WFTW Body: 

ಪವಿತ್ರಾತ್ಮನು ನಮ್ಮ ಒಳಭಾಗದಿಂದ ಹರಿಯುವಂತಹ ಜೀವಿತದ ಕಡೆಗೆ ಇರುವಂತ ಮೊದಲ ಹೆಜ್ಜೆ ಯಾವುದೆಂದರೇ, ಅದು ಮಾನಸಾಂತರ ಹೊಂದುವುದಾಗಿದೆ ಅಥವಾ ದೇವರ ಕಡೆಗೆ ತಿರುಗುವುದಾಗಿದೆ ಎಂದು ಯೇಸು ನಮಗೆ ಕಲಿಸಿದರು (ಮತ್ತಾಯ 4:17). ಲೌಕಿಕ ವಸ್ತುಗಳಿಂದ ತಿರುಗಿಕೊಳ್ಳುವುದು ಮಾತ್ರವಲ್ಲದೆ, ಎಲ್ಲದಕ್ಕಿಂತ ಹೆಚ್ಚಾಗಿ, ಪಾಪದಿಂದ ತಿರುಗುವುದಾಗಿದೆ. ಪವಿತ್ರಾತ್ಮನನ್ನು ಪಡೆಯುವ ಮೊದಲು ನಾವು ಪಾಪವನ್ನು ಜಯಿಸಬೇಕಾಗಿರುವುದಿಲ್ಲ. ಪವಿತ್ರಾತ್ಮನು ನಮ್ಮೊಳಗೆ ಬಂದು ನಮಗೆ ಪಾಪವನ್ನು ಜಯಿಸಲು ಸಹಾಯ ಮಾಡುತ್ತಾನೆ. ನಾವು ಕುದುರೆಯ ಮುಂದೆ ಗಾಡಿಯನ್ನು ಕಟ್ಟಬಾರದು. ಕುದುರೆಯು ಗಾಡಿಯ ಮುಂದೆ ಇರಬೇಕು. ನಾನು ಪಾಪವನ್ನು ತ್ಯಜಿಸಲಾಗದು, "ಕರ್ತನೇ ನನಗೆ ಪವಿತ್ರಾತ್ಮನನ್ನು ಕೊಡು" ಎಂದು ಹೇಳಲು ಸಾಧ್ಯವಿಲ್ಲ. ಇದರ ಹೊರತಾಗಿ, "ಕರ್ತನೇ ನನಗೆ ಪಾಪವನ್ನು ಜಯಿಸಲು ಪವಿತ್ರಾತ್ಮನು ಬೇಕು" ಎಂದು ಹೇಳಬೇಕು. ಆದರೆ ನನ್ನ ಮನಸ್ಸಿನಲ್ಲಿ ನಾನು ಪಾಪದಿಂದ ತಿರುಗಬಲ್ಲೆ; ಇದರ ಅರ್ಥ ಏನೆಂದರೆ, ಎಲ್ಲಾ ಪಾಪಗಳನ್ನು ತ್ಯಜಿಸುವ ನಿಜವಾದ ಬಯಕೆಯನ್ನು ಹೊಂದಿರುವ ಮನೋಭಾವವು ನನ್ನದಾಗಿರುತ್ತದೆ.

ಅದನ್ನಷ್ಟೇ ದೇವರು ನಿಮ್ಮನ್ನು ಕೇಳುತ್ತಾರೆ. ನಿಮ್ಮ ಜೀವಿತದಲ್ಲಿ ದೇವರಿಗೆ ಅಗೌರವ ತೋರಿಸುವಂತ ಪ್ರತಿಯೊಂದು ವಿಷಯವನ್ನು ಬಿಟ್ಟುಕೊಡುವಂತ ಮನೋಭಾವವನ್ನು ನೀವು ಹೊಂದಿದ್ದೀರಾ? ನೀವು ಅವುಗಳನ್ನು ನಿಜವಾಗಿಯೂ ಜಯಿಸಬೇಕಾದರೆ ನಿಮಗೆ ಕೆಲವು ವರ್ಷಗಳು ತೆಗೆದುಕೊಳ್ಳಬಹುದು, ಆದರೆ ಇದೊಂದು ದೊಡ್ಡ ವಿಷಯವಲ್ಲ. ನೀವು ಯಾವಾಗಲೂ ಮಾನಸಾಂತರದ ಮನೋಭಾವವನ್ನು ಹೊಂದಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ, ಅಂದರೆ ನೀವು ನಿಮ್ಮ ಹಳೆಯ ಜೀವಿತದಿಂದ ತಿರುಗಿಕೊಂಡಿರುವುದು. ಮಾನಸಾಂತರ ಮತ್ತು ಕ್ರಿಸ್ತನಲ್ಲಿರುವ ನಂಬಿಕೆಯ ಮೂಲಕವೇ ನಾವು ಕ್ರೈಸ್ತ ಜೀವಿತದ ಓಟದ ಆರಂಭಿಕ ಸಾಲಿಗೆ ಬಂದು ನಿಲ್ಲುತ್ತೇವೆ. ಇಬ್ರಿಯರು 12:1-2 ಹೇಳುವಂತೆ ಕ್ರೈಸ್ತ ಜೀವಿತವು ಒಂದು ಓಟದ ಸ್ಪರ್ಧೆಯಂತಿದೆ ಮತ್ತು ನಾನು ಮಾನಸಾಂತರ ಹೊಂದಿದರೆ ಮಾತ್ರ ಓಟದ ಆರಂಭಿಕ ಸಾಲಿಗೆ ಬರಬಹುದು. ಇಂದಿನ ಕ್ರೈಸ್ತತ್ವದಲ್ಲಿ ಮಾನಸಾಂತರ ಮತ್ತು ಪಾಪದಿಂದ ತಿರುಗಿಕೊಳ್ಳುವುದರ ಸಂದೇಶಗಳ ಕೊರತೆ ಇದೆ.

ಮಾನಸಾಂತರದ ಬಗ್ಗೆ ಎಷ್ಟು ಸುವಾರ್ತಾ ಸಂದೇಶಗಳನ್ನು ನೀವು ಕೇಳಿಸಿಕೊಳ್ಳುತ್ತೀರಿ? ಮಾನಸಾಂತರದ ಬಗ್ಗೆ ಎಷ್ಟು ಹಾಡುಗಳನ್ನು ನೀವು ಕೇಳಿಸಿಕೊಳ್ಳುತ್ತೀರಿ? ಯಾವುದೇ ಸಂಗೀತದ ಪುಸ್ತಕವನ್ನು ನೋಡಿ ಅದರಲ್ಲಿ ಎಷ್ಟು ಹಾಡುಗಳು ಮಾನಸಾಂತರದ ಬಗ್ಗೆ ಇದೆ, ಅದು ಬಹಳ ವಿರಳ. ನಂಬುವುದರ ಬಗ್ಗೆ ಅನೇಕ ಹಾಡುಗಳು ನಿಮಗೆ ಸಿಗುತ್ತವೆ. ಉದಾಹರಣೆಗೆ, ಬಹಳ ಚಿರಪರಿಚಿತ ಹಾಡು ಹೀಗೆ ಹೇಳುತ್ತದೆ. 'ದೊಡ್ಡ ಕಾರ್ಯಗಳನ್ನು ಆತನು ಮಾಡಿದ್ದಾನೆ, ಆತನಿಗೆ ಮಹಿಮೆಯಾಗಲಿ'. ಹಾಡಿನ ಒಂದು ಸಾಲಿನಲ್ಲಿ "ನಿಜವಾಗಿ ನಂಬುವಂತ ಕೆಟ್ಟ ಅಪರಾಧಿಯು(ಪಾಪಿ), ಆ ಕ್ಷಣದಲ್ಲೇ ಕ್ಷಮಾಪಣೆಯನ್ನು ಸ್ವೀಕರಿಸುತ್ತಾನೆ" ಎಂಬುದಾಗಿ ಇದೆ. ನಾನು ಅದನ್ನು ಒಪ್ಪುವುದಿಲ್ಲ. ಒಂದು ವೇಳೆ ಒಬ್ಬ ಕೆಟ್ಟ ಪಾಪಿಯಾದ ವ್ಯಕ್ತಿಯು ಒಂದು ಕೂಟಕ್ಕೆ ಹಾಜರಾಗಿರಲಾಗಿ, ಅವನಿಗೆ ಸುವಾರ್ತೆಯ ಬಗ್ಗೆ ಏನು ತಿಳಿಯದೇ, ಆ ಕೂಟಕ್ಕೆ ಬಂದು, 'ನಿಜವಾಗಿ ನಂಬುವಂತ ಕೆಟ್ಟ ಅಪರಾಧಿಯು(ಪಾಪಿ), ಆ ಕ್ಷಣದಲ್ಲೇ ಕ್ಷಮಾಪಣೆಯನ್ನು ಸ್ವೀಕರಿಸುತ್ತಾನೆ" ಎಂಬ ಆ ಹಾಡನ್ನು ಕೇಳಿಸಿಕೊಂಡು, "ಹೌದು, ನಾನು ಕೆಟ್ಟ ಅಪರಾಧಿ (ಪಾಪಿ) ಎಂದು ಅರಿಕೆ ಮಾಡಿ, "ನಾನು ಮಾಡಬೇಕಾದದ್ದು ಒಂದೇ, ಯೇಸುವಿನಲ್ಲಿ ನಂಬಿಕೆ ಇಡಬೇಕು ಅಷ್ಟೇ" ಎಂದು ಹೇಳುತ್ತಾನೆ. "ನಾನು ಆತನನ್ನು ನಂಬುತ್ತೇನೆ. ಆತನು ದೇವರ ಕುಮಾರನು. ಆತನು ನನ್ನ ಪಾಪಗಳಿಗಾಗಿ ಸತ್ತನು" ಎಂದು ಸಹ ಹೇಳುತ್ತಾನೆ. ಹಾಗಾದರೆ, ಅವನು ಕ್ಷಮಿಸಲ್ಪಟ್ಟನೇ? ಇಲ್ಲ. ಅವನು ಮಾನಸಾಂತರ ಪಡದಿದ್ದರೆ, ಅವನು ಕ್ಷಮಿಸಲ್ಪಡುವುದಿಲ್ಲ. ಒಬ್ಬ ದುಷ್ಟ ಅಪರಾಧಿ (ಪಾಪಿ) ಮಾನಸಾಂತರ ಹೊಂದಿ, ಯೇಸುವನ್ನು ನಂಬಿದರೆ ಅವನಿಗೆ ಕ್ಷಮಾಪಣೆ ದೊರೆಯುವುದು. ಅನೇಕ ಜನರು ಹೀಗೆ ಹೇಳುತ್ತಾರೆ, "ನಿಜವಾಗಲೂ ನಂಬುವುದರ ಅರ್ಥ ಅದಾಗಿದೆ" ಎಂಬುದಾಗಿ. ಆದರೆ ಅದು ತಾತ್ವಿಕವಾದ ವಿವರಣೆ. ಒಬ್ಬ ಪರಿವರ್ತನೆ ಹೊಂದದ, ದೇವರನ್ನು ಅರಿಯದ ಪಾಪಿಗೆ ಅದು ತಿಳಿಯುವುದಿಲ್ಲ. ಅವನು ಮಾನಸಾಂತರ ಹೊಂದಬೇಕು ಎಂದು ಅವನಿಗೆ ತಿಳಿಯಲ್ಪಡಬೇಕಾಗಿದೆ. ಅಪೊಸ್ತಲನಾದಂತಹ ಪೇತ್ರನು ಪಂಚಾಶತ್ತಮ ದಿನದಂದು ಸ್ಪಷ್ಟಪಡಿಸಿದ್ದು ಅದನ್ನೇ; ಅದೇ, ಮಾನಸಾಂತರ. ಅದನ್ನೇ ಪೌಲನು ಎಲ್ಲಾ ಕಡೆಯೂ ಬೋಧನೆ ಮಾಡಿದನು. ಅವನು ಎರಡು ಸಂಗತಿಗಳನ್ನು ಬೋಧಿಸಿದನು - "ದೇವರ ಕಡೆಗೆ ತಿರುಗುವುದು (ಮಾನಸಾಂತರ) ಮತ್ತು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ನಂಬಿಕೆ" (ಅಪೊಸ್ತಲರ ಕೃತ್ಯಗಳು 20:21).

ವಿಗ್ರಹಗಳಿಂದ ಮತ್ತು ದೇವರು ನಿಮ್ಮ ಹೃದಯದಲ್ಲಿ ಮೊದಲಿಗನು ಮತ್ತು ಉನ್ನತನು ಆಗಿರಲು ತಡೆಯೊಡ್ಡುವಂತ ಪ್ರತಿಯೊಂದರಿಂದ ದೇವರ ಕಡೆಗೆ ತಿರುಗುವುದೇ ಮಾನಸಾಂತರವಾಗಿದೆ.

ಮಾನಸಾಂತರ ಎಂದರೆ ದೇವರ ಕಡೆಗೆ ತಿರುಗುವುದಾಗಿದೆ, ಸಮೃದ್ಧಿ ಹಾಗೂ ಆರೋಗ್ಯದ ಕಡೆಗೆ ಅಲ್ಲ. ಮಾನಸಾಂತರ ಎಂದರೆ, ರೋಗಗಳಿಂದ ಆರೋಗ್ಯದ ಕಡೆಗೆ ತಿರುಗುವುದಲ್ಲ. ನಾನು ಬಡತನದಿಂದ ಸಮೃದ್ಧಿ ಕಡೆಗೆ ತಿರುಗುತ್ತಿಲ್ಲ. ಇಲ್ಲ! ಅದು ಇಂದಿನ ದಿನಗಳಲ್ಲಿ ಬೋಧಿಸಲ್ಪಡುತ್ತಿರುವ ತಪ್ಪಾದ ಸುವಾರ್ತೆಯಾಗಿದೆ. ನನ್ನ ಜೀವಿತದಲ್ಲಿ ದೇವರಿಗೆ ವಿರುದ್ಧವಾದ ಎಲ್ಲವುಗಳಿಂದ ನಾನು ದೇವರ ಕಡೆಗೆ ತಿರುಗಿಕೊಳ್ಳಬೇಕು (ಮಾನಸಾಂತರ ಪಡಬೇಕು) ಮತ್ತು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ನಂಬಿಕೆಯನ್ನು ಇಡಬೇಕು ಎಂದು ಇಲ್ಲಿ ಹೇಳುತ್ತದೆ. ಥೆಸಲೋನಿಕದವರಿಗೆ ಬರೆದ ಪತ್ರದಲ್ಲಿ ಪೌಲನು ಸಹ ಇದೇ ಮಾತನ್ನು ಹೇಳಿದ್ದಾನೆ. "ದೇವರ ವಾಕ್ಯವು ಅವರ ಬಳಿಗೆ ಬಂದಾಗ, ಅವರು ದೇವರ ಕಡೆಗೆ ತಿರುಗಿದರು ಮತ್ತು ಜೀವವುಳ್ಳ ದೇವರನ್ನು ಸೇವಿಸಲು, ವಿಗ್ರಹಗಳನ್ನು ಬಿಟ್ಟುಬಿಟ್ಟರು" ಎಂದು ಅವನು ಅವರಿಗೆ ಹೇಳುತ್ತಾನೆ (1 ಥೆಸಲೊನಿಕದವರಿಗೆ 1:8-9).

ವಿಗ್ರಹ ಎಂದರೇನು? ವಿಗ್ರಹವೆಂದರೆ ನಿಮ್ಮ ಹೃದಯದಲ್ಲಿ ದೇವರ ಸ್ಥಾನವನ್ನು ಪಡೆದುಕೊಳ್ಳುವ ಯಾವುದೇ ಸಂಗತಿಯಾಗಿರುವುದಾಗಿದೆ. ಅದು ನಿಮ್ಮ ಆರೋಗ್ಯವಾಗಿರಬಹುದು, ನಿಮ್ಮ ಆಸ್ತಿಯಾಗಿರಬಹುದು, ನಿಮ್ಮ ಉದ್ಯೋಗವಾಗಿರಬಹುದು, ನಿಮ್ಮ ಮನೆಯಾಗಿರಬಹುದು, ನಿಮ್ಮ ಕಾರು, ನಿಮ್ಮ ಹೆಂಡತಿ ಅಥವಾ ನಿಮ್ಮ ಮಕ್ಕಳಾಗಿರಬಹುದು, ನಿಮ್ಮ ಹೃದಯದಲ್ಲಿ ದೇವರ ಸ್ಥಾನವನ್ನು ತೆಗೆದುಕೊಳ್ಳುವ ಯಾವುದಾದರೂ ವಿಷಯವಾಗಿರಬಹುದು. ಇಸಾಕನ್ನು ಅಬ್ರಹಾಮನ ಹೃದಯದಲ್ಲಿ ದೇವರ ಸ್ಥಾನವನ್ನು ಪಡೆದುಕೊಂಡ ಹಾಗೆ ಮತ್ತು ಅಬ್ರಹಾಮನಿಗೆ ಆ ವಿಗ್ರಹರಾಧನೆಯಿಂದ ಹೊರಗೆ ಬರುವಂತೆ ದೇವರು ಹೇಳಿದರು. ವಿಗ್ರಹಗಳಿಂದ ಮತ್ತು ದೇವರು ನಿಮ್ಮ ಹೃದಯದಲ್ಲಿ ಮೊದಲಿಗನು ಮತ್ತು ಉನ್ನತನು ಆಗಿರಲು ತಡೆಯೊಡ್ಡುವಂತ ಪ್ರತಿಯೊಂದರಿಂದ ದೇವರ ಕಡೆಗೆ ತಿರುಗುವುದೇ ಮಾನಸಾಂತರವಾಗಿದೆ. ದೇವರ ರಾಜ್ಯಕ್ಕಾಗಿಯೂ ಮತ್ತು ನೀತಿಗಾಗಿಯೂ ತವಕ ಪಡಿರಿ, ಇವುಗಳ ಕೂಡ ನಮ್ಮ ಭೂಲೋಕದ ಅಗತ್ಯತೆಗಳು ನಮಗೆ ಬಂದು ಮುಟ್ಟುತ್ತವೆ ಎಂಬುವುದರ ಅರ್ಥ ಅದೇ ಆಗಿದೆ (ಮತ್ತಾಯ 6:33). ನಿಮಗೆ ಎಂದಿಗೂ ಭೂಲೋಕದ ಅಗತ್ಯತೆಗಳ ಕೊರತೆ ಎದುರಾಗದು ಎಂಬುದರ ಬಗ್ಗೆ ನೀವು ಖಚಿತತೆ ಹೊಂದಿರಬೇಕು. ನೀವು ಎಂದಿಗೂ ಕೋಟ್ಯಾಧಿಪತಿ ಆಗದಿದ್ದರೂ ಸಹ, ನೀವು ದೇವರ ರಾಜ್ಯವನ್ನು ಮೊದಲು ಹುಡುಕಿದಲ್ಲಿ, ನಿಮ್ಮ ಭೂಲೋಕದ ಅಗತ್ಯತೆಗಳು ಪರಿಹರಿಸಲ್ಪಡುತ್ತವೆ ಎಂದು ದೇವರು ಖಚಿತಪಡಿಸುತ್ತಿದ್ದಾರೆ. ಇದಕ್ಕಾಗಿ ದೇವರಿಗೆ ಕೃತಜ್ಞತೆಗಳು.

ಪ್ರತಿಯೊಬ್ಬ ಕ್ರೈಸ್ತನು ಜೀವಿಸಬೇಕಾದ ಮಾರ್ಗ ಇದಾಗಿದೆ. ಭೌತಿಕ ಸಮೃದ್ಧಿ ಮತ್ತು ದೈಹಿಕ ಆರೋಗ್ಯವು ದೇವರ ಆಶೀರ್ವಾದದ ಗುರುತುಗಳು ಎಂದು ಕ್ರೈಸ್ತರು ಯೋಚಿಸುವುದು ಬಹಳ ದು:ಖದ ಸಂಗತಿಯಾಗಿದೆ. ಅದು ನಿಜವಲ್ಲ, ಯಾಕೆಂದರೆ, ಆತ್ಮಿಕ ಕ್ರೈಸ್ತರಿಗಿಂತ, ಹೆಚ್ಚಿನ ಭೌತಿಕ ಸಮೃದ್ಧಿ ಮತ್ತು ಒಳ್ಳೆಯ ದೈಹಿಕ ಆರೊಗ್ಯವನ್ನು ಹೊಂದಿರುವ ಬಹಳಷ್ಟು ಅಕ್ರೈಸ್ತ ಜನರಿದ್ದಾರೆ. ಅದು ಸುವಾರ್ತೆ ಅಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ. ಅದಲ್ಲದೆ, ಒಬ್ಬ ನಿಜವಾದ ಶಿಷ್ಯನಿಗೆ ಇರುವಂತ ಪಾಪದಿಂದ ಬಿಡುಗಡೆಯು ಅವರಿಗೆ ಇರುವುದಿಲ್ಲ.

ಯೇಸು ಮೊದಲು ಸಾರಿದ ಸಂದೇಶ ಮತ್ತು ನಾವು ಸಾರುತ್ತಲೇ ಇರಬೇಕಾದದ್ದು, ಮಾನಸಾಂತರವಾಗಿದೆ. "ನಾನು ಆಜ್ಞಾಪಿಸಿದ್ದೆಲ್ಲವನ್ನು ಕೈಗೊಳ್ಳುವ ಹಾಗೆ ಅವರಿಗೆ ಬೋಧಿಸಿರಿ" ಎಂದು ಯೇಸು ಹೇಳಿದಾಗ, ಯೇಸು ಬೋಧಿಸಿದ್ದು ಏನು? ಮೊಟ್ಟಮೊದಲ ಹೆಜ್ಜೆ ಪಾಪದಿಂದ ತಿರುಗುವುದು, ದೇವರ ಕಡೆಗೆ ತಿರುಗುವುದು ಮತ್ತು ಪರಲೋಕ ರಾಜ್ಯಕ್ಕೆ ನಿಮ್ಮ ಹೃದಯವನ್ನು ತೆರೆಯುವುದು, ಇದರಿಂದ ಮೇಲಣ ವಿಷಯಗಳ ಮೇಲೆ, ಅಂದರೆ ದೇವರ ಸಂಗತಿಗಳ ಮೇಲೆ ನಿಮ್ಮ ಮನಸ್ಸನ್ನು ಇಡಲು ಇದು ಸಹಾಯವಾಗುತ್ತದೆ. - ನೀತಿ, ಸಮಾಧಾನ ಮತ್ತು ಪವಿತ್ರಾತ್ಮನಲ್ಲಿನ ಆನಂದದ ಮೇಲೆ ನಿಮ್ಮ ಮನಸ್ಸು ನೆಟ್ಟಿರುತ್ತದೆ.