WFTW Body: 

ಇಬ್ರಿಯ. 4:12 ರಲ್ಲಿ ನಾವು ಈ ರೀತಿಯಾಗಿ ಓದುತ್ತೇವೆ, "ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು, ಯಾವ ಇಬ್ಬಾಯಿಕತ್ತಿಗಿಂತಲೂ ಹದವಾದದ್ದು, ಪ್ರಾಣ ಆತ್ಮಗಳನ್ನೂ ಕೀಲುಮಜ್ಜೆಗಳನ್ನೂ ವಿಭಾಗಿಸುವಷ್ಟು ಮಟ್ಟಿಗೂ ತೂರಿಹೋಗುವಂಥದು, ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದು ಆಗಿದೆ." ದೇವರ ವಾಕ್ಯವು ಒಂದು ಖಡ್ಗದಂತಿದ್ದು, ನಮ್ಮ ಹೃದಯವನ್ನು ತೂರಿ ನಮ್ಮ ಆಲೋಚನೆಗಳನ್ನು ಮತ್ತು ಉದ್ದೇಶಗಳನ್ನು ನಮಗೆ ತೋರಿಸಿಕೊಡುತ್ತದೆ. ಹೊಸ ಒಡಂಬಡಿಕೆಯಲ್ಲಿ (ಇದಕ್ಕೆ ಇಬ್ರಿಯರ ಪತ್ರಿಕೆಯು ಪ್ರಾಮುಖ್ಯತೆ ಕೊಡುತ್ತದೆ), "ಹೃದಯದ ಆಲೋಚನೆಗಳು ಮತ್ತು ಉದ್ದೇಶಗಳು" ಅತೀ ಹೆಚ್ಚಿನ ಮಹತ್ವ ಹೊಂದಿವೆ, ಆದರೆ ಹಳೆಯ ಒಡಂಬಡಿಕೆಯಲ್ಲಿ ಆಲೋಚನೆಗಳು ಮತ್ತು ಉದ್ದೇಶಗಳು ಗಂಭೀರವಾಗಿರಲಿಲ್ಲ, ಏಕೆಂದರೆ ಆಗಿನ ಕಾಲದಲ್ಲಿ ಇಸ್ರಾಯೇಲ್ಯರ ಹೃದಯದಲ್ಲಿ ಪವಿತ್ರಾತ್ಮನು ನೆಲೆಸಿರಲಿಲ್ಲ. ಧರ್ಮಶಾಸ್ತ್ರದ ಮೂಲಕ ಒಬ್ಬ ಮನುಷ್ಯನ ಕೆಟ್ಟ ಆಲೋಚನೆಗಳು ಮತ್ತು ಉದ್ದೇಶಗಳನ್ನು ಪ್ರಕಟಪಡಿಸುವದು ಅಥವಾ ಅವನನ್ನು ಶಿಕ್ಷಿಸುವದು ಸಾಧ್ಯವಾಗುತ್ತಿರಲಿಲ್ಲ. ಒಬ್ಬನು ತನ್ನ ಬಾಹ್ಯ ಜೀವನದಲ್ಲಿ ಎಲ್ಲವನ್ನೂ ಅನುಸರಿಸಿಕೊಂಡು ಹೋದರೆ, ಧರ್ಮಶಾಸ್ತ್ರವು ಅವನನ್ನು ಪ್ರಶಂಸಿಸುತ್ತಿತ್ತು.

ಆದರೆ ಹೊಸ ಒಡಂಬಡಿಕೆಯು ಹಾಗೆ ಮಾಡುವದಿಲ್ಲ. ಒಬ್ಬ ವ್ಯಕ್ತಿಯು ಧರ್ಮಶಾಸ್ತ್ರದ ಕೆಳಗಿದ್ದಾಗ, ದೇವರ ವಾಕ್ಯವು ಅವನನ್ನು ಹೊರಗಿನಿಂದ ಮಾತ್ರ ಪರೀಕ್ಷಿಸುತ್ತಿತ್ತು; ಇದು ಯಾವ ರೀತಿ ಎಂದರೆ, ಒಬ್ಬ ವೈದ್ಯನು ಒಬ್ಬ ರೋಗಿಯನ್ನು ಮೇಲ್ನೋಟನಿಂದ ಪರೀಕ್ಷೆ ಮಾಡಿದ ಹಾಗೆ. ಆದರೆ ಹೊಸ ಒಡಂಬಡಿಕೆಯಲ್ಲಿ ದೇವ-ವಚನವು ಒಂದು ಕ್ಷ-ಕಿರಣ (x-ray) ಅಥವಾ ಒಂದು ಸ್ಕ್ಯಾನ್ (scan) ಇದ್ದ ಹಾಗೆ, ಹೃದಯವನ್ನು ಭೇದಿಸಿ ಒಳಕ್ಕೆ ಹೊಕ್ಕುತ್ತದೆ. ಈಗ ದೇವರು ನಮ್ಮ ಯೋಚನೆ, ಮನೋಭಾವ, ಪ್ರಚೋದನೆ ಮತ್ತು ಉದ್ದೇಶಗಳನ್ನು ಆಸಕ್ತಿಯಿಂದ ಗಮನಿಸುತ್ತಾರೆ. ಒಮ್ಮೊಮ್ಮೆ, ಹೊರಗಿನಿಂದ ಎಲ್ಲವೂ ಸರಿಯಾಗಿ ಇದ್ದಂತೆ ಕಾಣಿಸುವಾಗ, ಒಳಗೆ ಮಹಾ ದುಷ್ಟತನವು ಇರಬಹುದು; ಇದು ಹೇಗೆಂದರೆ, ಹೊರನೋಟಕ್ಕೆ ಒಳ್ಳೆಯ ಆರೋಗ್ಯಶಾಲಿಗಳಾಗಿ ಕಾಣಿಸುವ ಅನೇಕ ಜನರ ಒಳಗಡೆ ಕ್ಯಾನ್ಸರಿನಂತಹ ಗಂಭೀರ ಕಾಯಿಲೆ ಇರುವ ಸಾಧ್ಯತೆಯಿದೆ.

ಆದ್ದರಿಂದ ನೀವು ಈ ದಿನ ದೇವರ ವಾಕ್ಯವನ್ನು ಓದಿಕೊಂಡಾಗ, ನಿಮ್ಮ ಬಾಹ್ಯ ಪಾಪಗಳ ಬಗ್ಗೆ ಮಾತ್ರ ಪರಿಶೋಧಿತರಾದರೆ, ದೇವರು ನಿಮಗೆ ಹೇಳಬಯಸಿದ ಎಲ್ಲವನ್ನೂ ನೀವು ಕೇಳಲಿಲ್ಲವೆಂದು ಇದು ಸೂಚಿಸುತ್ತದೆ. ಆದ್ದರಿಂದ ನೀವು ಯಾವಾಗಲೂ ಈ ಪ್ರಶ್ನೆಯ ಮೂಲಕ ನಿಮ್ಮನ್ನು ಪರೀಕ್ಷಿಸಿಕೊಳ್ಳಿರಿ: "ದೇವರ ವಾಕ್ಯವು ನನ್ನ ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ನನಗೆ ಪ್ರಕಟಪಡಿಸಿತೇ?" ಇಲ್ಲಿ ಒತ್ತು ನೀಡಿರುವುದು ಹೃದಯಕ್ಕೆ, ತಲೆಗೆ ಅಲ್ಲ ಎಂಬುದನ್ನು ಗಮನಿಸಿರಿ. ಅಭಿಷೇಕಿಸಲ್ಪಟ್ಟ ದೇವರ ವಾಕ್ಯದ ಎಲ್ಲಾ ಬೋಧನೆಯಲ್ಲೂ, ವಾಕ್ಯವು ನಿಮ್ಮ ಮನಸ್ಸಿನ ಮೂಲಕ ಹೃದಯವನ್ನು ಸೇರುತ್ತದೆ, ಮತ್ತು ನಿಮಗೆ ನಿಮ್ಮ ಅಂತರಾಳದ ಆಲೋಚನೆಗಳನ್ನೂ ಉದ್ದೇಶಗಳನ್ನೂ ಪ್ರಕಟಪಡಿಸುತ್ತದೆ.

1 ಕೊರಿಂಥ. 14:25ರಲ್ಲಿ ಅಭಿಷೇಕಿಸಲ್ಪಟ್ಟ ಬೋಧನೆಯ ಪರಿಣಾಮದ ಬಗ್ಗೆ ನಾವು ಓದುತ್ತೇವೆ. ಜನರ ಹೃದಯದ ಯೋಚನೆಗಳು ಪ್ರಕಟಗೊಳ್ಳುತ್ತವೆ ಮತ್ತು ಅವರು ತಲೆಬಾಗಿ ಆ ಕೂಟದಲ್ಲಿ ದೇವರು ಹಾಜರಿರುವದನ್ನು ಒಪ್ಪಿಕೊಳ್ಳುತ್ತಾರೆ. ನೀವು ಒಬ್ಬ ದೈವಿಕ ಮನುಷ್ಯನ ಜೊತೆ ಮಾತನಾಡುವಾಗ ಮತ್ತು ಅಭಿಷೇಕಿಸಲ್ಪಟ್ಟ ಪ್ರವಾದನಾ ವಾಕ್ಯವನ್ನು ಅವರು ನಿಮಗೆ ನೀಡಿದಾಗ, ಇದೇ ರೀತಿ ಆಗಬಹುದು. ಅಭಿಷೇಕಿಸಲ್ಪಟ್ಟ ಮಾತು ಯಾವಾಗಲೂ ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ಪ್ರಕಟಪಡಿಸುತ್ತದೆ, ಏಕೆಂದರೆ ದೇವರ ವಾಕ್ಯವು ಇಬ್ಬಾಯಿಯ ಖಡ್ಗದಂತಿದೆ.

ನೀವು ಕರ್ತನ ಸೇವೆ ಮಾಡಲು ಬಯಸಿದರೆ, ನಿಮ್ಮ ಹೃದಯದಲ್ಲಿಯೂ ಬಾಯಲ್ಲಿಯೂ ಇರುವ ಕತ್ತಿಯು ಮೊನಚಾಗಿದೆಯೆಂದು ಖಾತರಿಪಡಿಸಿಕೊಳ್ಳಿರಿ. ನಯವಾದ ಮಾತುಗಳ ಮೂಲಕ, ವ್ಯವಹಾರ ಕುಶಲತೆಯಿಂದ ಮನುಷ್ಯನನ್ನು ಒಪ್ಪಿಸುವದಕ್ಕಾಗಿ, ಎಂದಿಗೂ ಆ ಖಡ್ಗದ ಅಂಚನ್ನು ಮೊಂಡಾಗಿಸಬೇಡಿರಿ ಮತ್ತು ದೇವರ ವಾಕ್ಯದ ತೀಕ್ಷ್ಣತೆಯನ್ನು ಕುಗ್ಗಿಸದಿರಿ. ಅದು ಜನರಿಗೆ ಯಾವ ಒಳಿತನ್ನೂ ಮಾಡದು. ಏಕೆಂದರೆ, ಅದು ಎಲ್ಲಿ ನಾಟಬೇಕೋ ಅಲ್ಲಿ ನಾಟುವುದಿಲ್ಲ. ನೀವು ಮೊಂಡಾದ ಕತ್ತಿಯಿಂದ ಮಾಂಸವನ್ನು ಕತ್ತರಿಸಲು ಪ್ರಯತ್ನಿಸಿದ್ದೀರಾ? ನೀವು ಕತ್ತರಿಸುತ್ತಲೇ ಇರುತ್ತೀರಿ, ಆದರೆ ಮಾಂಸ ಹೋಳಾಗುವದಿಲ್ಲ. ದೇವರ ವಾಕ್ಯದ ತೀಕ್ಷ್ಣತೆಯ ಕುರಿತಾಗಿ ಚೌಕಾಸಿ ಮಾಡಲು ಸಿದ್ಧನಿರುವ ಬೋಧಕನು ತನ್ನ ಸಂದೇಶದ ಕೊನೆಗೆ, ಯಾರಿಗೂ ದೇವರ ಮಾತು ದೊರಕಲಿಲ್ಲ ಎಂಬುದನ್ನು ಕಂಡುಕೊಳ್ಳುತ್ತಾನೆ. ದೇವರ ವಾಕ್ಯವು ಇಬ್ಬಾಯಿಯ ಖಡ್ಗದಂತಿದೆ. ಬೋಧಕನು ಮೊದಲು ಸ್ವತಃ ತನ್ನ ಹೃದಯವನ್ನು ದೇವರ ವಾಕ್ಯವು ಸೀಳಿ, ದೇವರ ಆಲೋಚನೆಗಳೂ ಉದ್ದೇಶಗಳೂ ಪ್ರಕಟವಾಗಲು ಸಮ್ಮತಿಸಬೇಕು! ಆಗ ಮಾತ್ರ ಇತರರ ಹೃದಯಗಳನ್ನು ಸೀಳಲು ವಾಕ್ಯವನ್ನು ಅವನು ಉಪಯೋಗಿಸಬಹುದು. ದೇವರ ವಾಕ್ಯವು ಮೊದಲು ಸ್ವತಃ ನಿನ್ನ ಹೃದಯಕ್ಕೇ ನಾಟದಿದ್ದರೆ, ಅದನ್ನು ಇತರರಿಗೆ ಬೋಧಿಸಬೇಡ. ಹೆಚ್ಚಿನ ಬೋಧಕರು ಯಾವತ್ತೂ ದೇವರ ವಾಕ್ಯದ ಮೂಲಕ ತಮ್ಮನ್ನೇ ನ್ಯಾಯತೀರ್ಪು ಮಾಡಿಕೊಳ್ಳುವುದಿಲ್ಲ. ಅವರು ಇತರರನ್ನು ಮಾತ್ರ ನ್ಯಾಯತೀರ್ಪು ಮಾಡುತ್ತಾರೆ.

ದೇವರ ವಾಕ್ಯವು ನಮ್ಮ ಮೂಲ ಉದ್ದೇಶಗಳನ್ನೂ ಸಹ ಭೇದಿಸಿ ನ್ಯಾಯತೀರ್ಪಿಗೆ ಒಳಪಡಿಸುತ್ತದೆ. ದೇವರ ವಾಕ್ಯದ ಮೂಲಕವಾಗಿ ಪವಿತಾತ್ಮನ ಸ್ವರವು ನಮ್ಮೊಂದಿಗೆ ನಿರಂತರವಾಗಿ ಮಾತನಾಡಲು ನಾವು ಒಪ್ಪಿದರೆ, ಅಂತಿಮವಾಗಿ ನಾವು ಸಂಪೂರ್ಣ ಶುದ್ಧ ಹೃದಯವನ್ನು ಹೊಂದುವೆವು. ಏಕೆಂದರೆ, ನಮ್ಮ ಹೃದಯದ ಯೋಚನೆಗಳು ಮತ್ತು ಪ್ರಚೋದನೆಗಳು ನಮಗೆ ನಿರಂತರವಾಗಿ ಪ್ರಕಟವಾಗಿ, ನಾವು ನಮ್ಮನ್ನೇ ಶುದ್ದೀಕರಿಸಲು ಶಕ್ತರಾಗುವೆವು. ಪ್ರತಿಯೊಬ್ಬ ವಿಶ್ವಾಸಿಯು ದಿನನಿತ್ಯವೂ ಈ ರೀತಿಯಾಗಿ ಜೀವಿಸಬೇಕು. ಇಸ್ರಾಯೇಲ್ಯರು ಅರಣ್ಯದಲ್ಲಿ ನಿತ್ಯವೂ ಮನ್ನವನ್ನು ಪಡೆದಂತೆ, ನಾವೂ ಅಭಿಷೇಕಿಸಲ್ಪಟ್ಟ ವಾಕ್ಯವನ್ನು ಆತನಿಂದ ನಿತ್ಯವೂ ಪಡೆಯಬೇಕು.