ಕ್ರಿಸ್ತನ ದೇಹ ಅಥವಾ ಕ್ರೈಸ್ತ ಸಭೆಯನ್ನು ಒಂದು ಆಸ್ಪತ್ರೆಗೆ ಹೋಲಿಸಬಹುದು. ಒಬ್ಬ ವ್ಯಕ್ತಿಯು ಅನಾರೋಗ್ಯದಿಂದ ಒಂದು ಆಸ್ಪತ್ರೆಗೆ ಹೋದಾಗ, ಆ ಆಸ್ಪತ್ರೆಯಲ್ಲಿ ಅವನ ಸಹಾಯಕ್ಕಾಗಿ ವಿವಿಧ ವಿಭಾಗಗಳು ಇರುತ್ತವೆ. ಒಂದು ವೇಳೆ ಅವನಿಗೆ ಒಂದು ಚುಚ್ಚುಮದ್ದಿನ, ಅಥವಾ ಭೌತಚಿಕಿತ್ಸೆಯ (ಫಿಸಿಯೋಥೆರಪಿ), ಅಥವಾ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇರಬಹುದು. ಅವನು ಕಣ್ಣಿನ ವೈದ್ಯರು ಅಥವಾ ಕಿವಿಯ ವೈದ್ಯರನ್ನು ಭೇಟಿ ಮಾಡಬೇಕಾಗಬಹುದು. ಈ ಕಾರಣಕ್ಕಾಗಿ ಆಸ್ಪತ್ರೆಯಲ್ಲಿ ವಿವಿಧ ವಿಭಾಗಗಳು ಇರುತ್ತವೆ. ಒಬ್ಬ ಕಣ್ಣಿನ ವೈದ್ಯನು ಇಡೀ ದಿನ ತನ್ನ ಸಮಯವನ್ನು ಜನರ ಕಣ್ಣುಗಳನ್ನು ಪರೀಕ್ಷಿಸುವುದರಲ್ಲೇ ಕಳೆಯುತ್ತಾನೆ ಮತ್ತು ಬೇರೆ ಏನನ್ನೂ ಮಾಡುವುದಿಲ್ಲ. ಅದರ ಅರ್ಥ ಅವನು ಮಾನವ ದೇಹದ ಇತರ ಅಂಗಗಳು ಮುಖ್ಯವಲ್ಲವೆಂದು ಭಾವಿಸುತ್ತಾನೆಂದು ಅಲ್ಲ, ಆದರೆ ಆತನು ಕಣ್ಣಿನ ತಜ್ಞನಾದುದರಿಂದ ಹೀಗೆ ಮಾಡುತ್ತಾನೆ.
ಕ್ರಿಸ್ತನ ದೇಹದಲ್ಲೂ ಸಹ ಪ್ರತಿಯೊಬ್ಬ ವಿಶ್ವಾಸಿಯು ಹೊಂದಿರುವ ವರ ಮತ್ತು ಕರೆಯು ವಿಭಿನ್ನವಾಗಿರುತ್ತದೆ. ಅದಲ್ಲದೆ ಪ್ರತಿಯೊಬ್ಬನಲ್ಲಿ ಸಂಪೂರ್ಣ ಸಮತೋಲನ ಇರಲಾರದು. ಕರ್ತ ಯೇಸು ಕ್ರಿಸ್ತನೊಬ್ಬನೇ ಭೂಲೋಕದಲ್ಲಿ ಸಂಪೂರ್ಣ ಸಮತೋಲನದೊಂದಿಗೆ ಜೀವಿಸಿದ ವ್ಯಕ್ತಿಯಾಗಿದ್ದನು. ಮಿಕ್ಕ ನಾವೆಲ್ಲರೂ - ನಮ್ಮಲ್ಲಿ ಅತ್ಯುತ್ತಮನೂ ಸೇರಿದಂತೆ - ಸಮತೋಲನವನ್ನು ಹೊಂದಿರುವುದಿಲ್ಲ. ನಾವು ಸಮತೋಲನವನ್ನು ಹೊಂದಬೇಕಾದರೆ - ಕರ್ತನ ಆಸ್ಪತ್ರೆಯ ವಿಭಿನ್ನ ವಿಭಾಗಗಳು ಒಟ್ಟಾಗಿ ಕೆಲಸ ಮಾಡುವಂತೆ - ನಾವು ಇತರ ಸಹೋದರ-ಸಹೋದರಿಯರೊಂದಿಗೆ ಒಟ್ಟಾಗಿ ಕೆಲಸ ಮಾಡಬೇಕು!
ಕ್ರಿಸ್ತನ ದೇಹದಲ್ಲಿ ನಮ್ಮದೇ ಆದ ನಿರ್ಧಿಷ್ಟ ಕರೆ ಏನು ಎಂಬುದನ್ನು ನಾವು ತಿಳಿದಿರಬೇಕು
ಒಂದು ಒಳ್ಳೆಯ ಆಸ್ಪತ್ರೆಯಲ್ಲಿ ಜನರ ವಿವಿಧ ಅಗತ್ಯತೆಗಳನ್ನು ಪೂರೈಸಲು ಹಲವು ವಿಭಾಗಗಳು ಇರುತ್ತವೆ. ಹಾಗೆಯೇ, ಕ್ರಿಸ್ತನ ದೇಹದಲ್ಲೂ ಜನರ ಸಹಾಯಕ್ಕಾಗಿ ವಿವಿಧ ಸೇವೆಗಳು ಮತ್ತು ಅನೇಕ ಆತ್ಮಿಕ ವರಗಳು ಇರುತ್ತವೆ. ಯಾವುದೇ ಒಂದು ಸಭೆ ಅಥವಾ ಒಂದು ಸಂಸ್ಥೆಯು ಪವಿತ್ರಾತ್ಮನ ಎಲ್ಲಾ ವರಗಳನ್ನು ಹೊಂದಿರುವುದಿಲ್ಲ. ಆದರೆ ಕ್ರಿಸ್ತನ ಇಡೀ ದೇಹದಲ್ಲಿ ಅವೆಲ್ಲವೂ ಸೇರಿರುತ್ತವೆ.
ನಾವು ಕ್ರಿಸ್ತನ ದೇಹದಲ್ಲಿ ನಮ್ಮ ಪ್ರತ್ಯೇಕವಾದ ಮತ್ತು ನಿರ್ಧಿಷ್ಟವಾದ ಕರೆ ಏನು ಎಂಬುದನ್ನು ಅರಿತುಕೊಳ್ಳುವುದು ಅವಶ್ಯವಾಗಿದೆ. ಈ ಲೋಕವು ಆತ್ಮಿಕ ರೋಗಿಗಳಿಂದ ತುಂಬಿದೆ. ಆದಾಗ್ಯೂ ಯಾವ ರೋಗಿಯ ಪರಿಸ್ಥಿತಿಯೂ ಮಿತಿಮೀರಿ ನಿರಾಸೆಯನ್ನು ಉಂಟುಮಾಡಬೇಕಿಲ್ಲ. ಪ್ರತಿಯೊಬ್ಬನೂ ಸಹ ಕರ್ತರಿಂದ ಸಂಪೂರ್ಣ ಗುಣಹೊಂದಿ ವಾಸಿಯಾಗಬಹುದು. ನಾವು ಸಾರುವಂತ ಸುವಾರ್ತೆಯ ಶುಭ ಸಮಾಚಾರ ಇದೇ ಆಗಿದೆ. ಅತೀ ಕೆಟ್ಟ ಪಾಪಿ ಹಾಗೂ ಸಂಪೂರ್ಣವಾಗಿ ಕೆಟ್ಟುಹೋಗಿರುವ ದುರ್ಮಾರ್ಗಿಯೂ ಕೂಡ ಕರ್ತರ ಆಸ್ಪತ್ರೆಯಲ್ಲಿ ವಾಸಿಯಾಗಬಹುದು. ಒಂದು ಒಳ್ಳೆಯ ಆಸ್ಪತ್ರೆಯು ಗಂಭೀರವಾದ ಕಾಯಿಲೆಯುಳ್ಳ ರೋಗಿಯನ್ನು ಎಂದಿಗೂ ಹಿಂದೆ ಕಳಿಸುವುದಿಲ್ಲ. ಕೆಳಮಟ್ಟದ ಆಸ್ಪತ್ರೆಗಳು ಅಂಥವರನ್ನು ಸೇರಿಸಿಕೊಳ್ಳುವುದಿಲ್ಲ, ಏಕೆಂದರೆ ಅವುಗಳು ಆ ರೋಗಿಗಳನ್ನು ನಿರ್ವಹಿಸುವಷ್ಟು ಸುಸಜ್ಜಿತವಾಗಿಲ್ಲ. ಅದೇ ರೀತಿ, ಒಂದು ಒಳ್ಳೆಯ ಕ್ರೈಸ್ತಸಭೆಯು ಪ್ರಪಂಚದಲ್ಲೇ ಅತಿ ದೊಡ್ಡ ಪಾಪಿಗೂ ಸಹ ಆತನ ಪರಿಸ್ಥಿತಿ ನಿರಾಶಾದಾಯಕವಾಗಿದೆ ಎಂದು ಹೇಳುವುದಿಲ್ಲ! ಒಬ್ಬ ದೊಡ್ಡ ಪಾಪಿಯು ಒಂದು ಒಳ್ಳೆಯ ಸಭೆಯಲ್ಲಿ ಕೊಡಲಾಗುವ ಚಿಕಿತ್ಸಾ ಕ್ರಮವನ್ನು ಅನುಸರಿಸಲು ಸಿದ್ಧನಾಗಿದ್ದರೆ, ಆ ಸಭೆಯು ಅತಿ ಗಂಭೀರವಾದ ಪಾಪಿಗಳನ್ನು ಶ್ರೇಷ್ಠ ದೇವಭಕ್ತರನ್ನಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.
ನಾವು ಕ್ರೈಸ್ತಸಭೆಯನ್ನು ಮಾನವ ಶರೀರಕ್ಕೂ ಸಹ ಹೋಲಿಸಬಹುದು. ಮಾನವ ಶರೀರದಲ್ಲಿ, ಪ್ರತಿಯೊಂದು ಅಂಗಕ್ಕೂ ತನ್ನದೇ ಆದ ಕಾರ್ಯವೈಖರಿ ಇರುತ್ತದೆ; ಮತ್ತು ಆ ಅಂಗವು ತನ್ನ ಸ್ವಂತ ಕಾರ್ಯವೈಖರಿಯನ್ನು ನಿರ್ವಹಿಸುವ ಬಗ್ಗೆ ಮಾತ್ರ ಯೋಚಿಸುತ್ತದೆ. ಆದಾಗ್ಯೂ ದೇಹದಲ್ಲಿ ಇತರ ಕೆಲಸಗಳನ್ನು ನಿರ್ವಹಿಸುವ ಅಂಗಗಳನ್ನು ಅದು ಗೌರವಿಸುತ್ತದೆ, ಮತ್ತು ಅವುಗಳು ಅಮೂಲ್ಯವೆಂದು ಅರಿತುಕೊಂಡು ಅವುಗಳ ಜೊತೆಗೆ ಹೊಂದಾಣಿಕೆಯಿಂದ ಕಾರ್ಯ ನಿರ್ವಹಿಸುತ್ತದೆ. ನಾವು ಸಹ ಇದೇ ರೀತಿಯಾಗಿ ಕ್ರಿಸ್ತನ ದೇಹದಲ್ಲಿ ಇತರ ಸೇವೆಗಳಲ್ಲಿ ತೊಡಗಿರುವ ಜನರೊಂದಿಗೆ ಜೊತೆಗೂಡಿ ಕೆಲಸ ಮಾಡಬೇಕು.
1ಕೊರಿಂಥದವರಿಗೆ 12ನೇ ಅಧ್ಯಾಯದಲ್ಲಿ, ಕ್ರಿಸ್ತನ ದೇಹದಲ್ಲಿ ಪವಿತ್ರಾತ್ಮನ ವರಗಳು ಹೇಗೆ ಪ್ರಯೋಗಿಸಲ್ಪಡುತ್ತವೆ ಎಂಬುದನ್ನು ಚಿತ್ರೀಕರಿಸುವುದಕ್ಕೆ, ಪವಿತ್ರಾತ್ಮನು ಕಣ್ಣುಗಳು, ಕಿವಿಗಳು, ಕೈಗಳು ಮತ್ತು ಕಾಲುಗಳ ಉದಾಹರಣೆಯನ್ನು ಉಪಯೋಗಿಸಿದ್ದಾನೆ.
ಹೊಟ್ಟೆಯು ಕೈಯ ಉಪಯೋಗವನ್ನು ವಿಶೇಷವಾಗಿ ಅರಿತುಕೊಂಡಿದೆ, ಆದರೆ ಅದು ಎಂದಿಗೂ ಕೈಯು ಮಾಡುವ ಕೆಲಸವನ್ನು ತಾನೇ ಮಾಡಲು ಪ್ರಯತ್ನಿಸುವುದಿಲ್ಲ. ಉದಾಹರಣೆಯಾಗಿ, ಅದು ಎಂದಿಗೂ ತಟ್ಟೆಯಿಂದ ಆಹಾರವನ್ನು ತಾನೇ ತೆಗೆದುಕೊಳ್ಳಲು ಪ್ರಯತ್ನಿಸುವುದಿಲ್ಲ. ಅದು ಆ ಕೆಲಸವನ್ನು ಕೈಯು ಮಾಡುವುದಕ್ಕೆ ಅಡ್ಡಿಯಾಗುವುದಿಲ್ಲ ಮತ್ತು ಕೈಯು ತೆಗೆದುಕೊಂಡು ಕಳುಹಿಸಿದ ಆಹಾರವನ್ನು ಜೀರ್ಣಮಾಡುವ ತನ್ನ ಸ್ವಂತ ಕೆಲಸವನ್ನು ಮಾಡುತ್ತದೆ! ಇದು ಕ್ರಿಸ್ತನ ದೇಹದಲ್ಲಿ ನಾವು ಒಬ್ಬರನ್ನೊಬ್ಬರು ಹೇಗೆ ಅವಲಂಬಿಸಿರಬೇಕು ಎಂಬುದರ ಚಿತ್ರವಾಗಿದೆ.
ವಿಶ್ವಾಸಿಗಳಲ್ಲಿ ಬಹಳಷ್ಟು ಮಂದಿ ಕ್ರಿಸ್ತನ ದೇಹದಲ್ಲಿನ ವಿವಿಧ ಸೇವೆಗಳ ಕುರಿತಾದ ಈ ಸತ್ಯವನ್ನು ಕಂಡುಕೊಂಡಿಲ್ಲ. ಆದರೆ ನೀವು ಈ ಸತ್ಯಾಂಶವನ್ನು ಕಂಡುಕೊಳ್ಳದೇ ಹೋದರೆ, ದೇವರು ಸಾಧಿಸಬೇಕೆಂದು ಬಯಸುವ ಎಲ್ಲವನ್ನು ಪೂರೈಸಲು ನಿಮ್ಮಿಂದ ಎಂದಿಗೂ ಸಾಧ್ಯವಾಗುವುದಿಲ್ಲ.
ಹಳೆಯ ಒಡಂಬಡಿಕೆಯ ಯಾವ ಪ್ರವಾದಿಯ ಸೇವೆಯೂ ಸಮತೋಲನವನ್ನು ಹೊಂದಿರಲಿಲ್ಲ. ಲೋಕದ ದೃಷ್ಟಿಯಲ್ಲಿ ಉತ್ತಮರು ಎನಿಸಿಕೊಳ್ಳುವ ಬೋಧಕರು ಮಾತ್ರ "ಸಮತೋಲನ"ಕ್ಕಾಗಿ ತವಕಿಸುತ್ತಾರೆ. ಹಳೆಯ ಪ್ರವಾದಿಗಳಲ್ಲಿ ಒಬ್ಬನೂ ಸಹ ಸಮತೋಲನವನ್ನು ಹೊಂದಿರಲಿಲ್ಲ. ಅವರು ಒಂದೇ ಸಂಗತಿಯನ್ನು ಮತ್ತೆ ಮತ್ತೆ ಒತ್ತಿ ಹೇಳುತ್ತಿದ್ದರು - ಏಕೆಂದರೆ ಆ ಪೀಳಿಗೆಯ ಇಸ್ರಾಯೇಲ್ಯ ಅಥವಾ ಯೆಹೂದ ಕುಲಗಳಿಗೆ ಅದೇ ಅವಶ್ಯವಾಗಿತ್ತು - ಮತ್ತು ಅದೇ ದೇವರು ಆ ಪ್ರವಾದಿಗಳ ಹೃದಯಗಳಲ್ಲಿ ಹಾಕಿದ್ದ ಭಾರವಾಗಿತ್ತು.
ದೇವರು ನಮ್ಮನ್ನು ಯಾವ ಕಾರ್ಯಕ್ಕಾಗಿ ಕರೆದಿದ್ದಾರೆ, ಎಂಬುದರ ಬಗ್ಗೆ ನಮ್ಮ ಸ್ವಂತ ಮನಸ್ಸುಗಳಲ್ಲಿ ಸ್ಪಷ್ಟತೆ ಇರುವುದು ನಮ್ಮೆಲ್ಲರಿಗೂ ಒಳ್ಳೆಯದು.
"ಕರ್ತ ಯೇಸುವು ನಮಗೆ ನಮ್ಮ ಹೃದಯಗಳಲ್ಲಿ ನೀಡುವ ಭಾರವು ಸಾಮಾನ್ಯವಾಗಿ ಆತನು ತನ್ನ ದೇಹದಲ್ಲಿ (ಕರ್ತನ ಸಭೆಯಲ್ಲಿ) ನಮಗಾಗಿ ಇರಿಸಿರುವ ಸೇವೆಯ ಗುರುತಾಗಿದೆ"
ನಮ್ಮ ವರ ಮತ್ತು ನಮ್ಮ ಕರೆ ಯಾವುದೆಂದು ನಾವೆಲ್ಲರೂ ಕರ್ತನ ಸೇವೆಯನ್ನು ಪ್ರಾರಂಭಿಸಿದ ತಕ್ಷಣ ತಿಳಿದುಕೊಳ್ಳುತ್ತೇವೆಂದು ನಾನು ಹೇಳುತ್ತಿಲ್ಲ. ನಾನು ಮಾಡಬೇಕಾದ ಸೇವೆ ಏನೆಂದು ಸ್ಪಷ್ಟವಾಗಿ ನಾನು ತಿಳಕೊಳ್ಳಲು ನಾನು ಹೊಸದಾಗಿ ಹುಟ್ಟಿದ ನಂತರ 15 ವರ್ಷಗಳ ಸಮಯ ತೆಗೆದುಕೊಂಡಿತು. ನಿಮಗೆ ಅಷ್ಟು ಹೆಚ್ಚು ಸಮಯ ತೆಗೆದುಕೊಳ್ಳದೇ ಇರಬಹುದು. ಬಹಳ ಕಡಿಮೆ ಸಮಯ ಸಾಕಾಗಬಹುದು. ಆ ಸಮಯವನ್ನು ನಿರ್ಣಯಿಸುವ ಕಾರ್ಯವನ್ನು ನೀವು ದೇವರಿಗೆ ಬಿಟ್ಟುಬಿಡಬೇಕಾಗುತ್ತದೆ. ಆದಾಗ್ಯೂ ಕ್ರಿಸ್ತನ ದೇಹದಲ್ಲಿ ಬೇರೆ ಯಾರೂ ಪೂರೈಸಲಾರದ ಒಂದು ನಿರ್ಧಿಷ್ಟವಾದ ಮತ್ತು ವಿಶೇಷವಾದ ಸೇವೆ ನಿಮಗಾಗಿ ಇಡಲ್ಪಟ್ಟಿದೆಯೆಂದು ನೀವು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಇನ್ನೊಂದು ವಿಷಯ, ಆ ಸೇವೆಯು ಎಂದಿಗೂ ಸಮತೋಲನವುಳ್ಳದ್ದು ಆಗಿರುವುದಿಲ್ಲ. ಅದರಲ್ಲಿ ಸಮತೋಲನ ಇರುವುದಿಲ್ಲ. ನೀವು ಕ್ರಿಸ್ತನ ದೇಹದಲ್ಲಿ ವಿಭಿನ್ನ ಸೇವೆಗಳನ್ನು ಹೊಂದಿರುವ ಜನರ ಜೊತೆಗೂಡಿ ಕೆಲಸ ಮಾಡುವುದರ ಮೂಲಕ ಸಮತೋಲನವನ್ನು ಕಂಡುಕೊಳ್ಳಬೇಕು. ನಾವು ಇತರರನ್ನು ಅವಲಂಬಿಸುವಂತೆ ಮಾಡುವ ಮೂಲಕ ನಮ್ಮನ್ನು ದೀನರಾಗಿ ಇರಿಸುವುದು ದೇವರ ಮಾರ್ಗವಾಗಿದೆ. ನಾವು ಕರ್ತರಿಗೆ ಸ್ತೋತ್ರ ಸಲ್ಲಿಸೋಣ!