WFTW Body: 

(... ಹಿಂದಿನ ವಾರದಿಂದ ಮುಂದುವರಿದಿದೆ)

ಕರುಣೆ ಮತ್ತು ಕೃಪೆ
ನಾನು ಒಬ್ಬ ವಿಶ್ವಾಸಿಯಾದ ನಂತರ ಅನೇಕ ವರ್ಷಗಳ ವರೆಗೆ ಕರುಣೆ ಮತ್ತು ಕೃಪೆ ಎರಡನ್ನೂ ಒಂದೇ ಎಂದು ಪರಿಗಣಿಸಿದ್ದೆ. ಆದರೆ ಒಂದು ದಿನ ನಾನು ಕರುಣೆ ಎಂಬುದು ಪ್ರಾಥಮಿಕವಾಗಿ ಪಾಪ ಕ್ಷಮಾಪಣೆಗಾಗಿ ಕೊಡಲ್ಪಟ್ಟಿದೆ ಮತ್ತು ಕೃಪೆ ಎಂಬುದು ನಮ್ಮ ಜೀವನದಲ್ಲಿ ನಾವು ಕಷ್ಟ ಮತ್ತು ಶೋಧನೆಗಳನ್ನು ಎದುರಿಸಲು ಹಾಗೂ ಪಾಪವನ್ನು ಜಯಿಸಲು ದೇವರು ಕೊಟ್ಟಿರುವ ಬಲ ಎಂಬುದನ್ನು ಕಂಡುಕೊಂಡೆ (ಇಬ್ರಿ. 4:16; ರೋಮಾ. 6:14; 2 ಕೊರಿಂಥ.12:9). ಅದಲ್ಲದೆ ಈ ಕೃಪೆ ಎಂಬುದು ಯೇಸು ಕ್ರಿಸ್ತನಿಂದ ಬಂದಿತು (ಯೋಹಾ. 1:17); ಪವಿತ್ರಾತ್ಮನು ಪೆಂತೆಕೊಸ್ತ (ಪಂಚಾಶತ್ತಮ) ದಿನದಂದು ನಮ್ಮಲ್ಲಿ ನೆಲೆಸಲು ಬಂದ ನಂತರ ಮಾತ್ರವೇ ಅದು ನಮಗೆ ಲಭ್ಯವಾಯಿತು. ಈ ಅಂಶವೂ ಸಹ ನನ್ನ ಸಂದೇಶದ ಒಂದು ಪ್ರಮುಖ ಭಾಗವಾಯಿತು.

ಕ್ರಿಸ್ತನು ಒಬ್ಬ ಮನುಷ್ಯನಾಗಿದ್ದನು
ಎಲ್ಲಾ ಕ್ರೈಸ್ತರು ಕ್ರಿಸ್ತನನ್ನು ದೇವರೆಂದು ಆರಾಧನೆ ಮಾಡುತ್ತಿದ್ದರೂ ಸಹ, ಅವರಲ್ಲಿ ಕೆಲವೇ ಕೆಲವರು ಆತನು ಒಬ್ಬ ಮನುಷ್ಯನೂ ಸಹ ಆಗಿದ್ದನು ಎಂಬುದನ್ನು ಮತ್ತು ನಾವು ಆತನ ಮಾದರಿಯನ್ನು ಅನುಸರಿಸಬಹುದಾಗಿದೆ ಎಂಬುದನ್ನು ಒತ್ತಿ ಹೇಳುತ್ತಿದ್ದರು. ಆತನ ಈ ಮನುಷ್ಯ ಸ್ವಭಾವವನ್ನು ಸ್ಪಷ್ಟವಾಗಿ ಸಾರುತ್ತಿದ್ದ ಕೆಲವರು, ಅವನು ಭೂಮಿಯಲ್ಲಿದ್ದಾಗ ದೇವರಾಗಿದ್ದನು ಎಂಬುದನ್ನು ನಿರಾಕರಿಸುತ್ತಿದ್ದರು. ಸತ್ಯವೇದದಲ್ಲಿ ಹೇಳಲಾಗಿರುವಂತೆ, ಕ್ರಿಸ್ತನು ಸಂಪೂರ್ಣವಾಗಿ ದೇವರಾಗಿದ್ದನು ಮತ್ತು ಸಂಪೂರ್ಣವಾಗಿ ಮನುಷ್ಯನಾಗಿದ್ದನು ಎಂದು ಸಾರುತ್ತಿದ್ದ ಕ್ರೈಸ್ತರು ಬಹಳ ಅಪರೂಪವಾಗಿ ಕಂಡುಬರುತ್ತಿದ್ದರು. ಆದರೆ ಕ್ರಿಸ್ತನು ಮನುಷ್ಯನಾಗಿ ಪಾಪವನ್ನು ಜಯಿಸಿದ್ದನ್ನು ಕಂಡುಕೊಳ್ಳುವುದರಲ್ಲಿ "ದೈವಿಕ ಜೀವನವನ್ನು ನಡೆಸುವ ರಹಸ್ಯ"ವು ಅಡಗಿದೆ, ಎಂಬುದನ್ನು ನಾನು ಕಂಡುಕೊಂಡೆ (1ತಿಮೊ. 3:16; ಇಬ್ರಿ. 4:15,16). ನಾನು ನನ್ನ ಉಪದೇಶದಲ್ಲಿ ಈ ಅಂಶಕ್ಕೂ ಕೂಡ ಹೆಚ್ಚಿನ ಒತ್ತನ್ನು ನೀಡಿದೆ.

"ವಿಶ್ವಾಸಿಗಳಲ್ಲಿರುವ ಅತಿ ದೊಡ್ಡ ಅವಶ್ಯಕತೆ ಏನೆಂದರೆ, ಅವರ ಕಣ್ಣುಗಳು ತೆರೆಯಲ್ಪಟ್ಟು, ಹಳೇ ಒಡಂಬಡಿಕೆಗೆ ಹೋಲಿಸಿ ನೋಡಿದಾಗ ಹೊಸ ಒಡಂಬಡಿಕೆಯಲ್ಲಿ ಇರುವಂತ ಶ್ರೇಷ್ಠವಾದ ಮಹಿಮೆಯನ್ನು ಅವರು ಕಂಡುಕೊಳ್ಳಬೇಕು"

ಹಣ
ನಾವು 1975ನೇ ಇಸವಿಯಲ್ಲಿ ನಮ್ಮ ಸೇವೆಯನ್ನು ಪ್ರಾರಂಭಿಸಿದಾಗ, ಲೌಕಿಕ ಸಮೃದ್ಧಿಯ ಸುವಾರ್ತೆ (ಇಂದು ನಾವು ಇದನ್ನು ತುಂಬಾ ಕೇಳುತ್ತೇವೆ) ಇನ್ನೂ ಪ್ರಚಲಿತವಾಗಿರಲಿಲ್ಲ. ಆದರೆ ಆಗಲೂ ಕ್ರೈಸ್ತರು ಹಣವನ್ನು ಇಂದಿನಂತೆಯೇ ಪ್ರೀತಿಸುತ್ತಿದ್ದರು. ಹಣವನ್ನು ಪ್ರೀತಿಸುವವರು ದೇವರನ್ನು ದ್ವೇಷಿಸುತ್ತಾರೆ ಎಂದು ಯೇಸುವು ಕಲಿಸಿದರು (ಲೂಕ. 16:13). ಆದರೆ ಈ ಸಂದೇಶವನ್ನು ಒಬ್ಬನೇ ಒಬ್ಬ ಬೋಧಕನಾದರೂ ಬೋಧಿಸುವುದನ್ನು ನಾನು ಯಾವತ್ತೂ ಕೇಳಲಿಲ್ಲ. ಹೆಚ್ಚಿನ ಸಭೆಗಳು ತಮ್ಮ ಸದಸ್ಯರು ತಮ್ಮ ಆದಾಯದ ದಶಮಾಂಶವನ್ನು ಸಭೆಗೆ ಸಲ್ಲಿಸಬೇಕೆಂದು ಮಾತ್ರ ಕಲಿಸುತ್ತಿದ್ದವು. ಆದರೆ ದಶಮಾಂಶ ಪದ್ಧತಿಯು ಕ್ರಿಸ್ತನು ರದ್ದುಪಡಿಸಿದ ಹಳೆಯ ಒಡಂಬಡಿಕೆಯ ನಿಯಮದ ಭಾಗವಾಗಿತ್ತು. ಸಂತೋಷದಿಂದಲೂ, ಸ್ವಯಂಪ್ರೇರಣೆಯಿಂದಲೂ, ಯಾರಿಗೂ ತಿಳಿಯದಂತೆಯೂ ಕಾಣಿಕೆಯನ್ನು ಸಲ್ಲಿಸುವ ಹೊಸ ಒಡಂಬಡಿಕೆಯ ವಿಮೋಚನೆಯ ಸಂದೇಶವನ್ನು ನಾನು ಬೋಧಿಸಿದೆ.

ನಾನು ನೋಡಿದ ಇನ್ನೊಂದು ವಿಷಯವೆಂದರೆ ಭಾರತದಲ್ಲಿ (ನನಗೆ ತಿಳಿದ ಹಾಗೆ)ಯಾವುದೇ ಸಭೆಯೂ ಮದುವೆಗಳಲ್ಲಿ ವರದಕ್ಷಿಣೆ ಕೇಳುವ ಅನಿಷ್ಟ ಪದ್ಧತಿಯನ್ನು ಬಲವಾಗಿ ವಿರೋಧಿಸಿ ಬೋಧನೆ ಮಾಡುತ್ತಿರಲಿಲ್ಲ - ಭಾರತದಾದ್ಯಂತ ಮಹಿಳೆಯರು ಇದರ ಮೂಲಕ ಅವಮಾನಕ್ಕೆ ಈಡಾಗಿದ್ದರು. ನಾನು ಈ ಕೆಟ್ಟ ಪದ್ಧತಿಯ ವಿರುದ್ಧ ಬಲವಾಗಿ ಬೋಧಿಸಿದೆ; ಮತ್ತು ಮದುವೆಗಳನ್ನು ನಡೆಸಿಕೊಡುವ ಸಂದರ್ಭದಲ್ಲಿ, ವಧೂ-ವರರ ನಡುವೆ ಅಥವಾ ಅವರ ಪೋಷಕರ ನಡುವೆ ಯಾವುದೇ ಹಣ ವಿನಿಮಯವಾಗಿಲ್ಲ ಎಂದು ಬರೆಸಿ, ವಧು ಮತ್ತು ವರ ಇಬ್ಬರಿಂದಲೂ ಸಹಿ ಮಾಡಿಸಿ, ಪ್ರಮಾಣಪತ್ರಗಳನ್ನು ತೆಗೆದುಕೊಳ್ಳುತ್ತಿದ್ದೆ.

ಪ್ರಾಣ ಮತ್ತು ಆತ್ಮ
ಇದೂ ಕೂಡ ಅಂದಿನ ದಿನಗಳಲ್ಲಿ ಬೋಧಿಸಲ್ಪಡದ ಇನ್ನೊಂದು ವಿಷಯವಾಗಿತ್ತು. ಹಳೆಯ ಒಡಂಬಡಿಕೆಯ ಕಾಲದಲ್ಲಿ, ಮನುಷ್ಯನ ಪ್ರಾಣ ಮತ್ತು ಅವನ ಆತ್ಮದ ನಡುವಿನ ವ್ಯತ್ಯಾಸದ ಬಗ್ಗೆ ಸ್ಪಷ್ಟವಾದ ಪ್ರಕಟಣೆ ಇರಲಿಲ್ಲ. ಆದರೆ ಹೊಸ ಒಡಂಬಡಿಕೆಯು ಇವೆರಡರ ನಡುವೆ ಇರುವ ವ್ಯತ್ಯಾಸವನ್ನು ಸ್ಪಷ್ಟವಾಗಿ ತೋರಿಸುತ್ತದೆ (ಇಬ್ರಿ.4:12). ಹೆಚ್ಚಿನ ಕ್ರೈಸ್ತರು ಈ ವ್ಯತ್ಯಾಸವನ್ನು ಸ್ಪಷ್ಟವಾಗಿ ತಿಳಿದಿರಲಿಲ್ಲವಾದ್ದರಿಂದ, ಅವರು ಬುದ್ಧಿವಂತ ಬೋಧಕರ ಮನೋವೈಜ್ಞಾನಿಕ ಕುತಂತ್ರಗಳಿಂದ ಮತ್ತು ಪವಿತ್ರಾತ್ಮನ ವರಗಳ ನಕಲಿ ಭಾವನಾತ್ಮಕ ಪ್ರದರ್ಶನಗಳಿಂದ ಮರುಳಾಗುತ್ತಿದ್ದರು. ಹಾಗಾಗಿ ನಾನು ಜನರಿಗೆ ನಿಜವಾದ ಆತ್ಮಿಕತೆ ಹಾಗೂ ಕೇವಲ ಭಾವನಾತ್ಮಕ ನಡವಳಿಕೆಯ ನಡುವಿನ ವ್ಯತ್ಯಾಸವನ್ನು ಕಲಿಸಿಕೊಟ್ಟೆ.

ಕ್ರಿಸ್ತನ ಸ್ಥಳೀಯ ಶರೀರ
ದೇವರ ಅಂತಿಮ ಉದ್ದೇಶ ಅಥವಾ ಗುರಿ ತನ್ನ ಎಲ್ಲಾ ಮಕ್ಕಳನ್ನು ಕ್ರಿಸ್ತನಲ್ಲಿ ಒಂದೇ ದೇಹವಾಗಿ ಮಾಡುವುದಾಗಿದೆ ಎಂಬುದನ್ನು ನಾನು ಸ್ಪಷ್ಟವಾಗಿ ನೋಡಿದೆ. ಹೊಸ ಒಡಂಬಡಿಕೆಯ ಕ್ರೈಸ್ತ ಸಭೆಯು ಒಂದು ಶರೀರವಾಗಿರಬೇಕು ಮತ್ತು ಒಂದು ಜನ-ಸಮೂಹವಲ್ಲ. ಕ್ರಿಸ್ತನ ಶರೀರದಲ್ಲಿ (ಮನುಷ್ಯನ ದೇಹದಲ್ಲಿ ಇರುವಂತೆ), ಪ್ರತಿಯೊಂದು ಅಂಗವು ಇತರ ಅಂಗಗಳೊಂದಿಗೆ ಸಂಪರ್ಕವನ್ನು ಹೊಂದಿರುತ್ತದೆ ಮತ್ತು ಪ್ರತಿಯೊಂದು ಅಂಗವೂ ಒಂದು ವಿಶಿಷ್ಟವಾದ ಕಾರ್ಯವನ್ನು ಹೊಂದಿರುತ್ತದೆ. ಕ್ರಿಸ್ತನೊಬ್ಬನೇ ಶರೀರದ ತಲೆಯಾಗಿರುತ್ತಾನೆ ಮತ್ತು ಉಳಿದವರೆಲ್ಲರೂ ಸಮಾನ ಅಂಗಗಳಾಗಿರುತ್ತಾರೆ. ಪ್ರಪಂಚದ ಪ್ರತಿಯೊಂದು ಪ್ರದೇಶದಲ್ಲಿ ಈ ಮಾದರಿಯ ಸಭೆ ಇರಬೇಕೆಂದು ದೇವರು ಬಯಸುತ್ತಾರೆ, ಎಂಬುದನ್ನು ನಾನು ತಿಳಿದುಕೊಂಡೆ. ಹಾಗಾಗಿ ಭೂಲೋಕದಲ್ಲಿ ಎಲ್ಲೆಲ್ಲಿ ಸಾಧ್ಯವಾಗುತ್ತದೋ ಅಲ್ಲಿ ಕ್ರಿಸ್ತನ ಶರೀರದ ಇಂತಹ ಮಾದರಿಯನ್ನು ಕಟ್ಟುವುದಕ್ಕಾಗಿ ನನ್ನ ಜೀವನವನ್ನು ಉಪಯೋಗಿಸಿಕೊಳ್ಳಲು ನಿರ್ಧರಿಸಿದೆ.

ಹೊಸ ಒಡಂಬಡಿಕೆ
ಇವೆಲ್ಲವು ಕ್ರಿಸ್ತನ ಮರಣ ಮತ್ತು ಪುನರುತ್ಥಾನದ ಮೂಲಕ ದೇವರು ಮನುಷ್ಯನೊಂದಿಗೆ ಮಾಡಿಕೊಂಡ ಹೊಸ ಒಡಂಬಡಿಕೆಗೆ ಸಂಬಂಧಿಸಿದ ಸತ್ಯಾಂಶಗಳಾಗಿದ್ದವು. ವಿಶ್ವಾಸಿಗಳ ಅತಿ ದೊಡ್ಡ ಅವಶ್ಯಕತೆ ಏನೆಂದರೆ, ಅವರ ಕಣ್ಣುಗಳು ತೆರೆಯಲ್ಪಟ್ಟು, ಹಳೆಯ ಒಡಂಬಡಿಕೆಗೆ ಹೋಲಿಸಿ ನೋಡಿದಾಗ ಹೊಸ ಒಡಂಬಡಿಕೆಯಲ್ಲಿ ಇರುವಂತ ಶ್ರೇಷ್ಠವಾದ ಮಹಿಮೆಯನ್ನು ಅವರು ಕಂಡುಕೊಳ್ಳಬೇಕು, ಎಂಬುದನ್ನು ನಾನು ತಿಳಿದುಕೊಂಡೆ. ಆದ್ದರಿಂದ ಇದು ನನ್ನ ಎಲ್ಲಾ ಉಪದೇಶಗಳ ಪ್ರಮುಖ ಸಂದೇಶವಾಯಿತು - ಮತ್ತು ಇಂದಿಗೂ ಸಹ ಅದನ್ನು ಹಾಗೆಯೇ ಮುಂದುವರಿಸುತ್ತಿದ್ದೇನೆ. ದೇವರು ನನಗೆ ಪ್ರಕಟಪಡಿಸಿದ ಪ್ರಮುಖ ಸತ್ಯಾಂಶಗಳಲ್ಲಿ ಇವು ಕೆಲವಾಗಿದ್ದವು; ನಾನು ಸಾಧ್ಯವಿದ್ದ ಎಲ್ಲಾ ವಿಧಾನಗಳ ಮೂಲಕ - ಉಪದೇಶ, ಪುಸ್ತಕಗಳು, ಕ್ಯಾಸೆಟ್ ಟೇಪುಗಳು, ಇತ್ಯಾದಿಗಳನ್ನು ಬಳಸಿಕೊಂಡು - ಇವನ್ನು ನನ್ನ ಸಹ- ವಿಶ್ವಾಸಿಗಳಿಗೆ ಸಾರಿಹೇಳಲು ಪ್ರಯತ್ನಿಸಿದೆ. ಭಾರತದ ಎಲ್ಲಾ ಕಡೆ ಈ ಸತ್ಯಾಂಶಗಳನ್ನು ಸಾರಬೇಕೆಂಬ ಭಾರ ನನ್ನಲ್ಲಿತ್ತು. ಆದರೆ ದೇವರು ಈ ಸಂದೇಶಗಳನ್ನು ಇನ್ನೂ ವಿಸ್ತಾರವಾಗಿ - ಇತರ ಅನೇಕ ದೇಶಗಳ ಜನರಿಗೂ ಸಹ - ಹರಡುವುದು ಸೂಕ್ತವೆಂದು ನಿರ್ಧರಿಸಿದರು.

ಎಲ್ಲಾ ಮಹಿಮೆ ದೇವರ ನಾಮಕ್ಕೆ ಮಾತ್ರವೇ ಸಲ್ಲಲಿ.