WFTW Body: 

"ಧರ್ಮೋಪದೇಶ" ಎಂಬ ಶೀರ್ಷಿಕೆಯ (ಗ್ರೀಕ್ ಭಾಷೆಯ ಪದ ‘DEUTERONOMY’) ಮೂಲ ಅರ್ಥ, ‘ಪುನರಾವರ್ತನೆ. ಅದಕ್ಕೆ ಕಾರಣ, ಧರ್ಮಶಾಸ್ತ್ರದ ಅನೇಕ ಪ್ರಮುಖ ಅಂಶಗಳನ್ನು ಇಲ್ಲಿ ಪುನರಾವರ್ತಿಸಲಾಗಿದೆ. ಮೋಶೆಯ ಮೊದಲಿನ ಪುಸ್ತಕಗಳಲ್ಲಿ ಈಗಾಗಲೇ ಬರೆಯಲ್ಪಟ್ಟಿದ್ದ ಹಲವಾರು ವಿಷಯಗಳನ್ನು ಇಲ್ಲಿ ಮತ್ತೊಮ್ಮೆ ಪ್ರಸ್ತಾವಿಸಲಾಗಿದೆ.

ನಾವು ಪುನರಾವರ್ತನೆಯಿಂದಾಗಿ ಆತಂಕಕ್ಕೆ ಒಳಗಾಗಬಾರದು. ನಾವು ವಾಕ್ಯದ ಸತ್ಯಾರ್ಥವನ್ನು ಗ್ರಹಿಸಿಕೊಳ್ಳಲಿಕ್ಕೆ ವಾಕ್ಯವನ್ನು ಮತ್ತೆ ಮತ್ತೆ ಕೇಳುವುದು ಅವಶ್ಯವಾಗಿದೆ. ಈ ಕಾರಣಕ್ಕಾಗಿ ದೇವರು ತಮ್ಮ ವಾಕ್ಯದಲ್ಲಿ ಹಲವಾರು ಸಂಗತಿಗಳನ್ನು ಪದೇ ಪದೇ ಹೇಳಿದ್ದಾರೆ.

ಯೆಹೂದದ ರಾಜರ ಇತಿಹಾಸವು ಎರಡು ಬಾರಿ ನಮೂದಿಸಲ್ಪಟ್ಟಿದೆ - ’ಅರಸುಗಳ ಪುಸ್ತಕದ’ ಪ್ರಥಮ ಮತ್ತು ದ್ವಿತೀಯ ಭಾಗಗಳಲ್ಲಿ ಒಂದು ಸಲ ಮತ್ತು ’ಪೂರ್ವಕಾಲ ವೃತ್ತಾಂತದ’ ಪ್ರಥಮ ಮತ್ತು ದ್ವಿತೀಯ ಭಾಗಗಳಲ್ಲಿ ಇನ್ನೊಮ್ಮೆ.

ಹೊಸ ಒಡಂಬಡಿಕೆಯ ಶುರುವಿನಲ್ಲಿ, ಕ್ರಿಸ್ತನ ಜೀವನ ಚರಿತ್ರೆಯನ್ನು ಕೇವಲ ಒಂದು ಸಲ ಅಲ್ಲ, ಆದರೆ ನಾಲ್ಕು ಸಲ ಹೇಳಿರುವುದಕ್ಕೆ ಕಾರಣವೇನು? ಸುವಾರ್ತೆಯ ನಾಲ್ಕು ಪುಸ್ತಕಗಳಲ್ಲಿ ಬಹಳಷ್ಟು ವಿಷಯಗಳು ಪುನರಾವರ್ತನೆಯಾಗಿವೆ. ಕೆಲವು ಸಂಗತಿಗಳು - ನಾಲ್ಕು ಸುವಾರ್ತಾ ಪುಸ್ತಕಗಳಲ್ಲಿ - ನಾಲ್ಕು ಬಾರಿ ಬರೆಯಲ್ಪಟ್ಟಿವೆ. ಹೀಗೆ ಬರೆಯಲ್ಪಟ್ಟದ್ದು ಯಾವುದೋ ಒಂದು ಒಳ್ಳೆಯ ಕಾರಣಕ್ಕಾಗಿ ಇರಬೇಕು.

"ಕೊಲೊಸ್ಸೆಯವರಿಗೆ" ಬರೆದ ಪತ್ರಿಕೆಯಲ್ಲಿ "ಎಫೆಸದವರಿಗೆ" ಬರೆದ ಪತ್ರಿಕೆಯಲ್ಲಿ ಈಗಾಗಲೇ ನಮೂದಿಸಲಾದ ಹಲವು ವಿಷಯಗಳು ಪುನರಾವರ್ತಿತವಾಗಿವೆ. ಇದರಿಂದ ಅಪೊಸ್ತಲರು ಒಂದೇ ವಿಷಯವನ್ನು ಮತ್ತೆ ಮತ್ತೆ ಹೇಳಲು ನಾಚಿಕೊಳ್ಳಲಿಲ್ಲವೆಂದು ನಾವು ಕಲಿತುಕೊಳ್ಳಬಹುದು.

ಕೆಲವು ಬೋಧಕರಲ್ಲಿ, ತಾವು ಒಂದೇ ವಿಷಯದ ಕುರಿತಾಗಿ ಎರಡು ಬಾರಿ ಪ್ರಸಂಗ ಮಾಡಿದರೆ ಜನರ ಮುಂದೆ ತಮ್ಮ ಒಳ್ಳೆಯ ಹೆಸರು ಕೆಡಬಹುದು, ಎಂಬ ಭಯವಿದೆ. ಜನರು ತಮ್ಮ ಬಗ್ಗೆ ಏನು ಅಂದುಕೊಳ್ಳುತ್ತಾರೆ ಎನ್ನುವುದು ಅವರ ಪ್ರಮುಖ ಯೋಚನೆಯಾಗಿದೆಯೇ ಹೊರತು, ಜನರ ಅವಶ್ಯಕತೆ ಏನಿದೆ ಎಂಬುದು ಅಲ್ಲ.

ಒಂದು ಊರಿನಲ್ಲಿ ಒಬ್ಬರು ಸುವಾರ್ತಿಕರು ಏಳು ದಿನ ನಡೆಸಿದ ಸುವಾರ್ತಾ ಕೂಟಗಳ ಕುರಿತಾಗಿ ನಾನು ಕೇಳಿದೆ: ಕೂಟದ ವಿಷಯ-ವಸ್ತು ಇದಾಗಿತ್ತು: "ನೀನು ಹೊಸದಾಗಿ ಹುಟ್ಟಬೇಕು." ಮಾನಸಾಂತರ ಹೊಂದಿರದ ಒಬ್ಬ ಮನುಷ್ಯನು ಅವರ ಎಲ್ಲಾ ಕೂಟಗಳಲ್ಲಿ ಹಾಜರಾಗಿದ್ದನು ಮತ್ತು ಏಳು ದಿನಗಳು ಒಂದೇ ವಿಷಯ ವಸ್ತುವನ್ನು ಕೇಳಿಸಿಕೊಂಡು ಅವನು ಬೇಸತ್ತಿದ್ದನು. ಅವನು ಆ ಸುವಾರ್ತಿಕರನ್ನು ಹೀಗೆ ಪ್ರಶ್ನಿಸಿದನು, "ನೀವು ಒಂದು ವಾರದಿಂದ ಪ್ರತಿ ದಿನವೂ, ’ನೀನು ಹೊಸದಾಗಿ ಹುಟ್ಟಬೇಕು’, ಎಂದು ಏಕೆ ಬೋಧಿಸುತ್ತಿದ್ದೀರಿ?" ಆ ಸುವಾರ್ತಿಕರು ಕೊಟ್ಟ ಜವಾಬು, "ಏಕೆಂದರೆ, ನೀನು ಹೊಸದಾಗಿ ಹುಟ್ಟಬೇಕು." ಜವಾಬು ಇಷ್ಟು ಮಾತ್ರ. ಆ ಮನುಷ್ಯನು ಹೊಸದಾಗಿ ಹುಟ್ಟುವ ತನಕ ಹೊಸದಾಗಿ ಹುಟ್ಟುವ ಸಂದೇಶವನ್ನು ಪುನರಾವರ್ತಿಸುವುದು ಅವಶ್ಯವಾಗಿತ್ತು. ಆತನಿಗೆ ಬೇರೆ ಯಾವ ಬೋಧನೆಯೂ ಬೇಕಾಗುವುದಿಲ್ಲ. ಒಬ್ಬ ರೋಗಿಯ ರೋಗ ವಾಸಿಯಾಗುವ ತನಕ ಆತನು ಅದೇ 'Antibiotic' ಗುಳಿಗೆಯನ್ನು ನುಂಗಬೇಕಾಗುತ್ತದೆ!

ಈಗ ನೀವು ನನ್ನನ್ನು, "ನೀವು ಪದೇ ಪದೇ ’ನೀನು ಪಾಪದ ಮೇಲೆ ಜಯ ಗಳಿಸಬೇಕು’, ಎಂದು ಏಕೆ ಬೋಧಿಸುತ್ತಿದ್ದೀರಿ?" ಎಂದು ಪ್ರಶ್ನಿಸುವುದಾದರೆ, ಅದಕ್ಕೆ ಉತ್ತರ ನಿಮಗೆ ತಿಳಿದಿದೆಯೆಂದು ನಾನು ಹಾರೈಸುತ್ತೇನೆ, "ಏಕೆಂದರೆ, ನೀನು ಪಾಪದ ಮೇಲೆ ಜಯ ಗಳಿಸಬೇಕು."

ಹಳೆಯ ಒಡಂಬಡಿಕೆಯ ಪ್ರವಾದಿಗಳು ಒಂದೇ ಸಂದೇಶವನ್ನು ಮತ್ತೆ ಮತ್ತೆ ಪುನರಾವರ್ತಿಸಲು ಕಾರಣವೇನೆಂದರೆ, ಇಸ್ರಾಯೇಲ್ಯರು ದೇವರ ಮಾತನ್ನು ಸ್ಪಷ್ಟವಾಗಿ ಕೇಳಿಸಿಕೊಳ್ಳುವುದು ಅವಶ್ಯವಾಗಿತ್ತು. ಯೆರೆಮೀಯನು ಹೆಚ್ಚು ಕಡಿಮೆ ಒಂದೇ ಸಂದೇಶವನ್ನು 40 ವರ್ಷಗಳ ಕಾಲ ಬೋಧಿಸಿದನು; ಎಷ್ಟರ ಮಟ್ಟಿಗೆ ಅಂದರೆ, ಅವನಿಗೆ ಅದನ್ನು ಬೋಧಿಸಿ ಒಂದು ರೀತಿ ಬೇಸರ ಉಂಟಾಯಿತು. ಆದರೆ ಎಷ್ಟೋ ಸಲ, ಜನರು ಒಂದು ಮಾತನ್ನು ಹತ್ತು ಸಲ ಕೇಳಿಸಿಕೊಂಡಾಗ ಮಾತ್ರ ಅವರಿಗೆ ಅದರ ಅರ್ಥ ಅರಿವಾಗುತ್ತದೆ. ಹಾಗಾಗಿ ಒಂದು ಸಭೆಯ ಸದಸ್ಯರಿಗೆ ಒಂದೇ ವಿಷಯದ ಕುರಿತಾಗಿ ಪದೇ ಪದೇ ಪ್ರಸಂಗ ಮಾಡಲು ನಾವು ನಾಚಿಕೊಳ್ಳುವುದು ಯಾವತ್ತೂ ಒಳ್ಳೆಯದಲ್ಲ. ನಾವು ಪವಿತ್ರಾತ್ಮನ ಅಭಿಷೇಕವನ್ನು ಹೊಂದಿದ್ದರೆ, ನಮ್ಮ ಪ್ರತಿಯೊಂದು ಬೋಧನೆಯು ಲವಲವಿಕೆಯಿಂದ ತುಂಬಿರುತ್ತದೆ.

ನಾವು ಜನರ ಗೌರವವನ್ನು ಗಳಿಸಲು ಬಯಸಿದಾಗ, ಬೋಧನೆಯನ್ನು ಪುನರಾವರ್ತಿಸುವುದಿಲ್ಲ. ಆದರೆ ನಾವು ಅವರ ಒಳಿತನ್ನು ಬಯಸಿದರೆ, ವಿಷಯವನ್ನು ಅವರು ಅರಿಯುವ ವರೆಗೂ ನಾವು ಅದನ್ನೇ ಮತ್ತೆ ಮತ್ತೆ ಬೋಧಿಸುತ್ತೇವೆ.