ಸ್ನಾನಿಕನಾದ ಯೋಹಾನನು ಇಸ್ರಾಯೇಲ್ ದೇಶದ ಪ್ರವಾದಿಗಳಲ್ಲಿ ಕೊನೆಯವನಾಗಿದ್ದನು. ಮತ್ತಾಯ 3:2ರಲ್ಲಿ ವಿವರಿಸಿರುವಂತೆ, ಅವನ ಪ್ರಾಥಮಿಕ ಸಂದೇಶವು, "ಮಾನಸಾಂತರಗೊಳ್ಳಿರಿ, ಪರಲೋಕ ರಾಜ್ಯವು ಸಮೀಪವಾಗಿದೆ," ಎಂಬುದಾಗಿತ್ತು. ಆತನು ಇಸ್ರಾಯೇಲ್ಯರಿಗೆ ಈ ಸಂದೇಶವನ್ನು ತರುವುದಕ್ಕೆ ಒಂದು ಬಹಳ ಮುಖ್ಯವಾದ ಕಾರಣವಿತ್ತು.
ಮಾನಸಾಂತರದ ಅರ್ಥ ಪಾಪದಿಂದ ತಿರುಗಿಕೊಳ್ಳುವುದಾಗಿದೆ. ಇದಕ್ಕೆ ನಾನು ಕೊಡಬಹುದಾದ ಅತ್ಯುತ್ತಮವಾದ ಸಾಮ್ಯ (ಹೋಲಿಕೆ) ಏನೆಂದರೆ, ಸೇನಾಪಡೆಯಲ್ಲಿ ಬಳಸಲಾಗುವ "ಹಿಂದಕ್ಕೆ ತಿರುಗು" ಎಂಬ ಆಜ್ಞೆ. ಒಬ್ಬ ಸೈನಿಕನು ಕವಾಯತ್ತಿನ ಮೈದಾನದಲ್ಲಿ ಮುಂದಕ್ಕೆ ಹೋಗುತ್ತಾ ಇರುವಾಗ, ಸಾರ್ಜೆಂಟ್ ಮೇಜರ್ ರವರು (ಸೈನ್ಯದ ಅಧಿಕಾರಿ) "ಹಿಂದಕ್ಕೆ ತಿರುಗು"ಎಂದು ಆಜ್ಞಾಪಿಸಿದೊಡನೆ, ಆ ಸೈನಿಕನು ತಕ್ಷಣವೇ ತಾನು ಇದುವರೆಗೆ ಹೋಗುತ್ತಿದ್ದ ದಿಕ್ಕಿಗೆ ಬೆನ್ನು ತೋರಿಸಿ, ತನ್ನ ಬೆನ್ನು ಇದ್ದ ದಿಕ್ಕಿನ ಕಡೆಗೆ ತಿರುಗುತ್ತಾನೆ. ಈ ನಿದರ್ಶನವು ಮಾನಸಾಂತರದ ಸ್ಪಷ್ಟ ಚಿತ್ರಣವನ್ನು ನಮಗೆ ನೀಡುತ್ತದೆ - ಹಿಂದಕ್ಕೆ ತಿರುಗುವುದು ಎಂದರೆ, ನಾವು ನಮ್ಮ ಮನಸ್ಸನ್ನು ಹಿಂದಕ್ಕೆ ತಿರುಗಿಸಬೇಕು. ಆಂಗ್ಲ ಮತ್ತು ಇತರ ಹಲವು ಭಾಷೆಗಳಲ್ಲಿ, ಮಾನಸಾಂತರವೆಂಬ ಪದವನ್ನು ಅಷ್ಟೊಂದು ಸ್ಪಷ್ಟವಾಗಿ ಭಾಷಾಂತರಿಸಲಾಗಿಲ್ಲ, ಆದರೆ ತಮಿಳು ಭಾಷೆಯಲ್ಲಿ ಇದನ್ನು ಬಹಳ ಚೆನ್ನಾಗಿ ಭಾಷಾಂತರಿಸಲಾಗಿದೆ. ತಮಿಳಿನಲ್ಲಿ ಮಾನಸಾಂತರವನ್ನು ’ಮನಸ್ಸನ್ನು ತಿರುಗಿಸುವುದು’ ಎಂದು ಉಲ್ಲೇಖಿಸಲಾಗಿದೆ. ಸ್ನಾನಿಕನಾದ ಯೋಹಾನನು ಇಸ್ರಾಯೇಲ್ಯರಿಗೆ ನಿಖರವಾಗಿ ಮನಸ್ಸಿನ ತಿರುಗುವಿಕೆಯನ್ನೇ ಬೋಧಿಸಿದನು.
ಇಸ್ರಾಯೇಲ್ಯರಿಗೆ ಹಲವಾರು ಲೌಕಿಕ ಸಂಗತಿಗಳು ವಾಗ್ದಾನಗಳಾಗಿ ಕೊಡಲ್ಪಟ್ಟಿದ್ದವು. ಹಳೆಯ ಒಡಂಬಡಿಕೆಯಲ್ಲಿ ದೈವಿಕ ಗುಣವನ್ನು ಗಳಿಸುವುದರ ಬಗ್ಗೆ ಅಥವಾ ಪರಲೋಕದಲ್ಲಿ ಅವರಿಗಾಗಿ ಒಂದು ಸೌಭಾಗ್ಯವನ್ನು ಕಾದಿರಿಸಿದ ಬಗ್ಗೆ ಅಥವಾ ಭೂಲೋಕದಲ್ಲಿ ಪರಲೋಕ ಜೀವಿತದ ಅನುಭವದ ಬಗ್ಗೆ, ಯಾವುದೇ ವಾಗ್ದಾನಗಳು ಅವರಿಗೆ ಕೊಡಲ್ಪಟ್ಟಿರಲಿಲ್ಲ. ಅವರಿಗೆ ಕೊಡಲ್ಪಟ್ಟ ವಾಗ್ದಾನಗಳೆಲ್ಲವು ಲೌಕಿಕವಾದವುಗಳಾಗಿದ್ದವು.
ಧರ್ಮೋಪದೇಶಕಾಂಡ 28ರಲ್ಲಿ, ನಾವು ಸ್ಪಷ್ಟವಾಗಿ ನೋಡುವುದು ಏನೆಂದರೆ ಅವರಿಗೆ ಕೊಡಲ್ಪಟ್ಟಿದ್ದ ವಾಗ್ದಾನಗಳು ಲೌಕಿಕ ಸಂಪತ್ತು, ಭೂಲೋಕದ ಸಮೃದ್ಧಿ, ದೈಹಿಕ ಆರೋಗ್ಯ, ಹೆಚ್ಚು ಮಕ್ಕಳ ಭಾಗ್ಯ, ಒಳ್ಳೆಯ ವ್ಯಾಪಾರ, ಒಳ್ಳೆಯ ಬೆಳೆ ಮತ್ತು ಪಶುಗಳಲ್ಲಿ ಹೆಚ್ಚಳ - ಇವೆಲ್ಲವು ಅವರ ಆಶೀರ್ವಾದಗಳಾಗಿದ್ದವು. ಅವರಿಗೆ ಅತ್ಯಧಿಕ ಸಮೃದ್ಧಿ ಹೊಂದುವುದು, ಸಾಲಗಳಿಂದ ಮುಕ್ತರಾಗಿರುವುದು, ಅವರ ಭೂಲೋಕದ ಶತ್ರುಗಳು ನಾಶಗೊಳ್ಳುವುದು, ಅವರು ಒಂದು ದೊಡ್ಡ ಜನಾಂಗವಾಗುವುದು, ಮತ್ತು ಕಾನಾನ್ಯದ ಭೂಪ್ರದೇಶವನ್ನು ಅವರು ಇಸ್ರಾಯೇಲ್ ದೇಶವಾಗಿ ಪಡೆಯುವ ವಾಗ್ದಾನಗಳು ಕೊಡಲ್ಪಟ್ಟಿದ್ದವು.
ಈ ಸಮಯದವರೆಗೂ ಇಸ್ರಾಯೇಲ್ಯರಿಗೆ ವಾಗ್ದಾನವಾಗಿ ಕೊಡಲ್ಪಟ್ಟ ಸಕಲ ಆಶೀರ್ವಾದಗಳು ಭೂಲೋಕಕ್ಕೆ ಸಂಬಂಧಪಟ್ಟವುಗಳಾಗಿದ್ದವು ಮತ್ತು ಅವರ ಮುಖವು ಯಾವಾಗಲೂ ಸಂಪೂರ್ಣವಾಗಿ ಪ್ರಾಪಂಚಿಕ ವಿಷಯಗಳ ಕಡೆಗೇ ತಿರುಗಿತ್ತು. ಆದರೆ ಸ್ನಾನಿಕನಾದ ಯೋಹಾನನು ಬಂದು ಅವರಿಗೆ, "ಈಗ ತಿರುಗಿಕೊಳ್ಳಿರಿ, ಇವೆಲ್ಲ ಸಂಗತಿಗಳಿಗೆ ಬೆನ್ನು ಮಾಡಿ ತಿರುಗಿಕೊಳ್ಳಿರಿ. ಇಹಲೋಕ ಸಂಗತಿಗಳನ್ನು ನೋಡುವುದನ್ನು ನಿಲ್ಲಿಸಿರಿ ಮತ್ತು ತಿರುಗಿಕೊಳ್ಳಿರಿ, ಏಕೆಂದರೆ ಈಗ ಒಂದು ನೂತನ ರಾಜ್ಯವು ಬರಲಿದೆ. ಅದು ಪರಲೋಕ ರಾಜ್ಯವಾಗಿದೆ, ಅದರಲ್ಲಿ ಈ ಲೌಕಿಕ ಅವಶ್ಯಕತೆಗಳು ಎರಡನೆಯ ಸ್ಥಾನಕ್ಕೆ ಹೋಗುತ್ತವೆ, ದೈಹಿಕ ಆರೋಗ್ಯವೂ ಸಹ ಎರಡನೆಯದಾಗುತ್ತದೆ. ಭೂಲೋಕದಲ್ಲಿನ ಸಮೃದ್ಧಿ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತದೆ, ಏಕೆಂದರೆ ದೇವರು ನಮ್ಮ ಲೌಕಿಕ ಅವಶ್ಯಕತೆಗಳನ್ನು ಪೂರೈಸುತ್ತಾರೆ. ತಿರುಗಿಕೊಳ್ಳಿರಿ, ಏಕೆಂದರೆ ಈಗ ದೇವರು ನಿಮಗೆ ಆತ್ಮಿಕ ಅಂದರೆ ಪರಲೋಕದ ಸಂಪತ್ತನ್ನು ಕೊಡಲಿದ್ದಾರೆ. ದೇವರು ನಿಮಗೆ ಆತ್ಮಿಕ ಮಕ್ಕಳನ್ನು ಕೊಡಲಿದ್ದಾರೆ, ಒಂದು ವೇಳೆ ಶರೀರದಿಂದ ಹುಟ್ಟುವಂತ ಮಕ್ಕಳನ್ನು ಕೊಡದೇ ಇರಬಹುದು. ಮೂಲಭೂತವಾಗಿ, ನೀನು ಸ್ವಾಧೀನ ಪಡಿಸಿಕೊಳ್ಳಲಿರುವುದು ಆತ್ಮಿಕವಾದ, ಪರಲೋಕದಲ್ಲಿರುವ ಆಸ್ತಿಯನ್ನು, ಭೂಲೋಕದ ಜಮೀನನ್ನಲ್ಲ." ಯೋಹಾನನು ಅವರಿಗೆ ತಿರುಗಿಕೊಳ್ಳಲು ಹೇಳಿದ್ದು ಏಕೆಂದರೆ, ಪರಲೋಕ ರಾಜ್ಯವು ಇನ್ನೂ ಬಂದಿರಲಿಲ್ಲ, ಮತ್ತು ಅದು ಬಹು ಸಮೀಪವಾಗಿತ್ತು. ಪಂಚಾಶತ್ತಮ ದಿನದಂದು ಅದು ಬರಲಿತ್ತು.
ಸ್ನಾನಿಕನಾದ ಯೋಹಾನನು ಯೇಸು ಕ್ರಿಸ್ತನಿಗೆ ಮುಂದೋಟಗಾರನಾಗಿದ್ದನು ಅಂದರೆ, ಆತನು ಯೇಸುಕ್ರಿಸ್ತನ ಬರುವಿಕೆಯ ಪೂರ್ವಸಿದ್ಧತೆಯನ್ನು ಮಾಡಿದನು; ದೇವರು ಮನುಷ್ಯರೊಂದಿಗೆ ಒಂದು ಹೊಸ ಒಡಂಬಡಿಕೆಯನ್ನು ಮಾಡಿಕೊಳ್ಳುವ ಅವಕಾಶವನ್ನು ಯೇಸುವು ಒದಗಿಸಿದರು; ಆ ಹೊಸ ಒಡಂಬಡಿಕೆಯು ಎಲ್ಲಾ ಜನಾಂಗಗಳಿಗೆ ದೇವರೊಂದಿಗೆ ತಂದೆ-ಮಕ್ಕಳ ಸಂಬಂಧವನ್ನು ಹೊಂದುವುದನ್ನು ಸಾಧ್ಯವಾಗಿಸಿತು. ನಾವು ಮತ್ತಾಯ 4:12-13 ರಲ್ಲಿ, ಹೆರೋದನು ಯೋಹಾನನನ್ನು ಸೆರೆಮನೆಗೆ ಹಾಕಿಸಿದ್ದಾಗಿ ಓದಿಕೊಳ್ಳುತ್ತೇವೆ. ಯೇಸುವು ಇದನ್ನು ಕೇಳಿದಾಗ, ತಾನು 30 ವರ್ಷಗಳು ಬೆಳೆದಿದ್ದ ಗಲಿಲಾಯ ಸೀಮೆಯ ನಜರೇತೆಂಬ ಊರನ್ನು ಬಿಟ್ಟು, ಸಮುದ್ರದ ಹತ್ತಿರವಿದ್ದ ಕೆಪೆರ್ನೌಮ್ ಎಂಬ ಊರಿನಲ್ಲಿ ಮನೆ ಮಾಡಿಕೊಂಡರು. ಅಂದಿನಿಂದ ಯೇಸುವು ನಿಖರವಾಗಿ ಸ್ನಾನಿಕನಾದ ಯೋಹಾನನು ಬೋಧಿಸಿದ್ದ ಸಂದೇಶವನ್ನೇ ಸಾರಿ ಹೇಳಲು ಪ್ರಾರಂಭಿಸಿದರು, "ದೇವರ ಕಡೆಗೆ ತಿರುಗಿಕೊಳ್ಳಿರಿ, ಪರಲೋಕರಾಜ್ಯವು ಸಮೀಪಿಸಿದೆ"(ಮತ್ತಾ. 4:17). ಒಂದು ರೀತಿಯಲ್ಲಿ ಹೇಳುವುದಾದರೆ, ಯೋಹಾನನು ರಿಲೇ ಓಟದ ಸ್ಪರ್ಧೆಯ ಮೊದಲ ಹಂತವನ್ನು ಓಡಿ ಮುಗಿಸಿದನು ಮತ್ತು ಓಟದ ದಂಡನ್ನು ಯೇಸುವಿಗೆ ಕೊಟ್ಟನು ಮತ್ತು ಯೇಸುವು ಯೋಹಾನನ ಆ ಸಂದೇಶವನ್ನೇ ಸಾರಿದರು - "ದೇವರ ಕಡೆಗೆ ತಿರುಗಿಕೊಳ್ಳಿರಿ." ಯೇಸುವು ಪರಲೋಕಕ್ಕೆ ಏರಿಹೋದಾಗ, ಅಪೊಸ್ತಲ ಪೇತ್ರನು ಯೇಸುವಿನ ಕೈಯಿಂದ ಓಟದ ದಂಡನ್ನು ತೆಗೆದುಕೊಂಡು, "ದೇವರ ಕಡೆಗೆ ತಿರುಗಿಕೊಳ್ಳಿರಿ," ಎಂಬುದಾಗಿ ಅದೇ ಸಂದೇಶವನ್ನು ಸಾರಿದನೆಂದು ನಾವು ಓದುತ್ತೇವೆ (ಅಪೋಸ್ತಲರ ಕೃತ್ಯಗಳು 2:38). ಅವನು ಪಂಚಾಶತ್ತಮ ಹಬ್ಬದ ದಿನದಂದು, "ದೇವರ ಕಡೆಗೆ ತಿರುಗಿಕೊಳ್ಳಿರಿ ಮತ್ತು ಆಗ ನೀವು ಪವಿತ್ರಾತ್ಮದಾನವನ್ನು ಹೊಂದುವಿರಿ," ಎಂದು ಸಾರಿದನು. ಆಗ, ಅಂತಿಮವಾಗಿ ಈ ಮಾತು ನೆರವೇರಿತು.
"ದೇವರ ರಾಜ್ಯವು ನಮ್ಮೊಳಗೆ ಇದೆ. ಅದು ಪವಿತ್ರಾತ್ಮನ ಮೂಲಕ ನಮ್ಮೊಳಗೆ ಬರುವಂತಹ ಕ್ರಿಸ್ತನ ಜೀವಿತವಾಗಿದೆ"
ಸ್ನಾನಿಕನಾದ ಯೋಹಾನನು ಹಾಗೂ ಯೇಸುವು ದೇವರ ರಾಜ್ಯವನ್ನು ಪ್ರಸ್ತಾಪಿಸಿದಾಗ, ಅದು ಬರಲಿದೆ ಅಥವಾ ಅದು ಹತ್ತಿರದಲ್ಲಿ ಇದೆಯೆಂದು ಹೇಳಿದರು. ಯೇಸುವು ಒಮ್ಮೆ ದೇವರ ರಾಜ್ಯವು ನಿಮ್ಮ ಮಧ್ಯದಲ್ಲಿದೆಯೆಂದು ಹೇಳಿದರು, ಅಂದರೆ ಸ್ವತಃ ಕ್ರಿಸ್ತನಾದ ತಾನು ಅಲ್ಲಿ ಇದ್ದುದರಿಂದ, ದೇವರ ರಾಜ್ಯವು ಆಗಲೇ ಅವರ ಸಂಗಡ ಇದೆಯೆಂಬ ಸತ್ಯಾಂಶ ಇದಾಗಿತ್ತು. ಆದರೆ ಅದು ಆತನ ಸುತ್ತಲಿದ್ದ ಜನರಲ್ಲಿ ಇರಲಿಲ್ಲ. ಆ ಸಂಗತಿಯು ಪಂಚಾಶತ್ತಮ ದಿನದಂದೇ, ಪವಿತ್ರಾತ್ಮನ ದೀಕ್ಷಾಸ್ನಾನಕ್ಕಾಗಿ ಕಾದು ನಿಂತಿದ್ದ ಆ 120 ಶಿಷ್ಯರ ನಡುವೆ ನೆರವೇರಲಿತ್ತು. ಆಗ ದೇವರ ಆತ್ಮವು ಅವರಲ್ಲಿ ತುಂಬಿತು ಮತ್ತು ದೇವರ ರಾಜ್ಯವು ಅವರ ನಡುವೆ ನೆಲೆಗೊಳ್ಳುವುದಕ್ಕಾಗಿ ಬಂದಿತು. ಆ ರಾಜ್ಯವನ್ನೇ ಅವರು ಸಾರಿದರು - ಪರಲೋಕದ ರಾಜ್ಯ (ಅಥವಾ ದೇವರ ರಾಜ್ಯ) - ಅದರಲ್ಲಿ ಪವಿತ್ರಾತ್ಮನು ನಮ್ಮೊಳಗೆ ವಾಸಿಸುತ್ತಾನೆ. ದುರದೃಷ್ಟವಶಾತ್, ಇಂದಿನ ಅನೇಕ ಕ್ರೈಸ್ತ ಬೋಧಕರು ಬೋಧಿಸುತ್ತಿರುವಂತೆ, ಇದು ಶಾರೀರಿಕ ಸ್ವಸ್ಥತೆ ಮತ್ತು ಭೌತಿಕ ಆಶೀರ್ವಾದಗಳ ಹೊರಗಣ ರಾಜ್ಯವಲ್ಲ. ನೇರವಾದ ಮಾತಿನಲ್ಲಿ ಹೇಳುವುದಾದರೆ, ಅದೊಂದು ವಂಚನೆಯಾಗಿದೆ, ಮತ್ತು ಅದು ದೇವರ ರಾಜ್ಯವಲ್ಲ.
ಹಾಗಾದರೆ, ನಿಖರವಾಗಿ ದೇವರ ರಾಜ್ಯವು ಏನಾಗಿದೆ? ರೋಮಾಪುರದವರಿಗೆ 14:17 ರಲ್ಲಿ ಹೀಗೆ ಹೇಳಲಾಗಿದೆ, "ದೇವರ ರಾಜ್ಯವು ತಿನ್ನುವುದೂ ಮತ್ತು ಕುಡಿಯುವುದೂ ಅಲ್ಲ." ಅದು ಲೌಕಿಕ ಸಮೃದ್ಧಿಯಾಗಲೀ, ಲೌಕಿಕವಾಗಿ ಗುಣಹೊಂದುವಿಕೆಯಾಗಲೀ ಅಲ್ಲ - ಅದು ಯಾವುದೋ ಲೌಕಿಕ ಆಶೀರ್ವಾದ ಅಲ್ಲವೇ ಅಲ್ಲ.
ರೋಮಾಪುರದವರಿಗೆ 14:17 ರ ಪ್ರಕಾರ, "ದೇವರ ರಾಜ್ಯವು ಪವಿತ್ರಾತ್ಮನಿಂದಾಗುವ ನೀತಿಯೂ, ಆನಂದವೂ ಮತ್ತು ಸಮಾಧಾನವೂ ಆಗಿದೆ".
ನೀತಿಯು: ಮೊದಲನೆಯದಾಗಿ, ನಾವು ಕ್ರಿಸ್ತನನ್ನು ನಮ್ಮ ರಕ್ಷಕನೂ ಕರ್ತನೂ ಆಗಿ ಸ್ವೀಕರಿಸಿಕೊಂಡಾಗ, ಸ್ವತಃ ದೇವರ ನೀತಿಯು ನಮಗೂ ಸಹ ಅನ್ವಯಿಸುತ್ತದೆ. ಆನಂತರ, ಪವಿತ್ರಾತ್ಮನ ಮೂಲಕ ಅದು ನಮ್ಮ ಹೃದಯದಲ್ಲಿ ಸುರಿಸಲ್ಪಡುತ್ತದೆ, ಮತ್ತು ಆಗ ದೇವರ ನೀತಿಯು ನಮ್ಮ ಜೀವಿತದಲ್ಲಿ ಪ್ರಕಟವಾಗುತ್ತದೆ.
ಆನಂದವು: ಪವಿತ್ರಾತ್ಮನು ನಮ್ಮಲ್ಲಿ ಇರುವಾಗ, ಆಂತರ್ಯದ ಆನಂದವು ನಮ್ಮನ್ನು ಎಲ್ಲಾ ನಿರಾಶೆಗಳಿಂದಲೂ ಮತ್ತು ಖಿನ್ನತೆ, ನಿರುತ್ಸಾಹದಿಂದಲೂ ಸಂಪೂರ್ಣವಾಗಿ ಬಿಡುಗಡೆಗೊಳಿಸುತ್ತದೆ.
ಸಮಾಧಾನವು: ಪವಿತ್ರಾತ್ಮನಿಂದ ಉಂಟಾಗುವ ಮನಸ್ಸಿನೊಳಗಿನ ಸಮಾಧಾನವು, ಪ್ರಧಾನವಾಗಿ ಎಲ್ಲಾ ಚಿಂತೆ, ಭಯ, ಒತ್ತಡ ಹಾಗೂ ಉದ್ವೇಗ, ನಿರಾಶೆ, ಬೇಸರ, ಕೆಟ್ಟ ಮನಸ್ಥಿತಿ ಇತ್ಯಾದಿಗಳಿಂದ ಬಿಡುಗಡೆಗೊಳಿಸುವುದು ಮಾತ್ರವಲ್ಲದೆ, ಹೊರಗಿನ ಸಮಾಧಾನವು, ಅಂದರೆ ನಮ್ಮ ವ್ಯವಹಾರಗಳಲ್ಲಿ ನಾವು ಎಲ್ಲಾ ಮನುಷ್ಯರೊಂದಿಗೆ ಸಮಾಧಾನವಾಗಿದ್ದು, ಜನರ ಅಥವಾ ಪರಿಸ್ಥಿತಿಗಳ ವಿರುದ್ಧ ಹೋರಾಡಲು ಅಥವಾ ಜಗಳವಾಡಲು ನಿರಾಕರಿಸುವಂಥದ್ದಾಗಿದೆ.
ಹಾಗಾಗಿ ಇದೇ ದೇವರ ರಾಜ್ಯವಾಗಿದೆ. ಆದು ನಮ್ಮೊಳಗಿನ ಸ್ಥಿತಿಯಾಗಿದೆ - ದೇವರ ರಾಜ್ಯವು ನಮ್ಮೊಳಗೇ ಇದೆ. ಪವಿತ್ರಾತ್ಮನು ಯೇಸುವಿನ ಈ ಜೀವಿತವು ನಮ್ಮೊಳಗೆ ಬರುವಂತೆ ಮಾಡುತ್ತಾನೆ. ಇದು ಭೂಲೋಕದಲ್ಲಿ, ನಮ್ಮ ಹೃದಯಗಳಲ್ಲಿ, ಪರಲೋಕದ ಜೀವಿತವನ್ನು ಜೀವಿಸುವುದಾಗಿದೆ.
ನಾವು ಮುಂದಕ್ಕೆ ಸಾಗುವಾಗ, ಸ್ನಾನಿಕನಾದ ಯೋಹಾನನ ಮಾತನ್ನು ಗಮನಿಸೋಣ: "ನಾವು ಭೂಲೋಕದ ಸಂಗತಿಗಳಲ್ಲೇ ಮನಸ್ಸಿಡದೆ, ಅವುಗಳ ಕಡೆಗೆ ಬೆನ್ನು ತೋರಿಸುವವರಾಗೋಣ, ಯಾಕೆಂದರೆ ಈಗ ಒಂದು ಹೊಸ ರಾಜ್ಯವು ಬರಲಿದೆ; ಅಲ್ಲಿ ಲೌಕಿಕ ಅವಶ್ಯಕತೆಗಳು ಪ್ರಾಮುಖ್ಯವಾಗಿರುವುದಿಲ್ಲ, ದೈಹಿಕ ಆರೋಗ್ಯವೂ ಸಹ ಎರಡನೆಯದಾಗಿರುತ್ತದೆ. ಲೌಕಿಕ ಸಮೃದ್ಧಿಯು ಮುಖ್ಯವಾಗಿರುವುದಿಲ್ಲ, ಯಾಕೆಂದರೆ ನಮ್ಮ ಲೌಕಿಕ ಅವಶ್ಯಕತೆಗಳನ್ನು ದೇವರು ಪೂರೈಸುತ್ತಾರೆ. ಹಿಂದಕ್ಕೆ ತಿರುಗಿಕೊಳ್ಳಿ - ನಿಮ್ಮ ಲೌಕಿಕ ಮನಸ್ಸನ್ನು ಬದಲಾಯಿಸಿಕೊಳ್ಳಿರಿ - ಯಾಕೆಂದರೆ ಈಗ ದೇವರು ನಿಮಗೆ ಆತ್ಮಿಕ ಐಶ್ವರ್ಯವನ್ನು ಅನುಗ್ರಹಿಸಲಿದ್ದಾರೆ.
ನಾವು ದೇವರ ರಾಜ್ಯವನ್ನು ಪ್ರವೇಶಿಸೋಣ.