WFTW Body: 

ವಿಮೋಚನಕಾಂಡ 12:40ರಲ್ಲಿ ಹೀಗೆ ಹೇಳಲಾಗಿದೆ, "ಇಸ್ರಾಯೇಲ್ಯರು ಐಗುಪ್ತದೇಶದಲ್ಲಿ ವಾಸವಾಗಿದ್ದದ್ದು 430 ವರುಷಗಳು." ಆದರೆ ದೇವರು ಹಿಂದೆ ಅಬ್ರಹಾಮನಿಗೆ ಆತನ ಸಂತತಿಯ ವಿಷಯವಾಗಿ, ಅವರು ಅನ್ಯದೇಶದಲ್ಲಿ 400 ವರುಷ ಇರುತ್ತಾರೆಂದು ತಿಳಿಸಿದ್ದರು (ಆದಿಕಾಂಡ 15:13). ನಾವು ಇಲ್ಲಿ ನೋಡಿದರೆ, ಅವರು ಅಲ್ಲಿ 430 ವರುಷಗಳು ಇದ್ದರು. ದೇವರು ತನ್ನ ಲೆಕ್ಕಾಚಾರದಲ್ಲಿ ತಪ್ಪು ಮಾಡಿದರೆ? ಇಲ್ಲ. ದೇವರ ಸಮಯಸೂಚಿಯು ಬಹಳ ನಿಖರವಾದದ್ದು ಮತ್ತು ದೇವರ ಯೋಜನೆಗಳು ಒಂದಿಷ್ಟೂ ತಪ್ಪದೆ ನಡೆಯುತ್ತವೆ. ದೇವರು ಅಬ್ರಹಾಮನಿಗೆ ತಿಳಿಸಿದಂತೆ, ಐಗುಪ್ತದಲ್ಲಿ ಇಸ್ರಾಯೇಲ್ಯರು 400 ವರ್ಷಗಳ ಕಾಲ ಇರುವುದು ದೇವರ ಪರಿಪೂರ್ಣ ಚಿತ್ತವಾಗಿತ್ತು. ಹಾಗಿದ್ದಾಗ, ಅವರು ಅಲ್ಲಿ ಇನ್ನೂ 30 ವರ್ಷಗಳು ಇರಲು ಕಾರಣವೇನು?

ಮೇಲಿನ ಪ್ರಶ್ನೆಗೆ ಉತ್ತರವನ್ನು ಇನ್ನೊಂದು ಉದಾಹರಣೆಯ ಮೂಲಕ ಪಡೆಯೋಣ. ದೇವರು ಇಸ್ರಾಯೇಲ್ಯರನ್ನು ಐಗುಪ್ತದಿಂದ ಹೊರತಂದಾಗ, ಅವರು ಅರಣ್ಯಪ್ರದೇಶದಲ್ಲಿ ಕೇವಲ 2 ವರ್ಷಗಳ ಕಾಲ ಇರಬೇಕೆಂದು ದೇವರ ಚಿತ್ತವಾಗಿತ್ತು. ಆದರೆ ಅವರು ಅರಣ್ಯದಲ್ಲಿ ಎಷ್ಟು ಸಮಯ ಕಳೆದರು? 40 ವರ್ಷ (ಧರ್ಮೋಪದೇಶ. 2:14 ನೋಡಿರಿ). ನಿಮ್ಮಲ್ಲಿ ದೇವರ ವಿರೋಧವಾಗಿ ನಡೆಯುವ ಸ್ವಭಾವವನ್ನು 2 ವರ್ಷದಲ್ಲಿ ಮುರಿಯಲು ದೇವರು ಯೋಜಿಸಬಹುದು. ಆದರೆ ವಾಸ್ತವವಾಗಿ ಅದಕ್ಕೆ 40 ವರ್ಷಗಳು ಬೇಕಾಗಬಹುದು. ನೀವು ಮಾನಸಾಂತರ ಹೊಂದಿದ 2 ವರ್ಷಗಳ ನಂತರ ದೇವರು ನಿಮ್ಮನ್ನು ಉಪಯೋಗಿಸಿಕೊಳ್ಳಲು ಬಯಸಬಹುದು. ಆದರೆ ಅವರು 40 ವರ್ಷಗಳ ವರೆಗೆ ನಿಮ್ಮನ್ನು ಉಪಯೋಗಿಸಲು ಸಾಧ್ಯವಾಗದೇ ಇರಬಹುದು. ಇದು ನೀವು ಎಷ್ಟು ಶೀಘ್ರವಾಗಿ ದೇವರಿಗೆ ತಲೆಬಾಗಿಸಿ ನಡೆಯುವುದನ್ನು ಕಲಿಯುತ್ತೀರಿ ಎಂಬುದರ ಮೇಲೆ ಅವಲಂಬಿಸಿದೆ. ಅದೇ ರೀತಿಯಾಗಿ, ಇಸ್ರಾಯೇಲ್ಯರು ಐಗುಪ್ತದಲ್ಲಿ 400 ವರ್ಷ ಕಾಲ ಇರಬೇಕೆಂದು ದೇವರ ಚಿತ್ತವಾಗಿತ್ತು. ಆದರೆ ಅವರು 430 ವರ್ಷಗಳ ಕಾಲ ಇರಬೇಕಾಯಿತು.

ಇದಕ್ಕೆ ಕಾರಣ, ಅವರ ನಾಯಕ ಮೋಶೆಯು ಇನ್ನೂ ಸಿದ್ಧನಾಗಿರದೇ ಇದ್ದುದಾಗಿತ್ತು, ಎಂದು ನಾನು ನಂಬುತ್ತೇನೆ. ಮೋಶೆಯು 40 ವರ್ಷ ಪ್ರಾಯದಲ್ಲಿ ಐಗುಪ್ತವನ್ನು ಬಿಟ್ಟು ಹೊರಟಾಗ, ಮುಂದಿನ 10 ವರ್ಷಗಳಲ್ಲಿ ಅವನು ವನ್ಯಪ್ರದೇಶದಲ್ಲಿ ತನ್ನ ಮಾವನ ಮನೆಯಲ್ಲಿ ವಾಸಿಸುವ ಸಮಯದಲ್ಲಿ, ದೇವರು ಅವನನ್ನು ಮುರಿಯಲು ಯೋಜಿಸಿದ್ದರು; ಮತ್ತು ಅವನ 50ರ ವಯಸ್ಸಿನಲ್ಲಿ ಅವನನ್ನು ಇಸ್ರಾಯೇಲ್ಯರ ನಾಯಕನನ್ನಾಗಿ ಮಾಡುವುದು ಅವರ ಇಚ್ಛೆಯಾಗಿತ್ತು, ಎಂದು ನಾನು ನಂಬುತ್ತೇನೆ. ಆದರೆ ಮೋಶೆಯು 10 ವರ್ಷಗಳಲ್ಲಿ ತನ್ನ ಪಾಠವನ್ನು ಕಲಿಯಲಿಲ್ಲ. ಆತನ ಮಾವನು ಅವನನ್ನು ಇನ್ನೂ ಬಹಳಷ್ಟು ಬಗ್ಗಿಸಿ ಹದಗೊಳಿಸಬೇಕಾಯಿತು. 10 ವರ್ಷಗಳ ಕಲಿಯುವಿಕೆಯನ್ನು ಪೂರ್ಣಗೊಳಿಸಲು ಮೋಶೆಗೆ 40 ವರ್ಷಗಳು ಬೇಕಾದವು! ಹೀಗಾಗಿ ಇಸ್ರಾಯೇಲ್ಯರು ಇನ್ನೂ 30 ವರ್ಷಗಳ ಕಾಲ ಕಾಯಬೇಕಾಯಿತು. ದೇವರು ಪ್ರಪಂಚದಲ್ಲಿ ತನ್ನ ಕೆಲಸವನ್ನು ನಡೆಸಲು ಮುರಿಯಲ್ಪಟ್ಟ ಮನುಷ್ಯರನ್ನು ಅವಲಂಬಿಸುತ್ತಾರೆ.

ಇದರಲ್ಲಿ ನಮಗೆ ಒಂದು ಸಂದೇಶ ಮತ್ತು ಒಂದು ಎಚ್ಚರಿಕೆ ಸಿಗುತ್ತದೆ. ನಿಮ್ಮ ಜೀವನಕ್ಕಾಗಿ ದೇವರು ಒಂದು ಯೋಜನೆಯನ್ನು ಇರಿಸಿರಬಹುದು. ಆದರೆ ನೀವು ಮುರಿಯಲ್ಪಡುವ ತನಕ ಆ ಯೋಜನೆಯು ಮುಂದೆ ಸಾಗುವುದಿಲ್ಲ. ಅವರು 10 ವರ್ಷಗಳಲ್ಲಿ ಮುಗಿಸಲು ಬಯಸುವ ಕಾರ್ಯಕ್ಕೆ 40 ವರ್ಷಗಳು ಬೇಕಾಗಬಹುದು. ಆದುದರಿಂದ ನಾವು ತಡಮಾಡದೆ ದೀನತೆಯಿಂದ ದೇವರ ಭುಜಬಲದ ಕೆಳಗೆ ನಮ್ಮನ್ನು ತಗ್ಗಿಸಿಕೊಂಡು ಯಾವಾಗಲೂ ನಡೆಯುವುದು ಒಳ್ಳೆಯದು - ತಗ್ಗಿಸಿಕೊಳ್ಳುವುದು ಅಂದರೆ, ನಮ್ಮ ಜೀವನದ ಹಾದಿಯಲ್ಲಿ ದೇವರಿಂದ ಬರುವ ಸನ್ನಿವೇಶಗಳಲ್ಲಿ ನಾವು ನಮ್ಮನ್ನು ದೇವರಿಗೆ ಒಪ್ಪಿಸಿಕೊಳ್ಳುವುದು.

ಪ್ರಲಾಪ 3:27ರಲ್ಲಿ ಹೇಳಿರುವಂತೆ, "ಯೌವನದಲ್ಲಿ ನೊಗ ಹೊರುವುದು (ಮುರಿಯಲ್ಪಟ್ಟು ದೀನನಾಗುವುದು) ಮನುಷ್ಯನಿಗೆ ಲೇಸು." ಎಳೆ ಪ್ರಾಯದಲ್ಲಿ ದೇವರು ನಿಮ್ಮನ್ನು ಮುರಿಯುವಂತೆ ಅವರಿಗೆ ಒಪ್ಪಿಸಿಕೊಡಿರಿ. ನಿಮ್ಮ ಜೀವನದಲ್ಲಿ ದೇವರು ಮಂಜೂರು ಮಾಡುವ ಸನ್ನಿವೇಶಗಳ ವಿರುದ್ಧವಾಗಿ ಹೋರಾಡಬೇಡಿರಿ, ಏಕೆಂದರೆ ಇದರಿಂದ ದೇವರ ಯೋಜನೆಗಳಿಗೆ ತಡೆ ಉಂಟಾಗುತ್ತದೆ. ನಿಮ್ಮಲ್ಲಿರುವ ಸತ್ಯವೇದದ ಜ್ಞಾನ, ಸಂಗೀತ ಕೌಶಲ್ಯ ಮತ್ತು ನಿಮ್ಮ ಸಂಪತ್ತು ನಿಮ್ಮನ್ನು ದೇವರ ಸೇವೆಗೆ ಸಿದ್ಧಪಡಿಸಲಾರವು. ಮುರಿಯಲ್ಪಡುವಿಕೆಯು ಅತೀ ಅವಶ್ಯವಾಗಿದೆ. ’ಯಾಕೋಬನು’ ಮುರಿಯಲ್ಪಟ್ಟಾಗ ಮಾತ್ರ ’ಇಸ್ರಾಯೇಲ’ನಾದನು. ಮೋಶೆಯು ಮುರಿಯಲ್ಪಟ್ಟ ಮೇಲೆ ಒಬ್ಬ ನಾಯಕ ಮತ್ತು ಒಬ್ಬ ಪ್ರವಾದಿಯಾದನು.

ವಿಮೋಚನಕಾಂಡ 2ರಲ್ಲಿ, ಮೋಶೆಯು ಆರಂಭದಲ್ಲಿ ತನ್ನ ಸ್ವಜನರಾದ ಇಸ್ರಾಯೇಲ್ಯರನ್ನು ಐಗುಪ್ತದಿಂದ ವಿಮೋಚನೆಗೊಳಿಸಲು ಹೊರಟು ಬಂದ ಸನ್ನಿವೇಶದ ಕುರಿತಾಗಿ ನಾವು ಓದುತ್ತೇವೆ. ಒಬ್ಬ ಐಗುಪ್ತ್ಯನು ಒಬ್ಬ ಇಬ್ರಿಯ ಮನುಷ್ಯನನ್ನು ಹೊಡೆಯುವುದನ್ನು ಅವನು ನೋಡುತ್ತಾನೆ (ವಿಮೋ. 2:11), ಮತ್ತು ಆ ಐಗುಪ್ತ್ಯನನ್ನು ಹೊಡೆದು ಸಾಯಿಸುತ್ತಾನೆ. ಒಬ್ಬ ಮನುಷ್ಯನನ್ನು ಬರಿಗೈಯಿಂದ ಹೊಡೆದು ಸಾಯಿಸಿದ ಮೋಶೆಯ ಭುಜಬಲ ಎಂಥದ್ದೆಂದು ಯೋಚಿಸಿದಿರಾ? ಅವನು ಐಗುಪ್ತ್ಯರನ್ನು ಇದೇ ರೀತಿಯಾಗಿ - ಒಬ್ಬೊಬ್ಬರಾಗಿ - ಕೊಲ್ಲುತ್ತಾ ಹೋಗಿದ್ದರೆ, ಲಕ್ಷಾಂತರ ಜನಸಂಖ್ಯೆಯ ಇಡೀ ಐಗುಪ್ತ ದೇಶವನ್ನು ಸಾಯಿಸಲು ಅವನಿಗೆ ಎಷ್ಟು ವರ್ಷಗಳು ಹಿಡಿಯುತ್ತಿದ್ದವೆಂದು ಯೋಚಿಸಿರಿ! ಎಲ್ಲಾ ಐಗುಪ್ತ್ಯರು ಸಾಯುವುದಕ್ಕೆ ಮೊದಲೇ ಮೋಶೆಯು ಸಾಯುತ್ತಿದ್ದನು. ಆದರೆ ಆತನ 80ನೇ ವಯಸ್ಸಿನಲ್ಲಿ, ದೇವರು ಆತನನ್ನು ಮುರಿದ ನಂತರ, ಮೋಶೆಯು ಸುಮ್ಮನೆ ತನ್ನ ಕೋಲನ್ನು ಆ ಕೆಂಪು ಸಮುದ್ರದ ಮೇಲೆ ಚಾಚಿದಾಗ, ಕ್ಷಣ ಮಾತ್ರದಲ್ಲಿ ಇಡೀ ಐಗುಪ್ತ್ಯ ಸೇನೆಯು ಒಬ್ಬನೂ ಉಳಿಯದಂತೆ ಮುಳುಗಿಸಲ್ಪಟ್ಟಿತು. ಇದೇ ಒಬ್ಬ ಮಾನವನು ತನ್ನ ಸ್ವಬಲದಿಂದ ಸಾಧಿಸುವುದಕ್ಕೂ, ಮುರಿಯಲ್ಪಟ್ಟ ಒಬ್ಬ ಮನುಷ್ಯನು ದೇವರ ಬಲದ ಮೂಲಕ ಸಾಧಿಸುವ ಕಾರ್ಯಕ್ಕೂ ಇರುವ ಅಂತರವಾಗಿದೆ.

ಮೊದಲಿನಿಂದಲೂ ದೇವರ ವಾಕ್ಯದ ಸಂದೇಶ ಇದಾಗಿದೆ: ನೀವು ನಿಜವಾದ ದೇವಸಭೆಯಾದ ಯೆರೂಸಲೇಮನ್ನು ಕಟ್ಟಲು ಬಯಸುವುದಾದರೆ, ನೀವು ಅವಶ್ಯವಾಗಿ ಮುರಿಯಲ್ಪಡಬೇಕು. ನೀವು ಸನ್ನಿವೇಶಗಳ ಮೂಲಕ ಮತ್ತು ಜನರ ಮೂಲಕ ದೇವರಿಂದ ತಗ್ಗಿಸಲ್ಪಡಬೇಕು. ಅಂತಹ ಸಂದರ್ಭಗಳನ್ನು ನೀವು ತಳ್ಳಿಹಾಕದೆ ಸ್ವೀಕರಿಸಿದರೆ, ದೇವರು ನಿಮ್ಮಲ್ಲಿ ಒಂದು ಕಾರ್ಯವನ್ನು ತ್ವರಿತವಾಗಿ ಸಾಧಿಸಬಹುದು. ನಾನು ನೋಡಿರುವ ಹಲವಾರು ಯೌವನಸ್ಥರು ತಲೆಯಲ್ಲಿ ಸತ್ಯವೇದ ಜ್ಞಾನವನ್ನು ಹೊಂದಿಕೊಂಡಿದ್ದು, ಉತ್ಸಾಹದಿಂದ ತುಂಬಿದ್ದು, ತಾವು ಹೊರಟು ದೇವರ ಸೇವೆಯನ್ನು ಮಾಡುತ್ತೇವೆ ಎಂದು ಯೋಚಿಸುತ್ತಾರೆ. ಮತ್ತು ಅವರು ಹೊರಟು ತಮ್ಮ ಸ್ವಬಲದಿಂದ ದೇವರ ಸೇವೆಯನ್ನು ಮಾಡುತ್ತಾರೆ. ಇಪ್ಪತ್ತು ಅಥವಾ ಮೂವತ್ತು ವರ್ಷಗಳ ನಂತರ ಅವರು ಆಶಾಭಂಗಗೊಂಡು, ನಿರುತ್ಸಾಹಿಗಳಾಗಿ, ತಮ್ಮ ಸೋಲಿಗಾಗಿ ಇತರರನ್ನು ನಿಂದಿಸುತ್ತಾರೆ. ಅವರು ಏನನ್ನೂ ಸಾಧಿಸದೆ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ. ಇದೇಕೆ? ಇದಕ್ಕೆ ಒಂದೇ ಒಂದು ಕಾರಣ - ಅವರು ದೇವರಿಂದ ಮುರಿಯಲ್ಪಡಲು ಒಪ್ಪಿಗೆ ನೀಡಲೇ ಇಲ್ಲ.

ಸತ್ಯವೇದದಲ್ಲಿ ಹೇಳಿರುವಂತೆ, "ದೇವಭಕ್ತನ ಜೀವನವು ಉಲ್ಲಾಸಭರಿತವಾಗಿದೆ" (ಜ್ಞಾನೋಕ್ತಿ 14:14 - Living Bble). ನನಗೆ ಈಗ 79 ವರ್ಷ ವಯಸ್ಸಾಗಿದೆ ಮತ್ತು ನಾನು ಹಿಂದಿನ 59 ವರ್ಷಗಳು ದೇವರ ಮಗುವಾಗಿ ಜೀವಿಸಿದ್ದೇನೆ - ಮತ್ತು ನನ್ನ ಯಥಾರ್ಥ ಸಾಕ್ಷಿ ಏನೆಂದರೆ ನನ್ನ ಕ್ರಿಸ್ತೀಯ ಜೀವನವು ಉತ್ಸಾಹದಿಂದ ತುಂಬಿದೆ. ನಾನು ಅನೇಕ ಶೋಧನೆಗಳ ಮೂಲಕ ಹಾದು ಬಂದಿದ್ದೇನೆ, ಆದರೆ ಅವೆಲ್ಲವುಗಳ ನಡುವೆ ನಾನು ದೇವರ ರೋಮಾಂಚಕ ಹಸ್ತವನ್ನು ರುಚಿಸಿ ನೋಡಿದ್ದೇನೆ. ದೇವರಿಗಾಗಿ ಜೀವಿಸಲು ಮತ್ತು ಅವರ ಸೇವೆ ಮಾಡಲು ಸಾಧ್ಯವಾಗಿರುವುದಕ್ಕಾಗಿ ನಾನು ಉತ್ಸುಕನಾಗಿದ್ದೇನೆ. ದೇವರ ಸೇವೆ ಮಾಡುವುದು ಈ ಲೋಕದಲ್ಲಿ ಯಾರೇ ಆದರೂ ಮಾಡಬಹುದಾದ ಅತೀ ಶ್ರೇಷ್ಠವಾದ ಕಾರ್ಯವಾಗಿದೆ.

ನನಗೆ ಇಡೀ ಲೋಕದಲ್ಲಿ ಯಾರ ವಿರುದ್ಧವಾಗಿಯೂ ಒಂದು ದೂರು ಕೂಡ ಇಲ್ಲ. ಇದುವರೆಗೆ ಒಬ್ಬರಾದರೂ ನನಗೆ ಕೇಡು ಬಗೆಯುವುದರಲ್ಲಿ ಸಫಲರಾಗಿಲ್ಲ. ಅನೇಕರು ನನಗೆ ಕೇಡು ಮಾಡಲು ಪ್ರಯತ್ನಿಸಿದ್ದಾರೆ ಮತ್ತು ನನ್ನ ಸಹ-ಕಾರ್ಯಕರ್ತರಲ್ಲಿ ಕೆಲವರು ನನಗೆ ವಿಶ್ವಾಸಘಾತ ಮಾಡಿದ್ದಾರೆ. ಆದರೆ ಅವರು ಗೈದ ಪ್ರತಿಯೊಂದು ಕಾರ್ಯವೂ - ರೋಮಾ. 8:28ರಲ್ಲಿ ಹೇಳಿರುವಂತೆ - ನನಗೆ ಒಳಿತನ್ನೇ ಉಂಟುಮಾಡಿದೆ. ಹಾಗಾಗಿ ವಾಸ್ತವಿಕವಾಗಿ ನಾನು ಅವರಿಗಾಗಿ ದೇವರಿಗೆ ಸ್ತೋತ್ರ ಸಲ್ಲಿಸಿದ್ದೇನೆ, ಏಕೆಂದರೆ ಅವರ ದುಷ್ಕ್ರಿಯೆಗಳ ಮೂಲಕ ದೇವರು ನನ್ನನ್ನು ಹೆಚ್ಚಿನ ಕ್ರಿಸ್ತನ ಸಾರೂಪ್ಯಕ್ಕೆ ನಡೆಸಿದ್ದಾರೆ - ಇದು ಅವರ ದುಷ್ಟ ಕಾರ್ಯಗಳಿಂದ ಉಂಟಾದ ಒಳ್ಳೆಯ ಫಲವಾಗಿದೆ. ನನ್ನ ಯೌವನದ ದಿನಗಳಲ್ಲಿ ದೇವರು ನನ್ನನ್ನು ಮುರಿದರು ಮತ್ತು ಅವರು ಇಂದಿನ ದಿನವೂ ನನ್ನನ್ನು ಮುರಿಯುತ್ತಲೇ ಇದ್ದಾರೆ! ಇದೇ ಫಲದಾಯಕ ಜೀವನದ ಹಾದಿಯಾಗಿದೆ. ನಾವು ಹೆಚ್ಚಾಗಿ ಮುರಿಯಲ್ಪಟ್ಟಷ್ಟೂ, ನಾವು ಇನ್ನೂ ಹೆಚ್ಚಾಗಿ ಇತರರಿಗೆ ಆಶೀರ್ವಾದ ತರುವಂತೆ ನಮ್ಮನ್ನು ಉಪಯೋಗಿಸಲು ದೇವರು ಶಕ್ತರಾಗಿದ್ದಾರೆ.

ನಾವು ವಿಮೋಚನಕಾಂಡ 17ರಲ್ಲಿ ಓದುವಂತೆ, ಬಂಡೆಯನ್ನು ಹೊಡೆದ ನಂತರ ಅದರಿಂದ ನೀರು ಹೊರಟು ಹರಿಯಲು ಆರಂಭವಾಯಿತು. ಬಂಡೆಯು ಹೊಡೆಯಲ್ಪಡದೇ ನೀರು ಹರಿಯುವುದಿಲ್ಲ. ಒಬ್ಬ ಹೆಂಗಸು ಒಂದು ಅಮೂಲ್ಯವಾದ ಭರಣಿಯಲ್ಲಿ ಸುಗಂಧ ತೈಲವನ್ನು ತಂದು, ಯೇಸುವಿನ ಪಾದದ ಬಳಿ ಆ ಭರಣಿಯನ್ನು ಒಡೆದಾಗ, ಆ ತೈಲದ ಪರಿಮಳವು ಮನೆಯಲ್ಲೆಲ್ಲಾ ತುಂಬಿಕೊಂಡಿತು. ಆ ಭರಣಿಯು ಒಡೆಯಲ್ಪಡುವ ಮುನ್ನ ಅದರ ಸುವಾಸನೆ ಯಾರಿಗೂ ಸಿಗಲಿಲ್ಲ. ಯೇಸುವು ರೊಟ್ಟಿಗಳನ್ನು ಕೈಯಲ್ಲಿ ತೆಗೆದುಕೊಂಡು ದೇವರಿಗೆ ಸ್ತೋತ್ರ ಮಾಡಿದಾಗ, ಏನೂ ನಡೆಯಲಿಲ್ಲ. ಆದರೆ ಆತನು ಅವುಗಳನ್ನು ಮುರಿದಾಗ ಐದು ಸಾವಿರ ಮಂದಿ ಊಟ ಮಾಡಿ ತೃಪ್ತರಾದರು.

ಇವೆಲ್ಲಾ ಉದಾಹರಣೆಗಳಲ್ಲಿ ಸಿಗುವ ಸಂದೇಶವೇನು? ಮುರಿಯಲ್ಪಡುವಿಕೆಯು ಆಶೀರ್ವಾದ ಪ್ರಾಪ್ತವಾಗುವ ಮಾರ್ಗವಾಗಿದೆ. ಒಂದು ಪರಮಾಣುವು ಸೀಳಲ್ಪಟ್ಟಾಗ ಶಕ್ತಿಯು ಬಿಡುಗಡೆಯಾಗುತ್ತದೆ! ಒಂದು ಇಡೀ ನಗರಕ್ಕೆ ವಿದ್ಯುಚ್ಛಕ್ತಿಯನ್ನು ಪೂರೈಸುವ ಸಾಮರ್ಥ್ಯ ಅದರಲ್ಲಿ ಇರುತ್ತದೆ! ಒಂದು ಚಿಕ್ಕ ಅಣುವಿನ ಕಣವು - ಅದು ಎಷ್ಟು ಚಿಕ್ಕದೆಂದರೆ ಒಂದು ಸೂಕ್ಷ್ಮದರ್ಶಕದ ಮೂಲಕ ನೋಡಿದರೂ ಅದು ಕಣ್ಣಿಗೆ ಬೀಳದು - ಸೀಳಿ ಒಡೆಯಲ್ಪಟ್ಟಾಗ ಎಂಥಹ ಮಹಾ ಶಕ್ತಿ ಅದರಿಂದ ಬಿಡುಗಡೆಗೊಳ್ಳುತ್ತದೆ ಎಂದು ಯೋಚಿಸಿರಿ. ಪ್ರಕೃತಿಯಲ್ಲಿ ಮತ್ತು ಸತ್ಯವೇದದ ವಾಕ್ಯದಲ್ಲಿ ಇರುವ ಸಂದೇಶ ಕೇವಲ ಇಷ್ಟು: ದೇವರ ಬಲ ಪ್ರಭಾವವು ಮುರಿಯಲ್ಪಡುವಿಕೆಯ ಮೂಲಕ ಬಿಡುಗಡೆಗೊಳ್ಳುತ್ತದೆ. ಈ ಸಂದೇಶವು ನಿಮ್ಮ ಮನಸ್ಸಿನಲ್ಲಿ ಸ್ಪಷವಾಗಿ ಅಚ್ಚೊತ್ತಲಿ. ದೇವರು 1963ನೇ ಇಸವಿಯಲ್ಲಿ, ನಾನು ಪವಿತ್ರಾತ್ಮನ ಅಭಿಷೇಕಕ್ಕಾಗಿ ಮತ್ತು ನನ್ನ ಸೇವೆಯಲ್ಲಿ ದೇವರ ಬಲಕ್ಕಾಗಿ ದೇವರನ್ನು ಕೇಳುತ್ತಿದ್ದಾಗ, ನನಗೆ ಈ ಸಂದೇಶವನ್ನು ಸ್ಪಷ್ಟವಾಗಿ ತೋರಿಸಿಕೊಟ್ಟರು. ಮುರಿಯಲ್ಪಡುವಿಕೆಯ ಮಾರ್ಗವು ಬಲದ ಮಾರ್ಗವೆಂದು ದೇವರು ನನಗೆ ತೋರಿಸಿದರು. ಮತ್ತು ಈ ಅಮೂಲ್ಯ ಸತ್ಯಾಂಶವನ್ನು ಜೀವಿತವಿಡೀ ನಾನು ಮರೆಯಲಾರೆ. ನೀವು ಇನ್ನೂ ಎಳೆ ಪ್ರಾಯದಲ್ಲಿ ಇರುವಾಗ ಈ ಪಾಠವನ್ನು ಕಲಿಯುವಂತೆ ನಾನು ನಿಮ್ಮನ್ನು ಪ್ರೋತ್ಸಾಹಿಸಲು ಇಚ್ಛಿಸುತ್ತೇನೆ.