ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ
WFTW Body: 

ನಾವು ಮತ್ತಾಯನು ಬರೆದ ಸುವಾರ್ತೆಯಲ್ಲಿ ನೋಡುವ ಒಂದು ಪದಗುಚ್ಛ ಅಥವಾ ವಾಕ್ಯಾಂಶ, ಬೇರೆಲ್ಲಿಯೂ ಕಾಣ ಸಿಗದಂಥದ್ದು, ಯಾವುದೆಂದರೆ - "ಪರಲೋಕ ರಾಜ್ಯ". ಇದು ಈ ಸುವಾರ್ತೆಯಲ್ಲಿ 31 ಬಾರಿ ಕಾಣಸಿಗುತ್ತದೆ. ಈ ಪುಸ್ತಕವನ್ನು ಪವಿತ್ರಾತ್ಮನು ಪ್ರೇರೇಪಿಸಿದ್ದರಿಂದ, ಆತನು ಈ ಹೇಳಿಕೆಯನ್ನು ಇಲ್ಲಿ ಇಷ್ಟು ಹೆಚ್ಚಾಗಿ ಯಾಕೆ ಉಪಯೋಗಿಸಿದ್ದಕ್ಕೆ ಏನೋ ಕಾರಣ ಇರಬೇಕು. ಸ್ನಾನಿಕನಾದ ಯೋಹಾನನು, "ಪರಲೋಕ ರಾಜ್ಯವು ಸಮೀಪವಾಯಿತು; ದೇವರ ಕಡೆಗೆ ತಿರುಗಿಕೊಳ್ಳಿರಿ" ಎಂದು ಬೋಧಿಸುತ್ತಾ ಬಂದನು (ಮತ್ತಾಯ 3:2). ಆತನ ಸಮಯದ ನಂತರ, ಯೇಸುವು ಇದೇ ಸಂದೇಶವನ್ನು ಮತ್ತಾಯ 4:17ರಲ್ಲಿ ಬೋಧಿಸಿದರು. ಯೇಸುವು ಪರ್ವತದ ಮೇಲೆ ಪ್ರಸಂಗವನ್ನು ಪ್ರಾರಂಭಿಸಿದಾಗ ಹೇಳಿದ ಮೊದಲ ಪದಗಳು ಇವಾಗಿವೆ - "ಆತ್ಮದಲ್ಲಿ ಬಡವರಾಗಿರುವವರು ಧನ್ಯರು; ಪರಲೋಕ ರಾಜ್ಯವು ಅವರದು" (ಮತ್ತಾಯ 5:3) . ಹಾಗಾಗಿ ಹೊಸ ಒಡಂಬಡಿಕೆಯ ಪ್ರಾರಂಭದಿಂದಲೂ "ಪರಲೋಕಕ್ಕೆ" ಮಹತ್ವವನ್ನು ಕೊಟ್ಟಿರುವದನ್ನು ನಾವು ನೋಡುತ್ತೇವೆ. ಪರ್ವತ ಪ್ರಸಂಗದಲ್ಲೇ "ಪರಲೋಕ" ಎಂಬ ಪದವು 17 ಬಾರಿ ನಮೂದಿಸಲ್ಪಟ್ಟಿದೆ.

ಇಸ್ರಾಯೇಲ್ಯರೊಟ್ಟಿಗೆ ದೇವರು ಮಾಡಿದಂತ ಹಳೆಯ ಒಡಂಬಡಿಕೆಯು ಇಹಲೋಕದ ಮೇಲೆ ಇರುವಂತ ಒಂದು ರಾಜ್ಯಕ್ಕೆ ಸಂಬಂಧಪಟ್ಟದ್ದಾಗಿತ್ತು. ಇಸ್ರಾಯೇಲ್ಯರಿಗೆ ಕಾನಾನ್ ದೇಶವು ಕೊಡಲ್ಪಟ್ಟಿತು ಮತ್ತು ಲೌಕಿಕ ಉನ್ನತಿ, ದೈಹಿಕ ಆರೋಗ್ಯ ಮತ್ತು ಇತರೆ ಇಹಲೋಕದ ಲಾಭಗಳು ವಾಗ್ದಾನವಾಗಿ ಕೊಡಲ್ಪಟ್ಟವು. ನಂತರದಲ್ಲಿ, ಅವರು ಇಹಲೋಕದ ರಾಜನನ್ನು, ಇಹಲೋಕದ ಐಶ್ವರ್ಯವನ್ನು ಮತ್ತು ಇತರೆ ಇಹಲೋಕದ ಆಶೀರ್ವಾದಗಳನ್ನು ಹೊಂದಿದರು. ಆದರೆ ಯೇಸುವು ಬಂದದ್ದು ಮನುಷ್ಯನನ್ನು ಸಂಪೂರ್ಣವಾಗಿ ಬೇರೊಂದು ಮಟ್ಟಕ್ಕೆ ಎತ್ತಲಿಕ್ಕಾಗಿ - ಅದು ಪರಲೋಕಕ್ಕೆ. ಹಾಗಾಗಿ ನಾವು ಹೊಸ ಒಡಂಬಡಿಕೆಯನ್ನು ಓದುವಾಗ, ಶುಭ ವಾರ್ತೆಯ ಕುರಿತಾಗಿ ನೆನಪಿಟ್ಟುಕೊಳ್ಳಬೇಕಾದ ವಿಷಯ, ಈ ಶುಭ ವಾರ್ತೆಯು ಪ್ರಾಥಮಿಕವಾಗಿ ಪರಲೋಕಕ್ಕೆ ಸಂಬಂಧಪಟ್ಟದ್ದಾಗಿದೆಯೇ ಹೊರತು ಇಹಲೋಕಕ್ಕೆ ಸಂಬಂಧಪಟ್ಟಿಲ್ಲ. ನಾವು ಇದನ್ನು ಅರ್ಥ ಮಾಡಿಕೊಂಡಾಗ, ಇಂದು ಕ್ರೈಸ್ತತ್ವದಲ್ಲಿ ಕಾಣಿಸುವ ಹೆಚ್ಚಿನ ಗೊಂದಲಗಳಿಂದ ನಾವು ಪಾರಾಗುತ್ತೇವೆ.

ನಾವು ”ರಕ್ಷಣೆ” ಹೊಂದಿದ್ದೇವೆ ಎಂಬುದಾಗಿ ಹೇಳಿಕೊಳ್ಳುತ್ತೇವೆ. ವಿಶ್ವಾಸಿಗಳ ನಡುವೆ ಇದೊಂದು ಸಾಮಾನ್ಯ ಹೇಳಿಕೆಯಾಗಿದೆ. ಆದರೆ ನಾವು ಯಾವುದರಿಂದ ”ರಕ್ಷಣೆ” ಹೊಂದಿದ್ದೇವೆ? ನಾವು ಇಹಲೋಕದ ಮಾರ್ಗೋಪಾಯಗಳಿಂದ ರಕ್ಷಣೆ ಹೊಂದಿದ್ದೇವಾ ಅಥವಾ ಕೇವಲ ನಮ್ಮ ಪಾಪಗಳಿಂದಷ್ಟೇ ಕ್ಷಮಾಪಣೆಯನ್ನು ಹೊಂದಿದ್ದೇವಾ? ನಾವು ಇಹಲೋಕದ ಸಂಗತಿಗಳಲ್ಲಿನ ಆಸಕ್ತಿಯಿಂದ, ಇಹಲೋಕದ ದೃಷ್ಟಿಕೋನದಿಂದ ಜನರನ್ನು ಮತ್ತು ಪರಿಸ್ಥಿತಿಗಳನ್ನು ನೋಡುವಂತ ಮಾರ್ಗದಿಂದ, ಇಹಲೋಕದ ನಡವಳಿಕೆಯಿಂದ ರಕ್ಷಣೆ ಹೊಂದಿದ್ದೇವಾ?

ಹೊಸ ಒಡಂಬಡಿಕೆಯು ಪರಲೋಕ ರಾಜ್ಯದ ಸುವಾರ್ತೆಯಾಗಿದೆ. ಜಗತ್ತಿನ ಸುತ್ತ ಇರುವ ಅನೇಕ ಜನರು ಅಮೇರಿಕದ ನಾಗರಿಕತ್ವವನ್ನು ಪಡೆದುಕೊಳ್ಳಲು ಕಾತುರರಾಗಿರುತ್ತಾರೆ, ಏಕೆಂದರೆ ಅಮೇರಿಕವು ವಾಸಿಸಲಿಕ್ಕೆ ಆಕರ್ಷಣೀಯ ಸ್ಥಳವಾಗಿದೆ. ಆದರೆ ಯಾರು ಸಹ ಹಿಂದುಳಿದ ಆಫ್ರೀಕಾದ ಯಾವುದೋ ಒಂದು ದೇಶದ ನಾಗರೀಕತ್ವವನ್ನು ಪಡೆದುಕೊಳ್ಳಲು ಆಸಕ್ತಿಯನ್ನು ಹೊಂದಿಲ್ಲ. ಹಾಗಿದ್ದಲ್ಲಿ, ಯಾಕೆ ಈ ಲೋಕದ ಅನೇಕ ಜನರು ಎಲ್ಲದಕ್ಕಿಂತ ಹೆಚ್ಚು ಆಕರ್ಷಣೀಯ ಸ್ಥಳವಾದ ಪರಲೋಕದ ನಾಗರೀಕತ್ವವನ್ನು ಪಡೆದುಕೊಳ್ಳುವಲ್ಲಿ ಆಸಕ್ತಿಯನ್ನು ಹೊಂದಿಲ್ಲ? ಯಾಕೆಂದರೆ ಇವರು ಪರಲೋಕದ ನಾಗರೀಕತ್ವದ ನಿಜವಾದ ಮಹಿಮೆ ಏನೆಂದು ನೋಡಿಲ್ಲ. ಮತ್ತು ಇದಕ್ಕೆ ಕಾರಣ, ಸುವಾರ್ತೆಯು ಸರಿಯಾಗಿ ಸಾರಲ್ಪಟ್ಟಿಲ್ಲ. ಸಭೆಯಲ್ಲಿ ಕೂತಿರುವ ”ವಿಶ್ವಾಸಿ ಎಂಬ ಹೆಸರನ್ನು ಹೊಂದಿರುವ” ಅನೇಕ ಜನರು, ಪರಲೋಕ ರಾಜ್ಯದಲ್ಲಿ ಆಸಕ್ತಿಯನ್ನು ಹೊಂದಿಲ್ಲ. ಅವರು ಸತ್ತ ನಂತರ ಪರಲೋಕಕ್ಕೆ ಹೋಗಲು ಬಯಸುತ್ತಾರೆ, ಆದರೆ ಅವರಿಗೆ ಈಗ ಪರಲೋಕ ರಾಜ್ಯ ಬೇಕಿಲ್ಲ.

”ರಾಜ್ಯ” ಎಂಬ ಪದವನ್ನು ನಾವು ಇಂದು ಸ್ಪಷ್ಟವಾಗಿ ಅರ್ಥ ಮಾಡಿಕೊಂಡಿಲ್ಲ. ಏಕೆಂದರೆ ಪ್ರಸ್ತುತ ಸಮಯದಲ್ಲಿ ಕೆಲವೇ ರಾಜರು ರಾಜ್ಯಗಳನ್ನು ಆಳುತ್ತಿದ್ದಾರೆ, ಮೊದಲ ಶತಮಾನದಲ್ಲಿ ಇದ್ದ ಹಾಗೇ ಈಗ ಇಲ್ಲ. ಇದಕ್ಕೆ ನಾವು ಉಪಯೋಗಿಸುವ ಸರಿಯಾದ ಪದ ”ಸರ್ಕಾರ”. ನಾವು ”ಭಾರತ ಸರ್ಕಾರ” ಎಂಬುದಾಗಿ ಮಾತನಾಡುತ್ತೇವೆಯೇ ಹೊರತು, ”ಭಾರತ ರಾಜ್ಯ” ಎಂಬುದಾಗಿ ಉಪಯೋಗಿಸುವುದಿಲ್ಲ.

ಪರಲೋಕ ರಾಜ್ಯದ ಅರ್ಥ ಇದೇ ಆಗಿದೆ - ಪರಲೋಕ ಸರ್ಕಾರ. ಇದರ ಅರ್ಥ ದೇವರು ನಿಮ್ಮ ಜೀವಿತದ ಆಳ್ವಿಕೆ ನಡೆಸುತ್ತಿದ್ದಾರೆ ಎಂಬುದಾಗಿ. ನೀವು ಭಾರತದಲ್ಲಿ ನೆಲೆಸಿರುವಾಗ, ಭಾರತ ಸರ್ಕಾರದ ನಿಯಮಗಳಿಗೆ ಒಳಪಟ್ಟು ಜೀವಿಸುವವರಾಗಿರುತ್ತೀರಿ. ನೀವು ಪರಲೋಕ ಸರ್ಕಾರಕ್ಕೆ ಬರುವಾಗ, ಪರಲೋಕ ಸರ್ಕಾರದ ನಿಯಮಗಳ ಕೆಳಗೆ ಜೀವಿಸುವವರಾಗಿರಬೇಕು. ನೀವು ನಿಮ್ಮ ನಾಗರೀಕತ್ವವನ್ನು ಇಹಲೋಕದಿಂದ ಪರಲೋಕಕ್ಕೆ ಬದಲಾಯಿಸಿಕೊಂಡಿದ್ದೀರಾ?

ರಕ್ಷಣೆಯ ಅರ್ಥ - ಇಹಲೋಕದ ರಾಜ್ಯದಿಂದ ಪರಲೋಕ ರಾಜ್ಯಕ್ಕೆ ರಕ್ಷಿಸಲ್ಪಡುವುದಾಗಿದೆ. ಆದರೆ ಅನೇಕ ವಿಶ್ವಾಸಿಗಳ ರಕ್ಷಣೆಯು ಅಷ್ಟು ದೂರ ಹೋಗಿಲ್ಲ. ಅವರು ಸತ್ತಾಗ ಪರಲೋಕಕ್ಕೆ ಹೋಗಬೇಕು ಅಷ್ಟೇ. ಆದರೆ ಅವರು ಪ್ರಸ್ತುತ ಜೀವಿಸುವಾಗ ಪರಲೋಕದ ನಿಯಮಗಳ ಕೆಳಗೆ ಜೀವಿಸಲು ಇಷ್ಟಪಡುವುದಿಲ್ಲ. ಅದಕ್ಕಾಗಿ ಅವರ ಕ್ರೈಸ್ತ ಜೀವಿತ ತುಂಬಾ ಆಳವಿಲ್ಲದ್ದಾಗಿದೆ.

ಬೇರೆ ಸುವಾರ್ತೆಗಳಲ್ಲಿ ಕಾಣಸಿಗದಿರುವ ಇನ್ನೊಂದು ಪದವು ಮತ್ತಾಯದಲ್ಲಿ ಉಪಯೋಗಿಸಲ್ಪಟ್ಟಿದೆ. ಅದು ”ಸಭೆ” ಎಂಬ ಪದವಾಗಿದೆ. ಅದು ಅಲ್ಲಿ ಮೂರು ಬಾರಿ ನಮೂದಿಸಲ್ಪಟ್ಟಿದೆ, ಮತ್ತಾಯ 16:18 ರಲ್ಲಿ ಒಂದು ಬಾರಿ ಮತ್ತು ಮತ್ತಾಯ 18:17 ರಲ್ಲಿ ಎರಡು ಬಾರಿ. ಈ ಪದವನ್ನು ನಾವು ಈಗ ಪರಿಗಣಿಸುತ್ತಿರುವ ಪದದೊಂದಿಗೆ ಜೋಡಿಸಿದಾಗ ಕಂಡುಕೊಳ್ಳುವುದು ಏನೆಂದರೆ, ”ಸಭೆಯು” ಭೂಲೋಕದಲ್ಲಿ ಇರಬೇಕಾದ ಪರಲೋಕ ರಾಜ್ಯವಾಗಿದೆ. ಪರಲೋಕದಲ್ಲಿ ಎಲ್ಲರೂ ಪರಲೋಕದ ನಿಯಮಗಳಿಗೆ ಒಳಪಟ್ಟಿರುತ್ತಾರೆ, ಅದು ದೇವರ ನಿಯಮ, ಆದರೆ ಇಹಲೋಕದಲ್ಲಿ ತುಂಬಾ ವ್ಯತ್ಯಾಸವಾಗಿದೆ. ಪ್ರತಿಯೊಬ್ಬರು ತಮ್ಮ ಸ್ವಂತ ಜೀವಿತವನ್ನು ತಮ್ಮ ಇಷ್ಟದ ಪ್ರಕಾರ ಜೀವಿಸುತ್ತಾರೆ. ಇಂತಹ ಜನರ ಮಧ್ಯದಲ್ಲಿ, ದೇವರು ಜನರ ಒಂದು ಗುಂಪನ್ನು ಹೊಂದಿದ್ದಾನೆ, ಇವರು ತಮ್ಮ ಸ್ವಂತ ಜೀವಿತಗಳನ್ನು ತಮ್ಮ ಇಷ್ಟದ ಪ್ರಕಾರ ಜೀವಿಸುವದಿಲ್ಲ. ಅವರು ಪರಲೋಕ ಸರ್ಕಾರದ ಕೆಳಗೆ ಇರುವಂತವರಾಗಿದ್ದಾರೆ.

ಇದೇ ಸಭೆಯಾಗಿದೆ. ಲೋಕದಲ್ಲಿರುವ ಸಭೆಗಳು ಸಂಪೂರ್ಣವಾಗಿ ಪರಲೋಕ ಸರ್ಕಾರದ ಅಧಿಕಾರದ ಕೆಳಗೆ ಜೀವಿಸುತ್ತಾ ಇವೆಯಾ? ಇಲ್ಲ. ಈ ವಿಷಯವು ಅನೇಕ ವರ್ಷಗಳಿಂದ ನನ್ನ ಹೃದಯವನ್ನು ದು:ಖ ಪಡಿಸಿದೆ. ಇದು ನಿಮ್ಮ ಹೃದಯವನ್ನು ಸಹ ದು:ಖಪಡಿಸುತ್ತದೆ ಎಂಬುದಾಗಿ ನಾನು ನಿರೀಕ್ಷಿಸುತ್ತೇನೆ. ನಾನು ಇನ್ನೊಬ್ಬರನ್ನು ದೂಷಿಸುತ್ತಿಲ್ಲ. ”ಅವರು ಆ ರೀತಿ ಇದ್ದಾರೆ” ಎಂಬುದಾಗಿ ನಾನು ಹೇಳುತ್ತಿಲ್ಲ. ”ನಾವು ಆ ರೀತಿಯಾಗಿ ಇದ್ದೇವೆ" ಎಂದು ಹೇಳುತ್ತಿದ್ದೇನೆ. ಸಭೆಯಾಗಿರುವ ನಾವು ಪರಲೋಕದ ಆಳ್ವಿಕೆಗೆ ಅಧೀನವಾಗಿ ಜೀವಿಸುವ ಆಶೀರ್ವಾದಗಳನ್ನು ಲೋಕಕ್ಕೆ ತೋರಿಸುವುದರಲ್ಲಿ ವಿಫಲರಾಗಿದ್ದೇವೆ. ಹಾಗಾಗಿ ನಾನು, ”ಕರ್ತನೇ, ನಮ್ಮ ವಿಫಲತೆಯನ್ನು ಕ್ಷಮಿಸು. ದೇವರ ಆಳ್ವಿಕೆಗೆ ಅಧೀನರಾಗಿ ಜೀವಿಸುವುದರ ಅರ್ಥವನ್ನು ಲೋಕಕ್ಕೆ ತೋರಿಸಲು ನಮಗೆ ಸಹಾಯ ಮಾಡು,” ಎಂದು ಪ್ರಾರ್ಥಿಸುತ್ತೇನೆ.