ಯೇಸುವು ತಾನು ಯಾವ ಕುಟುಂಬದಲ್ಲಿ ಜನಿಸಬೇಕೆಂದು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಪಡೆದಿದ್ದ ಏಕೈಕ ವ್ಯಕ್ತಿಯಾಗಿದ್ದರು. ನಮ್ಮಲ್ಲಿ ಯಾರಿಗೂ ಅಂತಹ ಅವಕಾಶ ಸಿಗಲಿಲ್ಲ.
ಯೇಸುವು ಎಂತಹ ಕುಟುಂಬವನ್ನು ಆರಿಸಿಕೊಂಡರು? ನಜರೇತೆಂಬ ಊರಿನಲ್ಲಿ ಯಾರಿಗೂ ಪರಿಚಯವಿಲ್ಲದ ಒಬ್ಬ ಬಡಗಿಯ ಕುಟುಂಬವನ್ನು; ಜನರು ನಜರೇತಿನ ಬಗ್ಗೆ ಹೇಳುತ್ತಿದ್ದ ಮಾತು, "ನಜರೇತಿನಿಂದ ಒಳ್ಳೇದೇನಾದರೂ ಬರುವುದುಂಟೇ?" (ಯೋಹಾ. 1:46). ಯೋಸೇಫ ಮತ್ತು ಮರಿಯಳು ಎಷ್ಟು ಬಡವರಾಗಿದ್ದರೆಂದರೆ, ಸರ್ವಾಂಗಹೋಮಕ್ಕೆ ಒಂದು ಕುರಿಯನ್ನು ಕೊಡುವುದಕ್ಕೂ ಸಹ ಅವರು ಅಶಕ್ತರಾಗಿದ್ದರು (ಲೂಕ. 2:22-24ನ್ನು ಯಾಜಕಕಾಂಡ 12:8ಕ್ಕೆ ಹೋಲಿಸಿ ನೋಡಿರಿ).
ಇಷ್ಟೇ ಅಲ್ಲದೆ, ಮಾನವ ಜನ್ಮ ಪಡೆದಿರುವ ಎಲ್ಲಾ ಜನರಲ್ಲಿ ಯೇಸುವು ಮಾತ್ರವೇ ತನ್ನ ಜನ್ಮಸ್ಥಳವನ್ನು ನಿಖರವಾಗಿ ಆಯ್ಕೆ ಮಾಡಬಹುದಾಗಿತ್ತು. ಆ ಸ್ಥಳವನ್ನು ನಿಶ್ಚಯಿಸುವಂತ ಅವಕಾಶವಿದ್ದರೂ, ಅವರು ಆರಿಸಿಕೊಂಡ ಸ್ಥಳ ಯಾವುದು? ಅದು ದನ-ಕುರಿಗಳ ಒಂದು ಮುರುಕು ಹಟ್ಟಿಯಲ್ಲಿ ಅವುಗಳಿಗೆ ಹುಲ್ಲು ಉಣಿಸುವಂತ ಒಂದು ಪೆಟ್ಟಿಗೆಯಾಗಿತ್ತು!
ಇದಲ್ಲದೆ, ಯೇಸುವು ತಾನು ಜನಿಸುವುದಕ್ಕಾಗಿ ಎಂತಹ ವಂಶಾವಳಿಯನ್ನು ಆರಿಸಿಕೊಂಡರೆಂದು ಮುಂದೆ ಗಮನಿಸಿರಿ. ಮತ್ತಾಯನು 1:3-6ರಲ್ಲಿ ನಮೂದಿಸಿರುವ ಯೇಸುವಿನ ವಂಶವೃಕ್ಷದಲ್ಲಿ ನಾಲ್ಕು ಸ್ತ್ರೀಯರ ಹೆಸರುಗಳು ಸೇರಿವೆ. ಅವರಲ್ಲಿ ಮೊದಲನೆಯವಳಾದ ತಾಮಾರಳು ತನ್ನ ಮಾವ ಯೆಹೂದನೊಂದಿಗೆ ವ್ಯಭಿಚಾರ ಮಾಡಿ ಒಬ್ಬ ಮಗನನ್ನು ಪಡೆದಳು. ಎರಡನೆಯವಳಾದ ರಾಹಾಬಳು ಯೆರಿಕೋವಿನಲ್ಲಿ ಎಲ್ಲರಿಗೂ ಪರಿಚಿತಳಾಗಿದ್ದ ಸೂಳೆಯಾಗಿದ್ದಳು. ಮೂರನೆಯವಳಾದ ರೂತಳು, ಮೋವಾಬನ ಸಂತತಿಯವಳಾಗಿದ್ದಳು; ಆ ಸಂತತಿಯ ಆರಂಭವು ಲೋಟನು ತನ್ನ ಸ್ವಂತ ಮಗಳೊಂದಿಗೆ ವ್ಯಭಚಾರ ಮಾಡಿದ ಮೂಲಕವಾಗಿತ್ತು. ನಾಲ್ಕನೆಯವಳು ಊರೀಯನ ಹೆಂಡತಿಯಾದ ಬತ್ಷೆಬೆಯಾಗಿದ್ದಳು; ದಾವೀದನು ಆಕೆಯೊಂದಿಗೆ ವ್ಯಭಿಚಾರ ಮಾಡಿದನು.
ಯೇಸುವು ಇಂತಹ ನಾಚಿಕೆಗೇಡಿನ ವಂಶಾವಳಿಯನ್ನು ಏಕೆ ಆರಿಸಿಕೊಂಡನು? ಏಕೆಂದರೆ ಬಿದ್ದುಹೋದ ಆದಾಮನ ಜನಾಂಗದೊಂದಿಗೆ ತನ್ನನ್ನು ಸಂಪೂರ್ಣವಾಗಿ ಗುರುತಿಸಿಕೊಳ್ಳಲಿಕ್ಕಾಗಿ. ಅಲ್ಲಿ ನಾವು ಆತನ ದೀನತೆಯನ್ನು ನೋಡುತ್ತೇವೆ. ಆತನು ಕುಟುಂಬ ಅಥವಾ ವಂಶಾವಳಿಯ ಮೂಲಕ ಪಡೆಯಬಹುದಾದ ಯಾವುದೇ ದೊಡ್ಡತನವನ್ನು ಬಯಸಲಿಲ್ಲ.
ಯೇಸುವು ತನ್ನನ್ನು ಮಾನವನೊಂದಿಗೆ ಸಂಪೂರ್ಣವಾಗಿ ಗುರುತಿಸಿಕೊಂಡರು. ಆತನು ಜನಾಂಗ, ಕುಟುಂಬ, ಸಾಮಾಜಿಕ ಸ್ಥಾನಮಾನ ಇವೆಲ್ಲವನ್ನು ಲೆಕ್ಕಿಸದೆ, ಎಲ್ಲಾ ಮಾನವರು ಮೂಲತಃ ಸಮಾನರೆಂದು ನಂಬಿದ್ದನು, ಮತ್ತು ಸಮಾಜದ ವಿವಿಧ ಹಂತಗಳಲ್ಲಿ ಅತಿ ಕೆಳಗಿನ ಮತ್ತು ಅತಿ ಕನಿಷ್ಠರಾಗಿದ್ದ ಜನರೊಂದಿಗೆ ಒಂದಾಗಿದ್ದನು. ತಾನು ಎಲ್ಲಾ ಜನರ ಸೇವಕನಾಗುವುದಕ್ಕಾಗಿ, ತನ್ನನ್ನು ಎಲ್ಲರಿಗಿಂತ ಕೆಳಗೆ ತಗ್ಗಿಸಿಕೊಂಡನು. ಇತರರಿಗಿಂತ ಕೆಳಕ್ಕೆ ಬಾಗುವವನು ಮಾತ್ರ ಅವರನ್ನು ಮೇಲಕ್ಕೆ ಎತ್ತಬಲ್ಲನು. ಯೇಸುವು ಈ ರೀತಿಯಾಗಿ ಬಂದರು.
"ಯೇಸುವು ತನ್ನನ್ನು ಯಾವಾಗಲೂ ಒಬ್ಬ ಮನುಷ್ಯನಾಗಿ ಪರಿಗಣಿಸಿ, ತನ್ನ ತಂದೆಯ ಮುಂದೆ ತಾನು ಶೂನ್ಯನೆಂದು ತಿಳಿದಿದ್ದರು"
ಪವಿತ್ರಾತ್ಮನು ನಮಗೆ ನೂತನ ಮನಸ್ಸನ್ನು ಕೊಡುವುದರ ಮೂಲಕ ನಮ್ಮನ್ನು ಪರಿವರ್ತಿಸುತ್ತಾನೆ (ರೋಮಾ. 12:2). ಕ್ರಿಸ್ತನ ದೀನತೆಯನ್ನು ಹೋಲುವಂತ ನಿಜವಾದ ದೀನತೆಯ ಬೀಜವು ಬಿತ್ತಲ್ಪಡುವುದು ನಮ್ಮ ಆಲೋಚನೆಗಳಲ್ಲಿ. ನಾವು ಕ್ರಿಸ್ತನ ಸಾರೂಪ್ಯಕ್ಕೆ ಪರಿವರ್ತನೆ ಹೊಂದುತ್ತಿದ್ದೇವೋ ಇಲ್ಲವೋ ಎಂಬುದನ್ನು ಖಚಿತ ಪಡಿಸಿಕೊಳ್ಳಲಿಕ್ಕೆ, ನಾವು ನಮ್ಮ ಆಲೋಚನೆಗಳ ಕ್ಷೇತ್ರವನ್ನು (ನಾವು ಒಂಟಿಯಾಗಿ ಇರುವಾಗ ಮಾಡುವ ಆಲೋಚನೆಗಳಲ್ಲಿ ನಮ್ಮ ಬಗ್ಗೆ ಏನು ಯೋಚಿಸುತ್ತೇವೆ ಮತ್ತು ಬೇರೆಯವರೊಂದಿಗೆ ನಮ್ಮನ್ನು ಹೇಗೆ ಹೋಲಿಸಿಕೊಳ್ಳುತ್ತೇವೆ, ಎಂಬುದನ್ನು) ನೋಡಬೇಕೇ ಹೊರತು, ಇತರರ ಮುಂದೆ ನಮ್ಮ ನಡವಳಿಕೆಯನ್ನು ಅಥವಾ ನಮ್ಮ ಕಾರ್ಯಗಳನ್ನು ನೋಡಿದರೆ ಉಪಯೋಗವಿಲ್ಲ.
ನಾವು ನಮ್ಮ ಸ್ವಂತ ಆಲೋಚನೆಗಳಲ್ಲಿ ನಿಜವಾಗಿ ಚಿಕ್ಕವರಾದಾಗ ಮಾತ್ರ, "ಇತರರು ನಮಗಿಂತ ಹೆಚ್ಚು ಪ್ರಾಮುಖ್ಯರೆಂದು ನಾವು ಪ್ರಾಮಾಣಿಕವಾಗಿ ಭಾವಿಸಬಹುದು" (ಫಿಲಿ. 2:3) ಮತ್ತು "ನಾನು ದೇವಜನರೊಳಗೆ ಅತ್ಯಲ್ಪನು"(ಎಫೆಸ. 3:8) ಎಂದು ಪರಿಗಣಿಸಬಹುದು.
ಯೇಸುವು ತನ್ನನ್ನು ಯಾವಾಗಲೂ ಒಬ್ಬ ಮನುಷ್ಯನಾಗಿ ಪರಿಗಣಿಸಿದನು ಮತ್ತು ತಾನು ತನ್ನ ತಂದೆಯ ಮುಂದೆ ಶೂನ್ಯನೆಂದು ತಿಳಿದಿದ್ದನು. ಆದ್ದರಿಂದ, ತಂದೆಯಾದ ದೇವರ ಮಹಿಮೆಯು ಯೇಸುವಿನ ಮೂಲಕ ಪರಿಪೂರ್ಣವಾಗಿ ಪ್ರಕಟವಾಯಿತು.
ಯೇಸುವು 30 ವರ್ಷಗಳ ಕಾಲ ಕುಂದುಕೊರತೆಯುಳ್ಳ ತನ್ನ ಸಾಕುತಂದೆಗೂ ತನ್ನ ತಾಯಿಗೂ ಒಳಪಟ್ಟರು - ಏಕೆಂದರೆ ಅದು ಆತನ ತಂದೆಯ ಚಿತ್ತವಾಗಿತ್ತು. ಅತನಿಗೆ ಯೋಸೇಫನಿಗಿಂತ ಮತ್ತು ಮರಿಯಳಿಗಿಂತ ಬಹಳ ಹೆಚ್ಚಿನ ತಿಳುವಳಿಕೆಯಿತ್ತು; ಅದಲ್ಲದೆ, ಆತನು ಪಾಪರಹಿತರಾಗಿದ್ದನು, ಮತ್ತು ಅವರ ರೀತಿ ಇರಲಿಲ್ಲ. ಆದಾಗ್ಯೂ, ಅವರಿಗೆ ಅಧೀನನಾದನು.
ಒಬ್ಬ ಮನುಷ್ಯನು ಬೌದ್ಧಿಕವಾಗಿ ಮತ್ತು ಆತ್ಮಿಕವಾಗಿ ತನಗಿಂತ ಕೆಳಮಟ್ಟದಲ್ಲಿ ಇರುವವರಿಗೆ ಅಧೀನನಾಗುವುದು ಸುಲಭವಲ್ಲ. ಆದರೆ ಯಥಾರ್ಥವಾದ ದೀನತೆಯಿದ್ದಲ್ಲಿ ಇದು ಸಮಸ್ಯೆಯಾಗುವುದಿಲ್ಲ - ಯಾಕೆಂದರೆ ದೇವರ ದೃಷ್ಟಿಯಲ್ಲಿ ತಾನು ಏನೂ ಅಲ್ಲವೆಂದು ನಿಜವಾಗಿ ಅರಿತಿದ್ದವನಿಗೆ, ದೇವರು ತನ್ನ ಮೇಲೆ ಯಾರನ್ನು ನೇಮಿಸಿದ್ದಾರೋ ಅವರಿಗೆ ವಿಧೇಯನಾಗುವುದು ಕಷ್ಟವಾಗುವುದಿಲ್ಲ.
ಯೇಸುವು ಆರಿಸಿಕೊಂಡ ಕಸುಬು ಯಾವ ಭವ್ಯವಾದ ತೋರಿಕೆಯೂ ಇಲ್ಲದ ಬಡಗಿಯ ವೃತ್ತಿಯಾಗಿತ್ತು. ಅದಲ್ಲದೆ, ಆತನು ಜನಸಾಮಾನ್ಯರ ಸೇವೆಗೆ ಇಳಿದಾಗ ಯಾವುದೇ ಬಿರುದನ್ನಾಗಲೀ ಅಥವಾ ಗೌರವಾನ್ವಿತ ಹೆಸರನ್ನಾಗಲೀ ತನ್ನ ಹೆಸರಿಗೆ ಸೇರಿಸಿಕೊಳ್ಳಲಿಲ್ಲ. ಅವರು 'ಪಾಸ್ಟರ್ ಯೇಸು' ಆಗಲಿಲ್ಲ. 'ರೆವರೆಂಡ್ ಡಾಕ್ಟರ್ ಯೇಸು' ಅಲ್ಲವೇ ಅಲ್ಲ! ಅವರು ಸೇವೆ ಮಾಡಲು ಬಯಸಿದ ಜನಸಾಮಾನ್ಯರಿಗಿಂತ ತನ್ನನ್ನು ಹೆಚ್ಚಿನವನಾಗಿ ತೋರಿಸುವಂತ ಯಾವುದೇ ಲೌಕಿಕ ಹುದ್ದೆಗಾಗಿ ಅಥವಾ ಬಿರುದಿಗಾಗಿ ಆತನು ಎಂದಿಗೂ ತವಕಿಸಲಿಲ್ಲ ಮತ್ತು ಅದನ್ನು ಬಯಸಲೂ ಇಲ್ಲ.
ಯೇಸುವು ತನ್ನ ತಂದೆಯ ಮುಂದೆ ತಾನು ಏನೂ ಅಲ್ಲವೆಂಬ ಸ್ಥಾನವನ್ನು ಸ್ವೀಕರಿಸಿದ್ದರಿಂದ, ಆತನ ಜೀವಿತದಲ್ಲಿ ತಂದೆಯಾದ ದೇವರು ಆಜ್ಞಾಪಿಸಿದ ಯಾವುದೇ ಪರಿಸ್ಥಿತಿಯನ್ನು ಸಂತೋಷದಿಂದ ಒಪ್ಪಿಕೊಳ್ಳಲು ಸಾಧ್ಯವಾಯಿತು, ಮತ್ತು ತಂದೆಯ ಪ್ರತಿಯೊಂದು ಆಜ್ಞೆಗೆ ಪೂರ್ಣಹೃದಯದಿಂದ ವಿಧೇಯರಾಗಲು ಸಾಧ್ಯವಾಯಿತು.
"ಅವನು ತನ್ನನ್ನು ತಗ್ಗಿಸಿಕೊಂಡು ಶಿಲುಬೆಯ ಮರಣವನ್ನಾದರೂ ಸ್ವೀಕರಿಸುವಷ್ಟು ವಿಧೇಯನಾದನು" (ಫಿಲಿ. 2:8).
ಈ ರೀತಿ ದೇವರಿಗೆ ಸಂಪೂರ್ಣ ವಿಧೇಯತೆಯಿಂದ ನಡೆಯುವುದೇ ಯಥಾರ್ಥ ದೀನತೆಯ ಸ್ಪಷ್ಟ ಗುರುತಾಗಿದೆ. ಇದಕ್ಕಿಂತ ಸ್ಪಷ್ಟವಾದ ಬೇರೆ ಯಾವ ಪರೀಕ್ಷೆಯೂ ಇಲ್ಲ.
ಕಿವಿಯುಳ್ಳವನು ಕೇಳಿಸಿಕೊಳ್ಳಲಿ.