WFTW Body: 

ನಿತ್ಯಜೀವ ಎಂದರೆ, "ದೇವರನ್ನು ನಮ್ಮ ತಂದೆಯಾಗಿ ಮತ್ತು ಯೇಸು ಕ್ರಿಸ್ತನನ್ನು ನಮ್ಮ ಕರ್ತ, ರಕ್ಷಕ ಮತ್ತು ನಮ್ಮ ಪರವಾಗಿ ದೇವರ ಸಾನ್ನಿಧ್ಯಕ್ಕೆ ಮುಂದಾಗಿ ಪ್ರವೇಶಿಸಿದಾತನು ಎಂಬುದಾಗಿ ತಿಳಿಯುವುದೇ ಆಗಿದೆ"(ಯೋಹಾ. 17:3). ನೀವು ಸುಗಮವಾದ ಕ್ರಿಸ್ತೀಯ ಜೀವಿತವನ್ನು ಜೀವಿಸಲಿಕ್ಕೆ ನಿಮ್ಮ ಪರಲೋಕದ ತಂದೆಯೊಂದಿಗೆ ಮತ್ತು ಯೇಸುವಿನೊಂದಿಗೆ ಅನ್ಯೋನ್ಯತೆಯನ್ನು ಬೆಳೆಸಿಕೊಳ್ಳಬೇಕು. ಹಿಂಜಾರುವಿಕೆಯಿಂದ ಭ್ರಷ್ಟರಾಗುವುದನ್ನು ತಡೆಯುವುದಕ್ಕೆ ಇದೇ ಅತ್ಯುತ್ತಮ ರಕ್ಷಾಕವಚವಾಗಿದೆ.

ದೇವರಿಂದ ಅಭಿಷೇಕಿಸಲ್ಪಟ್ಟಂತ ಸ್ಪೂರ್ತಿದಾಯಕ ಸಂದೇಶಗಳನ್ನು ಕೇಳಿಸಿಕೊಂಡರೂ ಸಹ, ನಿತ್ಯಜೀವವನ್ನು ಪಡೆಯಲು ಅಷ್ಟು ಮಾತ್ರ ಸಾಕಾಗುವುದಿಲ್ಲ. ಪರಲೋಕದಿಂದ ಬಿದ್ದಂತ ಮನ್ನವೂ ಕೂಡ 24 ತಾಸುಗಳಲ್ಲಿ ಹಳಸಿ, ಹುಳಬಿದ್ದು ದುರ್ವಾಸನೆ ಬೀರುತ್ತಿತ್ತು (ವಿಮೋ. 16:20). ಕೇವಲ 24 ಗಂಟೆಗಳಲ್ಲಿ ನಿಮ್ಮ ಕ್ರಿಸ್ತೀಯ ಜೀವಿತವೂ ಸಹ ತಾಜಾತನವನ್ನು ಸುಲಭವಾಗಿ ಕಳೆದುಕೊಂಡು ಹಳೆಯದಾಗಬಹುದು!! ಆದರೆ ಅದೇ ಮನ್ನವನ್ನು ಮಂಜೂಷದ ಒಳಗೆ (ದೇವರ ಗುಡಾರದ ಅತಿ ಪವಿತ್ರಸ್ಥಾನದಲ್ಲಿ) ದೇವರ ಸನ್ನಿಧಿಯಲ್ಲಿ ಇರಿಸಿದಾಗ, ಇಸ್ರಾಯೇಲ್ಯರು ಅರಣ್ಯದಲ್ಲಿ ಅಲೆಯುತ್ತಿದ್ದ 40 ವರ್ಷಗಳ ಕಾಲ ಮತ್ತು ಮುಂದೆ ಕಾನಾನ್ ದೇಶದಲ್ಲಿ ನೂರಾರು ವರ್ಷಗಳ ನಂತರವೂ ಅದಕ್ಕೆ ಹುಳಬೀಳಲಿಲ್ಲ ಅಥವಾ ಅದು ದುರ್ವಾಸನೆ ಬೀರಲಿಲ್ಲ (ವಿಮೋ. 16:33; ಇಬ್ರಿ. 9:4). ದೇವರ ಸಾನ್ನಿಧ್ಯದ ಈ ಪ್ರಭಾವವು ನಮ್ಮ ಜೀವನದಲ್ಲಿ ಪ್ರತಿಯೊಂದು ಸಂಗತಿಯನ್ನು ತಾಜಾ ಸ್ಥಿತಿಯಲ್ಲಿ ಇರಿಸುತ್ತದೆ. ಆದ್ದರಿಂದ ನೀವು ಬೇರೆಯವರ ಮೂಲಕ ಕರ್ತನ ಬಗ್ಗೆ ಕೇಳಿಸಿಕೊಳ್ಳುವ ಪ್ರತಿಯೊಂದು ಸಂಗತಿಯು (ಸಭಾಕೂಟಗಳಲ್ಲಿ ಮತ್ತು ಅಂತರ್ಜಾಲದಲ್ಲಿ) ಮೊದಲು ಕರ್ತನ ಮುಂದೆ ಇರಿಸಲ್ಪಡಬೇಕು ಮತ್ತು ಕೇಳಿಸಿಕೊಂಡಂತ ಆ ಸಂಗತಿಯು ದೇವರ ವಾಕ್ಯದ ಮೂಲಕ ನೀವೇ ಗಳಿಸಿದ ತಿಳುವಳಿಕೆಯಾಗಿ ಪರಿವರ್ತನೆ ಹೊಂದಿ ಕರ್ತನಿಂದ ಅದು ನಿಮಗೆ ನೇರವಾಗಿ ಸಿಗಬೇಕು.

ಮತ್ತಾಯನು 11:27-29'ರಲ್ಲಿ ಯೇಸುವು ನಮಗೆ ತಿಳಿಸುವಂತೆ, ತಂದೆಯಾದ ದೇವರನ್ನು ಯೇಸುವು ನಮಗೆ ಪ್ರಕಟಿಸಿದ ಹೊರತು, ನಾವು ತಂದೆಯನ್ನು ತಿಳಕೊಳ್ಳಲಾರೆವು. ಆ ಪ್ರಕಟನೆಯನ್ನು ಪಡೆಯಲು, ನಾವು ಯೇಸುವಿನ ಬಳಿಗೆ ಹೋಗಿ ನೊಗವನ್ನು (ಅಂದರೆ ನಮ್ಮ ಶಿಲುಬೆಯನ್ನು) ನಮ್ಮ ಮೇಲೆ ತೆಗೆದುಕೊಳ್ಳುವಂತೆ ಮತ್ತು ಆತನಿಂದ ’ವಿನಯಶೀಲತೆ’ಯನ್ನು (ಸಾತ್ವಿಕತ್ವ) ಮತ್ತು ’ದೀನ ಮನಸ್ಸನ್ನು’ ಕಲಿತುಕೊಳ್ಳುವಂತೆ ಯೇಸುವು ನಮ್ಮನ್ನು ಆಹ್ವಾನಿಸುತ್ತಾರೆ (ಮೇಲಿನ ಮೂರು ವಚನಗಳನ್ನು ಒಟ್ಟಾಗಿ ಓದಿಕೊಳ್ಳಿರಿ). ನಾವು ಕೇವಲ ಎರಡು ವಿಷಯಗಳನ್ನು ಮಾತ್ರ ತನ್ನಿಂದ ಕಲಿತುಕೊಳ್ಳಬೇಕೆಂದು ಯೇಸುವು ನಮಗೆ ಹೇಳಿದ್ದಾರೆ. ಆದ್ದರಿಂದ ನೀವು ವಿಶೇಷವಾಗಿ ಈ ಎರಡು ಕ್ಷೇತ್ರಗಳಲ್ಲಿ ಯೇಸುವಿನ ಮಹಿಮೆಯನ್ನು ಕಾಣಲಿಕ್ಕಾಗಿ ದೇವರ ವಾಕ್ಯವನ್ನು ಪರಿಶೀಲಿಸಬೇಕು.

(1) ಸಾತ್ವಿಕತೆ (ವಿನಯಶೀಲತೆ). ಮೊದಲನೆಯದಾಗಿ, ಯೇಸುವು ಯಾವಾಗಲೂ ಫರಿಸಾಯರ ವಿರುದ್ಧವಾಗಿ ಪಾಪಿಗಳ ಪಕ್ಷವನ್ನು ತೆಗೆದುಕೊಂಡರು, ಎಂಬ ಅಂಶದಲ್ಲಿ ಅವರ ಸಾತ್ವಿಕತೆಯು ಕಂಡುಬರುತ್ತದೆ. ನಾವು ಇದನ್ನು ವ್ಯಭಿಚಾರದಲ್ಲಿ ಸಿಕ್ಕಿಬಿದ್ದ ಮಹಿಳೆಯ ವಿಚಾರದಲ್ಲಿ ನೋಡುತ್ತೇವೆ (ಯೋಹಾ. 8:1-12). ಹಾಗೆಯೇ ದುರಾಚಾರಿಯಾದ ಮಹಿಳೆಯು ಸೀಮೋನನೆಂಬ ಫರಿಸಾಯನ ಮನೆಗೆ ಬಂದು ಯೇಸುವಿನ ಪಾದಗಳಿಗೆ ಸುಗಂಧ ತೈಲವನ್ನು ಅಭಿಷೇಕಿಸಿದ ಸಂದರ್ಭದಲ್ಲಿ ಕಾಣುತ್ತೇವೆ (ಲೂಕ. 7:36-50). ಎಲ್ಲಿಯವರೆಗೆ ಸೀಮೋನನಲ್ಲಿ ಆ ಪಾಪಿಯಾದ ಮಹಿಳೆಯ ಕುರಿತು ದೂಷಣೆಯ ಮನೋಭಾವ ಇರಲಿಲ್ಲವೋ, ಅಲ್ಲಿಯವರೆಗೆ ಯೇಸುವು ಏನೂ ಹೇಳಲಿಲ್ಲ. ಆದರೆ ಸೀಮೋನನಲ್ಲಿ ಆಕೆಯ ಬಗ್ಗೆ ತಿರಸ್ಕಾರ ಭಾವ ಇದ್ದುದನ್ನು ಯೇಸುವು ನೋಡಿದ ತಕ್ಷಣವೇ ಅವರು ಆತನನ್ನು ನಿಷ್ಕರುಣೆಗಾಗಿ ಮತ್ತು ದೇವರ ಮೇಲಿನ ಪ್ರೀತಿಯ ಅಭಾವಕ್ಕಾಗಿ ಖಂಡಿಸಿದರು (ಲೂಕ. 7:40-47). ಯೇಸುವು ಪಶ್ಚಾತ್ತಾಪಪಟ್ಟಿರುವ ಪಾಪಿಗಳನ್ನು ಟೀಕಿಸುವವರ ಬಗ್ಗೆ ಬಹಳ ಕಠಿಣವಾಗಿದ್ದರು. ಅವರು ಯಾವಾಗಲೂ ಸತ್ಯವೇದದ ಜ್ಞಾನಕ್ಕಾಗಿ ಹೆಮ್ಮೆ ಪಡುವ ಫರಿಸಾಯರ ವಿರುದ್ಧವಾಗಿ ಪಶ್ಚಾತ್ತಾಪಪಡುವ ಪಾಪಿಗಳ ಪಕ್ಷವನ್ನು ತೆಗೆದುಕೊಳ್ಳುತ್ತಾರೆ. ಇದು ನಮಗೆ ಬಹಳ ಸಮಾಧಾನವನ್ನು ಕೊಡುತ್ತದೆ. ನಾವು ಅವರಿಂದ ಈ ವಿನಯಶೀಲತೆಯನ್ನು ಕಲಿತುಕೊಳ್ಳಬೇಕು.

ಯೇಸುವಿನ ಸಾತ್ವಿಕತೆಯ ಎರಡನೆಯ ಲಕ್ಷಣ, ತನಗೆ ಹಾನಿ ಮಾಡಿದವರನ್ನು ಕ್ಷಮಿಸುವುದರಲ್ಲಿ ಕಂಡುಬರುತ್ತದೆ. ಜನರು ಅವರನ್ನು ದೆವ್ವಗಳ ಒಡೆಯನೆಂದು ಕರೆದ ಸಂದರ್ಭದಲ್ಲಿ, ಯೇಸುವು ಒಡನೆಯೇ ಅವರು ಕ್ಷಮಿಸಲ್ಪಟ್ಟಿದ್ದಾರೆಂದು ಹೇಳಿದರು (ಮತ್ತಾ. 12:24,32). ಜನರು ಅವರನ್ನು ಕೆಟ್ಟದ್ದಾಗಿ ನಡೆಸಿಕೊಂಡಾಗ, ಯೇಸುವು ಪ್ರತಿಯಾಗಿ ಅವರನ್ನು ಬೆದರಿಸಲಿಲ್ಲ. ಅವರು ಬಾಯಿ ತೆರೆಯದೆ ಸುಮ್ಮನಿದ್ದರು (1 ಪೇತ್ರ. 2:23). ನಾವು ಕಲಿಯಬೇಕಾದ ಯೇಸುವಿನ ವಿನಯಶೀಲತೆಯ ಎರಡನೆಯ ಅಂಶ ಇದಾಗಿದೆ. ಒಂದು ವೇಳೆ ಒಂದು ಹಲ್ಲಿ ಅಥವಾ ಒಂದು ಜಿರಳೆಯು ನಮ್ಮ ಮೈಮೇಲೆ ಬಿದ್ದಾಗ ನಾವು ತಕ್ಷಣವೇ ಅದನ್ನು ಕುಲುಕಿ ಒಗೆಯುವ ಹಾಗೆ, ನಾವು ಕಹಿತನ, ಸೇಡು, ದ್ವೇಷಭಾವ, ಅಥವಾ ಕ್ಷಮಿಸದ ಆತ್ಮ, ಇಂತಹ ಯೋಚನೆಗಳ ಸುಳಿವು ನಮ್ಮಲ್ಲಿ ಸಿಕ್ಕಿದೊಡನೆ ಅವನ್ನು ಕಿತ್ತು ಒಗೆಯಬೇಕು.

(2) ದೀನತೆ. ಮತ್ತಾಯನ ಸುವಾರ್ತೆಯ ಮೊದಲಿನ 6 ವಚನಗಳಲ್ಲಿ, ಯೇಸುವು ತಾನು ಹುಟ್ಟಿ ಬರುವುದಕ್ಕಾಗಿ ಆರಿಸಿಕೊಂಡ ಕುಟುಂಬಗಳ ವಂಶವೃಕ್ಷವನ್ನು ನೋಡುವಾಗ, ನಾವು ಅವರ ದೀನತೆಯನ್ನು ಕಾಣುವೆವು. ಯೆಹೂದ್ಯರ ವಂಶಾವಳಿಗಳಲ್ಲಿ ಸಾಧಾರಣವಾಗಿ ಹೆಣ್ಣುಮಕ್ಕಳ ಹೆಸರುಗಳು ನಮೂದಿಸಲ್ಪಡುವುದಿಲ್ಲ. ಆದರೆ ಇಲ್ಲಿ ನಾಲ್ಕು ಸ್ತ್ರೀಯರ ಹೆಸರುಗಳನ್ನು ಉಲ್ಲೇಖಿಸಲಾಗಿದೆ - ತಾಮಾರಳು, ರಾಹಾಬಳು, ರೂತಳು ಮತ್ತು ಬತ್ಷೆಬೆಯು. ಇವರಲ್ಲಿ ’ತಾಮಾರಳು’ ತನ್ನ ಮಾವನಾದ ಯೆಹೂದನೊಂದಿಗೆ ವ್ಯಭಿಚಾರ ಮಾಡಿ ಒಂದು ಮಗುವನ್ನು ಹೆತ್ತಳು (ಆದಿ. 38). ’ರಾಹಾಬಳು’ ಯೆರಿಕೋ ಪಟ್ಟಣದಲ್ಲಿ ಎಲ್ಲರಿಗೆ ಪರಿಚಿತಳಾಗಿದ್ದ ಸೂಳೆಯಾಗಿದ್ದಳು (ಯೆಹೋ. 2). ’ರೂತಳು’ ಮೋವಾಬ್ ದೇಶಕ್ಕೆ ಸೇರಿದವಳಾಗಿದ್ದಳು - ಲೋಟನ ಮಗಳು ತನ್ನೊಂದಿಗೆ ಲೋಟನು ವ್ಯಭಿಚಾರ ಮಾಡುವಂತೆ ಕುತಂತ್ರಮಾಡಿ ಹುಟ್ಟಿಸಿದ ಮಗು ’ಮೋವಾಬನು’ (ಆದಿ. 19) - ಮೊವಾಬ್ ಜನಾಂಗವು ಈತನ ಅನೀತಿಯ ಸಂತಾನವಾಗಿತ್ತು. ’ಬತ್ಷೆಬೆಯು’ ದಾವೀದನೊಂದಿಗೆ ವ್ಯಭಿಚಾರ ಮಾಡಿದವಳಾಗಿದ್ದಳು. ಹೊಸ ಒಡಂಬಡಿಕೆಯ ಮೊದಲನೆಯ ಅಧ್ಯಾಯದಲ್ಲೇ ಈ ನಾಲ್ಕು ಮಹಿಳೆಯರ ಹೆಸರುಗಳನ್ನು (ಇವರೆಲ್ಲರು ಒಂದಲ್ಲ ಒಂದು ರೀತಿಯಲ್ಲಿ ಲೈಂಗಿಕ ಪಾಪಕ್ಕೆ ಸಂಬಂಧಪಟ್ಟಿದ್ದಾರೆ) ಏಕೆ ಪ್ರಸ್ತಾಪಿಸಲಾಗಿದೆ? ಯೇಸುವು ಈ ಲೋಕಕ್ಕೆ ಬಂದದ್ದು ಪಾಪಿಗಳ ಜೊತೆಗೆ ಗುರುತಿಸಲ್ಪಡುವುದಕ್ಕೆ ಮತ್ತು ಅವರನ್ನು ರಕ್ಷಿಸಲಿಕ್ಕೆ, ಎಂದು ತೋರಿಸುವ ಉದ್ದೇಶದಿಂದ.

ಯೇಸುವಿನ ದೀನ ಮನಸ್ಸು ಅವರು ಲೋಕಕ್ಕೆ ಬಂದಾಗ ಆರಿಸಿಕೊಂಡ ಸಾಧಾರಣ ವೃತ್ತಿಯಲ್ಲಿ (ಬಡಗಿಯ ವೃತ್ತಿ) ಮತ್ತು ಜೀವಿತದ ಉದ್ದಕ್ಕೂ ಅವರಲ್ಲಿದ್ದ ನೌಕರ-ಮನೋಭಾವದಲ್ಲಿ ಕಂಡುಬರುತ್ತದೆ. ಒಬ್ಬ ಆಳಿನ ಪ್ರವೃತ್ತಿ ಯಾವುದೆಂದರೆ ಯಾವಾಗಲೂ ಎಚ್ಚರವಾಗಿದ್ದು, ಇತರರ ಅವಶ್ಯಕತೆಗಳನ್ನು ಗಮನಿಸುವುದು ಮತ್ತು ಅವುಗಳು ಗಮನಕ್ಕೆ ಬಂದೊಡನೆಯೇ ಅವುಗಳನ್ನು ಪೂರೈಸುವದಕ್ಕೆ ತೊಡಗುವುದು (ಉದಾಹರಣೆಗೆ, ಯೇಸುವು ಶಿಷ್ಯರ ಕಾಲುಗಳನ್ನು ತೊಳೆದದ್ದು).

"ದೀನತೆ"ಯ ಕುರಿತಾಗಿ ’ಆಂಡ್ರೂ ಮರ್ರೇ’ಯವರು ಬರೆದಿರುವ ಪುಸ್ತಕದಲ್ಲಿ ದೀನತೆಯನ್ನು ಹೀಗೆ ತೋರಿಸಿಕೊಡಲಾಗಿದೆ: "ತನ್ನನ್ನು ಶೂನ್ಯನೆಂದು ಪರಿಗಣಿಸಲು ಸಿದ್ಧನಾಗಿದ್ದು, ಆ ಮೂಲಕ ಎಲ್ಲದರಲ್ಲೂ ದೇವರಿಗೆ ಪ್ರಾಮುಖ್ಯತೆಯನ್ನು ಕೊಡುವುದು". ಯೇಸುವು ಇದರಲ್ಲೇ ಸಂತೋಷಿಸಿದರು. ನಾವು ಇದನ್ನು ಅವರಿಂದ ಕಲಿತುಕೊಳ್ಳಬೇಕು.

ಆದುದರಿಂದ ಯಾವಾಗಲೂ ಯೇಸುವಿನ ನೊಗವನ್ನು ನಿನ್ನ ಕತ್ತಿನ ಮೇಲೆ ಇರಿಸಿಕೊಂಡು, ಅವರಿಂದ ಸಾತ್ವಿಕತೆ ಮತ್ತು ದೀನ ಮನಸ್ಸನ್ನು ಕಲಿತುಕೋ. ಹೀಗೆ ಮಾಡಿದಾಗ ಅವರು ನಿನಗೆ ತಂದೆಯಾದ ದೇವರನ್ನು ಹೆಚ್ಚು ಹೆಚ್ಚಾಗಿ ಪ್ರಕಟಿಸುತ್ತಾರೆ.