ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ ಶಿಷ್ಯಂದಿರಿಗೆ
WFTW Body: 

ಯೇಸುವಿನಿಂದ ಬರುವಂತ ತಿಳುವಳಿಕೆಯ ಪ್ರಕಾರ, ದೇವರ ಎಲ್ಲಾ ಆಜ್ಞೆಗಳಿಗೆ ಸಮಾನ ರೀತಿಯ ಪ್ರಾಮುಖ್ಯತೆ ಇರುವುದಿಲ್ಲ. ಆದರೆ, ಪ್ರತಿಯೊಂದೂ ಪ್ರಮುಖವಾದುದು. ಕೆಲವು ವಿಷಯಗಳು ಬೇರೆಯವುಗಳಿಗಿಂತ ಹೆಚ್ಚು ಪ್ರಾಮುಖ್ಯವಾಗಿರುತ್ತವೆ. ಇಸ್ರಾಯೇಲ್ಯರು ಕೆಲವು ಆಹಾರ ಪದಾರ್ಥಗಳನ್ನು ತಿನ್ನಬಾರದು, ಎಂಬ ಯಾಜಕಕಾಂಡ 11ರ ಆಜ್ಞೆಗಳು, "ನರಹತ್ಯೆ ಮಾಡಬಾರದು" ಮತ್ತು "ವ್ಯಭಿಚಾರ ಮಾಡಬಾರದು" ಎಂಬ ಆಜ್ಞೆಗಳಷ್ಟು ಪ್ರಾಮುಖ್ಯವಾಗಿರಲಿಲ್ಲ. ಆದರೆ ಇವುಗಳೂ ದೇವರ ಆಜ್ಞೆಗಳೇ ಆಗಿದ್ದವು, ಮತ್ತು ದಾನಿಯೇಲನು ಹಳೆಯ ಒಡಂಬಡಿಕೆಯ ಆ ಕನಿಷ್ಠ ಆಜ್ಞೆಗಳನ್ನು ಕೈಗೊಳ್ಳುವುದಾಗಿ ನಿಶ್ಚಯಿಸಿದ್ದಕ್ಕಾಗಿ ಆತನನ್ನು ದೇವರು ಅಂಗೀಕರಿಸಿದರು.

ದಾನಿ.1:8 ರಲ್ಲಿ ಹೀಗೆ ಬರೆಯಲ್ಪಟ್ಟಿದೆ, "ದಾನಿಯೇಲನು ತಾನು ರಾಜನ ಭೋಜನ ಪದಾರ್ಥಗಳನ್ನು ತಿಂದು ತನ್ನನ್ನು ಅಶುದ್ಧ ಮಾಡಿಕೊಳ್ಳಬಾರದೆಂದು ತನ್ನ ಮನಸ್ಸಿನಲ್ಲಿ ನಿಶ್ಚಯಿಸಿದನು." ಬಹುಶಃ ಆ ಮೇಜಿನ ಮೇಲೆ ಹಂದಿಯ ಮಾಂಸವಿದ್ದಿರಬಹುದು ಅಥವಾ ಯಾಜಕಕಾಂಡ 11ರಲ್ಲಿ ದೇವರು ನಿಷೇಧಿಸಿದ್ದ ಯಾವುದೋ ಪಕ್ಷಿಯ ಮಾಂಸ ಇದ್ದಿರಬಹುದು. ದೇವರು ಇವನ್ನು ಏಕೆ ನಿಷೇಧಿಸಿದ್ದಾರೆ ಎಂಬುದಕ್ಕೆ ದಾನಿಯೇಲನು ಸಂಪೂರ್ಣ ವಿವರಣೆಯನ್ನು ನೀಡಲು ಸಾಧ್ಯವಾಗದೇ ಇದ್ದಿರಬಹುದು. ಆದರೆ, "ಅದು, ಮೋಶೆಯ ಧರ್ಮಶಾಸ್ತ್ರದಲ್ಲಿದ್ದು, ದಶಾಜ್ಞೆಗಳಿಗೆ ಸೇರದೇ ಇದ್ದರೂ ನಾನು ಅದನ್ನು ಪಾಲಿಸುತ್ತೇನೆ," ಎಂಬ ನಿರ್ಧಾರವನ್ನು ಅವನು ಮಾಡಿದನು. ದಾನಿಯೇಲನು ತನ್ನನ್ನು ಅಶುದ್ಧ ಮಾಡಿಕೊಳ್ಳದಿದ್ದ ಕಾರಣ, ದೇವರು ಅವನನ್ನು ಗೌರವಿಸಿದರು ಮತ್ತು ಬಾಬೆಲಿನಲ್ಲಿ ತನ್ನ ಪ್ರಬಲ ಸಾಕ್ಷಿಯನ್ನಾಗಿ ಮಾಡಿದರು, ಎಂದು ಬರೆಯಲಾಗಿದೆ. ದೇವರು ತನ್ನ ಎಲ್ಲಾ ಆಜ್ಞೆಗಳನ್ನು ಪಾಲಿಸಲು ಸಿದ್ಧನಾಗಿದ್ದ ಒಬ್ಬ ವ್ಯಕ್ತಿಯನ್ನು ದಾನಿಯೇಲನಲ್ಲಿ ಕಂಡರು.

ಇದು ಅನಾದಿ ಕಾಲದಿಂದಲೂ ಇದೇ ರೀತಿಯಾಗಿ ನಡೆಯುತ್ತಾ ಬಂದಿದೆ. ದೇವರು ಯಾವಾಗಲೂ ಹುಡುಕುತ್ತಿರುವುದು ತನ್ನ ಆಜ್ಞೆಗಳನ್ನು ಯಾರು ಕೈಗೊಂಡು ನಡೆಯುತ್ತಾರೋ, ಯಾರು ಯೇಸುವು ಬೋಧಿಸಿದ ಪ್ರತಿಯೊಂದನ್ನು ಪಾಲಿಸುತ್ತಾರೋ ಅವರನ್ನು, ಮತ್ತು ಕೇವಲ ತಮಗೆ ಇಷ್ಟವಾದ ಆಜ್ಞೆಗಳನ್ನು ಆರಿಸಿಕೊಳ್ಳುವವರನ್ನಲ್ಲ. ಮತ್ತಾ.5:19 ರಲ್ಲಿ ಯೇಸುವು ಹೀಗೆ ಹೇಳಿದರು, "ಈ ಸಣ್ಣ ಸಣ್ಣ ಆಜ್ಞೆಗಳಲ್ಲಿ ಒಂದನ್ನಾದರೂ ಮೀರಿ ಜನರಿಗೂ ಹಾಗೆ ಮೀರುವುದಕ್ಕೆ ಬೋಧಿಸುವವನು ಪರಲೋಕ ರಾಜ್ಯದಲ್ಲಿ ಬಹಳ ಚಿಕ್ಕವನೆನಿಸಿಕೊಳ್ಳುವನು." ಆತನು ನರಕಕ್ಕೆ ಹೋಗುತ್ತಾನೆಂದು ಯೇಸುವು ಹೇಳಲಿಲ್ಲ, ಆದರೆ ಪರಲೋಕದ ಮೌಲ್ಯದಲ್ಲಿ ಮತ್ತು ಅಲ್ಲಿನ ಗೌರವಾನ್ವಿತರ ಪಟ್ಟಿಯಲ್ಲಿ ಆತನು ಅತಿ ಚಿಕ್ಕವನಾಗಿ ಗುರುತಿಸಲ್ಪಡುವನು, ಎಂಬುದಾಗಿ ಹೇಳಿದರು. ಭೂಲೋಕದಲ್ಲಿ ಚಿಕ್ಕವನಾಗಿ ಇರುವುದು ಯಾವ ಮಹತ್ವವೂ ಇಲ್ಲದ ವಿಷಯವಾಗಿದೆ. ಆ ವಿಚಾರದ ಬಗ್ಗೆ ಚಿಂತಿಸಬೇಕಿಲ್ಲ. ಆದರೆ ಪರಲೋಕದ ಮೌಲ್ಯದಲ್ಲಿ ಅತಿ ಚಿಕ್ಕವನಾಗಿ ಗುರುತಿಸಲ್ಪಡುವುದರ ಅರ್ಥ, ಸರ್ವಶಕ್ತನಾದ ದೇವರು ನಿಮ್ಮನ್ನು ಶ್ರೇಷ್ಠನೆಂದು ಯೋಚಿಸುವುದಿಲ್ಲ ಎಂದಾಗಿದೆ. ನಾನು ಇಂಥವರ ಸಾಲಿನಲ್ಲಿ ಸೇರಿಕೊಳ್ಳಲು ಬಯಸುವುದಿಲ್ಲ! ಈ ಲೋಕವು ನನ್ನ ಬಗ್ಗೆ ಒಳ್ಳೆಯದಾಗಿ ಆಲೋಚಿಸದಿದ್ದರೆ ನನಗೆ ಬೇಸರವಿಲ್ಲ, ಆದರೆ ದೇವರು ಖಂಡಿತವಾಗಿ ನನ್ನ ಬಗ್ಗೆ ಒಳ್ಳೆಯದಾಗಿ ಆಲೋಚಿಸಬೇಕೆಂದು ನಾನು ಬಯಸುತ್ತೇನೆ.

"ಹೊಸ ಒಡಂಬಡಿಕೆಯ ಅತಿ ಸಣ್ಣ ಆಜ್ಞೆಗಳ ಬಗ್ಗೆ ನಿಮ್ಮ ಮನೋಭಾವಕ್ಕೆ ಅನುಗುಣವಾಗಿ, ನೀವು ಪರಲೋಕ ರಾಜ್ಯದಲ್ಲಿ ದೇವರಿಗೆ ಎಷ್ಟು ಸಮೀಪ (ದೇವರೊಂದಿಗೆ ನಿಕಟವಾಗಿ) ಇರುತ್ತೀರಿ ಎಂಬುದು ನಿಶ್ಚಯಿಸಲ್ಪಡುತ್ತದೆ"

ಕರ್ತನ ದೂತನಾದ ಗಬ್ರಿಯೇಲನು ಸ್ನಾನಿಕನಾದ ಯೋಹಾನನ ತಂದೆ ಜಕರೀಯನಿಗೆ, "ನಿನ್ನ ಮಗನಾಗಿ ಜನಿಸುವಾತನು ಕರ್ತನ ದೃಷ್ಟಿಯಲ್ಲಿ ಮಹಾಪುರುಷನಾಗಿರುವನು," ಎಂದು ಹೇಳಿದನು. ಕರ್ತನಾದ ದೇವರ ದೃಷ್ಟಿಯಲ್ಲಿ ದೊಡ್ಡವನಾಗಿರುವಂಥದ್ದು ಖಂಡಿತವಾಗಿ ನಾವು ಬಹಳ ತವಕದಿಂದ ಆಶಿಸಬೇಕಾದ ಒಂದು ಸಂಗತಿಯಾಗಿದೆ. ನಾನು ಕರ್ತನ ದೃಷ್ಟಿಯಲ್ಲಿ ಅತ್ಯಲ್ಪನು, ನನ್ನ ಬಗ್ಗೆ ಕರ್ತನು ಉತ್ತಮ ಆಲೋಚನೆ ಹೊಂದಿಲ್ಲ, ಎಂದೆನ್ನುವ ಸ್ಥಿತಿಯನ್ನು ನಾನು ಬಯಸುವುದಿಲ್ಲ. ಆದಾಗ್ಯೂ ಮೇಲೆ ಹೇಳಿರುವಂತೆ, ಕೆಲವು ಜನರು ಪರಲೋಕ ರಾಜ್ಯದಲ್ಲಿ ಬಹಳ ಚಿಕ್ಕವರು ಎನಿಸಿಕೊಳ್ಳಲಿರುವುದು, ದೇವರ ದೊಡ್ಡ ಆಜ್ಞೆಗಳನ್ನು ಕೈಗೊಳ್ಳದೇ ಇರುವುದಕ್ಕಾಗಿ ಅಲ್ಲ, ಆದರೆ ಸಣ್ಣ ಆಜ್ಞೆಗಳನ್ನು ನಿರ್ಲಕ್ಷ್ಯ ಮಾಡಿದ್ದಕ್ಕಾಗಿ.

ನಾನು ಇಂದಿಗೂ ಹಲವು ಕ್ರೈಸ್ತರಲ್ಲಿ ಈ ಅಸಡ್ಡೆಯ ಮನೋಭಾವವನ್ನು ಕಾಣುತ್ತಿದ್ದೇನೆ. ಅವರು ತಮ್ಮನ್ನು ಹೊಸ ಒಡಂಬಡಿಕೆಯ ಕ್ರೈಸ್ತರೆಂದು ಹೇಳಿಕೊಳ್ಳುತ್ತಾರೆ, ಆದರೆ ಹೊಸ ಒಡಂಬಡಿಕೆಯ ಕೆಲವು ಚಿಕ್ಕಚಿಕ್ಕ ಆಜ್ಞೆಗಳನ್ನು ಅವರು ನಿರ್ಲಕ್ಷಿಸುತ್ತಾರೆ ಮತ್ತು "ಅವು ಮುಖ್ಯವಲ್ಲ, ಅವುಗಳನ್ನು ಪಾಲಿಸುವ ಅವಶ್ಯಕತೆಯಿಲ್ಲ," ಎಂದು ಹೇಳುತ್ತಾರೆ. ನಾನು ಅವರ ಕ್ರಿಸ್ತನ ಮೇಲಿನ ನಂಬಿಕೆಯನ್ನು ಪ್ರಶ್ನಿಸುತ್ತಿಲ್ಲ. ಅವರು ಪರಲೋಕಕ್ಕೆ ಹೋಗುತ್ತಾರೋ ಅಥವಾ ನರಕಕ್ಕೆ ಹೋಗುತ್ತಾರೋ ಎಂದು ನಾನು ನ್ಯಾಯತೀರ್ಪು ಮಾಡುವುದಿಲ್ಲ. ಅದು ನನ್ನ ಕೆಲಸವಲ್ಲ. ಅದನ್ನು ದೇವರು ನಿರ್ಣಯಿಸುತ್ತಾರೆ, ಆದರೆ ನಾನು ಖಂಡಿತವಾಗಿ ಯೇಸುವಿನ ಒಂದು ಮಾತನ್ನು ನಂಬುತ್ತೇನೆ, ಯೇಸುವು ಬೋಧಿಸಿದ ಸಣ್ಣ ಸಣ್ಣ ಆಜ್ಞೆಗಳಲ್ಲಿ ಒಂದನ್ನು (ಮತ್ತು ಮುಂದೆ ಯೇಸುವು ಸತ್ಯವೇದದ ಪತ್ರಿಕೆಗಳಲ್ಲಿ ತನ್ನ ಪವಿತ್ರಾತ್ಮನ ಮೂಲಕ ತನ್ನ ಅಪೊಸ್ತಲರ ಮೂಲಕ ಬರೆಯಿಸಿ ಬೋಧಿಸಿದ ಎಲ್ಲಾ ಅಂಶಗಳನ್ನೂ ಸಹ) ಯಾರಾದರೂ ಮೀರಿ ನಡೆದರೆ, ಆತನು ಪರಲೋಕ ರಾಜ್ಯದಲ್ಲಿ ಬಹಳ ಚಿಕ್ಕವನು ಎನಿಸಿಕೊಳ್ಳುವನು. ಇದಕ್ಕೆ ವ್ಯತಿರಿಕ್ತವಾಗಿ, ಪರಲೋಕ ರಾಜ್ಯದಲ್ಲಿ ಯಾರು ಶ್ರೇಷ್ಠನು ಎನಿಸಿಕೊಳ್ಳುವನು? ಯಾರು ಅತಿ ಚಿಕ್ಕ ಆಜ್ಞೆಗೆ ವಿಧೇಯನಾಗುತ್ತಾನೋ ಮತ್ತು ಜನರಿಗೆ ಅವುಗಳಂತೆ ನಡೆಯುವುದನ್ನು ತೋರಿಸಿಕೊಡುತ್ತಾನೋ, ಅವನು. ಮತ್ತಾ.5:19 ರಲ್ಲಿ ಇದು ಅತಿ ಸ್ಪಷ್ಟವಾಗಿದೆ.

ಹೊಸ ಒಡಂಬಡಿಕೆಯ ಅತಿ ಚಿಕ್ಕ ಆಜ್ಞೆಗಳ ಬಗ್ಗೆ ನಿಮ್ಮ ಮನೋಭಾವವು, ದೇವರ ದೃಷ್ಟಿಯಲ್ಲಿ ನೀವು ದೇವರ ರಾಜ್ಯದ ಯಾವ ಮಟ್ಟಕ್ಕೆ ತಲುಪಿದ್ದೀರಿ ಎಂಬುದನ್ನು ತೋರಿಸುತ್ತದೆ. ಯೇಸುವು ಹೀಗೆ ಹೇಳಿದರು, "ನೀವು ನನ್ನನ್ನು ಪ್ರೀತಿಸುವುದಾದರೆ, ನನ್ನ ಆಜ್ಞೆಗಳನ್ನು ಕೈಗೊಂಡು ನಡೆಯಿರಿ." ಆ ವಿಧೇಯತೆಯು ನಮ್ಮ ಪ್ರೀತಿಯ ಪ್ರತೀಕವಾಗಿದೆ. ಯಾರೂ ಸಹ, "ನಾನು ಯೇಸುವನ್ನು ಪ್ರೀತಿಸುತ್ತೇನೆ," ಎಂದು ಹೇಳಿ ಆತನ ಆಜ್ಞೆಗಳನ್ನು ಕಡೆಗಣಿಸಲಾರರು. ನೀವು ಯೇಸುವಿನ ಅತಿ ಚಿಕ್ಕ ಆಜ್ಞೆಯನ್ನು ಎಷ್ಟರ ಮಟ್ಟಿಗೆ ನಿರ್ಲಕ್ಷಿಸುತ್ತೀರೋ, ಯೇಸುವನ್ನು ನೀವು ಅಷ್ಟೇ ಕಡಿಮೆ ಪ್ರೀತಿಸುತ್ತೀರಿ. ಬಹುಶಃ ನೀವು ದೊಡ್ಡ ಆಜ್ಞೆಗಳನ್ನು ಪಾಲಿಸಬಹುದು, ಆದರೆ ದೇವರ ರಾಜ್ಯದಲ್ಲಿ ನಿಮ್ಮ ಸ್ಥಾನವು ಅತಿ ಚಿಕ್ಕ ಆಜ್ಞೆಗಳ ಬಗ್ಗೆ ನಿಮ್ಮ ಮನೋಭಾವದ ಮೇಲೆ ನಿರ್ಧರಿಸಲ್ಪಡುತ್ತದೆ.