WFTW Body: 

ದೇವರ ದೃಷ್ಟಿಕೋನದಿಂದ ನೋಡುವುದಾದಲ್ಲಿ, ಭೂಲೋಕದಲ್ಲಿ ಕೊನೆಯ ಸ್ಥಾನದಲ್ಲಿ ಇರುವಂತಹ ಅನೇಕರು ಆತನ ದೃಷ್ಟಿಯಲ್ಲಿ ಮೊದಲಿಗರಾಗಿರುತ್ತಾರೆ.

ಯೇಸುವು ಹೇಳಿದ ಏಳು ಸಾಮ್ಯಗಳ ಮುಖಾಂತರ ಕಂಡು ಬರುವಂತ ವಿಸ್ಮಯಕಾರಿ ಸತ್ಯಾಂಶ ಇದಾಗಿದೆ:

1) ಮತ್ತಾಯನು 20:1ರಲ್ಲಿ: ಕೂಲಿ ಆಳುಗಳು ಹನ್ನೊಂದನೇ ತಾಸಿಗೆ ಬರುತ್ತಾರೆ, ದಿನದ 90% ಸಮಯವನ್ನು ವ್ಯರ್ಥ ಮಾಡಿದ್ದರೂ (12 ಗಂಟೆಗಳಲ್ಲಿ ಹನ್ನೊಂದನ್ನು), ಅವರಿಗೆ ಮೊದಲು ಕೂಲಿ ಕೊಡಲ್ಪಟ್ಟಿತು.

2) ಲೂಕನು 15:22ರಲ್ಲಿ : ಕಿರಿಯ ಮಗನು ತನ್ನ ತಂದೆಯ ಸಂಪತ್ತಿನ 50% ಭಾಗವನ್ನು ಹಾಳು ಮಾಡಿ ತನ್ನ ತಂದೆಗೆ ಕೆಟ್ಟ ಹೆಸರನ್ನು ತಂದರೂ ಸಹ, ಆತನಿಗೆ ತಂದೆಯ "ಶ್ರೇಷ್ಠವಾದ ನಿಲುವಂಗಿ" ಮತ್ತು "ಉಂಗುರ" ಇವುಗಳು ಸಿಕ್ಕಿದವು - ಸ್ವ-ನೀತಿಯನ್ನು ಹೊಂದಿದ್ದ ಹಿರಿಯ ಮಗನಿಗೆ ಇವೆರಡೂ ಸಿಗಲಿಲ್ಲ.

3)ಲೂಕನು 7:41ರಲ್ಲಿ : ಹೆಚ್ಚು ಪಾಪ ಮಾಡಿದ್ದಾತನು (ಹೆಚ್ಚು ಕ್ಷಮಿಸಲ್ಪಟ್ಟವನು) ಹೆಚ್ಚು ಪ್ರೀತಿಯನ್ನು ತೋರಿಸಿದನು (ಆ ಮೂಲಕ ಕರ್ತನಿಗೆ ಹತ್ತಿರವಾದನು).

4) ಮತ್ತಾಯನು 21:28ರಲ್ಲಿ : ತಂದೆಗೆ ಮೊದಲು ಅವಿಧೇಯನಾಗಿದ್ದ ಮಗನು ಕೊನೆಗೆ ತನ್ನ ತಂದೆಯ ಚಿತ್ತಕ್ಕೆ ಅನುಸಾರವಾಗಿ ನಡೆದನು, ಆದರೆ ಆತನ ಸಹೋದರನು ಹಾಗೆ ನಡೆಯಲಿಲ್ಲ.

5) ಲೂಕನು 15:3ರಲ್ಲಿ : ಕಳೆದು ಹೋದ ಕುರಿಯು ಕುರುಬನಿಗೆ ಇತರ ಕುರಿಗಳಿಗಿಂತ ಹೆಚ್ಚು ಹತ್ತಿರವಾಯಿತು - ಆತನು ಅದನ್ನು ತನ್ನ ಹೆಗಲಿನ ಮೇಲೆ ಎತ್ತಿಕೊಂಡು ಹೋದನು.

6) ಲೂಕನು 14:10ರಲ್ಲಿ : ಮದುವೆಯ ಔತಣದಲ್ಲಿ ಕಡೆಯ ಸ್ಥಾನದಲ್ಲಿ ಕುಳಿತಿದ್ದವನಿಗೆ ಅತಿ ಪ್ರಮುಖ ಸ್ಥಾನವನ್ನು ನೀಡಲಾಯಿತು.

7) ಲೂಕನು 18:9ರಲ್ಲಿ : ವಂಚಕನಾಗಿದ್ದ ಸುಂಕದವನು ಫರಿಸಾಯನಿಗಿಂತ ಬಹಳ ಕೆಟ್ಟವನಾಗಿದ್ದರೂ, ಆತನು ಫರಿಸಾಯನಿಗಿಂತ ಉನ್ನತ ಮಟ್ಟವನ್ನು ತಲಪಿದನು - ಏಕೆಂದರೆ ದೇವರು ಅವನನ್ನು ನೀತಿವಂತನೆಂದು ಘೋಷಿಸಿದರು.

ಈ ಎಲ್ಲಾ ಸಾಮ್ಯಗಳು ಒಂದು ಸಂದೇಶವನ್ನು ಹೊತ್ತು ತರುತ್ತವೆ - "ಜೀವಿತವನ್ನು ಕೆಟ್ಟದಾಗಿ ಪ್ರಾರಂಭಿಸಿದ ಅನೇಕರು ಅಂತಿಮವಾಗಿ ಬಹುಮಾನವನ್ನು ಗೆಲ್ಲುತ್ತಾರೆ" ಎಂಬುದಾಗಿ.

"ಓಟದಲ್ಲಿ ಮೊದಲ ಸ್ಥಾನವನ್ನು ಪಡೆಯಬೇಕೆಂದು ಓಡಿರಿ"

ನಾವು ಓಟವನ್ನು ಹೇಗೆ ಮುಗಿಸುತ್ತೇವೆ ಎಂಬುದು ಮುಖ್ಯವಾದ ವಿಷಯವಾಗುತ್ತದೆ ಮತ್ತು ಅದನ್ನು ನಾವು ಹೇಗೆ ಪ್ರಾರಂಭಿಸಿದೆವು ಎನ್ನುವುದು ಮುಖ್ಯವಲ್ಲ. ಯಾರು ತಮ್ಮ ಜೀವಿತದಲ್ಲಿ ನಿರುತ್ಸಾಹಗೊಳ್ಳುವುದಿಲ್ಲವೋ ಮತ್ತು ತಾವು ಆರಂಭದಲ್ಲಿ ಕೆಟ್ಟ ರೀತಿಯಲ್ಲಿ ಜೀವಿಸಿದ್ದಕ್ಕಾಗಿ (ಪೌಲನ ಹಾಗೆ) ತಮ್ಮನ್ನ ತಾವು ಖಂಡಿಸಿಕೊಳ್ಳುವುದಿಲ್ಲವೋ, ಅಂತವರು ಜೀವಿತವನ್ನು ಉತ್ತಮವಾಗಿ ಆರಂಭಿಸಿದ ಇತರ ಅನೇಕರಿಗಿಂತ ಮುಂದೆ ಸಾಗುವರು. ಯಾರು ತಮ್ಮ ಜೀವಿತವನ್ನು ಅಸ್ತವ್ಯಸ್ತ ಮಾಡಿಕೊಂಡಿರುತ್ತಾರೋ ಅಂತಹ ಪ್ರತಿಯೊಬ್ಬರನ್ನೂ ಇದು ಪ್ರೋತ್ಸಾಹಿಸಬೇಕು, ಅದು ಯಾವ ರೀತಿ ಅಂದರೆ, ಅವರು ಎಂದಿಗೂ ’ನಿರುತ್ಸಾಹಗೊಳ್ಳದೇ’ ಓಟದಲ್ಲಿ ಹೆಚ್ಚಿನ ಉತ್ಸಾಹದಿಂದ ಓಡಬೇಕು.

ಪೌಲನು ಯೇಸುವನ್ನು ಭೇಟಿಯಾಗುವ ಮೊದಲು, ಪೌಲನ 30 ವರ್ಷಗಳ ಜೀವಿತವು ಅಸ್ತವ್ಯಸ್ತತೆಯ ಜೀವಿತವಾಗಿತ್ತು. ಆದರೆ ತದನಂತರ "ಒಂದೇ ಗುರಿಯನ್ನು" ಇರಿಸಿಕೊಳ್ಳುವುದಾಗಿ ಆತನು ಈ ರೀತಿ ನಿರ್ಧರಿಸಿದನು: ಯೇಸುವಿನ ಹಾಗೆ ಆಗುವುದಕ್ಕಾಗಿ ಒತ್ತುಕೊಡುವುದು- ಅಂದರೆ, ತನ್ನ ಹಿಂದಿನ ಎಲ್ಲಾ ಸೋಲುಗಳನ್ನು ಮರೆತುಬಿಟ್ಟು, ಭೂಮಿಯ ಮೇಲೆ ತನಗೆ ಉಳಿದಿದ್ದ ಅಲ್ಪಾವಧಿಯಲ್ಲಿ ಯೇಸುವಿನಂತೆ ಆಗುವುದನ್ನು ಮಾತ್ರ ಎದುರು ನೋಡುತ್ತಾ ಮುಂದೆ ಸಾಗುವುದು (ಫಿಲಿ. 3:13,14). ಆತನು ಮಾಡಬೇಕೆಂದು ದೇವರು ಕರೆ ನೀಡಿದ್ದ ಸೇವೆಯನ್ನು ಪೂರೈಸುವುದು ಸಹ ಇದರಲ್ಲಿ ಸೇರಿತ್ತು. ಪೌಲನು ತನ್ನ ಜೀವಿತದ ಕೊನೆಯಲ್ಲಿ ಹೀಗೆ ಹೇಳಿದನು: "ನಾನು ನನ್ನ ಓಟವನ್ನು ಕಡೆಗಾಣಿಸಿದ್ದೇನೆ, ಮತ್ತು ಪರಲೋಕದಲ್ಲಿ ನನಗೆ ಒಂದು ಜಯಮಾಲೆಯು ಸಿದ್ಧವಾಗಿದೆ" (2 ತಿಮೊ. 4:7,8).

ಪೌಲನು ಕೊರಿಂಥದ ಪ್ರಾಪಂಚಿಕ ಕ್ರೈಸ್ತರಿಗೆ, "ನೀವೂ ಬಿರುದನ್ನು ಪಡಕೊಳ್ಳಬೇಕೆಂತಲೇ ಓಡಿರಿ" ಎಂದು ಹೇಳಿದನು (1 ಕೊರಿ. 9:24).

ಆ ಪ್ರಾಪಂಚಿಕ ಕ್ರೈಸ್ತರೂ ಸಹ ಮಾನಸಾಂತರಪಟ್ಟು, ದೃಢಸಂಕಲ್ಪ ಮತ್ತು ಶಿಸ್ತಿನಿಂದ ಓಟವನ್ನು ಓಡಿದರೆ, ಅವರೂ ಸಹ ಕ್ರೈಸ್ತರ ಓಟದಲ್ಲಿ ಮೊದಲ ಸ್ಥಾನವನ್ನು ಗಳಿಸಬಹುದು. ಸೋಲನ್ನು ಅನುಭವಿಸಿರುವ ಪ್ರತಿಯೊಬ್ಬ ಕ್ರೈಸ್ತನೂ, ತಾನು ಮಾನಸಾಂತರಪಟ್ಟು ಮತ್ತು ಕ್ರಿಸ್ತನ ರೀತಿ ಆಗುವ ಕಡೆಗೆ ಹೆಚ್ಚಿನ ಒತ್ತನ್ನು ಕೊಡಲು ನಿಶ್ಚಹಿಸಿಕೊಂಡಾಗ ಮಾತ್ರ ಸಭಾಹಿರಿಯರಾದ ನಾವು ಇದೇ ನಿರೀಕ್ಷೆಯನ್ನು ಅವರಿಗೆ ಕೊಡಬಹುದಾಗಿದೆ.