WFTW Body: 

ದೀನತೆ

ನಾವು ಎಫೆಸ 4:1-2ರಲ್ಲಿ ಹೀಗೆ ಓದುತ್ತೇವೆ, "ನೀವು ದೇವರಿಂದ ಕರೆಯಲ್ಪಟ್ಟವರಾದ ಕಾರಣ ಯೋಗ್ಯರಾಗಿ ನಡೆದುಕೊಳ್ಳಬೇಕೆಂದು, ಕರ್ತನ ಸೇವೆಯಲ್ಲಿ ಸೆರೆಯವನಾದ ನಾನು ನಿಮ್ಮನ್ನು ಪ್ರಬೋಧಿಸುತ್ತೇನೆ. ನೀವು ಸಂಪೂರ್ಣ ದೀನತೆ ಮತ್ತು ಸಾತ್ವಿಕತೆಯಿಂದ ನಡೆದು, ಪ್ರೀತಿ-ಸಹನೆಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ." ಅನೇಕ ಬಾರಿ ನಾನು ಹೇಳಿರುವಂತೆ, ಕ್ರಿಸ್ತೀಯ ಜೀವನದ ಮೂರು ರಹಸ್ಯಗಳು ಯಾವುವೆಂದರೆ: ದೀನತೆ, ದೀನತೆ ಮತ್ತು ದೀನತೆ. ಪ್ರತಿಯೊಂದು ವಿಷಯವು ಇಲ್ಲಿಂದಲೇ ಪ್ರಾರಂಭವಾಗುತ್ತದೆ. ಯೇಸುವು ತನ್ನನ್ನು ತಗ್ಗಿಸಿಕೊಂಡು ಹೇಳಿದ ಮಾತು, "ನಾನು ಸಾತ್ವಿಕನೂ, ದೀನ ಮನಸ್ಸು ಉಳ್ಳವನೂ ಆಗಿರುವುದರಿಂದ, ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ" (ಮತ್ತಾ. 11:29). ಅವರು ತನ್ನಿಂದ ಕಲಿತುಕೊಳ್ಳಿರೆಂದು ನಮಗೆ ತೋರಿಸಿದ್ದು ಕೇವಲ ಎರಡು ವಿಷಯಗಳನ್ನು - ದೀನತೆ ಮತ್ತು ಸಾತ್ವಿಕತೆ (ಸೌಮ್ಯಭಾವ). ಏಕೆ? ಏಕೆಂದರೆ ಆದಾಮನ ಮಕ್ಕಳಾದ ನಾವೆಲ್ಲರು, ಗರ್ವಿಗಳು ಮತ್ತು ಕಠಿಣ ಹೃದಯಿಗಳು ಆಗಿದ್ದೇವೆ. ನೀವು ಭೂಲೋಕದಲ್ಲಿ ಒಂದು ದೈವಿಕ ಜೀವಿತವನ್ನು ತೋರಿಸಿಕೊಡಲು ಇಚ್ಛಿಸಿದರೆ, ಅದನ್ನು ಮೊದಲನೆಯದಾಗಿ ಸುವಾರ್ತಾ ಪ್ರಸಾರ, ಬೋಧನೆ, ಸತ್ಯವೇದದ ಉಪದೇಶ, ಅಥವಾ ಸಮಾಜ ಸೇವೆಯ ಮೂಲಕ ತೋರಿಸಲು ಸಾಧ್ಯವಿಲ್ಲ. ಎಲ್ಲಕ್ಕಿಂತ ಮೊದಲು ಅದು ದೀನತೆ ಮತ್ತು ಸೌಮ್ಯ ಮನೋಭಾವದ ಮೂಲಕ ತೋರಿಸಲ್ಪಡಬೇಕು. ದೀನತೆ, ಸೌಮ್ಯ ಮನೋಭಾವ ಮತ್ತು ತಾಳ್ಮೆಯನ್ನು ನೋಡುವುದಕ್ಕಾಗಿ ದೇವರು ಕಾದಿದ್ದಾರೆ. ಎಫೆಸ 4:2 (Living Bible)ರಲ್ಲಿ ಹೀಗೆ ಹೇಳಲಾಗಿದೆ, "ನಿಮ್ಮ ಪ್ರೀತಿಯ ಮೂಲಕ ಒಬ್ಬರು ಇನ್ನೊಬ್ಬರ ದೋಷಗಳನ್ನು ನಿಭಾಯಿಸಿರಿ." ಯಾವುದೇ ಕ್ರೈಸ್ತಸಭೆಯಲ್ಲಿ ಪರಿಪೂರ್ಣರು ಯಾರೂ ಇಲ್ಲ. ಪ್ರತಿಯೊಬ್ಬರು ತಪ್ಪು ಮಾಡುತ್ತಾರೆ. ಹಾಗಾಗಿ ನಾವು ಸಭೆಯಲ್ಲಿ ಒಬ್ಬರು ಇನ್ನೊಬ್ಬರ ತಪ್ಪುಗಳನ್ನು ಸಹಿಸಿಕೊಳ್ಳ ಬೇಕಾಗುತ್ತದೆ. ನಾವು ಒಬ್ಬರನ್ನೊಬ್ಬರು ಪ್ರೀತಿಸುವುದರಿಂದ, ಒಬ್ಬರು ಇನ್ನೊಬ್ಬರ ತಪ್ಪುಗಳನ್ನು ನಿಭಾಯಿಸುತ್ತೇವೆ. "ನೀನು ತಪ್ಪು ಮಾಡಿದರೆ ನಾನು ಅದನ್ನು ಮುಚ್ಚುತ್ತೇನೆ. ನೀನು ಯಾವುದೋ ಕೆಲಸವನ್ನು ಪೂರ್ತಿಗೊಳಿಸದಿದ್ದರೆ, ನಾನು ಅದನ್ನು ಪೂರ್ತಿಗೊಳಿಸುತ್ತೇನೆ." ಕ್ರಿಸ್ತನ ದೇಹವು ಈ ರೀತಿಯಾಗಿ ಕೆಲಸ ಮಾಡಬೇಕಿದೆ.

ಐಕ್ಯತೆ

ನಾವು ಎಫೆಸ 4:3ರಲ್ಲಿ ಹೀಗೆ ಓದುತ್ತೇವೆ, "ನೀವು ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು, ಪವಿತ್ರಾತ್ಮನಿಂದ ಉಂಟಾಗುವ ಐಕ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಆಸಕ್ತಿಯಿಂದ ಶ್ರಮಿಸಿರಿ." ಅಪೊಸ್ತಲ ಪೌಲನು ಬರೆದ ಹಲವು ಪತ್ರಿಕೆಗಳಲ್ಲಿ ಎದ್ದು ಕಾಣಿಸುವ ಒಂದು ಶ್ರೇಷ್ಠ ವಿಷಯವಸ್ತು "ಐಕ್ಯತೆ"ಯಾಗಿದೆ. ಮತ್ತು ಕರ್ತರಿಗೆ ಅವರ ಸಭೆಗಾಗಿಯೂ ಸಹ ಇದೇ ಭಾರವಿದೆ. ಒಂದು ಮಾನವ ಶರೀರವು ಸತ್ತಾಗ, ಅದರ ಅಂಗಗಳು ಒಂದೊಂದಾಗಿ ಹಾಳಾಗುತ್ತವೆ. ನಮ್ಮ ದೇಹವು ಧೂಳಿನಿಂದ ಮಾಡಲ್ಪಟ್ಟಿದೆ, ಮತ್ತು ಆ ದೇಹದಲ್ಲಿ ಪ್ರಾಣ ಇರುವಾಗ, ಧೂಳಿನ ಕಣಗಳು ಜೊತೆಯಾಗಿ ಇರುತ್ತವೆ. ಪ್ರಾಣವು ಬಿಟ್ಟುಹೋದ ಒಡನೆಯೇ, ದೇಹವು ಛಿದ್ರವಾಗಿ ಹಾಳಾಗುತ್ತದೆ; ಮತ್ತು ಸ್ವಲ್ಪ ಸಮಯದ ನಂತರ, ಇಡೀ ದೇಹವು ಧೂಳಾಗುವುದನ್ನು ನಾವು ಕಾಣುತ್ತೇವೆ. ವಿಶ್ವಾಸಿಗಳ ಒಂದು ಕೂಟದಲ್ಲಿಯೂ ಹೀಗೆಯೇ ಆಗುತ್ತದೆ. ಒಂದು ಸಭೆಯಲ್ಲಿ ವಿಶ್ವಾಸಿಗಳು ಅನ್ಯೋನ್ಯತೆಯನ್ನು ಕಳೆದುಕೊಂಡಾಗ, ಅಲ್ಲಿ ಮರಣವು ಆಗಲೇ ಪ್ರವೇಶಿಸಿದೆಯೆಂದು ನಮಗೆ ಖಚಿತವಾಗುತ್ತದೆ. ಗಂಡ ಮತ್ತು ಹೆಂಡತಿಯು ಒಮ್ಮತವನ್ನು ಕಳೆದುಕೊಂಡಾಗ, ಅವರು ವಿವಾಹ ವಿಚ್ಛೇದನ ಮಾಡಿಕೊಳ್ಳದೇ ಇದ್ದರೂ, ಅಲ್ಲಿ ಮರಣವು ಆಗಲೇ ಬಂದು ಸೇರಿದೆಯೆಂದು ನಿಮಗೆ ತಿಳಿಯುತ್ತದೆ. ಅವರ ವಿವಾಹದ ಮೊದಲನೇ ದಿನವೇ, ಮನಸ್ತಾಪಗಳು, ಉದ್ವೇಗಗಳು, ಜಗಳಗಳು, ಇತ್ಯಾದಿಗಳ ಮೂಲಕ ವಿಭಜನೆಯು ಕಾಣಿಸಿಕೊಳ್ಳಬಹುದು. ಒಂದು ಕ್ರೈಸ್ತಸಭೆಯಲ್ಲೂ ಇದು ನಡೆಯಬಹುದು. ಸಾಮಾನ್ಯವಾಗಿ ಒಂದು ಸಭೆಯು ಆರಂಭವಾಗುವದು ಕೆಲವು ಶ್ರದ್ಧಾವಂತ ಸಹೋದರರು ಹೆಚ್ಚಿನ ಉತ್ಸುಕತೆಯಿಂದ ಕರ್ತನಿಗಾಗಿ ಒಂದು ಪರಿಶುದ್ಧ ಕಾರ್ಯವನ್ನು ಕಟ್ಟಿ ಬೆಳೆಸಬೇಕೆಂದು ಒಟ್ಟಾಗಿ ಸೇರಿಕೊಂಡಾಗ. ಬಹಳ ಶೀಘ್ರವೇ ಅಲ್ಲಿ ಒಡಕು ಕಾಣಿಸುತ್ತದೆ ಮತ್ತು ಮರಣವು ಪ್ರವೇಶಿಸುತ್ತದೆ. ಒಂದು ವೈವಾಹಿಕ ಜೀವನ ಮತ್ತು ಒಂದು ಕ್ರೈಸ್ತ ಸಭೆ, ಎರಡರಲ್ಲೂ ಅನ್ಯೋನ್ಯತೆಯ ಆತ್ಮವನ್ನು ಉಳಿಸಿಕೊಳ್ಳಲಿಕ್ಕಾಗಿ ನಾವು ಎಡೆಬಿಡದೆ ಹೋರಾಟ ಮಾಡಬೇಕು.

ವೈಯಕ್ತಿಕವಾಗಿ ಪವಿತ್ರರಾಗಿರುವ ಜನರನ್ನು ದೇವರು ಬೆಳೆಸುತ್ತಿಲ್ಲ. ಅವರು ಒಂದು ದೇಹವನ್ನು ಕಟ್ಟಿ ಬೆಳೆಸುತ್ತಿದ್ದಾರೆ. ಪೌಲನು ಎಫೆಸ 4:1-3ರಲ್ಲಿ ಇದನ್ನೇ ಹೇಳುತ್ತಾನೆ. "ಪವಿತ್ರಾತ್ಮನಿಂದ ಉಂಟಾಗುವ ಐಕ್ಯತೆಯನ್ನು ಉಳಿಸಿಕೊಳ್ಳಬೇಕು, ಏಕೆಂದರೆ ಎಲ್ಲರೂ ಒಂದೇ ದೇಹಕ್ಕೆ ಸೇರಿದವರು," ಎಂದು ಪೌಲನು ನಮ್ಮನ್ನು ಒತ್ತಾಯ ಪಡಿಸುತ್ತಾನೆ. ಒಂದು ಸ್ಥಳೀಯ ಕೂಟದಲ್ಲಿ ಐಕ್ಯತೆ ಇದೆಯೆಂದು ನಾವು ಯಾವಾಗ ಹೇಳಬಹುದು? ಅಲ್ಲಿ "ಸಮಾಧಾನವೆಂಬ ಬಂಧನವು" ಇರುವಾಗ (ಎಫೆ. 4:3). "ಪವಿತ್ರಾತ್ಮನಿಂದ ಮನಶ್ಯಾಂತಿಯು ಉಂಟಾಗುತ್ತದೆ" (ರೋಮಾ. 8:6).