ದೇವರ ಶ್ರೇಷ್ಠ ಆಜ್ಞೆಯನ್ನು ಸಂಪೂರ್ಣವಾಗಿ ನೆರವೇರಿಸುವುದು ಎಂಬುದರ ಅರ್ಥವನ್ನು ಕುರಿತು ನಾವು ಕಳೆದ ವಾರದಿಂದ ಧ್ಯಾನಿಸಲು ಪ್ರಾರಂಭಿಸಿದ್ದೇವೆ: ಇದರಲ್ಲಿ ದೇವರ ಸುವಾರ್ತೆಯು ತಲುಪದ ಜನರಿಗೆ ಅದನ್ನು ತಲುಪಿಸುವುದು ಮಾತ್ರವೇ ಅಲ್ಲದೆ ಯೇಸುವು ಆಜ್ಞಾಪಿಸಿದ ಎಲ್ಲವನ್ನೂ ಕೈಗೊಳ್ಳಲು ಜಾಗರೂಕರಾಗಿರುವಂತ ಶಿಷ್ಯರನ್ನು ಸಿದ್ಧಗೊಳಿಸುವುದೂ ಸಹ ಸೇರಿದೆ.
ಯೇಸುವು ಜನರ ದೊಡ್ಡ ಸಮೂಹವು ತನ್ನನ್ನು ಹಿಂಬಾಲಿಸುತ್ತಿರುವುದನ್ನು ನೋಡಿದಾಗ, ತಾನು ಅದುವರೆಗೆ ಯಾರಿಗೂ ಹೇಳಿರದ ಕೆಲವು ಕಠಿಣ ಮಾತುಗಳನ್ನು ಆಡಿದ್ದನ್ನು ನಾವು ನೋಡಿದೆವು.
ಹೆಚ್ಚಿನ ಬೋಧಕರು ಮತ್ತು ಪಾದ್ರಿಗಳು, ಬಹುಸಂಖ್ಯೆಯ ಜನರು ತಮ್ಮ ಬೋಧನೆಯನ್ನು ಕೇಳಲು ಬರುತ್ತಿರುವುದನ್ನು ನೋಡಿದರೆ, ಕನಸಿನಲ್ಲಿಯೂ ಇಂತಹ ಕಠಿಣ ಮಾತುಗಳನ್ನು ಬೋಧಿಸಲು ಬಯಸುವುದಿಲ್ಲ ಮತ್ತು ಇದು ಯೇಸುವು ಇತರರಿಂದ ಹೇಗೆ ವಿಭಿನ್ನವಾಗಿದ್ದಾರೆ ಎಂಬುದನ್ನು ನಮಗೆ ತೋರಿಸುತ್ತದೆ. ಯೇಸುವಿಗೆ ಸಂಖ್ಯೆಗಳಲ್ಲಿ ಆಸಕ್ತಿ ಇರಲಿಲ್ಲ. ಈ ದಿನಗಳಲ್ಲಿ ಸಂಖ್ಯೆಗಳಲ್ಲಿ ಆಸಕ್ತಿಯಿಲ್ಲದ ಕೆಲವೇ ಕೆಲವು ಕ್ರೈಸ್ತ ಬೋಧಕರನ್ನು ನಾವು ಕಾಣುತ್ತೇವೆ; ಆದರೆ ಲೂಕನು 14ನೇ ಅಧ್ಯಾಯದ ಕೊನೆಯ ಭಾಗದಲ್ಲಿ ನಾವು ನೋಡುವುದು ಏನೆಂದರೆ, ಯೇಸುವು ಗುಣಮಟ್ಟಕ್ಕೆ ಆದ್ಯತೆಯನ್ನು ಕೊಡುತ್ತಿದ್ದರು, ಎಂಬುದನ್ನು.
ಯೇಸುವಿಗೆ ಶಿಷ್ಯರು ಬೇಕಾಗಿದ್ದರು, ಹಾಗಾಗಿ ಅವರು ಆ ಸಮೂಹವನ್ನು ಉದ್ದೇಶಿಸಿ, "ನಿಮ್ಮಲ್ಲಿ ಯಾರಾದರೂ ನನ್ನ ಬಳಿಗೆ ಬಂದು, ನಿನ್ನ ತಂದೆ, ತಾಯಿ, ಹೆಂಡತಿ, ಮಕ್ಕಳು, ಅಕ್ಕತಂಗಿಯರನ್ನು ಅಣ್ಣತಮ್ಮಂದಿರನ್ನು ಮತ್ತು ನಿನ್ನ ಪ್ರಾಣವನ್ನು ಸಹ ದ್ವೇಷಿಸದಿದ್ದರೆ, ನೀನು ನನ್ನ ಶಿಷ್ಯನಾಗಲಾರೆ," ಎಂದು ಹೇಳಿದರು. ಈ ಮಾತಿನ ಅರ್ಥ, ನೀನು ಎರಡನೇ ದರ್ಜೆಯ (ಅಲ್ಪ ಗುಣಮಟ್ಟದ) ಶಿಷ್ಯನಾಗುವ ಸಾಧ್ಯತೆಯಿದೆ ಎಂದಲ್ಲ; ನೀನು ಶಿಷ್ಯನಾಗಲು ಸಾಧ್ಯವೇ ಇಲ್ಲ, ಅಷ್ಟೇ.
ಈ ವಾಕ್ಯದಲ್ಲಿ ನಾವು ಶಿಷ್ಯತ್ವದ ಮೊದಲನೆಯ ಷರತ್ತನ್ನು ಕಾಣುತ್ತೇವೆ. ನಮ್ಮ ತಂದೆತಾಯಿಯರನ್ನು ನಾವು ಸನ್ಮಾನಿಸಬೇಕೆಂದು ಸತ್ಯವೇದವು ಹೇಳುತ್ತದೆ. ಹಾಗಾದರೆ ನಾವು "ದ್ವೇಷಿಸಬೇಕು" ಎಂದು ಯೇಸು ಸ್ವಾಮಿಯು ಹೇಳಿದ್ದರ ಅರ್ಥವೇನು? ಇದು ಒಂದು ಹೋಲಿಕೆಯ ಮಾತಾಗಿದೆ.
ಯೇಸು ಸ್ವಾಮಿಯು ಕೆಲವೊಮ್ಮೆ ಕಠಿಣವಾದ ಮಾತುಗಳನ್ನೂ ಸಹ ಬಳಸಿದರು. ಉದಾಹರಣೆಗೆ, "ನಿನ್ನ ಬಲಗಣ್ಣು ನಿನ್ನನ್ನು ಪಾಪಕ್ಕೆ ಸಿಲುಕಿಸುವುದಾದರೆ, ಅದನ್ನು ಕಿತ್ತು ಬಿಸಾಡು." "ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವುದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಗ್ಗುವುದು ಸುಲಭ." "ನೀವು ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯದೆ ಹೋದರೆ, ನಿತ್ಯಜೀವವನ್ನು ಹೊಂದಲಾರಿರಿ." ಅವರು ಇಂತಹ ಅನೇಕ ಕಠಿಣವಾದ ಮಾತುಗಳನ್ನು ನುಡಿದರು. ಆದರೆ ಅವರ ಮಾತುಗಳು ಆತ್ಮ ಮತ್ತು ಜೀವವುಳ್ಳ ಮಾತುಗಳಾಗಿದ್ದವು. ಹಾಗಾಗಿ ಮೇಲಿನ ಸಂದರ್ಭದಲ್ಲಿ ಅವರು ನುಡಿದ ಮಾತಿನ ನಿಜವಾದ ಅರ್ಥವೇನೆಂದರೆ, ನಮ್ಮ ಲೌಕಿಕ ಸಂಬಂಧಿಕರ ಮೇಲಿನ ಪ್ರೀತಿ ಹಾಗೂ ಕರ್ತನ ಮೇಲಿನ ಪ್ರೀತಿ ಇವೆರಡರ ಹೋಲಿಕೆಯು, ಕತ್ತಲೆ ಮತ್ತು ಬೆಳಕಿನಷ್ಟು ವ್ಯತ್ಯಾಸ ಉಳ್ಳದ್ದಾಗಿರಬೇಕು, ಎಂಬುದಾಗಿ.
"ಶಿಷ್ಯತ್ವದ ಮೊದಲನೆಯ ಷರತ್ತು ಕ್ರಿಸ್ತನನ್ನು ಅತಿ ಶ್ರೇಷ್ಠವಾಗಿ ಪ್ರೀತಿಸುವುದಾಗಿದೆ"
ಇದನ್ನು ಒಂದು ದೃಷ್ಟಾಂತದ ಮೂಲಕ ತೋರಿಸುವುದಾದರೆ, ನಿಮ್ಮ ತಂದೆತಾಯಿ, ಹೆಂಡತಿ, ಮಕ್ಕಳು, ಸಹೋದರರು ಮತ್ತು ಸಹೋದರಿಯರ ಮೇಲಿನ ನಿಮ್ಮ ಪ್ರೀತಿಯು ನಕ್ಷತ್ರಗಳ ಬೆಳಕಿಗೆ ಸಮನಾಗಿದ್ದರೆ, ಕ್ರಿಸ್ತನ ಮೇಲಿನ ನಿಮ್ಮ ಪ್ರೀತಿಯು ಸೂರ್ಯನ ಬೆಳಕಿನಂತೆ ಇರಬೇಕು. ಸೂರ್ಯನು ಮೂಡಿದಾಗ, ನಕ್ಷತ್ರಗಳು ಕಣ್ಣಿಗೆ ಕಾಣಿಸುವುದಿಲ್ಲ. ಅವುಗಳು ತಮ್ಮ ತಮ್ಮ ಜಾಗದಲ್ಲಿ ಇರುತ್ತವೆ, ಆದರೆ ಸೂರ್ಯನ ಬೆಳಕಿನ ಪ್ರಕಾಶದಲ್ಲಿ ಅವುಗಳು ನಿಮಗೆ ಕಾಣಿಸುವುದೇ ಇಲ್ಲ. ಆದುದರಿಂದ, ಮೇಲಿನ ವಾಕ್ಯದಲ್ಲಿ "ದ್ವೇಷಿಸಬೇಕು" ಎಂದು ಹೇಳಿರುವುದರ ಅರ್ಥ, ನಿಮ್ಮ ತಂದೆ ಮತ್ತು ತಾಯಿಯ ಮೇಲಿನ ನಿಮ್ಮ ಪ್ರೀತಿಯು ಬಹುತೇಕವಾಗಿ ಕಾಣಿಸದಂತಿರುತ್ತದೆ: ನೀವು ಈಗಲೂ ಅವರನ್ನು ಪ್ರೀತಿಸುತ್ತೀರಿ. ಆದರೆ ಪ್ರಕಾಶಮಾನವಾದ ನಿಮ್ಮ ಕ್ರಿಸ್ತನ ಮೇಲಿನ ಪ್ರೀತಿಯ ಬೆಳಕಿನ ಮುಂದೆ, ಈ ಪ್ರೀತಿಯು ಕತ್ತಲೆಗೆ ಸಮನಾಗಿದೆ.
ಕ್ರಿಸ್ತನಿಗಾಗಿ ಇರುವ ನಮ್ಮ ಪ್ರೀತಿಯೊಂದಿಗಿನ ಹೋಲಿಕೆಯಲ್ಲಿ, ನಮ್ಮ ಕುಟುಂಬದ ಸದಸ್ಯರ ಮೇಲೆ ನಮಗಿರುವ ಪ್ರೀತಿಯು ದ್ವೇಷದಂತೆ ಕಾಣಿಸುತ್ತದೆ. ಕರ್ತನು ನಮ್ಮನ್ನು ಏನನ್ನಾದರೂ ಮಾಡಲು ಕರೆದಾಗ, ನಮ್ಮ ಕುಟುಂಬದ ಯಾವುದೇ ಸದಸ್ಯರು ಅದಕ್ಕೆ ಅಡ್ಡಿ ಪಡಿಸಲು ನಾವು ಅವಕಾಶ ನೀಡಬಾರದು ಎಂಬ ಅರ್ಥವೂ ಇದರಲ್ಲಿ ಸೇರಿದೆ.
ಆದ್ದರಿಂದ, ಕ್ರಿಸ್ತತ್ವದ ಮೊದಲನೇ ಷರತ್ತು, ಕ್ರಿಸ್ತನನ್ನು ಅತಿ ಶ್ರೇಷ್ಠ ಪ್ರೀತಿಯಿಂದ ಪ್ರೀತಿಸುವುದಾಗಿದೆ. ಅದು ಕ್ರಿಸ್ತನನ್ನು ನಮ್ಮ ತಂದೆತಾಯಿಗಿಂತ, ನಮ್ಮ ಹೆಂಡತಿಗಿಂತ, ನಮ್ಮ ಮಕ್ಕಳಿಗಿಂತ, ನಮ್ಮ ರಕ್ತ ಸಂಬಂಧಿಗಳಾದ ಪ್ರತಿಯೊಬ್ಬ ಅಣ್ಣತಮ್ಮಂದಿರು ಮತ್ತು ಅಕ್ಕತಂಗಿಯರಿಗಿಂತ, ನಮ್ಮ ಕ್ರೈಸ್ತಸಭೆಯ ಸಹೋದರ-ಸಹೋದರಿಯರಿಗಿಂತ, ಮತು ನಮ್ಮ ಸ್ವಂತ ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವುದಾಗಿದೆ. ಸುವಾರ್ತಾ ಪ್ರಚಾರ ಅಥವಾ ಮತ ಪ್ರಚಾರದ ಸೇವೆಯು ಕ್ರೈಸ್ತರನ್ನು ಇಂತಹ ಸ್ಥಾನಕ್ಕೆ ಕರೆದುಕೊಂಡು ಬಂದಿದೆಯೆಂದು ನೀವು ಹೇಳಬಲ್ಲಿರಾ?
ಹೊಸದಾಗಿ ಹುಟ್ಟಿರುವ ಕ್ರೈಸ್ತನೆಂದು ತನ್ನ ಬಗ್ಗೆ ಹೇಳಿಕೊಳ್ಳುವ ಪ್ರತಿಯೊಬ್ಬ ವ್ಯಕ್ತಿಯು ಈ ಸ್ಥಾನಕ್ಕೆ (ಕ್ರಿಸ್ತನನ್ನು ಅತಿ ಶ್ರೇಷ್ಠವಾಗಿ ಪ್ರೀತಿಸುವ ಸ್ಥಿತಿಗೆ) ತಲುಪಿರುತ್ತಾನೆಯೇ? ಸ್ವತಃ ನೀನು ಹೊಸದಾಗಿ ಹುಟ್ಟಿದ್ದೇನೆಂದು ಹೇಳಿಕೊಳ್ಳುವುದಾದರೆ, ನೀನು ಈ ಸ್ಥಳಕ್ಕೆ ಬಂದಿರುವೆಯಾ? ನೀನು ಯಥಾರ್ಥವಾಗಿ ಕ್ರಿಸ್ತನನ್ನು ಈ ಭೂಮಿಯ ಮೇಲಿನ ಇತರ ಎಲ್ಲರಿಗಿಂತ ಹೆಚ್ಚಾಗಿ ಪ್ರೀತಿಸುವೆಯೆಂದು ಹೇಳಬಲ್ಲೆಯಾ? ಕಳೆದ 50 ವರ್ಷಗಳಲ್ಲಿ ನಾನು ಅನೇಕ ದೇಶಗಳಲ್ಲಿ ನೋಡಿರುವುದರಲ್ಲಿ ಇಂತಹ ನಿಜಸ್ಥಿತಿ ಎಲ್ಲಿಯೂ ಕಂಡುಬಂದಿಲ್ಲ. ಅನೇಕರು ಕ್ರಿಸ್ತನನ್ನು ಅಂಗೀಕರಿಸಿದ್ದಾರೆ ಮತ್ತು "ನನ್ನ ಎಲ್ಲಾ ಪಾಪಗಳು ಕ್ಷಮಿಸಲ್ಪಟ್ಟಿವೆ ಮತ್ತು ನಾನು ಸ್ವರ್ಗಕ್ಕೆ ಹೋಗುತ್ತಿದ್ದೇನೆ," ಎಂದು ಹಾಡುತ್ತಾರೆ, ಆದರೆ ಅವರು ಶಿಷ್ಯರಾಗಿಲ್ಲ.
ಮುಂದಿನ ವಾರ ನಾವು ಶಿಷ್ಯತ್ವದ ಎರಡನೇ ಷರತ್ತನ್ನು ನೋಡಿಕೊಳ್ಳೋಣ.