WFTW Body: 

ಒಂದು ನೌಕೆ ಅಥವಾ ಹಡಗು ಚಲಿಸುವ ಸುರಕ್ಷಿತ ಜಲಮಾರ್ಗವನ್ನು ಗುರುತಿಸಲು ನೀರಿನ ಕಾಲುವೆಯ ಎರಡು ಪಕ್ಕದಲ್ಲಿ ತೇಲುವ ಬುರುಡೆಗಳನ್ನು ಇರಿಸಲಾಗುತ್ತದೆ. ನಿಮ್ಮ ಜೀವನದ ಹಡಗು ಚಲಿಸುವುದಕ್ಕೆ ಸುರಕ್ಷಿತ ಮಾರ್ಗವನ್ನು ಸೂಚಿಸುವಂತ ಎರಡು ಬುರುಡೆಗಳು "ಶುದ್ಧವಾದ ಮನಸ್ಸಾಕ್ಷಿ" ಮತ್ತು "ಯಥಾರ್ಥವಾದ ನಂಬಿಕೆ" ಇವುಗಳಾಗಿವೆ. ಇವುಗಳಲ್ಲಿ ಒಂದನ್ನು ಯಾರಾದರೂ ಅಲಕ್ಷ ಮಾಡಿದರೆ, ಅದು ಅವರ ಜೀವನದ ಹಡಗು ಒಡೆದು ನಷ್ಟಗೊಳ್ಳುವುದಕ್ಕೆ ಕಾರಣವಾಗುತ್ತದೆ (1 ತಿಮೊ. 1:19,20).

ಆದುದರಿಂದ ಯಾವಾಗಲೂ ನಿಮ್ಮ ಮನಸ್ಸಾಕ್ಷಿಯ ಸೂಕ್ಷ್ಮತೆಯನ್ನು ಕಾಪಾಡಿಕೊಳ್ಳಲು ಜಾಗರೂಕರಾಗಿರಿ. ಯಾವುದೇ ವೇಳೆಯಲ್ಲಿ ನಿಮ್ಮ ಮನಸ್ಸಾಕ್ಷಿಯಲ್ಲಿ ಒತ್ತಡ ಅಥವಾ ಗೊಂದಲ ಉಂಟಾದಾಗ, ಅದರ ಖಚಿತವಾದ ಅರ್ಥವೇನೆಂದರೆ ನೀವು ಸುರಕ್ಷಿತ ಜಲಮಾರ್ಗವನ್ನು ಬಿಟ್ಟಿದ್ದೀರಿ ಮತ್ತು ಅಪಾಯಕಾರಿ ಜಲಪ್ರವಾಹದಲ್ಲಿ ಚಲಿಸುತ್ತಿದ್ದೀರಿ. ನೀವು ಹಾಗೆ ಮುಂದುವರಿದರೆ, ಮತ್ತು ನಿಮ್ಮ ಮನಸ್ಸಾಕ್ಷಿಯು ಕೊಡುವ ಅಪಾಯದ ಸೂಚನೆಯನ್ನು ತಿರಸ್ಕರಿಸಿದರೆ, ನಿಮ್ಮ ಜೀವನದ ಹಡಗು ಬಂಡೆಗೆ ಅಪ್ಪಳಿಸಿ ನಾಶವಾದೀತು, ಎಚ್ಚರಿಕೆ; ಇದು ದೊಡ್ಡ ಅಪಾಯವಾಗಿದೆ! ಹಾಗಾಗಿ ಈ ವಿಷಯದಲ್ಲಿ ನೀವು ಬಹಳ ಹೆಚ್ಚಿನ ಜಾಗರೂಕತೆ ವಹಿಸಿರಿ.

’ನಂಬಿಕೆ’ ಅನ್ನುವಂತದ್ದು ಸುರಕ್ಷಿತ ಕಾಲುವೆಯ ಎರಡನೆಯ ತೇಲುವ ಬುರುಡೆಯಾಗಿದೆ. ನಂಬಿಕೆಯ ಮೂಲಕ ನಮ್ಮ ವ್ಯಕ್ತಿತ್ವವು ದೇವರ ಮೇಲೆ ಸಂಪೂರ್ಣವಾಗಿ ಆತುಕೊಳ್ಳುತ್ತದೆ, ಮತ್ತು ಎಂದಿಗೂ ಬದಲಾಗದ ದೇವರ ಪ್ರೀತಿ, ಅವರ ಸರ್ವಶಕ್ತಿ ಮತ್ತು ಅವರ ಪರಿಪೂರ್ಣ ಜ್ಞಾನ ಇವುಗಳಲ್ಲಿ ಸಂಪೂರ್ಣ ವಿಶ್ವಾಸವನ್ನು ಇರಿಸುತ್ತದೆ.

ಎಂದಿಗೂ ಬದಲಾಗದ ದೇವರ ಪೀತಿಯು ನಮ್ಮ ಜೀವಿತದಲ್ಲಿ ಎಲ್ಲಾ ಕಾರ್ಯಗಳು ಹೇಗೆ ನಡೆಯಬೇಕೆಂದು ನಿರ್ಧರಿಸುತ್ತದೆ. ನಿರಾಕರಿಸಲ್ಪಟ್ಟ ಪ್ರಾರ್ಥನೆಗಳೂ ಕೂಡ ಇದೇ ಪರಿಪೂರ್ಣ ದೈವಿಕ ಪ್ರೀತಿಯ ಮೂಲಕ ನಿರಾಕರಿಸಲ್ಪಡುತ್ತವೆ.

ದೇವರ ಪರಿಪೂರ್ಣ ಶಕ್ತಿಯುನಮ್ಮ ಶಕ್ತಿಯನ್ನು ಮೀರುವ ಯಾವುದೇ ಶೋಧನೆಯನ್ನು ಎಂದಿಗೂ ನಮ್ಮ ಬಳಿಗೆ ಬರಗೊಡುವುದಿಲ್ಲ (1 ಕೊರಿ. 10:13); ಮತ್ತು ಅದು ನಮಗೆ ಬರುವ ಎಲ್ಲಾ ಶೋಧನೆಗಳನ್ನು ಜಯಿಸಲು ಸಹಾಯ ಮಾಡುತ್ತದೆ (ಇಬ್ರಿ. 4:16); ಇದಲ್ಲದೆ ಅದು ನಮ್ಮ ಜೀವಿತದಲ್ಲಿ ಎದುರಾಗುವ ಎಲ್ಲಾ ಸಂಗತಿಗಳನ್ನು ನಮ್ಮ ಹೆಚ್ಚಿನ ಹಿತಕ್ಕಾಗಿ ಅನುಕೂಲವಾಗುವಂತೆ ನಡೆಸುತ್ತದೆ (ರೋಮಾ. 8:28).

ದೇವರು ನಮ್ಮ ಜೀವಿತದಲ್ಲಿ ಯಾವುದೇ ಸಂಗತಿ ನಡೆಯುವುದಕ್ಕೆ ಅವಕಾಶ ಕೊಡುವಾಗ, ದೇವರ ಪರಿಪೂರ್ಣ ವಿವೇಕವು ಅವರಿಂದ ಯಾವ ತಪ್ಪೂ ಆಗದಂತೆ ನೋಡಿಕೊಳ್ಳುತ್ತದೆ - ಮತ್ತು ನಮ್ಮ ನಿತ್ಯತ್ವದ ಜೀವಿತಕ್ಕೆ ಯಾವುದು ಒಳ್ಳೆಯದೆಂದು ದೇವರಿಗೆ ಮಾತ್ರ ಗೊತ್ತಿದೆ.

ನೀವು ದೇವರ ಈ ಮೂರು ಗುಣಲಕ್ಷಣಗಳಲ್ಲಿ ನಿಮ್ಮ ಸಂಪೂರ್ಣ ಭರವಸೆಯನ್ನು ಎಂದಿಗೂ ಕಳೆದುಕೊಳ್ಳಬಾರದು. ’ನಂಬಿಕೆಯ ಜೀವಿತ’ ಎಂಬುದರ ಅರ್ಥ ಇದೇ ಆಗಿದೆ. ದುರದೃಷ್ಟವಶಾತ್, ಪೂರ್ಣಾವಧಿ ದೇವರ ಸೇವಕರು "ನಂಬಿಕೆಯ ಜೀವಿತ" ಎಂಬ ಮಾತಿನ ಅರ್ಥವನ್ನು "ದೇವರು ನಮ್ಮ ಅಗತ್ಯತೆಗಳಿಗೆ ಹಣವನ್ನು ದಯಪಾಲಿಸುತ್ತಾರೆ" ಎಂಬ ರೀತಿಯಲ್ಲಿ ಬದಲಾಯಿಸಿದ್ದಾರೆ. ಆದರೆ ಇದು ವಾಕ್ಯದ ಒಂದು ತಪ್ಪಾದ ಉಪಯೋಗವಾಗಿದೆ. "ನೀತಿವಂತನು ನಂಬಿಕೆಯಿಂದಲೇ ಬದುಕುವನು," ಎಂದು ಸತ್ಯವೇದವು ಹೇಳುತ್ತದೆ (ರೋಮಾ. 1:17). ನಾವು ಯಾವಾಗಲೂ ಸತ್ಯವೇದದ ಪದಗಳನ್ನು ಸತ್ಯವೇದವು ಉಪಯೋಗಿಸಿದ ರೀತಿಯಲ್ಲೇ ಉಪಯೋಗಿಸಬೇಕು.

ನಾವು ನಂಬಿಕೆ ಮತ್ತು ಒಳ್ಳೆಯ ಮನಸ್ಸಾಕ್ಷಿಯ ವಿಷಯದಲ್ಲಿ ಅಜಾಗರೂಕತೆಯಿಂದ ನಡೆದರೆ, ಕ್ರಮೇಣವಾಗಿ ಒಂದು ದುಷ್ಟ ಹೃದಯ (ಕೆಟ್ಟ ಮನಸ್ಸಾಕ್ಷಿ) ಮತ್ತು ಅಪನಂಬಿಕೆಯ ಹೃದಯ (ನಂಬಿಕೆಯನ್ನು ಕಳಕೊಂಡಿರುವ ಹೃದಯ) ನಮ್ಮಲ್ಲಿ ಅಭಿವೃದ್ಧಿ ಹೊಂದಬಹುದು. ಇವುಗಳು ನಮ್ಮನ್ನು ದೇವರನ್ನು ಬಿಟ್ಟು ದೂರ ಹೋಗುವಂತೆ ಮಾಡಬಹುದು (ಇಬ್ರಿ. 3:12).

ನಾವು ಹೀಗೆ ದೇವರನ್ನು ಬಿಟ್ಟು ದೂರ ಸರಿಯದಂತೆ ನಮ್ಮನ್ನು ಸುರಕ್ಷಿತವಾಗಿ ಉಳಿಸಿಕೊಳ್ಳುವುದಕ್ಕೆ, ಒಬ್ಬರನ್ನೊಬ್ಬರು "ಪ್ರತಿನಿತ್ಯವೂ ಎಚ್ಚರಿಸಿ ಪ್ರೋತ್ಸಾಹಿಸಬೇಕು," ಎಂದು ನಮಗೆ ಮುಂದಿನ ವಚನದಲ್ಲಿ ತಿಳಿಸಲಾಗಿದೆ (ಇಬ್ರಿ. 3:13). ಹಾಗಾಗಿ ನೀವು ಪ್ರತಿದಿನವೂ ಸತ್ಯವೇದದ ವಾಕ್ಯದಿಂದ - ವಾಕ್ಯವನ್ನು ಓದುವುದು ಮತ್ತು ಧ್ಯಾನಿಸುವುದರ ಮೂಲಕ, ಅಥವಾ ಉತ್ತಮ ಕ್ರೈಸ್ತ ಪುಸ್ತಕಗಳನ್ನು ಓದಿಕೊಳ್ಳುವುದರ ಮೂಲಕ, ಅಥವಾ ಸಭಾ-ಕೂಟಗಳಲ್ಲಿ ಹಾಗೂ ಅಂತರ್ಜಾಲದಿಂದ ಕ್ರೈಸ್ತ ಸಂದೇಶಗಳನ್ನು ಕೇಳಿಸಿಕೊಳ್ಳುವುದರ ಮೂಲಕ - ಒಂದಲ್ಲ ಒಂದು ರೀತಿಯಲ್ಲಿ ಪ್ರೋತ್ಸಾಹವನ್ನು ಹೊಂದುವುದು ಒಳ್ಳೆಯದು.