ನಾವು ಒಂದು ಕ್ರೈಸ್ತಸಭೆಯಾಗಿ ಒಂದುಗೂಡಲು ಆರಂಭಿಸಿದ ಶುರುವಿನಲ್ಲಿ, ಜಯದ ಜೀವಿತವೆಂದರೆ ಏನು ಎಂಬುದನ್ನು - ನಮ್ಮ ವೈಯಕ್ತಿಕ ಜೀವನದಲ್ಲಾಗಲೀ ಅಥವಾ ನಮ್ಮ ಕುಟುಂಬದ ಜೀವನದಲ್ಲಾಗಲೀ - ನಾವು ಅರಿತಿರಲಿಲ್ಲ. ನಾವು ಇತರ ವಿಶ್ವಾಸಿಗಳನ್ನು ದೃಷ್ಟಿಸಿ ನೋಡಿದಾಗ, ಅವರ ಪರಿಸ್ಥಿತಿಯೂ ಇದೇ ಆಗಿದೆಯೆಂದು ನಮಗೆ ತಿಳಿಯಿತು. ಹಾಗಾಗಿ ಅವರಲ್ಲಿ ಯಾರಿಂದಲೂ ನಾವು ಸಹಾಯವನ್ನು ಪಡೆಯುವ ಸಾಧ್ಯತೆ ಇರಲಿಲ್ಲ. ಹಾಗಾಗಿ ನಾವು ಆಗಾಗ ಸಭೆಯಾಗಿ ಉಪವಾಸದೊಂದಿಗೆ ಪ್ರಾರ್ಥನೆ ಮಾಡುತ್ತಾ, ಉತ್ತರ ಕೊಡಬೇಕೆಂದು ದೇವರನ್ನು ಯಾಚಿಸಿದೆವು. ನಾವು ಹೆಚ್ಚಿನ ಸಾರ್ವಜನಿಕ ರಜಾದಿನಗಳನ್ನು ಉಪವಾಸ ಪ್ರಾರ್ಥನೆಗಾಗಿ ಉಪಯೋಗಿಸುತ್ತಿದ್ದೆವು. ದೇವರು ನಮಗೆ ತಿಳಿದಿರದಂತಹ ಹೊಸ ಒಡಂಬಡಿಕೆಯ ಸತ್ಯಾಂಶಗಳನ್ನು ತನ್ನ ವಾಕ್ಯದ ಮೂಲಕ ನಮಗೆ ಸ್ವಲ್ಪಸ್ವಲ್ಪವಾಗಿ ಪ್ರಕಟ ಪಡಿಸಲು ಆರಂಭಿಸಿದರು. ನಾವು ಈ ಸತ್ಯಾಂಶಗಳನ್ನು ಗ್ರಹಿಸಿಕೊಳ್ಳುತ್ತಿರುವಾಗ, ಹೆಚ್ಚು ಹೆಚ್ಚಾಗಿ ಬಿಡುಗಡೆಯನ್ನು ಪಡೆದೆವು - ಮತ್ತು ನಮ್ಮ ಜೀವಿತಗಳು ಹಾಗೂ ನಮ್ಮ ಕುಟುಂಬಗಳು ನಿಧಾನವಾಗಿ ಬದಲಾದವು.
ಈ ಸತ್ಯಾಂಶಗಳನ್ನು ಇತರ ಜನರಿಗೆ ಘೋಷಿಸುವ ಜವಾಬ್ದಾರಿಯನ್ನು ನನಗೆ ನೀಡಲಾಗಿದೆಯೆಂದು ಆಗ ನನಗೆ ಮನವರಿಕೆಯಾಯಿತು. ಇತರ ವಿಶ್ವಾಸಿಗಳು ಸತ್ಯವೇದದ ಯಾವ ಸತ್ಯಾಂಶಗಳನ್ನು ಸಾರುತ್ತಿರಲಿಲ್ಲವೋ, ಅವುಗಳಿಗೆ ಹೆಚ್ಚಿನ ಒತ್ತು ನೀಡುವುದಕ್ಕಾಗಿ ದೇವರು ನನ್ನನ್ನು ಕರೆಯುತ್ತಿದ್ದಾರೆ ಎಂಬುದು ನನಗೆ ಸ್ಪಷ್ಟವಾಯಿತು. ಹಾಗಾಗಿ ನನ್ನ ಸುತ್ತಮುತ್ತಲು ಇತರರು ಸತ್ಯವೇದದ ಕುರಿತಾಗಿ ಏನನ್ನು ಕಲಿಸುತ್ತಿದ್ದಾರೆಂದು ನಾನು ಸೂಕ್ಷ್ಮವಾಗಿ ಕೇಳಿಸಿಕೊಂಡೆನು. ಆಗ ನನಗೆ ಕೊಡಲ್ಪಟ್ಟ ದೇವರ ವಾಕ್ಯದ ಬೋಧನೆಯ ಸೇವೆಯಲ್ಲಿ ಯಾವುದಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂಬುದನ್ನು ನಾನು ಕಂಡುಕೊಂಡೆನು.
"ವಿಶ್ವಾಸಿಗಳಿಗೆ ಅತೀ ಅವಶ್ಯವಾದದ್ದು ಯಾವುದೆಂದರೆ, ಅವರ ಕಣ್ಣುಗಳು ತೆರೆಯಲ್ಪಡಬೇಕು ಮತ್ತು ಅವರು ಹಳೆಯ ಒಡಂಬಡಿಕೆಯ ಹೋಲಿಕೆಯಲ್ಲಿ ಹೊಸ ಒಡಂಬಡಿಕೆಯಲ್ಲಿ ಇರುವಂತ ಹೆಚ್ಚಿನ ಮಹಿಮೆಯನ್ನು ಕಂಡುಕೊಳ್ಳಬೇಕು"
ಸಂಪೂರ್ಣ ಸುವಾರ್ತೆ
ಕೆಲವು ಬೋಧಕರು "ಸಂಪೂರ್ಣ ಸುವಾರ್ತೆ"ಎಂದು ಉಪಯೋಗಿಸುವುದನ್ನು ನಾನು ಕೇಳಿದ್ದೀನೆ. ಆದರೆ ಅವರು ಬೋಧಿಸುವುದನ್ನು ನಾನು ದೇವರ ವಾಕ್ಯದೊಂದಿಗೆ ಹೋಲಿಸಿ ನೋಡುವಾಗ, ಅವರು ಸಂಪೂರ್ಣ ಸುವಾರ್ತೆಯನ್ನು ಬೋಧಿಸುತ್ತಲೇ ಇಲ್ಲ ಎಂಬುದನ್ನು ನಾನು ಕಂಡುಕೊಂಡೆ. ಇಬ್ರಿಯ 4ರಲ್ಲಿ ಪವಿತ್ರಾತ್ಮನು "ಸುವಾರ್ತೆ"ಯನ್ನು (ವಚನ 2) "ಕೇವಲ ಐಗುಪ್ತ್ಯದಿಂದ ಹೊರಬರುವುದು ಮಾತ್ರವಲ್ಲ", "ಕಾನಾನಿನೊಳಗೆ ಪ್ರವೇಶಿಸುವುದಾಗಿದೆ"ಎಂದು ವ್ಯಾಖ್ಯಾನಿಸಿದ್ದಾನೆ. ದೇವ ಜನರು ಜಯವೆಂಬ "ಸಬ್ಬತ್ ವಿಶ್ರಾಂತಿ"ಗೆ (ವಚನ 9) ಪ್ರವೇಶಿಸಬಹುದು ಎಂಬುದಾಗಿಯೂ ಸಹ ನಾನು ಓದಿದೆ. ಹೀಗಿರಲಾಗಿ ಪಾಪಗಳ ಕ್ಷಮಾಪಣೆಯ ಸಂದೇಶವು ಕೇವಲ ಅರ್ಧ ಸುವಾರ್ತೆ ಮಾತ್ರ ಎಂಬುದಾಗಿ ನಾನು ನೋಡಿದೆ. ಸಂಪೂರ್ಣ ಸುವಾರ್ತೆಯು ಪಾಪವನ್ನು ಜಯಿಸುವುದನ್ನು ಸಹ ಒಳಗೊಂಡಿದೆ (ನಮ್ಮ ಮಾಂಸದಲ್ಲಿರುವ ಬಲಿಷ್ಠನನ್ನು (ದೈತ್ಯ) ಕೊಲ್ಲುವುದು.. ಇಂತಹ ಜೀವಿತವು ನನಗೆ ಕ್ರಮೇಣವಾಗಿ ನಿಜವಾದಾಗ, ನಾನು ಸಂಪೂರ್ಣ ಸುವಾರ್ತೆಯನ್ನು ಬೋಧಿಸಲು ಪ್ರಾರಂಭಿಸಿದೆ.
ಮಾನಸಾಂತರ
ಪಾಪದ ಕ್ಷಮಾಪಣೆಗೆ ಕ್ರಿಸ್ತನಲ್ಲಿ ನಂಬಿಕೆ ಮಾತ್ರ ಅವಶ್ಯವಾದದ್ದು ಎಂದು ಅನೇಕ ಬೋಧಕರು ಬೋಧಿಸುತ್ತಾರೆ. ಮಾನಸಾಂತರದ ಬಗ್ಗೆ ಬೋಧಿಸುವುದೇ ಬಹಳ ವಿರಳವಾದ ಸಂಗತಿಯಾಗಿದೆ. ಮತ್ತು ಎಲ್ಲಿ ಪಾಪದ ಬಗ್ಗೆ ಹೇಳಲ್ಪಟ್ಟಿದೆಯೋ ಅಲ್ಲಿ ಪಾಪದ ಬಗ್ಗೆ ಅದು ಸ್ವಾರ್ಥ, ಸ್ವ-ಕೇಂದ್ರೀಕತೆ, ಮತ್ತು ತನ್ನ ಸ್ವಂತ ಮಾರ್ಗವನ್ನೇ ಬಯಸುವುದು ಎಂಬುದಾಗಿ ಹೇಳಲ್ಪಟ್ಟಿಲ್ಲ. ಆದ್ದರಿಂದ, ಯಾವುದನ್ನು ದ್ವೇಷಿಸಬೇಕು ಮತ್ತು ಯಾವುದರಿಂದ ಅವರು (ಮನ) ತಿರುಗಬೇಕು ಎಂದು ಜನರಿಗೆ ಗೊತ್ತಿರಲಿಲ್ಲ. ನನ್ನ ಕರೆಯು ಪಾಪದ ಬಗ್ಗೆ ಸ್ಪಷ್ಟವಾಗಿ ವಿವರಿಸುವುದು ಮತ್ತು ಪ್ರತಿಯೊಬ್ಬರೂ ಯಾವುದಕ್ಕಾಗಿ ಮಾನಸಾಂತರಪಡಬೇಕು ಎಂಬುದನ್ನು ತಿಳಿಸುವುದೇ ಆಗಿತ್ತು ಎಂಬುದನ್ನು ನಾನು ಅರಿತುಕೊಂಡೆನು.
ಶಿಷ್ಯತ್ವ
ಹೆಚ್ಚಿನ ವಿಶ್ವಾಸಿಗಳಿಗೆ ತಾವು ಶಿಷ್ಯರಾಗಬೇಕೆಂದು ಕಲಿಸಲಾಗುತ್ತಿಲ್ಲ. (ಯೇಸು ತೋರಿಸಿಕೊಟ್ಟ) ಶಿಷ್ಯತ್ವದ ಮೂರೂ ಷರತ್ತುಗಳನ್ನು ವಿವರಿಸಲಾಗುತ್ತಿಲ್ಲ. ಯೇಸುವನ್ನು (ಕುಟುಂಬದ ಎಲ್ಲಾ ಸದಸ್ಯರಿಗಿಂತ) ಸರ್ವೋಚ್ಚವಾಗಿ ಪ್ರೀತಿಸುವುದು, ಪ್ರತಿದಿನ ಶಿಲುಬೆಯನ್ನು ಸ್ವೀಕರಿಸುವುದು (ಸ್ವಾರ್ಥಕ್ಕೆ ಸಾಯುವುದು) ಮತ್ತು ನಾವು ಹೊಂದಿರುವ ಎಲ್ಲವನ್ನೂ ತ್ಯಜಿಸುವುದು (ಭೌತಿಕ ಆಸ್ತಿಯ ಲಾಲಸೆಯನ್ನು ಬಿಡುವುದು) (ಲೂಕ 16:26-33). ಆದ್ದರಿಂದ ನನ್ನ ಉಪದೇಶದಲ್ಲಿ ಇದು ಒಂದು ಮುಖ್ಯ ಬೋಧನೆಯಾಗಿತ್ತು.
ಪವಿತ್ರಾತ್ಮನ ದೀಕ್ಷಾಸ್ನಾನ
ಪವಿತ್ರಾತ್ಮನ ದೀಕ್ಷಾಸ್ನಾನವನ್ನು ಕುರಿತು ಬೋಧಿಸುವ ಪ್ರತಿಯೊಂದು ಸಭೆಯು ಅದರ ಆರಂಭಿಕ ಗುರುತು "ಅನ್ಯಭಾಷೆಗಳಲ್ಲಿ ಮಾತನಾಡುವುದು" ಎಂದು ಪ್ರತಿಪಾದಿಸುತ್ತದೆ. ಆದರೆ ಇದನ್ನು ಕಲಿಸಿದವರಲ್ಲಿ ಹೆಚ್ಚಿನವರು ಲೌಕಿಕ ಮನಸ್ಸಿನವರು ಮತ್ತು ಹಣದಾಸೆಯುಳ್ಳವರು ಎಂಬುದನ್ನು ನಾನು ನೋಡಿದ್ದೇನೆ. ಮತ್ತೊಂದೆಡೆ, ಅನ್ಯಭಾಷೆಗಳಲ್ಲಿ ಮಾತನಾಡುವವರು ದೆವ್ವಗಳಿಂದ ಪ್ರೇರಿತರಾಗಿ ಮಾತನಾಡುತ್ತಾರೆ ಎಂದು ತಪ್ಪಾಗಿ ಗ್ರಹಿಸಿಕೊಂಡ ಕೆಲವು ವಿಶ್ವಾಸಿಗಳನ್ನೂ ನಾನು ನೋಡಿದ್ದೇನೆ !! ಆದರೆ ಪವಿತ್ರಾತ್ಮನ ದೀಕ್ಷಾಸ್ನಾನದ ಪುರಾವೆಯು ಶಕ್ತಿಯಾಗಿರುತ್ತದೆ ಎಂದು ಯೇಸು ಕಲಿಸಿಕೊಟ್ಟರು - ಆತನ ಸಾಕ್ಷಿಗಳಾಗಿರಲು ಶಕ್ತಿ (ನಾವು ಹೇಗೆ ಜೀವಿಸುತ್ತೇವೆ ಎಂಬುದು) ಮತ್ತು ಕೇವಲ ಸಾಕ್ಷಿಗಳಾಗಿರಲು ಮಾತ್ರವಲ್ಲ (ನಮ್ಮ ಮಾತಿನ ಮೂಲಕ) (ಅ ಕೃತ್ಯಗಳು. 1:8). ಆದ್ದರಿಂದ, ಅನ್ಯಭಾಷೆಗಳಲ್ಲಿ ಮಾತನಾಡುವುದು ದೇವರು ಕೆಲವರಿಗೆ ನೀಡಿದ ಆತ್ಮದ ವರಗಳಲ್ಲಿ ಒಂದಾಗಿದೆ ಎಂಬುದನ್ನು ನಾನು ಘೋಷಿಸುದೆನು. ಈ ವಿಷಯದ ಬಗೆಗಿನ ನನ್ನ ನಿಲುವಿನಿಂದಾಗಿ, 'ಪೆಂತಕೋಸ್ತ' ಪಂಗಡದ ಜನರು ನನಗೆ 'ಬ್ರದರನ್' ಎಂಬುದಾಗಿ ಅಪಹಾಸ್ಯ ಮಾಡಿದದು ಮತ್ತು 'ಬ್ರದರನ್' ಪಂಗಡದ ಜನರು ನನಗೆ 'ಪೆಂತಕೋಸ್ತ' ಎಂಬುದಾಗಿ ಅಪಹಾಸ್ಯ ಮಾಡಿದರು!! ಈ ಎರಡೂ ವಿಪರೀತಗಳಿಂದ ಸಮಾನ ದೂರದಲ್ಲಿರಲು ನನಗೆ ತುಂಬಾ ಸಂತೋಷವಾಯಿತು.
(ಮುಂದುವರಿಯುವುದು)