WFTW Body: 

ಪ್ರಕಟನೆ 3:14-22 ರಲ್ಲಿ ಕರ್ತನು ಲವೊದಿಕೀಯದ ಸಭೆಗೆ ಹೇಳುವ ಮಾತು, "ಆಮೆನ್ ಎಂಬಾತನು, ಅಂದರೆ ನಂಬತಕ್ಕ ಸತ್ಯಸಾಕ್ಷಿಯೂ, ದೇವರ ಸೃಷ್ಟಿಗೆ ಮೂಲನೂ ಆಗಿರುವಾತನು ಹೇಳುವುದೇನೆಂದರೆ: ’ನಿನ್ನ ಕೃತ್ಯಗಳನ್ನು ಬಲ್ಲೆನು; ನೀನು ತಣ್ಣಗೂ ಅಲ್ಲ, ಬೆಚ್ಚಗೂ ಅಲ್ಲ; ನೀನು ತಣ್ಣಗಾಗಲಿ, ಬೆಚ್ಚಗಾಗಲಿ ಇದ್ದರೆ ಒಳ್ಳೇದಾಗಿತ್ತು, ನೀನು ಬೆಚ್ಚಗೂ ಇಲ್ಲದೆ, ತಣ್ಣಗೂ ಇಲ್ಲದೆ, ಉಗುರುಬೆಚ್ಚಗೆ ಇರುವುದರಿಂದ ನಿನ್ನನ್ನು ನನ್ನ ಬಾಯೊಳಗಿಂದ ಕಾರುವೆನು’".

ಇಲ್ಲಿರುವಂತ ಸಭೆಯು ದೇವರಿಗಾಗಿ ಉರಿಯುತ್ತಿರಲಿಲ್ಲ. ಸಭೆಯಲ್ಲಿ ಇರುವಂತವರು ಕೇವಲ "ಉಗುರುಬೆಚ್ಚಗೆ" ಆಗಿದ್ದರು (ಪ್ರಕಟನೆ 3:16). ಅವರು ತಮ್ಮ ಸಿದ್ಧಾಂತಗಳಲ್ಲಿ ಸಂಪೂರ್ಣ ಸರಿಯಾಗಿಯೇ ಇದ್ದರು - ಆದರೆ ಅವರು ಸರಿ ಇದ್ದರೂ ಸಹ, ಸತ್ತಂತ ಸ್ಥಿತಿಯಲ್ಲಿದ್ದರು! ಅವರು ನೈತಿಕವಾಗಿ ಗೌರವವನ್ನು ಸಂಪಾದಿಸಿಕೊಂಡಿದ್ದರು - ಮತ್ತು ಆತ್ಮಿಕವಾಗಿ ಸತ್ತಿದ್ದರು!

ನಮ್ಮ ಹೃದಯಗಳು ಎಲ್ಲಾ ಸಮಯದಲ್ಲಿಯೂ ಬೆಂಕಿಯಿಂದ ಉರಿಯುತ್ತಿರಬೇಕು, ಎಂದು ದೇವರು ಬಯಸುತ್ತಾರೆ - ಅಲ್ಲಿ ಆತನಿಗಾಗಿ ಮತ್ತು ಇತರ ವಿಶ್ವಾಸಿಗಳಿಗಾಗಿ ತೀವ್ರವಾದ ಪ್ರೀತಿಯ ಜ್ವಾಲೆ ಇರಬೇಕು. "ಯಜ್ಞವೇದಿಯ ಮೇಲೆ ಬೆಂಕಿಯು ಯಾವಾಗಲೂ ಉರಿಯುತ್ತಿರಬೇಕು, ಅದು ಎಂದಿಗೂ ಆರಿಹೋಗಬಾರದು," ಇದು ಹಳೆ ಒಡಂಬಡಿಕೆಯ ನಿಯಮ (ಯಾಜಕಕಾಂಡ 6:13). ಇಲ್ಲಿ ದೇವರು ನಮಗೆ ಸೂಚಿಸುವದು ಏನೆಂದರೆ, ಯೇಸುವಿನ ಒಬ್ಬ ನಿಜವಾದ ಶಿಷ್ಯನ ಮನಸ್ಸು ಸಾಮಾನ್ಯವಾಗಿ ಹೇಗಿರಬೇಕು, ಎನ್ನುವದನ್ನು. ಶಿಷ್ಯನ ಗುಣಮಟ್ಟ ಇದಕ್ಕಿಂತ ಕಡಿಮೆಯಾಗಿದ್ದರೆ, ಅದು ಬಹಳ ಕೆಳಮಟ್ಟದ್ದಾಗಿದೆ. ಉರಿಯುತ್ತಿರುವ ಪೊದೆಯು ದೇವರ ಬೆಂಕಿಯಿಂದ ಜ್ವಲಿಸಿದಾಗ, ಕ್ರಿಮಿ ಕೀಟಗಳಾಗಲಿ ಅಥವಾ ಸೂಕ್ಷ್ಮಜೀವಿಗಳಾಗಲಿ ಅದರಲ್ಲಿ ನೆಲೆಸುವುದು ಅಸಾಧ್ಯವಾಗಿತ್ತು. ಅದೇ ರೀತಿ, ನಮ್ಮ ಹೃದಯವು ಆತ್ಮನ ಬೆಂಕಿಯಿಂದ ಬೆಳಗಿದಾಗ, ಪ್ರೀತಿ ಇಲ್ಲದಿರುವಂತ ಮನೋಭಾವವು ಅದರ ಒಳಗಡೆ ಉಳಿಯುವುದಿಲ್ಲ.

ನಾವು ಬೆಚ್ಚಗಿದ್ದೇವಾ, ತಣ್ಣಗಿದ್ದೇವಾ ಅಥವಾ ಉಗುರುಬೆಚ್ಚಗಿದ್ದೇವಾ ಎಂದು ಪರೀಕ್ಷಿಸಲು ಇಲ್ಲೊಂದು ಮಾರ್ಗವಿದೆ : "ಬೆಚ್ಚಗೆ" ಇರುವುದು ಎಂದರೆ ಇತರರನ್ನು ತೀವ್ರವಾಗಿ ಪ್ರೀತಿಸುವುದಾಗಿದೆ, "ತಣ್ಣಗೆ" ಇರುವುದು ಎಂದರೆ, ಇತರರ ಕುರಿತಾಗಿ ಕಹಿಭಾವನೆ ಮತ್ತು ಕ್ಷಮಿಸದೇ ಇರುವಂತ ಮನೋಭಾವವನ್ನು ಹೊಂದಿಕೊಂಡಿರುವುದಾಗಿದೆ. "ಉಗುರುಬೆಚ್ಚಗೆ" ಎಂದರೆ ಇತರರ ಕಡೆಗೆ ಕಹಿ ಭಾವನೆಯಾಗಲೀ ಅಥವಾ ಪ್ರೀತಿಯಾಗಲೀ, ಎರಡೂ ಇಲ್ಲದೇ ಇರುವುದಾಗಿದೆ. ಒಬ್ಬ ವಿಶ್ವಾಸಿಯು, "ನನ್ನ ಹೃದಯದಲ್ಲಿ ಯಾರ ವಿರುದ್ಧವಾಗಲೀ ಕಹಿ ಭಾವನೆ ಇಲ್ಲ," ಎಂದು ಹೇಳಿದರೆ, ಆತನು ಉಗುರುಬೆಚ್ಚಗಾಗಿರುವ ಶಿಷ್ಯನಾಗಿದ್ದಾನೆ. "ನಿಮ್ಮ ಹೃದಯದೊಳಗೆ ಯಾರ ವಿರುದ್ಧವಾಗಿಯೂ ಎನೂ ಇಲ್ಲದಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳಕೊಳ್ಳುವರು," ಎಂದು ಯೇಸುವು ಹೇಳಿದರೇ? ನಿಶ್ಚಯವಾಗಿ ಹೇಳಲಿಲ್ಲ. ಮತ್ತೊಬ್ಬರ ಬಗ್ಗೆ ಕೆಟ್ಟ ಮನೋಭಾವ ಇಲ್ಲದಿರುವುದು ಯೇಸುವಿನ ಶಿಷ್ಯಂದಿರ ಗುರುತು ಅಲ್ಲ (ಯೋಹಾನ 13:35ನ್ನು ಹೋಲಿಸಿ ನೋಡಿರಿ). ನಾವು ನಮ್ಮ ಹೃದಯದಲ್ಲಿ ಯಾವುದನ್ನಾದರೂ ಹೊಂದಿರಬೇಕು. ನಮ್ಮ ಎಲ್ಲಾ ಸಹ-ವಿಶ್ವಾಸಿಗಳ ಕಡೆಗೆ ನಾವು ತೀವ್ರವಾದ ಪ್ರೀತಿಯನ್ನು ಹೊಂದಿರಬೇಕು. ಪ್ರೀತಿಯು ಒಂದು ಸಕಾರಾತ್ಮಕವಾದ ಗುಣವಾಗಿದೆಯೆ ಹೊರತು, ಕೇವಲ ಕೆಟ್ಟತನ ಇಲ್ಲದಿರುವುದು ಅಲ್ಲ.

ನಮ್ಮ ಹೃದಯದಿಂದ ಕಹಿ ಭಾವನೆಯ ಆತ್ಮವನ್ನು ಹೊರದೊಬ್ಬಿ, ನಮ್ಮ ಹೃದಯವನ್ನು ತೊಳೆದುಕೊಂಡು, ಅದನ್ನು ಹಾಗೇ ಖಾಲಿಯಾಗಿ ಇಟ್ಟುಕೊಳ್ಳುವಂತದ್ದು ಉಗುರುಬೆಚ್ಚಗೆ ಆಗುವುದಕ್ಕೆ ಒಂದು ನಿಶ್ಚಿತ ಮಾರ್ಗವಾಗಿದೆ, ಮತ್ತು ಹೀಗೆ ಮಾಡುವುದರಿಂದ ಒದಗುವ ಅಂತ್ಯಸ್ಥಿತಿಯು, ಮೊದಲು ಇದ್ದ ಸ್ಥಿತಿಗಿಂತ ಕೆಟ್ಟದಾಗಿರುತ್ತದೆ (ಲೂಕ 11:24-26). "ಎನೂ ಇಲ್ಲದೇ ಇರುವುದಕ್ಕಿಂತ ಏನನ್ನಾದರೂ ಹೊಂದಿರುವುದು ಉತ್ತಮ," ಎಂಬುದು ಲೋಕದ ಮಾತಾಗಿದೆ. ಹಾಗಿದ್ದಲ್ಲಿ, ತಣ್ಣಗಾಗಿರುವುದಕ್ಕಿಂತ ಉಗುರುಬೆಚ್ಚಗಿರುವುದು ಒಳ್ಳೆಯದಲ್ಲವೇ ಎಂದು ಒಬ್ಬನು ಯೋಚಿಸಬಹುದು. ಆದರೆ ದೇವರು ಹೇಳುವಂತ ಮಾತು ಅದಲ್ಲ. "ನೀನು ತಣ್ಣಗೆ ಇದ್ದರೆ ಒಳ್ಳೇದಾಗಿತ್ತು" (ಪ್ರಕಟನೆ 3:15) ಎಂದು ದೇವರು ಹೇಳುತ್ತಾರೆ. ನಾವು ಅರೆಮನಸ್ಸಿನ ದೇವಭಕ್ತರು ಆಗಿರುವ ಬದಲು ಸಂಪೂರ್ಣವಾಗಿ ಲೌಕಿಕರಾಗಿರುವುದು ಉತ್ತಮ, ಎಂದು ದೇವರು ಬಯಸುತ್ತಾರೆ. ಉಗುರುಬೆಚ್ಚಗಿನ, ಲೋಕದಲ್ಲಿ ರಾಜಿ ಮಾಡಿಕೊಳ್ಳುವಂತ ಕ್ರೈಸ್ತನು ಲೋಕದಲ್ಲಿ ಕ್ರಿಸ್ತನ ಕಾರ್ಯಕ್ಕೆ ಲೌಕಿಕ ಅವಿಶ್ವಾಸಿಗಿಂತ ಹೆಚ್ಚು ಹಾನಿ ಉಂಟುಮಾಡುತ್ತಾನೆ. ಅವಿಶ್ವಾಸಿಯು ಕ್ರಿಸ್ತನ ನಾಮವನ್ನು ತೆಗೆದುಕೊಳ್ಳುವುದಿಲ್ಲ ಮತ್ತು ಆತನ ಲೌಕಿಕತೆಯು ಸುವಾರ್ತೆಗೆ ಅಡ್ಡಿ ಮಾಡುವುದಿಲ್ಲ. ಆದರೆ ಲೋಕದೊಂದಿಗೆ ರಾಜಿಯಾಗುವಂತ, ಅರೆಮನಸ್ಸಿನ ಕ್ರೈಸ್ತನು ಕ್ರಿಸ್ತನ ನಾಮವನ್ನು ತೆಗೆದುಕೊಳ್ಳುತ್ತಾ, ಅನ್ಯಜನರ ನಡುವೆ ತನ್ನ ಲೌಕಿಕತೆಯ ಮೂಲಕ ಕ್ರಿಸ್ತನ ನಾಮಕ್ಕೆ ಅಪಮಾನ ಮಾಡುವಂತವನು ಆಗಿದ್ದಾನೆ.

ತಣ್ಣಗಾದ, ಲೌಕಿಕನಾದ ಒಬ್ಬ ಅವಿಶ್ವಾಸಿಯು, ಸ್ವ-ನೀತಿಯಿಂದ ಹಿಗ್ಗುವ, ಉಗುರು ಬೆಚ್ಚಗಿನ ಒಬ್ಬ ಫರಿಸಾಯನಗಿಂತ ಸುಲಭವಾಗಿ ತನ್ನ ಆತ್ಮಿಕ ಕೊರತೆಯನ್ನು ಅರಿತುಕೊಳ್ಳುವ ಸಾಧ್ಯತೆ ಇರುತ್ತದೆ (ಮತ್ತಾಯ 21:31 ನೋಡಿ). ಈ ಕಾರಣಗಳಿಂದಾಗಿ ನಾವು ಉಗುರುಬೆಚ್ಚಾಗಾಗಿ ಇರುವುದಕ್ಕಿಂತ ತಣ್ಣಗಿರುವುದನ್ನು ದೇವರು ಇಷ್ಟಪಡುತ್ತಾರೆ. ವಾಸ್ತವಿಕವಾಗಿ ಹೇಳಬೇಕೆಂದರೆ, ನಿಮಗೆ ಹಣದ ಆಸೆಯಿಂದ ಅಥವಾ ಕೋಪದಿಂದ ಅಥವಾ ಅಶುದ್ಧ ಆಲೋಚನೆಗಳ ಹಿಡಿತದಿಂದ (ಕೇವಲ ಈ ಮೂರು ವಿಧವಾದ ಪಾಪಗಳನ್ನು ಪರಿಗಣಿಸುವಾಗ) ಬಿಡುಗಡೆ ಹೊಂದುವ ತವಕ ಇಲ್ಲವಾದಲ್ಲಿ, ನೀವು ಯೇಸುವಿನ ಶಿಷ್ಯನೆಂದು ಹೇಳಿಕೊಳ್ಳುವುದಕ್ಕಿಂತ ಅವಿಶ್ವಾಸಿಯಾಗಿಯೇ ಉಳಿದು ಬಿಡುವುದು ಉತ್ತಮವಾಗಿದೆ. ನೀವು ಉಗುರು ಬೆಚ್ಚಗಾಗಿರುವುದಕ್ಕಿಂತ ತಣ್ಣಗಿದ್ದರೆ ನಿಮಗೆ ಹೆಚ್ಚಿನ ನಿರೀಕ್ಷೆಯಿದೆ. ಈ ಮಾತು ಅಶ್ಚರ್ಯಕರವಾದರೂ ಸತ್ಯವಾದದ್ದು.