WFTW Body: 

ನಾವು ಇಬ್ರಿ. 4:12ರಲ್ಲಿ, "ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು, ಯಾವ ಇಬ್ಬಾಯಿಕತ್ತಿಗಿಂತಲೂ ಹದವಾದದ್ದು, ಪ್ರಾಣ ಆತ್ಮಗಳನ್ನೂ, ಕೀಲು ಮಜ್ಜೆಗಳನ್ನೂ ವಿಭಾಗಿಸುವಷ್ಟು ಮಟ್ಟಿಗೂ ತೂರಿ ಹೋಗುವಂಥದ್ದು, ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದ್ದು ಆಗಿದೆ," ಎಂಬುದಾಗಿ ಓದುತ್ತೇವೆ.

ದೇವರ ವಾಕ್ಯವು ಒಂದು ಚೂಪಾದ ಕತ್ತಿಯಂತೆ ನಮ್ಮ ಹೃದಯಗಳನ್ನು ತೂರಿ ಒಳಸೇರಿ, ನಮ್ಮ ಆಲೋಚನೆಗಳು ಮತ್ತು ನಮ್ಮ ಉದ್ದೇಶಗಳನ್ನು ನಮಗೆ ಸ್ಪಷ್ಟವಾಗಿ ಪ್ರಕಟಗೊಳಿಸುತ್ತದೆ. ಹಳೆಯ ಒಡಂಬಡಿಕೆಯ ಅಡಿಯಲ್ಲಿ ಮನಸ್ಸಿನ ದುರಾಲೋಚನೆಗಳನ್ನೂ ದುರುದ್ದೇಶಗಳನ್ನೂ ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ, ಏಕೆಂದರೆ ಇಸ್ರಾಯೇಲ್ಯರ ಒಳಗೆ ಪವಿತ್ರಾತ್ಮನು ನೆಲೆಸಿರಲಿಲ್ಲ, ಆದಾಗ್ಯೂ ಹೊಸ ಒಡಂಬಡಿಕೆಯಲ್ಲಿ "ಹೃದಯದ ಆಲೋಚನೆಗಳು ಮತ್ತು ಉದ್ದೇಶಗಳಿಗೆ" ಬಹಳ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ (ಇಬ್ರಿಯರ ಪತ್ರಿಕೆಯು ಇವುಗಳಿಗೆ ಒತ್ತು ನೀಡಿದೆ). ಒಬ್ಬ ಮನುಷ್ಯನ ದುರಾಲೋಚನೆಗಳನ್ನು ಮತ್ತು ದುರುದ್ದೇಶಗಳನ್ನು ಬಯಲು ಮಾಡುವದಕ್ಕೆ ಅಥವಾ ಆತನನ್ನು ಅದಕ್ಕಾಗಿ ದಂಡಿಸುವದಕ್ಕೆ ನ್ಯಾಯಶಾಸ್ತ್ರವು ಸಮರ್ಥವಾಗಿರಲಿಲ್ಲ. ಒಬ್ಬ ವ್ಯಕ್ತಿಯು ಬಹಿರಂಗವಾಗಿ ಎಲ್ಲವನ್ನೂ ಸರಿಯಾಗಿ ಮಾಡಿದರೆ, ನ್ಯಾಯಶಾಸ್ತ್ರವು ಆತನನ್ನು ಹೊಗಳುತ್ತಿತ್ತು. ಆದರೆ ಹೊಸ ಒಡಂಬಡಿಕೆಯಲ್ಲಿ ಹಾಗಲ್ಲ. ಒಬ್ಬ ವೈದ್ಯನು ರೋಗಿಯ ದೇಹವನ್ನು ಹೊರಗಿನಿಂದ ತಪಾಸಣೆ ಮಾಡುವಂತೆ, ದೇವರ ವಚನವು ನ್ಯಾಯಶಾಸ್ತ್ರದ ಅಡಿಯಲ್ಲಿದ್ದ ಮನುಷ್ಯನ ಕಾರ್ಯಗಳನ್ನು ಹೊರಗಿನಿಂದ ಮಾತ್ರ ಪರೀಕ್ಷಿಸುತ್ತಿತ್ತು. ಆದರೆ ಹೊಸ ಒಡಂಬಡಿಕೆಯಲ್ಲಿ, ದೇವರ ವಾಕ್ಯವು ಒಂದು ’ಸ್ಕ್ಯಾನಿಂಗ್ ಯಂತ್ರ’ ಅಥವಾ ’ಕ್ಷ-ಕಿರಣ ಯಂತ್ರ’ದ ಹಾಗೆ ಹೃದಯವನ್ನು ಪ್ರವೇಶಿಸಿ, ಒಳಗೆ ಇರುವದನ್ನು ಪರೀಕ್ಷಿಸುತ್ತದೆ.

ಈಗ ದೇವರಿಗೆ ನಮ್ಮ ಯೋಚನೆಗಳು, ಮನೋಭಾವಗಳು, ಉದ್ದೇಶಗಳು ಮತ್ತು ಸಂಕಲ್ಪಗಳ ವಿಷಯವಾಗಿ ಹೆಚ್ಚಿನ ಆಸಕ್ತಿ ಇದೆ. ಕೆಲವೊಮ್ಮೆ ಹೊರಗಿನಿಂದ ಎಲ್ಲವೂ ಅಂದವಾಗಿ ತೋರಿದರೂ, ಒಳಗೆ ಭಯಂಕರ ದುಷ್ಟತನವಿರುವ ಸಾಧ್ಯತೆಯಿದೆ - ಆರೋಗ್ಯವಂತರಾಗಿ ಕಾಣಿಸುವ ಅನೇಕ ಜನರ ದೇಹದಲ್ಲಿ ಕ್ಯಾನ್ಸರ್ ನಂತಹ ಭಯಂಕರ ವ್ಯಾಧಿಗಳು ಇರುವ ಸಾಧ್ಯತೆ ಇರುವದಕ್ಕೆ ಇದನ್ನು ಹೋಲಿಸಬಹುದು. ಹಾಗಾಗಿ ನೀವು ಈ ದಿನ ದೇವರ ವಚನವನ್ನು ಓದುವಾಗ, ನಿಮಗೆ ನಿಮ್ಮ ಬಾಹ್ಯ ಜೀವನದ ಪಾಪಗಳು ಮಾತ್ರ ಮನದಟ್ಟಾದರೆ, ಅದು ದೇವರು ನಿಮಗೆ ಹೇಳಲು ಬಯಸುವ ಎಲ್ಲಾ ವಿಷಯಗಳನ್ನು ನೀವು ಕೇಳಿಸಿಕೊಂಡಿಲ್ಲ, ಎಂಬುದನ್ನು ಸೂಚಿಸುತ್ತದೆ. ಹಾಗಾದರೆ ಈ ರೀತಿಯಾಗಿ ಪ್ರಶ್ನಿಸಿಕೊಂಡು ನಿಮ್ಮನ್ನು ಪರೀಕ್ಷಿಸಿಕೊಳ್ಳಿರಿ: "ನನಗೆ ದೇವರ ವಾಕ್ಯದ ಮೂಲಕ ನನ್ನ ಹೃದಯದ ಆಲೋಚನೆಗಳು ಮತ್ತು ಉದ್ದೇಶಗಳು ಪ್ರಕಟವಾದವೇ?"

ಇಲ್ಲಿ ಗಮನಿಸ ಬೇಕಾದ ವಿಷಯವೆಂದರೆ, ಹೃದಯಕ್ಕೆ ಪ್ರಾಮುಖ್ಯತೆ ಕೊಡಲಾಗಿದೆ, ತಲೆಗೆ ಅಲ್ಲ. ಪ್ರತಿಯೊಂದು ಅಭಿಷೇಕಿಸಲ್ಪಟ್ಟ ದೇವರ ವಾಕ್ಯದ ಬೋಧನೆಯಲ್ಲಿ, ಆ ವಚನವು ನಿಮ್ಮ ಮನಸ್ಸನ್ನು ಪ್ರವೇಶಿಸಿ, ಅಲ್ಲಿಂದ ನಿಮ್ಮ ಹೃದಯವನ್ನು ಹೊಕ್ಕಿ, ನಿಮ್ಮ ಅತಿ ಗುಪ್ತ ಅಲೋಚನೆಗಳನ್ನೂ, ಉದ್ದೇಶಗಳನ್ನೂ ಬಹಿರಂಗ ಪಡಿಸುತ್ತದೆ.

ನಾವು 1 ಕೊರಿ. 14:25ರಲ್ಲಿ, ಅಭಿಷೇಕಿಸಲ್ಪಟ್ಟ ಬೋಧನೆಯ ಪರಿಣಾಮ ಏನೆಂದು ಓದುತ್ತೇವೆ. ಜನರ ಹೃದಯದ ರಹಸ್ಯಗಳು ಬಯಲಾಗುತ್ತವೆ; ಮತ್ತು ಅವರು ಅಡ್ಡಬಿದ್ದು ದೇವರನ್ನು ಆರಾಧಿಸಿ, ಆ ಕೂಟದಲ್ಲಿ ದೇವರು ಇದ್ದಾರೆ ಎಂಬುದನ್ನು ಪ್ರಚುರ ಪಡಿಸುತ್ತಾರೆ. ಇದೇ ಪರಿಣಾಮವು ನೀವು ಒಬ್ಬ ದೈವಿಕ ಮನುಷ್ಯನ ಜೊತೆಗೆ ಸಂಭಾಷಿಸುವಾಗ, ಆತನು ನಿಮಗೆ ಹೇಳುವ ಅಭಿಷೇಕಿಸಿದ ಪ್ರವಾದನಾ ವಾಕ್ಯದ ಮೂಲಕ ಉಂಟಾಗಬಹುದು. ಅಭಿಷೇಕಿಸಲ್ಪಟ್ಟ ವಾಕ್ಯವು ಯಾವಾಗಲೂ ಹೃದಯದ ಆಲೋಚನೆಗಳನ್ನು ಮತ್ತು ಉದ್ದೇಶಗಳನ್ನು ತೋರಿಸುತ್ತದೆ, ಏಕೆಂದರೆ ದೇವರ ವಾಕ್ಯವು ಒಂದು ಹರಿತವಾದ ಇಬ್ಬಾಯಿಕತ್ತಿಯ ಹಾಗಿರುತ್ತದೆ.

ನೀವು ದೇವರ ಸೇವೆಯನ್ನು ಮಾಡಲು ಬಯಸಿದರೆ, ನಿಮ್ಮ ಹೃದಯದಲ್ಲಿ ಮತ್ತು ಬಾಯಿಯಲ್ಲಿ ಹರಿತವಾದ ಕತ್ತಿ ಇರುವುದನ್ನು ಖಚಿತ ಪಡಿಸಿಕೊಳ್ಳಿರಿ. ಕತ್ತಿಯ ಅಲಗನ್ನು ಎಂದಿಗೂ ಮೊಂಡು ಮಾಡಬೇಡಿರಿ ಮತ್ತು ವ್ಯವಹಾರ ಕುಶಲತೆಯಿಂದ, ನೀವು ನುಡಿಯುವ ಮಾತು ಮನುಷ್ಯನಿಗೆ ಒಪ್ಪಿಗೆಯಾಗುವಂತೆ ಅದನ್ನು ನಯಗೊಳಿಸಿ, ದೇವರ ವಾಕ್ಯವನ್ನು ಮೆತ್ತಗಾಗಿಸಬೇಡಿರಿ. ಹಾಗೆ ಮಾಡಿದರೆ ಜನರಿಗೆ ಯಾವ ಪ್ರಯೋಜನವೂ ಆಗುವುದಿಲ್ಲ, ಏಕೆಂದರೆ ಆ ವಾಕ್ಯವು ಒಳಗೆ ಪ್ರವೇಶಿಸುವುದಿಲ್ಲ ಮತ್ತು ಹೋಗಬೇಕಾದ ಕಡೆಗೆ ಹೋಗಿ ಸೇರುವುದಿಲ್ಲ. ನೀವು ಎಂದಾದರೂ ಒಂದು ಮೊಂಡಾದ ಚೂರಿಯಿಂದ ಮಾಂಸವನ್ನು ಹೋಳುಮಾಡಲು ಪ್ರಯತ್ನಿಸಿದ್ದೀರಾ? ನೀವು ಎಷ್ಟೇ ಶ್ರಮಿಸಿದರೂ ಆ ಮಾಂಸವು ಸರಿಯಾಗಿ ಹೋಳಾಗುವುದಿಲ್ಲ. ಚೂಪಾದ ದೇವರ ವಾಕ್ಯವನ್ನು ಜನರಿಗೆ ಒಪ್ಪಿಗೆಯಾಗುವಂತೆ ಬದಲಾಯಿಸಿ ಬೋಧಿಸುವ ಒಬ್ಬ ಬೋಧಕನು, ತನ್ನ ಸಂದೇಶವನ್ನು ಮುಗಿಸಿದಾಗ, ಯಾರೂ ದೇವರ ಧ್ವನಿಯನ್ನು ಕೇಳಿಸಿಕೊಳ್ಳಲಿಲ್ಲವೆಂದು ಕಂಡುಕೊಳ್ಳುತ್ತಾನೆ.

ದೇವರ ವಾಕ್ಯವು ಒಂದು ಇಬ್ಬಾಯಿಯ ಕತ್ತಿಯಾಗಿದೆ. ಒಬ್ಬ ಬೋಧಕನು ವಾಕ್ಯವು ಮೊದಲು ತನ್ನ ಸ್ವಂತ ಹೃದಯವನ್ನು ಸೀಳಿ, ತನ್ನ ಸ್ವಂತ ಯೋಚನೆಗಳು ಮತ್ತು ಉದ್ದೇಶಗಳನ್ನು ಪ್ರಕಟಿಸಲು ಅದಕ್ಕೆ ಅವಕಾಶ ಮಾಡಿಕೊಡಬೇಕು! ಹೀಗೆ ಮಾಡಿದ ಮೇಲೆ ಮಾತ್ರವೇ ಆತನು ಅದನ್ನು ಬಳಸಿಕೊಂಡು ಇತರ ಜನರ ಹೃದಯವನ್ನು ಸೀಳಲು ಸಾಧ್ಯವಾಗುತ್ತದೆ. ಒಂದು ವೇಳೆ ದೇವರ ವಾಕ್ಯವು ಮೊದಲು ನಿಮ್ಮ ಸ್ವಂತ ಹೃದಯವನ್ನು ಭೇದಿಸದಿದ್ದರೆ, ಆ ವಾಕ್ಯವನ್ನು ಬೋಧಿಸಬೇಡಿರಿ. ಹೆಚ್ಚಿನ ಬೋಧಕರು ದೇವರ ವಾಕ್ಯದಿಂದ ಎಂದಿಗೂ ತಮ್ಮ ಸ್ವಂತ ನ್ಯಾಯತೀರ್ಪು ಮಾಡಿಕೊಳ್ಳುವುದಿಲ್ಲ. ಅವರು ಇತರರನ್ನು ಮಾತ್ರ ತೀರ್ಪು ಮಾಡುತ್ತಾರೆ. ದೇವರ ವಾಕ್ಯವು ನಮ್ಮ ಉದ್ದೇಶಗಳನ್ನೂ ಸಹ ಪರೀಕ್ಷಿಸಿ ತೀರ್ಪು ಮಾಡುತ್ತದೆ.

ನಾವು ಯಾವಾಗಲೂ ದೇವರ ವಾಕ್ಯದ ಮೂಲಕ ಪವಿತ್ರಾತ್ಮನ ಧ್ವನಿಯನ್ನು ಕೇಳಿಸಿಕೊಳ್ಳಲು ಕಾದಿದ್ದರೆ, ಅಂತಿಮವಾಗಿ ನಾವು ಒಂದು ಸಂಪೂರ್ಣ ಶುದ್ಧವಾದ ಹೃದಯವನ್ನು ಹೊಂದುತ್ತೇವೆ, ಏಕೆಂದರೆ ನಮ್ಮ ಹೃದಯದ ಆಲೋಚನೆಗಳು ಮತ್ತು ಉದ್ದೇಶಗಳು ನಮಗೆ ನಿರಂತರವಾಗಿ ತೋರಿಸಲ್ಪಡುತ್ತವೆ ಮತ್ತು ನಾವು ನಮ್ಮನ್ನು ಶುದ್ಧ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ವಿಶ್ವಾಸಿಯೂ ಈ ರೀತಿಯಾಗಿ ದಿನನಿತ್ಯವೂ ಜೀವಿಸಬೇಕು. ಇಸ್ರಾಯೇಲ್ಯರು ಅರಣ್ಯ ಪ್ರದೇಶದಲ್ಲಿ ಪ್ರತಿ ದಿನ ಮನ್ನವನ್ನು ಪಡೆದುಕೊಂಡ ಹಾಗೆ, ನಾವು ಸಹ ಪ್ರತಿ ದಿನ ದೇವರ ಅಭಿಷೇಕಿಸಲ್ಪಟ್ಟ ವಾಕ್ಯವನ್ನು ಅವರಿಂದ ಪಡೆದುಕೊಳ್ಳಬೇಕು.