WFTW Body: 

ಲೂಕನು ಬರೆದ ಸತ್ಯವೇದದ ಎರಡು ಪುಸ್ತಕಗಳಲ್ಲಿ ಪವಿತ್ರಾತ್ಮನ ಸೇವಾಕಾರ್ಯದ ಕುರಿತು ವಿಸ್ತಾರವಾಗಿ ಬರೆದಿದ್ದಾನೆ. ನಿಜವಾಗಿ, ಆತನು ಹೆಚ್ಚು ಪ್ರಾಮುಖ್ಯತೆ ನೀಡಿದ ಸಂಗತಿಗಳಲ್ಲಿ ಇದು ಒಂದಾಗಿದೆ. ಆತನು ಬರೆದ ಸುವಾರ್ತೆಯಿಂದ ಕೆಲವು ಉದಾಹರಣೆಗಳನ್ನು ನೋಡೋಣ:

ಸ್ನಾನಿಕನಾದ ಯೋಹಾನನು ತಾಯಿಯ ಗರ್ಭದಿಂದಲೇ ’ಪವಿತ್ರಾತ್ಮನಿಂದ ತುಂಬಿಸಲ್ಪಡಲಿದ್ದನು’ (ಲೂಕ. 1:15). ’ಪವಿತ್ರಾತ್ಮನು ಮರಿಯಳ ಮೇಲೆ ಬರಲಿದ್ದನು’ (ಲೂಕ. 1:35). ಎಲಿಸಬೇತಳು ಮತ್ತು ಜಕರೀಯನು ’ಪವಿತ್ರಾತ್ಮ ಭರಿತರಾದರು’ (ಲೂಕ. 1:42, 67). ಸಿಮೆಯೋನನು ’ಪವಿತ್ರಾತ್ಮನಿಂದ ಪ್ರೇರಿತನಾಗಿದ್ದನು’, ಆತನಿಗೆ ’ಪವಿತ್ರಾತ್ಮನ ಮೂಲಕ ದೈವೋಕ್ತಿ ಉಂಟಾಗಿತ್ತು’ ಮತ್ತು ಅವನು ’ಪವಿತ್ರಾತ್ಮ ಪ್ರೇರಣೆಯಿಂದ’ ದೇವಾಲಯಕ್ಕೆ ಬಂದನು (ಲೂಕ 2:25-27). ಯೇಸುವು ’ಪವಿತ್ರಾತ್ಮದಲ್ಲಿ ಸ್ನಾನ ಮಾಡಿಸುವನು’ (ಲೂಕ 3:16). ಯೇಸುವು ತನ್ನ ದೀಕ್ಷಾಸ್ನಾನ ಮಾಡಿಸಿಕೊಂಡಾಗ ಪ್ರಾರ್ಥನೆ ಮಾಡಿದನು (ಅದು ಪವಿತ್ರಾತ್ಮನ ಅಭಿಷೇಕಕ್ಕಾಗಿ ಎನ್ನುವದು ನಿಸ್ಸಂದೇಹ) ಮತ್ತು ಒಡನೆಯೇ ’ಪವಿತ್ರಾತ್ಮನು ಆತನ ಮೇಲೆ ಬಂದಿಳಿದನು’ (ಲೂಕ 3:21,22). ಯೇಸುವು ಶೋಧಿಸಲ್ಪಡಲು ಅಡವಿಗೆ ಹೋಗುವಾಗ, ’ಪವಿತ್ರಾತ್ಮ ಭರಿತನಾಗಿದ್ದನು’ ಮತ್ತು ’ದೇವರಾತ್ಮನಿಂದ ನಡೆಸಲ್ಪಟ್ಟನು’ ಮತ್ತು ಅಲ್ಲಿಂದ ’ಪವಿತ್ರಾತ್ಮನ ಶಕ್ತಿಯಿಂದ ಕೂಡಿದವನಾಗಿ’ ತಿರಿಗಿ ಬಂದನು (ಲೂಕ 4:1,14). ಯೇಸುವು ಸಾರಿದ ಸುವಾರ್ತೆ, ’ನನ್ನ ಮೇಲೆ ಕರ್ತನ ಆತ್ಮನು ಇದ್ದಾನೆ’ (ಲೂಕ 4:18). ’ತಂದೆಯನ್ನು ಬೇಡಿಕೊಂಡವರಿಗೆ ಪವಿತ್ರಾತ್ಮನು ಕೊಡಲ್ಪಡುವನು’ (ಲೂಕ 11:13). ಯೇಸುವು ತನ್ನ ಶಿಷ್ಯರಿಗೆ, ’ಪವಿತ್ರಾತ್ಮನ ಶಕ್ತಿಗಾಗಿ ಕಾದಿರುವಂತೆ’ ಆದೇಶಿಸಿದನು (ಲೂಕ 24:49).

ಇದೇ ರೀತಿ, ’ಅಪೊಸ್ತಲರ ಕೃತ್ಯ’ಗಳಲ್ಲಿ ಲೂಕನು ಐವತ್ತಕ್ಕೂ ಹೆಚ್ಚು ಬಾರಿ ಪವಿತ್ರಾತ್ಮನನ್ನು ನಮೂದಿಸುತ್ತಾನೆ. ಲೂಕನು ನಿಶ್ಚಿತವಾಗಿ ಒಬ್ಬ ಪವಿತ್ರಾತ್ಮ-ಭರಿತ ವ್ಯಕ್ತಿಯಾಗಿದ್ದನು ಮತ್ತು ಆತನು ಪವಿತ್ರಾತ್ಮ ವರದ ಮೂಲಕವಾಗಿ ಸಾಧ್ಯವಾಗುವ ಹೊಸ-ಒಡಂಬಡಿಕೆಯ ಜೀವನದ ಬಗ್ಗೆ ಉತ್ಸುಕನಾಗಿದ್ದನು. ಆತನ ಹಾಗೆ ಎಷ್ಟು ಕ್ರೈಸ್ತರು ಉತ್ಸಾಹದಿಂದ ಕೂಡಿದ್ದಾರೆಂದು ನಾನು ಯೋಚಿಸುತ್ತೇನೆ. ಹೊಸ ಒಡಂಬಡಿಕೆಯ ಮೊದಲ ಐದು ಪುಸ್ತಕಗಳಲ್ಲಿ, ಪ್ರತಿಯೊಂದರ ಆರಂಭದಲ್ಲಿ ಪವಿತ್ರಾತ್ಮನ ಅಭಿಷೇಕವು ಪ್ರಸ್ತಾವಿಸಲ್ಪಟಿದೆ. ಹೊಸ ಒಡಂಬಡಿಕೆಯ ಅವಧಿಯಲ್ಲಿ ಪವಿತ್ರಾತ್ಮನ ಸೇವಾಕಾರ್ಯದ ಪ್ರಾಮುಖ್ಯತೆ ಎಷ್ಟು ಹೆಚ್ಚಿನದ್ದೆಂದು ಇದು ನಮಗೆ ಕಲಿಸುತ್ತದೆ. ಹಾಗಾಗಿ, ಪಿಶಾಚನು ಎಲ್ಲಕ್ಕೂ ಹೆಚ್ಚಾಗಿ ನಕಲಿ ಮಾಡಲು ಬಯಸುವ ವಿಷಯ, ಪವಿತ್ರಾತ್ಮನ ಅಭಿಷೇಕವಾಗಿದೆ; ಮತ್ತು ಇಂದು ನಾವು ಇಂತಹ ನಕಲಿ ಸಂಗತಿಗಳನ್ನು ಎಲ್ಲೆಲ್ಲೂ ಹೇರಳವಾಗಿ ನೋಡುತ್ತೇವೆ.

ವಿಶ್ವಾಸಿಗಳು ಪವಿತ್ರಾತ್ಮನ ಅಭಿಷೇಕ ಪಡೆಯದಂತೆ ಪಿಶಾಚನು ಹೇಗೆ ಖಾತ್ರಿ ಮಾಡುತ್ತಾನೆ? ಮೊದಲನೆಯದಾಗಿ, ಅವರಲ್ಲಿ ಕೆಲವರಿಗೆ ಯಾವುದೋ ಭೌತಿಕ ಅನುಭವ ಅಥವಾ ಭಾವೋದ್ರೇಕದ ಅನುಭವವನ್ನು ನೀಡುವ ಮೂಲಕ. ಅವರಲ್ಲಿ ಪಾಪದ ಮೇಲೆ ಜಯ ಗಳಿಸಿ, ಕರ್ತನ ಸೇವೆ ಮಾಡುವದಕ್ಕೆ ಬೇಕಾದ ಸಾಮರ್ಥ್ಯ ಇರುವುದಿಲ್ಲ. ಆದರೆ ಅವರಲ್ಲಿ ಪವಿತ್ರಾತ್ಮನ ಅಭಿಷೇಕವನ್ನು ಹೊಂದಿದ್ದೇವೆಂಬ ಆಶ್ವಾಸನೆಯನ್ನು ಸೈತಾನನು ಉಂಟುಮಾಡುತ್ತಾನೆ. ಇಂಥವರು ಮುಂದೆ ಯಾವತ್ತೂ ಪವಿತ್ರಾತ್ಮನ ಅಭಿಷೇಕವನ್ನು ಪಡೆಯಲು ಪ್ರಯತ್ನಿಸುವುದಿಲ್ಲ, ಏಕೆಂದರೆ ತಾವು ಅದನ್ನು ಈಗಾಗಲೇ ಹೊಂದಿದ್ದೇವೆಂದು ಅವರಿಗೆ ಮನದಟ್ಟಾಗಿರುತ್ತದೆ. ಲಕ್ಷಾಂತರ ಕ್ರೈಸ್ತರು ಇಂತಹ ಸ್ಥಿತಿಯಲ್ಲಿ ಎಲ್ಲೆಡೆ ಕಂಡುಬರುತ್ತಾರೆ. ಅವರು ಪಾಪಗಳಿಗೆ ಸೋತವರು, ಹಣದಾಶೆಯುಳ್ಳವರು ಮತ್ತು ಲೋಕಕ್ಕಾಗಿ ಜೀವಿಸುವವರು ಆಗಿರುತ್ತಾರೆ. ಆದರೆ ಅವರು "ಅನ್ಯಭಾಷೆ" ಎಂದು ಹೇಳಿಕೊಳ್ಳುತ್ತಾ ಯಾವುದೋ ಅರ್ಥವಿಲ್ಲದ ಶಬ್ದವನ್ನು ಉಂಟುಮಾಡುತ್ತಾರೆ, ಅಲ್ಲದೆ ಕೆಲವು ಅಸಾಮಾನ್ಯ ದೈಹಿಕ ಅನುಭವ ಮತ್ತು ದರ್ಶನಗಳ ಅನುಭವ ಪಡೆದಿದ್ದೇವೆಂದು ಹೇಳಿಕೊಳ್ಳುತ್ತಾರೆ. ಎರಡನೆಯದಾಗಿ, ವಿಶ್ವಾಸಿಗಳಲ್ಲಿ ಇತರ ಕೆಲವರು (ಇವರು ಪವಿತ್ರಾತ್ಮನ ಅಭಿಷೇಕದ ಕುರಿತಾದ ಸಿದ್ಧಾಂತದ ವಿಷಯದಲ್ಲಿ ಮೊದಲನೆ ಪಂಗಡಕ್ಕೆ ತದ್ವಿರುದ್ಧವಾಗಿ ನಂಬುವವರು) ಮೊದಲ ಪಂಗಡದ ಸ್ಪಷ್ಟ ನಕಲಿತನಕ್ಕೆ ಪ್ರತಿಯಾಗಿ, ಪವಿತ್ರಾತ್ಮನ ಅಭಿಷೇಕದಿಂದ ಸಂಪೂರ್ಣವಾಗಿ ದೂರ ಸರಿಯುವ ಪ್ರತಿಕ್ರಿಯೆಯನ್ನು ತೋರಿಸುತ್ತಾರೆ. ಈ ರೀತಿಯಾಗಿ ಸೈತಾನನು ಎರಡೂ ವರ್ಗಗಳ ವಿಶ್ವಾಸಿಗಳು (ವಿಶ್ವಾಸಿಗಳಲ್ಲಿ ಹೆಚ್ಚಿನವರು ಇವರೆಡು ಗುಂಪುಗಳಲ್ಲಿ ಇದ್ದಾರೆ) ನಿಜವಾದ ದೇವರ ಬಲ ಮತ್ತು ಪವಿತ್ರಾತ್ಮ ಅಭಿಷೇಕದಿಂದ ವಂಚಿತರಾಗುವಂತೆ ನೋಡಿಕೊಳ್ಳುತ್ತಾನೆ. ನೀವು ಈ ಎರಡೂ ವರ್ಗಗಳಿಂದ ದೂರವಿರುವಂತೆ ಎಚ್ಚರ ವಹಿಸಿರಿ.

ಸ್ನಾನಿಕನಾದ ಯೋಹಾನನು ತನ್ನ ತಾಯಿಯ ಗರ್ಭದಿಂದಲೇ ಹೇಗೆ ಪವಿತ್ರಾತ್ಮ-ಭರಿತನಾದನು? ಅವನು ಭ್ರೂಣಾವಸ್ಥೆಯಲ್ಲಿ ತನ್ನ ತಾಯಿಯ ಉದರದಲ್ಲಿ ಪವಿತ್ರಾತ್ಮನಿಗಾಗಿ ಕಾದು ನಿಂತಿದ್ದನೆ? ಆತನು ಗರ್ಭದಲ್ಲಿರುವಾಗ ಯಾರಾದರೂ ಆತನಿಗೆ ಪ್ರಾಥಿಸುವಂತೆ ಹೇಳಿದರೇ? ಇಲ್ಲ. ದೇವರು ಅವನನ್ನು ತುಂಬಿಸಿದರು. ನಿಮ್ಮನ್ನು ಪವಿತ್ರಾತ್ಮನಿಂದ ತುಂಬಿಸುವುದು ದೇವರ ಕಾರ್ಯವಾಗಿದೆ. ನಾವು ಅವರಿಗೆ ಅಧೀನರಾದರೆ, ಅವರು ನಮ್ಮನ್ನು ತುಂಬಿಸುತ್ತಾರೆ. ನಿಮ್ಮ ನಂಬಿಕೆಯನ್ನು ಬಲಪಡಿಸುವ ಒಂದು ಸಂಗತಿಯನ್ನು ಕೇಳಿರಿ: ತಾಯಿಯ ಗರ್ಭದಲ್ಲಿರುವ ಅಸಹಾಯಕ ಎಳೆಗೂಸಿಗೆ ದೇವರು ಪವಿತ್ರಾತ್ಮನನ್ನು ತುಂಬುವುದಾದರೆ, ಅವರಿಗೆ ನಿಮ್ಮನ್ನು ತುಂಬಲು ಆಗದೇ? ನೀವು ಕಳಪೆಯಾದ ನಕಲಿ ಸಂಗತಿಗಳಲ್ಲಿ ತೃಪ್ತಿಗೊಳ್ಳಬೇಡಿರಿ. ನಾನು ನನ್ನ ಎಳೆ ವಯಸ್ಸಿನಲ್ಲಿ ದೇವರ ಮುಂದೆ ಹೇಳಿದ್ದೇನೆಂದರೆ, ನಕಲಿ ಸಂಗತಿಗಳಿಂದ ನಾನು ಎಂದಿಗೂ ತೃಪ್ತನಾಗುವುದಿಲ್ಲ; ಯಥಾರ್ಥ ಅನುಭವಕ್ಕಾಗಿ ಹತ್ತು ವರ್ಷ ಕಾಯಬೇಕಾದರೂ ನಾನು ಸಿದ್ಧನು, ಎಂದು. ನನ್ನ ಕಾಯುವಿಕೆ ಸಾರ್ಥಕವಾಯಿತು. ನೀವು ಯಥಾರ್ಥವಾದ ಆತ್ಮನ ತುಂಬುವಿಕೆಯನ್ನು ಪಡೆದಾಗ, ಅದು ನಿಮ್ಮ ಜೀವನ ಶೈಲಿಯನ್ನು ಬದಲಾಯಿಸುತ್ತದೆ. ಸ್ನಾನಿಕ ಯೋಹಾನನು ಪವಿತ್ರಾತ್ಮನಿಂದ ತುಂಬಲ್ಪಟ್ಟಾಗ, ಅವನು ಕರ್ತನ ದೃಷ್ಟಿಯಲ್ಲಿ ಮಹಾಪುರುಷನಾದನು (ಲೂಕ. 1:15). ಪವಿತ್ರಾತ್ಮನು ನಮ್ಮನ್ನೂ ಸಹ ಹೀಗೆ ಮಾಡಲು ಬಯಸುತ್ತಾನೆ - ಕರ್ತನ ದೃಷ್ಟಿಯಲ್ಲಿ ಮಹಾಪುರುಷರು, ಮಾನವನ ದೃಷ್ಟಿಯಲ್ಲಿ ಅಲ್ಲ.