ಬರೆದಿರುವವರು :   ಝ್ಯಾಕ್ ಪೂನನ್
WFTW Body: 

ಯೇಸುವು ಕಲಿಸಿದ ವಿಷಯಗಳನ್ನು ಮತ್ತು ದೇವರ ವಾಕ್ಯವನ್ನು ವಿರೋಧಿಸಿ ಬೋಧನೆ ಮಾಡುವ ಜನರೊಂದಿಗೆ ನಾವು ಅನ್ಯೋನ್ಯತೆ ಇರಿಸಿಕೊಳ್ಳಲಾಗದು. ದೇವರಿಂದ ದೂರವಾಗಿರುವ ಜನರ ಒಂದು ದೊಡ್ಡ ಗುಂಪಿನೊಂದಿಗೆ ಇರುವುದಕ್ಕಿಂತ, ಒಂಟಿಯಾಗಿ ದೇವರ ಜೊತೆಗೆ ನಿಲ್ಲುವುದು ಉತ್ತಮವಾದದ್ದು. ಕ್ರೈಸ್ತತ್ವದ ಬಗ್ಗೆ ಸಾಮಾನ್ಯವಾಗಿ ನೆನಪಿಡಬೇಕಾದ ವಿಷಯ, ಸಾಮಾನ್ಯವಾಗಿ ಬಹುಮತದ ಅಭಿಪ್ರಾಯವು ತಪ್ಪಾಗಿರುತ್ತದೆ. ಇದನ್ನು ದೇವರ ವಾಕ್ಯದಿಂದ ಕೆಳಗಿನ ಐದು ಉದಾಹರಣೆಗಳು ನಮಗೆ ತೋರಿಸಿಕೊಡುತ್ತವೆ:

1. ಇಸ್ರಾಯೇಲ್ಯರ ಬಹುಸಂಖ್ಯಾತರು ಚಿನ್ನದ ಬಸವನನ್ನು ಆರಾಧಿಸಿದ ಸಂದರ್ಭದಲ್ಲಿ, "ಯಾರು ಕರ್ತನ ಪಕ್ಷದವರು" ಎಂದು ಮೋಶೆಯು ಪ್ರಶ್ನಿಸಿದನು. ಆಗ ಒಂದು ಕುಲದವರು (’ಲೇವಿಯರು’) ಮಾತ್ರ ಅವನ ಬಳಿಗೆ ಬಂದು ನಿಂತರು. ಈ ಕಾರಣಕ್ಕಾಗಿ ಅವರಿಗೆ ಕರ್ತನ ಯಾಜಕರ ಸೇವೆಯು ಕೊಡಲ್ಪಟ್ಟಿತು (ವಿಮೋ. 32,33). ಇವರನ್ನು ಹೊರತಾದ ಬಹುಮತೀಯರು (ಮಿಕ್ಕ 11 ಕುಲಗಳು) ತಪ್ಪಾಗಿ ನಡೆದರು.

2. ಅರಸನಾದ ಸೌಲನು ದೇವರಿಂದ ಅಭಿಷೇಕಿಸಲ್ಪಟ್ಟಿದ್ದ ದಾವೀದನ ಮೇಲೆ ಹಲ್ಲೆ ಮಾಡಲು ನಿರ್ಧರಿಸಿದ್ದು ವಿಪತ್ತಿಗೆ ಕಾರಣವಾಯಿತು. ಸೌಲನ ಬಳಿ ಬಹುಸಂಖ್ಯಾತರಾದ ಇಸ್ರಾಯೇಲ್ಯರಿದ್ದರು. ಆದರೆ ದೇವರು ದಾವೀದನೊಂದಿಗೆ ಇದ್ದರು (1 ಸಮುವೇಲ 16). ಮುಂದೆ ಇನ್ನೊಂದು ಸಲ, ಅಬ್ಷಾಲೋಮನು ತನ್ನ ತಂದೆಯಾದ ದಾವೀದನನ್ನು ರಾಜ್ಯದಿಂದ ಓಡಿಸಿದಾಗಲೂ, ಇಸ್ರಾಯೇಲ್ಯರ ಬಹುಮತವು ಅಬ್ಷಾಲೋಮನ ಜೊತೆಗಿತ್ತು. ಆದರೆ ದೇವರು ದಾವೀದನೊಂದಿಗೆ ಇದ್ದರು (2 ಸಮುವೇಲ 15).

3. ’ಅರಣ್ಯಕಾಂಡ 13'ರಲ್ಲಿ, ಇಸ್ರಾಯೇಲ್ಯರು ಕಾನಾನ್ ದೇಶದ ಗಡಿಪ್ರದೇಶದ ಕಾದೇಶ್ ಬರ್ನೇಯಕ್ಕೆ - ದೇವರು ಅವರಿಗೆ ವಾಗ್ದಾನ ಮಾಡಿದ್ದ ಪ್ರದೇಶಕ್ಕೆ - ಬರುವುದನ್ನು ನಾವು ನೋಡುತ್ತೇವೆ. ಅವರು ಐಗುಪ್ತದಿಂದ ಹೊರಟು 2 ವರ್ಷಗಳು ಕಳೆದಿದ್ದವು (ಧರ್ಮೋ. 2:14), ಮತ್ತು ದೇವರು ಅವರಿಗೆ ಆ ದೇಶವನ್ನು ಸ್ವಾಧೀನ ಮಾಡಿಕೊಳ್ಳಬೇಕೆಂದು ಆದೇಶಿಸಿದ್ದರು. ಆ ದೇಶವನ್ನು ಸಂಚರಿಸಿ ನೋಡುವುದಕ್ಕೆ ಇಸ್ರಾಯೇಲ್ಯರು 12 ಮಂದಿ ಗೂಢಚಾರರನ್ನು ಕಳುಹಿಸಿದರು. ಎಲ್ಲಾ 12 ಮಂದಿ ಹಿಂದಿರುಗಿ ಬಂದು, ಅದೊಂದು ನಿಜವಾದ ಅದ್ಭುತ ಪ್ರದೇಶವೆಂದು ತಿಳಿಸಿದರು. ಆದರೆ ಅವರಲ್ಲಿ 10 ಮಂದಿ, "ಅಲ್ಲಿನ ಜನರು ದೈತ್ಯಾಕಾರದ ಬಲಿಷ್ಠರು ಮತ್ತು ಅವರ ಮೇಲೆ ಹೋಗುವದಕ್ಕೆ ನಮಗೆ ಶಕ್ತಿ ಸಾಲದು," ಎಂದು ಹೇಳಿದರು. ಆದರೆ ಅವರಲ್ಲಿ ಇಬ್ಬರು - ಕಾಲೇಬನು ಮತ್ತು ಯೆಹೋಶುವನು - ಹೀಗೆ ಉತ್ತರಿಸಿದರು, "ಕರ್ತನು ನಮ್ಮನ್ನು ಆ ದೇಶದಲ್ಲಿ ಸೇರಿಸಿ, ಆ ದೊಡ್ಡ ದೈತ್ಯರನ್ನು ಸೋಲಿಸಲು ಸಹಾಯ ಮಾಡುತ್ತಾನೆ." ಆದರೆ 6,00,000 ಮಂದಿ ಇಸ್ರಾಯೇಲ್ಯರು ಬಹುಮತದ (ಅಂದರೆ, 10 ಗೂಢಚಾರರ) ಮಾತಿಗೆ ಕಿವಿಗೊಟ್ಟರು.

ನಾವು ಇದರಿಂದ ಏನನ್ನು ಕಲಿತುಕೊಳ್ಳಬಹುದು? ಎಲ್ಲಕ್ಕೂ ಮೊದಲಾಗಿ, ಬಹುಮತೀಯರನ್ನು ಹಿಂಬಾಲಿಸುವುದು ಅಪಾಯಕರ ಎಂಬುದು - ಏಕೆಂದರೆ ಬಹುಮತವು ಯಾವಾಗಲೂ ತಪ್ಪಾಗಿರುತ್ತದೆ. "ನಿತ್ಯಜೀವಕ್ಕೆ ಹೋಗುವ ದಾರಿ ಇಕ್ಕಟ್ಟು; ಅದನ್ನು ಕಂಡುಹಿಡಿಯುವವರು ಸ್ವಲ್ಪ ಜನ," ಎಂದು ಯೇಸುವು ಹೇಳಿದರು. ಹಾಗಿದ್ದರೂ, ಹೆಚ್ಚಿನಪಾಲು ಜನರು ಅಗಲವಾದ ನಾಶನದ ದಾರಿಯನ್ನು ಆರಿಸಿಕೊಳ್ಳುತ್ತಾರೆ. ಹಾಗಾಗಿ ನೀವು ಬಹುಮತದ ಜನರೊಂದಿಗೆ ಸೇರಿಕೊಂಡು ಅಗಲವಾದ ದಾರಿಯಲ್ಲಿ ನಡೆದರೆ, ನೀವು ಖಂಡಿತವಾಗಿ ಅವರೊಂದಿಗೆ ನಾಶನದ ಕಡೆಗೆ ಹೋಗುವಿರಿ. ಒಂದು ದೊಡ್ಡ ಸಭೆಯು ಆತ್ಮಿಕ ಸಭೆಯೆಂದು ಯಾವತ್ತೂ ಯೋಚಿಸಬೇಡಿರಿ. ಯೇಸುವಿನ ಸಭೆಯಲ್ಲಿ ಕೇವಲ 11 ಸದಸ್ಯರು ಇದ್ದರು.

ಹತ್ತು ಮಂದಿ ಮುಖಂಡರು ಒಂದು ವಿಷಯವನ್ನು ಹೇಳುವಾಗ, ಇಬ್ಬರು ಮುಖಂಡರು ಅದಕ್ಕೆ ಸಂಪೂರ್ಣ ವಿರುದ್ಧವಾದ ಸಂಗತಿಯನ್ನು ಹೇಳುತ್ತಿದ್ದರೆ, ನೀವು ಯಾರ ಕಡೆಗೆ ಸೇರಿಕೊಳ್ಳುತ್ತೀರಿ? ಮೇಲೆ ಹೇಳಿದ ದೃಷ್ಟಾಂತದಲ್ಲಿ, ಇಬ್ಬರ ಪಕ್ಷದಲ್ಲಿ - ಯೆಹೋಶುವ ಮತ್ತು ಕಾಲೇಬರ ಜೊತೆಗೆ - ದೇವರು ಇದ್ದರು. ಮಿಕ್ಕ ಹತ್ತು ಜನರ ಜೊತೆಗೆ ಅಪನಂಬಿಕೆ ಮತ್ತು ಸೈತಾನ ಸೇರಿಕೊಂಡಿದ್ದರು. ಆದರೆ ಇಸ್ರಾಯೇಲ್ಯರು ಬಹುಮತವನ್ನು ಹಿಂಬಾಲಿಸುವ ಬುದ್ಧಿಯಿಲ್ಲದ ಕೆಲಸವನ್ನು ಮಾಡಿದರು - ಮತ್ತು ಅವರು ಈ ಕಾರಣಕ್ಕಾಗಿ ಮುಂದಿನ 38 ವರ್ಷಗಳು ಅರಣ್ಯದ ಅಲೆದಾಟವನ್ನು ಅನುಭವಿಸಿದರು. ಯಾವ ಪಕ್ಷದಲ್ಲಿ ದೇವರು ಇದ್ದಾರೆ ಎಂಬುದನ್ನು ತಿಳಕೊಳ್ಳುವ ವಿವೇಚನೆ ಅಥವಾ ಚಾತುರ್ಯ ಅವರಲ್ಲಿ ಇರಲಿಲ್ಲ! ದೇವರ ಜೊತೆಗೆ ಒಬ್ಬನೇ ಮನುಷ್ಯ ಇದ್ದರೂ ಸಹ, ಅದು ಯಾವಾಗಲೂ ಬಹುಮತವಿರುವ ಪಕ್ಷವಾಗಿದೆ - ಮತ್ತು ನಾನು ಯಾವಾಗಲೂ ಆ ಕಡೆ ಇರಲು ಬಯಸುತ್ತೇನೆ.

’ವಿಮೋಚನಕಾಂಡ 32'ರಲ್ಲಿ, ಎಲ್ಲಾ ಇಸ್ರಾಯೇಲ್ಯರು ಚಿನ್ನದ ಬಸವನನ್ನು ಆರಾಧಿಸಿದ ಸಂದರ್ಭದಲ್ಲಿ, ದೇವರು ಕೇವಲ ಒಬ್ಬ ಮನುಷ್ಯ, ಮೋಶೆಯ ಸಂಗಡ ಇದ್ದುದನ್ನು ನಾವು ನೋಡುತ್ತೇವೆ. ಆದರೆ ಈ ನಿಜಾಂಶವನ್ನು ಇಸ್ರಾಯೇಲ್ಯರ 12 ಕುಲಗಳಲ್ಲಿ ಲೇವಿಯರ ಒಂದು ಕುಲದವರು ಮಾತ್ರ ತಿಳಕೊಂಡರು. ಆದಾಗ್ಯೂ, ಈಗ ಲೇವಿಯರ ಕುಲಕ್ಕೂ ಸಹ ದೇವರು ಯೆಹೋಶುವ ಮತ್ತು ಕಾಲೇಬರ ಜೊತೆಗೆ ಇದ್ದುದನ್ನು ಗುರುತಿಸಲು ಸಾಧ್ಯವಾಗಲಿಲ್ಲ!

ಈ ದಿನ ನಾವು ಇವೆಲ್ಲಾ ಘಟನೆಗಳಿಂದ ಕಲಿಯಬೇಕಾದ ಪಾಠಗಳಿವೆ. ಸಾಮಾನ್ಯವಾಗಿ ಕ್ರೈಸ್ತತ್ವದಲ್ಲಿ ಲೌಕಿಕತೆ ಹಾಗೂ ಲೋಕದೊಂದಿಗೆ ಹೊಂದಾಣಿಕೆ ಬಹಳಷ್ಟು ನಡೆಯುತ್ತದೆ. ದೇವರು ಅಲ್ಲಿ ಇಲ್ಲಿ, ದೇವರ ವಾಕ್ಯದ ಸತ್ಯಾಂಶದಲ್ಲಿ ಯಾವ ವಿಧವಾದ ಹೊಂದಾಣಿಕೆಯನ್ನೂ ಮಾಡದೆ ನಿಲ್ಲುವಂತ ಕೆಲವರನ್ನು ಎಬ್ಬಿಸುತ್ತಾರೆ. ನೀವು ವಿವೇಚನೆಯನ್ನು ಹೊಂದಿದ್ದರೆ, ದೇವರು ಆ ಕೆಲವು ಮಂದಿಯ ಜೊತೆಗೆ ಇರುವುದನ್ನು ಗುರುತಿಸುತ್ತೀರಿ, ಮತ್ತು ನೀವು ಅವರೊಂದಿಗೆ ಬಹುಮತದ ವಿರುದ್ಧವಾಗಿ ನಿಲ್ಲುತ್ತೀರಿ. ಅವರೊಂದಿಗೆ ನೀವು ವಾಗ್ದಾನ ಮಾಡಲ್ಪಟ್ಟ ದೇಶವನ್ನು ಪ್ರವೇಶಿಸುತ್ತೀರಿ. ಯಾವ ವ್ಯಕ್ತಿಯೊಂದಿಗೆ ದೇವರು ನಿಂತಿದ್ದಾರೆಂದು ನೀವು ಹೇಗೆ ಗುರುತಿಸುತ್ತೀರಿ? ಆತನು ನಂಬಿಕೆಯ ಭಾಷೆಯನ್ನು ಮಾತಾಡುತ್ತಾನೆ. ಯೆಹೋಶುವ ಮತ್ತು ಕಾಲೇಬರು ನಂಬಿಕೆಯ ಮಾತನ್ನು ಆಡಿದರು: "ನಾವು ಅವರನ್ನು ಜಯಿಸಬಲ್ಲೆವು." ನಾವು ಸಿಟ್ಟು, ಕಾಮಾಭಿಲಾಷೆ, ಮತ್ಸರ, ಗುಣಗುಟ್ಟುವಿಕೆ, ಮೊದಲಾದ ದೈತ್ಯರನ್ನು ಜಯಿಸಬಲ್ಲೆವು. ನಾವು ಸೈತಾನನನ್ನು ಜಯಿಸಬಲ್ಲೆವು. ದೇವರು ಸೈತಾನನನ್ನು ನಿಮ್ಮ ಕಾಲುಗಳ ಕೆಳಗೆ ಹಾಕಿ ತುಳಿಸಿಬಿಡುತ್ತಾರೆ. ದೇವರು ಜೊತೆಗಿರುವ ಮನುಷ್ಯ ಈ ಭಾಷೆಯನ್ನು ಆಡುತ್ತಾನೆ.

4. ಯೇಸುವು ಭೂಮಿಗೆ ಬಂದಾಗ ಯೆಹೂದ್ಯರು ಆತನನ್ನು ತಿರಸ್ಕರಿಸುವ ನಿರ್ಣಯವನ್ನು ಕೈಕೊಂಡ ಫಲವಾಗಿ, ಅವರು ಸುಮಾರು 1900 ವರ್ಷಗಳ ಕಾಲ ಚದುರಿಸಲ್ಪಟ್ಟ ಜೀವನ ಜೀವಿಸಿದರು. ಯೆಹೂದ್ಯರು ಮತ್ತು ಫರಿಸಾಯರ ಜೊತೆಗೆ ಹೆಚ್ಚಿನಪಾಲು ಜನರು ಸೇರಿಕೊಂಡಿದ್ದರು. ಆದರೆ ದೇವರು ಯೇಸುವಿನ ಜೊತೆಗಿದ್ದರು ಮತ್ತು ಆತನನ್ನು ಮರಣದಿಂದ ಮೇಲಕ್ಕೆ ಎಬ್ಬಿಸಿದರು.

5. ಅಪೊಸ್ತಲ ಪೌಲನ ಜೀವನದ ಕೊನೆಯಲ್ಲಿ, ಆತನ ಜೊತೆಗಾರರಲ್ಲಿ ಹೆಚ್ಚಿನಪಾಲು ಜನರು ಆತನ ಕೈಬಿಟ್ಟರು. ಆದರೆ ಕರ್ತನು ಕೊನೆಯ ವರೆಗೂ ಪೌಲನ ಬಳಿಯಲ್ಲಿ ನಿಂತು, ಆತನನ್ನು ಬಲಪಡಿಸಿದನು (2 ತಿಮೊ. 1:15);(2 ತಿಮೊ. 4:16 -18).