WFTW Body: 

"... ನನ್ನೆದುರಿಗೆ ನಿಲ್ಲುವದಕ್ಕೂ, ಗೋಡೆಯನ್ನು ಗಟ್ಟಿ ಮಾಡುವದಕ್ಕೂ ತಕ್ಕವನನ್ನು ನಾನು ಹುಡುಕಿದಾಗ ಯಾರೂ ಸಿಕ್ಕಲಿಲ್ಲ" (ಯೆಹೆ. 22:30). ನಾವು ಲೋಕದ, ಇಸ್ರಾಯೇಲಿನ ಮತ್ತು ದೇವಸಭೆಯ ಇತಿಹಾಸವನ್ನು ನೋಡುವಾಗ, ಅಲ್ಲಿ ಇಲ್ಲಿ ಕೆಲವು ವಿಶಿಷ್ಟ ಸಂದರ್ಭಗಳಲ್ಲಿ ದೇವರು ತನ್ನ ಸಂಕಲ್ಪಗಳನ್ನು ನೆರವೇರಿಸುವುದಕ್ಕೆ ಕೇವಲ ಒಬ್ಬ ಮನುಷ್ಯನನ್ನು ಅವಲಂಬಿಸಿದ ಅನೇಕ ಘಟನೆಗಳು ಕಂಡುಬರುತ್ತವೆ. ಆದರೆ ದೇವರೊಂದಿಗೆ ನಿಂತಿರುವ ಒಬ್ಬ ಮನುಷ್ಯನು ಯಾವಾಗಲೂ ಬಹುಮತವನ್ನು ಹೊಂದಿರುತ್ತಾನೆ.

ನೋಹನು : ನೋಹನ ಕಾಲದಲ್ಲಿ, ಇಡೀ ಲೋಕವೇ ಕೆಟ್ಟತನ ಮತ್ತು ದೇವರಿಗೆ ವಿರುದ್ಧವಾದ ದ್ರೋಹದ ಮನೋಭಾವದಿಂದ ತುಂಬಿದ್ದಾಗ, ಭೂಮಿಯ ಮೇಲೆ ದೇವಭಯವಿದ್ದ ಎಂಟು ಜನರು ಇದ್ದರು, ಆದಾಗ್ಯೂ ದೇವರ ಸಂಕಲ್ಪಗಳನ್ನು ಪೂರೈಸುವ ಕಾರ್ಯವು ಕೇವಲ ಒಬ್ಬ ಮನುಷ್ಯ, ನೋಹನ ಯಥಾರ್ಥತೆಯ ಮೇಲೆ ಅವಲಂಬಿಸಿತ್ತು. ಆ ಸಮಯದಲ್ಲಿ ದೇವರ ದಯವು ನೋಹನಿಗೆ ಮಾತ್ರ ದೊರಕಿತು (ಆದಿ. 6:8). ಆ ಒಬ್ಬ ವ್ಯಕ್ತಿಯು ದೇವರಿಗೆ ದ್ರೋಹ ಬಗೆದಿದ್ದರೆ, ಇಡೀ ಮಾನವ ಕುಲವೇ ನಾಶವಾಗುತ್ತಿತ್ತು, ಮತ್ತು ಈ ದಿನ ನಾವು ಯಾರೂ ಜೀವಂತವಾಗಿ ಇರುತ್ತಿರಲಿಲ್ಲ!! ನೋಹನು ಯಥಾರ್ಥನಾಗಿ ಇದ್ದುದಕ್ಕಾಗಿ ನಾವು ದೇವರಿಗೆ ಕೃತಜ್ಞರಾಗಿರುವುದು ಅತ್ಯಂತ ಯೋಗ್ಯವಾಗಿದೆ.

ಮೋಶೆಯು : ಇಸ್ರಾಯೇಲ್ಯರು ಐಗುಪ್ತದಲ್ಲಿ ಇದ್ದಾಗ, ದೇವರು ತನ್ನ ಪ್ರತಿನಿಧಿಯಾಗಿ ಒಬ್ಬ ಯೋಗ್ಯನಾದ ಮನುಷ್ಯನನ್ನು ಕಂಡುಕೊಳ್ಳುವ ವರೆಗೆ, ಅವರನ್ನು ದಾಸತ್ವದಿಂದ ಬಿಡುಗಡೆಗೊಳಿಸಲು ಸಾಧ್ಯವಾಗಲಿಲ್ಲ. ಮತ್ತು ಅಂತಹ ಒಬ್ಬ ವ್ಯಕ್ತಿಯು ಸಿದ್ಧನಾಗುವ ತನಕ ದೇವರು ಕಾದಿರಲು ತಯಾರಾಗಿದ್ದರು. ಒಮ್ಮೆ ಮೋಶೆಯು ಕೇವಲ 40 ದಿನಗಳು ಇಸ್ರಾಯೇಲ್ಯರ ನಡುವೆ ಇಲ್ಲದಿದ್ದಾಗ, 2 ದಶಲಕ್ಷ ಜನಸಂಖ್ಯೆಯ ಆ ಇಡೀ ಸಮೂಹವು ದಾರಿತಪ್ಪಿ ನಡೆಯಿತು (ವಿಮೋ. 32). ಆ ದೇವಮನುಷ್ಯ ಅವರ ಕಣ್ಣೆದುರಿನಿಂದ ದೂರ ಸರಿದೊಡನೆ, ಕೆಲವು ದಿನಗಳಲ್ಲೇ ಒಂದು ಇಡೀ ದೇಶವು ನಿಜವಾದ ದೇವರಿಂದ ದೂರ ಸರಿದು, ವಿಗ್ರಹಗಳನ್ನು ಆರಾಧಿಸಲು ತೊಡಗಿತು.

ಯೆಹೋಶುವನು : ಇಸ್ರಾಯೇಲ್ಯರು "ಯೆಹೋಶುವನ ದಿನಗಳಲ್ಲಿಯೂ, ಅವನ ಕಾಲದಿಂದ ಇನ್ನೂ ಮುಂದೆ ಜೀವಿಸಿದ ಹಿರಿಯರ ದಿನಗಳಲ್ಲಿಯೂ ಕರ್ತನನ್ನು ಸೇವಿಸಿದರು" (ನ್ಯಾಯ. 2:7), ಎಂದು ನಾವು ಓದುತ್ತೇವೆ. ಇಸ್ರಾಯೇಲ್ಯರ ಮೇಲೆ ಯೆಹೋಶುವನ ಪ್ರಭಾವ ಎಷ್ಟು ಬಲವಾಗಿತ್ತೆಂದರೆ, ಅವರು ಆತನ ಜೀವಿತಕಾಲದಲ್ಲಿ ಮತ್ತು ಆತನ ಜೊತೆಯ ಹಿರಿಯರ ಜೀವಿತಕಾಲದಲ್ಲಿ ವಿಗ್ರಹಗಳನ್ನು ಆರಾಧಿಸುವ ಧೈರ್ಯ ಮಾಡಲಿಲ್ಲ. ಆದರೆ ಯೆಹೋಶುವನ ಮರಣದ ನಂತರ, ಇಸ್ರಾಯೇಲ್ ದೇಶವು ಘೋರವಾದ ಪಾಪಕ್ಕೆ ಜಾರಿತು. ಒಬ್ಬ ದೈವಿಕ ಮನುಷ್ಯನ ಜೀವನವು ಇಂತಹ ಪ್ರಭಾವವನ್ನು ಬೀರುತ್ತದೆ.

ಎಲೀಯನು : ಎಲೀಯನ ಕುರಿತಾಗಿ ಸತ್ಯವೇದವು, "ನೀತಿವಂತನ ಅತ್ಯಾಸಕ್ತಿಯುಳ್ಳ ವಿಜ್ಞಾಪನೆಯು ಬಹು ಬಲವಾಗಿದೆ"(ಯಾಕೋಬ. 5:17,16), ಎಂದು ಹೇಳುತ್ತದೆ. ಒಬ್ಬ ಏಕಾಂಗಿ ಮನುಷ್ಯನು ಒಂದು ಇಡೀ ದೇಶವನ್ನು ದೇವರ ಕಡೆಗೆ ಹಿಂದಿರುಗುವಂತೆ ಮಾಡಿ, ದುಷ್ಟತನದ ಅಪಾರ ಸಮೂಹವನ್ನು ಸದೆಬಡಿದು, ಅನ್ಯಜನರ ದೇವರಾಗಿದ್ದ ಬಾಳನ ಎಲ್ಲಾ ಪ್ರವಾದಿಗಳನ್ನೂ ಹಿಡಿಸಿ ಕೊಲ್ಲಿಸಿದನು.

ಎಲೀಷನು : ಎಲೀಯನ ಕಾಲದಲ್ಲಿ ಪ್ರವಾದಿ ಮಂಡಲಿಯ ಐವತ್ತು ಜನರು (ಸತ್ಯವೇದ ಅಧ್ಯಯನ ಶಾಲೆಯ ವಿದ್ಯಾರ್ಥಿಗಳು) ಇದ್ದರು, ಮತ್ತು ಅವರೆಲ್ಲರೂ ಮುಂದೆ ಒಂದು ದಿನ ತಾವು ಸಹ ಪ್ರವಾದಿಗಳಾಗುವ ನಿರೀಕ್ಷೆಯನ್ನು ಇರಿಸಿಕೊಂಡಿದ್ದರು. ಆದರೆ ದೇವರ ಆತ್ಮನು ಅವರೆಲ್ಲರ ಬಳಿಗೆ ಹೋಗದೆ, "ಪ್ರವಾದಿ ಮಂಡಲಿಯ" ಸದಸ್ಯನಾಗಿರದ ಎಲೀಷನ ಮೇಲೆ ಬಂದನು (2 ಅರಸು. 2:7,15). ಇಸ್ರಾಯೇಲಿನಲ್ಲಿ ಎಲೀಷನು ಒಬ್ಬ ಸೇವಕನೆಂದು ಮಾತ್ರ ಪರಿಚಿತನಾಗಿದ್ದನು - "ಎಲೀಯನ ಕೈಗೆ ನೀರು ಕೊಡುತ್ತಿದ್ದವನು," ಎಂಬುದಾಗಿ (2 ಅರಸು. 3:11).

ದಾನಿಯೇಲನು : ದೇವರು ಯೆಹೂದ್ಯರನ್ನು ಬಾಬೆಲಿನಿಂದ ಬಿಡುಗಡೆ ಮಾಡಿ ಯೆರೂಸಲೇಮಿಗೆ ಕರೆತರಲು ಬಯಸಿದಾಗ, ಅದಕ್ಕಾಗಿ ದೇವರಿಗೆ ಒಬ್ಬ ಮನುಷ್ಯನು ಬೇಕಾಗಿದ್ದನು. ಅವರಿಗೆ ದಾನಿಯೇಲನು ಸಿಕ್ಕಿದನು. ದಾನಿಯೇಲನು ತನ್ನ ಯೌವನ ಪ್ರಾಯದಿಂದ ದೇವರಿಗೆ ನಿಷ್ಠಾವಂತನಾಗಿದ್ದನು ಮತ್ತು ಪ್ರತಿಯೊಂದು ಶೋಧನೆಯ ಪರೀಕ್ಷೆಯನ್ನು ಶ್ರೇಷ್ಠ ರೀತಿಯಲ್ಲಿ ಜಯಿಸಿದ್ದನು. ಆತನು ಬಾಬೆಲಿನಲ್ಲಿ ಒಬ್ಬ ಹದಿಹರೆಯದ ಯೌವನಸ್ಥನಾಗಿದ್ದಾಗ, ಕರ್ತನಿಗಾಗಿ ಒಂದು ದೃಢವಾದ ಸಾಕ್ಷಿಯಾಗಿ ನಿಂತನು. "ಆತನು ತನ್ನನ್ನು ಅಶುದ್ಧ ಮಾಡಿಕೊಳ್ಳಬಾರದು, ಎಂದು ತನ್ನ ಹೃದಯದಲ್ಲಿ ನಿಶ್ಚಯಿಸಿದನು" (ದಾನಿ. 1:8) - ಇದು ಎಲ್ಲಾ ಯೌವನಸ್ಥರು ನೆನಪಿನಲ್ಲಿರಿಸಿಕೊಳ್ಳಬೇಕಾದ ಒಂದು ಒಳ್ಳೆಯ ವಚನವಾಗಿದೆ. ಬೇರೆಲ್ಲಾ ಯೆಹೂದ್ಯ ಯೌವನಸ್ಥರು ಅರಮನೆಯಲ್ಲಿ ಅರಸನ ಭಯದಿಂದಾಗಿ ತಮಗೆ ಬಡಿಸಿದ ಭೋಜನ ಪದಾರ್ಥಗಳನ್ನು ಹಿಂಜರಿಯದೆ ತಿಂದಾಗ (ದೇವರು ಯಾಜಕಕಾಂಡ ಪುಸ್ತಕದಲ್ಲಿ ಆ ಆಹಾರವನ್ನು ನಿಷೇಧಿಸಿದ್ದರು), ದಾನಿಯೇಲನೊಬ್ಬನೇ ಅದನ್ನು ತಿನ್ನಲು ಒಪ್ಪಲಿಲ್ಲ. ಆ ದಿನ ಊಟದ ಮೇಜಿನಲ್ಲಿ ಕುಳಿತಿದ್ದ ಬೇರೆ ಮೂವರು ಯುವಕರು, ದಾನಿಯೇಲನ ದೃಢವಾದ ನಿಲುವನ್ನು ನೋಡಿ, ತಾವು ಸಹ ಆತನೊಂದಿಗೆ ಸೇರಿಕೊಳ್ಳಲು ನಿಶ್ಚಯಿಸಿದರು. ಹೀಗೆ ದಾನಿಯೇಲ ಮತ್ತು ಆ ಮೂವರು ಯುವಕರು ಬಾಬೆಲಿನಲ್ಲಿ ದೇವರಿಗಾಗಿ ಪ್ರಬಲ ಸಾಕ್ಷಿಗಳಾದರು.

ಪೌಲನು : ಪೌಲನು ಎಫೆಸದ ಸಭೆಯಲ್ಲಿ ಬೇರೆಲ್ಲಾ ಸಭೆಗಳಿಗಿಂತ ಹೆಚ್ಚಿನ ಸಮಯವನ್ನು ಕಳೆದನು. ಅಲ್ಲಿ ಆತನು ಮೂರು ವರ್ಷಗಳ ಕಾಲ, ಎಡೆಬಿಡದೆ ಪ್ರತಿ ದಿನವೂ ದೇವರ ಸಂಪೂರ್ಣ ಸಂಕಲ್ಪವನ್ನು ಅವರಿಗೆ ತಿಳಿಸಿದನು (ಅ.ಕೃ. 20:31). ಆ ಸಭೆಗೆ ಸಮಸ್ತ ಸಭೆಗಳಿಗಿಂತ ಹೆಚ್ಚಿನ ಸೌಭಾಗ್ಯ ಸಿಕ್ಕಿತ್ತು. ಅಪೊಸ್ತಲ ಪೌಲನು ಅವರಿಗೆ ಬರೆದ ಪತ್ರಿಕೆಯ ಬೋಧನೆಯ ಉನ್ನತ ಮಟ್ಟವನ್ನು ನೋಡುವಾಗ, ಆ ಸಭೆಯು ಆತ್ಮಿಕ ಮನಸ್ಸನ್ನು ಹೊಂದಿತ್ತು ಎಂದೂ ಸಹ ತಿಳಿದುಬರುತ್ತದೆ. ಹಾಗಾಗಿ ಯಾವುದೇ ಒಂದು ಸಭೆಯಲ್ಲಿ ಅನೇಕ ವಿಶ್ವಾಸಿಗಳು ಹೊಸ-ಒಡಂಬಡಿಕೆಯ ಜೀವಿತಕ್ಕೆ ಪ್ರವೇಶಿಸಿದ್ದರೆ, ಅದು ಈ ಎಫೆಸದ ಸಭೆಯಲ್ಲಿ ಆಗಿರಬೇಕು. ಆದರೆ ಆಯ್ಯೋ, ಹಾಗೆ ಆಗಿರಲಿಲ್ಲ. ಅಲ್ಲಿನ ಸಭಾ ಹಿರಿಯರೂ ಸಹ ಇಂತಹ ಒಂದು ಜೀವಿತಕ್ಕೆ ಪ್ರವೇಶ ಮಾಡಿರಲಿಲ್ಲ. ಪೌಲನು ಆ ಸಭಾ ಹಿರಿಯರಿಂದ ಅಗಲಿ ಹೋಗುವಾಗ ಅವರಿಗೆ ಹೇಳಿದ ಮಾತು, "ನಾನು ಹೋದ ಮೇಲೆ ಕ್ರೂರವಾದ ತೋಳಗಳು ನಿಮ್ಮೊಳಗೆ ಬರುವವೆಂದು ನಾನು ಬಲ್ಲೆನು; ಅವು ಹಿಂಡನ್ನು ಕನಿಕರಿಸುವುದಿಲ್ಲ. ಇದಲ್ಲದೆ ನಿಮ್ಮಲ್ಲಿಯೂ ಕೆಲವರು ಎದ್ದು ವ್ಯತ್ಯಾಸ ಬೋಧನೆಗಳನ್ನು ಮಾಡಿ, ಯೇಸುವಿನ ಶಿಷ್ಯರನ್ನು ತಮ್ಮ ಹಿಂದೆ ಎಳಕೊಳ್ಳುವರು" (ಅ.ಕೃ. 20:29,30). ಅಪೊಸ್ತಲ ಪೌಲನು ಸ್ವತಃ ಎಫೆಸದ ಸಭೆಯಲ್ಲಿ ಇದ್ದಷ್ಟು ದಿನ ಅಲ್ಲಿಗೆ ತೋಳಗಳು ಪ್ರವೇಶಿಸಲು ಸಾಧ್ಯವಿರಲಿಲ್ಲ, ಏಕೆಂದರೆ ಪೌಲನು ಜಾಗ್ರತೆಯಿಂದ ಹಿಂಡನ್ನು ಕಾಪಾಡಿದ ಕುರುಬನಾಗಿದ್ದನು ಮತ್ತು ಕರ್ತನ ಮನೆಗೆ ಒಬ್ಬ ಶಿಸ್ತಿನ ಕಾವಲುಗಾರನೂ ಆಗಿದ್ದನು.

ಪ್ರತಿಯೊಂದು ತಲೆಮಾರಿನಲ್ಲಿ ದೇವರಿಗೆ ತನ್ನ ಹೆಸರಿಗಾಗಿ ಪರಿಶುದ್ಧ ಸಾಕ್ಷಿಯು ಅವಶ್ಯವಾಗಿದೆ. ಮತ್ತು ಅವರು ನಮ್ಮ ತಲೆಮಾರಿನಲ್ಲೂ ತಮಗೆ ಒಂದು ಸಾಕ್ಷಿಯನ್ನು ಇರಿಸದೇ ಇರುವುದಿಲ್ಲ. ಈ ಜನಾಂಗದಲ್ಲಿ ದೇವರಿಗೆ ಎಲ್ಲಾ ವೇಳೆಯಲ್ಲಿ ಸಿಗುವಂತ ಸೇವಕರಾಗಲು ಕೊಡಬೇಕಾದ ಬೆಲೆಯನ್ನು ನೀವು ಕೊಡುತ್ತೀರಾ?