WFTW Body: 

ಮತ್ತಾ. 4:9ರಲ್ಲಿ, ಸೈತಾನನು ಯೇಸುವಿಗೆ ಪ್ರಪಂಚದ ಎಲ್ಲಾ ರಾಜ್ಯಗಳನ್ನೂ, ಅವುಗಳ ವೈಭವವನ್ನೂ ಕ್ಷಣಮಾತ್ರದಲ್ಲಿ ತೋರಿಸಿ, "ನೀನು ನನಗೆ ಸಾಷ್ಟಾಂಗ ನಮಸ್ಕಾರ ಮಾಡಿ ನನ್ನನ್ನು ಆರಾಧಿಸಿದರೆ, ನಿನಗೆ ಇವುಗಳನ್ನು ಕೊಡುವೆನು," ಅಂದನು. ಸೈತಾನನು ಯಾವಾಗಲೂ ಇದನ್ನೇ ಬಯಸುತ್ತಾನೆ ಮತ್ತು ಇದೇ ಅವನನ್ನು ಸೈತಾನನನ್ನಾಗಿಸಿತು. ಅವನು ಮನುಷ್ಯನ ಸೃಷ್ಟಿಗಿಂತ ಬಹಳ ಮುಂಚೆಯೇ ದೇವರಿಂದ ಸೃಷ್ಟಿಸಲ್ಪಟ್ಟನು, ಸಕಲ ಸೃಷ್ಟಿಯಲ್ಲಿ ಅತ್ಯುನ್ನತ ಪದವಿಯನ್ನು ಹೊಂದಿದ್ದನು, ದೇವದೂತರಿಗೆ ಮುಖ್ಯಸ್ಥನಾಗಿದ್ದನು, ಸುಂದರನೂ, ಜ್ಞಾನಿಯೂ ಆಗಿದ್ದನು. ನಾವು ಈ ಉನ್ನತ ದೇವದೂತನ ಚರಿತ್ರೆಯನ್ನು ಯೆಶಾ.14 ಮತ್ತು ಯೆಹೆ. 28 ರಲ್ಲಿ ಓದುತ್ತೇವೆ. ಅವನ ಹೆಸರು ನಮಗೆ ತಿಳಿಸಲ್ಪಟ್ಟಿಲ್ಲ, ಅವನು ಉದಯನಕ್ಷತ್ರ ಎಂದು ಕರೆಯಲ್ಪಟ್ಟನೆಂದು ಮಾತ್ರ ತಿಳಿದಿದೆ (ಯೆಶಾ. 14:12). ಅದನ್ನು ಲ್ಯಾಟಿನ್ ಭಾಷೆಯಲ್ಲಿ "ಲೂಸಿಫರನು" ಎಂಬುದಾಗಿ ಅನುವಾದಿಸಲಾಗಿದೆ. ಆದ್ದರಿಂದ ಅವನಿಗೆ ಆ ಬಿರುದು ಬಂದಿತು, ಆದರೆ ಅದು ಅವನ ಹೆಸರಾಗಿರಲಿಲ್ಲ. ನಮಗೆ ಅವನ ಹೆಸರು ತಿಳಿದಿಲ್ಲ, ಆದರೆ ಈ ದೇವದೂತರ ಮುಖ್ಯಸ್ಥನು, ದೇವದೂತರು ದೇವರನ್ನು ಆರಾಧಿಸದೆ ತನ್ನನ್ನೇ ಆರಾಧಿಸಬೇಕೆಂದು ಬಯಸಿದನು. ಅದನ್ನೇ ಯೆಶಾ. 14 ರಲ್ಲಿ, ’ನಾನು ದೇವರಿಗೆ ಸರಿಸಮಾನನು ಆಗುವೆನು, ಎಂದುಕೊಂಡನು’ ಎಂಬುದಾಗಿ ಹೇಳಲಾಗಿದೆ. ಪಾಪವು ಯಾವ ರೀತಿ ಪ್ರಾರಂಭವಾಯಿತು, ಎಂಬುದನ್ನು ಜ್ಞಾಪಕದಲ್ಲಿ ಇಟ್ಟುಕೊಳ್ಳಿರಿ: ಒಬ್ಬ ವ್ಯಕ್ತಿಯು ಇತರರು ತನ್ನನ್ನೇ ಆರಾಧಿಸಬೇಕೆಂದು ಬಯಸಿದಾಗ, ಒಬ್ಬ ವ್ಯಕ್ತಿಯು ದೇವರ ವಿರುದ್ಧವಾಗಿ ತಿರುಗಿಬಿದ್ದಾಗ, ಮತ್ತು ಒಬ್ಬ ವ್ಯಕ್ತಿಯ ಹೃದಯವು ಗರ್ವದಿಂದ ಉಬ್ಬಿಕೊಂಡು, ದೇವದೂತರು ತನ್ನನ್ನು ಹೊಗಳಬೇಕೆಂದು ಬಯಸಿದಾಗ.

ಇದೇ ಪಾಪದ ಮೂಲವಾಗಿದೆ. ಪ್ರಪಂಚದಲ್ಲಿ ಮೊದಲನೆಯ ಪಾಪ ಕೊಲೆ ಅಥವಾ ವ್ಯಭಿಚಾರವಾಗಿರಲಿಲ್ಲ; ಇತರ ಜನರ ಹೊಗಳಿಕೆಯನ್ನು ಬಯಸುವುದೇ ಆ ಪಾಪವಾಗಿತ್ತು. ನಿಮ್ಮಲ್ಲಿ ಈ ಆಸೆಯಿದ್ದರೆ, ಜನರು ಯೇಸುಕ್ರಿಸ್ತನನ್ನಲ್ಲ, ನಿಮ್ಮನ್ನು ಮೆಚ್ಚಿಕೊಳ್ಳಬೇಕು, ಎಂದು ನೀವು ಬಯಸಿದರೆ, ನೀವು ಯಾರೇ ಆಗಿರಲಿ, ನಿಮ್ಮನ್ನು ನೀವು ಕ್ರೈಸ್ತನು ಅಥವಾ ಕ್ರೈಸ್ತಬೋಧಕನು ಎಂದು ಹೇಳಿಕೊಂಡರೂ, ನೀವು ಸೈತಾನನು ನಡೆದ ದಾರಿಯಲ್ಲಿ ನಡೆಯುತ್ತಾ ಇದ್ದೀರಿ. ಇದು ಒಂದು ಅಪಾಯಕಾರಿ ಸ್ಥಿತಿಯಾಗಿದೆ, ಏಕೆಂದರೆ ಅದು ಅಂತಿಮವಾಗಿ ನರಕಕ್ಕೆ ಕರೆದೊಯ್ಯುತ್ತದೆ. ಸೈತಾನನು ಪರಲೋಕದಲ್ಲಿದ್ದಾಗ ಆತನಿಗೆ ಹೊಗಳಿಕೆಯನ್ನು ಪಡೆಯಲು ಸಾಧ್ಯವಾಗಲಿಲ್ಲ; ಅವನು ಪರಲೋಕದಿಂದ ಹೊರಹಾಕಲ್ಪಟ್ಟನು, ಆದರೆ ಈಗ ಮತ್ತೊಮ್ಮೆ ಅವನು ಅದನ್ನು ಗಳಿಸಲು ಪ್ರಯತ್ನಿಸುತ್ತಿದ್ದಾನೆ. "ಸಾಷ್ಟಾಂಗವೆರಗಿ ನನ್ನನ್ನು ಆರಾಧಿಸಿ," ಎಂದು ಸೈತಾನನು ಹೇಳುತ್ತಾನೆ. ಆದರೆ ಯೇಸುವು ಮತ್ತಾ. 4:10 ರಲ್ಲಿ, "ಸೈತಾನನೇ, ತೊಲಗಿ ಹೋಗು, ನಿನ್ನ ದೇವರಾಗಿರುವ ಕರ್ತನಿಗೆ ಅಡ್ಡಬಿದ್ದು ಆತನೊಬ್ಬನನ್ನೇ ಆರಾಧಿಸಬೇಕು ಮತ್ತು ಆತನಿಗೆ ಮಾತ್ರ ಸೇವೆ ಸಲ್ಲಿಸಬೇಕು, ಎಂದು ಬರೆಯಲಾಗಿದೆ," ಎಂದು ಹೇಳಿದರು. ನಾವು ಒಬ್ಬರನ್ನು ಅಂದರೆ ದೇವರನ್ನು ಮಾತ್ರ ಆರಾಧಿಸಬೇಕು. ನಾವು ಮಹಿಮಾಭರಿತ ಜೀವಿಗಳನ್ನು (ದೂತರನ್ನು) ಅಥವಾ ದೇವರ ಶ್ರೇಷ್ಠ ಸೇವಕರನ್ನು ಆರಾಧಿಸುವ ತಪ್ಪನ್ನು ಮಾಡುವ ಸಾಧ್ಯತೆಯಿದೆ. ಪ್ರಕ. 22:8 ರಲ್ಲಿ, ಶ್ರೇಷ್ಠ ಅಪೊಸ್ತಲನಾದ ಯೋಹಾನನೂ ಈ ತಪ್ಪನ್ನು ಮಾಡಿದನು. ಅವನು ಒಬ್ಬ ದೇವದೂತನನ್ನು ಕಂಡು, ಪ್ರಕಟನೆ ಪುಸ್ತಕದಲ್ಲಿ ತನಗೆ ತೋರಿಸಲ್ಪಟ್ಟ ಅದ್ಭುತ ವಿಷಯಗಳನ್ನು ನೋಡಿ, ಇವುಗಳನ್ನು ತೋರಿಸಿದ ದೇವದೂತನನ್ನು ಆರಾಧಿಸಿ ಅವನಿಗೆ ಸಾಷ್ಟಾಂಗವೆರಗಿದನು. ಯೋಚಿಸಿ ನೋಡಿರಿ, 95 ವರ್ಷ ವಯಸ್ಸಿನ ಯೋಹಾನನು, ಹಲವು ವರ್ಷಗಳ ಕಾಲ ಕರ್ತನನ್ನು ಅರಿತಿದ್ದರೂ, ದೇವರ ಸೇವಕನನ್ನು ಅತಿಯಾಗಿ ಗೌರವಿಸುವ ತಪ್ಪನ್ನು ಮಾಡಿರುವಾಗ, ನಮ್ಮಲ್ಲಿ ಯಾರೇ ಆದರೂ ಈ ತಪ್ಪನ್ನು ಮಾಡಬಹುದು. ನಾವು ಇದರಿಂದ ಏನನ್ನು ಕಲಿಯಬೇಕು? ನಾವು ಯಾರಾದರೂ ದೇವರ ಸೇವಕರನ್ನು ಅತಿಯಾಗಿ ಮೆಚ್ಚಿಕೊಂಡು, ನಾವು ಸ್ವತಃ ದೇವರೊಂದಿಗೆ ಇರಿಸಿಕೊಳ್ಳಬೇಕಾದ ಸಂಪರ್ಕ ಇವರ ಮೂಲಕವೇ ಸಿಗುತ್ತದೆಂದು ಅಂದುಕೊಳ್ಳುವುದು ತಪ್ಪಾಗುತ್ತದೆ.

ಒಬ್ಬ ಬೋಧಕನು ಅಥವಾ ಸಭಾಪಾಲಕನು ದೇವರ ಮತ್ತು ಮನುಷ್ಯರ ನಡುವೆ ಎರಡನೇ ಮಧ್ಯಸ್ಥನಾಗಲು ಪ್ರಯತ್ನಿಸಿದರೆ, ನೀವು ಜಾಗರೂಕರಾಗಬೇಕು. ಹಳೆಯ ಒಡಂಬಡಿಕೆಯ ಪ್ರವಾದಿಗಳು ಮನುಷ್ಯರಿಗೆ ದೇವರ ಚಿತ್ತವನ್ನು ತೋರಿಸುವ ಜವಾಬ್ದಾರಿಯನ್ನು ಹೊಂದಿದ್ದರು, ಆದರೆ ಹೊಸ ಒಡಂಬಡಿಕೆಯಲ್ಲಿ ದೇವರ ಮತ್ತು ಮನುಷ್ಯನ ನಡುವೆ ಒಬ್ಬನೇ ಮಧ್ಯಸ್ಥನಿದ್ದಾನೆ, ಮತ್ತು ಅವನು ಕರ್ತನಾದ ಯೇಸು ಕ್ರಿಸ್ತನು. ನಿಮ್ಮ ಹಾಗೂ ಕ್ರಿಸ್ತನ ನಡುವೆ ನಿಮಗೆ ಒಬ್ಬ ಸಭಾಪಾಲಕನು ಅಥವಾ ಒಬ್ಬ ಬೋಧಕನು ಅಥವಾ ಯಾರೋ ಒಬ್ಬ ದೈವಿಕ ಮನುಷ್ಯನು ಎರಡನೇ ಮಧ್ಯಸ್ಥನಾಗುವ ಅವಶ್ಯಕತೆಯಿಲ್ಲ. ನಿಮಗೆ ಮರಿಯಳೂ ಬೇಕಾಗಿಲ್ಲ. ಬೇರೆ ಯಾರೂ ನಿಮಗೆ ಬೇಕಾಗಿಲ್ಲ. ನೀವು ನೇರವಾಗಿ ಯೇಸುವಿನ ಬಳಿಗೆ ಮತ್ತು ಆತನ ಮೂಲಕ ತಂದೆಯ ಬಳಿಗೆ ಹೋಗಬಹುದು. ಆದರೆ ಯೋಹಾನನು ಮಾಡಿದಂತೆಯೇ ನಾವು ತಪ್ಪು ಮಾಡಬಹುದು. ಪ್ರಕ. 22ರಲ್ಲಿ, ಬಲಿಷ್ಠನಾದ ಈ ದೇವದೂತನ ನಿಷ್ಠೆಯೂ ಸಹ ಕಂಡುಬರುತ್ತದೆ. ಅವನು ಹೇಳಿದ ಮಾತು, "ಹಾಗೆ ಮಾಡಬೇಡ; ನನ್ನನ್ನು ಪೂಜಿಸಬೇಡ."

"ಹೊಸ ಒಡಂಬಡಿಕೆಯಲ್ಲಿ ದೇವರು ಮತ್ತು ಮನುಷ್ಯನ ನಡುವೆ ಒಬ್ಬನೇ ಮಧ್ಯಸ್ಥನಿದ್ದಾನೆ, ಆತನೇ ಕರ್ತನಾದ ಯೇಸು ಕ್ರಿಸ್ತನು"

ಇತರ ಕ್ರೈಸ್ತರು ತಮಗೆ ಅಂಟಿಕೊಳ್ಳದಂತೆ ನೋಡಿಕೊಂಡು, "ತೀರ ಸಮೀಪಕ್ಕೆ ಬರಬೇಡ; ಸ್ವತಃ ಕ್ರಿಸ್ತನೊಂದಿಗೆ ನೇರ ಸಂಪರ್ಕಕ್ಕಾಗಿ ತವಕಿಸು," ಎಂದು ಅವರಿಗೆ ಹೇಳುವಂತ ಧರ್ಮೋಪದೇಶಕರು ಮತ್ತು ಸಭಾಪಾಲಕರು ಮತ್ತು ಕ್ರೈಸ್ತನಾಯಕರು ಎಲ್ಲಿದ್ದಾರೆ? "ದೇವರು ನಿನ್ನ ತಂದೆಯಾಗಿದ್ದಾರೆ. ನೇರವಾಗಿ ಅವರ ಬಳಿಗೆ ಹೋಗು, ಅವರ ಚಿತ್ತವೇನೆಂದು ಅವರೇ ನಿನಗೆ ತೋರಿಸಿಕೊಡುತ್ತಾರೆ," ಎಂಬ ಸಲಹೆ ನೀಡಿ, ತಾನು ನಿನಗಾಗಿ ದೇವರ ಚಿತ್ತವನ್ನು ಕಂಡುಕೊಳ್ಳಲು ನಿರಾಕರಿಸುವಂತ ದೇವರ ಯಥಾರ್ಥ ಸೇವಕನು ಇಂಥವನೇ ಆಗಿದ್ದಾನೆ. ಆತನೇ ನೀವು ಯಾವುದೇ ಭಯವಿಲ್ಲದೆ ಹಿಂಬಾಲಿಸಬಹುದಾದ ದೇವಮನುಷ್ಯನು ಆಗಿದ್ದಾನೆ. ಯಾಕೆಂದರೆ, ಇಬ್ರಿ. 8:11 ರಲ್ಲಿ ದೇವರು ಕೊಟ್ಟಿರುವ ಹೊಸ ಒಡಂಬಡಿಕೆಯ ವಾಗ್ದಾನ ಹೀಗಿದೆ, "ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಎಲ್ಲರೂ ಕರ್ತನ ಜ್ಞಾನವನ್ನು ಪಡೆಯುವರು, ಯಾರಿಗೂ ’ಕರ್ತನ ಜ್ಞಾನವನ್ನು ಪಡೆಯಿರಿ’ ಎಂದು ಬೋಧಿಸಬೇಕಿಲ್ಲ". ಅಂದರೆ, ಹೊಸದಾಗಿ ಕ್ರಿಸ್ತನಲ್ಲಿ ಹುಟ್ಟಿದ ಆತ್ಮಿಕ ಕ್ರೈಸ್ತಶಿಶುವಿನಿಂದ ಪ್ರಾರಂಭಿಸಿ, ಶ್ರೇಷ್ಠನೂ, ಬಲಿಷ್ಠನೂ ಆಗಿರುವ ದೇವರ ಸೇವಕನ ವರೆಗೆ, ಎಲ್ಲರೂ ವೈಯಕ್ತಿಕವಾಗಿ ದೇವರನ್ನು ಅರಿಯಬಹುದು. ಹಾಗಾಗಿ ಆ ದೇವದೂತನು, "ನನ್ನನ್ನು ಆರಾಧಿಸಬೇಡ. ನಾನು ನಿನ್ನ ಸಹೋದರರಲ್ಲಿ ಒಬ್ಬನು, ನಾನು ನಿನ್ನ ಜೊತೆ-ಸೇವಕನು, ನೀನು ದೇವರನ್ನು ಆರಾಧಿಸು," ಎಂದು ಹೇಳಿದನು.