.

1) ನಾವು ಯೇಸುವಿನಲ್ಲಿ ದೇವರಿಗೆ ಸಮರ್ಪಕವಾದ ನೀತಿ-ಸ್ವರೂಪಿಗಳು ಆಗುವಂತೆ, ಆತನು ನಮಗಾಗಿ ಸ್ವತಃ ಪಾಪ-ಸ್ವರೂಪಿಯಾದನು (2 ಕೊರಿ. 5:21).

’ನಂಬಿಕೆಯಿಂದ ಉಂಟಾಗುವ ನೀತಿವಂತಿಕೆ’ಯ ಅದ್ಭುತ ಸತ್ಯ ಇದು - ಸ್ವಪ್ರಯತ್ನದ ಮೂಲಕ ದೇವರ ನೀತಿವಂತಿಕೆಯ ಉನ್ನತ ಮಟ್ಟವನ್ನು ತಲಪುವದು ಅಸಾಧ್ಯವೆಂದು ಅರಿತುಕೊಳ್ಳುವ ದೀನತೆಯುಳ್ಳವರಿಗೆ, ನೀತಿವಂತಿಕೆಯು ದೇವರು ಉಚಿತವಾಗಿ ಕೊಡುವ ಒಂದು ವರವಾಗಿದೆ. ಯೇಸುವು ನಮ್ಮ ಪಾಪಗಳಿಗಾಗಿ ಶಿಕ್ಷೆಯನ್ನು ಅನುಭವಿಸಿದ್ದು ಮಾತ್ರವಲ್ಲದೆ, ಆತನು ಸ್ವತಃ "ಪಾಪ-ಸ್ವರೂಪಿಯೇ" ಆದನು. ಯೇಸುವಿಗೆ ಇದು ಎಂತಹ ಘೋರ ಅನುಭವವಾಗಿತ್ತು ಎಂದು ದುರದೃಷ್ಟವಶಾತ್ ನಾವು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲಾರೆವು, ಏಕೆಂದರೆ ಒಂದು ಹಂದಿಯು ಹೊಲಸು ಕೊಳಚೆಗೆ ಹೊಂದಿಕೊಳ್ಳುವ ಹಾಗೆ, ನಾವು ಪಾಪಕ್ಕೆ ಹೊಂದಿಕೊಂಡಿದ್ದೇವೆ. ಯೇಸುವಿನ ದೃಷ್ಟಿಯಲ್ಲಿ ಪಾಪವು ಎಷ್ಟು ಅಸಹ್ಯಕರವಾಗಿತ್ತೆಂದು ಸ್ವಲ್ಪವಾದರೂ ಅರ್ಥ ಮಾಡಿಕೊಳ್ಳಲು ಹೀಗೆ ಯೋಚಿಸಿ ನೋಡಿ: ಮಲಮೂತ್ರ ತುಂಬಿರುವ ಒಂದು ದೊಡ್ಡ ಗುಂಡಿಯ ('Septic tank') ಒಳಕ್ಕೆ ನೆಗೆದು, ಅಲ್ಲಿ ಶಾಶ್ವತವಾಗಿ ಹೊಲಸು ಲದ್ದಿಯ ನಡುವೆ ನೆಲೆಗೊಂಡಂತೆ. ನಮ್ಮ ಬಗ್ಗೆ ಯೇಸುವಿನ ಪ್ರೀತಿ ಎಷ್ಟು ಆಳವಾಗಿತ್ತೆಂದು ಈ ನಿದರ್ಶನವು ಸ್ವಲ್ಪ ಮಟ್ಟಿಗೆ ಚಿತ್ರಿಸುತ್ತದೆ: ನಾವು ಆತನಲ್ಲಿ ದೇವರಿಗೆ ಸಮರ್ಪಕವಾದ ನೀತಿಸ್ವರೂಪಿಗಳು ಆಗಬೇಕೆಂದು, ಯೇಸುವು ತಾನು ದ್ವೇಷಿಸಿದ್ದ ಸ್ಥಿತಿಗೆ ಸ್ವತಃ ಬದಲಾದನು.

ಆಕಾಶವು ಭೂಮಿಯ ಮೇಲೆ ಎಷ್ಟು ಉನ್ನತವೋ, ದೇವರ ನೀತಿವಂತಿಕೆಯು ಜಗತ್ತಿನ ಅತ್ಯಂತ ಪರಿಶುದ್ಧ ಮಾನವನ ನೀತಿವಂತಿಕೆಗಿಂತ ಅಷ್ಟೇ ಉನ್ನತವಾಗಿದೆ. ದೇವರ ಮುಖವನ್ನು ಪಾಪವನ್ನೇ ಅರಿಯದ ದೇವದೂತರೂ ಸಹ ದೃಷ್ಟಿಸಿ ನೋಡಲಾರರು (ಯೆಶಾ. 6:2,3) . ಆದರೆ ನಾವು ದೇವರನ್ನು ದೃಷ್ಟಿಸಲು ಸಾಧ್ಯವಾಗುತ್ತದೆ, ಏಕೆಂದರೆ ನಾವು ’ಕ್ರಿಸ್ತನಲ್ಲಿ ಇದ್ದೇವೆ’. ಪಾಪವು ಎಷ್ಟು ಕರಾಳವಾದದ್ದು ಎಂದು ನಾವು ಅರಿತುಕೊಂಡಾಗ, ಯೇಸುವನ್ನು ಶಿಲುಬೆಗೆ ಹಾಕಿದ ಈ ಪಾಪವನ್ನು ನಾವು ದ್ವೇಷಿಸಲು ಆರಂಭಿಸುತ್ತೇವೆ. ಮತ್ತು ನಾವು ಕ್ರಿಸ್ತನಲ್ಲಿ ಯಾವ ರೂಪಕ್ಕೆ ಬದಲಾಗಿದ್ದೇವೆಂದು ಅರಿತಾಗ, ದೇವರ ಮುಂದೆ ನಮ್ಮ ’ಸಂಪೂರ್ಣ ಸ್ವೀಕೃತಿಗಾಗಿ’ ನಾವು ಬಹಳ ಸಂತೋಷಿಸುತ್ತೇವೆ.

2) ನಮ್ಮನ್ನು ಐಶ್ವರ್ಯವಂತರಾಗಿ ಮಾಡಲು, ಕ್ರಿಸ್ತನು ನಮಗೋಸ್ಕರ ಬಡವನಾದನು (2 ಕೊರಿ. 8:9).

ಈ ವಚನದ ಸಂದರ್ಭವು ಸೂಚಿಸುವುದು ಏನೆಂದರೆ, ಇದು ಪ್ರಾಪಂಚಿಕ ಬಡತನ ಮತ್ತು ಪ್ರಾಪಂಚಿಕ ಸಂಪತ್ತಿನ ಕುರಿತಾಗಿ ಮಾತನಾಡುತ್ತಿದೆ. ಕ್ರಿಸ್ತನು ಒಂದು ಕಾಲಾವಧಿಯಲ್ಲಿ (ಆತನು ಈ ಲೋಕದಲ್ಲಿದ್ದಾಗ) ಐಶ್ವರ್ಯವಂತನು ಆಗಿದ್ದನೆಂದು ಈ ವಚನ ನಮಗೆ ತಿಳಿಸುತ್ತದೆ. "ಹಣವಂತನಾಗಿ ಇರುವುದು" ಎಂದರೆ ಏನು? ಹಣವಂತನು ಎಂದರೆ ಬಹಳಷ್ಟು ಹಣ ಮತ್ತು ಆಸ್ತಿ ಉಳ್ಳವನು ಎಂದಲ್ಲ, ಆದರೆ ನಮ್ಮ ಅವಶ್ಯಕತೆಗೆ ಬೇಕಾದದ್ದನ್ನು ಹೊಂದಿರುವುದು ಅಲ್ಲದೆ, ಇತರರಿಗೆ ಸಹಾಯ ಮತ್ತು ಆಶೀರ್ವಾದ ಮಾಡುವಂತೆ ಸ್ವಲ್ಪ ಅಧಿಕವನ್ನು ಹೊಂದಿರುವುದು. ನಾವೆಲ್ಲರೂ ಹೀಗೆ ಇರಬೇಕೆಂದು ದೇವರು ಬಯಸುತ್ತಾರೆ. ಐಶ್ವರ್ಯವಂತನು ಎಂಬುದನ್ನು ಪ್ರಕ. 3:17ರಲ್ಲಿ "ಒಂದರಲ್ಲಿಯೂ ಕೊರತೆ ಇಲ್ಲದವನು," ಎಂದು ವಿವರಿಸಲಾಗಿದೆ. ದೇವರ ಸಂಪತ್ತು ಇದೇ ರೀತಿಯಾಗಿದೆ. ದೇವರ ಬಳಿ ಬೆಳ್ಳಿ ಅಥವಾ ಬಂಗಾರ ಅಥವಾ ಒಂದು ಬ್ಯಾಂಕ್ ಖಾತೆ ಅಥವಾ ದುಡ್ಡಿನ ಚೀಲವೂ ಸಹ ಇಲ್ಲ. ಆದರೆ ಅವರಿಗೆ ಯಾವುದೇ ಅವಶ್ಯಕತೆಗಳಿಲ್ಲ. ಯೇಸುವಿನ ಭೂಲೋಕದ ಜೀವಿತದ ಕಾಲದಲ್ಲಿ, ಆತನೂ ಸಹ ಇದೇ ರೀತಿ ಧನಿಕನಾಗಿದ್ದನು. ಆತನು 5000 ಮಂದಿ ಗಂಡಸರು ಮತ್ತು ಜೊತೆಗೆ ಹೆಂಗಸರು ಮತ್ತು ಮಕ್ಕಳಿಗೆ ಊಟವನ್ನು ಉಣಿಸಿದನು. ಇವತ್ತು ಒಬ್ಬ ಧನಿಕ ಮನುಷ್ಯನು ಮಾತ್ರ ಹೀಗೆ ಮಾಡಲು ಸಾಧ್ಯವಿದೆ. ಯೇಸುವಿನ ಬಳಿ ತೆರಿಗೆಯನ್ನು ಕಟ್ಟಲು ಹಣವಿತ್ತು. ಒಂದೇ ವ್ಯತ್ಯಾಸ - ಜನರು ತೆರಿಗೆ ಕಟ್ಟಲು ಹಣವನ್ನು ಬ್ಯಾಂಕಿನಿಂದ ತೆಗೆಯುತ್ತಾರೆ, ಆತನು ಅದನ್ನು ಒಂದು ಮೀನಿನ ಬಾಯಿಂದ ಪಡೆದನು. ಬಡವರಿಗೆ ಕೊಡುವುದಕ್ಕಾಗಿ ಆತನಲ್ಲಿ ಸಾಕಷ್ಟು ಹಣವಿತ್ತು (ಯೋಹಾ. 13:29) . ಅವನು ಭೂಲೋಕದಲ್ಲಿ ಇದ್ದಾಗ ಬಡವನಾಗಿರಲಿಲ್ಲ, ಏಕೆಂದರೆ ಅವನಿಗೆ "ಒಂದರಲ್ಲಿಯೂ ಕೊರತೆ ಇರಲಿಲ್ಲ".

ಆದರೆ ಶಿಲುಬೆಯ ಮೇಲೆ ಆತನು ಬಡವನಾದನು. ಗತಿಯಿಲ್ಲದ ಭಿಕ್ಷುಕನ ಮೈಯ ಮೇಲೆ ಒಂದು ಹರಕು ಬಟ್ಟೆಯಾದರೂ ಇರುತ್ತದೆ ಎಂದು ನಾವು ನೋಡಿದ್ದೇವೆ. ಆದರೆ ಯೇಸುವು ಶಿಲುಬೆಗೆ ಹಾಕಲ್ಪಟ್ಟಾಗ ಅವನಿಗೆ ಅದೂ ಸಹ ಇರಲಿಲ್ಲ. ಅವನು ಸತ್ತಾಗ ನಿಜವಾಗಿ ಬಡವನಾಗಿದ್ದನು. ಅವನು ಶಿಲುಬೆಯ ಮೇಲೆ ಬಡವನಾಗಲು ಕಾರಣವೇನು? ನಾವು ಐಶ್ವರ್ಯವಂತರು ಆಗುವುದಕ್ಕಾಗಿ - ನಮ್ಮ ಜೀವಿತದಲ್ಲಿ ಯಾವುದೇ ಸಮಯದಲ್ಲಿ ನಮಗೆ "ಒಂದರಲ್ಲಿಯೂ ಕೊರತೆ ಇರದಂತೆ". ದೇವರು ನಾವು ಬಯಸಿದ ಎಲ್ಲವನ್ನೂ ನಮಗೆ ಕೊಡುವ ವಾಗ್ದಾನವನ್ನು ಮಾಡಿಲ್ಲ. ಜ್ಞಾನಿಗಳಾದ ತಂದೆತಾಯಂದಿರೂ ಸಹ ತಮ್ಮ ಮಕ್ಕಳು ಕೇಳಿದ್ದನ್ನೆಲ್ಲ ಅವರಿಗೆ ಕೊಡುವುದಿಲ್ಲ. ಆದರೆ ದೇವರು ನಮ್ಮ ಪ್ರತಿಯೊಂದು ಕೊರತೆಯನ್ನು ನೀಗಿಸುವ ವಾಗ್ದಾನವನ್ನು ಮಾಡಿದ್ದಾರೆ (ಫಿಲಿ. 4:19). ನಾವು ಮೊದಲು ದೇವರ ರಾಜ್ಯಕ್ಕಾಗಿಯೂ, ನೀತಿಗಾಗಿಯೂ ತವಕಿಸಿದರೆ, ಲೋಕದಲ್ಲಿ ಜೀವಿಸಲು ಬೇಕಾದದ್ದೆಲ್ಲವನ್ನು ನಾವು ತಪ್ಪದೆ ಪಡೆಯುತ್ತೇವೆ (2 ಪೇತ್ರ. 1:4)

.

3) ಕ್ರಿಸ್ತನು ನಮ್ಮ ನಿಮಿತ್ತ ಶಾಪವಾಗಿ, ನಮಗೆ ಅಬ್ರಹಾಮನ ಆಶೀರ್ವಾದವು ಸಿಗುವಂತೆ ಮಾಡಿದನು (ಪವಿತ್ರಾತ್ಮನು ಕೊಡಲ್ಪಡುವ ವಾಗ್ದಾನ) (ಗಲಾ. 3:13,14)

ಧರ್ಮಶಾಸ್ತ್ರವನ್ನು ಅನುಸರಿಸದೆ ಇದ್ದಾಗ ಉಂಟಾಗುವ ಶಾಪವನ್ನು ಧರ್ಮೋ. 28:15-68ರಲ್ಲಿ ವಿವರಿಸಲಾಗಿದೆ - ಕಳವಳ, ವಾಸಿಯಾಗದ ಖಾಯಿಲೆಗಳು, ಮಾರಕ ಪಿಡುಗುಗಳು, ಪದೇ ಪದೇ ಸೋಲುಗಳು, ಕುರುಡುತನ, ಬುದ್ಧಿಭ್ರಮೆ, ಅನ್ಯರು ಸುಲಿಗೆ ಮತ್ತು ಶೋಷಣೆ ಮಾಡುವುದು, ಮಕ್ಕಳು ಶತ್ರುವಿನ (ಸೈತಾನನ) ವಶವಾಗುವುದು, ಕಡು ಬಡತನ, ಇತ್ಯಾದಿ. ಇವುಗಳಲ್ಲಿ ಒಂದೂ ನಮಗೆ ಅನ್ವಯಿಸುವುದಿಲ್ಲ, ಏಕೆಂದರೆ ಯೇಸುವು ನಮಗಾಗಿ ಶಾಪಗ್ರಸ್ತನಾದನು. ಆದರೆ ಗಮನಿಸಬೇಕಾದ ಒಂದು ಅಂಶ, ನಮಗೆ ಈ ಶಾಪಗಳಿಗೆ ಬದಲಾಗಿ ವಾಗ್ದಾನ ಮಾಡಲ್ಪಟ್ಟ ಆಶೀರ್ವಾದಗಳು ಧರ್ಮಶಾಸ್ತ್ರದ ಆಶೀರ್ವಾದಗಳಾದ (ಧರ್ಮೋ. 28:1-14ರಲ್ಲಿ ವಿವರಿಸಲ್ಪಟ್ಟವು) ವಿಫುಲ ಸಂಪತ್ತು ಮತ್ತು ಸಂತಾನ ಸಂವೃದ್ಧಿಯಲ್ಲ, ಆದರೆ ಅಬ್ರಹಾಮನ ಆಶೀರ್ವಾದ (ಆದಿ. 12:2,3ರಲ್ಲಿ ವಿವರಿಸಲ್ಪಟ್ಟಂತದ್ದು); ಅದೇನೆಂದರೆ: ಕರ್ತನು ನಮ್ಮನ್ನು ಆಶೀರ್ವದಿಸಿ, ನಮ್ಮನ್ನು ಭೇಟಿಯಾಗುವ ಸಕಲ ಜನರಿಗೂ ನಾವು ಆಶೀರ್ವಾದ ನಿಧಿಗಳು ಆಗುವಂತೆ ಮಾಡುವಂತದ್ದು. ಇದು ಪವಿತ್ರಾತ್ಮನ ತುಂಬುವಿಕೆಯ ಮೂಲಕ ಉಂಟಾಗುವ ಆಶೀರ್ವಾದವಾಗಿದೆ - ನಮ್ಮೊಳಗೆ ಉಕ್ಕುವ ನೀರಿನ ಒಂದು ಒರತೆಯು ಬುಗ್ಗೆಯಾಗಿ ’ನಮ್ಮನ್ನು ಆಶೀರ್ವದಿಸುವುದು’ (ಯೋಹಾ. 4:14) , ಮತ್ತು ನಮ್ಮಿಂದ ನೀರಿನ ಹೊಳೆಗಳು ಹರಿದು ’ಇತರರನ್ನು ಆಶೀರ್ವದಿಸುವುದು’ (ಯೋಹಾ. 7:37-39). ಕರ್ತನು ಕಡು ಪಾಪಿಗೂ ಸಹ ಕೊಟ್ಟಿರುವ ವಾಗ್ದಾನ ಏನೆಂದರೆ, "ಅವನು ಹಿಂದೆ ಹೇಗೆ ಶಾಪವಾಗಿದ್ದನೋ, ಮುಂದಿನ ದಿನಗಳಲ್ಲಿ ಅವನು ಒಂದು ಆಶೀರ್ವಾದ ಆಗಲು ಸಾಧ್ಯವಿದೆ" (ಜೆಕ. 8:13ರ ಈ ಅದ್ಭುತ ವಾಗ್ದಾನವನ್ನು ಬಾಯಿಪಾಠ ಮಾಡಿಕೊಳ್ಳಿರಿ).

ನನ್ನ ನಂಬಿಕೆಯ ಪ್ರಕಾರ, ನೀವು ಎಲ್ಲೇ ವಾಸಿಸಿದ್ದರೂ ನೀವು ಭೇಟಿಯಾಗುವ ಪ್ರತಿಯೊಬ್ಬನಿಗೂ ನಿಮ್ಮಿಂದ ಒಂದು ಆಶೀರ್ವಾದ ಉಂಟುಮಾಡುವುದೇ ನಿಮಗಾಗಿ ದೇವರ ಚಿತ್ತವಾಗಿದೆ. ಆದಾಗ್ಯೂ, ನೀವು ದೇವರ ಮಾತನ್ನು ನಂಬಿದರೆ ಮಾತ್ರ ಇದು ಈಡೇರುತ್ತದೆ. ಮೇಲೆ ಹೇಳಿದ ಶಾಪದ ಯಾವ ಅಂಶವೂ ನಿಮ್ಮನ್ನು ಮುಟ್ಟಲು ಸಾಧ್ಯವಿಲ್ಲವೆಂದು ನಂಬಿರಿ. ಸೈತಾನನು ಶಿಲುಬೆಯ ಮೇಲೆ ಸೋಲಿಸಲ್ಪಟ್ಟಿದ್ದಾನೆ. ಹಾಗಾಗಿ ಆತನಿಗೆ ನಿಮ್ಮ ಜೀವನದ ಯಾವ ಭಾಗದ ಮೇಲೆಯೂ ಅಧಿಕಾರ ಇರುವುದಿಲ್ಲ. ಈ ಸತ್ಯಾಂಶಗಳನ್ನು ನಿಮ್ಮ ಬಾಯಿಂದ ಅರಿಕೆ ಮಾಡಿರಿ ಮತ್ತು ನಿಮ್ಮ ಇಡೀ ಜೀವಿತದಲ್ಲಿ ಜಯಶಾಲಿಗಳಾಗಿರಿ. ದೇವರು ಕೊಟ್ಟಿರುವ ಪ್ರತಿಯೊಂದು ಆಶೀರ್ವಾದವನ್ನು ನಾವು ಯಥಾರ್ಥವಾಗಿ ನಂಬಿ, ಅದನ್ನು ವಿಶ್ವಾಸದಿಂದ ಸ್ವಾಧೀನ ಮಾಡಿಕೊಂಡಾಗ ಮಾತ್ರ ಅದು ನಮಗೆ ಅನ್ವಯಿಸುತ್ತದೆ. ಇದಲ್ಲದೆ ದೇವರ ವಾಕ್ಯವು ಸತ್ಯವಾದುದೆಂದು ನಾವು ಬಾಯಿಂದ ಅರಿಕೆ ಮಾಡಬೇಕು. ಮನುಷ್ಯನು ಹೃದಯದಿಂದ ನಂಬುತ್ತಾನೆ. ಆದರೆ ನಾವು ಬಾಯಿಂದ ಅರಿಕೆಮಾಡಿ ರಕ್ಷಣೆ ಮತ್ತು ಬಿಡುಗಡೆಯನ್ನು ಹೊಂದುತ್ತೇವೆ (ರೋಮಾ. 10:10) . ಹೀಗೆ ("ನಾವು ಹೇಳುವ ಸಾಕ್ಷಿಯ ಬಲದಿಂದ"), ನಮ್ಮ ವಿರುದ್ಧವಾದ ಸೈತಾನನ ದೂರುಗಳ ವಿರುದ್ಧವಾಗಿಯೂ ಸಹ ನಾವು ಜಯ ಗಳಿಸುತ್ತೇವೆ (ಪ್ರಕ. 12:11).