ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಮನೆ ಸಭೆ
WFTW Body: 

ಯೋಬನ ಕತೆಯಲ್ಲಿ, ದೇವರು, ಯೋಬನು ತನ್ನ ಆಸ್ತಿ, ತನ್ನ ಮಕ್ಕಳು ಮತ್ತು ತನ್ನ ಆರೋಗ್ಯ ಎಲ್ಲವನ್ನೂ ಕಳೆದುಕೊಳ್ಳುವುದನ್ನು ಅನುಮತಿಸುವುದರ ಮೂಲಕ ಅವನನ್ನು ಅತ್ಯಂತ ಕೆಳಮಟ್ಟಕ್ಕೆ ತರುವುದನ್ನು ನಾವು ನೋಡುತ್ತೇವೆ. ಒಂದು ಲೆಕ್ಕದಲ್ಲಿ ನೋಡಿದರೆ, ಆತನು ತನ್ನ ಪತ್ನಿಯನ್ನು (ಆಕೆ ಆತನನ್ನು ನಿರಂತರವಾಗಿ ಹೀಯಾಳಿಸುತ್ತಿದ್ದಳು) ಮತ್ತು ಆತನ ಮೂವರು ಉತ್ತಮ ಸ್ನೇಹಿತರನ್ನು ಸಹ (ಅವರು ಆತನನ್ನು ತಪ್ಪಾಗಿ ಅರ್ಥಮಾಡಿಕೊಂಡು ಟೀಕಿಸಿದರು) ಕಳಕೊಳ್ಳುತ್ತಾನೆ. ಆತನ ಗೆಳೆಯರು "ಆತನು ಕೆಳಗೆ ಬಿದ್ದಾಗ ಆತನನ್ನು ಒದ್ದು" ಆನಂದಿಸುವ ಸ್ವನೀತಿವಂತರಾಗಿ ನಡೆದುಕೊಂಡರು. ದೇವರು ಕರುಣೆ ತೋರಿಸಿ ಆತನ ಈ ದುರವಸ್ಥೆಯನ್ನು ಕೊನೆಗೊಳಿಸುವ ತನಕ, ಆ ಗೆಳೆಯರು ಆತನನ್ನು "ಒದೆಯುತ್ತಲೇ" ಇದ್ದರು. ಯೋಬನು ಇವೆಲ್ಲಾ ಒತ್ತಡಗಳ ನಡುವೆ, ತನ್ನನ್ನು ಪದೇ ಪದೇ ಸಮರ್ಥಿಸಿಕೊಂಡನು. ಕೊನೆಯಲ್ಲಿ ಕರ್ತರು ಆತನೊಂದಿಗೆ ಮಾತನಾಡಿದಾಗ, ಯೋಬನು ತನ್ನ ಸ್ವನೀತಿಯ ಭ್ರಷ್ಟತನವನ್ನು ನೋಡಿದನು - ಮತ್ತು ಆತನು ಪಶ್ಚಾತ್ತಾಪ ಪಟ್ಟನು. ಆತನು ಒಬ್ಬ ನೀತಿವಂತನಾಗಿದ್ದನು. ಅದು ಒಂದು ಒಳ್ಳೆಯ ಸಂಗತಿಯಾಗಿತ್ತು. ಆದರೆ ಆತ ತನ್ನ ನೀತಿವಂತಿಕೆಯ ಬಗ್ಗೆ ಹೆಮ್ಮೆ ಪಡುತ್ತಿದ್ದನು. ಅದು ಕೆಟ್ಟ ಸಂಗತಿಯಾಗಿತ್ತು. ಆದರೆ ದೇವರು ಅವನೊಂದಿಗೆ ವ್ಯವಹರಿಸಿದ ನಂತರ, ಅವನೊಬ್ಬ ಮುರಿಯಲ್ಪಟ್ಟ ಮನುಷ್ಯನಾದನು. ಇದರ ನಂತರ, ಅವನು ದೇವರಲ್ಲಿ ಮಾತ್ರ ಹೆಚ್ಚಳ ಪಟ್ಟನು. ಹೀಗೆ ಯೋಬನಿಗಾಗಿ ಇದ್ದ ದೇವರ ಸಂಕಲ್ಪವು ನೆರವೇರಿತು.

ಯೋಬನು ಮುರಿಯಲ್ಪಟ್ಟಾಗ, ಆತನು ದೇವರಿಗೆ ಹೇಳಿದ ಮಾತನ್ನು ಗಮನಿಸಿರಿ, "ನಾನು ಇಲ್ಲಿಯ ವರೆಗೆ, ನಿನ್ನ ಕುರಿತಾಗಿ ಈ ಬೋಧಕರಿಂದ ಕೇಳಿಕೊಂಡೆನು. ಆದರೆ ಈಗ ನಾನು ನಿನ್ನನ್ನೇ ಕಣ್ಣಾರೆ ಕಂಡೆನು" (ಯೋಬ. 42:5). ಅವನು ದೇವರ ಮುಖವನ್ನು ನೋಡಿದನು ಮತ್ತು ಅವನ ಜೀವವು ಸಂರಕ್ಷಿಸಲ್ಪಟ್ಟಿತು. ಇದರ ನಂತರ ಏನಾಯಿತು? ಆತನು ಧೂಳಿನಲ್ಲಿಯೂ ಬೂದಿಯಲ್ಲಿಯೂ ಕುಳಿತು ಪಶ್ಚಾತ್ತಾಪ ಪಟ್ಟನು (ಯೋಬ. 42:6). ಆ ನಾಲ್ವರು ಬೋಧಕರು ಅನೇಕ ದಿನಗಳ ಬೋಧನೆಯಿಂದ ಮಾಡಲಾರದ್ದನ್ನು, ದೇವರು ತನ್ನ ದಯೆಯನ್ನು ಯೋಬನಿಗೆ ಪ್ರಕಟಿಸುವ ಮೂಲಕ, ಒಂದು ಕ್ಷಣದಲ್ಲಿ ಸಾಧಿಸಿದರು. ಯೋಬನು ಮುರಿಯಲ್ಪಡುವುದಕ್ಕೆ ದೇವರ ದಯೆಯು ಕಾರಣವಾಗಿತ್ತು ಮತ್ತು ಅದು ಆತನನ್ನು ಪಶ್ಚಾತ್ತಾಪಕ್ಕೆ ನಡೆಸಿತು.

ನಮ್ಮಲ್ಲಿ ಹೆಚ್ಚಿನವರು ದೇವರ ಬಗ್ಗೆ ಕೂಟಗಳಲ್ಲಿ ಪ್ರಚಾರಕರಿಂದ ಕೇಳುತ್ತೇವೆ. ನಮಗೆ ದೇವರನ್ನು ಮುಖಾಮುಖಿ ಭೇಟಿಯಾಗುವ ಒಂದು ಅವಕಾಶ ಬೇಕಾಗಿದೆ ಮತ್ತು ಆಗ ನಮಗೆ ದೇವರು ತೋರಿಸಿರುವ ದಯೆಯನ್ನು ನಾವು ಅರಿತುಕೊಳ್ಳುತ್ತೇವೆ ಮತ್ತು ನಾವು ಮುರಿಯಲ್ಪಡುತ್ತೇವೆ. ಪೇತ್ರನಿಗೂ ಇದೇ ಅನುಭವವಾಯಿತು. ಪೇತ್ರನು ಕರ್ತನನ್ನು ಅಲ್ಲಗಳೆದ ನಂತರ ಮತ್ತು ಕೋಳಿ ಎರಡು ಸಲ ಕೂಗಿದೊಡನೆ ಏನು ನಡೆಯಿತೆಂದು ನಿಮಗೆ ನೆನಪಿದೆಯೇ? ಪೇತ್ರನು ಕರ್ತನ ಮುಖವನ್ನು ನೋಡಿದನು. ಪೇತ್ರನೂ ’ಪೆನಿಯೇಲ್ ಕ್ಷಣ’ವನ್ನು ಅನುಭವಿಸಿದನು! ನಾವು ಓದಿಕೊಳ್ಳುವುದು ಏನೆಂದರೆ, "ಯೇಸುವು ಹಿಂತಿರುಗಿಕೊಂಡು ಪೇತ್ರನನ್ನು ದೃಷ್ಟಿಸಿ ನೋಡಿದನು" (ಲೂಕ. 22:61). ಆಗ ಏನಾಯಿತು? "ಪೇತ್ರನು ಹೊರಗೆ ಹೋಗಿ ಬಹಳ ವ್ಯಥೆಪಟ್ಟು ಅತ್ತನು" ಎಂದು ನಾವು ಓದುತ್ತೇವೆ (ಲೂಕ. 22:62). ಯೇಸುವಿನ ದಯಾಪೂರ್ಣ ಮತ್ತು ಕ್ಷಮಾಪೂರ್ಣ ದೃಷ್ಟಿಯು ಆ ಕೆಚ್ಚಿನ ಬೆಸ್ತನ ಹೃದಯವನ್ನು ಒಡೆಯಿತು. ಹಳೆಯ ಒಡಂಬಡಿಕೆಯ ಕೆಳಗೆ, ದೇವರು ಆರೋಗ್ಯ, ಸಂಪತ್ತು ಮತ್ತು ಅನೇಕ ಲೌಕಿಕ ಆಶಿರ್ವಾದಗಳನ್ನು ಇಸ್ರಾಯೇಲ್ ಜನಾಂಗಕ್ಕೆ ವಾಗ್ದಾನ ಮಾಡಿದ್ದರು. ಆದರೆ ಎಲ್ಲಾ ಆಶೀರ್ವಾದಗಳಿಗಿಂತ ಶ್ರೇಷ್ಠವಾದ ಒಂದು ಆಶೀರ್ವಾದವಿತ್ತು - ಅದು ಅರಣ್ಯಕಾಂಡ 6:22-26ರಲ್ಲಿ ವಿವರಿಸಲ್ಪಟ್ಟಿದೆ. ನಾವು ಅಲ್ಲಿ ಓದುವಂತೆ, ಆರೋನನು ಈ ರೀತಿಯಾಗಿ ಜನರನ್ನು ಆಶೀರ್ವದಿಸುವಂತೆ ಆಜ್ಞಾಪಿಸಲ್ಪಟ್ಟನು: "ಕರ್ತನು ಪ್ರಸನ್ನ ಮುಖದಿಂದ ನಿಮ್ಮನ್ನು ನೋಡಿ ನಿಮ್ಮ ಮೇಲೆ ದಯವಿಡಲಿ; ಕರ್ತನು ನಿಮ್ಮ ಮೇಲೆ ಕೃಪಾಕಟಾಕ್ಷವಿಟ್ಟು ಶಾಂತಿಯನ್ನು ಅನುಗ್ರಹಿಸಲಿ".

ಇಂದು ಅನೇಕ ವಿಶ್ವಾಸಿಗಳು ತಮಗೆ ನಿಜವಾಗಿ ಬೇಕಾಗಿರುವ ಮತ್ತು ತಮ್ಮ ಜೀವಿತವನ್ನು ಸಂಪೂರ್ಣವಾಗಿ ಮಾರ್ಪಡಿಸ ಬಹುದಾದ ಅತಿ ಶ್ರೇಷ್ಠವಾದ ಆಶೀರ್ವಾದಕ್ಕಾಗಿ - ದೇವರನ್ನು ಮುಖಾಮುಖಿಯಾಗಿ ನೋಡುವಂತ ಒಂದು ಅನುಭವಕ್ಕಾಗಿ - ತವಕಿಸುವ ಬದಲಾಗಿ, ಕೆಳಮಟ್ಟದ ಆಶೀರ್ವಾದಗಳಾದ ಆರೋಗ್ಯ ಮತ್ತು ಸಂಪತ್ತನ್ನು ಬಯಸುವುದು (ಅವಿಶ್ವಾಸಿಗಳೂ ಸಹ ಯಾವುದೇ ಪ್ರಾರ್ಥನೆಯನ್ನು ಮಾಡದೇ ಇವನ್ನು ಹೊಂದುತ್ತಾರೆ) ಮತ್ತು ಭಾವಾತ್ಮಕ ಅನುಭವಗಳಿಗಾಗಿ ತವಕಿಸುವುದು (ಇವುಗಳಲ್ಲಿ ಹೆಚ್ಚಿನವು ನಕಲಿ ಅನುಭವಗಳಾಗಿವೆ) - ಇದು ಒಂದು ದುಃಖಕರ ಸಂಗತಿಯಲ್ಲವೇ? ನಾವು ಐಶ್ವರ್ಯವನ್ನು ಪಡೆಯದೇ ಹೋದರೂ ಮತ್ತು ರೋಗಗಳಿಂದ ಗುಣ ಹೊಂದದಿದ್ದರೂ, ಕರ್ತರ ಮುಖವನ್ನು ದೃಷ್ಟಿಸಿದರೆ, ಅದರ ಮೂಲಕ ನಮ್ಮ ಎಲ್ಲಾ ಅವಶ್ಯಕತೆಗಳು ಪೂರೈಸಲ್ಪಡುತ್ತವೆ.

ಯೋಬನು ದೇವರನ್ನು ಭೇಟಿಯಾದಾಗ, ಆತನ ಇಡೀ ದೇಹ ಕುರುಗಳಿಂದ ತುಂಬಿತ್ತು, ಆದರೆ ಆತನು ತನ್ನನ್ನು ಗುಣಪಡಿಸುವಂತೆ ದೇವರನ್ನು ಕೇಳಲಿಲ್ಲ. ಆತನು ಹೀಗೆಂದನು, "ನಾನು ಕರ್ತನ ಮುಖವನ್ನು ಕಂಡಿದ್ದೇನೆ ಮತ್ತು ನನಗೆ ಇನ್ನೇನೂ ಬೇಕಿಲ್ಲ". ಆ ಮೂವರು ಪ್ರಚಾರಕರು ತಾವು "ವಿವೇಚನೆ"ಯನ್ನೂ "ದೇವರ ಸಂದೇಶ"ವನ್ನೂ ಹೊಂದಿರುವ ತೋರಿಕೆ ಮಾಡಿದರು ಮತ್ತು ಯೋಬನಿಗೆ ಆತನ ಜೀವಿತದ ಕೆಲವು ಮುಚ್ಚಿಟ್ಟ ಪಾಪಗಳಿಂದಾಗಿ ಈ ದಂಡನೆ ಸಿಕ್ಕಿತೆಂದು ತಿಳಿಸಿದರು. ಈ ದಿನವೂ ಸಹ ಇಂತಹ ಸ್ವ-ನಿಯುಕ್ತ ಪ್ರವಾದಿಗಳು, "ಇದು ಕರ್ತರ ಮಾತು" ಎಂಬ ಸುಳ್ಳು ಸಂದೇಶಗಳ ಮೂಲಕ ದೇವಜನರನ್ನು ದೂಷಣೆಗೆ ಒಳಪಡಿಸುತ್ತಾರೆ. ಆದರೆ ದೇವರು ಆ ಮೂವರು ಪ್ರಚಾರಕರಂತೆ ಯೋಬನಿಗೆ ನ್ಯಾಯತೀರ್ಪಿನ ಬೆದರಿಕೆಯನ್ನು ಹಾಕಲಿಲ್ಲ.

ದೇವರು ಯೋಬನಿಗೆ ಆತನ ಸೋಲುಗಳನ್ನು ತೋರಿಸಲಿಲ್ಲ ಅಥವಾ ಒತ್ತಡದ ಸನ್ನಿವೇಶಗಳಲ್ಲಿ ಆತನು (ದೇವರ ವಿರುದ್ಧವಾಗಿ) ಒಡ್ಡಿದ ದೂರುಗಳನ್ನು ಸಹ ಆತನಿಗೆ ನೆನಪಿಸಲಿಲ್ಲ. ದೇವರು ಯೋಬನಿಗೆ ಕೇವಲ ತನ್ನ ದಯೆಯನ್ನು - ಅವರು ಮಾನವನ ಆನಂದಕ್ಕಾಗಿ ಸೃಷ್ಟಿಸಿದ್ದ ಅತಿ ಸುಂದರ ಸೃಷ್ಟಿಯಲ್ಲಿ ಮತ್ತು ಅವರು ಮಾನವನ ಹತೋಟಿಯ ಕೆಳಗೆ ಇರುವಂತೆ ಸೃಷ್ಟಿಸಿದ್ದ ಪ್ರಾಣಿಗಳಲ್ಲಿ ಕಾಣಿಸುವ ಅವರ ದಯೆಯನ್ನು - ಪ್ರಕಟ ಪಡಿಸಿದರು. ದೇವರ ಈ ದಯೆಯ ಪ್ರಕಟನೆಯ ಮೂಲಕ ಯೋಬನು ಪಶ್ಚಾತ್ತಾಪಕ್ಕೆ ನಡೆಸಲ್ಪಟ್ಟನು. ಅನೇಕ ಜನರು ದೇವರ ದಯೆಯನ್ನು ತಪ್ಪಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಾರೆ ಮತ್ತು ಅನುಚಿತ ಅನುಕೂಲ ಹೊಂದುತ್ತಾರೆ. ಆದರೆ ದಯೆಯು ಯೋಬನಲ್ಲಿ ಪಶ್ಚಾತ್ತಾಪವನ್ನು ಉಂಟುಮಾಡಿತು. ಇದರ ನಂತರ ದೇವರು ಹಿಂದೆ ಯೋಬನನ್ನು ಆಶೀರ್ವದಿಸಿದ್ದಕ್ಕೆ ಎರಡು ಪಾಲಿನಷ್ಟು ಆತನನ್ನು ಆಶೀರ್ವದಿಸಿದರು.

ದೇವರು ನಮ್ಮನ್ನು ಮುರಿಯುವುದರ ಅಂತಿಮ ಉದ್ದೇಶ ನಮ್ಮನ್ನು ಇನ್ನೂ ಹೆಚ್ಚಾಗಿ ಆಶೀರ್ವದಿಸುವುದಾಗಿದೆ - ನಾವು ಇದನ್ನು ಯಾಕೋಬನು 5:11ರಲ್ಲಿ ಓದುತ್ತೇವೆ. ಯೋಬನಿಗಾಗಿ ಕರ್ತರ ಮನಸ್ಸಿನಲ್ಲಿದ್ದ ಧ್ಯೇಯ ಆತನ ಸ್ವ-ನೀತಿಯನ್ನು ಮತ್ತು ಹೆಮ್ಮೆಯನ್ನು ಸಂಪೂರ್ಣವಾಗಿ ತೆಗೆದುಹಾಕಿ, ಆತನನ್ನು ಒಬ್ಬ ಮುರಿಯಲ್ಪಟ್ಟ ಮನುಷ್ಯನಾಗಿ ಮಾಡುವುದಾಗಿತ್ತು - ಮತ್ತು ಇದರ ನಂತರ ಕರ್ತರು ಆತನಿಗೆ ತನ್ನ ಮುಖವನ್ನು ತೋರಿಸಿ, ಆತನನ್ನು ಬಹಳವಾಗಿ ಆಶೀರ್ವದಿಸಲು ಬಯಸಿದ್ದರು. ನಾವು ನಮ್ಮ ಲೌಕಿಕ ಮತ್ತು ಭೌತಿಕ ಆಶೀರ್ವಾದಗಳ ಹಿಂದೆ ಇರುವ ದೇವರ ಪ್ರಭಾವವನ್ನು ನೋಡದಿದ್ದರೆ, ಇವೆಲ್ಲವೂ ನಮ್ಮನ್ನು ಹಾಳು ಮಾಡಿ, ನಮ್ಮನ್ನು ದೇವರಿಂದ ದೂರ ಒಯ್ಯಬಹುದು. ಇಂದು ಎಷ್ಟೋ ವಿಶ್ವಾಸಿಗಳು ಲೌಕಿಕ ಯಶಸ್ಸಿನ ಫಲವಾಗಿ ದೇವರಿಂದ ದೂರ ಸರಿದಿದ್ದಾರೆ.

ಈ ಲೋಕವು ನಮ್ಮೆದುರು ಇರಿಸುವ ಯಾವುದೇ ಆಕರ್ಷಣೆಯ ಸೆಳೆತದಿಂದ ನಮ್ಮನ್ನು ಬಿಡುಗಡೆ ಗೊಳಿಸಲು ದೇವರ ಮುಖದ ಒಂದು ದರ್ಶನವು ಸಾಕಾಗುತ್ತದೆ.