WFTW Body: 

ಯೇಸು ಕ್ರಿಸ್ತನು ಹಿಂದಿರುಗುವ ಮೊದಲು, ಪರಲೋಕ ರಾಜ್ಯದ ಈ ಸುವಾರ್ತೆಯು ಲೋಕದೆಲ್ಲೆಡೆಯೂ ತಲುಪುವಂತೆ ಸಾರಲಾಗುವದು (ಮತ್ತಾ. 24:14)

ಪರಲೋಕ ರಾಜ್ಯದ ಸುವಾರ್ತೆ ಎಂದರೇನು? ರೋಮಾ. 14:17 ರಲ್ಲಿ ಇದು ಪವಿತ್ರಾತ್ಮನಲ್ಲಿರುವ ನೀತಿಯೂ, ಪವಿತ್ರಾತ್ಮನಲ್ಲಿರುವ ಸಮಧಾನವೂ ಮತ್ತು ಪವಿತ್ರಾತ್ಮನಲ್ಲಿರುವ ಆನಂದದ ಸುವಾರ್ತೆ ಎಂದು ಸ್ಪಷ್ಟವಾಗಿ ಕಲಿಸುತ್ತದೆ. ಇದನ್ನು ಸಾರುವ ಜನ ಬಹಳ ಕಡಿಮೆ. ಬಹಳಷ್ಟು ಜನ ಪಾಪ ಕ್ಷಮಾಪಣೆಯನ್ನು ಮಾತ್ರ ಸಾರುತ್ತಾರೆ. ಇದು ಉತ್ತಮವಾದ ಮೊದಲನೆಯ ಹೆಜ್ಜೆಯಾಗಿದೆ.

ನನ್ನ ಪ್ರಕಾರ ಇದು ಒಂದು ಬಟ್ಟಲನ್ನು ಶುಚಿಗೊಳಿಸುವುದಕ್ಕೆ ಸಮಾನವಾಗಿದೆ. ನನ್ನ ಪುಟ್ಟ ಮಗ ನನ್ನ ಬಳಿ ಬಂದು, "ಅಪ್ಪಾ, ನನಗೆ ಒಂದು ಲೋಟ ಹಾಲು ಕೊಡುತ್ತೀಯಾ?" ಎಂದು ಕೇಳಿ, ಮತ್ತು ನನಗೆ ಕೊಳಕಾದ ಬಟ್ಟಲನ್ನು (ನಮ್ಮ ಹೃದಯದ ಚಿತ್ರ) ಕೊಟ್ಟರೆ , ನಾನು ಮೊದಲು ಮಾಡುವುದೇನೆಂದರೆ, ನಾನು ಆ ಬಟ್ಟಲನ್ನು ಶುಚಿಗೊಳಿಸುತ್ತೇನೆ. ನಾನು ಆ ಕೊಳಕಾದ ಬಟ್ಟಲಿಗೆ ಹಾಲು ಹಾಕುವುದಿಲ್ಲ. ನಾನು ಆ ಬಟ್ಟಲನ್ನು ತೆಗೆದುಕೊಂಡು ಸಂಪೂರ್ಣವಾಗಿ ಶುಚಿಗೊಳಿಸುತ್ತೇನೆ. ಆದರೆ, ಅದರ ಉದ್ದೇಶವೇನು?, ನಾನು ಅವನಿಗೆ ಖಾಲಿ ಬಟ್ಟಲನ್ನು ಕೊಡುವುದಿಲ್ಲ! ಅದನ್ನು ಹಾಲಿನಿಂದ ತುಂಬಿಸಿ ನಂತರ ನಾನು ಅವನಿಗೆ ಅದನ್ನು ಕೊಡುತ್ತೇನೆ.

ಅದೇ ರೀತಿ, ನಾವು ಕ್ರಿಸ್ತನ ಬಳಿಗೆ ಬಂದಾಗ, ಆತನು ಮೊದಲು ಮಾಡುವುದೇನೆಂದರೆ, ಬಟ್ಟಲಿನ ಒಳಭಾಗವನ್ನು ಶುಚಿಗೊಳಿಸುವಂತೆ, ಆತನು ನಮ್ಮ ಹೃದಯಗಳನ್ನು ಶುದ್ಧೀಕರಿಸುತ್ತಾನೆ. ಆದರೆ, ಆತನು ಅದನ್ನು ಅಷ್ಟಕ್ಕೇ ಬಿಟ್ಟುಬಿಡುತ್ತಾನೆಯೇ? ಇಲ್ಲ! ಆತನು ಪವಿತ್ರಾತ್ಮನ ಮೂಲಕ ದೇವರ ನೀತಿಯನ್ನು, ದೇವರ ಶಾಂತಿಯನ್ನು, ದೇವರ ಆನಂದವನ್ನು ಅದರಲ್ಲಿ ತುಂಬುತ್ತಾನೆ. ಇದೇ ಸುವಾರ್ತೆ. ನಾವು ಕೇವಲ ಕ್ರಿಸ್ತನು ಹೃದಯವನ್ನು ಶುದ್ಧೀಕರಿಸುತ್ತಾನೆ ಎಂಬ ಸತ್ಯವನ್ನು ಮಾತ್ರ ಸಾರುವುದಾದರೆ ನಾವು ಜನರಿಗೆ ನಿಜವಾಗಿಯೂ ಶುದ್ಧವಾಗಿರಬಹುದಾದ ಖಾಲಿ ಬಟ್ಟಲನ್ನು ಕೊಡುತ್ತೇವೆ. ಅದ್ದರಿಂದಲೇ ಅನೇಕ ಕ್ರೈಸ್ತರು ಬಾಯಾರಿದ್ದಾರೆ. ಅವರು ತೃಪ್ತರಾಗಿಲ್ಲ ಏಕೆಂದರೆ ಅವರ ಬಳಿ ಒಳ್ಳೆಯ ಸ್ವಚ್ಛವಾದ ಬಟ್ಟಲು ಇರಬಹುದು, ಆದರೆ ಅದು ಖಾಲಿಯಾಗಿದೆ (ಬರಿದಾಗಿದೆ). ನಾನು ನನ್ನ ಮಗನಿಗೆ ಒಂದು ಖಾಲಿ, ಸ್ವಚ್ಛವಾದ ಬಟ್ಟಲನ್ನು ಕೊಟ್ಟು, "ಮಗನೇ, ನೀನು ನನಗೆ ಕೊಳಕಾದ ಬಟ್ಟಲನ್ನು ಕೊಟ್ಟೆ, ಇದನ್ನು ನಾನು ಸ್ವಚ್ಛಗೊಳಿಸಿದ್ದೇನೆ," ಎಂದರೆ ಪ್ರಯೋಜನವೇನು? " ದೇವರು ನಮಗೆ ಇಷ್ಟನ್ನು ಮಾತ್ರ ಮಾಡಿದರೆ, ಅದು ಹತಾಶೆಯನ್ನುಂಟುಮಾಡುತ್ತದೆ. ನನ್ನ ಮಗ ಹೇಳಬಹುದು, "ಅಪ್ಪಾ, ನನಗೆ ಸ್ವಲ್ಪ ಹಾಲು ಬೇಕಿತ್ತು."

ನೀವು ನೀತಿಗಾಗಿ ಹಸಿದಿದ್ದೀರ ಅಥವಾ ಬಾಯಾರಿದ್ದೀರ? ಇಂದು ಸಮಸ್ಯೆ ಏನೆಂದರೆ, ಅನೇಕ ಜನರು ನೀತಿಗಾಗಿ ಹಸಿದಿಲ್ಲ ಅಥವಾ ಬಾಯಾರಿಲ್ಲ. ಅದ್ದರಿಂದಲೇ ಅವರು ಬರಿದಾದ ಶುಧ್ಧ ಬಟ್ಟಲನ್ನು ಹಿಡಿದುಕೊಂಡು ಎಲ್ಲಾ ಕಡೆ ಹೋಗುತ್ತಿರುತ್ತಾರೆ.

ಕ್ರಿಸ್ತನು ಸತ್ತು ಮತ್ತೆ ಎದ್ದು ತನ್ನ ರಕ್ತವನ್ನು ತಂದೆಯ ಮುಂದೆ ಸಲ್ಲಿಸಬೇಕಾಗಿತ್ತು. ಆಗ ಮಾತ್ರ ಮನುಷ್ಯರ ಹೃದಯಗಳು ಶುದ್ಧವಾಗುತ್ತಿದ್ದವು.

ಹಳೆಯ ಒಡಂಬಡಿಕೆಗೂ ಹೊಸ ಒಡಂಬಡಿಕೆಗೂ ಇರುವ ವ್ಯತ್ಯಾಸವನ್ನು ಈ ರೀತಿ ಚಿತ್ರಿಸಬಹುದು: ಹಳೆಯ ಒಡಂಬಡಿಕೆಯಲ್ಲಿ ಹೇಳಿದಂತೆ, ವಿಶ್ವಾಸಿಗೆ ಪವಿತ್ರಾತ್ಮನ ವರವು ಭೂಮಿಗೆ ದೇವರ ರಾಜ್ಯವನ್ನು ತರುತ್ತದೆ; ಅಂದರೆ ಬಟ್ಟಲು ತಲೆ ಕೆಳಗಾಗಿ ಇಟ್ಟಂತೆ. ನೀವು ಆ ಬಟ್ಟಲಿನ ಮೇಲೆ ಒಂದು ಜಗ್ಗಿನಿಂದ ನೀರನ್ನು ಸುರಿಯುತ್ತೀರಿ. ಇದು ಪವಿತ್ರಾತ್ಮನ ಹೊರಗಿನ ಸುರಿಸುವಿಕೆಯ ಚಿತ್ರ. ಹಳೆಯ ಒಡಂಬಡಿಕೆಯ ಕಾಲದಲ್ಲಿನ ರೀತಿ ಇದಾಗಿತ್ತು. ನೀರು ಹರಿಯಿತು; ಪವಿತ್ರಾತ್ಮನು ಜನರ ಮೇಲೆ ಇದ್ದನು ಮತ್ತು ಆತನು ಹೊರಗಡೆ ಹರಿಯಲ್ಪಟ್ಟು ಬಹುಶ: ಸುತ್ತಮುತ್ತಲಿನ ಮಿಲಿಯಾಂತರ ಜನರು ಆಶೀರ್ವದಿಸಲ್ಪಟ್ಟರು. ದೇವರಿಂದ ಅಭಿಷೇಕಿಸಲ್ಪಟ್ಟ ಸೇವಕನಾದ ಮೋಶೆಯು ಅಡವಿಯಲ್ಲಿ ಎರಡು ಮಿಲಿಯನ್ ಜನರನ್ನು ಮುನ್ನಡೆಸಿದನು. ಆದರೆ ಮೋಶೆಯ ಒಳಗಿನ ಹೃದಯವು ಅಶುದ್ಧವಾಗಿತ್ತು. ಅವನು ಕೋಪವನ್ನು ಜಯಿಸಲಾಗಲಿಲ್ಲ. ಅವನಲ್ಲಿ ಕೋಪವಿದ್ದಾಗ್ಯೂ ಜನ ಸಮೂಹವನ್ನು ಆಶೀರ್ವದಿಸುವಂತೆ ಆಶೀರ್ವಾದವು ಅವನಿಂದ ಹರಿಯಿತು.

ಹಳೆಯ ಒಡಂಬಡಿಕೆಯಲ್ಲಿ, ದಾವೀದ, ಸಂಸೋನ, ಗಿದ್ಯೋನ ಮತ್ತು ಇನ್ನೂ ಅನೇಕರಲ್ಲಿ ದೇವರ ಆತ್ಮನು ಅವರ ಮೇಲೆ ಇದ್ದನು. ಮಹಾನ್ ಸ್ನಾನಿಕ ಯೋಹಾನನಿಗೆ ತನ್ನ ತಾಯಿಯ ಗರ್ಭದಿಂದಲೇ ದೇವರ ಆತ್ಮನಿದ್ದರೂ ಆತನು ಸೆರೆಯಲ್ಲಿದ್ದಾಗ, ಆತನಿಗೆ ಕ್ರಿಸ್ತನ ಬಗ್ಗೆ ಸಂದೇಹವಿತ್ತು. ಪರಲೋಕದಿಂದ ದೇವರ ಸ್ವರವನ್ನು ಕೇಳಿಸಿಕೊಂಡಿದ್ದಾಗ್ಯೂ ಸಹ ಅವನು ಯೇಸುವು ನಿಜವಾಗಿಯೂ ಮೆಸ್ಸೀಯನೇ ಎಂದು ಪ್ರಶ್ನಿಸಿದನು. ಅವನಿಗೆ ಅಪನಂಬಿಕೆಯಿತ್ತು. ಏಕೆಂದರೆ ಅವನ ಒಳಗಿನ ಬಟ್ಟಲು ನಂಬಿಕೆಯಿಂದ ತುಂಬಿರಲಿಲ್ಲ.

ಆದರೆ ಪಂಚಾಶತ್ತಮ ದಿನದಂದು, ಕರ್ತನು ಈ ಪಾತ್ರೆಯನ್ನು ಮೇಲೆ ತಿರುಗಿಸಿ ಪವಿತ್ರಾತ್ಮನಿಂದ ಈ ಪಾತ್ರೆಯನ್ನು ತುಂಬಿದನು. ಅದುವೇ ನಮ್ಮ ಹೃದಯವಾಗಿದೆ. ಆಗ ಅವನು ಹಳೆಯ ಒಡಂಬಡಿಕೆಯಂತೆ ಜನರ ಮೇಲೆ ಹರಿದು ಎಲ್ಲರನ್ನೂ ಆಶೀರ್ವದಿಸುತ್ತಾನೆ. ಅದಕ್ಕಿಂತ ಹೆಚ್ಚಾಗಿ, ಹೊಸ ಒಡಂಬಡಿಕೆಯಲ್ಲಿ ಜನರ ಅಂತರಾಳದಿಂದ ಹರಿದು ಜನರನ್ನು ಆಶೀರ್ವದಿಸುತ್ತಾನೆ. ಅದುವೇ ನಮ್ಮೊಳಗಿಂದ ಹರಿದು ಬರುವ ದೇವರ ರಾಜ್ಯವಾಗಿದೆ. ಪಂಚಾಶತ್ತಮ ದಿನದಂದು ಬರುವ ದೇವರ ರಾಜ್ಯದ ಬಗ್ಗೆ ಯೇಸು ನುಡಿದ ಪ್ರವಾದನೆ ಇದುವೇ. ಮಹಾ ಹಬ್ಬದ ಕೊನೆಯ ದಿನದಲ್ಲಿ ಯೇಸು ಹೇಳಿದ್ದು - ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ "ಅವನೊಳಗಿನಿಂದ ಜೀವಕರವಾದ ನೀರಿನ ಬುಗ್ಗೆಗಳು ಹರಿಯುವವು"(ಯೋಹಾ. 7:38). ಪಂಚಾಶತ್ತಮ ದಿನದ ಮೊದಲು ಅದು ಸಂಭವಿಸಲು ಸಾಧ್ಯವಾಗಿರಲಿಲ್ಲ. ಯೋಹಾ. 7:39 ರಲ್ಲಿ ಹೇಳಿರುವ ಪ್ರಕಾರ, ಯೇಸು ತನ್ನನ್ನು ನಂಬುವವರು ಹೊಂದಲಿರುವ ಪವಿತ್ರಾತ್ಮನ ವರವನ್ನು ಕುರಿತು ಹೀಗೆ ಹೇಳಿದರು. ಯೇಸು ಇನ್ನೂ ಮಹಿಮೆಯನ್ನು ಹೊಂದಿರಲಿಲ್ಲವಾದ ಕಾರಣ ಪವಿತ್ರಾತ್ಮನ ವರವು ಇನ್ನು ಕೊಡಲ್ಪಟ್ಟಿರಲಿಲ್ಲ.

ಕ್ರಿಸ್ತನು ಸತ್ತು ಮತ್ತೆ ಎದ್ದು ತನ್ನ ರಕ್ತವನ್ನು ತಂದೆಯ ಮುಂದೆ ಸಲ್ಲಿಸಬೇಕಾಗಿತ್ತು. ಆಗ ಮಾತ್ರ ಮನುಷ್ಯರ ಹೃದಯಗಳು ಶುದ್ಧವಾಗುತ್ತಿದ್ದವು. ಎತ್ತುಗಳು ಮತ್ತು ಮೇಕೆಗಳ ರಕ್ತವು ಎಂದಿಗೂ ಜನರ ಹೃದಯವನ್ನು ಶುದ್ಧೀಕರಿಸಲು ಸಾಧ್ಯವಿರಲಿಲ್ಲ ಮತ್ತು ಅದಕ್ಕಾಗಿಯೇ ದೇವರು ಜನರೊಳಗೆ ಪವಿತ್ರಾತ್ಮನನ್ನು ಇರಿಸಲು ಸಾಧ್ಯವಾಗಲಿಲ್ಲ. ಹಳೆಯ ಒಡಂಬಡಿಕೆಯ ಕಾಲದಲ್ಲಿ ದೇವರ ರಾಜ್ಯವು ಜನರೊಳಗೆ ಬರಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಕ್ರಿಸ್ತನು ತನ್ನ ರಕ್ತವನ್ನು ಸುರಿಸಿ ತಂದೆಯ ಬಳಿ ಏರಿದ ಕಾರಣ ಕರ್ತನಾದ ಯೇಸುವಿನ ಬಳಿ ನಮ್ಮ ಪ್ರತಿಯೊಂದು ಪಾಪವನ್ನು ಅರಿಕೆ ಮಾಡುವುದರಿಂದ ನಾವು ಪಾಪದಿಂದ ಶುದ್ಧೀಕರಿಸಲ್ಪಡುತ್ತೇವೆ.

ಆದಕಾರಣ, ದೇವರು ತಲೆಕೆಳಗಾಗಿ ಇರುವ ಪಾತ್ರೆಯನ್ನು ಮೊದಲು ಮೇಲೆ ತಿರುಗಿಸಿ, ಅದನ್ನು ಕ್ರಿಸ್ತನ ರಕ್ತದಿಂದ ಶುದ್ಧೀಕರಿಸಿ, ಪವಿತ್ರಾತ್ಮನಿಂದ ನಮ್ಮನ್ನು ತುಂಬುವರು. ಹೀಗೆ ದೇವರ ಚಿತ್ತವನ್ನು ಮಾಡಲು ದೇವರು ನಮ್ಮನ್ನು ಬಲಪಡಿಸುತ್ತಾರೆ. ನಂತರ ದೇವರ ಜೀವವು ನಮ್ಮಿಂದ ಹರಿದು ಬಂದು, ನಮ್ಮ ಮಾತುಗಳಲ್ಲಿ ಮತ್ತು ಕಾರ್ಯಗಳಲ್ಲಿ ಹರಿಯುತ್ತದೆ. ಹೀಗೆ ನಾವು ದೇವರ ಚಿತ್ತವನ್ನು ಮಾಡುವ ಹಾಗೆ, ಇತರರೂ ದೇವರ ಚಿತ್ತವನ್ನು ನೆರವೇರಿಸುವಂತೆ ನಾವು ಅವರನ್ನು ಮುನ್ನಡೆಸಬಹುದು.

ನಮ್ಮ ಒಳಭಾಗದಿಂದ ಪವಿತ್ರಾತ್ಮನು ಹರಿಯುತ್ತಾನೆ. ಒಂದು ವೇಳೆ ಪವಿತ್ರಾತ್ಮನು ನಮ್ಮ ಒಳಭಾಗದಿಂದ ಹರಿಯಲಿಲ್ಲ ಅಂದರೆ, ಅದು ಹಳೆ ಒಡಂಬಡಿಕೆ ರೀತಿಯ ಸೇವೆಯಾಗಿರುತ್ತದೆ.